Previous ವೀರಶೈವ ೧೨ನೇಯ ಶತಮಾನಕ್ಕಿಂತ ಮುಂಚೆ ಆಸ್ತಿತ್ವದಲ್ಲಿತ್ತೆ? ವಿಶ್ಲೇಷಣೆ - ವೀರಶೈವ ಚರಿತ್ರೆ Next

ವಿಶ್ಲೇಷಣೆ - ಶಿವದಾಸ ಗೀತಾಂಜಲಿ

*

✍ ಡಾ. ಎಸ್‌. ಎಂ. ಜಾಮದಾರ (ನಿವೃತ್ತ ಐಎಎಸ್ ಅಧಿಕಾರಿಗಳು)

ಶಿವದಾಸ ಗೀತಾಂಜಲಿ - ಡಾ. ಎಲ್. ಬಸವರಾಜು

ಪ್ರಸಿದ್ಧ ವಿದ್ವಾಂಸರಾದ ಡಾ. ಎಲ್. ಬಸವರಾಜು ಅವರ ಅನೇಕ ಗ್ರಂಥಗಳಲ್ಲಿ ವೀರಶೈವ ಧರ್ಮಕ್ಕೆ ಸಂಬಂಧಿಸಿದ ಎರಡು ಮುಖ್ಯ ದೊಡ್ಡ ಗ್ರಂಥಗಳೆಂದರೆ 'ಬಸವಪೂರ್ವದ ವಚನಕಾರರು', (ಮುದ್ದುಶ್ರೀ ಗ್ರಂಥಮಾಲಾ, ಮೈಸೂರು, ೨೦೦೯ ಮತ್ತು 'ಶಿವದಾಸ ಗೀತಾಂಜಲಿ', (ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು, ೧೯೬೯), ಮೊದಲ ಗ್ರಂಥದಲ್ಲಿ ಅವರು ಬಸವಪೂರ್ವದ ೨೨ ಜನರ ಸಂಕ್ಷಿಪ್ತ ಜೀವನಚರಿತ್ರೆಯನ್ನು ಕೊಟ್ಟಿದ್ದಾರೆ. ಆ ೨೨ ಜನರ ಕಾಲಮಾನವು ದೃಢಪಡಿಸದ ಕಾಲಾನುಕ್ರಮವನ್ನು ಆಧರಿಸಿದೆ. ಪ್ರಸ್ತುತ) ಅವರ ಎರಡನೆಯ ಗ್ರಂಥ 'ಶಿವದಾಸ ಗೀತಾಂಜಲಿ'ಯ ಕೆಲವು ಹೇಳಿಕೆಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಬಸವರಾಜು ಅವರು ಶೈವಧರ್ಮದ ವಿಶ್ಲೇಷಣೆ, ಅದರ ನಾನಾ ಶಾಖೆಗಳು ಮತ್ತು ಆ ಶಾಖೆಗಳೊಡನೆ ವೀರಶೈವರ ಸಂಬಂಧ ಕುರಿತ ನಿರೂಪಣೆಯೊಂದಿಗೆ ಆರಂಭಿಸುತ್ತಾರೆ. ಅದರಲ್ಲಿ ಅವರೇ ಕಾಣಿಸಿರುವಂತೆ ವೀರಶೈವದ ಸ್ಥಾನ ತುಂಬ ಅಭದ್ರವಾಗಿದೆ ಎಂಬುದನ್ನು ನಮ್ಮ ಪರಾಮರ್ಶೆ ತೋರಿಸುತ್ತದೆ. ಅವರು ಆರಂಭದಲ್ಲಿ 'ಶೈವಧರ್ಮದ ಇತರ ಪರಿಚಿತ ಶಾಖೆಗಳಿಗೆ ಸಂಬಂಧಿಸಿದ ಹೊರತು ವರ್ತಮಾನದ ವೀರಶೈವದ ದೊಡ್ಡಸ್ತಿಕೆಯ ವಾದಗಳಿಗೆ ಅರ್ಥವಿಲ್ಲ' ಎನ್ನುತ್ತಾರೆ. ಆ ಗ್ರಂಥದಲ್ಲಿ ಅವರ ಪ್ರಯತ್ನಗಳ ಗುರಿಯೆಲ್ಲ ಅದೇ ಆಗಿದೆ. ಅವರ ಈ ಪ್ರಯತ್ನಗಳ ಪ್ರಕ್ರಿಯೆಯಲ್ಲಿ ನಮಗೆ ಕೆಳಗೆ ಕಾಣಿಸಿರುವ ತಾರ್ಕಿಕ, ವಸ್ತುನಿಷ್ಠ ಮತ್ತು ಸ್ಪಷ್ಟವಾದ ಕೆಲವು ದೋಷಗಳು ಕಂಡುಬರುತ್ತವೆ :

'ಶಿವದಾಸ ಗೀತಾಂಜಲಿ'ಯ ಆರಂಭದ ಪ್ಯಾರಾದಲ್ಲಿ ಡಾ. ಬಸವರಾಜು ಹೀಗೆ ಹೇಳುತ್ತಾರೆ :

೧. “ಭಕ್ತಿಯಿಂದ ಆರಂಭವಾಗಿ ಶಿವನಲ್ಲಿ ಐಕ್ಯವಾಗುವ ಅಂತ್ಯದ ನಾನಾ ಶೈವಪಂಥಗಳು ಕಾಶ್ಮೀರದಿಂದ ತಮಿಳುನಾಡಿನವರೆಗೆ, ಸೌರಾಷ್ಟ್ರದಿಂದ ಬಂಗಾಳದವರೆಗೆ, ಅತ್ಯಂತ ಪ್ರಾಚೀನ ಕಾಲದಿಂದಲೂ ಹರಡಿಕೊಂಡಿದ್ದವು. ಅವುಗಳಲ್ಲಿ ವೀರಶೈವವೂ ಒಂದಾಗಿದೆ. ಅದರ ಹುಟ್ಟು ಹುಟ್ಟಿಲ್ಲದುದು ಎಂದು ಯಾರಾದರೂ ಹೇಳಿದರೆ, ಅದಕ್ಕೆ ಅರ್ಥವಿಲ್ಲ. ಹಾಗೆಯೇ ವೇದಗಳ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಅನುಮಾನ ಪ್ರಕ್ರಿಯೆಯಲ್ಲಿ ಯಾವುದಾದರೂ ಒಂದು ಪಂಥದೊಂದಿಗೆ ಅದನ್ನು ಹೋಲಿಸಿ ಅನ್ವಯಿಸದೆ ವೀರಶೈವವು ವೇದಗಳಂತೆಯೇ ಹಳೆಯದು ಎಂದು ಯಾರಾದರೂ ಹೇಳಿದರೆ ಅದೂ ಕೇವಲ ಉತ್ತೇಕ್ಷೆಯಾಗುತ್ತದೆ. ಇನ್ನು ಯಾರಾದರೂ ಶಿವನಷ್ಟೇ ಪ್ರಾಚೀನ ಎಂದು ಹೇಳಿದರೆ ನಿಸ್ಸಂಶಯವಾಗಿ ಅದು ಪ್ರಾಜ್ಞರಮೇಲೆ ಪ್ರಭಾವ ಉಂಟುಮಾಡಲಾರದು.”

ಡಾ. ಬಸವರಾಜು ಅವರ ಮೇಲಿನ ಹೇಳಿಕೆಯಲ್ಲಿರುವ ಕೆಲವೊಂದು ಅಂಶಗಳನ್ನು ಎತ್ತಿ ತೋರಿಸಬೇಕಾಗುತ್ತದೆ :

* ವೀರಶೈವರ ಗುರುಗಳ 'ವೀರಶೈವವು ಅನಾದಿ' (ಆದಿಯಿಲ್ಲದ್ದು) ಎಂಬ ವಾದವನ್ನು ಡಾ. ಬಸವರಾಜು ನಿರಾಕರಿಸಿದ್ದಾರೆ.
* ವೀರಶೈವವು ವೇದಗಳಷ್ಟೇ ಹಿರಿಯದು ಎನ್ನುವ ಅಭಿಪ್ರಾಯವನ್ನೂ ಅವರು ಒಪ್ಪಿಲ್ಲ.
* ಆದರೆ, ವೀರಶೈವದ ಪ್ರಾಚೀನತೆಯನ್ನು, ನಿಸ್ಸಂಶಯದ ಪೂರ್ವ ಇತಿಹಾಸವಿರುವ, ಇತರ ಪರಿಚಿತ ಶೈವಗಳೊಡನೆ ಸಂಬಂಧಿಸುತ್ತಾರೆ. ತಮ್ಮ ವಾದವನ್ನು ಸಮರ್ಥಿಸಲು, ಅದು ಒಂದು ಉತ್ತಮ ವಿವೇಚನೆಯಾಗುತ್ತದೆಂದು ಅವರು ವಿಚಾರಮಾಡಿದ್ದಾರೆ.

ಇತರ ಪರಿಚಿತ ಶೈವಪಂಥಗಳೊಂದಿಗೆ ಸಂಬಂಧಿಸಿ ವೀರಶೈವ ಧರ್ಮದ ಪುರಾತನತ್ವವನ್ನು ಸಾಧಿಸಿ ತೋರಿಸುವಲ್ಲಿ ಬಸವರಾಜು ಅವರ ಪ್ರಯತ್ನ ಎಷ್ಟೇ ಶ್ರೇಷ್ಠವಿದ್ದರೂ, 'ಪೂರ್ವ ಅಸ್ತಿತ್ವದ ಇನ್ನೊಂದು ಶೈವ ಪಂಥದೊಡನೆ ಸಂಬಂಧಿಸಿದರೆ ಮಾತ್ರ ವೀರಶೈವದ ಆಸ್ತಿತ್ವ' ಎನ್ನುವ ಅವರ ಕಲ್ಪನೆಯಿಂದಲೇ ಅದು ಅರ್ಥ ಕಳೆದುಕೊಳ್ಳುತ್ತದೆ. ಅಂತಹ ಸಂಬಂಧವಿಲ್ಲದಿದ್ದರೆ ವೀರಶೈವಕ್ಕೆ ತನ್ನದೇ ಆದ ತತ್ತ್ವ, ಸಿದ್ಧಾಂತ ಮತ್ತು ಚರಿತ್ರೆಗಳು ಇರುವ ಪ್ರತ್ಯೇಕವಾದ ಮತ್ತು ಸ್ವತಂತ್ರವಾದ ಅಸ್ತಿತ್ವವಿಲ್ಲ ಎಂಬುದನ್ನು ತೋರಿಸುತ್ತದೆ.

ಎರಡನೆಯದಾಗಿ, ಇನ್ನೊಂದು ಪರಿಚಿತ ಶೈವಪಂಥದೊಡನೆ ವೀರಶೈವವನ್ನು ಸಂಬಂಧಿಸುವ ಅವರ ಪ್ರಯತ್ನಗಳೂ ಸಹ ಅವರ ಹೇಳಿಕೆಯಲ್ಲೇ ಇರುವ ಆಂತರಿಕ ಅಸಾಂಗತ್ಯಗಳಿಂದಾಗಿ ವಿಫಲವಾಗುತ್ತವೆ. ಅದನ್ನು ಕೆಳಗೆ ವಿವರಿಸಲಾಗಿದೆ.

ಮೂರನೆಯದಾಗಿ, ಅವರ ಅನೇಕ ಹೇಳಿಕೆಗಳು ನಿರಾಧಾರ ಕಲ್ಪನೆಗಳಾಗಿವೆ ಮತ್ತು ವ್ಯತಿರಿಕ್ತವಾಗಿವೆ. ವಿಶ್ವಾಸಾರ್ಹ ಸಾಕ್ಷಾಧಾರದಿಂದ ಸಾಧಿಸಿ ತೋರಿಸಿದ ಹೊರತು ಅವು ತಾರ್ಕಿಕವಾಗಿ ಸಮಂಜಸವಾಗುವುದಿಲ್ಲ. ಅಂತಹ ಸಾಕ್ಷಾಧಾರ ಇಲ್ಲದೆಯೇ ಡಾ. ಬಸವರಾಜು ಅವರು ಊಹಾಪೋಹಗಳನ್ನೇ ನಿರ್ಣಾಯಕ ಶೋಧಗಳನ್ನಾಗಿ ಪರಿಗಣಿಸುತ್ತಾರೆ. ಅವರ ಕೆಲವು ಮುಖ್ಯ ಹೇಳಿಕೆಗಳನ್ನು ಇಲ್ಲಿ ಉಲ್ಲೇಖಿಸಿ ಅವನ್ನು ಒಂದೊಂದಾಗಿ ವಿಶ್ಲೇಷಿಸಲಾಗಿದೆ.

೨. “ನಾವು ಇದುವರೆಗೆ ತಿಳಿದಿರುವಂತೆ, ಅನೇಕ ಶೈವಪಂಥಗಳಲ್ಲಿ ಪಾಶುಪತವು ಅತ್ಯಂತ ಹಿಂದಿನದು.... ಕೆಲವು ವಿದ್ವಾಂಸರು ಹೇಳಿರುವಂತೆ, ಲಾಕುಲೀಶ ಪಾಶುಪತವು ಕ್ರಿ.ಪೂ. ೨ನೆಯ ಶತಮಾನಕ್ಕಿಂತ ಹಿಂದೆ ಅಸ್ತಿತ್ವದಲ್ಲಿತ್ತು. ಇನ್ನು ಕೆಲವರು ಕ್ರಿ.ಪೂ. ೨ನೆಯ ಶತಮಾನದಲ್ಲಿ ಅದು ರೂಢಿಗೆ ಬಂದಿತು ಎನ್ನುತ್ತಾರೆ.”

ತಾರ್ಕಿಕವಾಗಿ, ಪಾಶುಪತವು ಅತ್ಯಂತ ಹಳೆಯ ಪಂಥವಾದರೆ, ವೀರಶೈವವು ಪಾಶುಪತಕ್ಕಿಂತ ಹಿಂದಿನದಾಗಲು ಸಾಧ್ಯವಿಲ್ಲ. ಹಾಗೆಯೇ ಪಂಚಾಚಾರ್ಯರು ಹಕ್ಕು ಸಾಧಿಸುವಂತೆ ಅದು ಶಿವನಷ್ಟೇ ಅಥವಾ ವೇದಗಳಷ್ಟೇ ಪ್ರಾಚೀನ ವಾಗಲೂ ಸಾಧ್ಯವಿಲ್ಲ.

೩. “ಪಾಶುಪತ, ಕಾಳಾಮುಖ, ಕಾಪಾಲಿಕ ಮತ್ತು ವೀರಶೈವಗಳು ಶೈವಧರ್ಮದ ಶಾಖೆಗಳಾಗಿದ್ದರೂ, ಮೊದಲ ಮೂರು ಮಾತ್ರ ಕರ್ನಾಟಕದಲ್ಲಿ ೧೨ನೆಯ ಶತಮಾನಕ್ಕಿಂತ ಹಿಂದೆ ಅಸ್ತಿತ್ವದಲ್ಲಿದ್ದವು.” (ಅದೇ., ಪು.೩) ಈ ಹೇಳಿಕೆಯಲ್ಲಿ, ಡಾ. ಬಸವರಾಜು ಅವರು, ಬಸವಣ್ಣನವರ ಕಾಲವಾದ ೧೨ನೆಯ ಶತಮಾನದಲ್ಲಿ ಕರ್ನಾಟದಲ್ಲಿ ವೀರಶೈವವು ಅಸ್ತಿತ್ವದಲ್ಲಿ ಇರಲಿಲ್ಲ ಎಂಬುದನ್ನು ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾರೆ. ಆದರೆ ಕೆಳಗಿನ ಅವರ ಹೇಳಿಕೆಯಲ್ಲೇ ಅದನ್ನು ವಿರೋಧಿಸುತ್ತಾರೆ :
.
೪. “ಪಾಶುಪತದ ಒಂದು ಶಾಖೆಯಾಗಿ ಹುಟ್ಟಿಕೊಂಡ ವೀರಶೈವವು ೧೬- ೧೩-೧೦ ಸ್ಥಳಗಳಲ್ಲಿ ಸಂಚರಿಸುತ್ತ ೬೩ ಪುರಾತನರಿಂದ ಪೋಷಿಸಲ್ಪಟ್ಟಿತು. ಬಸವಣ್ಣನವರು ಮತ್ತು ಅವರ ಶರಣರ ಕಾಲದ ವೇಳೆಗೆ ಅದು ಕರ್ನಾಟಕ ಮತ್ತು ಆಂಧ್ರ ಪ್ರಾಂತ್ಯಗಳಲ್ಲಿ ಚಂದ್ರನ ತಂಪು ಕಿರಣಗಳಂತೆ ಜನಮನವನ್ನು ಮುಟ್ಟಿ ಹರಡಿಕೊಂಡಿತು. ಹಾಗೆಯೇ ಮಹಾರಾಷ್ಟ್ರ ಮತ್ತು ತಮಿಳುನಾಡುಗಳಲ್ಲೂ ಉತ್ತಮವಾಗಿ ಬೆಳಗಿತು.”

ಈ ಹೇಳಿಕೆಯಲ್ಲಿ ಡಾ. ಬಸವರಾಜು ಅವರು ತಮಗೆ ತಾವೇ ಸ್ಪಷ್ಟವಾಗಿ ವಿರುದ್ಧ ಹೇಳಿಕೆ ನೀಡಿದ್ದಾರೆ. ಕರ್ನಾಟಕದಲ್ಲಿ ೧೨ನೆಯ ಶತಮಾನದಲ್ಲಿ ವೀರಶೈವವು ಆಸ್ತಿತ್ವದಲ್ಲಿ ಇಲ್ಲದಿದ್ದರೆ (ಹೇಳಿಕೆ-೩) 'ಬಸವಣ್ಣನವರು ಮತ್ತು ಅವರ ಶರಣರ ಕಾಲದ ವೇಳೆಗೆ ಅದು ಚಂದ್ರನ ತಂಪು ಕಿರಣದಂತೆ ಜನಮನವನ್ನು ಮುಟ್ಟಲು ಹೇಗೆ ಸಾಧ್ಯ? ಬಸವಣ್ಣನವರು ಜೀವಿಸಿದ್ದು ಮತ್ತು ಲಿಂಗೈಕ್ಯರಾದದ್ದು ೧೨ನೆಯ ಶತಮಾನದಲ್ಲಿ. ಹೀಗಿರುವಾಗ ಡಾ. ಬಸವರಾಜು ಅವರ ಯಾವ ಹೇಳಿಕೆ (೩ ಅಥವಾ ೪) ಅಸತ್ಯವಾದದ್ದು!'

ಇನ್ನು ಅದೇ ೪ನೆಯ ಹೇಳಿಕೆಯಲ್ಲಿ ಡಾ. ಬಸವರಾಜು ಅವರು “ವೀರಶೈವವು ಪಾಶುಪತದ ಒಂದು ಶಾಖೆಯಾಗಿ ಹುಟ್ಟಿ...” ಎನ್ನುತ್ತಾರೆ. ಅಂದರೆ, ವೀರಶೈವವು ಒಂದು ಸ್ವತಂತ್ರ ಧರ್ಮ ಅಥವಾ ಪಂಥವಾಗಿರದೆ, ಪಾಶುಪತ ಶೈವಧರ್ಮದ ಒಂದು ಶಾಖೆ ಎಂದಾಯಿತು. ಮುಂದುವರೆದು, ಅವರು “ಬಸವಣ್ಣನವರು ಮತ್ತು ಅವರ ಶರಣರ ಕಾಲದ ವೇಳೆಗೆ' ಎಂದಿದ್ದಾರೆ. ಈ ಕಾಲಾನುಕ್ರಮದ ಬಗೆಗೆ ಅವರಿಗಿರುವ ಸಾಕ್ಷಾಧಾರವೇನು? ಯಾವುದೂ ಇಲ್ಲ. ಅದು ೧೨ನೆಯ ಶತಮಾನದ ನಂತರ ಏಕಾಗಿರಬಾರದು?

ಮತ್ತೆ, ಅದೇ ೪ನೆಯ ಹೇಳಿಕೆಯಲ್ಲಿ ಡಾ. ಬಸವರಾಜು ಅವರು, 'ತಮಿಳು ಶೈವಧರ್ಮದ ೬೩ ಪುರಾತನರಿಂದ ವೀರಶೈವವು ಪೋಷಿಸಲ್ಪಟ್ಟಿತು' ಎಂದಿದ್ದಾರೆ. ವಾಸ್ತವ ಸಂಗತಿ ಎಂದರೆ, ತಮಿಳು ಶೈವಸಿದ್ದಾಂತದ ಕೆಲವು ಪರಿಕಲ್ಪನೆಗಳನ್ನು ವೀರಶೈವರು ಬಹಳ ಕಾಲದ ನಂತರ ಪ್ರತಿಮಾಡಿಕೊಂಡಿದ್ದಾರೆ. ಉದಾಹರಣೆಗೆ ಸಾಲೋಕ್ಯ, ಸಾರೂಪ್ಯ ಸಾಮೀಪ್ಯ ಮತ್ತು ಸಾಯುಜ್ಯ ತತ್ತ್ವಗಳು. ಇವು ತಮಿಳು ಶೈವಧರ್ಮದಲ್ಲಿ ವ್ಯಕ್ತಿಯು ದೈವತ್ವವನ್ನು ಸಾಧಿಸುವ ನಾಲ್ಕು ಹಂತಗಳನ್ನು ಸೂಚಿಸುತ್ತವೆ. ಅವುಗಳನ್ನೇ ವೀರಶೈವರು ಅಕ್ಷರಶಃ ಅನುಕರಿಸಿದರು (ವಾನ್ಮಿತನಾಥನ್ - ಪೆರಿಯ ಪುರಾಣಮ್ ೧೯೪೫).

ಪೋಷಿಸಲ್ಪಡಬೇಕಾದ ವ್ಯಕ್ತಿಯೇ (ವೀರಶೈವವೇ) ಅಸ್ತಿತ್ವದಲ್ಲಿ ಇಲ್ಲವೆಂದ ಮೇಲೆ, ಪೋಷಿಸುವ ಪ್ರಶ್ನೆಯೇ ಏಳುವುದಿಲ್ಲ. ನಂತರದ ಸಿದ್ದಾಂತಗಳು ಮುಂಚಿನ ವಿಚಾರಗಳನ್ನು ಪ್ರತಿಮಾಡಿಕೊಂಡುದರಿಂದಾಗಿ, ಅದು ಹಾಗೆ ಕಾಣುವಂತಾಗಿದೆ. ಇದರಿಂದ ಡಾ. ಬಸವರಾಜು ಅವರು ಗೊಂದಲವುಂಟುಮಾಡಿಕೊಂಡಿದ್ದಾರೆ.

ಇನ್ನೊಂದು ಕಡೆ, ಮಲ್ಲಿಕಾರ್ಜುನ ಪಂಡಿತಾರಾಧ್ಯನ 'ಸಹಸ್ರಗಣನಾಮ'ದ ಕಾಲಾನುಕ್ರಮದ ಆಧಾರದ ಮೇಲೆ ಡಾ. ಬಸವರಾಜು ಅವರು 'ವೀರಶೈವವು ಪ್ರಾಯಶಃ, ೬೩ ಪುರಾತನರ ನಂತರ ಮತ್ತು ಶರಣರಿಗಿಂತ ಮುಂಚೆ ಅಸ್ತಿತ್ವದಲ್ಲಿತ್ತು ಎಂದಿದ್ದಾರೆ. ಒಂದೇ ವಿಷಯದ ೪ನೆಯ ಹೇಳಿಕೆಯಲ್ಲಿ ಒಂದು ಸಲ ೬೩ ಪುರಾತನರಿಂದ ಪೋಷಿಸಲ್ಪಟ್ಟಿತ್ತು' ಎನ್ನುವುದು, ಇನ್ನೊಂದು ಸಲ ೬೩ ಪುರಾತನರ ನಂತರ ಆಸ್ತಿತ್ವದಲ್ಲಿತ್ತು' ಎನ್ನುವುದು. ಇವುಗಳ ನಡುವಿನ ಗೊಂದಲ ಯಾರಿಗಾದರೂ ತಿಳಿಯುತ್ತದೆ. ಈ ಎರಡರಲ್ಲಿ ಯಾವುದು ಸತ್ಯ?

ಗಮನಾರ್ಹವಾಗಿ, ಡಾ. ಬಸವರಾಜು ಅವರು ಉಲ್ಲೇಖಿಸಿರುವ 'ಸಹಸ್ರಗಣನಾಮ'ದ ಕರ್ತೃ ಪಂಡಿತಾರಾಧ್ಯನು ಬದುಕಿದ್ದೇ ೧೨ನೆಯ ಶತಮಾನದಲ್ಲಿ, ಹಾಗಾದರೆ ೬೩ ಪುರಾತನರು ಮತ್ತು ಶರಣರ ಕಾಲದ ನಡುವೆ ಅಂತರವೆಲ್ಲಿ? ಅಷ್ಟಕ್ಕೂ 'ಸಹಸ್ರಗಣನಾಮ' ಒಂದು ಪೌರಾಣಿಕ ಸ್ತೋತ್ರವಾಗಿದ್ದು, ವೀರಶೈವದ ಆಸ್ತಿತ್ವದ ಒಂದು ಮುಖ್ಯವಾದ ಚಾರಿತ್ರಿಕ ಘಟನೆಯ ಕಾಲವನ್ನು ಗುರುತಿಸಲು ಅದು ವಸ್ತುನಿಷ್ಠ ಆಧಾರವಾಗಲು ಸಾಧ್ಯವಿಲ್ಲ.
ತಮಿಳು ಪುರಾತನರನ್ನು ಕುರಿತ ಡಾ. ಬಸವರಾಜು ಅವರ ಉಲ್ಲೇಖಿತ ಹೇಳಿಕೆಯು, ಅವರಿಗೆ ಕಾಲಾನುಕ್ರಮದ ಬಗೆಗೆ ಹೆಚ್ಚು ನಿಖರವಾಗಿ ತಿಳಿದಿರಲಿಲ್ಲ ಎಂಬುದನ್ನು ತೋರಿಸುತ್ತದೆ. ಚೋಳ ಚಕ್ರಾಧಿಪತ್ಯದ ಪ್ರಧಾನ ಅಮಾತ್ಯನಾಗಿದ್ದ ಶಕ್ಕಿಳಾ‌ ೧೨ನೆಯ ಶತಮಾನದಲ್ಲಿ 'ಪೆರಿಯ ಪುರಾಣ'ವನ್ನು ರಚಿಸಿದವನು. ಅದು ೬೦ ಪುರಾತನರ ವಿವರಗಳನ್ನು ನೀಡುತ್ತದೆ. (ಎಂ. ಅರುಣಾಚಲಂ ದಿ ವೀರಶೈವ ಸೆಯಿಂಟ್ – ೧೯೮೫ ಮತ್ತು ಜಿ. ವಾಲ್ಮೀಕನಾಥಮ್ - ಪೆರಿಯ ಪುರಾಣಮ್ – ೧೯೮೫).

ಮೂವರ ಹೊರತಾಗಿ (ಬೇಡರ ಕಣ್ಣಪ್ಪ, ಚಂಡೇಶ ಮತ್ತು ನಂಬಿ) ಇತರ ಎಲ್ಲಾ ತಮಿಳು ಪುರಾತನರು ಅಥವಾ ನಯನಾರರು ಅಥವಾ ನಯನಾರರು ಕ್ರಿ.ಶ. ಏಳು ಮತ್ತು ಹನ್ನೆರಡನೆಯ ಶತಮಾನದ ಮಧ್ಯೆ ಇದ್ದವರು. ಬಸವಣ್ಣನವರು ಮತ್ತು ಶರಣರು ಬಂದದ್ದು ೧೨ನೆಯ ಶತಮಾನದಲ್ಲಿ.

ಬಸವಣ್ಣನವರ ಕಾಲದಲ್ಲಿ ೬೩ ಪುರಾತನರಲ್ಲಿ ಐವರು (ಕೊಚೆಂಗನ್ ಚೋಳ, ಶಕ್ಕಿಳಾ‌, ಮೆರೆಮಿಂಡ, ಸದೈನಾ‌ ಮತ್ತು ಇಸೈಜ್ಞಾನಿಯ‌) ಬಸವಾದಿ ಶರಣರು ಸ್ಥಾಪಿಸಿದ ಲಿಂಗಾಯತ ಧರ್ಮದ ಹನ್ನೆರಡನೆಯ ಶತಮಾನದಲ್ಲಿ (ಸುಮಾರು ಕ್ರಿ.ಶ.೧೧೫೦) ಬದುಕಿದ್ದವರು. ಹಾಗಾಗಿ ಡಾ. ಬಸವರಾಜು ಅವರು ಅಭಿಪ್ರಾಯಪಡುವಂತೆ 'ಶರಣರು ಮತ್ತು ಪುರಾತನರ ನಡುವಿನ ಅವಧಿಯಲ್ಲಿ ವೀರಶೈವವು ಅಸ್ತಿತ್ವಕ್ಕೆ ಬಂದಿತು' ಎಂದರೆ, ಅಲ್ಲಿ ಶರಣರು ಮತ್ತು ಪುರಾತನರ ನಡುವೆ ಅಂತರವೆಲ್ಲಿದೆ? ಅಷ್ಟಕ್ಕೂ ಡಾ. ಬಸವರಾಜು ಅವರು ಪುರಾತನರಲ್ಲಿ ಯಾರು, ಯಾವ ಅವಧಿಯಲ್ಲಿ ವೀರಶೈವ ಧರ್ಮವನ್ನು ಪೋಷಿಸಿದರು ಎಂಬುದನ್ನು ತಿಳಿಸುವುದಿಲ್ಲ. ಹಾಗಾಗಿ, ಡಾ. ಬಸವರಾಜು ಅವರ ಊಹೆ ವಾಸ್ತವಿಕವಾಗಿ ಸರಿಯಲ್ಲ ಎನ್ನುವುದು ಸ್ಪಷ್ಟವಾಗಿದೆ.

ಡಾ. ಬಸವರಾಜು ಅವರು ಹೀಗೆ ಸಂಗತಿಗಳನ್ನು ವಿವಾದಗೊಳಿಸುತ್ತಾ ಹೋಗುತ್ತಾರೆ. ಕೆಳಗೆ ಕಂಡ ಅವರ ೫ನೆಯ ಹೇಳಿಕೆಯನ್ನು ನೋಡೋಣ :

೫“.... ವೃದ್ಧಾಪ್ಯ ಮತ್ತು ಕೆಲವು ಮಾಟ-ಮಂತ್ರ ಪದ್ಧತಿಗಳು ಪ್ರವೇಶಿಸಿದ್ದರಿಂದ ಮತ್ತು ೧೨ನೆಯ ಶತಮಾನದ ವೇಳೆಗೆ ಕಾಳಾಮುಖ, ಕಾಪಾಲಿಕ ಮತ್ತು ಪಾಶುಪತ ಪಂಥಗಳು ಅಳಿವಿನ ಅಂಚಿನಲ್ಲಿದ್ದು ಮರೆಯಾಗುತ್ತಿದ್ದುದರಿಂದ, ಅದೇ ಕಾಲಕ್ಕೆ ಹೆಚ್ಚು ಸಮನ್ವಯಕಾರಕವಾದ ಮತ್ತು ಅಷ್ಟು ಪರಿಚಿತವಲ್ಲದ 'ಸದ್ಯೋಜಾತ ಶೈವ'ವು ಬಸವಣ್ಣ ಮತ್ತು ಅವರ ಶರಣರಿಂದ, ವೈದಿಕ ಮತ್ತು ಪೌರಾಣಿಕ ನಿರೂಪಣೆಗಳನ್ನು ಆಧರಿಸಿ, ಜನಪ್ರಿಯಗೊಂಡಿತು.” (ಅದೇ., ಪು ೩)

ನಾವು ಮೊದಲು ಗಮನಿಸಬೇಕಾದುದೆಂದರೆ, ಡಾ. ಬಸವರಾಜು ಅವರು ೩ನೆಯ ಹೇಳಿಕೆಯಲ್ಲಿ ಪಾಶುಪತವು ೧೨ನೆಯ ಶತಮಾನಕ್ಕಿಂತ ಮುಂಚೆ ಅಸ್ತಿತ್ವದಲ್ಲಿತ್ತು ಎಂದು ಹೇಳಿ, ೫ನೆಯ ಹೇಳಿಕೆಯಲ್ಲಿ ಪಾಶುಪತವು ೧೨ನೆಯ ಶತಮಾನದ ವೇಳೆಗೆ ಮರೆಗೆ ಸೇರಿತ್ತು ಎನ್ನುವುದು ವಿಚಿತ್ರವೆನಿಸುತ್ತದೆ. ಹಾಗಾದರೆ, ಇವುಗಳಲ್ಲಿ ಯಾವುದು ಸತ್ಯ?

ಮುಂದುವರೆದು, ಡಾ. ಬಸವರಾಜು ಅವರು, ಅದೇ ೫ನೆಯ ಹೇಳಿಕೆಯಲ್ಲಿ ೧೨ನೆಯ ಶತಮಾನದಲ್ಲಿ ಸದ್ಯೋಜಾತ (ವೀರ) ಶೈವವು ಬಸವಣ್ಣ ಮತ್ತು ಶರಣರಿಂದ ಜನಪ್ರಿಯಗೊಂಡಿತು' ಎಂದಿದ್ದಾರೆ. ಅದರ ಅರ್ಥ ಆಗಿನ ವೀರಶೈವವು ಪಾಶುಪತದ ಸಂಬಂಧವನ್ನು ಕಳಚಿಕೊಂಡು, ಸದ್ಯೋಜಾತದ ವಶವಾಯಿತು ಎಂದಾಗುತ್ತದೆ.

ಮೇಲಾಗಿ, ವೈದಿಕ ಮತ್ತು ಪೌರಾಣಿಕ ನಿರೂಪಣೆಗಳನ್ನು ಆಧರಿಸಿದ ಸದ್ಯೋಜಾತ ವೀರಶೈವವನ್ನು ಶರಣರು ಜನಪ್ರಿಯಗೊಳಿಸಿದರು ಎನ್ನುವುದು ಪೂರ್ಣವಾಗಿ ನಿರಾಧಾರವಾದದ್ದು. ಏಕೆಂದರೆ, ಎಲ್ಲರಿಗೂ ತಿಳಿದಿರುವಂತೆ ಶರಣರು ವೈದಿಕ ಮತ್ತು ಪೌರಾಣಿಕ ಅಂಶಗಳನ್ನು ನೇರವಾಗಿ ನಿರಾಕರಿಸಿದವರು. ಆದ್ದರಿಂದ ಡಾ. ಬಸವರಾಜು ಅವರು, ಮಿಶ್ರಣವಾಗದುದನ್ನು ಮಿಶ್ರಣಮಾಡಲು ಪ್ರಯತ್ನಿಸಿ ಗೊಂದಲಕ್ಕೆ ಈಡುಮಾಡುತ್ತಾರೆ. (ವಿವರಗಳಿಗೆ ಬಸ್ರೂರ್‌ ಸುಬ್ಬರಾವ್ ಅವರ 'ಲಿಂಗಾಯತ್ ಫಿಲಾಸಫಿ' ಗ್ರಂಥವನ್ನು ನೋಡಿ, ಪು. ೯೫-೧೨೦)

ಡಾ. ಬಸವರಾಜು ಅವರ ಇನ್ನೊಂದು ಹೇಳಿಕೆಯಲ್ಲಿ ವಿಚಿತ್ರ ಊಹೆಯನ್ನು ಕಾಣಬಹುದು :

೬. “ಹದಿನಾಲ್ಕನೆಯ ಶತಮಾನದಲ್ಲಿ ಕರ್ನಾಟಕದ ಮಾಧವನು ತನ್ನ “ಸರ್ವದರ್ಶನ ಸಂಗ್ರಹ"ದಲ್ಲಿ (ಎಲ್ಲ ತತ್ತ್ವಜ್ಞಾನಗಳ ಸಂಗ್ರಹ) ಪಾಶುಪತವನ್ನು ಪ್ರಸ್ತಾಪಿಸುತ್ತಾನೆ. ಆದರೆ, ವೀರಶೈವದ ಬಗೆಗೆ ಪ್ರಸ್ತಾಪ ಮಾಡುವುದಿಲ್ಲ ಎಂದರೆ ಅವನು ಅಜ್ಞಾನಿ ಎಂದಲ್ಲ. ಅವನು ವೀರಶೈವವನ್ನು ದ್ವೇಷಿಸುತ್ತಿದ್ದ ಎನ್ನುವ ಕಾರಣದಿಂದಲೂ ಅಲ್ಲ. ಅವನ ಅಭಿಪ್ರಾಯದಲ್ಲಿ ಎರಡೂ ಒಂದೇ ಆಗಿದ್ದುದರಿಂದ.”

ವೀರಶೈವ ಮತ್ತು ಪಾಶುಪತ ಎರಡೂ ಒಂದೇ ಎನ್ನುವುದು ಮಾಧವನ ಅಭಿಪ್ರಾಯ ಎನ್ನುವುದು ಡಾ. ಬಸವರಾಜು ಅವರಿಗೆ ಹೇಗೆ ತಿಳಿಯಿತು? ಅದಕ್ಕೆ ಬೇರೆ ಯಾವ ಆಧಾರವನ್ನೂ ಅವರು ಕೊಟ್ಟಿಲ್ಲ. ವೀರಶೈವ ಮತ್ತು ಪಾಶುಪತ ಎರಡೂ ಒಂದೇ ಎಂದು ಮಾಧವನು ಬೇರೆಲ್ಲೂ ಹೇಳಿಲ್ಲ. ನಿಶ್ಚಿತವಾಗಿ ೧೪ನೆಯ ಶತಮಾನದಲ್ಲಿ ಇತರ ಪ್ರತಿಯೊಂದೂ ಪಂಥ ಮತ್ತು ಧರ್ಮ ಹಾಗೂ ಅವುಗಳ ತತ್ವಜ್ಞಾನಗಳ ಬಗೆಗೆ ಚರ್ಚಿಸಿರುವ ಮಾಧವನು ವೀರಶೈವದ ಬಗೆಗೆ ಏನನ್ನೂ ಹೇಳದಿರಲು ಕಾರಣ, ಆಗ ವೀರಶೈವವು ಅಸ್ತಿತ್ವದಲ್ಲಿ ಇರಲಿಲ್ಲ ಎಂಬುದೇ ಆಗಿದೆ. ಅಸ್ತಿತ್ವದಲ್ಲಿ ಇದ್ದಿದ್ದರೆ ಮಾಧವನು ಅದನ್ನು ಹೆಸರಿಸದೆ ಬಿಡುತ್ತಿರಲಿಲ್ಲ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಆದ್ದರಿಂದ ೧೪ನೆಯ ಶತಮಾನದವರೆಗೆ ವೀರಶೈವವು ಆಸ್ತಿತ್ವದಲ್ಲಿ ಇರಲಿಲ್ಲವೆನ್ನುವುದು ಸತ್ಯ.

ಏನೇ ಇದ್ದರೂ, ಪಾಶುಪತವು ಬಸವಣ್ಣನವರಿಗಿಂತ ಮುಂಚೆಯೇ ಅಸ್ತಿತ್ವದಲ್ಲಿದ್ದುದರಿಂದ ವೀರಶೈವವು ಅದರ ಒಂದು ಶಾಖೆ ಎನ್ನುವುದನ್ನು ರುಜುವಾತುಪಡಿಸಲು ಡಾ. ಬಸವರಾಜು ಅವರು ಪ್ರಯತ್ನಿಸಿದ್ದಾರೆಂಬುದಂತೂ ನಿಜ. ಪಾಶುಪತವು ಅತ್ಯಂತ ಹಳೆಯ ಕಾಲದ್ದು ಎಂಬುದನ್ನು ಎಲ್ಲರೂ ಬಲ್ಲರು. ಪ್ರಾಚೀನವೆನ್ನುವುದನ್ನು ವೀರಶೈವದೊಡನೆ ಪರಿಗಣಿಸುವುದು ವೀರಶೈವಕ್ಕೆ ಪ್ರಾಚೀನತೆಯನ್ನು ತಂದುಕೊಡುತ್ತದೆ ಮತ್ತು ತಮ್ಮ ಅಸಂಗತ ವಾದವನ್ನು ಸಮರ್ಥಿಸಲು ನೆರವಾಗುತ್ತದೆ ಎಂಬುದು ಡಾ. ಬಸವರಾಜು ಅವರ ಲೆಕ್ಕಾಚಾರ!

ಹನ್ನೆರಡನೆಯ ಶತಮಾನದ ವೇಳೆಗೆ ಪಾಶುಪತವು ಹಳೆಯದಾಗಿ ಮರೆತು ಹೋಗಿದ್ದಾಗ, ಡಾ. ಬಸವರಾಜು ಅವರು ವೀರಶೈವವನ್ನು ಸದ್ಯೋಜಾತಕ್ಕೆ ಸಂಬಂಧಿಸಲು ಪ್ರಯತ್ನಿಸುತ್ತಾರೆ. ಪಾಶುಪತರೇ ವೀರಶೈವರಾದರು ಮತ್ತು ಇಬ್ಬರೂ ಒಂದೇ ಎಂದೂ ಹೇಳುತ್ತಾರೆ. ಯಾರು ಯಾರನ್ನು ಪ್ರತಿ ಮಾಡಿದರು? ಪಾಶುಪತರನ್ನು ವೀರಶೈವರು ವಶಪಡಿಸಿಕೊಂಡರೆ? ಅಥವಾ ವೀರಶೈವರನ್ನು ಪಾಶುಪತರು ವಶಪಡಿಸಿಕೊಂಡರೆ? ಹೇಳಲು ಬರುವಂತಿಲ್ಲ, ಬೇರೆ ಯಾವ ಅಧಿಕೃತ ಮೂಲವೂ ಪಾಶುಪತವೇ ವೀರಶೈವವಾಯಿತು ಎಂದು ಇದುವರೆಗೆ ಹೇಳಿಲ್ಲ.

೭. ಡಾ. ಬಸವರಾಜು ಅವರ ವಿಚಾರದ ಇನ್ನೊಂದು ದೊಡ್ಡ ದೋಷವೆಂದರೆ, ಸಂಸ್ಕೃತ ಸಾಹಿತ್ಯ ಪರಂಪರೆ ಮತ್ತು ಶೈವಧರ್ಮದ ಚರಿತ್ರೆಯನ್ನು ಚರ್ಚೆಗೆ ಎಳೆದು ತಂದಿರುವುದು. ಶರಣರು ಮತ್ತು ಬಸವಣ್ಣನವರು ಶಿವನಲ್ಲಿ ಭಕ್ತಿ ನಿಷ್ಠೆಯನ್ನಿಟ್ಟಿದ್ದರೆಂದರೆ ಮುಗಿಯುತ್ತಿತ್ತು. ಆದರೆ ಇತರ ಎಲ್ಲಾ ಶೈವ ಶಾಖೆಗಳ ಪರಿಕಲ್ಪನೆಗಳನ್ನು, ಶರಣ ಧರ್ಮದ ಚರ್ಚೆಯಲ್ಲಿ ತರುವುದು ಊಹೆಗೂ ನಿಲುಕದ ವಿಷಯ. ಶರಣರು ಪಾಶುಪತರನ್ನು ಕಠಿನವಾಗೇ ನಿರಾಕರಿಸಿದ್ದಾರೆ. ದ್ವೈತವನ್ನು ಒಪ್ಪುವ, ವಿಗ್ರಹಾರಾಧನೆ, ಸಾಲೋಖ್ಯ, ಸಾರೂಪ್ಯ, ಸಾಮೀಪ್ಯ, ಸಾಯುಜ್ಯಗಳ ಪರಿಕಲ್ಪನೆಗಳ ತಮಿಳು ಶೈವಧರ್ಮದ ಅವಲಂಬನೆಯು ಶರಣರ ದೃಷ್ಟಿಯಲ್ಲಿ ಅಸಂಗತ. ತಂತ್ರಸಿದ್ಧಾಂತ ಮತ್ತು ಕಾಶ್ಮೀರಶೈವ, ತಂತ್ರ ಮತ್ತು ರಹಸ್ಯ ಪದ್ಧತಿಗಳನ್ನು ಶರಣರು ಒಪ್ಪುವುದಿಲ್ಲ. ಕಾಳಾಮುಖ ಮತ್ತು ಕಾಪಾಲಿಕ ಪಂಥಗಳನ್ನಂತೂ ಶರಣರು ನೇರವಾಗಿ ನಿರಾಕರಿಸಿದ್ದಾರೆ, ಆದರೆ ಡಾ. ಬಸವರಾಜು ಅವರು ಎರಡನೆಯ ಅಧ್ಯಾಯದಲ್ಲಿ ಇವೆಲ್ಲವನ್ನೂ ಸಂಸ್ಕೃತ ಪಠ್ಯಗಳ ಮೂಲಕ ಒಳತಂದಿದ್ದಾರೆ.

ಈ ಪ್ರಕ್ರಿಯೆಯಲ್ಲಿ ಅವರು ಸಾಕಷ್ಟು ಗೊಂದಲಗೊಂಡಿದ್ದಾರೆ. ಹಾಗೆಯೇ ಕೆಳಗೆ ಕಂಡ ಅಂಶಗಳ ಬಗೆಗೆ ಗೊಂದಲ ಉಂಟುಮಾಡುತ್ತಾರೆ :

* ಪಾಶುಪತ ಮತ್ತು ವೀರಶೈವ ಎರಡೂ ಒಂದೇ?
* ತಮಿಳು ಶೈವವು ವೀರಶೈವದ ಮೂಲಾಧಾರವೆ?, ವೀರಶೈವವು ಸಾಮಾನ್ಯ ಶೈವದಂತೆಯೆ?
* ವೀರಶೈವವು ಆಗಮಿಕ ಮತ್ತು ವೈದಿಕ ಪಂಥವೆ?

ಸ್ಪಷ್ಟವಾಗಿ ಹೇಳುವುದಾದರೆ, ಡಾ. ಬಸವರಾಜು ಅವರು ಈ ಎಲ್ಲ ಪ್ರಶ್ನೆಗಳಿಗೂ ಹೌದು ಎನ್ನುವಂತೆ ಕಾಣುತ್ತದೆ. ಅದಕ್ಕಿಂತ ಕೆಟ್ಟದ್ದೆಂದರೆ, ಅವರು ಶರಣರ ಚಿಂತನೆಗಳೊಂದಿಗೆ ವೀರಶೈವ ತತ್ವಗಳನ್ನು ಬೆರೆಸುವುದು. ಆ ಕಾಲದ ವಾಡಿಕೆಯ ಬಹುತೇಕ ಗ್ರಂಥಕರ್ತರು ವೈದಿಕ ಮತ್ತು ಆಗಮಿಕ ವೀರಶೈವ ಮತ್ತು ಅವೈದಿಕ ಮತ್ತು ಅನಾಗಮಿಕ ಶರಣಧರ್ಮ ಇವುಗಳ ಮಧ್ಯೆ ಇರುವ ಮತ್ತು ಎಲ್ಲ ದೃಷ್ಟಿಯಿಂದಲೂ ಗಮನಾರ್ಹವಾಗಿರುವ ವ್ಯತ್ಯಾಸಗಳು ಮತ್ತು ವಿರೋಧಗಳನ್ನು ಗ್ರಹಿಸದೇ ಇದ್ದುದು ನಿಜಕ್ಕೂ ಆಘಾತಕಾರಿ ಸಂಗತಿ.

೮. ವೀರಶೈವಕ್ಕೆ ಪೌರಾಣಿಕ ಮತ್ತು ಆಗಮಿಕ ಆಧಾರಗಳಿವೆ ಎಂಬ ತಮ್ಮ ನಂಬಿಕೆಯನ್ನು ಸಾಧಿಸಲು ಅನೇಕ ಪುರಾಣಗಳು (ಅದೇ., ಪು.೧೭) ಮತ್ತು ಆಗಮಗಳನ್ನು (ಅದೇ., ಪು.೧೬) ಉಲ್ಲೇಖಿಸುತ್ತಾರೆ. ಆದರೆ ಡಾ. ಬಸವರಾಜು ಅವರು ಉಲ್ಲೇಖಿಸಿರುವ ಬಹುತೇಕ ಪುರಾಣಗಳು ೧೩, ೧೪ ಮತ್ತು ೧೫ನೆಯ ಶತಮಾನಗಳ ಅವಧಿಯಲ್ಲಿ ಅಥವಾ ನಂತರ ರಚಿತವಾದವು ಮತ್ತು ಅವು ನಂತರದ ವೀರಶೈವ ಗ್ರಂಥಕರ್ತರ ಕಟ್ಟು ಕಥೆಗಳಿಂದ ತುಂಬಿದವು. ಭವಿಷ್ಯದಿಂದ ಭೂತಕಾಲವನ್ನು ಸಮರ್ಥಿಸಲಾಗದು. ಶರಣರು ಎಲ್ಲ ಪುರಾಣಗಳು ಮತ್ತು ಆಗಮಗಳನ್ನು ಒಟ್ಟಾರೆ ನಿರಾಕರಿಸುತ್ತಾರೆ ಮತ್ತು ಪೌರಾಣಿಕ ಕಥೆಗಳನ್ನು ಗೇಲಿಮಾಡಿದ್ದಾರೆ ಎಂಬುದನ್ನು ಮರೆಯಬಾರದು.
ಆದರೆ, ವೀರಶೈವವನ್ನು ಪ್ರಸ್ತಾಪಿಸುವ ಒಂಬತ್ತು ಆಗಮಗಳ ಪ್ರಾಮಾಣಿಕತೆಯನ್ನು ನಿರ್ದಾಕ್ಷಿಣ್ಯವಾಗಿ ಪ್ರಶ್ನಿಸಲಾಗಿದೆ. ಆ ಆಗಮಗಳೂ ಅಷ್ಟೇ. ನಾನಾ ವಿಷಯಗಳಲ್ಲಿ ಅವು ತಮ್ಮ ತಮ್ಮಲ್ಲೇ ವಿರೋಧವಾಗಿವೆ. ಆದ್ದರಿಂದ ಡಾ. ಬಸವರಾಜು ಅವರು ಅಂತಹ ಆಗಮಗಳನ್ನು ಉಲ್ಲೇಖಿಸಿರುವುದು ಮತ್ತೊಂದು ವಿಫಲ ಪ್ರಯತ್ನವಾಗಿದೆ.

೯. ಜೊತೆಗೆ ಡಾ. ಬಸವರಾಜು ಅವರು ೧೩ ರಿಂದ ೧೭ನೆಯ ಶತಮಾನಗಳ ಮಧ್ಯದ ಅವಧಿಯಲ್ಲಿ ಹುಟ್ಟಿಕೊಂಡ ಬಹುತೇಕ ವೀರಶೈವ ಸಾಹಿತ್ಯವನ್ನು ಅವಲಂಬಿಸಿ, ಮೇಲೆ ಹೇಳಿದಂತೆ ಭವಿಷ್ಯದಿಂದ ಭೂತಕಾಲವನ್ನು ಸಮರ್ಥಿಸಲು ಪ್ರಯತ್ನಿಸುತ್ತಾರೆ. ಅಂತಹ ಮೂಲಗಳೆಂದರೆ

೧. ಮಲ್ಲಿಕಾರ್ಜುನ ಪಂಡಿತಾರಾಧ್ಯನ ಗಣಸಹಸ್ರನಾಮ' (ಕ್ರಿ.ಶ.೧೩೦೦),
೨. ಸಿದ್ಧನಂಜೇಶನ 'ಗುರುರಾಜ ಚರಿತ್ರೆ' (೧೬ನೆಯ ಶತಮಾನ),
೩. ಲಕ್ಕಣ ದಂಡೇಶನ 'ಶಿವತತ್ವ ಚಿಂತಾಮಣಿ' (೧೫ನೆಯ ಶತಮಾನ),
೪. ಗುಬ್ಬಿ ಮಲ್ಲಣಾರ್ಯನ 'ಗಣಭಾಷಿತ ರತ್ನಮಾಲೆ' ಮತ್ತು 'ವೀರಶೈವಾಮೃತ ಪುರಾಣ' (ಕ್ರಿ.ಶ.೧೫೬೦),
೫. ಸಿಂಗಿರಾಜನ 'ಅಮಲ ಬಸವರಾಜ ಚರಿತ್ರೆ' (೧೫ನೆಯ ಶತಮಾನ),
೬. ನೀಲಕಂಠ ನಾಗನಾಥಾಚಾರ್ಯನ 'ವೀರಮಾಹೇಶ್ವರ ಸಂಗ್ರಹ' (೧೬ನೆಯ ಶತಮಾನ),
೭. ಕೆಳದಿ ರಾಜ ಬಸವಪ್ಪ ಭೂಪಾಲನ 'ಶಿವತತ್ವ ರತ್ನಾಕರ' (೧೭ನೆಯ ಶತಮಾನ),
೮. ಜ್ಯೋತಿನಾಥನ 'ಶೈವರತ್ನಾಕರ' (೧೭ನೆಯ ಶತಮಾನ),
೯. ಜಗದಾರಾಧ್ಯ ನಾಗೇಶನ 'ಶಿವಜ್ಞಾನ ಸಮುಚ್ಚಯ' (೧೬ನೆಯ ಶತಮಾನ),
೧೦. ತೋಂಟದ ಸಿದ್ಧಲಿಂಗಯತಿಯ ಕೃತಿಗಳು (೧೫೭೦),
೧೧. ಪುಲಿಗೆರೆ ಮಹಾಲಿಂಗದೇವನ 'ಏಕೋತ್ತರ ಶತಸ್ಥಲ' (೧೫ನೆಯ ಶತಮಾನ),
೧೨. ನೀಲಕಂಠಾಚಾರ್ಯನ 'ಮಲ್ಲಿಕಾರ್ಜುನ ಪಂಡಿತಾರಾಧ್ಯ ಚರಿತ್ರೆ' (೧೪೮೫),
೧೩. ಮಲ್ಲಿಕಾರ್ಜುನ ಪಂಡಿತಾರಾಧ್ಯರ 'ಶಿವತತ್ವಸಾರ' (೧೩೦೦) - ಇತ್ಯಾದಿ.

ಅನುಗತವಾಗಿ, ಬಹುತೇಕ ವೀರಶೈವ ಸಾಹಿತ್ಯ ಸೃಷ್ಟಿಯಾಗಿರುವುದು ಬಸವಣ್ಣನವರಿಗಿಂತ ಬಹಳ ಕಾಲದ ನಂತರ. ಅದರಲ್ಲೂ ೧೫ ಮತ್ತು ೧೬ನೆಯ ಶತಮಾನಗಳಲ್ಲಿ ಮತ್ತು ನಂತರ. ಈ ಸಾಹಿತ್ಯವು ಬಸವಣ್ಣನವರು ಮತ್ತು ಅವರ ಸಮಕಾಲೀನ ಶರಣರ ತತ್ವಾಜ್ಞಾನ ಮತ್ತು ಕ್ರಿಯಾಚರಣೆಗಳನ್ನು ಉದ್ದೇಶಪೂರ್ವಕವಾಗಿ ಪ್ರಕ್ಷಿಪ್ತಗೊಳಿಸಿದೆ. ಆ ಪ್ರಕ್ಷಿಪ್ತತೆ ಎಂದರೆ -

* ವಚನಗಳಲ್ಲಿ ಅನಗತ್ಯವಾಗಿ ೬೪೮ರಷ್ಟು ಸಂಸ್ಕೃತ ಶ್ಲೋಕಗಳನ್ನು ಸೇರಿಸಿರುವುದು.
* ಸುಮಾರು ೧೫೦ ವಚನಗಳಲ್ಲಿ 'ಲಿಂಗಾಯತ' ಶಬ್ದಕ್ಕೆ ಬದಲಾಗಿ 'ವೀರಶೈವ' ಪದವನ್ನು ಸೇರಿಸಿರುವುದು.
* ಕನ್ನಡ ಲಿಂಗಾಯತ ಸಾಹಿತ್ಯದಲ್ಲಿ ಸಂಸ್ಕೃತವನ್ನು ತಂದಿರುವುದು.
* ವಚನಗಳು ಮತ್ತು ಶರಣರ ಜೀವನ ಚರಿತ್ರೆಗಳನ್ನು ವೇದ, ಉಪನಿಷತ್ತು ಮತ್ತು ಪೌರಾಣಿಕ ಮೂಲಗಳಿಗೆ ಒಯ್ಯಲು ಪ್ರಯತ್ನಿಸಿರುವುದು.

ವೀರಶೈವ ಬರಹಗಾರರು ತಮ್ಮ ಜ್ಞಾನಪ್ರದರ್ಶನಕ್ಕಾಗಿ ವಿನೀತ ಶರಣರ ಶ್ರೇಷ್ಠ ವಿಚಾರಗಳನ್ನು ಅಶುದ್ಧಗೊಳಿಸಿದ್ದಾರೆ. ಅಂತಹ ಅಶುದ್ಧ ಮೂಲಗಳಿಂದ ಉಲ್ಲೇಖಿಸುತ್ತಾ, ಒಂದು ಸುಳ್ಳಿಗೆ ಮತ್ತೊಂದು ಸುಳ್ಳಿನ ಬೆಂಬಲವೆಂಬಂತೆ ಡಾ. ಬಸವರಾಜು ಅವರು ಬಸವಧರ್ಮಕ್ಕೆ ಭಾರಿ ಅನ್ಯಾಯವೆಸಗಿದ್ದಾರೆ.

೧೦. ಡಾ. ಬಸವರಾಜು ಅವರು ವೀರಾಗಮ, ಕರಣಾಗಮ, ವಾತುಲಾಗಮ, ಕಾಮಿಕಾಗಮ, ಪರಮೇಶ್ವರಾಗಮ, ಸುಪ್ರಭೇದಾಗಮ ಇಂತಹ ಕೆಲವು ಆಗಮಗಳನ್ನು ಬಳಸಿಕೊಳ್ಳುತ್ತಾರೆ. ಇವೆಲ್ಲವುಗಳ ವಿಶ್ವಾಸಾರ್ಹತೆಯನ್ನು ಅತ್ಯಂತ ಮುಖ್ಯ ಸಮಕಾಲೀನರಾದ ಡಾ. ಎಸ್.ಸಿ. ನಂದೀಮಠ, ಷಣ್ಮುಖಯ ಅಕ್ಕೂರಮಠ ಮತ್ತು ಪ್ರೊ. ಎಂ.ಆರ್. ಸಾಖ್ರೆ ಅವರಂತಹ ಸಂಸ್ಕೃತ ವಿದ್ವಾಂಸರು ಪ್ರಶ್ನಿಸಿದ್ದಾರೆ.

ಅಖಿಲ ಭಾರತ ಮಟ್ಟದಲ್ಲಿ, ಪ್ರಾಚೀನ ಮತ್ತು ಮಧ್ಯಯುಗದ ಶೈವ ಸಾಹಿತ್ಯದಲ್ಲಿ, ವೀರಶೈವವನ್ನು ಶೈವಧರ್ಮದ ಪರಿಚಿತ ಶಾಖೆಯಾಗಿ ಎಲ್ಲೂ ಪ್ರಸ್ತಾಪ ಮಾಡಿಲ್ಲ. ಇದು ವೀರಶೈವವು ಬಸವಣ್ಣನವರಿಗಿಂತ ಮೊದಲು ಅಸ್ತಿತ್ವದಲ್ಲಿತ್ತೆ ಎಂಬ ಬಗೆಗೆ ಅನೇಕ ವಿದ್ವಾಂಸರಲ್ಲಿ ಸಹಜವಾಗಿಯೇ ಸಂಶಯಕ್ಕೆ ಕಾರಣವಾಯಿತು.

೧೧. ಡಾ. ಬಸವರಾಜು ಅವರು, ತಮ್ಮ 'ಶಿವದಾಸ ಗೀತಾಂಜಲಿ' ಗ್ರಂಥದಲ್ಲಿ ೧೨ನೆಯ ಶತಮಾನದ ಶರಣರು ಮತ್ತು ಬಸವಣ್ಣನವರು ಸಾಧಿಸಿದ್ದು ಹೊಸದೇನಲ್ಲವೆಂಬ ಹಳೆಯ ರಾಗವನ್ನೇ ಮುಂದುವರೆಸಿದ್ದಾರೆ. ಶರಣರು ಹಿಂದಿನ (೧೧ನೆಯ) ಶತಮಾನದಲ್ಲಿ ತಮ್ಮ ಹಿಂದಿನವರು ನೆಲೆಗೊಳಿಸಿದ - ಪ್ರವೃತ್ತಿಯನ್ನೇ ಮುಂದುವರಿಸಿದ್ದಾರೆ ಎಂದಿರುವುದನ್ನು ಯಾರೂ ಅಲ್ಲಗಳೆಯುವುದಿಲ್ಲ. ಬಸವಣ್ಣನವರೇ ಸ್ವತಃ ತಮ್ಮ ಅನೇಕ ವಚನಗಳಲ್ಲಿ ಜೇಡರ ದಾಸಿಮಯ್ಯ, ಮಾದಾರ ಚೆನ್ನಯ್ಯ ಮತ್ತಿತರ ಹಿರಿಯ ವಚನಕಾರರನ್ನು ಕೃತಜ್ಞತೆಯಿಂದ ಸ್ಮರಿಸಿದ್ದಾರೆ. ಅವರು ಬಳಸುವ 'ಆದ್ಯರು ಎನ್ನುವುದು ತಮ್ಮ ಹಿಂದಿನವರು ಎಂಬರ್ಥವನ್ನೇ ಕೊಡುತ್ತದೆ. ಅಂದ ಮಾತ್ರಕ್ಕೆ ಬಸವಣ್ಣನವರಿಂದ ಒಂದು ಧರ್ಮ ಸ್ಥಾಪನೆಗೊಂಡಿತೆಂಬ ಸಂಗತಿಯನ್ನು ಅದು ಅಲ್ಲಗಳೆಯುವುದಿಲ್ಲ.

ಇದುವರೆಗಿನ ನಿರೂಪಣೆ ಮತ್ತು ವಿಶ್ಲೇಷಣೆಗಳು ಡಾ. ಬಸವರಾಜು ಅವರ ಮುಖ್ಯ ಹೇಳಿಕೆಗಳ ಅಂತರ್ಗತ ವಿರೋಧಾಭಾಸಗಳನ್ನು ತೋರಿಸುತ್ತವೆ. ಒಂದು ಕಡೆ, ಅವರ ಅಸಂಗತ ಹೇಳಿಕೆಗಳು ವೀರಶೈವ ಧರ್ಮದ ಕಾಲಾನುಕ್ರಮದ ಮಾಪನದಲ್ಲಿನ ಮೂಲಭೂತ ಕೊರತೆಗಳನ್ನು ತೋರಿಸಿದರೆ, ಇನ್ನೊಂದು ಕಡೆ ಇತರ ನಾನಾ ಚಾರಿತ್ರಿಕ ಬೆಳವಣಿಗೆಗಳನ್ನು ತಪ್ಪಾಗಿ ಸೂಚಿಸುತ್ತವೆ.

೧೨. ಡಾ. ಬಸವರಾಜು ಅವರು, ವೀರಶೈವ ಧರ್ಮವನ್ನು ಅದರ ನಿಜವಾದ ಸ್ಥಾನಕ್ಕಿಂತ ಹೆಚ್ಚಿನ ಪ್ರಾಚೀನತೆಗೆ ಒಯ್ಯುವ ತಮ್ಮ ಪ್ರಯತ್ನದಲ್ಲಿ ಮೂರು ಭಿನ್ನ ಶೈವಪಂಥಗಳನ್ನು ಬಸವಲಿಂಗಾಯತದೊಡನೆ ಸಂಬಂಧಿಸಲು ಪ್ರಯತ್ನಿಸುತ್ತಾರೆ. ಅವೆಂದರೆ

ಅ. ಪಾಶುಪತ ಮತ್ತು ವೀರಶೈವ
ಆ. ತಮಿಳು ಶೈವ ಸಿದ್ಧಾಂತ ಮತ್ತು ವೀರಶೈವ
ಇ. ಸದ್ಯೋಜಾತ ಶೈವ ಮತ್ತು ವೀರಶೈವ
ಈ. ಶರಣ ಮತ್ತು ಶರಣ ಧರ್ಮ (ಅಷ್ಟಾವರಣ, ಷಟ್‌ಸ್ಥಲ ಮತ್ತು ಇಷ್ಟಲಿಂಗ)

ವೀರಶೈವವನ್ನು ಇತರ ಪರಿಚಿತ ಮತ್ತು ಸುಸ್ಥಾಪಿತ ತತ್ವಜ್ಞಾನಗಳೊಂದಿಗೆ ಬೆಸೆಯುವ ಪ್ರಯತ್ನ ಮಾಡಿರುವಂತೆ ಅವುಗಳ ಸಂಬಂಧ ತಪ್ಪಿಸುವ ಪ್ರಯತ್ನವನ್ನೂ ಡಾ. ಬಸವರಾಜು ಅವರು ಮಾಡಿದ್ದಾರೆ. ಅವರ ಪ್ರಯತ್ನದಿಂದ, ವೀರಶೈವ ಧರ್ಮಕ್ಕೆ ಅದು ವಾಸ್ತವವಾಗಿರುವ ಸ್ಥಾನಕ್ಕಿಂತ ಹೆಚ್ಚಿನ ಪ್ರಾಚೀನತೆ ಮತ್ತು ದೀರ್ಘ ಇತಿಹಾಸವನ್ನು ಒದಗಿಸಬೇಕೆಂಬ ಅವರ ಮೂಲ ಉದ್ದೇಶವೇ ವಿಫಲಗೊಂಡಿದೆ. ವಾಸ್ತವವಾಗಿ, ವೀರಶೈವ ಧರ್ಮಕ್ಕೆ ಬಸವಣ್ಣನವರಿಗಿಂತ ಮೊದಲು ಮತ್ತು ಬಸವಣ್ಣನವರನ್ನು ಬಿಟ್ಟು ಯಾವುದೇ ಸ್ವಂತಿಕೆ ಅಥವಾ ಸ್ವೋಪಜ್ಞತೆಯೂ ಇಲ್ಲ; ಅಸ್ತಿತ್ವವೂ ಇಲ್ಲ.

ವೀರಶೈವರು (ಶರಣರಲ್ಲ) ಮೇಲೆ ಹೇಳಿದ ನಾಲ್ಕು ತತ್ವಜ್ಞಾನಗಳಲ್ಲಿ ಪ್ರತಿಯೊಂದರಿಂದಲೂ ಕೆಲ-ಕೆಲವು ಅಂಶಗಳನ್ನು ಎರವಲು ಪಡೆದಿದ್ದಾರೆ ಎನ್ನುವಲ್ಲಿ ಯಾವುದೇ ಸಂಶಯವಿಲ್ಲ. ಉದಾಹರಣೆಗೆ, - ಆತ್ಮವನ್ನು (ಪಶು) ದೇವರಿಂದ (ಪತಿಯಿಂದ) ಬೇರ್ಪಡಿಸುವುದು ಮತ್ತು ಎರಡನ್ನೂ ಪಾಶದಿಂದ ಸಂಬಂಧಿಸುವುದು. ಇದು ವೀರಶೈವರ ದ್ವೈತ ತತ್ವಜಾನವಾಗಿದ್ದು ಇದನ್ನು ಪಾಶುಪತ ಶೈವದಿಂದ ಎರವಲು ಪಡೆಯಲಾಗಿದೆ. ಎಂತಲೇ, ಸಿದ್ದಾಂತ ಶಿಖಾಮಣಿಯು ಪಾಶುಪತದಲ್ಲಿ ಅಷ್ಟು ಗೌರವ ಇಟ್ಟುಕೊಂಡಿರುವುದು.

ಇನ್ನು ಸಾಲೋಕ್ಯ, ಸಾರೂಪ್ಯ, ಸಾಮೀಪ್ಯ ಮತ್ತು ಸಾಯುಜ್ಯ - ಈ ನಾಲ್ಕು ಪರಿಕಲ್ಪನೆಗಳನ್ನು ವೀರಶೈವರು ತಮಿಳು ಶೈವದಿಂದ ಎರವಲು ಪಡೆದಿದ್ದಾರೆ. ಅದೇ ರೀತಿ ಸುಪ್ರಭೇದಾಗಮವು ತತ್ವಜ್ಞಾನ ಪ್ರತೀಕ ಸದ್ಯೋಜಾತ ಶಿವನ ಐದು ಶಿರಗಳಿಂದ ಪಂಚಾಚಾರ್ಯರ ಹುಟ್ಟನ್ನು ವಿವರಿಸುತ್ತದೆ. ಅಂತಿಮವಾಗಿ, ಈ ಮೂರೂ ಪಂಥಗಳ ಎರವಲು ಪರಿಕಲ್ಪನೆಗಳನ್ನು ಬಸವಣ್ಣನವರು ಮತ್ತು ಶರಣರ ಮೂಲಭೂತ ಪರಿಕಲ್ಪನೆಗಳಾದ ಷಟ್‌ಸ್ಥಲ, ಅಷ್ಟಾವರಣ ಮತ್ತು ಇಷ್ಟಲಿಂಗ ಸಿದ್ಧಾಂತಗಳೊಂದಿಗೆ (ಕಾಯಕ ಮತ್ತು ದಾಸೋಹದ ಹೊರತಾಗಿ) ಸಂಬಂಧಿಸಲಾಗಿದೆ. ಹೀಗೆ ಅದು ಸ್ವತಂತ್ರ ಶೈವವೂ ಅಲ್ಲ.

ಗ್ರಂಥ ಋಣ:
1) ವೀರಶೈವ ಧರ್ಮವು ೧೨ನೇಯ ಶತಮಾನಕ್ಕಿಂತ ಮುಂಚೆ ಆಸ್ತಿತ್ವದಲ್ಲಿತ್ತೆ? ಲೇಖಕರು: ಡಾ. ಎಸ್‌. ಎಂ. ಜಾಮದಾರ, ಅನುವಾದಕರು: ಡಾ. ಗೊ. ರು. ಚನ್ನಬಸಪ್ಪ. ೨೦೨೦. Published by: Jagathika Lingayat Mahasabha, No 53 2nd Main Road, 3rd cross, Chakravarrthi Layout, Palace road, Bangalore-560020.

ಪರಿವಿಡಿ (index)
Previous ವೀರಶೈವ ೧೨ನೇಯ ಶತಮಾನಕ್ಕಿಂತ ಮುಂಚೆ ಆಸ್ತಿತ್ವದಲ್ಲಿತ್ತೆ? ವಿಶ್ಲೇಷಣೆ - ವೀರಶೈವ ಚರಿತ್ರೆ Next