Previous ಲಿಂಗಾಯತ ಹೆಸರುಗಳು. ಸ್ವರವಚನ ಪ್ರಾಕಾರ Next

ಲಿಂಗಾಯತ: ವಚನ ಸಾಹಿತ್ಯ ಸಂಗೀತ ಶೈಲಿ

*

ವಚನ ಸಾಹಿತ್ಯವು ಹಲವಾರು ಶೈಲಿಗಳಲ್ಲಿ ಪ್ರಕಟಗೊಂಡಿದೆ.

ಕನ್ನಡದ ವಚನ ಸಾಹಿತ್ಯವು ಹಲವಾರು ಶೈಲಿಗಳಲ್ಲಿ ಪ್ರಕಟಗೊಂಡಿದೆ. ಇವುಗಳ ಪ್ರಯೋಗ ವೈವಿಧ್ಯವೇ ಬೆರಗು ಹುಟ್ಟಿಸುವಂಥದ್ದು. ಸ್ವರವಚನ, ಮಂತ್ರಗೋಪ್ಯ, ವನಕೆವಾಡು, ಮಿಶ್ರಾರ್ಪಣ, ಕೋಲುಪದ, ಚಂದಮಾಮ, ಕರಣಹಸಿಗೆ, ಸೃಷ್ಟಿಯ ವಚನ, ಕಾಲಜ್ಞಾನ, ನಾಂದ್ಯ, ಉದ್ಧರಣೆ ವಾಚ್ಯ, ಬಲ್ಲಿ, ತ್ರಿವಿಧಿ, ಕಣಿಸ್ತೋತ್ರ, ಗದ್ಯ, ಪೀಠಿಕೆ ಇತ್ಯಾದಿಗಳೆಲ್ಲವನ್ನೂ ಸ್ಥೂಲವಾಗಿ ವಚನಗಳು ಎಂದೇ ಕರೆಯಲಾಗುತ್ತದೆ. ಇವುಗಳ ಪೈಕಿ ಗಾಯನದ ಉದ್ದೇಶವನ್ನಿಟ್ಟುಕೊಂಡೇ ರಚಿತವಾದ ವಚನಗಳನ್ನು ಸ್ವರವಚನಗಳು ಎನ್ನುತ್ತಾರೆ. ಇವೇ ನಮ್ಮ ಕರ್ನಾಟಕ ಸಂಗೀತದ, ಅದರಲ್ಲೂ ಭಕ್ತಿಸಂಗೀತದ ಮೂಲಮಾತೃಕೆಗಳು ಎನ್ನಬಹುದು.

ವಿಜಯನಗರ ಸಾಮ್ರಾಜ್ಯದ ಕಾಲದಿಂದ ಮುನ್ನೆಲೆಗೆ ಬಂದ ಕರ್ನಾಟಕ ಸಂಗೀತ ಪದ್ಧತಿಗೂ ಮುನ್ನ (15 ನೇ ಶತಮಾನಕ್ಕಿಂತ ಹಿಂದೆ) ಕನ್ನಡ ನಾಡಿನಲ್ಲಿ ಪ್ರಚಲಿತವಿದ್ದ ಸಂಗೀತವು ದೇಸಿ ಪ್ರಾಕಾರಕ್ಕೆ ಸೇರಿದ್ದು, ಇದು ಹೆಚ್ಚಾಗಿ ಹಾಡುಗಬ್ಬಗಳ ರೂಪದಲ್ಲಿ ಬಳಕೆಯಲ್ಲಿತ್ತು ಎಂದು ಕಾಣುತ್ತದೆ. ಶಾಸ್ತ್ರೀಯ ರಾಗಗಳು ಮತ್ತು ಶಾಸ್ತ್ರೀಯ ಸಂಗೀತವು ಜಾನಪದ ಮಟ್ಟುಗಳ ಜೊತೆಗೆ ಸಮೀಕರಣಗೊಂಡು ಬೆಳೆಯುತ್ತಿದ್ದ ಕಾಲವು ಅದಾಗಿದ್ದಿತು. ಇಂದು ಯಕ್ಷಗಾನ, ಬಯಲಾಟಗಳಲ್ಲಿ ಪ್ರಚಲಿತವಿರುವ ಸಂಗೀತ ಮತ್ತು ಗಮಕಗಳನ್ನು ಹಾಡುವ ಶೈಲಿಯಾಗಿರಬಹುದು, ತಮಿಳುನಾಡಿನ ಆಳ್ವಾರರ ಕೀರ್ತನೆಗಳನ್ನು ಹಾಡುವ ಶೈಲಿಯಿರಬಹುದು, ಮತ್ತು ತುಳುವಿನ ಪಾಡ್ದನಗಳು ಮತ್ತು ನೀಲಗಾರರು ಹಾಡುವ ಮಂಟೇಸ್ವಾಮಿಯ ಕಾವ್ಯ, ಮಲೆಮಹದೇಶ್ವರನ ಗಾಥೆಗಳು ಇದಕ್ಕೆ ಕೊಂಚ ಹತ್ತಿರದ ಉದಾಹರಣೆಗಳೆಂದು ಹೇಳಬಹುದು.

ಕ್ರಿ. ಶ 7 ನೇ ಶತಮಾನದಿಂದ 12 ನೇ ಶತಮಾನ ಮತ್ತು ಅದರ ಆಸುಪಾಸಿನ ಅಂದಿನ ಪ್ರಾಚೀನ ಕಾಲದಲ್ಲಿ ತ್ರಿಪದಿ ಬಂಧಗಳು, ಜಾವಳಿಗಳು, ಒನಕೆವಾಡು, ತಾರಲೆ, ಧವಳ, ಬೆದಂಡೆ ಮತ್ತು ಚತ್ತಾಣಗಳೆಂಬ ಹಾಡುಗಬ್ಬಗಳು ಜನಸಾಮಾನ್ಯರ ಸಂಗೀತವಾಗಿ, ಜಾನಪದ ಎನಿಸುವ ರೂಪಗಳಲ್ಲಿ ಬಳಕೆಯಲ್ಲಿದ್ದವು. ಇವುಗಳ ಸ್ವರೂಪವು ಹೇಗಿದ್ದಿತು ಎಂಬುದಕ್ಕೆ ಹೆಚ್ಚಿನ ಯಾವ ಆಧಾರಗಳೂ ಲಭ್ಯವಿಲ್ಲ. ಆದರೆ ಇವೆಲ್ಲವೂ ಗೇಯ ರಚನೆಗಳು ಎಂಬುದು ನಿರ್ವಿವಾದ. ಜಾವಳಿಗಳ ಕುರಿತಾಗಿ ಏನೋ ಒಂದಷ್ಟು ಸಿಕ್ಕದ್ದನ್ನು ಇಲ್ಲಿ ಬೇರೊಂದು ಕಡೆ ಬರೆದಿದ್ದೇನೆ, ಓದಬಹುದು.

ಇವುಗಳ ಪೈಕಿ ಜಾವಳಿಗಳು ಶೃಂಗಾರ ಗೀತಗಳು. ರತಿಸಮಯದಲ್ಲಿ ಬಳಸಲಾಗುತ್ತಿದ್ದ, ಉದ್ರೇಕಕಾರಿ ಎನಿಸುವ ತೀವ್ರ ಅನುರಾಗ, ತಪ್ತ ವಿರಹ, ಆವೇಶದ ಅನುತಾಪಗಳನ್ನು ವ್ಯಕ್ತಪಡಿಸಲು ಬಳಕೆಯಾಗುತ್ತಿದ್ದ ಈ ಜಾನಪದ ಸಂಗೀತ ಪ್ರಾಕಾರವನ್ನು ಭಕ್ತಿಯ ಶೃಂಗಾರಕ್ಕೆ ಸಮೀಕರಿಸಿ, ಲಿಂಗಾಯತ ಚಳುವಳಿಯ ಶರಣರು ವಚನಗಳನ್ನು ರಚಿಸಿರುವ ಸಾಧ್ಯತೆಯನ್ನು ನಾವು ಅಲ್ಲಗಳೆಯುವಂತಿಲ್ಲ. ಏಕೆಂದರೆ, ಶರಣಸತಿ ಲಿಂಗಪತಿ ಎಂಬ ಪ್ರಣಾಳಿಕೆಯುಳ್ಳ ಇಷ್ಕ್- ವಾದಿ ಶೃಂಗಾರ ಭಕ್ತಿಯನ್ನು ಕನ್ನಡ ನಾಡಿನಲ್ಲಿ ಮೊದಲು ಪ್ರಚುರ ಪಡಿಸಿದವರು ಶರಣರೇ ಹೌದು. ಆದರೆ ಇಂತಹಾ ಶೃಂಗಾರಮಯ ಆರಾಧನೆಗೆ ಪೂರಕವಾಗಿ ರಚಿತವಾದ, ಗೇಯತೆಯ ಗುಣ ಹೊಂದಿದ ವಚನಗಳ ಸಂಖ್ಯೆ ತೀರಾ ಕಮ್ಮಿ (ಸ್ವರವಚನಗಳನ್ನು ಹೊರತುಪಡಿಸಿ). ಮೊಟ್ಟಮೊದಲನೆಯದಾಗಿ ವಚನಗಳನ್ನು ಹಾಡಲಾಗುತ್ತಿತ್ತೆ? ಎಂಬುದೇ ದೊಡ್ಡ ಪ್ರಶ್ನೆ.....ಹಾಗೇನಾದರೂ ಜಾವಳಿಗಳು ಭಕ್ತಿಸಂಗೀತದ ಮೂಲ ಎನ್ನುವುದಾದರೆ, ಅವುಗಳನ್ನು ಶರಣರಿಗಿಂತ ಅತ್ಯಂತ ಸಮರ್ಥವಾಗಿ ಭಕ್ತಿಯ ಸಂಗೀತಕ್ಕೆ ಮಾರ್ಪಾಡು ಮಾಡಿ, ಶಾಸ್ತ್ರೀಯ ಚೌಕಟ್ಟಿಗೆ ಅಳವಡಿಸಿ, ಕೀರ್ತನೆಗಳನ್ನು ರಚಿಸಿದವರು ಹರಿದಾಸರು ಎನ್ನಬಹುದು.

ಚತ್ತಾಣಗಳು ಪರಿಪೂರ್ಣವಾಗಿ ಗೇಯ-ಗದ್ಯಗಳೆಂದು ತಿಳಿದುಬರುತ್ತದೆ. ತೀ. ನಂ. ಶ್ರೀಕಂಠಯ್ಯನವರ ಅಭಿಪ್ರಾಯದಂತೆ ಪ್ರಾಚೀನ ಕಾವ್ಯಗಳಲ್ಲಿ ಕಂಡುಬರುವ ಬಾಜನೆಗಬ್ಬ (ವಾಚನಕಾವ್ಯ ಎಂಬುದರ ತದ್ಭವ) ಗಳು ಚತ್ತಾಣವೇ ಆಗಿರಬಹುದೆಂದು....ಈ ನಿಟ್ಟಿನಲ್ಲಿ ನೋಡಿದರೆ, ಪ್ರಾಯಶಃ ಚತ್ತಾಣವೇ ವಚನಛಂದಸ್ಸಿನ ಮೂಲವಾಗಿರಬಹುದೆಂದು ನನ್ನ ಅನಿಸಿಕೆಯಾಗಿದೆ. ಹಾಗೇನಾದರೂ ವಚನಗಳು ಇಂತಹಾ ಒಂದು ಅಜ್ಞಾತ ಛಂದಸ್ಸನ್ನು ಹೊಂದಿದ್ದೇ ಆಗಿದ್ದಲ್ಲಿ, ಅವುಗಳಿಗೆ ತಕ್ಕುದಾದ ಒಂದು ಗಾಯನ ಶೈಲಿಯೂ ಇದ್ದಿರಲೇಬೇಕು.

ವಚನಗಳನ್ನು ಹಾಡಲಾಗುತ್ತಿತ್ತೆ?

ಕನ್ನಡದ ಮೇರು ವಿದ್ವಾಂಸರಲ್ಲಿ ಒಬ್ಬರಾದ ಡಾ. ಎಲ್ ಬಸವರಾಜು ಅವರು ರಚಿಸಿರುವ "ಶಿವದಾಸ ಗೀತಾಂಜಲಿ" ಎಂಬ ಗ್ರಂಥದಲ್ಲಿ ವಚನಗಳನ್ನು ಖಂಡಿತವಾಗಿಯೂ ಹಾಡಿ, ಪ್ರಸ್ತುತಪಡಿಸುವ ಪದ್ಧತಿ ಇದ್ದಿತೆಂದೂ, ಅದಕ್ಕೊಂದು ಗೇಯತೆಯ ಛಂದೋಬದ್ಧವಾದ ಚೌಕಟ್ಟು ಇದ್ದಿತೆಂದೂ ಆಧಾರ ಸಮೇತ ಪ್ರತಿಪಾದಿಸಿದ್ದಾರೆ. [Śivadāsa gītāñjali : Basavādipramathara hāḍugaḷu (ಪ್ರಕಟಣೆ; ಶ್ರೀ ಜಗದ್ಗುರು ಶಿವರಾತ್ರೀಶ್ವರ ಗ್ರಂಥಮಾಲಾ (1963))]

ವಚನಗಳನ್ನು ಗಮನಿಸಿದರೆ, ಅವುಗಳು ಬಹುತೇಕ ಗದ್ಯಗುಣವನ್ನು ಹೊಂದಿವೆ. "ನಮಗೆ ಪರಿಚಿತವಿರುವ" ಸಂಗೀತದ ಮಟ್ಟುಗಳಿಗೆ ಹೊಂದಿಸಿ, ಹಾಡಲು ಬೇಕಾದ ಗೇಯತೆಯ ಗುಣವು ಅವುಗಳಲ್ಲಿ ಕಂಡುಬಾರದು. ಹಾಗೆಂದು ಅವುಗಳನ್ನು ಪಾಠ ಓದಿದಂತೆ ಓತಪ್ರೋತವಾಗಿ ಓದಲಾಗುತ್ತಿತ್ತೆ? ಬಹುಶಃ ಇರಲಿಕ್ಕಿಲ್ಲ. ಏಕೆಂದರೆ, ಎಂತಹಾ ಗದ್ಯವೇ ಆಗಿದ್ದರೂ ಸಹ ಅವುಗಳನ್ನು ರಾಗಬದ್ಧವಾಗಿ ಓದುವ ಪದ್ಧತಿ ನಮ್ಮಲ್ಲಿ ಮೊದಲಿನಿಂದಲೂ ಇದೆ. ಚಂಪೂವಿನಲ್ಲಿ ಗದ್ಯವೂ ಇರುತ್ತದೆ. ಹಾಗೆಂದು, ಗಮಕಿಗಳು ಅದನ್ನು ಬರಿದೇ ಶುಷ್ಕವಾಗಿ ಓದಿಬಿಡುತ್ತಾರೆಯೇ? ಅದನ್ನು ಪಠಿಸಲಿಕ್ಕೆ ಒಂದು ಗೀತ ಶೈಲಿಯಿದೆ. ಹೀಗೆಯೇ, ಒಂದು ನಮಗೆ ಗೊತ್ತಿಲ್ಲದ ಒಂದು ವಚನ-ನಿರೂಪಣಾ ಶೈಲಿಯು ಆಗ ಇದ್ದಿರಲೇ ಬೇಕು. ಕಳೆದುಹೋಗಿರುವ ಅಥವಾ ನಮ್ಮ ಗಮನಕ್ಕೆ ಬಾರದ ಯಾವುದೋ ಒಂದು ಜಾನಪದ ಹಾಡುಗಾರಿಕೆಯ/ಕಥಾನಿರೂಪಣ ಶೈಲಿಯಲ್ಲಿ ಇದರ ಮೂಲವಡಗಿದೆ ಎಂದು ನನ್ನ ಒಳದನಿ.

ಇದನ್ನು ಸಮರ್ಥಿಸುವಂತೆ, ಇತ್ತೀಚೆಗೆ ನಿಧನರಾದ ಖ್ಯಾತ ವಿದ್ವಾಂಸ ಗಿರಡ್ಡಿ ಗೋವಿಂದರಾಜ ಅವರ ವಚನವಿನ್ಯಾಸ ಎಂಬ ಕಿರುಹೊತ್ತಿಗೆಯನ್ನು ಓದಬಹುದು. ಇದರಲ್ಲಿ ಶ್ರೀಯುತರು, ಕೆಲವು ವಚನಗಳಲ್ಲಿ ನಾವು ಇದುವರೆಗೆ ಗಮನಿಸದ, ಮುಖ್ಯವಾಹಿನಿ ಕಾವ್ಯಪರಂಪರೆಯಲ್ಲಿ ಬಳಕೆಯಲ್ಲಿಲ್ಲದ ಒಂದು ಲಯವನ್ನು ಗುರುತಿಸಿದ್ದಾರೆ. ಇವುಗಳನ್ನು ಈ ಅಜ್ಞಾತ ಛಂದಸ್ಸಿನ ಅನುಗುಣವಾಗಿ ಹಾಡಿಕೊಳ್ಳುವ ಒಂದು ಶೈಲಿ ಇದ್ದಿರಲೇ ಬೇಕೆಂಬುದು ಅವರ ಅಭಿಪ್ರಾಯವೂ ಸಹ ಆಗಿದೆ.
[(ವಚನವಿನ್ಯಾಸ) Navakarnataka Publications Pvt.Ltd., Bangalore]

ಇದಲ್ಲದೆ, ವಚನಗಳ ಸಂಗೀತ ಸಂಬಂಧಿ ಸಂಶೋಧನೆಗಳನ್ನು ಕೈಗೊಂಡ ಫ.ಗು. ಹಳಕಟ್ಟಿ ಮತ್ತು ಶ್ರೀಮತಿ ಸರ್ವಮಂಗಳಾ ಶಂಕರ್ ಅವರ ಅಧ್ಯಯನಗಳೂ ಸಹ ಈ ನಿಟ್ಟಿನಲ್ಲಿ ಬಹಳ ಬೆಳಕು ಚೆಲ್ಲಿವೆ.

ಆಕರ : ಸಂಶೋಧನಾ ಪ್ರಬಂಧ: ವಚನಗಾಯನ ಪರಂಪರೆ; ಒಂದು ಸಂಗೀತಾತ್ಮಕ ಅಧ್ಯಯನ - ಡಾ. ಜಯದೇವಿ ಜಂಗಮಶೆಟ್ಟಿ (2013), ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಲಿಂಗಾಯತ ಹೆಸರುಗಳು. ಸ್ವರವಚನ ಪ್ರಾಕಾರ Next