Previous ಲಿಂಗಾಯತ ಪ್ರಗತಿಪರ ಧರ್ಮ ಹಿಂದು ಧರ್ಮ ಎಂದರೇನು ? Next

|| ಓಂ ಶ್ರೀ ಗುರು ಬಸವಲಿಂಗಾಯ ನಮಃ ||

1. ಲಿಂಗಾಯತರು ಹಿಂದುಗಳಲ್ಲ

- ಪೂಜ್ಯ ಶ್ರೀ ಮಹಾ ಜಗದ್ಗುರು ಮಾತೆ ಮಹಾದೇವಿ

ಲಿಂಗಾಯತರು ಹಿಂದುಗಳಲ್ಲ

1969ನೇ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಉಡುಪಿಯಲ್ಲಿ ವಿಶ್ವಹಿಂದು ಪರಿಷತ್‌ನ ವಿರಾಟ್ ಹಿಂದು ಸಮ್ಮೇಳನ ಜರುಗಿದಾಗ ಒಂದು ಚಿಕ್ಕ ಪುಸ್ತಕ ಹಿಂದು ಯಾರು? ಎಂಬುದನ್ನು ಬರೆದೆ. ಅತ್ಯಂತ ಜನಪ್ರಿಯವಾಗಿ ಮಾರಾಟವಾಯಿತು. ಮುಂದೆ ಸಾಕಷ್ಟು ವಿಷಯಗಳನ್ನು ಸೇರಿಸಿ ಪುನರ್ವಿಮರ್ಶಿತ ಮತ್ತು ವಿಸ್ತ್ರತ ಮುದ್ರಣವನ್ನು 1983ರಲ್ಲಿ ಪ್ರಕಟಿಸಿದೆ. 1997ರ ಒಳಗೆ ಹತ್ತು ಮುದ್ರಣಗಳನ್ನು ಈ ಕೃತಿಯು ಕಂಡಿತು. ನಂತರ ಪುಸ್ತಕಕ್ಕೆ ಸಾಕಷ್ಟು ಬೇಡಿಕೆ ಇದ್ದರೂ ಪುಸ್ತಕವನ್ನು ಪುನರ್ ಮುದ್ರಿಸಲಿಲ್ಲ. ಮುಖ್ಯ ಕಾರಣ, ನಮ್ಮಲ್ಲಿ ಆಗಿದ್ದ ವೈಚಾರಿಕ ಬದಲಾವಣೆ. ಪೂಜ್ಯ ಶ್ರೀಮನ್ ನಿರಂಜನ ಮಹಾಜಗದ್ಗುರು ಲಿಂಗಾನಂದ ಸ್ವಾಮೀಜಿಯವರು ಮತ್ತು ನಾನು “ಹಿಂದು” ಪದಕ್ಕೆ ಬಹಳ ವಿಕೃತವಾದ ಅರ್ಥವನ್ನು ನೀಡುತ್ತಿದ್ದೆವು.

“ಹಿಂದು ಇದು ಒಂದು ವಿಶಿಷ್ಟ ಧರ್ಮವಲ್ಲ; ಜಾತಿ, ಮತ, ಪಂಥವಲ್ಲ; ಹಲವಾರು ಸ್ವತಂತ್ರ ಧರ್ಮಗಳ ಒಂದು ಒಕ್ಕೂಟ. ಇದು ವೈವಿಧ್ಯಮಯವಾದ ಹಣ್ಣಿನ ಗಿಡಗಳ ಒಂದು ತೋಟವಿದ್ದಂತೆ.”

- ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿ

“ಓಂಕಾರವನ್ನು ನಂಬಿ ಮಂತ್ರದಲ್ಲಿ ಅದನ್ನು ಬಳಸುವವರು ಯಾರೋ ಅವರು ಹಿಂದುಗಳು.”

- ಮಾತಾಜಿ

ಹಿಂದು ಒಂದು ಧರ್ಮವಲ್ಲ ಹಲವು ಧರ್ಮಗಳ ಒಕ್ಕೂಟ ಎಂದು ಭಾವಿಸಿದ ಮೇಲೆ, ಜೈನ - ಬೌದ್ದ ಲಿಂಗಾಯತ -ಸಿಖ್ ಧರ್ಮಗಳು ಅದರಲ್ಲಿರುತ್ತವೆ ಅಂದಾಗ “ಹಿಂದು” ಒಂದು ಧರ್ಮ ಎಂದು ಹೇಳಬಾರದು. ಹಿಂದು ಒಂದು ಧರ್ಮ ಎಂದು ನಾವು ಒಪ್ಪಿಕೊಂಡರೆ ಆಗ ಅದರೊಳಗಣ ಜೈನ, ಬೌದ್ದ ಲಿಂಗಾಯತ, ಸಿಖ್ ಕೇವಲ ಜಾತಿಗಳಾಗಿ ಅಥವಾ ಮತ ಪಂಥಗಳಾಗಿ ಉಳಿಯುತ್ತವೆ. ವಾಸ್ತವಿಕವಾಗಿ ಈ ಎಲ್ಲಾ ಧರ್ಮಗಳು ತಮ್ಮದೇ ಆದ ಸ್ವತಂತ್ರ ಅಸ್ತಿತ್ವ, ಆಚಾರ-ವಿಚಾರ ಸಂಹಿತೆಗಳನ್ನೂ ಹೊಂದಿವೆ. ಜಗತ್ತಿನ ಎಲ್ಲ ಗ್ರಂಥಗಳಲ್ಲಿ ಹಿಂದು ಒಂದು ಧರ್ಮ ಎಂದೇ ದಾಖಲಾಗಿದೆ, ವ್ಯವಹರಿಸಲ್ಪಡುತ್ತಿದೆ. ಭಾರತದ ಜನಗಣತಿಯಲ್ಲಿ ಹಿಂದು ಒಂದು ಧರ್ಮ ಎಂದೇ ಪರಿಗಣಿತವಾಗಿದೆ. ಹೀಗಿದ್ದಾಗ ಹಿಂದು - ಹಲವಾರು ಧರ್ಮಗಳ ಒಕ್ಕೂಟ ಎಂಬ ವ್ಯಾಖ್ಯೆ ಬರೀ ಪುಸ್ತಕ ಹಾಗೂ ಭಾಷಣಕ್ಕೆ ಸೀಮಿತವಾಗುವುದೇ ವಿನಾ ವಾಸ್ತವಿಕವಾಗಿ ಅಲ್ಲ.

ಸಾಂಸ್ಕೃತಿಕವಾಗಿ ವೇಷ ಭೂಷಣ, ಹೆಸರುಗಳು, ಕೌಟುಂಬಿಕ ಪದ್ದತಿ ಮುಂತಾದ ದೃಷ್ಟಿಯಿಂದ ಲಿಂಗಾಯತರು ಹಿಂದು ಸಂಸ್ಕೃತಿಗೆ ಹತ್ತಿರದಲ್ಲಿ ಇರುವರೇ ವಿನಾ ಧಾರ್ಮಿಕವಾಗಿ ಹಿಂದುಗಳಲ್ಲ, ಸ್ವತಃ ವಿಶ್ವಹಿಂದು ಪರಿಷತ್‌ ನೀಡಿರುವ ಹಿಂದು ವ್ಯಾಖ್ಯಾನವನ್ನು ಗಮನಿಸಿರಿ.

"ಭಾರತದಲ್ಲಿ ಉದಿಸಿದ ಸನಾತನವಾದ ನೈತಿಕ ಹಾಗೂ ಅಧ್ಯಾತ್ಮಿಕ ಜೀವನ ಸಿದ್ಧಾಂತಗಳಲ್ಲಿ ಆದರ, ಶ್ರದ್ಧೆ ಇಡುವವರು ಮತ್ತು ಅವುಗಳನ್ನು ನಿಷ್ಠೆಯಿಂದ ಪಾಲಿಸುವವರೆಲ್ಲರೂ (ಅವರು ಯಾವುದೇ ದೇಶ, ಪ್ರಾಂತ್ಯ, ಕುಲ, ಜಾತಿ ಮತ್ತು ಸಂಪ್ರದಾಯದವರೇ ಆಗಿರಲಿ) ಮತ್ತು ತಮ್ಮನ್ನು ಹಿಂದುಗಳೆಂದು ಕರೆದುಕೊಳ್ಳುವವರೆಲ್ಲರೂ ಹಿಂದುಗಳು.

ಎಷ್ಟು ಸಡಿಲವಾದ ಅಸಂಬದ್ಧ ವ್ಯಾಖ್ಯಾನ ! ಒಂದು ದೀಕ್ಷೆಯನ್ನು ಕೊಟ್ಟು ಒಳಗೆ ಕರೆದುಕೊಳ್ಳುವುದಿಲ್ಲ, ವೈದಿಕ ಧರ್ಮದ ಮುಖ್ಯ ಲಾಂಛನವಾದ ಜನಿವಾರವನ್ನು ಉಪನಯನದ ಮೂಲಕ ಇತರರಿಗೆ ಕೊಡುವುದಿಲ್ಲ, ಯಾರೇ ಆಗಲಿ ತಮಗೆ ತಾವೇ ಶ್ರದ್ದೆ ಬೆಳೆಸಿಕೊಂಡು, ಪಾಲನೆ ಮಾಡಿ, ತಮ್ಮನ್ನು ಹಿಂದುಗಳೆಂದು ಕರೆದುಕೊಂಡರೆ ಸಾಕಂತೆ. ಇಂಥ ಅವ್ಯವಸ್ಥೆಗೆ ಕಾರಣ ಒಬ್ಬ ಸಂಸ್ಥಾಪಕ ಗುರು ಹಿಂದು ಧರ್ಮಕ್ಕೆ ಇಲ್ಲದೆ ಇರುವುದು. ಒಂದು ಶಾಸ್ತ್ರವು ಸಮಾಜವನ್ನು ನಿಯಂತ್ರಿಸದೆ ಇರುವುದು. ಜಗತ್ತಿನ ಪ್ರಥಮ ಯೋಗಿಯು, ಓಂಕಾರದ ದ್ರಷ್ಟಾರನು, ಭಾರತೀಯ ಧಾರ್ಮಿಕ ಪರಂಪರೆಯ ಮೂಲ ಪುರುಷನೂ ಆದ “ಯೋಗಿರಾಜ ಶಿವ"ನು ಕೊಟ್ಟ ಶೈವ ಧರ್ಮ ತನ್ನ ಮೂಲ ಸ್ವರೂಪದಲ್ಲಿ ಅಚ್ಚುಕಟ್ಟಾಗಿ ಸಾಗಿ ಬಂದಿದ್ದರೆ ಭಾರತ ದೇಶ ನಿಜಕ್ಕೂ ಒಂದು ಅದ್ಭುತವಾದ ಧರ್ಮವನ್ನು ಹೊಂದಿರುತ್ತಿತ್ತು. ದುರ್ದೈವದಿಂದ ಶಿವನು ಕೊಟ್ಟ ಧರ್ಮವೂ ಆರ್ಯರ ಆಗಮನದ ನಂತರ ಸಂಪೂರ್ಣವಾಗಿ ವೈದಿಕ ಪ್ರಭಾವಕ್ಕೆ ಒಳಗಾಗಿ ಅದರ ವರ್ಣಾಶ್ರಮ, ಪುರೋಹಿತ ಶಾಹಿಯನ್ನು ಅಪ್ಪಿಕೊಂಡಿತು. ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ವಿಕೃತಗೊಂಡಿತು. ಹೀಗಾಗಿ ವೈದಿಕ ವ್ಯವಸ್ಥೆ ಉಂಟು ಮಾಡಿದ ಅನಾಹುತವನ್ನು ಸರಿಪಡಿಸಲು ಹಲವಾರು ಧರ್ಮಗಳು, ಜೈನ, ಬೌದ್ದ, ಲಿಂಗಾಯತ ಹಾಗೂ ಸಿಖ್ ಧರ್ಮಗಳು ಹುಟ್ಟುವ ಅನಿವಾರ್ಯತೆ ಉಂಟಾಯಿತು. ಭಾರತೀಯ ಧಾರ್ಮಿಕ ಇತಿಹಾಸವನ್ನು ಅಧ್ಯಯನ ಮಾಡಿದಾಗ ಮತ್ತು ಇಲ್ಲಿ ಉದಿಸಿರುವ ಧರ್ಮಗಳ ತೌಲನಿಕ ಅಧ್ಯಯನ ಮಾಡಿದಾಗ ಲಿಂಗಾಯತ ಧರ್ಮವು ಜೈನ, ಬೌದ್ಧ, ಸಿಖ್ ಧರ್ಮಗಳಂತೆ ಸ್ವತಂತ್ರ ಧರ್ಮ.

1. ಹಿಂದುವಾದಿ ಸಂಘಟನೆಗಳಾದ ವಿಶ್ವಹಿಂದು ಪರಿಷತ್ತು, ಆರ್.ಎಸ್.ಎಸ್ ಮುಂತಾದವರಿಗೆ ಲಿಂಗಾಯತ ಸಮಾಜವು ಹಿಂದು ಸಮಾಜದ ವ್ಯಾಪ್ತಿಯಿಂದ ಹೊರಗೆ ಹೋಗುವುದು ಖೇದವನ್ನುಂಟು ಮಾಡುತ್ತದೆ. ಇದರಿಂದ ಹಿಂದು ಸಮಾಜದ ಶಕ್ತಿ ದುರ್ಬಲವಾಗುತ್ತದೆ ಎಂಬ ಆತಂಕ ಅವರನ್ನು ಕಾಡಬಹುದು.

2. ಹಿಂದು ರಾಷ್ಟ್ರದ ಏಳ್ಗೆಯನ್ನೇ ಗುರಿಯಾಗಿಸಿಕೊಂಡ ಸಂಘ ಪರಿವಾರ ಮತ್ತು ಇನ್ನಿತರ ಹಿಂದುವಾದಿಗಳಿಗೆ ಭಾರತದ ಸಮಗ್ರತೆಗೆ ಧಕ್ಕೆ ಉಂಟಾಗುತ್ತದೆ ಎಂಬ ಆತಂಕವೂ ಕಾಡಬಹುದು.

ಇವೆರಡೂ ಅರ್ಥವಿಲ್ಲದ ಆತಂಕಗಳು. ಏಕೆಂದರೆ ಧಾರ್ಮಿಕವಾಗಿ ಸೈದ್ಧಾಂತಿಕವಾಗಿ ಲಿಂಗಾಯತರು ಹಿಂದುಗಳಾಗದಿದ್ದರೂ ಸಾಂಸ್ಕೃತಿಕವಾಗಿ ದೇಶೀಯ ಹೆಸರುಗಳು, ವೇಷ ಭೂಷಣಗಳಿಂದ ಹಿಂದು ವಿರೋಧಿ (Anti-Hindu)ಯಂತೂ ಖಂಡಿತಾ ಆಗರು. ದೇಶ ಹಿತ ದೃಷ್ಟಿಯಿಂದ ಜೈನರು, ಲಿಂಗಾಯತರು, ಸಿಬ್ಬರು ಎಂದೂ ಭಾರತದ ವಿರೋಧಿಗಳಾಗರು. ಏಕೆಂದರೆ ಲಿಂಗಾಯತರಿಗೆ ಭಾರತವು ಧರ್ಮಭೂಮಿ. ಯಾವ ಧರ್ಮಗಳ ಸ್ಥಾಪಕರು ಭಾರತದಲ್ಲಿ ಹುಟ್ಟಿರುವರೋ ಆ ಧರ್ಮಗಳ ಅನುಯಾಯಿಗಳು ಎಲ್ಲಿಯೇ ಇರಲಿ ಅವರಿಗೆ ಭಾರತವು ಧರ್ಮಭೂಮಿ, ಯಾರೇ ಆಗಲಿ ಅವರು ಹುಟ್ಟಿ ಬೆಳೆದ ದೇಶವು ಮಾತೃಭೂಮಿಯಾದರೆ ಅವರ ಧರ್ಮದ ಆದ್ಯರು ಹುಟ್ಟಿದ ದೇಶ ಧರ್ಮ ಭೂಮಿ. ಲಿಂಗಾಯತವು ಸ್ವತಂತ್ರ ಧರ್ಮ, ಅಹಿಂದು ಧರ್ಮ' ಎಂಬ ಜಾಗೃತಿಯಿಂದ ಆಗುವ ಸತ್ಪರಿಣಾಮಗಳು ಕೆಳಗಿನಂತೆ ಇವೆ.

1. ವಿಶ್ವಗುರು ಬಸವಣ್ಣನವರು ಕೊಟ್ಟ ಪ್ರಗತಿಪರ ಚಿಂತನೆಯ, ವೈಚಾರಿಕ ಧರ್ಮವಾದ ಲಿಂಗಾಯತ ಎಂಬ ಧರ್ಮವು ಅಸ್ತಿತ್ವದಲ್ಲಿ ಇರುವುದು ಭಾರತ ದೇಶಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಗೊತ್ತಾಗುವ ಅವಕಾಶ ದೊರೆಯುವುದು.

2. ಜಾಗತಿಕ ಧರ್ಮಗಳ ಸಾಲಿನಲ್ಲಿ ಲಿಂಗಾಯತ ಧರ್ಮದ ಹೆಸರು ಸೇರ್ಪಡೆಯಾಗುವುದು.


3. ಅನೇಕ ಲಿಂಗಾಯತರು ತಮ್ಮ ಧರ್ಮಗುರುವಿನ ಆಶಯ, ಧರ್ಮದ ಸಂವಿಧಾನಕ್ಕೆ ವಿರುದ್ಧವಾಗಿ ಹೋಮ - ಹವನ, ನವಗ್ರಹ ಪೂಜೆ, ಪ್ರಾಣಿಬಲಿ, ಅನ್ಯ ದೇವತಾರ್ಚನೆ, ಗಿಡ ಮರಗಳ ಪೂಜೆ ಮುಂತಾದ್ದರಲ್ಲಿ ತೊಡಗಿದ್ದಾರೆ. ಅವರಿಗೆ ಧರ್ಮವನ್ನು ಬೋಧಿಸಬೇಕಾದ ಗುರುಗಳು, ಮಠಾಧೀಶರೇ ಇಂಥವನ್ನೆಲ್ಲ ಮಾಡುತ್ತಿರುವುದರಿಂದ ಅವರು ಲಿಂಗಾಯತ ಧರ್ಮದ ಜೀವಾಳವಾದ ಏಕದೇವೋಪಾಸನೆಯನ್ನು ಮುಚ್ಚಿಡುತ್ತಿದ್ದಾರೆ; ಬೋಧಿಸುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ. ಜನರು ಅಜ್ಞಾನದಿಂದ ವರ್ತಿಸುತ್ತಿದ್ದಾರೆ. ವಚನ ಸಾಹಿತ್ಯವನ್ನು ಓದುತ್ತ ಹೋದಂತೆ ಜನರೇ ಮಠಾಧೀಶರು ಮಾಡುವ ತಪ್ಪು ಆಚರಣೆಗಳನ್ನು ಶೀಘ್ರವಾಗಿ ಗುರುತಿಸುತ್ತಾರೆ. ಲಿಂಗಾಯತ ಧರ್ಮದ ನಿಜ ಸ್ವರೂಪವನ್ನು ತಿಳಿದಾಗ ಭಯ ನಿವಾರಣೆಯಾಗಿ ಆತ್ಮಬಲವು ಹೆಚ್ಚುತ್ತದೆ.

4. ಗುರು ಬಸವಣ್ಣನವರು ಮತ್ತು ಅವರ ಸಮಕಾಲೀನರ ವಚನಗಳನ್ನು ಓದಿದಾಗ ಮೂಡುವ ಒಂದು ಸುಂದರ ಶರಣ ಸಮಾಜದ ಕಲ್ಪನೆ ಇಂದು ರೂಪುಗೊಂಡಿರುವ ಲಿಂಗಾಯತ ಸಮಾಜವನ್ನು ನೋಡಿದಾಗ ನೀರಿನ ಗುಳ್ಳೆಯಂತೆ ಒಡೆಯುವುದು ಬಸವ ತತ್ವ ತುಂಬಾ ಚೆನ್ನಾಗಿದೆ. ಈ ಜನರೇಕೆ ಹೀಗಿದ್ದಾರೆ ?” ಎಂದು ವಚನ ಸಾಹಿತ್ಯಾಭಿಮಾನಿಗಳು ಕೇಳುವುದುಂಟು. ಈ ವೈಪರೀತ್ಯಕ್ಕೆ ಕಾರಣ ಸಮಾಜವು ವಚನ ಸಾಹಿತ್ಯದೊಡನೆ ಸಂಪರ್ಕ ಕಲ್ಪಿಸಿಕೊಳ್ಳದೆ ಇರುವುದು. ಹೀಗಾಗಿ ಲಿಂಗಾಯತರು ತಾವು ಮಾಡುತ್ತಿರುವ ತಪ್ಪು ಆಚರಣೆಗಳಲ್ಲೇ ಸಮಾಧಾನ - ಸಂತೋಷ ಕಾಣುತ್ತಿರುವರು. ತಮ್ಮದು ಸ್ವತಂತ್ರ, ಅವೈದಿಕ ಧರ್ಮ ಎಂಬ ಅರಿವು ಉಂಟಾದಾಗ ತಾತ್ವಿಕ ಶುದ್ದೀಕರಣ ಬೇಗನೇ ಸಾಧ್ಯವಾಗುವುದು. ತಮ್ಮ ಧರ್ಮಕ್ಕೆ ಹೊರತಾದ, ಧರ್ಮಗುರುವಿನ ಆಶಯಕ್ಕೆ ವಿರುದ್ಧವಾದ ಆಚರಣೆಗಳನ್ನು ಬಿಡುವ ಪ್ರಯತ್ನ ಮಾಡುವರು. ಅವರು ತಿದ್ದಿಕೊಳ್ಳಲಿ ಬಿಡಲಿ ಕನಿಷ್ಠ ಪಕ್ಷ ತಾವು ಮಾಡುತ್ತಿರುವುದು ತಪ್ಪು ಎಂದಾದರೂ ಮನವರಿಕೆಯಾಗದೆ ಇರದು.

ಗ್ರಂಥ ಋಣ:
1) ಲಿಂಗಾಯತರು ಹಿಂದುಗಳಲ್ಲ - A book written by Her Holiness Maha Jagadguru Mata Mahadevi, Published by: Vishwakalyana Mission 2035, II Block, chord Road, Rajajinagar, Bangalore-560010.

*
ಪರಿವಿಡಿ (index)
Previous ಲಿಂಗಾಯತ ಪ್ರಗತಿಪರ ಧರ್ಮ ಹಿಂದು ಧರ್ಮ ಎಂದರೇನು ? Next