Previous ಆಂಧ್ರದ ಆರಾಧ್ಯ ಜಂಗಮರ ಸವಾರಿ ಲಿಂಗಾಯತ-ವೀರಶೈವ ಒಂದೇ ಅಲ್ಲ Next

ಲಿಂಗಾಯತ ಮತ್ತು ವೀರಶೈವ

*

✍ ಡಾ. ಎಂ. ಎಂ. ಕಲಬುರ್ಗಿ.

ಲಿಂಗಾಯತ, ವೀರಶೈವ ಮತ್ತು ಡಾ. ಎಂ. ಚಿದಾನಂದಮೂರ್ತಿ

ವೀರಶೈವರ ಪರವಾಗಿ ಇತ್ತೀಚೆ ಮತ್ತೆ ಮತ್ತೆ ವಾದಿಸುತ್ತಿರುವ ಎಂ. ಚಿದಾನಂದಮೂರ್ತಿ ಅವರು ಗದಗ-ಚಿತ್ರದುರ್ಗ ಶ್ರೀಗಳು 'ವೀರಶೈವ' ಪದವನ್ನು ಬಳಸಬೇಕೆಂದು ದಿನಪತ್ರಿಕೆಗಳಲ್ಲಿ ಬರೆದು ಈ ಶಬ್ದಪರ ಮಾತನಾಡಿದ್ದಾರೆ. ಲಿಂಗಾಯತ (ಲಿಂಗವಂತ) ಬಳಸಬೇಕೆ? ವೀರಶೈವ ಬಳಸಬೇಕೆ? ಇದು ಬೇರೆ ಪ್ರಶ್ನೆ, ಇವುಗಳಲ್ಲಿ ಯಾವುದು ಪ್ರಾಚೀನ? ಎಂಬುದಕ್ಕೆ ಅವರು ಮೊದಲು ಉತ್ತರ ಕೊಡಬೇಕು. ೧೨ನೆಯ ಶತಮಾನದ ವಚನಗಳ ಷಟ್‌ಷ್ಥಲ ಕಟ್ಟುಗಳಲ್ಲಿ ತಪ್ಪಿಯೂ ಕಂಡುಬರದ 'ವೀರಶೈವ' ಶಬ್ದ ಹೆಚ್ಚಿನ ವಚನಗಳಲ್ಲಿ ಮಾತ್ರ ಏಕೆ ಸಿಗುತ್ತದೆ? ೧೩ನೆಯ ಶತಮಾನದ ಹರಿಹರ, ರಾಘವಾಂಕ, ಕೆರೆಯ ಪದ್ಮರಸರಲ್ಲಿ 'ವೀರಶೈವ' ಪದ ಒಮ್ಮೆಯೂ ಕಂಡುಬರುವುದಿಲ್ಲವೇಕೆ? ೧೪ನೆಯ ಶತಮಾನದ ಕನ್ನಡ ಬಸವಪುರಾಣದಲ್ಲಿ ಮೊದಲ ಸಲ ಅಧಿಕೃತವಾಗಿ ಕಾಣಿಸಿಕೊಳ್ಳುವ ಇದು, ಈ ಕೃತಿಗೆ ಮೂಲವಾಗಿರುವ ೧೩ನೆಯ ಶತಮಾನದ ತೆಲುಗು ಬಸವಪುರಾಣದಲ್ಲಿ ಏಕೆ ಕಾಣಿಸಿಕೊಳ್ಳುವುದಿಲ್ಲ? ಮೊದ ಮೊದಲು 'ವೀರಮಾಹೇಶ್ವರಾಚಾರ ಸಂಗ್ರಹ ಮೊದಲಾದ ಶೀರ್ಷಿಕೆಯ ಗ್ರಂಥಗಳು, ೧೫ನೆಯ ಶತಮಾನದ ಬಳಿಕ 'ವೀರಶೈವಾಮೃತ ಮಹಾಪುರಾಣ' ಮೊದಲಾದ ಶೀರ್ಷಿಕೆಯ ಗ್ರಂಥಗಳು ಹುಟ್ಟಿಕೊಂಡಿರುವುದು 'ವೀರಮಾಹೇಶ್ವರ' ಪ್ರಾಚೀನ 'ವೀರಶೈವ' ಆಧುನಿಕವೆಂಬುದನ್ನು ಸೂಚಿಸುವುದಿಲ್ಲವೆ? ನಾನು ಮೊದಲಿನಿಂದಲೂ ಕೇಳುತ್ತ ಬಂದ ಈ ನಾಲ್ಕು ಪ್ರಶ್ನೆಗಳಿಗೆ ಉತ್ತರ ಕೊಡದೆ, ಜಾಣತನದಿಂದ ಜಾರಿಕೊಂಡು ಕೃತಕ (ಹೆಚ್ಚಿನ) ವಚನ, ೧೫ನೆಯ ಶತಮಾನ ತರುವಾಯದ ಆಕರಗಳನ್ನು ಬಳಸಿ, ಜನರಿಗೆ ಅಡ್ಡದಾರಿ ತೋರಿಸುವುದು ಸಂಶೋಧನೆಯೇ?

೧೬ನೆಯ ಶತಮಾನದಷ್ಟು ಇತ್ತೀಚಿನವರಾದ ತೋಂಟದಾರ್ಯ, ಅವರ ಶಿಷ್ಯ ಮುರುಘಾಶಾಂತವೀರರು “ವೀರಶೈವ” ಪದ ಬಳಸಿದ್ದಾರೆ ಎನ್ನುವುದು, ಆರಂಭದ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ, ವೀರೇಂದ್ರ ಪಾಟೀಲರು 'ಮೈಸೂರು ರಾಜ್ಯ' ಪದ ಬಳಸಿರುವುದರಿಂದ ಈ ರಾಜ್ಯಕ್ಕೆ ಆ ಹೆಸರನ್ನು ಈಗಲೂ ಬಳಸಬಹುದು ಎಂದಂತಾಗುತ್ತದೆ. ೧೭೨೦ ರಲ್ಲಿ ಬರೆದ 'ಶಿವಾಜಿ ಮಲ್ಲಮ್ಮಾಜಿ ಸಮಾರೋತ್ಸವ ಕೃತಿಯಲ್ಲಿ ಬೆಳವಡಿ ಮಲ್ಲಮ್ಮನ ಮದುವೆಗೆ ಬಂದಿದ್ದ ಪಂಚಸಿಂಹಾಸನಾಧೀಶ್ವರರನ್ನು “ಲಿಂಗಾಯತಧರ್ಮ'ದವರೆಂದು ಕರೆದುದನ್ನು ಡಾ. ಮೂರ್ತಿ ಎತ್ತಿ ಹೇಳಿದ್ದಾರೆ. ಆದರೆ ೩೦ ಪುಟಗಳ ಈ ಸಣ್ಣ ಕೃತಿಯಲ್ಲಿ ೯ ಸಲ 'ಲಿಂಗಾಯತ' ಪದ ಬಳಸಲಾಗಿದೆಯೇ ಹೊರತು, ಒಮ್ಮೆಯೂ 'ವೀರಶೈವ' ಪದ ಬಳಸಿಲ್ಲ. ಇದರಿಂದ ಕರ್ನಾಟಕದ ಲಿಂಗಾಯತರಲ್ಲಿ ಸೇರಿಕೊಂಡ ಆಂಧ್ರದ ಆರಾಧ್ಯ ಜಂಗಮರ ಗುರುಗಳಾದ ಪಂಚಾಚಾರ್ಯರನ್ನು ಬೆಳವಡಿ ಮಲ್ಲಮ್ಮನ ಮದುವೆಯವರೆಗೂ ಲಿಂಗಾಯತರೆಂದೇ ಕರೆಯುತ್ತಿದ್ದರೆಂದು ಸ್ಪಷ್ಟವಾಗುತ್ತದೆ.

ಇನ್ನೂ ಮುಂದುವರಿದು ಹೇಳುವುದಾದರೆ ಆಂಧ್ರಪ್ರದೇಶದಿಂದ ದಕ್ಷಿಣ ಕರ್ನಾಟಕಕ್ಕೆ ಬಂದ ಈ (ಆರಾಧ್ಯ) ಜಂಗಮರ ಪ್ರಭಾವಕ್ಕೆ ಉತ್ತರ ಕರ್ನಾಟಕದ (ಶರಣ) ಜಂಗಮರು ಒಳಗಾಗಿ, ತಮ್ಮ ಶರಣತತ್ವ ಆಚರಣೆಗೆ ಬದಲು ಆರಾಧ್ಯರ ತತ್ವ-ಆಚರಣೆಗಳನ್ನು ನಂಬುವ, ಅವರ ಜಗದ್ಗುರುಗಳನ್ನು ತಮ್ಮ ಜಗದ್ಗುರುಗಳೆಂದು ಒಪ್ಪಿಕೊಳ್ಳುವ, ಧರ್ಮಕ್ಕೆ ಅವರು ಬಳಸಿದ 'ವೀರಶೈವ' ಪದವನ್ನು ಸ್ವೀಕರಿಸುವ ತಪ್ಪು ಮಾಡಿದರು. ಸಿರಸಂಗಿ ಲಿಂಗರಾಜರು, ಹಾನಗಲ್ಲ ಕುಮಾರಸ್ವಾಮಿಗಳು, ಅರಟಾಳ ರುದ್ರಗೌಡರು, ವಾರದ ಮಲ್ಲಪ್ಪನವರಂಥ ಅಂದಿನ ಸಮಾಜದ ಹಿರಿಯರು ಅವರ ಮಾತಿಗೆ ಮೋಸ ಹೋಗಿ 'ವೀರಶೈವ ಮಹಾಸಭಾ' 'ವೀರಶೈವ ಸಂಸ್ಕೃತ ಪಾಠಶಾಲೆ' ಇತ್ಯಾದಿ ಹೆಸರುಗಳ ಸಂಸ್ಥೆಗಳನ್ನು ಸ್ಥಾಪಿಸುತ್ತ ನಡೆದರು. ಸಾಲದುದಕ್ಕೆ ಕರ್ನಾಟಕದ ಲಿಂಗಾಯತರನ್ನು ಆಂಧ್ರದ ವೀರಶೈವರು ಆಳುವುದಕ್ಕೆ ಪೂರಕವಾದ ಸಾಹಿತ್ಯವನ್ನು ಮಠಗಳಲ್ಲಿ ತಳವೂರಿದ್ದ ಶಾಸ್ತ್ರಿಗಳು, ವಿದ್ಯಾ ಸಂಸ್ಥೆಗಳಲ್ಲಿ ನೆಲೆ ನಿಂತಿದ್ದ ಅಧ್ಯಾಪಕರೂ ಸೃಷ್ಟಿಸುತ್ತ ಬಂದರು. ಇದರ ಜೊತೆಗೆ ಬೆಂಗಳೂರಿನಲ್ಲಿ ಸ್ಥಾಪಿಸಿದ್ದ (೧೯೦೫) ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಹೆಸರನ್ನು ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯೆಂದು, ಸೊಲ್ಲಾಪುರದಲ್ಲಿ ಸ್ಥಾಪಿಸಿದ್ದ (೧೯೦೭) “ಲಿಂಗಾಯತ ಅಸೋಸಿಯೇಶನ್ ಹೆಸರನ್ನು 'ವೀರಶೈವ ಮಹಾಜನ ಸಭೆ' ಎಂದು ಆರಾಧ್ಯದಿಂದ ಪ್ರಭಾವಿತರಾದವರು ಬದಲಿಸಿದರು. ಲಿಂಗಾಯತವನ್ನು ಕೆಡಹುವ, 'ವೀರಶೈವ'ವನ್ನು ಕಟ್ಟುವ ಇಂಥ ಉಪಕ್ರಮಗಳಿಂದಾಗಿ ಜಗತ್ತಿಗೆ ಕನ್ನಡಿಗರ ಕೊಡುಗೆಯಾದ 'ಶರಣ ಸಂಸ್ಕೃತಿ' ಆಂಧ್ರದ ಆರಾಧ್ಯರ ಮುಷ್ಟಿಯಲ್ಲಿ ನರಳುತ್ತ ಬಂದಿತು.

ಗ್ರಂಥ ಋಣ: ಸಂಯಕ್ತ ಕರ್ನಾಟಕ(ದಿನಪತ್ರಿಕೆ), ೧೭-೭-೨೦೦೯

*
ಪರಿವಿಡಿ (index)
Previous ಆಂಧ್ರದ ಆರಾಧ್ಯ ಜಂಗಮರ ಸವಾರಿ ಲಿಂಗಾಯತ-ವೀರಶೈವ ಒಂದೇ ಅಲ್ಲ Next