Previous ಲಿಂಗಾಯತ ಎಂಬ ಹೊಸ ಧರ್ಮ ವೀರಶೈವ ೧೨ನೇಯ ಶತಮಾನಕ್ಕಿಂತ ಮುಂಚೆ ಆಸ್ತಿತ್ವದಲ್ಲಿತ್ತೆ? Next

ಲಿಂಗಾಯತರಲ್ಲಿ ಮತಾಂತರ

*

✍ ಡಾ. ಎಂ. ಎಂ. ಕಲಬುರ್ಗಿ.

ಬಸವಪೂರ್ವ ಧರ್ಮಗಳಲ್ಲಿ ಮತಾಂತರ:

ಲಿಂಗಾಯತ ಧರ್ಮ ತನಗಿಂತ ಹಳೆಯದಾದ ಜೈನ , ಶೈವ , ವೈಷ್ಣವ ಧರ್ಮಗಳಿಗಿಂತ ಜನಪ್ರಿಯವಾಯಿತು. ಎಲ್ಲರನ್ನೂ ಸಮಾನವಾಗಿ ಒಳಮಾಡಿಕೊಂಡ ಶರಣರ ಧೋರಣೆಯೇ ಇದಕ್ಕೆ ಕಾರಣ.

ಬಸವ ಪೂರ್ವ ಧರ್ಮಗಳಲ್ಲಿ ಮತಾಂತರವಾಗಲು ಎಲ್ಲರಿಗೂ ಮುಕ್ತ ಅವಕಾಶವಿರಲಿಲ್ಲ. ಬ್ರಾಹ್ಮಣರು ಮಾತ್ರ ಆ ಧರ್ಮಗಳ ದೀಕ್ಷೆ ಸ್ವೀಕರಿಸಿ, ಒಳ ಸೇರಿ, ರಕ್ತ ಸಂಬಂಧ ಬೆಳೆಸ ಬಹುದಾಗಿತ್ತು.

ಅಬ್ರಾಹ್ಮಣರು(ಬ್ರಾಹಣ ಅಲ್ಲದವರು) ಆ ಧರ್ಮಗಳ 'ಮಂತ್ರದೀಕ್ಷೆ' ಮಾತ್ರ ಪಡೆದು ಹೊರಗಿನಿಂದ ‘ಒಕ್ಕಲು’ ಅಥವಾ ಅನುಯಾಯಿಗಳಾಗಬಹುದಿತ್ತು. ಒಳ ಸೇರಿ ರಕ್ತ ಸಂಬಂಧಿಗಳಾಗಲು ಸಾಧ್ಯವಿರಲಿಲ್ಲ.

ಶ್ರೀವೈಷ್ಣವ ಧರ್ಮದಲ್ಲಿ ಒಕ್ಕಲಾಗುವವರಿಗೆ ಗಾಯತ್ರಿ ಮಂತ್ರ ಭೋದಿಸಿ, ನಾಮ, ಮುದ್ರೆ ನೀಡಲಾಗುತ್ತಿತ್ತು. ಶೈವ ಧರ್ಮಗಳಲ್ಲಿ ವಿಭೂತಿ ನೀಡಿ, ಮಂತ್ರ ಭೋದಿಸಿದರೂ, ಲಿಂಗ ನೀಡಲಾಗುತ್ತಿರಲಿಲ್ಲ.

ಈ ಧರ್ಮಗಳಲ್ಲಿ ಒಕ್ಕಲಾಗುವ ಕೆಲವು ಅಬ್ರಾಹ್ಮಣರಿಗೆ ಆಚಾರ್ಯರಾಗುವ ಅವಕಾಶವೂ ಇತ್ತು, ಆದರೆ ಅದ್ವೈತ ಧರ್ಮದಲ್ಲಿ ಅಬ್ರಾಹ್ಮಣರಿಗೆ ಮಂತ್ರದೀಕ್ಷೆ ನೀಡಲು ಯಾವುದೇ ಅವಕಾಶವಿರಲಿಲ್ಲ,

ಒಕ್ಕಲಾಗಲು ಅವಕಾಶ ನೀಡಿದ ಧರ್ಮಗಳು ಸಂಖ್ಯೆಯಲ್ಲಿ ಬೆಳೆದವು. ಒಳ ಸೇರಿಸದಿದ್ದರೂ ಹುಸಿ ಪ್ರತಿಷ್ಠೆಗಾಗಿ ಅನೇಕ ಸಮುದಾಯಗಳು ಮತ್ತು ಅರಸರೂ ಕೂಡ ಅವುಗಳ ಅನುಯಾಯಿಗಳಾದರು.

-(‘ಶರಣ ಧರ್ಮ: ಜಾತಿ ನಾಶ-ಜಾತಿ ನಿರ್ಮಾಣ' ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ - ಮಾರ್ಗ ೪)

ಪಂಚಮಸಾಲಿಗಳು ಯಾರು? :

ಪಂಚಮಸಾಲಿಗಳು ಪ್ರಾಚೀನ ಲಿಂಗಾಯತ ಸಮುದಾಯ

ಮಖಾರಿ ತನ್ನ ೫ನೇ ಮಗ ಮಿಂಡಗುದ್ದಲಿಸೆಟ್ಟಿಗೆ ಕೃಷಿ ಕಾಯಕ ಹಚ್ಚಿದನು. ಅವನದೇ ಪಂಚಮಸಾಲು ಅಥವಾ ಪಂಚಮಸಾಲಿ. (ಅರ್ಥ: ಸಾಲು = ಸಂಪ್ರದಾಯ, ಸೆಟ್ಟಿ = ವೃತ್ತಿ)

ಮಿಂಡಗುದ್ದಲಿಸೆಟ್ಟಿಯ ನಿಜರೂಪ 'ಮೇ೦ಡೆಗುದ್ದಲಿಸೆಟ್ಟಿ'. ಮೇ೦ಡೆ ಎಂದರೆ ಮೇಟಿ. ಗುದ್ದಲಿ, ಮೇಟಿಗಳೇ ಇಂದಿಗೂ ಪಂಚಮಸಾಲಿಗಳ ಮುಖ್ಯ ಉಪಕರಣಗಳು.

ಇಂದು ಕಾಣುವ ಮೆಂಡೆಗಾರ, ಮೆಟಾಗೋಡ್ಲಿ ಹೆಸರಿನ ಪಂಚಮಸಾಲಿ ಕುಟುಂಬಗಳು ಮೂಲತಃ ಮಿಂಡಗುದ್ದಲಿಸೆಟ್ಟಿಗಳೇ ಆಗಿದ್ದಾರೆ. ಪಂಚಸೆಟ್ಟಿ ಸಂಪ್ರದಾಯದ ಇತರ ಕುಟುಂಬಗಳೂ ಸಿಗುತ್ತವೆ (ಉದಾ: ಚೌಸೆಟ್ಟಿ).

ಪಂಚಸೆಟ್ಟಿಗಳ ಕಥೆ ವೃತ್ತಿಯ ಆಧಾರದ ಮೇಲೆ ಪ್ರಾಚೀನ ಸಮಾಜ ಕವಲಾಗಿದ್ದು ಸೂಚಿಸುತ್ತದೆ. ಇವರಲ್ಲಿ ಐದನೇ ಗುಂಪಿನವರಾದ ಪಂಚಮಸಾಲಿಗಳು ಕೃಷಿಕರಾಗಿದ್ದರಿಂದ ದೊಡ್ಡ ಸಂಖ್ಯೆಯಲ್ಲಿ ಬೆಳೆದರು.

ಶಾಸನಗಳಲ್ಲಿ ಕಾಣುವ 'ಪಂಚಮಠ' 'ಪಂಚವಣಿಜ' ಮಠಗಳು ಪಂಚಸೆಟ್ಟಿಗಳಿಗೆ ಸೇರಿದ್ದವು. ನಂತರ ಬಂದ ಪಂಚಾಚಾರ್ಯರು ಇವುಗಳನ್ನು ವಶಪಡಿಸಿಕೊಂಡು ಪಂಚವಣ್ಣಿಗೆ ಮಠಗಳೆಂದು ಕರೆದರು.

(‘ಪಂಚಮಸಾಲಿ: ಹಾಗೆಂದರೇನು ‘ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ - ಮಾರ್ಗ ೪.)

ಪಂಚಾಚಾರ್ಯ ಪರಂಪರೆಯಲ್ಲಿ ಕಾಣಿಸುವ ಗೊಂದಲಗಳು ಪಂಚಾಚಾರ್ಯರ ಕೃತಕ ಪರಂಪರೆಯನ್ನು ಸೃಷ್ಟಿಸಿದ ವೀರಶೈವರ ಪ್ರಯತ್ನಗಳಲ್ಲಿ ಅನೇಕ ಗೊಂದಲಗಳಿವೆ. ಅವರ ಹೆಸರು, ಊರು, ಕಾಲ, ಚರಿತ್ರೆ ಯಾವುದರಲ್ಲೂ ಒಮ್ಮತವಿಲ್ಲ.

ಪಂಡಿತಾರಾಧ್ಯರು, ರೇವಣ ಸಿದ್ದರು ಬದುಕಿದ್ದು ೧೨ನೇ ಶತಮಾನದಲ್ಲಿ. ಆದರೆ ಮರುಳಸಿದ್ದರ ಮತ್ತು ಏಕೋರಾಮರ ಕಾಲ-ಚರಿತ್ರೆ ಅಸ್ಪ್ರಷ್ಠವಾಗಿದೆ. ವಿಶ್ವರಾಧ್ಯರ ಕಲ್ಪನೆ ಇನ್ನೂ ಗೊಂದಲಮಯ.

೧೨ನೇ ಶತಮಾನದ ಪ್ರಸಾದಿ ಭೋಗಣ್ಣನ ಎರಡು ವಚನಗಳು ಇವರ ಪ್ರಾಚೀನತೆಗೆ ಸಾಕ್ಷಿ ಎಂಬ ವಾದವಿದೆ. ಆದರೆ ಅವುಗಳಲ್ಲಿ ಮರುಳ ಸಿದ್ದ, ರೇವಣ ಸಿದ್ದರ ಹೆಸರುಗಳೇ ಇಲ್ಲ.

ಈ ಪರಂಪರೆಯ ಮುಂಚೂಣಿಯಲ್ಲಿ ಇದ್ದವರು ಆರಾಧ್ಯರು. ಆದರೆ ಚತುರಾಚಾರ್ಯ ಪುರಾಣದಲ್ಲಿ (ಕ್ರಿ ಶ 1498) ಅವರ ಗುರು ಪಂಡಿತಾರಾಧ್ಯರ ಬದಲು ಶಿವಲಂಕ ಮಂಚಣ್ಣರ ಹೆಸರಿದೆ.

ಪಂಚಾಚಾರ್ಯರು ಸ್ಥಾವರಲಿಂಗಗಳಿಂದ ಉದ್ಬವಿಸಿದರು ಎನ್ನುವುದು ಈ ಪರಂಪರೆಯ ಮುಖ್ಯ ನಂಬಿಕೆ. ಆದರೆ ಬೇರೆ ಬೇರೆ ಕೃತಿಗಳಲ್ಲಿ ಆಚಾರ್ಯರು ಬೇರೆ ಬೇರೆ ಲಿಂಗಗಳಿಂದ ಉದ್ಬವಿಸುತ್ತಾರೆ.

ಆಚಾರ್ಯರು ದೀಕ್ಷಾವಿಧಿಯಲ್ಲಿ ಬಳಸುವ ೫ ಕಳಸಗಳ ಪ್ರತಿನಿಧಿಗಳು. ಆದರೆ ಹರಿಹರ, ಪದ್ಮರಸ, ಲಕ್ಕಣ್ಣ ದಂಡೇಶ ಮುಂತಾದವರ ಕೃತಿಗಳಲ್ಲಿ ಈ ಕಳಸಗಳ ಹೆಸರು, ಕಾರ್ಯಾರ್ಥ, ಸಂಖ್ಯೆ ಕೂಡ ಬದಲಾಗುತ್ತವೆ.-(‘ಚತುರಾಚಾರ್ಯ ಪರಿಕಲ್ಪನೆಯ ಮೂಲ: ಸಾಧ್ಯತೆಗಳು’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ - ಮಾರ್ಗ ೪)

೪. ಕರ್ನಾಟಕದ ಲಿಂಗಾಯತಜಂಗಮರ ಮೇಲೆ ಆಂಧ್ರದ ವೀರಶೈವಜಂಗಮರ ಸವಾರಿ:

ಕಾಶ್ಮೀರ ಮೂಲದಿಂದ ಹೊರಟ ಆಗಮಿಕಶೈವರೆಂಬ ಬ್ರಾಹ್ಮಣರು ಮಧ್ಯಪ್ರದೇಶದ ಮೂಲಕ ಮೊದಲು ತಮಿಳುನಾಡಿಗೆ ಬಂದು, ಅಲ್ಲಿಯ ಅರವತ್ತಮೂರು ಪುರಾತನರ ದೇಶೀಯ ಶೈವಪಂಥವನ್ನು ಚೋಳರಾಜರ ಬೆಂಬಲದಿಂದ ತಮ್ಮ ಶುದ್ಧಶೈವಪಂಥವನ್ನಾಗಿ ಪರಿವರ್ತಿಸಿದರು. ಚೋಳರ ಪತನವಾಗುತ್ತಲೇ ತಮಿಳುನಾಡಿನಿಂದ ಆಂಧ್ರಪ್ರದೇಶಕ್ಕೆ ಬಂದು, 'ಆರಾಧ್ಯ' ಹೆಸರಿನಿಂದ ಪ್ರಸಿದ್ಧಿಗೆ ಬಂದು, ವಾರಂಗಲ್ಲಿನ ಕಾಕತೀಯ ರಾಜರ ಬೆಂಬಲದಿಂದ ಶೀಶೈಲ ಮಲ್ಲಿಕಾರ್ಜುನ ದೇವಾಲಯದ ಸ್ಥಳೀಯ ಅರ್ಚಕರನ್ನು ಮೂಲೆಗೊತ್ತಿ, ಅದನ್ನು ತಮ್ಮ ಶುದ್ಧಶೈವವನ್ನಾಗಿ ಪರಿವರ್ತಿಸಿದರು. ಕಾಕತೀಯರು ಪತನಗೊಳ್ಳುತ್ತಲೇ ಆಂಧ್ರದಿಂದ ಕರ್ನಾಟಕದ ವಿಜಯನಗರದ ಅರಸರ ಆಶ್ರಯಕ್ಕೆ ಬಂದು, ಇಲ್ಲಿಯ ದೇಶೀಯ ಬಸವಧರ್ಮವನ್ನು ಶುದ್ಧಶೈವದ ಬೆಳೆದ ರೂಪವಾಗಿರುವ ವೀರಶೈವೀಕರಣ ಗೊಳಿಸತೊಡಗಿದರು. ಹೀಗಾಗಿ ಈವರೆಗೆ ಪ್ರಚಾರಮಾಡುತ್ತ ಬಂದಿರುವಂತೆ ವಿಜಯನಗರ ಅವಧಿಯು ವಚನ ಸಾಹಿತ್ಯದ ಪುನರುಜ್ಜಿವನ ಯುಗವಾಗಿರದೆ, ಲಿಂಗಾಯತದ ವೀರಶೈವೀಕರಣ ಕಾಲವಾಗಿದೆ. ಆಂಧ್ರದ ಕಾಕತೀಯರ ಮೇಲೆ ಮುಸಲ್ಮಾನರು ನಡೆಸಿದ ದಾಳಿಗೆ ಅಂಜಿ, ವಾರಂಗಲ್ಲು ಪ್ರದೇಶ ಬಿಟ್ಟು, ದೊಡ್ಡ ಪರಿವಾರದೊಂದಿಗೆ ನೆರೆಯ ಕರ್ನಾಟಕದ ಶಿವಗಂಗೆ ಪ್ರದೇಶದ ಮಾಗಡಿ ತಾಲೂಕಿನ ಕಲ್ಲೆ ಗ್ರಾಮಕ್ಕೆ ಬಂದಿದ್ದ ಶುದ್ಧಶೈವ(ವೀರಶೈವ)ಕವಿ ಪಾಲ್ಕುರಿಕೆ ಸೋಮಾರಾಧ್ಯನು ಅಲ್ಲಿಯೇ ಐಕ್ಯವಾದನು. ಇವನ ಮಗ ಚತುರ್ಮುಖ ಬಸವೇಶ್ವರನಿಗೆ ಆಂಧ್ರದಲ್ಲಿ ರೂಢವಾಗಿದ್ದ 'ಜಗದಾಚಾರ್ಯ' ಪಟ್ಟವನ್ನು ಇಲ್ಲಿ ಕಟ್ಟಲಾಯಿತು.

ವಿಜಯನಗರ ನಾಶವಾಗುತ್ತಲೇ ಅಲ್ಲಿಂದ ನಿರ್ಗಮಿಸಿದ ಶುದ್ಧಶೈವರು ಕಲ್ಲೆ ಪ್ರದೇಶದ ಈ ಶುದ್ಧಶೈವರೊಡನೆ ಕೂಡಿಕೊಂಡರು, ಎರಡೂ ತಂಡಗಳು ಸೇರಿ ಶಿವಗಂಗೆ ಬೆಟ್ಟದಲ್ಲಿ ಚತುರಾಚಾರ್ಯ ಪೀಠವನ್ನು ಸ್ಥಾಪಿಸಿದರು. ಮೂಲತಃ ಶಿವಗಂಗೆಯು ನಾಥಕೇಂದ್ರ; ಅಲ್ಲಿರುವ ಗಂಗಾಧರೇಶ್ವರನು ಶಾಸನಗಳಲ್ಲಿ ಗಂಗನಾಥನೆಂದು ದಾಖಲಾಗಿದ್ದು, ಈಗ ಅದು ಶೃಂಗೇರಿ ಪೀಠದ ವಶದಲ್ಲಿದ್ದರೂ, ಈ ಮೊದಲು ಬಹುಶಃ ರಂಭಾಪುರಿಪೀಠಕ್ಕೆ ಸೇರಿರಬಹುದು. ಇವರು ನಾಲ್ಕು ಪೀಠಗಳನ್ನು ಸ್ಥಾಪಿಸಲು ಕಾರಣ, ಬಸವ ಚಳುವಳಿಯಿಂದಾಗಿ ಕಳೆದುಹೋಗಿದ್ದ ನಕುಲೀಶ (ಕಾಳಾಮುಖ), ಪಾಶುಪತ, ಕಾಪಾಲಿಕ, ಶುದ್ಧಶೈವ ಎಂಬ ನಾಲ್ಕು ಪಂಥಗಳನ್ನು ನೆನಪಿಸಿಕೊಳ್ಳುವುದೇ ಆಗಿದೆ. ಹಳೆಯ ಈ ನಾಲ್ಕು ಶೈವಪಂಥಗಳ ಮಠಗಳನ್ನಲ್ಲದೆ ಇವರು ಅನೇಕ ನಾಥಶೈವ ಮಠಗಳನ್ನೂ ಒಳಗು ಮಾಡಿಕೊಂಡರು. ಈ ವೀರಶೈವ ಜಂಗಮರ ಸಂಸ್ಕೃತ ಮಾಧ್ಯಮದ ಸಿದ್ಧಾಂತ, ವೈಭವದ ವೇಷಭೂಷಣಗಳಿಗೆ ಮರುಳಾಗಿ ಕರ್ನಾಟಕದ ಲಿಂಗಾಯತಜಂಗಮರೂ ಇವರ ಭಕ್ತರೂ ತಮ್ಮ ಕನ್ನಡ ಮಾಧ್ಯಮದ ವಚನಸಿದ್ಧಾಂತವನ್ನು ಮರೆತು, ಆಂಧ್ರಮೂಲದ ಈ ಆಚಾರ್ಯರೇ ತಮ್ಮ ಗುರುಗಳೆಂಬ ಭ್ರಮೆ ಬೆಳೆಸಿಕೊಂಡರು. ಈಗ ಒಂದು ಪ್ರಸಂಗವನ್ನು ಇಲ್ಲಿ ಸ್ಮರಿಸಬಹುದು:
ಪರಳಿ ವೈಜನಾಥ ವ್ಯಾಜ್ಯದಲ್ಲಿ ಲಿಂಗಾಯತರಿಗೆ ಪ್ರತಿವಾದಿಯಾಗಿದ್ದ ಬ್ರಾಹ್ಮಣರಿಗೆ ಆಂಧ್ರಪ್ರದೇಶದ ಪಾತಯ್ಯಶಾಸ್ತ್ರೀ ಎಂಬ ಆರಾಧ್ಯರೊಬ್ಬರು ಜೊತೆಯಾಗಿದ್ದರು. ಆಗ ನ್ಯಾಯಾಧೀಶರಿಗೂ ಅವರಿಗೂ ನಡೆದ ವಾದ (ಶ್ರೀ ಜಗದ್ಗುರು ಜಯದೇವ ದಿಗ್ವಿಜಯ: ಪು-೨೧೨) ಹೀಗಿದೆ:
ನ್ಯಾ: ಪಂಚಾಚಾರರು ಯಾರು?
* ಪಾ: ಅವರು ನಮ್ಮ ಗುರುಗಳು.
ನ್ಯಾ: ಈಗ ಅವರೆಲ್ಲಿದ್ದಾರೆ?
* ಪಾ: ಲಿಂಗವಂತರು ಅವರನ್ನು ಕಸಿದುಕೊಂಡಿದ್ದಾರೆ.
ನಾ: ನೀವಾರು?
ಪಾ: ನಾವು ವೀರಶೈವರು.
* ಇಂದಿನ ಕರ್ನಾಟಕದ ಪಂಚಾಚಾರ್ಯರ ಗುರುಗಳು ಮೂಲತಃ ಆಂಧ್ರದ ಆರಾಧ್ಯರ ಗುರುಗಳೆಂದೂ, ಅವರ ಈ ಗುರುಗಳನ್ನು ಕರ್ನಾಟಕದ ಲಿಂಗಾಯತರು ಕಸಿದುಕೊಂಡಿರುವರೆಂದೂ, ತಮ್ಮದು ಕರ್ನಾಟಕದ ಲಿಂಗಾಯತದಿಂದ ಭಿನ್ನವಾದ ವೀರಶೈವಧರ್ಮವೆಂದೂ ಈ ಸಂವಾದ ಸ್ಪಷ್ಟಪಡಿಸುತ್ತದೆ.
ಆಂಧ್ರದಿಂದ ಕರ್ನಾಟಕಕ್ಕೆ ಬಂದ ಈ ಆರಾಧ್ಯರು ಆಗಮಿಕ ಬ್ರಾಹ್ಮಣರೇ ಆಗಿರುವದರಿಂದ, ಇವರಿಗೆ ಜನ್ನಿವಾರ ಧಾರಣೆಯೂ ಪ್ರತಿದಿನ ದೇವಾಲಯಕ್ಕೆ ಹೋಗಿ ತಮ್ಮ ಇಷ್ಟದೇವತೆಯಾದ ಸ್ಥಾವರಲಿಂಗ ದರ್ಶನ ಪಡೆಯುವದೂ ಕಡ್ಡಾಯವಾಗಿದ್ದಿತು. ಹೀಗಿದ್ದೂ ಮನೆಯಲ್ಲಿರುವ ವೃದ್ಧರು ಪೂಜಿಸುವುದಕ್ಕಾಗಿ ಆ ಸ್ಥಾವರಲಿಂಗದ ಪ್ರತೀಕವಾದ ಸಣ್ಣ ಲಿಂಗವನ್ನು (ಲಿಂಗಗಳನ್ನು) ಮನೆಯ ಜಗುಲಿಯ ಮೇಲೆ ಇಡುತ್ತಿದ್ದರು. ತಮ್ಮ ಇಷ್ಟದ ಸ್ಥಾವರಲಿಂಗವನ್ನು ಪ್ರತಿನಿಧಿಸುತ್ತಿದ್ದ ಈ ಸಣ್ಣ ಲಿಂಗವನ್ನು ಇಷ್ಟಲಿಂಗವೆಂದೂ ಕರೆಯುತ್ತಿದ್ದರು. ಪ್ರವಾಸಪ್ರಸಂಗದಲ್ಲಿ ಪೂಜಿಸುವುದಕ್ಕಾಗಿ ಪೆಟ್ಟಿಗೆಯಲ್ಲಿಟ್ಟುಕೊಂಡು ಇಲ್ಲವೆ ತಲೆ, ತೋಳು, ಕೊರಳುಗಳಿಗೆ ಕಟ್ಟಿಕೊಂಡು ಹೋಗುತ್ತಿದ್ದ ಅದನ್ನು ಪ್ರವಾಸ ಮುಗಿಯುತ್ತಲೇ ಬಿಚ್ಚಿ ದೇವರ ಜಗುಲಿಯ ಮೇಲೆ ಇಡುತ್ತಿದ್ದರು. ಅಂದರೆ ಇವರಿಗೆ ಕೊರಳ ಜನ್ನಿವಾರ ಕಡ್ಡಾಯ, ಸ್ಥಾವರಲಿಂಗದ ಪ್ರತೀಕವಾಗಿದ್ದ ಕೊರಳ ಲಿಂಗ ಐಚ್ಛಿಕವಾಗಿದ್ದವು. ಇದಕ್ಕೆ ವಿರುದ್ಧವೆನ್ನುವಂತೆ ಕರ್ನಾಟಕದ ಲಿಂಗಾಯತ ಜಂಗಮರಿಗೆ ಆತ್ಮತತ್ತ್ವದ ಪ್ರತೀಕವಾಗಿದ್ದರೂ ಕೊರಳಲ್ಲಿ ಕಡ್ಡಾಯವಾಗಿದ್ದುದನ್ನು ಗಮನಿಸಿ, ಇದನ್ನು ಇಷ್ಟಲಿಂಗವೆಂದು ಕರೆಯಲಾರಂಭಿಸಿದರು. ಆಂಧ್ರದ ಈ ಆರಾಧ್ಯ ಜಂಗಮರು ಕರ್ನಾಟಕದ ಇಷ್ಟಲಿಂಗಧಾರಿಗಳಾದ ಲಿಂಗವಂತಜಂಗಮರೊಂದಿಗೆ ಸಹಬಾಳ್ವೆ ನಡೆಸುವುದು ಅನಿವಾರ್ಯವಾದಂತೆ ಕ್ರಮೇಣ ಕಡ್ಡಾಯವಾಗಿದ್ದ ತಮ್ಮ ಕೊರಳ ಜನ್ನಿವಾರವನ್ನು ತೆಗೆದುಹಾಕಿ, ಐಚ್ಛಿಕವಾಗಿದ್ದ ಕೊರಳ ಲಿಂಗವನ್ನು ಕಡ್ಡಾಯವಾಗಿಸಿಕೊಂಡರು. ಇವರ ಗುರುಗಳಾದ ಪಂಚಾಚಾರ್ಯರೂ ಈ ಕ್ರಮವನ್ನು ಅನುಸರಿಸಿದರು. ಹೀಗೆ ತಾತ್ವಿಕವಾಗಿ ಭಿನ್ನವಾಗಿದ್ದರೂ ಕೊರಳಲ್ಲಿ ಕಟ್ಟಿಕೊಳ್ಳುತ್ತಲಿದ್ದ ಲಿಂಗದ ಬಾಹ್ಯ ಹೋಲಿಕೆಯನ್ನು ಗಮನಿಸಿ ಇಬ್ಬರೂ ಒಂದೇ ಎಂಬ ಭಾವನೆ ಬೆಳೆಯಿತು. ಹೀಗೆ ಕ್ರಮವಾಗಿ ಜನ್ನಿವಾರ ಬಿಡುತ್ತ ಲಿಂಗಧಾರಿಗಳಾಗುತ್ತ ಬಂದ ಆಂಧ್ರದ ಪಂಚಾಚಾರ್ಯರನ್ನು ಕರ್ನಾಟಕದ ಲಿಂಗಾಯತಜಂಗಮರೂ- ಅವರ ಲಿಂಗಾಯತ ಭಕ್ತರೂ ತಮ್ಮ ಗುರುಗಳೆಂದು ಭ್ರಮಿಸಿಕೊಂಡರು.

ಭೌಗೋಳಿಕ ಪ್ರಸಾರ ದೃಷ್ಟಿಯಿಂದ ಹೇಳುವದಾದರೆ, ಕಲ್ಲೆ-ಶಿವಗಂಗೆ ಮಾರ್ಗವಾಗಿ ಕರ್ನಾಟಕದಲ್ಲಿ ನುಗ್ಗಿದ ಆಂಧ್ರದ ಆರಾಧ್ಯ ವೀರಶೈವರು ಕ್ರಮೇಣ ಮೈಸೂರು ಪ್ರದೇಶವನ್ನು ವ್ಯಾಪಿಸಿದರು, ಆ ಪ್ರದೇಶದಲ್ಲಿ ಮೊದಲು ಆರಂಭವಾದ ಮುದ್ರಣ ಸೌಕರ್ಯದ ಬಲದಿಂದ ತಮ್ಮ ಧಾರ್ಮಿಕ ಗ್ರಂಥಗಳನ್ನು ಪ್ರಕಟಿಸಿ, ತಮ್ಮ ವೀರಶೈವ ಹೆಸರನ್ನು ಮತ್ತು ಚತುರಾಚಾರ್ಯರ ಗುರುತ್ವವನ್ನು ಉತ್ತರ ಕರ್ನಾಟಕದವರೂ ನಂಬುವಂತೆ ಮಾಡಿದರು. ಕಾಶಿಯಲ್ಲಿ ಇದೇ ಸಿದ್ದಾಂತ ಓದಿ ಬಂದ ಶಾಸ್ತ್ರಿಗಳಿಂದಲೂ ಈ ನಂಬುಗೆ ಗಟ್ಟಿಗೊಂಡಿತು.

ಒಟ್ಟಾರೆ, ಕರ್ನಾಟಕದ ಲಿಂಗಾಯತ ಜಂಗಮರು ಈಗ ಆಂಧ್ರದ ವೀರಶೈವ(ಆರಾಧ್ಯ)ಜಂಗಮರ ಆರಾಧಕರಾದರು. ತಮ್ಮ ಶರಣರನ್ನು, ತಮ್ಮ ಶರಣ ಸಾಹಿತ್ಯವನ್ನು, ತಮ್ಮ ಶರಣ ಸಂಸ್ಕೃತಿಯನ್ನು ತಾವೇ ಉಪೇಕ್ಷಿಸ ವಿರೋಧಿಸತೊಡಗಿದರು. ಇದು ಈಗಲೂ ಮುಂದುವರಿದಿದೆ.

೫. ಪಂಚಾಚಾರ್ಯಪೀಠಗಳು ಬಸವೋತ್ತರ ಕಾಲೀನವು:

ಈ ನಾಲ್ಕು ಪೀಠಗಳಲ್ಲಿ ಮೂರು ಪೀಠಗಳು ಕೇದಾರ, ಶ್ರೀಶೈಲ, ಉಜೈನಿಗಳಲ್ಲಿ ನೆಲೆನಿಂತರೆ, ಕೆಳದಿಯ ಶೈವ ಅರಸರ ನೆರವನ್ನು ಬಯಸಿ ರೇವಣಾರಾಧ್ಯಪೀಠವು ಆ ರಾಜ್ಯದ ರಂಭಾಪುರಿಗೆ ನಡೆಯಿತು. ಈ ರಂಭಾಪುರಿ ಕ್ಷೇತ್ರ ಮೂಲತಃ ನಾಥಸಂಪ್ರದಾಯಕ್ಕೆ ಸೇರಿದ್ದಿತು. ಮುಕ್ತಿಮುನಿನಾಥ, ದಿಗಂಬರ ಮುಕ್ತಿಮುನಿನಾಥರು(ನಾಥ ಗಮನಿಸಿರಿ) ಇದರ ಪ್ರವರ್ತಕರೆಂದು ಚೆನ್ನಬಸವಪುರಾಣ ತಿಳಿಸುತ್ತದೆ. ಇವರ ಉತ್ತರಾಧಿಕಾರಿ ಕುಮಾರಚೆನ್ನಬಸವ. ಇವರೆಲ್ಲರ ಶಾಸನಗಳು ೧೫-೧೬ನೆ ಶತಮಾನಕ್ಕೆ ಸಂಬಂಧಿಸಿರುವ ಕಾರಣ ಅಲ್ಲಿ ಈ ಕಾಲದ ವರೆಗೆ ನಾಥಪೀಠ ಅಸ್ತಿತ್ವದಲ್ಲಿದ್ದಿತೆಂದೂ, ಬಳಿಕ ರಂಭಾಪುರಿಪೀಠದವರು ಇದನ್ನು ವಶಪಡಿಸಿಕೊಂಡರೆಂದೂ ಸ್ಪಷ್ಟವಾಗುತ್ತದೆ. (ನೋಡಿ: ಬಾಳೆಹಳ್ಳಿಯಲ್ಲಿ ರಂಭಾಪುರಿಪೀಠ ಸ್ಥಾಪನೆಯ ಕಾಲ: ಮಾರ್ಗ-III. ಪು-೨೯೯), ಮೇಲೆ ಹೇಳಿದ ಕುಮಾರಚೆನ್ನಬಸವನು ತನ್ನ 'ಬಸವಪುರಾಣದ ಶರಣರ ಕಥೆಗಳು' ಕೃತಿಯಲ್ಲಿ ತನ್ನ ಪೀಠಪರಂಪರೆಯ ಮುಕ್ತಿಮುನಿನಾಥನನ್ನು, ಕಲ್ಯಾಣದ ಶರಣರನ್ನು ನೆನೆದಿರುವನೇ ಹೊರತು ರೇವಣಾರಾಧ್ಯನನ್ನು ನೆನೆದಿಲ್ಲ. ಇದೆಲ್ಲವನ್ನು ನೋಡಿದರೆ ಕುಮಾರಚೆನ್ನಬಸವನ ಕಾಲದ ವರೆಗೂ ರೇವಣಾರಾಧ್ಯಪೀಠ ರಂಭಾಪುರಿಯಲ್ಲಿ ಅಸ್ತಿತ್ವಕ್ಕೆ ಬಂದಿಲ್ಲವೆಂದು ಖಚಿತವಾಗಿ ಹೇಳಬಹುದು. ಹೀಗಿದ್ದೂ ಪಂಚಾಚಾರ ಪೀಠಗಳಿಗೆ ಬಸವಪೂರ್ವದ ಕಾಲಮಾನವನ್ನು ಕಲ್ಪಿಸುವ ಉದ್ದೇಶದಿಂದ ಅನೇಕ ಕೃತಕ ಆಕರಗಳನ್ನು ಸೃಷ್ಟಿಸಲಾಗಿದೆ. ಈ ಕಾರ್ಯ ವಚನಸಾಹಿತ್ಯದಲ್ಲಿ ಹೀಗೆ ಜರುಗಿದೆ:

ವಚನಗಳಲ್ಲಿ, ಅಂದರೆ ಮೆರೆಮಿಂಡದೇವನ ೧, ಬಾಲಬೊಮ್ಮಣ್ಣನ ೧, ಹಾವಿನಹಾಳ ಕಲ್ಲಯ್ಯನ ೧, ಆದಯ್ಯನ ೨ ವಚನಗಳಲ್ಲಿ ಈ ನಾಲ್ಕು ಆಚಾರ್ಯರ ಹೆಸರುಗಳಿವೆ. ಆದರೆ, ಶಿಥಿಲರಚನೆ, ಸಾಧಾರಣ ತತ್ತ್ವಗಳನ್ನು ಗಮನಿಸಿ ಇವು ಕೃತಕ ವಚನಗಳೆಂದು ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ (ವಚನಗಳಲ್ಲಿ ಚತುಚಾರ್ಯರ ಉಲ್ಲೇಖ: ಒಂದು ಪಕ್ಷಿಪ್ತತೆ. ಮಾರ್ಗ-೪, ಪು. ೬೪). ಇದಲ್ಲದೆ ಈ ಆಚಾರ್ಯರ ಹೆಸರು ಬಸವ, ಚೆನ್ನಬಸವ, ಮುಂತಾದ ಪ್ರಸಿದ್ಧರ ವಚನಗಳಲ್ಲಿ ಕಂಡುಬರುವುದಿಲ್ಲವಾಗಿ, ಇವುಗಳ ಕೃತಕತೆ ಮತ್ತಷ್ಟು ಸಾಬೀತಾಗುತ್ತದೆ. ಆಮೇಲಿನ ಹರಿಹರ, ಕೆರೆಯ ಪದ್ಮರಸ, ರಾಘವಾಂಕಾದಿಗಳು ಏಕೆ? ಹದಿನೈದನೆಯ ಶತಮಾನದ ಲಕ್ಕಣದಂಡೇಶ, ಮಗ್ಗೆಯ ಮಾಯಿದೇವರ ಕೃತಿಗಳಲ್ಲಿಯೂ ಈ ಆಚಾರ್ಯರು ಕಂಡುಬರುವುದಿಲ್ಲ. ಹರಿಹರ ಬರೆದಿರುವ ರೇವಣಸಿದ್ಧೇಶ್ವರ ರಗಳೆಯು ಸಿದ್ಧಸಂಪ್ರದಾಯದ ರೇವಣನನ್ನು ಕುರಿತುದೇ ಹೊರತು, ಚತುರಾಚಾರ್ಯರಲ್ಲಿ ಒಬ್ಬನಾಗಿರುವ ರೇವಣಾರಾಧ್ಯನನ್ನು ಕುರಿತುದಲ್ಲ. ಈ ನಾಲ್ಕೂ ಜನ ಆಚಾರ್ಯರ ಉಲ್ಲೇಖ ಮೊದಲು ಕಂಡುಬರುವುದು ೧೫೩೦ ರ ವೀರಶೈವಾಮೃತ ಮಹಾಪುರಾಣದಲ್ಲಿ. ಇವರನ್ನು ಕುರಿತ ಮೊದಲ ಪುರಾಣವಾದ ಸಂಪಾದನೆಯ ಪರ್ವತೇಶನ 'ಚತುರಾಚಾರ್ಯ ಚಾರಿತ್ರ' ಹುಟ್ಟಿದುದು ೧೬೯೮ರಷ್ಟು ಇತ್ತೀಚಿನ ಕಾಲದಲ್ಲಿ. ಅಂದರೆ, ೧೫೩೦-೧೬೯೮ರ ಮಧ್ಯದಲ್ಲಿ ನಾಲ್ಕೇ ಜನ ಆಚಾರ್ಯರನ್ನು ಕಲ್ಪಿಸಲಾಗಿದ್ದಿತು. ಇನ್ನೂ ವಿಚಿತ್ರವೆಂದರೆ, ಈ ನಾಲ್ವರು ಉದ್ಭವಿಸಿದರೆಂದು ಹೇಳಲಾಗುವ ಲಿಂಗದ ಹೆಸರು ಮತ್ತು ಉದ್ಭವಿಸಿದ ಕ್ಷೇತ್ರಗಳ ಹೆಸರುಗಳ ವಿಷಯವಾಗಿ ಮೊದಮೊದಲಿನ ದಾಖಲೆಗಳಲ್ಲಿ ಒಮ್ಮತವಿಲ್ಲ. ಮೊದಲ ಪುರಾಣವಾದ 'ಚತುರಾಚಾರ್ಯ ಚಾರಿತ್ರ'ದಲ್ಲಿ ಮಲ್ಲಿಕಾರ್ಜುನ ಪಂಡಿತಾರಾಧ್ಯನ ಹೆಸರಿನ ಬದಲು ಶಿವಲೆಂಕ ಮಂಚಣ್ಣ ಪಂಡಿತಾರಾಧ್ಯನ ಹೆಸರಿರುವುದು, ಈ ಗೊಂದಲದ ಪ್ರತೀಕವಾಗಿದೆ. ಇಲ್ಲಿಂದ ಬಳಿಕ ಕೆಳದಿ ಅರಸರು ಮೂಲತಃ ನಾಥಸಂಪ್ರದಾಯದ ಕಾಶಿಯ ಜಂಗಮವಾಡಿ ಮಠದವರನ್ನು (ಇಲ್ಲಿಯ ಒಬ್ಬ ಜಗದ್ಗುರುವಿನ ಹೆಸರು ಮಲ್ಲಿಕಾರ್ಜುನ ಗೋಸಾವಿ, ಗೋಸಾವಿ ಎಂಬುದು ನಾಥ ಸಂಪ್ರದಾಯ ಶಬ್ದ) ಚತುರಾಚಾರ್ಯರೊಂದಿಗೆ ಸೇರಿಸಿ ಪಂಚಾಚಾರ್ಯ ಒಕ್ಕೂಟವನ್ನು ಸೃಷ್ಟಿಸಿದರು. ಹೀಗೆ ಕಾಶೀ ಪೀಠವು ೧೭-೧೮ನೆಯ ಶತಮಾನದಲ್ಲಿ ಕರ್ನಾಟಕವನ್ನು ಪ್ರವೇಶಿಸಿತು.

೬. ಪಂಚಾಚಾರ್ಯರಲ್ಲಿ ಅಗ್ರಮಾನ್ಯವಾದುದು ಶ್ರೀಶೈಲಪೀಠ:

ಆಂಧ್ರಪ್ರದೇಶದಿಂದ ಬಂದು ಕಲ್ಲೆ ಗ್ರಾಮದಲ್ಲಿ ನಿಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಪರಂಪರೆಯ ಪಾಲ್ಕುರಿಕೆ ಸೋಮಾರಾಧ್ಯ ಪರಿವಾರದವರು ಮೇಲೆ ಹೇಳಿದ ಪೀಠಗಳನ್ನು ಕಲ್ಲೆ-ಶಿವಗಂಗೆ ಪರಿಸರದಲ್ಲಿ ಅಸ್ತಿತ್ವಕ್ಕೆ ತಂದರಾಗಿ, ಈ ಚತುರಾಚಾರ್ಯ(ಪಂಚಾಚಾರ್ಯ)ರಲ್ಲಿ ನಿಜವಾಗಿಯೂ ಅಗ್ರಮನ್ನಣೆ ಸಲ್ಲಬೇಕಾದವರು ಶ್ರೀಶೈಲದ ಪಂಡಿತಾರಾಧ್ಯಪೀಠದವರಿಗೇ ಹೊರತು, ಈಗಿನಂತೆ ಬಾಳೆಹಳ್ಳಿಯ ರೇಣುಕಪೀಠದವರಿಗಲ್ಲ. ರೇವಣಸಿದ್ಧನನ್ನು ರೇವಣಾರಾಧ್ಯನೆಂದು, ಮರುಳಸಿದ್ಧನನ್ನು ಮರುಳಾರಾಧ್ಯನೆಂದು, ವಿಶ್ವನಾಥನನ್ನು ವಿಶ್ವಾರಾಧ್ಯನೆಂದೂ, ಬಹುಶಃ ಏಕಾಂತರಾಮಯ್ಯನನ್ನು ಏಕೋರಾಮಾರಾಧ್ಯನೆಂದೂ ಆರಾಧ್ಯ' ವಿಶೇಷಣದಿಂದ ಕರೆಯುತ್ತಿರುವುದಕ್ಕೆ, ಈ ಪೀಠಗಳ ಪ್ರವರ್ತಕ 'ಆರಾಧ್ಯ' ಪರಂಪರೆಯ ಪಂಡಿತಾರಾಧ್ಯನಾಗಿರುವುದೇ ಕಾರಣನಾಗಿರಬಹುದು. ಹಾಗೆ ನೋಡಿದರೆ, ಬಹುಶಃ ಶುದ್ಧಶೈವ ಮೂಲದ ಪಂಡಿತಾರಾಧ್ಯಪೀಠವನ್ನು ಬಿಟ್ಟರೆ ರೇವಣಾರಾಧ್ಯ, ಮರುಳಾರಾಧ್ಯಪೀಠಗಳು ಮೂಲತಃ ನಾಥ (ಸಿದ್ಧ) ಮೂಲದವೆಂಬುದು ತಿಳಿದ ವಿಷಯವೇ ಆಗಿದೆ. ಮಲ್ಲಿಕಾರ್ಜುನ ಗೋಸಾವಿ ಹೆಸರಿನ ಜಗದ್ಗುರುವನ್ನೊಳಗೊಂಡ (ಗೋಸಾವಿಯು ನಾಥ ಪರಿಭಾಷೆ) ಕಾಶಿಪೀಠವೂ, ಕೇದಾರನಾಥ ಪೀಠ (ನಾಥ ಶಬ್ದ ಗಮನಿಸಿರಿ)ವೂ ಮೂಲತಃ ನಾಥ ಸಂಪ್ರದಾಯದವುಗಳೇ ಆಗಿರುವಂತಿದೆ. ಒಟ್ಟಾರೆ, ಪಂಡಿತಾರಾಧ್ಯಪೀಠದವರು ನಾಥ ಪಂಥದ ನಾಲ್ಕು ಪೀಠಗಳನ್ನು ಪಂಚಾಚಾರ್ಯ ಒಕ್ಕೂಟಕ್ಕೆ ತಿರುಗಿಸಿಕೊಂಡರು. ಹೀಗಾಗಿ ಇವರು ವಹಿಸಿದ ಶ್ರಮ-ಮಾಡಿದ ಸಂಘಟನೆಗಳನ್ನು ನೋಡಿದರೆ ಪಂಚಾಚಾರ್ಯರಲ್ಲಿ ಆಗ್ರಮಾನ್ಯವಾದುದು ಶ್ರೀಶೈಲಪೀಠವೆಂದು ಹೇಳಬೇಕಾಗುತ್ತದೆ.

ಈ ಪಂಡಿತಾರಾಧ್ಯರಿಗೆ ಬಸವಣ್ಣನ ಬಗ್ಗೆ ಅಪಾರ ಭಕ್ತಿ. ಈ ಕಾರಣದಿಂದಾಗಿಯೇ ಅವನ ಭೇಟಿಗಾಗಿ ಕಲ್ಯಾಣಕ್ಕೆ ಹೊರಟವರು ಅರ್ಧ ದಾರಿಯಲ್ಲಿಯೇ ಒಂದು ವಾರದ ಹಿಂದೆ ಬಸವಣ್ಣ ಲಿಂಗೈಕ್ಯನಾದ' ಎಂಬ ವಾರ್ತೆ ತಿಳಿದು, ದುಃಖಿಸುತ್ತ ಆಂಧ್ರಕ್ಕೆ ಮರಳುತ್ತಾರೆ. ಒಂದು ವೇಳೆ ಬಸವಣ್ಣ ಒಂದು ವಾರದ ಬಳಿಕ ನಿಧನನಾಗಿದ್ದರೆ ಅಥವಾ ಪಂಡಿತಾರಾಧ್ಯ ಒಂದು ವಾರ ಮೊದಲು ಪ್ರಯಾಣ ಬೆಳೆಸಿದ್ದರೆ ಇಬ್ಬರಿಗೂ ಭೇಟಿ ಲಭಿಸಿ, ಸೊಲ್ಲಾಪುರದ ಸಿದ್ಧರಾಮನಂತೆ ಇವನೂ ಶರಣಪಂಥ ಸೇರಿ ಶಿವಯೋಗಿ ಆಗುತ್ತಿದ್ದನು. ಇದು ಘಟಿಸಿದ್ದರೆ ಇಂದಿನ ಪಂಚಾಚಾರ್ಯ ಪೀಠಗಳು ಬಹುಶಃ ಹುಟ್ಟುತ್ತಲೇ ಇರಲಿಲ್ಲ.

೭. ವೀರಶೈವವೆಂಬುದು ಒಂದು ಮತದ ಹೆಸರಲ್ಲ-ವ್ರತದ ಹೆಸರು:

ಹದಿನೈದನೆಯ ಶತಮಾನದಲ್ಲಿ ವಿಜಯನಗರದ ಪ್ರೌಢದೇವರಾಯನ ರಾಜಾಶ್ರಯ ಸಿಗುತ್ತಲೇ ಶರಣ ಸಮಸಂಸ್ಕೃತಿಯ ಒಳಗೆ ಸೇರಿದ್ದ ಶುದ್ಧಶೈವರು ಲಿಂಗಾಯತವನ್ನು ಇನ್ನೂ ಹೆಚ್ಚು ವೀರಶೈವೀಕರಣಗೊಳಿಸುತ್ತ ನಡೆದರು. ಮೊದಮೊದಲು ವೀರಭದ್ರನ ಹೆಸರಿನಲ್ಲಿ ವೀರವ್ರತ ಹಿಡಿಯುವ ಈ ಉಗ್ರಶೈವರು ವೀರಶೈವರೆಂದು ಕರೆದುಕೊಂಡು, ಬಳಿಕ ಆ ಪದವನ್ನು ಲಿಂಗಾಯತಕ್ಕೆ ಪ್ರತಿಯಾಗಿ ಬಳಸತೊಡಗಿದರು. ಹೀಗಾಗಿ ಮೊದಮೊದಲು ಒಂದು ವ್ರತದ ಹೆಸರಾಗಿದ್ದ ಇದು, ಬರುಬರುತ್ತ ಒಂದು ಮತದ ಹೆಸರಾಗಿ ಪ್ರಚಾರ ಪಡೆಯಿತೆನಿಸುತ್ತದೆ. ಹೀಗೆ ವ್ರತದ ಹೆಸರಾಗಿದ್ದುದಕ್ಕೆ ವಿವೇಕ ಚಿಂತಾಮಣಿ ಇತ್ಯಾದಿ ಪ್ರಾಚೀನ ಕೃತಿಗಳಲ್ಲಿ ಉದಾಹರಣೆಗಳು ಸಿಗುತ್ತವೆ. ಕರ್ನಾಟಕದಲ್ಲಿ ವೀರಭದ್ರನ ದೇವಾಲಯಗಳು ಹನ್ನೆರಡನೆಯ ಶತಮಾನದ ಬಳಿಕ ಕಂಡುಬರುವುದರಿಂದ, ಈ ವೀರಶೈವ ಶಬ್ದವೂ ಹನ್ನೆರಡನೆಯ ಶತಮಾನದ ತರುವಾಯದ್ದೆಂದು ಹೇಳಬಹುದು. ೧೨ನೆಯ ಶತಮಾನದ ಪೂರ್ವಾರ್ಧದವನಾದ ಕೊಂಡಗುಳಿ ಕೇಶಿರಾಜನ 'ಶೀಲಮಹತ್ವದ ಕಂದದಲ್ಲಿ ಒಮ್ಮೆ ವೀರಶೈವ ಶಬ್ದ ಕಂಡಬರುತ್ತಿದ್ದರೂ ಇದು ಕೃತಕಗ್ರಂಥವೆಂಬ ಆರೋಪಕ್ಕೆ ಗುರಿಯಾಗಿದೆ. ಲಿಂಗವಂತ, ಲಿಂಗಾಯತ (ಚ.ಬ.ವ.) ಶಬ್ದ ಬಳಸಿದ ಷಟ್‌ಸ್ಥಲ ವಚನಕಟ್ಟುಗಳನ್ನು ಹೊರತುಪಡಿಸಿ ಹೆಚ್ಚಿನ ವಚನಗಳಲ್ಲಿ ಮಾತ್ರ ಕೆಲವೊಮ್ಮೆ ವೀರಶೈವ ಪದ ಕಂಡುಬರುವುದರಿಂದ ಇವು ಕೃತಕವಚನಗಳೆಂಬ ಸಂದೇಹ ಹುಟ್ಟಿಸಿವೆ. ಇನ್ನೂ ಕೆಲವೊಮ್ಮೆ ಈ ಹೆಚ್ಚಿನ ವಚನಗಳಲ್ಲಿಯ 'ವೀರಶೈವ' ಶಬ್ದಕ್ಕೆ ಇರುವ ಭಿನ್ನಪಾಠ ಈ ಸಂದೇಹವನ್ನು ಗಟ್ಟಿಗೊಳಿಸುತ್ತದೆ. ಲಿಂಗವಂತ, ಲಿಂಗವಂತೆ, ಲಿಂಗಾಯತ (ದೀಕ್ಷಾಬೋಧೆ)ಶಬ್ದ ಬಳಸಿದ ೧೩ನೆಯ ಶತಮಾನದ ಹರಿಹರ, ರಾಘವಾಂಕ, ಕೆರೆಯಪದ್ಮರಸರಲ್ಲಿ ಕಂಡುಬರದ ವೀರಶೈವ ಪದ ೧೨ನೆಯ ಶತಮಾನದ ಹೆಚ್ಚಿನ ವಚನಗಳಲ್ಲಿ ಕಂಡುಬರುವುದು ಈ ಸಂದೇಹವನ್ನು ಇನ್ನೂ ಗಟ್ಟಿಗೊಳಿಸುತ್ತದೆ. 'ವೀರಮಾಹೇಶ್ವರ' ಶಬ್ದವನ್ನೊಳಗೊಂಡ ಶೀರ್ಷಿಕೆಯ “ವೀರಮಾಹೇಶ್ವರಾಚಾರ ಸಂಗ್ರಹ' ಇತ್ಯಾದಿ ಕೃತಿಗಳು ೧೩-೧೪ನೆಯ ಶತಮಾನಗಳಲ್ಲಿಯೂ, ವೀರಶೈವ ಶಬ್ದವನ್ನೊಳಗೊಂಡ 'ವೀರಶೈವಾಮೃತ ಮಹಾಪುರಾಣ' ಇತ್ಯಾದಿ ಕೃತಿಗಳು ೧೪-೧೫ನೆಯ ಶತಮಾನಗಳಿಂದೀಚೆಗೆ ಸಿಗುವುದು ವೀರಶೈವ ಪದದ ಅರ್ವಾಚೀನತೆಯನ್ನು ಸೂಚಿಸುತ್ತದೆ. ೧೩ನೆಯ ಶತಮಾನದ ತೆಲುಗು ಬಸವಪುರಾಣದಲ್ಲಿ ಮಾಹೇಶ್ವರ, ವೀರಮಾಹೇಶ್ವರ ಪದಗಳಿದ್ದು, ಇದರ ಅನುವಾದವಾಗಿರುವ ಹದಿನಾಲ್ಕನೆಯ ಶತಮಾನದ ಕನ್ನಡ ಬಸವಪುರಾಣದಲ್ಲಿ ಅವುಗಳಿಗೆ ಬದಲು ವೀರಶೈವ ಪದ ಬಳಸಿರುವುದರಿಂದಲೂ ವೀರಶೈವವೆಂಬುದು ಹದಿಮೂರು ಮತ್ತು ಹದಿನಾಲ್ಕನೆಯ ಶತಮಾನಗಳ ಮಧ್ಯದಲ್ಲಿ ಸೃಷ್ಟಿಯಾದುದೆಂದು ಆಂಧ್ರದಿಂದ ಕರ್ನಾಟಕಕ್ಕೆ ಬಂದಿದೆಯೆಂದು ಸ್ಪಷ್ಟವಾಗುತ್ತದೆ. ಈ ವೀರಶೈವ ಶಬ್ದ ಲಿಂಗಾಯತ ಶಬ್ದವನ್ನು ತಳ್ಳಿಹಾಕುತ್ತ ಬಂದ ಇತಿಹಾಸವನ್ನೂ, ಅದು ಸಮಾಜದಲ್ಲಿ ಪ್ರಸಾರವಾಗುತ್ತ ಬಂದ ಭೂಗೋಲವನ್ನೂ ನನ್ನ ವೀರಶೈವಇತಿಹಾಸ ಮತ್ತು ಭೂಗೋಲ ಪುಸ್ತಕದಲ್ಲಿ ನೋಡಬಹುದು.

೮. ಸಿದ್ಧಾಂತಶಿಖಾಮಣಿಯು ಬಸವೋತ್ತರಕಾಲೀನ ಕೃತಕ ಗ್ರಂಥ:

ಹೀಗೆ, ಧರ್ಮದ ಹೆಸರನ್ನು ಬದಲಿಸಿದ ಜಗದಾಚಾರ್ಯರು, ತಮ್ಮ ಶುದ್ಧಶೈವದ ಇನ್ನೊಂದು ಹೆಸರಾಗಿರುವ ಸಿದ್ದಾಂತಶೈವ ಎಂಬುದನ್ನು ನೆನಪಿಸುವಂತೆ 'ಸಿದ್ಧಾಂತ ಶಿಖಾಮಣಿ' ಎಂಬ ಧರ್ಮಗ್ರಂಥವನ್ನೂ ಇದೇ ೧೫-೧೬ನೆಯ ಶತಮಾನದಲ್ಲಿ ರೂಪಿಸಿದರು. ಮೂಲತಃ (ಆಗಮಿಕ ಶೈವ) ಬ್ರಾಹ್ಮಣರಾಗಿದ್ದ ಇವರಿಗೆ ಕನ್ನಡ ಅಸ್ಪೃಶ್ಯ ಭಾಷೆ, ಹೀಗಾಗಿ ಇವರಿಗೆ ಸಂಸ್ಕೃತ ಭಾಷೆಯಲ್ಲಿ ಧರ್ಮಗ್ರಂಥವನ್ನು ರೂಪಿಸುವುದು ಅನಿವಾರ್ಯವಾಯಿತು. ಆಗ ಬೇರೆ ಬೇರೆ ಮೂಲಗಳಿಂದ ಆಕರ ಹೇಳದೆಯೇ ನೂರಾರು ಪ್ರಾಚೀನ ಶ್ಲೋಕಗಳನ್ನು ಬಳಸಿಕೊಂಡು, ಶಿವಯೋಗಿ ಶಿವಾಚಾರ್ಯ ಎಂಬ ಕೃತಕ ಹೆಸರಿನಲ್ಲಿ ಈ ಗ್ರಂಥವನ್ನು ರೂಪಿಸಿದರು. ಈ ಕೃತಿಯ ಮತ್ತು ಕರ್ತೃವಿನ ಉಲ್ಲೇಖ ಬಸವಪೂರ್ವಕಾಲದಲ್ಲಿ ಎಲ್ಲಿಯೂ ಕಂಡುಬರುವುದಿಲ್ಲವಾಗಿ ಇದು, ಖಂಡಿತವಾಗಿಯೂ ಬಸವೋತ್ತರಕಾಲೀನ ಗ್ರಂಥವಾಗಿದೆ. ಈ ಗ್ರಂಥದ ಕೃತಕತೆಯನ್ನು ಮೈಸೂರಿನ ಡಾ. ಇಮ್ಮಡಿ ಶಿವಬಸವಸ್ವಾಮಿಗಳು ಇತ್ತೀಚೆಗೆ ಪ್ರಕಟಿಸಿರುವ 'ಸಿದ್ಧಾಂತ ಶಿಖಾಮಣಿ ಹಾಗೂ ಶ್ರೀಕರ ಭಾಷ್ಯ: ನಿಜದ ನಿಲವು' ಕೃತಿಯಲ್ಲಿ ಓದಿ ತಿಳಿಯಬಹುದು. ರಾಮಾಯಣ ಕಾಲದಲ್ಲಿ ರೇಣುಕ ಜಗದ್ಗುರುಗಳು ಅಗಸ್ತ್ಯರಿಗೆ ಬೋಧಿಸಿದ ತತ್ವವನ್ನು ಶಿವಯೋಗಿ ಶಿವಾಚಾರ್ಯರು ಈ ಕೃತಿಯಾಗಿ ರಚಿಸಿದರೆಂದು ಇಲ್ಲಿ ಹೇಳಲಾಗಿದೆ. ಎಲ್ಲಿಯ ಅಗಸ್ತ್ಯ? ಎಲ್ಲಿಯ ರಾಮಾಯಣ? ಎಲ್ಲಿಯ ರೇಣುಕ? ಎಲ್ಲಿಯ ನೂರೊಂದು ಸ್ಥಲಸಿದ್ಧಾಂತ? ಇದೆಲ್ಲ ಕಟ್ಟುಕತೆಯಾಗಿದೆ. ಇದರಲ್ಲಿಯ ಪರಸ್ಪರ ತಾತ್ವಿಕ ವಿರೋಧವನ್ನು ಡಾ. ಎನ್. ಜಿ. ಮಹಾದೇವಪ್ಪನವರ 'ಸಿದ್ಧಾಂತ ಶಿಖಾಮಣಿಯ ಅಸಂಬದ್ಧ ಸಿದ್ಧಾಂತಗಳು' ಕೃತಿಯಲ್ಲಿ ನೋಡಬಹುದು. ಇದಲ್ಲದೆ ಡಾ. ಎಸ್. ಸಿ. ನಂದೀಮಠರು ಹೇಳಿದ 'ಸಿದ್ಧಾಂತ ಶಿಖಾಮಣಿ ಕೃತಿ ವಿರೋಧಾಭಾಸಗಳ ಕಂತೆಯಾಗಿದೆ' (ವೀರಶೈವಧರ್ಮದ ಕೈಪಿಡಿ, ಪು-೧೭೩) ಎಂಬ ಮಾತನ್ನೂ ಇಲ್ಲಿ ಸ್ಮರಿಸಬಹುದು. ಈ ಸಿದ್ಧಾಂತವನ್ನು ಮಲೆಯ ಪರ್ವತದ ಮೇಲೆ ರೇಣುಕರು ಅಗಸ್ತ್ಯರಿಗೆ ಬೋಧಿಸಿದರೆಂದು ಸಿದ್ದಾಂತ ಶಿಖಾಮಣಿ ಹೇಳುವುದನ್ನು ನೋಡಿದರೆ, ಬಹುಶಃ ಈ ಕೃತಿ ಮಲೆಯ ಪರ್ವತ, ಅಂದರೆ, ಮಲೆನಾಡಿನ ರಂಭಾಪುರಿಯಲ್ಲಿ, ಇಲ್ಲವೆ ಮಲೆ ಎಂದೇ ಕರೆಸಿಕೊಳ್ಳುತ್ತಲಿದ್ದ ಶಿವಗಂಗೆಯಲ್ಲಿ ಹುಟ್ಟಿದಂತಿದೆ.

೯. ಜಗದಾಚಾರ್ಯರದು ಜಾತಿಭೇದ ಸಿದ್ದಾಂತ

'ಕುಲವನರಸುವರೆ ಶರಣರಲ್ಲಿ, ಜಾತಿ ಸಂಕರವಾದ ಬಳಿಕ?' ಎಂಬ ಶರಣ ಸಿದ್ಧಾಂತಕ್ಕೆ ವಿರುದ್ಧವಾದುದಾಗಿದೆ, ಜಗದಾಚಾರ್ಯ ಸಿದ್ಧಾಂತ. ಇವರು ಆಗಮಿಕ ಪರಂಪರೆಯವರಾಗಿದ್ದರೂ ಬ್ರಾಹ್ಮಣರೇ ಆಗಿರುವದರಿಂದ ಇವರಲ್ಲಿ ವರ್ಣಭೇದ ವ್ಯವಸ್ಥೆ ಸಹಜವಾಗಿದೆ. ಇದನ್ನು ತಮಿಳುನಾಡಿನ ಈರೋಡು ಜಿಲ್ಲೆಯ ಎರಗನಹಳ್ಳಿ ಶಾಸನದ 'ಬ್ರಾಹ್ಮಣಜಾತಿಯ ಜಂಗಮದೇವರಿಗೆ...... ಎಂಬ ವಾಕ್ಯ ಬೆಂಬಲಿಸುತ್ತದೆ. ಪ್ರಾಚೀನ ಆಗಮಾದಿ ಪಠ್ಯಗಳಲ್ಲಿ 'ಶಿವದ್ವಿಜರೆಂದು ಕರೆದುಕೊಂಡಿರುವ ಇವರು, ಬರುಬರುತ್ತ “ಲಿಂಗೀ ಬ್ರಾಹ್ಮಣ'ರೆಂದು ಕರೆದುಕೊಳ್ಳಲು ಹೆಮ್ಮೆ ಪಡುತ್ತಿದ್ದುದನ್ನು ಇಲ್ಲಿ ಗಮನಿಸಬಹುದು. ಈ ಕಾರಣಕ್ಕಾಗಿಯೇ ಸೊಲ್ಲಾಪುರದ ವಾರದ ಮಲ್ಲಪ್ಪನವರ ಆಶ್ರಯದಲ್ಲಿ “ಲಿಂಗೀಬ್ರಾಹ್ಮಣ ಗ್ರಂಥಮಾಲೆ (೧೮೭೮)ಯನ್ನು ಇವರು ಆರಂಭಿಸಿದ್ದರು. ಇದಕ್ಕೆ ಪೂರಕವಾದ ಇನ್ನೂ ಒಂದು ಸೋಜಿಗದ ಸಂಗತಿ ಎಂದರೆ, ಅಷ್ಟೋತ್ತರ ಶತನಾಮಾವಳಿಗಳು ಬಾಳೆ ಹಳ್ಳಿಪೀಠದ ರೇವಣಸಿದ್ಧನನ್ನು 'ಲಿಂಗ ಯಜ್ಯೋಪವೀತಿನೇ ನಮಃ' ಎಂದು, ಉಜೈನಿಪೀಠದ ಮರುಳಸಿದ್ಧನನ್ನು 'ಶಿಖಾ ಯಜ್ಯೋಪವೀತಿನೇ ನಮಃ' ಎಂದು ಸ್ತುತಿಸುವ ಮೂಲಕ ಈ ರೇವಣಸಿದ್ಧ ಮತ್ತು ಮರುಳಸಿದ್ಧರಿಗೆ ಮೂಲತಃ ಬ್ರಾಹ್ಮಣ್ಯದ ಸಂಕೇತವಾಗಿರುವ ಜನ್ನಿವಾರ, ಜುಟ್ಟುಗಳಿವೆ ಎಂದು ಸ್ಪಷ್ಟಪಡಿಸಿವೆ. ಈಗಲೂ ಈ ಪರಂಪರೆಯ ಪಂಚಾಚಾರರು ಬ್ರಾಹ್ಮಣರಂತೆ ವೇದಘೋಷ, ಹೋಮ-ಹವನಗಳನ್ನು ಆಚರಿಸುತ್ತಿರುವುದು, ಹಳ್ಳಿಯಲ್ಲಿ ಜಂಗಮರಿಗೆ ಬ್ರಾಹ್ಮಣರಂತೆ ಜುಟ್ಟು ಇರುವುದು, ಬ್ರಾಹ್ಮಣರ 'ಉಪನಯನ'ದ ಇನ್ನೊಂದು ರೂಪವಾಗಿರುವ 'ಅಯ್ಯಾಚಾರ'ವು ಜಂಗಮ ಮಕ್ಕಗಳಿಗೆ ಜರುಗುವುದು ತಿಳಿದ ಸಂಗತಿಯಾಗಿದೆ.

ಈ ಬ್ರಾಹ್ಮಣರ ಜಾತಿಭೇದ ಆಚರಣೆಗೆ ಲಿಂಗಸಗೂರು ತಾಲೂಕಿನ ಕರಡಿಕಲ್ಲು ಗ್ರಾಮದ ಎರಡು ಶಾಸನಗಳು (ರಾಯಚೂರು ಜಿಲ್ಲೆ ಶಾಸನಗಳು- ಲಿಂಗಸಗೂರು ೪ ಮತ್ತು ೬) ಸಾಕ್ಷಿಯಾಗಿವೆ. ಇವು ಹನ್ನೊಂದನೇ ಶತಮಾನದ ಉತ್ತರಾರ್ಧದ ಅಂದರೆ ಬಸವಣ್ಣನಿಗೆ ಕೆಲವೇ ವರ್ಷ ಪೂರ್ವದ ಶಾಸನಗಳಾಗಿವೆ. ಇಲ್ಲಿಯ ತತ್ಪುರುಷಶಿವ, ಸೂಕ್ಷ್ಮಶಿವ, ಮೈಮಶಿವ ಹೆಸರುಗಳ ಮುಂದೆ 'ಶಿವ ಅಂದರೆ ಶಿವಾಚಾರ್ಯ ಪ್ರತ್ಯಯವಿರುವುದರಿಂದ ಇವರು ಇಂದಿನ ಪಂಚಾಚಾರ್ಯ ಪರಂಪರೆಯ ಪೂರ್ವಜರೆಂದು ಸ್ಪಷ್ಟವಾಗುತ್ತದೆ. ಈ ಶಾಸನದಲ್ಲಿ ಸೂಕ್ಷ್ಮಶಿವ (ಸೂಕ್ಷ್ಮಶಿವಾಚಾರ್ಯ)ನು ಅಂತ್ಯಜಾತಿ ಯಾರಾದೊಡವಂಗಡಿ ಬೀದಿಯೊಳಗೆ ಮದುವೆಯಲು ಬಂಡಿಯನೇರಿ ಬರಸಲ್ಲದು. ಬಂದನಪ್ಪಡೆ ಪನ್ನೆರಡು ಗದ್ಯಾಣ ಪೊನ್ನಂ ದಂಡವಂ ತಿ(ತೆ)ರುವರಂತಪ್ಪುದಕೆ ಶ್ರೀ ಬಲ್ಲವರಸರಾಣೆ, ಶ್ರೀಮದ್ರಾಜಗುರುದೇವರಾಣೆ' ಎಂದು ಆಜ್ಞೆ ಹೊರಡಿಸಿರುವನು. ಅಸ್ಪೃಶ್ಯರು ಮದುವೆ ಮೆರವಣಿಗೆ ಬಂಡಿಯನ್ನು ಗ್ರಾಮದ ಅಂಗಡಿ ಬೀದಿಯಲ್ಲಿ ತರಕೂಡದು. ತಂದರೆ ಹನ್ನೆರಡು ಗದ್ಯಾಣ ದಂಡ ನೀಡಬೇಕೆಂಬುದು ಇಲ್ಲಿಯ ಅಭಿಪ್ರಾಯ. ಇದನ್ನು ನೋಡಿದರೆ ಈ ಶಿವಾಚಾರ್ಯರದು (ಇದರ ಮುಂದುವರಿದ ರೂಪವಾಗಿರುವ ಇಂದಿನ ಪಂಚಾಚಾರ್ಯರದು) ಅಂದರೆ ಇಂದಿನ ವೀರಶೈವಜಂಗಮರದು ಮೂಲತಃ ಜಾತಿಬೇಧ ಪಾಲಿಸುವ ಬ್ರಾಹ್ಮಣಧರ್ಮವೆಂದು ಸ್ಪಷ್ಟವಾಗುತ್ತದೆ.

೧೦. ಗುರುವಿನ ಸ್ಥಾನ ಆಚಾರ್ಯರಿಗಿಂತ ಮೇಲು:

ಗುರು ಮತ್ತು ಆಚಾರ್ಯರಲ್ಲಿ ತತ್ವ-ಸಂಪ್ರದಾಯದ ದೃಷ್ಟಿಯಿಂದ ಸಾಮಾಜಿಕವಾಗಿ ಯಾರ ಸ್ಥಾನ ಮೇಲು? ಎಂಬ ಪ್ರಶ್ನೆ ಎದುರಾಗುವುದು ಸಹಜ. ಮೂಲದಲ್ಲಿ ಗುರುತತ್ವ ಜ್ಞಾನಪ್ರಧಾನ, ಆಚಾರ್ಯತತ್ವ ಕರ್ಮಪ್ರಧಾನ ಎನಿಸಿವೆ. ದೀಕ್ಷಾಪ್ರಸಂಗದಲ್ಲಿ ಮೂಲೆಯ ನಾಲ್ಕು ಕಳಸಗಳು 'ಆಚಾರ್ಯ'ರನ್ನು (ಚತುರಾಚಾರ್ಯರನ್ನು), ಮಧ್ಯದಲ್ಲಿರುವುದು 'ಗುರು'ವನ್ನು ಸಂಕೇತಿಸುತ್ತವೆ. ಹದಿನೆಂಟನೆಯ ಶತಮಾನದಲ್ಲಿ ಚತುರಾಚಾರ್ಯರ ಜೊತೆ ಕಾಶೀಪೀಠವು ಅಸ್ತಿತ್ವಕ್ಕೆ ಬರುವಲ್ಲಿ, ಇವರಿಗೆ ಒಂದು ಸ್ಥಾನ ನೀಡುವುದು ಅನಿವಾರ್ಯವಾಯಿತು. ಆಗ ಈ ಪೀಠಕ್ಕೆ ಗುರುವನ್ನು ಸಂಕೇತಿಸುವ 'ಜ್ಞಾನಪೀಠ'ವೆಂದು ಕರೆದು, ಆ ಮಧ್ಯಸ್ಥಾನವನ್ನು ಇವರಿಗೆ ನೀಡಲಾಯಿತು. ಇದು 'ಗುರು' ಸ್ಥಾನದ ಮೇಲೆ 'ಆಚಾರ್ಯ' ಸ್ಥಾನ ಮಾಡಿದ ಸವಾರಿಯಾಗಿದೆ. ಇದರಿಂದ ಮೂಲದಲ್ಲಿ ಗುರುವಿನ ಸ್ಥಾನ ಆಚಾರ್ಯರಿಗಿಂತ ಮೇಲು ಎಂದು ಸ್ಪಷ್ಟವಾಗುತ್ತಿದ್ದು, ಸಧ್ಯ ಇವರಿಗೆ ರೂಢಿಯಲ್ಲಿರುವ ಜಂಗಮ(ವಿರಕ್ತ), ಗುರು(ಪಂಚಪೀಠ) ಶಬ್ದವನ್ನೇ ಬಳಸಿ ಇಂದಿನ ಇಬ್ಬರು ವಿದ್ವಾಂಸರು ಈ ತಾರತಮ್ಯದ ಬಗ್ಗೆ ನೀಡಿದ ಅಭಿಪ್ರಾಯವನ್ನು ಇಲ್ಲಿ ಉದ್ಧರಿಸಬಹುದು.

೧. “ಗುರು-ಜಂಗಮರು ಒಂದೆಡೆ ಸೇರಿದಾಗ ಗುರುವು ಜಂಗಮದ ಪಾದಪೂಜೆಯನ್ನು ಮಾಡಬೇಕು ಮತ್ತು ಜಂಗಮದ ಪಾದೋದಕ ಪ್ರಸಾದವನ್ನು ಪಡೆಯಬೇಕು.... ಜಂಗಮಪೀಠದವರು ಶ್ರೀಗುರುಪೀಠಗಳಿಗೆ 'ಆಶೀರ್ವಾದ ನಿರೂಪ'ವನ್ನು ಜಾರಿಗೊಳಿಸುತ್ತಾರೆ. ಶ್ರೀಗುರುಪೀಠದವರು ಜಂಗಮಪೀಠಗಳಿಗೆ 'ಬಿನ್ನಹಪತ್ರ'ವನ್ನು ಬರೆದುಕೊಳ್ಳುತ್ತಾರೆ...ಅಂತೆಯೇ ಶ್ರೀಮದ್ರೇಣುಕ ಪರಂಪರೆಯ ಶ್ರೀಮದ್ರಂಭಾಪುರೀ ವೀರಸಿಂಹಾಸನಾಧೀಶರಾದ ಗೋಡಕೆರೆ-ಎಳನಾಡು- ಅರಸೀಕೆರೆ-ಎರಗುಂದ ಸಂಸ್ಥಾನಗಳ, ದಾರುಕ ಪರಂಪರೆಯ ಸಿಂಹಾಸನಾಧಿಪತಿಗಳಾದ ಶಿಡ್ಲಹಳ್ಳಿ-ಬಳ್ಳೆಕಟ್ಟೆ-ಗುಣಶೆಟ್ಟಿಹಳ್ಳಿ ಸಂಸ್ಥಾನಗಳ, ಶ್ರೀಶೈಲ ಸಿಂಹಾಸನಾಧೀಶರಾದ ಪಂಡಿತಾರಾಧ್ಯ ಪರಂಪರೆಯ ನಂದೀಗುಡಿ-ಅತ್ತುಕಟ್ಟೆ- ಮುಪ್ಪಗಿರಿ-ಚಿಲುಕೂರು ಸಂಸ್ಥಾನಾದಿಗಳ ಪಟ್ಟಾಧ್ಯಕ್ಷರಾದ ಶ್ರೀಗುರುಗಳೆಲ್ಲರೂ ಶೆಟ್ಟಿನಾಡಿನ ತಮ್ಮಡಿಹಳ್ಳಿ(ಮೂಲತಃ ಕಟ್ಟಿಗೆಹಳ್ಳಿ ಸಂಸ್ಥಾನ) ಶೂನ್ಯಸಿಂಹಾಸನಾಧೀಶ್ವರರಾದ ನಿರಂಜನ ಜಗದ್ಗುರು ಜಂಗಮ ಮಹಾಸ್ವಾಮಿಗಳವರ ಸನ್ನಿಧಾನಕ್ಕೆ ಕೈಂಕರ್ಯದಿಂದ ಬಿನ್ನಹ ಪತ್ರಗಳನ್ನು ಬರೆದುಕೊಳ್ಳುತ್ತ ಬಂದಿರುತ್ತಾರೆ. ಇವುಗಳೆಲ್ಲಕ್ಕೂ ತಮ್ಮಡಿಹಳ್ಳಿ ಹೊಸಮಠದ ಶೂನ್ಯಸಿಂಹಾಸನಾಧೀಶ್ವರರಲ್ಲಿ ದಾಖಲುಗಳಿರುತ್ತವೆ.” -ಎಂ. ಎಸ್. ಬಸವರಾಜಯ್ಯ(ಮೈಸೂರು) ವೀರಶೈವೇತಿಹಾಸ ಹಾಗೂ ತಮ್ಮಡಿಹಳ್ಳಿ ಶ್ರೀಮಠದ ಚರಿತೆ

೨. 'ಭಕ್ತರು ವಿರಕ್ತರಾಗಿ ಗುರುವರ್ಗದ ಅಯ್ಯನವರಿಗಿಂತ ಅಥವಾ ಪೀಠಾಧ್ಯಕ್ಷರಿಗಿಂತ ಮೇಲಿನ ಹಂತವನ್ನು ಮುಟ್ಟಲು ಅವಕಾಶ ಮಾಡಿಕೊಟ್ಟಿರುವುದು ಲಿಂಗವಂತ ಸಮಾಜದ ಪ್ರಗತಿಪರ ಲಕ್ಷಣಗಳಲ್ಲೊಂದು...ತಾತ್ವಿಕವಾಗಿ ಅನುಶ್ರೇಣಿಯಲ್ಲಿ ವಿರಕ್ತರು ಪೀಠಾಧ್ಯಕ್ಷರಿಗಿಂತ ಮೇಲೆ ಇರಬೇಕಾಗುತ್ತದೆ. -ಎಂ.ಚಿದಾನಂದಮೂರ್ತಿ: ವೀರಶೈವ ಗುರುಮಠಗಳು ಮತ್ತು ವಿರಕ್ತಮಠಗಳು-ಒಂದು ಸಮನ್ವಯ

ಈ ತರತಮ ಸಂಪ್ರದಾಯವನ್ನು ಇತ್ತೀಚಿನ ಒಂದು ಘಟನೆಯಿಂದ ಸ್ಪಷ್ಟಪಡಿಸಬಹುದು: “ಒಮ್ಮೆ ಭರತನೂರದ (ವಿರಕ್ತ) ಶ್ರೀ ಗುರುನಂಜೇಶ್ವರಸ್ವಾಮಿಗಳು ಕುದುರೆಯ ಮೇಲೆ ಸಂಚಾರ ಹೊರಟಿದ್ದರು. ಆಗ ಅವರ ಎದುರಿಗೆ ಹಾರಕೂಡದ (ಪಂಚಾಚಾರ್ಯ) ಶ್ರೀ ಚೆನ್ನಬಸವಶಿವಯೋಗಿಗಳು ಕುದುರೆಯ ಮೇಲಿಂದ ಎದುರಿಗೆ ಬಂದರು. ಇವರಿಗಿಂತ ಶ್ರೀ ಗುರುನಂಜೇಶ್ವರ ಸ್ವಾಮಿಗಳು ಕಿರಿಯವರಾದರೂ ತಾವೇ ಅವರಿಗೆ ನಮಸ್ಕರಿಸಿದರು. ಭಕ್ತರು ಆಗ 'ತಾವು ದೊಡ್ಡವರು, ಅವರೇ ಮೊದಲು ತಮಗೆ ನಮಸ್ಕರಿಸುವುದು ಸಂಪ್ರದಾಯ ಎಂದಾಗ, 'ಹಾಗಲ್ಲ ಅವರು ನಿರಂಜನಮೂರ್ತಿಗಳು, ನಮಗಿಂತಲೂ ದೊಡ್ಡವರು. ಅದಕ್ಕೆ ನಮಸ್ಕರಿಸಿದೆ' ಎಂದು ಶಿಷ್ಯರನ್ನು ಸಮಾಧಾನ ಪಡಿಸಿ(ದರು).” -ಎಂ. ಎಸ್. ಲಠ್ಠೆ: ಜಂಗಮಪುಂಗವರು-ಭಾಗ-೨, ಪು-೬೨.

ಇವೆಲ್ಲ ವಿವರಗಳು ಸಾಮಾಜಿಕ ಅನುಶ್ರೇಣಿಯಲ್ಲಿ ಆಚಾರ್ಯರಿಗಿಂತ ಗುರುಗಳೇ(ವಿರಕ್ತರೇ) ಮೇಲು-ಎಂಬುದನ್ನು ಸ್ಪಷ್ಟಪಡಿಸುತ್ತವೆ.

೧೧. ಪಂಚಾಚಾರ್ಯರ ಗೋತ್ರ-ಸೂತ್ರಗಳು ಇತ್ತೀಚಿನ ಸೃಷ್ಟಿ:

ಪಂಚಾಚಾರ್ಯರ ಪೀಠಗಳಿಗೆ ಈಗ ವೀರ, ನಂದಿ, ಶೃಂಗಿ ಇತ್ಯಾದಿ ಗೋತ್ರನಾಮಗಳನ್ನು, ಪಡಿವಿಡಿ, ವೃಷ್ಟಿ ಮೊದಲಾದ ಸೂತ್ರಗಳನ್ನು ಹೇಳಲಾಗುತ್ತದೆ. ಆದರೆ, ರೇವಣಸಿದ್ಧೇಶ್ವರಪುರಾಣ ಬರೆದ ಚತುರ್ಮುಖ ಬೊಮ್ಮರಸನು ಕಾಶ್ಯಪ ಗೋತ್ರದ ಬೋಧಾಯನ ಸೂತ್ರದ ಯಜುರ್ವೇದಿ. ಇನ್ನೂ ಗಮನಾರ್ಹವಾದುದೆಂದರೆ, ೧೬೦೬ರ ಗುಮ್ಮಳಾಪುರ ಶಾಸನದಲ್ಲಿ ಬರುವ 'ಭಾರದ್ವಾಜ ಗೋತ್ರದ, ಪಡಿವಿಡಿ ವರ್ಗದ, ಕೊಲ್ಲಿಪಾಕಿಯ ರೇವಣಸಿದ್ಧ ಸಂಪ್ರದಾಯದವರಾದ......ನಂಜದೇವ ಅಯ್ಯನವರ” ಎಂಬ ಉಲ್ಲೇಖ. ಇಲ್ಲಿ ರೇವಣಸಿದ್ಧ ಸಂಪ್ರದಾಯದವರು ಭಾರದ್ವಾಜ ಗೋತ್ರದವರೆಂದು ಹೇಳಿದುದು ಗಮನಿಸಬೇಕಾದ ಅಂಶವಾಗಿದೆ. ಇದಲ್ಲದೆ, ಪಂಚಾಚಾರ್ಯ ಸಂಪ್ರದಾಯದ ಭಕ್ತರಾಗಿರುವ ಕೊಡಗಿನ ಅರಸರು ತಮ್ಮನ್ನು 'ಶಿವಗಂಗೆಯ ಮೇಲಣಗವಿ ಸಿಂಹಾಸನಾರೂಢ ಸಂಪ್ರದಾಯಸ್ಥರಾದ, ವೀರಶೈವ ಮತಸ್ಥರಾದ ಸಿದ್ಧಾಪುರಮಠದ ಪಟ್ಟದ ಸ್ವಾಮಿಯವರ ಕರಕಮಲ ಸಂಜಾತರಾದ.....ಭಾರದ್ವಾಜ ಗೋತ್ರದ ಅಶ್ವಲಾಯನ ಸೂತ್ರದ ಋಕ್ ಶಾಖಾಧ್ಯಾಯಿಗಳಾದ ಅಪ್ಪಾಜೇಂದ್ರ ಒಡೆಯರು ಎಂದು ಕರೆದುಕೊಂಡಿದ್ದಾರೆ. ಈ ಶಾಸನದ ಕಾಲ ೧೭೯೬, ಇದರಿಂದ ಪಂಚಾಚಾರ್ಯರು ೧೮ನೆಯ ಶತಮಾನದ ವರೆಗೂ ಇಂದಿನ ವೀರ, ನಂದಿ, ಶೃಂಗಿ ಮೊದಲಾದ ಗೋತ್ರಗಳಿಗೆ ಬದಲು ಭಾರದ್ವಾಜ, ಕಾಶ್ಯಪ ಇತ್ಯಾದಿ ಬ್ರಾಹ್ಮಣ ಗೋತ್ರ ಹೇಳಿಕೊಳ್ಳುತ್ತಿದ್ದರೆಂಬುದು ಮನವರಿಕೆಯಾಗುತ್ತದೆ. ಇಷ್ಟೇ ಏಕೆ? ೧೮೭೮ರಲ್ಲಿ ಆರಂಭವಾದ ಸೊಲ್ಲಾಪುರದ ವಾರದ ಮಲ್ಲಪ್ಪನವರ ಸಂಸ್ಕೃತ ಪಾಠಶಾಲೆಯಲ್ಲಿ ಸೇರಿಕೊಂಡಿದ್ದ ಈ ಪಂಚಾಚಾರ್ಯರು, ತಾವು ಇಲ್ಲಿ ಪ್ರಕಟಿಸಿದ ಗ್ರಂಥಮಾಲೆಗೆ 'ವೀರಶೈವ ಲಿಂಗೀಬ್ರಾಹ್ಮಣ ಗ್ರಂಥಮಾಲೆ' ಎಂದು ಕರೆದಿರುವುದು, ಇವರ ಬ್ರಾಹ್ಮಣಿಕೆಯ ಇತ್ತೀಚಿನ ಉದಾಹರಣೆಯಾಗಿದೆ. ಹೀಗೆ ೧೮ನೆಯ ಶತಮಾನದ ವರೆಗೆ ನೇರವಾಗಿ ಬ್ರಾಹ್ಮಣ ಗೋತ್ರ ಹೇಳಿಕೊಳ್ಳುತ್ತಿದ್ದ ಈ ಪಂಚಾಚಾರ್ಯರಿಗೂ 'ಗೋತ್ರನಾಮ ಮಾದಾರ ಚನ್ನಯ್ಯನೆಂದು ಹೇಳಿರಯ್ಯ' ಎಂದು ನುಡಿದ ಬಸವ ಸಂಪ್ರದಾಯದವರಿಗೂ ಎಲ್ಲಿಯ ಸಂಬಂಧ?

೧೮ನೆಯ ಶತಮಾನದ ನಮ್ಮ ಹಿರಿಯರು ಆಂಧ್ರ ಮೂಲದ ಈ ಪಂಚಾಚಾರ್ಯರ ಮಾತಿಗೆ ಮೋಸಹೋಗಿ, ಇವರನ್ನು ಗುರುಗಳೆಂದು ಒಪ್ಪಿಕೊಂಡರು; ಇವರ ವೀರಶೈವವೆಂಬ ಮತದ ಹೆಸರು ತಮ್ಮದೆಂದು ನಂಬಿದರು. ಇತ್ತೀಚೆಗೆ ಮಾತ್ರ ನಿಜ ಇತಿಹಾಸವನ್ನು ಅರ್ಥ ಮಾಡಿಕೊಂಡ ಕನ್ನಡಿಗರು ಪಂಚಾಚಾರ್ಯ ಮತ್ತು ವೀರಶೈವ ಈ ಎರಡೂ ಅಂಶಗಳನ್ನು ತೀವ್ರವಾಗಿ ನಿರಾಕರಿಸುತ್ತಲಿದ್ದಾರೆ.

ಗ್ರಂಥ ಋಣ: ಬಸವಧರ್ಮ ಪ್ರಕಾಶನ, ಕಲಬುರ್ಗಿ-೨೦೧೩

*
ಪರಿವಿಡಿ (index)
Previous ಲಿಂಗಾಯತ ಎಂಬ ಹೊಸ ಧರ್ಮ ವೀರಶೈವ ೧೨ನೇಯ ಶತಮಾನಕ್ಕಿಂತ ಮುಂಚೆ ಆಸ್ತಿತ್ವದಲ್ಲಿತ್ತೆ? Next