ಮರುಳಾರಾಧ್ಯ | ಪಂಡಿತಾರಾಧ್ಯ |
ಪಂಚಾಚಾರ್ಯ: ಏಕೋರಾಮಾರಾಧ್ಯ |
✍ ಡಾ. ಎಸ್. ಎಂ. ಜಾಮದಾರ (ನಿವೃತ್ತ ಐಎಎಸ್ ಅಧಿಕಾರಿಗಳು)
ಏಕೋರಾಮಾರಾಧ್ಯನು ಪಂಚಾಚಾರ್ಯ ಶ್ರೇಣಿಯಲ್ಲಿ ಮೂರನೆಯವನೆಂದು ಪರಿಗಣಿಸಲ್ಪಟ್ಟಿದ್ದಾನೆ. ಕೃತಯುಗದಲ್ಲಿ ತ್ರಿಯಾಕ್ಷರ; ತ್ರೇತಾಯುಗದಲ್ಲಿ ತ್ರಿವಕ್ರ, ದ್ವಾಪರ ಯುಗದಲ್ಲಿ ಘಂಟಾಕರ್ಣಾ ಮತ್ತು ಕಲಿಯುಗದಲ್ಲಿ ಏಕೋರಾಮರಾಧ್ಯ -ಇವು ಅವನ ಪೌರಾಣಿಕ ಹೆಸರುಗಳು.
ಏಕೋರಾಮಾಧ್ಯನು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ದ್ರಾಕ್ಷಾರಾಮದ ರಾಮನಾಥಲಿಂಗದಲ್ಲಿ ಉದ್ಭವಿಸಿದನೆಂದು ಹೇಳಲಾಗಿದೆ. ಆದರೆ ಅವನು ಉತ್ತರಕಾಂಡದ ಕೇದಾರದ ಬಳಿ ಇರುವ ಊಖಿ ಮಠದಲ್ಲಿ ವೀರಶೈವ ಮಠವನ್ನು ಸ್ಥಾಪಿಸುತ್ತಾನೆ. ಅವನು ವೇದವ್ಯಾಸನಿಗೆ ವೀರಶೈವ ಧರ್ಮವನ್ನು ಬೋಧಿಸಿದನೆಂದು ಹೇಳಲಾಗಿದೆ (ಬಿಜ್ಜರಗಿ, ೨೦೦೯; ಕೌಂಟೆ-೨೦೧೭, ಪು. ೫೯-೬೪)
ಏಕೋರಾಮಾರಾಧ್ಯನ ಗೋತ್ರ ಭೃಂಗಿಗೋತ್ರ ಅವನ ಬಾವುಟದ ಬಣ್ಣ ನೀಲಿ ಮತ್ತು ಅವನು ಹಿಡಿಯುವ ಕೋಲು ಬಿದಿರಿನದು. ಈ ಪೀಠ ಸ್ಥಾಪನೆಯಾದಾಗಿನಿಂದ ಇದುವರೆಗೆ ೩೨೪ ಜನ ಸ್ವಾಮಿಗಳಾಗಿದ್ದಾರೆಂದೂ, ಕರ್ನಾಟಕದಲ್ಲಿ ಕೇದಾರಪೀಠದ ಏಳು ಶಾಖೆಗಳಿವೆಯೆಂದೂ ತಿಳಿದುಬರುತ್ತದೆ. (ಬಿಜ್ಜರಗಿ, ೨೦೦೦, ಪು. ೨೯೫)
ಏಕೋರಾಮಾರಾಧ್ಯನು ಮುಖ್ಯಸ್ಥನಾಗಿದ್ದನೆಂದು ಹೇಳಲಾಗುವ ಪೀಠವಿರುವ ಕೇದಾರದಲ್ಲಿ ಕೇದಾರೇಶ್ವರನನ್ನು ಬಿಟ್ಟರೆ ಬೇರೆ ಯಾವ ದೇವಾಲಯವಾಗಲೀ, ಪೀಠವಾಗಲೀ ಅಥವಾ ಮಠವಾಗಲೀ ಇಲ್ಲ. ಅಲ್ಲಿಗೆ ಬಂದು ಅದೃಶ್ಯವಾದರೆನ್ನಲಾಗುವ ಶಂಕರಾಚಾರ್ಯರ ಒಂದು ಸಣ್ಣ ಸಮಾಧಿ ಇದೆ. ಆದರೆ ಆನಂದಗಿರಿಯ 'ಶಂಕರ ವಿಜಯ'ವು, ಶಂಕರಾಚಾರ್ಯರು ಕಂಚಿಯಲ್ಲಿ ನಿಧನ ಹೊಂದಿದರೆಂದು ತಿಳಿಸುತ್ತದೆ, ಏಕೋರಾಮಾರಾಧ್ಯನ ಮಠವು ಕೇದಾರನಾಥ ದೇವಾಲಯಕ್ಕೆ ೩೨ ಕಿ.ಮೀ. ದೂರದ ಊಖಿ ಮಠದಲ್ಲಿದೆ. ಆ ಮಠವನ್ನು ಓಂಕಾರೇಶ್ವರ ಮಠ ಅಥವಾ ಊಖಿಮಠ ಎಂದು ಕರೆಯಲಾಗುತ್ತದೆಯೇ ವಿನಃ ವೀರಶೈವ ಮಠವೆಂದು ಕರೆಯುವುದಿಲ್ಲ.
ಏಕೋರಾಮಾರಾಧ್ಯನು ಈಗ ಕೇದಾರನಾಥ ದೇವಾಲಯದ ಮುಖ್ಯ ಅರ್ಚಕ, ಆದರೆ ಅವನೇ ಪೂಜೆ ಮಾಡುವಂತಿಲ್ಲ. ಅವನೆದುರಿಗೆ ಅವನ ಸಹಾಯಕ ಬ್ರಾಹ್ಮಣರು ಪೂಜಿಸುತ್ತಾರೆ. (ಡೆಹ್ರಾಡೂನ್, ಸುದ್ದಿಪತ್ರಿಕೆ 'ಅಮರ್ ಉಜಾಲ' ವರದಿ: ೧೬.೦೨.೨೦೧೪, ವರದಿಗಾರ ವಿವೇಕಸಿಂಗ್) ಏಕೋರಾಮಾರಾಧ್ಯನು ಕೇದಾರನಾಥ ದೇವಾಲಯ ಅಥವಾ ಅದರ ಧರ್ಮದರ್ಶಿ ಮಂಡಲಿಯ ಸ್ಥಾಪಕನೂ ಅಲ್ಲ; ಮಾಲಿಕನೂ ಅಲ್ಲ. ಅವನು ಕೇವಲ ಒಬ್ಬ ಅರ್ಚಕ, ಕೇದಾರವು ಬಹಳ ಪೂರ್ವಕಾಲದಿಂದಲೂ ಹಿಂದೂ ಶೈವರ ಒಂದು ಪ್ರಸಿದ್ಧ ಯಾತ್ರಾ ಸ್ಥಳವಾಗಿ ಹೆಸರಾಗಿದೆ. ಅಲ್ಲಿನ ದೇವಾಲಯದ ಆಡಳಿತವನ್ನು ಕೇದಾರ ಮತ್ತು ಬದರೀನಾಥ ದೇವಾಲಯಗಳ ಕಾನೂನು ಪ್ರಕಾರ, ಉತ್ತರ ಪ್ರದೇಶ ರಾಜ್ಯ ಸರ್ಕಾರವು ನೋಡಿಕೊಳ್ಳುತ್ತಿದೆ.
ಬ್ರಿಟನ್ನಿನ ಪ್ರಸಿದ್ದ ಪರ್ವತಾರೋಹಿ ಎರಿಷಿಪ್ಟನ್ ೧೯೨೬ರಲ್ಲಿ ನಡೆಸಿದ ಗೌರೀಶಂಕರ ಪರ್ವತಾರೋಹಣ ಸಂದರ್ಭದಲ್ಲಿ ಕೇದಾರನಾಥ ದೇವಾಲಯಕ್ಕೆ ಸ್ಥಳೀಯ ಪೂಜಾರಿ ಇಲ್ಲವೆಂಬುದನ್ನು ಗಮನಿಸಿದ್ದಾನೆ. ಬದರೀನಾಥದಲ್ಲಿರುವ ಪೂಜಾರಿಯೇ ದಿನಬಿಟ್ಟು ದಿನ ಎರಡೂ ದೇವಾಲಯಗಳಲ್ಲಿ ಪೂಜೆಮಾಡುತ್ತಿದ್ದ. ನಂತರ ಕರ್ನಾಟಕದಿಂದ ಅಲ್ಲಿಗೆ ಹೋಗಿದ್ದ ಒಬ್ಬ ವೀರಶೈವ ತಾನು ಪೂಜಾರಿಯ ಸೇವೆ ಸಲ್ಲಿಸುವುದಾಗಿ ಹೇಳಿದ. ಅಲ್ಲಿನ ಯಾವ ಬ್ರಾಹ್ಮಣನೂ ಪೂಜಾರಿಯಾಗಲು ಸಿದ್ದವಿಲ್ಲದಿದ್ದುದರಿಂದ ಆ ವೀರಶೈವನನ್ನೇ ಪೂಜಾರಿಯಾಗಿ ಒಪ್ಪಿಕೊಳ್ಳಲಾಯಿತು. (ಎರಿಕ್‌ಷಿಪ್ಪನ್: ಎವರೆಸ್ಟ್ ಅಂಡ್ ಬಿಯಾಂಡ್, ಸ್ಟೀಲ್ ಪೀಟರ್)
೧೯೩೫ರ ಬದರೀನಾಥ ಮತ್ತು ಕೇದಾರನಾಥ ದೇವಾಲಯ ಕಾನೂನು ಪ್ರಕಾರ, ಬ್ರಾಹ್ಮಣನಲ್ಲವೆಂಬ ಕಾರಣಕ್ಕೆ ಆ ವೀರಶೈವ ಪೂಜಾರಿಯನ್ನು ತೆಗೆದು ಹಾಕಬೇಕೆಂದು ದ್ವಾರಕಾದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಎಂಬುವರು ಒತ್ತಾಯ ಮಾಡಿದರು. ಹಾಗೆಯೇ ಈಗಿನ ಏಕೋರಾಮಾರಾಧ್ಯರನ್ನು ಅರ್ಚಕ ಹುದ್ದೆಯಿಂದ ತೆಗೆದುಹಾಕುವ ಸಂಬಂಧದ ವಿವಾದ ಇತ್ಯರ್ಥವಾಗಬೇಕಾಗಿದೆ ಎಂದು ಅವರು ಇತ್ತೀಚೆಗಷ್ಟೇ ಹೇಳಿದ್ದಾರೆ. (ಸುದ್ದಿ-೧೮, ೦೩.೦೬.೨೦೧೫) ಕೇದಾರದಲ್ಲಿರುವ ಈಗಿನ ವೀರಶೈವ ಪೂಜಾರಿ (ರಾವಲ್) ವಾಗೀಶ್ವರ ಭೀಮಶಂಕರಲಿಂಗ ಸ್ವಾಮಿಗಳು ಈಗಿನ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕು ಬಾನುವಳ್ಳಿ ಗ್ರಾಮದವರು.
ಕೇದಾರದಲ್ಲಿ ಪ್ರತಿವರ್ಷ ಅಕ್ಟೋಬರ್ ಅಂತ್ಯದಿಂದ (ಕಾರ್ತಿಕ ಪೌರ್ಣಿಮ) ಏಪ್ರಿಲ್ ತಿಂಗಳವರೆಗೆ (ಅಕ್ಷಯ ತೃತಿಯಾ) ಆರು ತಿಂಗಳ ಕಾಲ ದೇವಾಲಯವು ಮುಚ್ಚಿರುವುದರಿಂದ, ಅಲ್ಲಿ ಕೆಲಸಮಾಡಲು ಅನೇಕ ಬ್ರಾಹ್ಮಣ ಪೂಜಾರಿಗಳು ಒಪ್ಪುವುದಿಲ್ಲ. ದೇವಾಲಯವು ಸಮುದ್ರಮಟ್ಟದಿಂದ ೧೨,೦೦೦ ಅಡಿ ಎತ್ತರದಲ್ಲಿದ್ದು, ಆರು ತಿಂಗಳ ಕಾಲ ಪೂರ್ಣವಾಗಿ ಹಿಮಾವೃತಗೊಂಡಿರುತ್ತದೆ. ಆಗ ಭಾರಿ ಛಳಿಯಷ್ಟೇ ಅಲ್ಲದೆ, ಹಿಮಗಾಳಿ, ಪ್ರವಾಹ ಮತ್ತು ಭೂಕುಸಿತದ ಭಯಂಕರ ಅಪಾಯವೂ ಇರುತ್ತದೆ. ೨೦೧೩ರಲ್ಲಿ (ಜೂನ್ ೧೬-೧೭) ೫೦೦೦ಕ್ಕೂ ಹೆಚ್ಚು ಯಾತ್ರಿಕರು ಸಾವಿಗೀಡಾಗಿದ್ದಾರೆ (ವಿಕಿಪೀಡಿಯಾ), ಅತ್ಯಂತ ಮುಖ್ಯವಾಗಿ ಅಲ್ಲಿಗೆ ರಸ್ತೆಮಾರ್ಗದಲ್ಲಿ ತಲುಪಲು ಸಾಧ್ಯವಾಗುವುದಿಲ್ಲ. ಗೌರಿಕುಂಡದಿಂದ ಸುಮಾರು ೨೨ ಕಿ.ಮೀ. ದೂರವನ್ನು ನಡೆದೇ ಹೋಗಬೇಕಾಗುತ್ತದೆ ಅಥವಾ ಕುದುರೆಗಳ ಮೇಲೆ ಅಥವಾ ಸ್ಥಳೀಯ ಷರ್ಫಾಗಳ ಹೆಗಲಮೇಲೆ ಕುಳಿತು (ಬೆತ್ತದ ಬುಟ್ಟಿಯಲ್ಲಿ) ಹೋಗಬೇಕಾಗುತ್ತದೆ.
ಛಳಿಗಾಲದ ಆರು ತಿಂಗಳ ಕಾಲ ಕೇದಾರನಾಥನ ಉತ್ಸವಮೂರ್ತಿಯನ್ನು ಅಲ್ಲಿಗೆ ೩೨ ಕಿ.ಮೀ. ಕೆಳಗೆ (ಸಮುದ್ರ ಮಟ್ಟದಿಂದ ೨೦೦೦ ಅಡಿ ಎತ್ತರ) ಇರುವ ಊಖಿಮಠಕ್ಕೆ ತಂದಿಡಲಾಗುತ್ತದೆ. ಆ ಅವಧಿಯಲ್ಲಿ ಕೇದಾರಕ್ಕೆ ಯಾತ್ರಿಕರು ಹೋಗದಿರುವುದರಿಂದ ಬ್ರಾಹ್ಮಣ ಪೂಜಾರಿಗಳಿಗೆ ಸಹಜವಾಗಿಯೇ ಅದು ಲಾಭದಾಯಕವೆನಿಸುವುದಿಲ್ಲ. ಆದ್ದರಿಂದ ಏಕೋರಾಮಾರಾಧ್ಯರು ಮತ್ತು ಅವರ ಕುಲದವರಿಗೆ ಅದು ಆಶ್ರಯ ತಾಣವಾಗಿದೆ. ಆದರೆ ಅದು ಎಷ್ಟು ಕಾಲದವರೆಗೆ ಮುಂದುವರೆಯುತ್ತದೆ ಎಂದು ಹೇಳಲಾಗುವುದಿಲ್ಲ. ಅವರೀಗ ಒಂದು ಅನಿಶ್ಚಿತ ಸ್ಥಳದಲ್ಲಿ ಕುಳಿತು ಅಲ್ಲಾಡುತ್ತಿದ್ದಾರೆ!
ಸ್ಥಳೀಯವಾಗಿ 'ರಾವಲ್' ಎಂದು ಕರೆಯಲಾಗುವ ಏಕೋರಾಮಾರಾಧ್ಯರು ನಿಜವಾಗಿಯೂ ಪೀಠಾಧಿಪತಿಗಳಲ್ಲ; ಕೇವಲ ಪೂಜಾರಿ. ಅವರಿಗೆ ಪ್ರಸ್ತಾಪಿತ ಎರಡೂ ದೇವಾಲಯಗಳ ಆಡಳಿತ ಮಂಡಳಿ ನಿಗದಿತ ವೇತನ ನೀಡುತ್ತದೆ (ಈಗಿನ ರಾವಲ್ ಆ ವೇತನ ಪಡೆಯುತ್ತಿಲ್ಲವೆಂದು ಕೇಳಿದ್ದೇವೆ.) ಅವರ ವಾಸಸ್ಥಳವು ಕೇದಾರವಲ್ಲ; ಅಲ್ಲಿನ ಒಂದು ಗುಡ್ಡದ ಸಣ್ಣ ಪಟ್ಟಣದಲ್ಲಿರುವ ಊಖಿಮಠ.
ಈಗಿರುವ ಅರ್ಚಕರಾದ ವಾಗೀಶ್ ಭೀಮಾಶಂಕರರಿಗೆ ನೀಡುವ ವೇತನವು ಮೂರು ಷರತ್ತುಗಳಿಗೆ ಒಳಪಟ್ಟಿದೆ. ಒಂದು ಅವರು ಪ್ರತಿ ವರ್ಷ ಮೇ, ಜೂನ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಕೇದಾರದಲ್ಲಿರುವುದು ಕಡ್ಡಾಯ; ಎರಡು-ಭಕ್ತರಿಂದ ಬರುವ ಎಲ್ಲ ಕಾಣಿಕೆ ಮತ್ತು ದಾನದ ಕೊಡುಗೆಗಳನ್ನು ದೇವಾಲಯದ ಹುಂಡಿಗೆ ಸಲ್ಲಿಸುವುದು ಮತ್ತು ಮೂರು- ಅವರು ಬ್ರಹ್ಮಚಾರಿಯಾಗಿರುವುದು. ಈ ಮೂರು ಷರತ್ತುಗಳಿಗೆ ಬದ್ಧರಾಗಿ ಅಲ್ಲಿನ ರಾವಲರು ಇರಬೇಕಾಗಿದೆ.
ಉತ್ತರ ಭಾರತದಲ್ಲಿರುವ ಮಠವು ವೀರಶೈವ ಪರಂಪರೆಯ ಮಠವೆಂದು ಕರೆಯಲ್ಪಡುವುದಿಲ್ಲ. ಅದನ್ನು ಉಷಾಮಠ ಅಥವಾ ಓಂಕಾರಮಠವೆಂದು ಕರೆಯುತ್ತಾರೆ. ಸ್ಥಳೀಯ ಐತಿಹ್ಯದ ಪ್ರಕಾರ, ಇದು ಬಾಣಾಸುರನ ಮಗಳಾದ ಉಷೆಯು ಕೃಷ್ಣನ ಮೊಮ್ಮಗನಾದ ಅನಿರುದ್ಧನನ್ನು ವರಿಸಿದ ಸ್ಥಳ. ಆದ್ದರಿಂದಲೇ ಅದನ್ನು ಉಷಾಮಠ (ಊಖಿಮಠ) ಎಂದು ಕರೆಯಲಾಗಿದೆ.
ಉತ್ತರ ಭಾರತದಲ್ಲಿ ಇನ್ನೂ ನಾಲ್ಕು ಕೇದಾರಮಠಗಳಿವೆ. (ರುದ್ರನಾಥ, ತುಂಗನಾಥ, ಮಾದ್ರಿ ಮಹೇಶ್ವರ ಮತ್ತು ಕಪಾಲೇಶ್ವರ), ಇವೆಲ್ಲವೂ ಉತ್ತರಕಾಂಡದ ಘರ್‌ವ್ಹಾಲ ಪ್ರದೇಶದಲ್ಲಿದೆ. ಅಲ್ಲೆಲ್ಲ ಬ್ರಾಹ್ಮಣ ಪೂಜಾರಿಗಳೇ ಇದ್ದಾರೆ. ಈ ನಾಲ್ಕೂ ಕೇದಾರ ಮಠಗಳ ಪಲ್ಲಕ್ಕಿಗಳನ್ನು ಪ್ರತಿವರ್ಷ ಏಪ್ರಿಲ್ ತಿಂಗಳಲ್ಲಿ (ಅಕ್ಷಯ ತೃತೀಯ) ಊಖಿಮಠದಿಂದ ಕೇದಾರಕ್ಕೆ ಕೇದಾರನಾಥ ಉತ್ಸವಮೂರ್ತಿಯನ್ನು ಹಿಂತಿರುಗಿ ತರುವಾಗ ಜೊತೆಯಲ್ಲಿ ತರಲಾಗುತ್ತದೆ. ಹಾಗೆಯೇ ಅಕ್ಟೋಬರ್ ತಿಂಗಳಲ್ಲಿ (ಕಾರ್ತಿಕ ಪೌರ್ಣಿಮ) ಕೇದಾರದಿಂದ ಊಖಿಮಠಕ್ಕೆ ಆ ಉತ್ಸವಮೂರ್ತಿಯನ್ನು ಒಯ್ಯುವಾಗಲೂ ಆ ಪಲ್ಲಕ್ಕಿಗಳು ಜೊತೆಯಲ್ಲಿರುತ್ತವೆ. ಆಕಸ್ಮಿಕವೆಂಬಂತೆ, ಏಕೋರಾಮಾರಾಧ್ಯರು ಊಖಿಮಠಕ್ಕೆ ಸಂಬಂಧಿಸಿದ ಭೂ ಮಂಜೂರಾತಿ ಮತ್ತು ಸನ್ನದುಗಳ ದಾಖಲೆಗಳನ್ನು ತಮ್ಮ ಏಕೋರಾಮಾರಾಧ್ಯ ಮಠಕ್ಕೆ ಅನುಕೂಲವಾಗುವಂತೆ ತಿದ್ದಿದ್ದಾರೆಂಬ ದೂರುಗಳೂ ಇವೆ.
'ಗುರುರಾಜ ಚರಿತ್ರೆ'ಯ ಪ್ರಕಾರ, ಒಬ್ಬ ಏಕೋರಾಮನು ಶೈವ ಬ್ರಾಹ್ಮಣನಾಗಿದ್ದ. ಅವನಿಗೆ ಘಂಟಕರ್ಣ ಗಣನಾಥ (ರಾಮನಾಥಾಚಾರ್ಯ ಎಂದೂ ಕರೆಯಲಾಗುತ್ತದೆ) ಎಂಬವನಿಂದ ವೀರಶೈವ ದೀಕ್ಷೆಯಾಗಿತ್ತು. ಏಕೋರಾಮಾರಾಧ್ಯರೇ ೧೨ನೆಯ ಶತಮಾನದ ಏಕಾಂತದ ರಾಮಯ್ಯ ಎಂದು ಅಬ್ಬಲೂರು ಶಾಸನವು ತಿಳಿಸುತ್ತದೆ. ಏಕಾಂತದ ರಾಮಯ್ಯ ಓರ್ವ ಶೈವಬ್ರಾಹ್ಮಣ. ವಾದವೊಂದರಲ್ಲಿ ಜೈನರನ್ನು ಸೋಲಿಸಿದ. ಅವನ ಶಕ್ತಿಗೆ ಸಾಕ್ಷಿಯಾಗಿ ತನ್ನ ತಲೆಯನ್ನೇ ಕತ್ತರಿಸಿಕೊಂಡನೆಂದೂ, ಕೆಲವು ದಿನಗಳ ನಂತರ ಆ ತಲೆಯು ಮತ್ತೆ ಅವನ ಮುಂಡಕ್ಕೆ ಸೇರಿಕೊಂಡಿತೆಂದೂ ಹೇಳಲಾಗಿದೆ.
’ಏಕೋರಾಮ' ಹೆಸರು ಹರಿಹರನ 'ಏಕಾಂತರಾಮಯ್ಯನ ರಗಳೆ' (೧೩ನೆಯ ಶತಮಾನ), ಭೀಮಕವಿಯ 'ಬಸವ ಪುರಾಣ' (೧೩೬೮), ಕಂಚಿ ಶಂಕರಾರಾಧ್ಯನ 'ವೃಷಭೇಂದ್ರ ವಿಜಯ' (೧೮ನೆಯ ಶತಮಾನ) ಮತ್ತು ಷಡಕ್ಷರ ಕವಿಯ 'ಬಸವೇಂದ್ರ ವಿಜಯ' (೧೭೨೦)ಗಳಲ್ಲೂ ಕಾಣಿಸಿಕೊಳ್ಳುತ್ತದೆ.
ಏಕೋರಾಮಾರಾಧ್ಯನು ಯಾರಿಗಾಗಿ ಧರ್ಮವನ್ನು ಬೋಧಿಸಿದ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವೆಂದರೆ, ವೀರಶೈವರಿಗಾಗಿ, ಆದರೆ ಕೇದಾರನಾಥದ ಸುತ್ತ ಪೂಜಾರಿಗಳನ್ನು ಬಿಟ್ಟರೆ ಅಲ್ಲೆಲ್ಲೂ ವೀರಶೈವರು ಕಂಡುಬರುವುದಿಲ್ಲ. “ಏಕೋರಾಮಾರಾಧ್ಯ ಅಥವಾ ಏಕಾಂತದ ರಾಮಯ್ಯನು ವೀರಶೈವ ಧರ್ಮದ ಸ್ಥಾಪಕ ಎಂದು ಹೇಳಲು ಇದುವರೆಗೆ ಯಾವುದೇ ಸಾಕ್ಷಾಧಾರಗಳಿಲ್ಲ” ಎಂದು ಡಾ. ಎಸ್.ಸಿ. ನಂದೀಮಠ ಅವರು ಸ್ಪಷ್ಟವಾಗಿ ಹೇಳಿದ್ದಾರೆ. (ವೀರಶೈವ ಕೈಪಿಡಿ, ಪು. ೧೪)
ಕಟ್ಟಾ ಶೈವಬ್ರಾಹ್ಮಣನಾದ ಏಕಾಂತದ ರಾಮಯ್ಯ ಬಸವಣ್ಣನವರ ಸಮಕಾಲೀನ ಎನ್ನುವುದು ಐತಿಹಾಸಿಕ ಸತ್ಯ. ಬಹಳ ನಂತರದ ಕಾಲದಲ್ಲಿ ಪಂಚಾಚಾರ್ಯರು ಏಕಾಂತದ ರಾಮಯ್ಯನ ಹೆಸರನ್ನೇ ಏಕೋರಾಮಾರಾಧ್ಯ ಎಂದು ತಿರುಚಿಬಿಟ್ಟಿದ್ದಾರೆ ಎಂದು ಡಾ. ಎಂ. ಚಿದಾನಂದಮೂರ್ತಿ ಅವರು ಹೇಳಿದ್ದಾರೆ. ಈ ಅಭಿಪ್ರಾಯವನ್ನು ಡಾ. ಎಂ. ಕಲಬುರ್ಗಿ ಅವರೂ ಒಪ್ಪಿದ್ದಾರೆ. (ಚಿದಾನಂದಮೂರ್ತಿ - ಸಾಧನೆ; ಕಲಬುರ್ಗಿ - ಮಾರ್ಗ:೪, ಪು. ೨೬೧)
ಗ್ರಂಥ ಋಣ:
1) ವೀರಶೈವ ಪಂಚಾಚಾರ್ಯ ಮಿಥ್ಯ ಮತ್ತು ಸತ್ಯ; ಲೇಖಕರು: ಡಾ. ಎಸ್. ಎಂ. ಜಾಮದಾರ, ಅನುವಾದಕರು: ಡಾ. ಗೊ. ರು. ಚನ್ನಬಸಪ್ಪ. ೨೦೨೦. Published by: Jagathika Lingayat Mahasabha, No 53 2nd Main Road, 3rd cross, Chakravarrthi Layout, Palace road, Bangalore-560020.
ಮರುಳಾರಾಧ್ಯ | ಪಂಡಿತಾರಾಧ್ಯ |