ಪಂಚಪೀಠಗಳ ಪ್ರತಿಪಾದನೆ ನಿಜವೆಷ್ಟು?

-ಬಿ.ಎಸ್.ಷಣ್ಮುಖಪ್ಪ

ಕೃಪೆ: ಪ್ರಜಾವಾಣಿ » ಸಂಗತ, ೨೩ ಎಪ್ರಿಲ ೨೦೧೦

ಲಿಂಗಾಯತ ಧರ್ಮವನ್ನು ಇತಿಹಾಸದುದ್ದಕ್ಕೂ ಹೈಜಾಕ್ ಮಾಡುತ್ತಲೇ ಬಂದಿರುವ ವೀರಶೈವ ಪಂಚಪೀಠಾಧಿಪತಿಗಳು ಮೂಲತಃ ಚತುರಾಚಾರ್ಯರು ಎಂಬುದಕ್ಕೆ 1698ರಲ್ಲಿ ರಚಿತವಾದ “ಸಂಪಾದನೆಯ ಪರ್ವತೇಶನ ಚತುರಾರ್ಯರ ಚರಿತ್ರೆ” ಒಂದು ಉತ್ತಮ ಆಕರ ಸಾಕ್ಷಿ.

ರಂಭಾಪುರಿಯ ರೇಣುಕ, ಉಜ್ಜಯಿನಿಯ ಮರುಳಸಿದ್ದ, ಕೇದಾರದ ಭೀಮಾಶಂಕರಲಿಂಗ, ಶ್ರೀಶೈಲದ ಪಂಡಿತಾರಾಧ್ಯರೇ ಈ ಚತುರಾಚಾರ್ಯರು. ಇವರು 16ನೇ ಶತಮಾನದ ನಂತರ ತಮ್ಮ ಪ್ರಾಬಲ್ಯವನ್ನು ವಿಸ್ತರಿಸಿಕೊಳ್ಳುವ ನೆಪದಲ್ಲಿ ಐದನೆಯ ಪೀಠವನ್ನಾಗಿ ಕಾಶಿಯ ಪೀಠವನ್ನು ಸೃಷ್ಟಿಸಿಕೊಂಡರು. ಇದಕ್ಕೆ ‘ಜ್ಞಾನ ಸಿಂಹಾಸನಾ ಪೀಠ’ ಎಂದು ಹೆಸರಿಟ್ಟುಕೊಂಡರು. ಅದಕ್ಕಾಗಿ ಕಾಶಿಯ ಜಂಗಮವಾಡಿಯಲ್ಲಿ ಶಾಖೆಯೊಂದನ್ನು ತೆರೆದು ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿದರು.

ಇವರು ಕಾಶಿಯನ್ನೇ ಪೀಠವನ್ನಾಗಿಸಿಕೊಂಡಿದ್ದಕ್ಕೆ ಒಂದು ಪ್ರಬಲ ಕಾರಣವೂ ಇದೆ. ಕಾಶಿ ಎಂಬುದು ಭಾರತದಧಾರ್ಮಿಕ ಭೂಪಟದಲ್ಲಿ ಬಹಳಷ್ಟು ನಂಬಿಕೆ ಮತ್ತು ಪುಣ್ಯದ ಪರಿಕಲ್ಪನೆ ಹೊಂದಿದ ಪ್ರದೇಶ. ಇಂತಹ ಕಾಶಿಯಲ್ಲಿ 17ನೇ ಶತಮಾನದಲ್ಲಿ ಸ್ಥಳೀಯ ಗೋಸಾವಿ ಮಠಕ್ಕೆ (ನಾಥ ಸಂಪ್ರದಾಯ)ಒಬ್ಬ ಮಲ್ಲಿಕಾರ್ಜುನ ಗೋಸಾವಿ ಎಂಬ ಲಿಂಗಾಯತ ನೇಮಕವಾಗಿದ್ದ. ನಾಥ ಸಂಪ್ರದಾಯ ಎಂದರೆ ಇಲ್ಲಿ ಯಾರು ಬೇಕಾದರೂ ಮಠಾಧಿಪತಿಗಳಾಗಬಹುದು. ನಮ್ಮ ಹುಬ್ಬಳ್ಳಿ ಸಿದ್ಧಾರೂಢರ ಮಠದಂತೆ. ಹೀಗಾಗಿ ಇಂತಹ ಮಠಕ್ಕೆ ಯಾವಾಗ ಲಿಂಗಾಯತನೊಬ್ಬ ಪೀಠಾಧಿಪತಿಯಾಗಿ ಕುಳಿತು ಸತ್ತು ಹೋದನೋ ಆ ಬಳಿಕ ಈ ಚತುರಾಚಾರ್ಯರ ಕಣ್ಣು ಇದರ ಮೇಲೆ ಬಿದ್ದಿತು. ಕಾಗಕ್ಕ-ಗುಬ್ಬಕ್ಕನ ಕಥೆಗಳನ್ನು ಸೃಷ್ಟಿಸಿ ಇದೂ ಕೂಡಾ ತಮ್ಮದೇ ಮಠ ಎಂದು ಅನುಯಾಯಿಗಳನ್ನು ನಂಬಿಸಿ ತಮ್ಮದು ಪಂಚಪೀಠದ ಪರಂಪರೆ ಎಂದು ಬಿಂಬಿಸಿಕೊಂಡರು.

ಮೂಲತಃ ಆಂಧ್ರಪ್ರದೇಶದ ಆರಾಧ್ಯರಾದ ಈ ಚತುರಾಚಾರ್ಯರು ವಾಸ್ತವದಲ್ಲಿ ಶೈವ ಪಂಥದ ಆರಾಧಕರು. 12ನೇ ಶತಮಾನದಲ್ಲಿ ಇವರು ವೀರ ವ್ರತಗಳನ್ನು ಹಿಡಿಯುತ್ತಿದ್ದರು. ಅಂದರೆ ವೀರಭದ್ರನ ಆರಾಧನೆಯಲ್ಲಿ ವ್ರತಾಚರಣೆ ನಡೆಸುವುದು ಇವರ ಪರಿಪಾಠವಾಗಿತ್ತು. ಹೀಗೆ ವ್ರತ ಹಿಡಿದ ಪುರವಂತರು ವೀರಗಾಸೆ ಹಾಕಿ ವೀರಭದ್ರನ ವರ್ಣನೆ ಮಾಡುತ್ತಾ ಕುಣಿಯುತ್ತಿದ್ದರೆ ಇವರ ಆರ್ಭಟ, ನೋಡುಗರಿಗೆ ಅತ್ಯಂತ ಆಕರ್ಷಕವಾಗಿರುತ್ತಿದ್ದವು. ಈ ವೇಶಕ್ಕೆ ಲಿಂಗಾಯತರು ಮಾರು ಹೋದರು. ಒಡಲೊಳಗೆ ಪುರೋಹಿತಶಾಹಿ ವ್ಯವಸ್ಥೆಯನ್ನು ಪೋಷಿಸುವ ಮತ್ತು ಬಸವಣ್ಣನ ಮೇಲೆ ಕೆಂಡ ಕಾರುತ್ತಿದ್ದ ಶೈವಾರಾಧಕರು ನಿಧಾನವಾಗಿ ಇಂತಹ ವೀರ ವ್ರತ ಹಿಡಿಯುವವರೆಲ್ಲಾ ವೀರಶೈವರೆಂದು ಕರೆದುಕೊಳ್ಳಲಾರಂಭಿಸಿದರು.

ಮೆತ್ತಗೇ ಸಂಪ್ರದಾಯ, ಆಚರಣೆಗಳ ನೆಪದಲ್ಲಿ ಲಿಂಗಾಯತರಿಗೆ ತಾವೇ ಗುರುಗಳೆಂದು ಬಿಂಬಿಸಿಕೊಂಡು ಅವರ ಮೇಲೆ ಸವಾರಿ ಶುರು ಮಾಡಿದರು. ಹಾಗೆ ನೋಡಿದರೆ ಲಿಂಗಾಯತರ ಗುರು ಪರಂಪರೆ ಹೊಂದಿದ ಮಠಗಳೆಂದರೆ ಚಿತ್ರದುರ್ಗದ ಮುರುಘಾಮಠ, ಹುಬ್ಬಳ್ಳಿಯ ಮೂರು ಸಾವಿರ ಮಠ ಹಾಗೂ ಗದಗಿನ ತೋಂಟದಾರ್ಯ ಮಠಗಳೇ ಮುಖ್ಯವಾದವು. ಇವು ಬಸವ ಧರ್ಮದ ಗುರು-ವಿರಕ್ತ ಪರಂಪರೆಯ ತಾಣಗಳು.

15 ನೇ ಶತಮಾನವನ್ನು ಲಿಂಗಾಯತರ ಪುನರುಜ್ಜೀವನ ಕಾಲ ಎಂದೇ ಕರೆಯಲಾಗುತ್ತದೆ. ಯಾಕೆಂದರೆ ಚತುರಾಚಾರ್ಯರು ಅತ್ಯಂತ ಪ್ರವರ್ಧಮಾನಕ್ಕೆ ಬರುವ ಮೂಲಕ ತಮ್ಮನ್ನು ತಾವೇ ಜಗದ್ಗುರು ಎಂದು ಕರೆದುಕೊಂಡ ಗಳಿಗೆಯಿದು (ನಿಜವಾಗಿಯೂ ಇವರ್‍ಯಾರು ಜಗದ್ಗುರಳಾಗಿರಲೇ ಇಲ್ಲ. ಜಗದಾಚಾರ್ಯರು ಎಂದೇ ಇವರನ್ನು ಸಂಬೋಧಿಸುವುದು ಸೂಕ್ತ). ಕುರುಬರ ಸಮುದಾಯದ ರೇವಣನನ್ನು ಆಪೋಶನಗೈದದ್ದು, 12ನೇ ಶತಮಾನದ ಏಕಾಂತ ರಾಮಯ್ಯ ಎಂಬ ನಿಮ್ನ ವರ್ಗದ ಶರಣ ಏಕೋರಾಮರಾಧ್ಯ ಆಗಿದ್ದು ಇದೇ ಸಂದರ್ಭದಲ್ಲಿ. ನಿಜವಾಗಿಯೂ ಲಿಂಗವಂತರು ವೀರಶೈವೀಕರಣಗೊಳ್ಳುತ್ತಿದ್ದ ಸಂಕಟದ ಕಾಲವಿದು.

ಈ ಸಮಯದಲ್ಲಿ ಲಿಂಗಾಯತ ಧರ್ಮವನ್ನು ಉಳಿಸಿಕೊಳ್ಳಲು ಸಾಕಷ್ಟು ಹೋರಾಟಗಳು ನಡೆದವು. ಯಾವಾಗ ಜಗದಾಚಾರ್ಯರು ಪಂಚಪೀಠಾಧೀಶ್ವರ ರಾದರೋ ಆಗ ಇವರಿಗೊಂದು ಧರ್ಮ ಗ್ರಂಥ ಬೇಕಿತ್ತು. ಅದಕ್ಕೆಂದೇ ಶರಣರು ಸೂಚಿಸಿದ್ದ ಷಟ್‌ಸ್ಥಳಗಳ ಮಾದರಿಯಲ್ಲಿ 101 ಸ್ಥಳಗಳ ಬೊಂತೆಯಾದ ಸಂಸ್ಕೃತ ಭೂಯಿಷ್ಠ “ಸಿದ್ಧಾಂತ ಶಿಖಾಮಣಿ”ಯನ್ನು ಸೃಷ್ಟಿಸಿಕೊಂಡರು. ವೇದ, ಆಗಮ, ಶಾಸ್ತ್ರಗಳಲ್ಲಿನ ಸಾಕಷ್ಟು ಅಂಶಗಳನ್ನು ಹೆಕ್ಕಿ ತೆಗೆದು ತಮ್ಮ ಮೂಗಿನ ನೇರಕ್ಕೆ ಇದರಲ್ಲಿ ತುರುಕಿದರು. ಇಲ್ಲದ ಸಂಗತಿಗಳನ್ನೆಲ್ಲಾ ಈ ಸಿದ್ಧಾಂತ ಶಿಖಾಮಣಿಯ ಹೆಸರಿನಲ್ಲಿ ಪ್ರಚುರಪಡಿಸಿಕೊಂಡು ಹೊರಟರು.

12ನೇ ಶತಮಾನದ ಯಾವುದೇ ಶರಣ ಚಳವಳಿ ಸಂದರ್ಭದಲ್ಲಿ, ಎಲ್ಲಿಯೂ ಕೂಡಾ ಈ ಚತುರಾಚಾರ್ಯರ ಬಗೆಗಾಗಲೀ ಅಥವಾ ಪಂಚಪೀಠಾಧಿಪತಿಗಳ ಬಗೆಗಾಗಲಿ ಲವಶೇಷದಷ್ಟೂ ಇತಿಹಾಸ ದೊರೆಯುವುದಿಲ್ಲ. ಇವರೆಲ್ಲಾ 14 ಮತ್ತು 15ನೇ ಶತಮಾನದ ಸಂದರ್ಭದಲ್ಲೇ ಅಸ್ತಿತ್ವ ರೂಪಿಸಿಕೊಳ್ಳುತ್ತಾ ಸಾಗಿ ಬಂದವರು ಎಂಬುದು ನಿರ್ವಿವಾದ. ಮೊದಲು ಈ ಚತುರಾಚಾರ್ಯರೆಲ್ಲಾ ತಮ್ಮನ್ನು ತಾವು “ಭಾರದ್ವಾಜ ಗೋತ್ರ” ದವರೆಂದು ಕರೆದುಕೊಳ್ಳುತ್ತಿದ್ದರು. ನಿಮ್ನ ವರ್ಗದ ಭಕ್ತ ಸಮುದಾಯ ಜಾಸ್ತಿಯಾಗತೊಡಗಿದಂತೆ ಕ್ರಮೇಣ ಶಿವಗೋತ್ರಕ್ಕೆ ಗಂಟು ಬಿದ್ದರು. ತಮ್ಮದು ನಂದಿ, ವೀರಭದ್ರ ಹಾಗೂ ವೃಷಭ ಗೋತ್ರಗಳೆಂದು ಹೇಳಿಕೊಳ್ಳುತ್ತಾ ಪುರೋಹಿತ ಶಾಹಿ ವ್ಯವಸ್ಥೆಯನ್ನು ಈ ಜನರ ಮೇಲೆ ತಣ್ಣಗೆ ಬಲಗೊಳಿಸಿದರು.

ಈ ಪಂಚಪೀಠಾಧೀಶ್ವರರು ಎಂದು ಕೂಡಾ ಬಸವ ತತ್ವಗ ಳನ್ನು ಪ್ರತಿಪಾದಿಸಿದವರೇ ಅಲ್ಲ. 19ನೇ ಶತಮಾನದ ಅಂತ್ಯ ಹಾಗೂ 20ನೇ ಶತಮಾನದ ಆದಿ ಭಾಗದಲ್ಲಿನ ಇತಿಹಾಸವನ್ನು ಸುಮ್ಮನೇ ಗಮನಿಸಿದಾಗ ಎಲ್ಲೆಡೆಯೂ ಲಿಂಗಾಯತ ಪದದ ಬಳಕೆಯೇ ಹೆಚ್ಚು ಪ್ರಚಲಿತವಿದ್ದುದು ನಮಗೆ ಸ್ಪಷ್ಟವಾಗಿ ಕಂಡು ಬರುತ್ತದೆ. ಕೇವಲ ಸಿಂಹಾಸನ, ಛತ್ರಿ, ಚಾಮರ, ಪ್ರಸಾದ, ದಕ್ಷಿಣೆ, ಸೇವೆ ಎಂದು ನೂರೆಂಟು ಶೋಷಣೆಗಳ ಮುಖಾಂತರ ಒಂದು ಇಡೀ ಮಾನವ ಸಮುದಾಯವನ್ನು ಯುಕ್ತಿಯಿಂದ ಆಳುತ್ತಾ ಬಂದ ಚತುರವರ್ಗ ಇದು. ಗುಡಿ ಸಂಸ್ಕೃತಿ ಧಿಕ್ಕರಿಸಿದ ಬಸವಣ್ಣನಿಗೆ ಸವಾಲಾಗಿ ಲಿಂಗದಲ್ಲಿ ರೇಣುಕನನ್ನು ಸೃಷ್ಟಿಸಿದ ಜನರಿವರು.

20ನೇ ಶತಮಾನದ ಆರಂಭದಲ್ಲಿ ಸೊಲ್ಲಾಪುರದ ದಾನಿ ವಾರದ ಮಲ್ಲಪ್ಪನವರಿಗೆ ಗಂಟು ಬಿದ್ದ ಈ ಚತುರಾಚಾರ್ಯರು ಸ್ಥಾಪಿಸಿದ್ದ “ಲಿಂಗೀ ಬ್ರಾಹ್ಮಣ ಗ್ರಂಥಮಾಲೆ”ಯಲ್ಲಿ ಇವರು ಬ್ರಾಹ್ಮಣ ಸಮುದಾಯದವರೆಂಬುದು ಸ್ಪಷ್ಟವಾಗಿ ನಿರೂಪಿತವೂ ಆಗಿದೆ. ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯದಲ್ಲಿ ವೀರಶೈವ ಎಂಬ ಪದ ಯಾವತ್ತೂ ಬಳಕೆಯಲ್ಲಿ ಇರಲೇ ಇಲ್ಲ. 20ನೇ ಶತಮಾನದ ಆದಿ ಭಾಗದಿಂದ ಈ ಪದವನ್ನು ಪ್ರಚುರ ಪಡಿಸುವ ಯತ್ನಕ್ಕೆ ಈ ಪಂಚಪೀಠಾಧಿಪತಿಗಳು ಮುಂದಾದರು. ಒಂದು ವೇಳೆ ವೀರಶೈವ ಪದ ಬಳಕೆಯೇ ನಿಜವಾಗಿದ್ದಲ್ಲಿ 1867ರಲ್ಲಿ ಡೆಪ್ಯೂಟಿ ಚನ್ನಬಸಪ್ಪನವರು ಸ್ಥಾಪಿಸಿದ್ದ ಉಚಿತ ವಿದ್ಯಾರ್ಥಿ ನಿಲಯಕ್ಕೆ ಲಿಂಗಾಯತ ಫ್ರೀ ಬೋರ್ಡಿಂಗ್‌ಎಂದು ಹೆಸರಿಡುತ್ತಿರಲಿಲ್ಲ.

1885ರಲ್ಲಿ ಸ್ಥಾಪಿಸಲಾದ ಧಾರವಾಡದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ ಲಿಂಗಾಯತ ಎಂಬ ಪದ ಹೊಂದುತ್ತಿರಲಿಲ್ಲ. 1916ರಲ್ಲಿ ಸ್ಥಾಪಿತವಾದ ಬೆಳಗಾವಿಯ ಕರ್ನಾಟಕ ಲಿಂಗಾಯತ ಎಜುಕೇಷನ್ ಸೊಸೈಟಿ ಕೂಡಾ ಲಿಂಗಾಯತ ಪದ ಹೊಂದಬೇಕಾಗಿರಲಿಲ್ಲ. ಅಷ್ಟೇಕೆ ಬೆಂಗಳೂರಿನ ಟೌನ್‌ಹಾಲ್ ಕಟ್ಟಿಸಿದ ಪುಟ್ಟಣ್ಣಶೆಟ್ಟರೂ ಕೂಡಾ ಲಿಂಗಾಯತ ಹೆಸರಿನಲ್ಲಿಯೇ ವಿದ್ಯಾ ಸಂಸ್ಥೆ ಸ್ಥಾಪಿಸಿದವರು.

ಅನಾದಿ ಕಾಲದಿಂದ ಲಿಂಗಾಯತ ಧರ್ಮವನ್ನು ಹೊಲಬುಗೆಡಿಸಿದ ಕೀರ್ತಿ ಈ ಪಂಚಪೀಠಾಧೀಶ್ವರರಿಗೆ ಸಲ್ಲಬೇಕು. ಹಿರೇಮಠರು, ಆರಾಧ್ಯರು, ಐಯ್ಯನೋರು ಎಂಬ ಶಿರೋನಾಮೆಗಳಲ್ಲಿ ತಾವು ವೀರಮಾಹೇಶ್ವರರೆಂದು ಪುರೋಹಿತ ವ್ಯವಸ್ಥೆಯನ್ನು ಪೋಷಿಸುತ್ತಲೇ ಮತ್ತೊಂದೆಡೆ ತಾವೆಲ್ಲಾ ಬೇಡ ಜಂಗಮ, ಬುಡುಗ ಜಂಗಮರು ಎಂದು ಸುಳ್ಳು ಹೇಳಿ ಸಾಂವಿಧಾನಿಕ ಮೀಸಲಾತಿಗಳನ್ನು ಕಬಳಿಸುವ ಹುನ್ನಾರ ಮಾಡುತ್ತಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ ಎಂದು ಬೊಗಳೆ ಬಿಡುತ್ತಾ ಇಂತಿಷ್ಟೇ ಎತ್ತರದ ಸೀಟು ಬೇಕು, ಅಡ್ಡಪಲ್ಲಕ್ಕಿಯೇ ಆಗಬೇಕು ಎಂದು ಸ್ವಯಂಘೋಷಿತ ದೇವಮಾನವರಂತೆ ಪೋಸು ಕೊಡುತ್ತಿದ್ದಾರೆ. ಇಂತಹ ಸುಳ್ಳು, ತಟವಟ, ಶೋಷಣೆಗಳೆಲ್ಲಾ ಜನರಿಗೆ ಅರ್ಥವಾಗುವುದು ಯಾವಾಗ?

ಸಂದರ್ಭ ಸೂಚಿ, ಆಧಾರ

ಪ್ರಜಾವಾಣಿ » ಸಂಗತ : http://46.5c.344a.static.theplanet.com/Content/Apr252010/sangata.asp

ಪರಿವಿಡಿ (index)
Previousಪಂಚ ಪೀಠ - ಕಟ್ಟು ಕಥೆ ತುಂಬಿದ ಅಸಂಗತ ವಾದ.ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಇಬ್ಬರೂ ಬೇರೆ ಬೇರೆNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.