Previous ಶಿವನು ವೀರಶೈವ ಧರ್ಮವನ್ನು ಸ್ಥಾಪಿಸಿದನೆ? ಪಂಚಾಚಾರ್ಯರು ಅವತಾರ ಪುರುಷರೇ? Next

ಪಂಚಪೀಠಗಳು ಸ್ಥಾಪನೆಯಾದದ್ದು ಯಾವಾಗ?

*

✍ ಡಾ. ಎಸ್‌. ಎಂ. ಜಾಮದಾರ (ನಿವೃತ್ತ ಐಎಎಸ್ ಅಧಿಕಾರಿಗಳು)

ಪಂಚಪೀಠಗಳು ಸ್ಥಾಪನೆಯಾದದ್ದು ಯಾವಾಗ?

ತಮ್ಮ ಧರ್ಮಸ್ಥಾಪನೆಯಾದದ್ದು ಕೃತಯುಗದಲ್ಲಿ ಎನ್ನುವ ಪಂಚಾಚಾರ್ಯರ ಹೇಳಿಕೆಯನ್ನು ನಾವು ನಂಬಿದರೆ, ವೀರಶೈವ ಧರ್ಮದ ಸ್ಥಾಪನೆಯಾಗಿ ೩೮ ಲಕ್ಷದ ೯೩ ಸಾವಿರ ವರ್ಷಗಳಾಗಿವೆ ಎಂದು ನಂಬಬೇಕಾಗುತ್ತದೆ. ರಾಮಾಯಣ ನಡೆದದ್ದು ತ್ರೇತಾಯುಗದಲ್ಲಿ, ಮಹಾಭಾರತ ನಡೆದದ್ದು ದ್ವಾಪರಯುಗದಲ್ಲಿ ಎನ್ನುವುದನ್ನು ನಂಬಿದರೆ ಪಂಚಾಚಾರ್ಯರ ಹೇಳಿಕೆಯನ್ನೂ ನಂಬಬೇಕಾಗುತ್ತದೆ. ಅವೂ ಪುರಾಣಗಳೇ. ಇವರೂ ಪೌರಾಣಿಕರೇ.

ದುರಾದೃಷ್ಟವಶಾತ್, ಇತಿಹಾಸಕಾರರು ಅತಿರೇಕದ ಧರ್ಮನಿಷ್ಠರನ್ನು ಒಪ್ಪುವುದಿಲ್ಲ. ಇತಿಹಾಸಕಾರರ ಪ್ರಕಾರ ರಾಮಾಯಣ ಮತ್ತು ಮಹಾಭಾರತಗಳು ಆರ್ಯಪುರಾಣಗಳಾಗಿದ್ದು, ಸುಮಾರು ೪೦೦೦-೫೦೦೦ ವರ್ಷಗಳಷ್ಟು ಹಳೆಯವು. (ರೊಮಿಲಾ ಥಾಪರ್-ಪ್ರಾಚೀನ ಭಾರತೀಯರು). ಜೊತೆಗೆ ವಿಕಾಸವಾದದ ಜೀವಶಾಸ್ತ್ರಜ್ಞರು ಮಾನವ ಮತ್ತು ಮಾನವ ಸಮಾಜ ಇಂದಿನ ರೂಪವನ್ನು ತಾಳಿ ೪೦ ಸಾವಿರ ವರ್ಷಗಳಿಗೂ ಕಡಮೆ ಇರಬಹುದು ಎನ್ನುತ್ತಾರೆ. (ಹರಾರಿ-೨೦೧೫) ಅಂದರೆ ಮಾನವ ಜೀವಿಗಳ ಮಾನವ ಸಮಾಜ ಜಗತ್ತಿನಲ್ಲಿ ಪೂರ್ಣ ವಿಕಾಸಗೊಳ್ಳುವ ಮುನ್ನವೇ ರೇಣುಕನು ತನ್ನ ವೀರಶೈವ ಧರ್ಮವನ್ನು ಸ್ಥಾಪಿಸಿದ ಎಂದಾಗುತ್ತದೆ.

ಅಷ್ಟೇ ಅಲ್ಲದೆ, ಪ್ರಾಚ್ಯವಸ್ತು ತಜ್ಞರಿಗೆ ಹರಪ್ಪಾ ಭೂಶೋಧನೆಯಲ್ಲಿ (ಮಾರ್ಷೆಲ್-೧೯೩೨) ವನ್ಯಮೃಗಗಳ ಮಧ್ಯೆ ಕುಳಿತಿರುವ ದೈವರೂಪದ ಒಂದು ಮೂರ್ತಿ ದೊರಕಿದೆ. ಅದು ಅತ್ಯಂತ ಪ್ರಾಚೀನ ಶೈವಪಂಥವಾದ ಪಾಶುಪತ ಶೈವದ ಕುರುಹೇ ಹೊರತು ವೀರಶೈವ ಧರ್ಮದ ಕುರುಹಲ್ಲ. ವೀರಶೈವರು ಬಹಳ ನಂತರದಲ್ಲಿ ಕೆಲವು ಪಾಶುಪತ ತತ್ತ್ವಗಳನ್ನು ಅನುಕರಿಸಿದರು. ಆದರೆ, ಹರಪ್ಪಾ ಶೋಧಗಳನ್ನು ತಮಗೆ ಸಂಬಂಧಿಸಿದವೆಂದು ವಾದಿಸುತ್ತಾರೆ. ಅವರ ವಾದ ಸರಿ ಎಂದು ಒಪ್ಪಿದರೂ, ಹರಪ್ಪಾ ನಾಗರಿಕತೆ ಕೇವಲ ಐದರಿಂದ ಆರು ಸಾವಿರ ವರ್ಷಗಳ ಕಾಲದ್ದು; ವೀರಶೈವರು ತಮ್ಮ ಧರ್ಮದ ಬಗೆಗೆ ಹೇಳಿಕೊಳ್ಳುವಂತೆ ಅನೇಕ ಲಕ್ಷ ವರ್ಷಗಳದ್ದಲ್ಲ. ಸೋಜಿಗದ ಸಂಗತಿ ಎಂದರೆ, ಐವರು ಪಂಚಾಚಾರ್ಯರುಗಳಲ್ಲಿ ಈಗಿರುವ ಯಾರೊಬ್ಬರೂ ವಿಶ್ವಾಸಾರ್ಹ ಸಾಕ್ಷಾಧಾರದ ಮೇಲೆ ತಮ್ಮ ಪೀಠಗಳ ಅಧಿಕೃತ ಚರಿತ್ರೆಯನ್ನು ಬರೆಯಿಸದಿರುವುದು. ಸ್ವತಃ ಜಂಗಮ ವರ್ಗಕ್ಕೆ ಸೇರಿದ ಡಾ. ಎಸ್.ಸಿ. ನಂದೀಮಠ ಅವರು ೧೯೨೮ರಷ್ಟು ಹಿಂದೆಯೇ ತಮ್ಮ 'ವೀರಶೈವ ಕೈಪಿಡಿ' ಕೃತಿಯಲ್ಲಿ
“ಈ ಪೀಠಗಳು ತಮ್ಮ ಅಧಿಕೃತ ಚರಿತ್ರೆಯನ್ನು ಬರೆಯಿಸುವ ತನಕ, ಅವುಗಳ ಸ್ಥಾನವು ಮಸುಕಾಗಿ ಮತ್ತು ಸಂಶಯಗ್ರಸ್ತವಾಗಿಯೇ ಉಳಿಯುತ್ತದೆ” ಎಂದಿದ್ದಾರೆ. “ಈಚೆಗೆ ಪ್ರತಿಯೊಂದು ಪಂಚಪೀಠವೂ ವಿಶ್ವಾಸಾರ್ಹವಲ್ಲದ ಪರಂಪರಾನುಕ್ರಮವನ್ನು ಬರೆಯಿಸುವ ಪ್ರಯತ್ನದಲ್ಲಿ ಬಿಡುವಿಲ್ಲದಂತೆ ತೊಡಗಿಕೊಂಡಿದೆ.....” ಎಂದು ಬಿಜ್ಜರಗಿ ಅವರು ಹೇಳುತ್ತಾರೆ (ಚಂದ್ರಶೇಖರ ಸ್ವಾಮೀಜಿ, ೧೯೮೮)?

ಡಾ. ಎಂ.ಎಂ. ಕಲಬುರ್ಗಿ ಅವರಂತಹ ಹಿರಿಯ ಸಂಶೋಧಕರು, “ವಿಜಯನಗರ ಕಾಲದ ಸುಮಾರಿನಲ್ಲಿ ವೀರಶೈವ ಪಂಚಪೀಠಗಳು ಒಂದೊಂದಾಗಿ ಅಸ್ತಿತ್ವಕ್ಕೆ ಬಂದವು” ಎಂದಿದ್ದಾರೆ. “೧೬ನೆಯ ಶತಮಾನಕ್ಕೆ ಮುನ್ನ ಸಾಹಿತ್ಯದಲ್ಲಿ ಎಲ್ಲೂ ಪಂಚಾಚಾರ್ಯರ ಬಗೆಗೆ ಪ್ರಸ್ತಾಪವಿಲ್ಲ” ಎಂದೂ ಅವರು ಹೇಳಿದ್ದಾರೆ. (ಮಾರ್ಗ-೪, ಪು. ೨೬೨) ಇನ್ನೋರ್ವ ಹಿರಿಯ ಸಂಶೋಧಕರಾದ ಡಾ. ಎಚ್. ತಿಪ್ಪೇರುದ್ರಸ್ವಾಮಿ ಅವರೂ ಕಲ್ಬುರ್ಗಿ ಅವರ ಅಭಿಪ್ರಾಯವನ್ನು ಒಪ್ಪಿದ್ದಾರೆ (೨೦೧೫, ಪು. ೩೫೬-೩೫೭).

ವೀರಶೈವ ಗ್ರಂಥಗಳ ಪ್ರಕಾರ, ಐದು ಜನ ಆಚಾರ್ಯರುಗಳಲ್ಲಿ ರೇವಣಸಿದ್ದನು ಹಿರಿಯನು ಅಥವಾ ಮುಂಚಿನವನು. ಆದ್ದರಿಂದಲೇ ವೀರಶೈವದ ಪವಿತ್ರ ಗ್ರಂಥವೆನಿಸಿರುವ 'ಸಿದ್ಧಾಂತ ಶಿಖಾಮಣಿ'ಯು ರೇಣುಕ ಅಥವಾ ರೇವಣಸಿದ್ದನು ವೀರಶೈವ ಧರ್ಮಸ್ಥಾಪಕ ಎಂದು ಹೇಳುತ್ತದೆ. ಆದರೆ ಉಳಿದ ಪೀಠಗಳು (ಕೇದಾರ, ಕಾಶಿ, ಉಜ್ಜಿನಿ ಮತ್ತು ಶ್ರೀಶೈಲ) ವೀರಶೈವ ಆಚಾರ್ಯರ ಬಗೆಗೆ ಬಾಳೇಹಳ್ಳಿ (ರಂಭಾಪುರಿ) ಪೀಠದ ನಿಲುವನ್ನು ಪ್ರಶ್ನಿಸುತ್ತವೆ. ಆದರೆ ಅವರಿಗೆ ಆಧಾರದ ಕೊರತೆಯಿದೆ.

ಈ ನಾಲ್ಕೂ ಪೀಠಗಳ ಆಚಾರ್ಯರುಗಳು ಸುಪ್ರಭೇದಾಗಮ ಮತ್ತು ಸ್ವಯಂಭು ಆಗಮಗಳ ಎರಡು ಶ್ಲೋಕಗಳನ್ನು ಅವಲಂಬಿಸುತ್ತಾರೆ. ಆ ಶ್ಲೋಕಗಳು ಹೆಸರಿಸಿರುವ ಐದು ಆಚಾರ್ಯರುಗಳು ವೀರಶೈವ ಧರ್ಮವನ್ನು ಸ್ಥಾಪಿಸಿದರು ಎಂದು ದೃಢಪಡಿಸುತ್ತವೆ. ಆದರೆ, ನಂತರ ಬಂದ ಆ ಆಗಮಗಳ ಅಧಿಕೃತತೆಯನ್ನೇ ಅನುಮಾನಿಸಲಾಗಿದೆ. (ಚನ್ನಮಲ್ಲಿಕಾರ್ಜುನ, ೧೯೫೮)
ಉಲ್ಲೇಖಿತ ಎರಡು ಆಗಮಗಳು ಕಾಶೀಪೀಠವನ್ನು ಹೆಸರಿಸುವುದರಿಂದ ಉತ್ತರ ಸುಪ್ರಭೇದಾಗಮ ಮತ್ತು ಉತ್ತರ ಸ್ವಯಂಭು ಆಗಮಗಳು ಮತ್ತು ವೀರಲಿಂಗೋಪನಿಷತ್ತು ಗ್ರಂಥಗಳು ೧೮ನೆಯ ಶತಮಾನದ ಸುಮಾರಿನಲ್ಲಿ ರಚನೆಯಾಗಿವೆ. ಸಿದ್ಧಾಂತ ಶಿಖಾಮಣಿಯ ರಚನೆಯಾಗಿರುವುದು ೧೫ನೆಯ ಶತಮಾನದಲ್ಲಿ. ಈ ಲೆಕ್ಕದಲ್ಲಿ ಸಿದ್ಧಾಂತ ಶಿಖಾಮಣಿಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ.

ಮತ್ತೋರ್ವ ವೀರಶೈವ ಸಂಶೋಧಕರಾದ (ಜಂಗಮ ವರ್ಗಕ್ಕೆ ಸೇರಿದ) ಡಾ. ಎಂ. ಚಿದಾನಂದಮೂರ್ತಿ ಅವರು ಚಾರಿತ್ರಿಕವಾಗಿ ನಾಲ್ಕು ಜನ ಆಚಾರ್ಯರುಗಳು ೧೨ನೆಯ ಶತಮಾನದಲ್ಲಿ ಬಸವಣ್ಣನವರ ಸಮಕಾಲೀನರಾಗಿದ್ದ ಏಕಾಂತದ ರಾಮಯ್ಯ, ಮರುಳಸಿದ್ಧ, ಮಲ್ಲಿಕಾರ್ಜುನ ಪಂಡಿತ ಮತ್ತು ರೇವಣಸಿದ್ದರಲ್ಲದೆ ಬೇರೆ ಯಾರೂ ಅಲ್ಲವೆಂದು ಖಚಿತವಾಗಿ ಹೇಳಿದ್ದಾರೆ. ಆ ನಾಲ್ಕು ಜನರೂ ಯಾವುದೇ ಹೊಸ ಧರ್ಮವನ್ನು ಸ್ಥಾಪಿಸಿಲ್ಲ ಮತ್ತು ಐದನೆಯ ಆಚಾರ್ಯರು ಆಗ ಅಸ್ತಿತ್ವದಲ್ಲೇ ಇರಲಿಲ್ಲ ಎಂದಿದ್ದಾರೆ (ಸಾಧನೆ: ೧೮, ೩-೪, ಮ, ೮೮-೧೧೧). ಬಹಳ ನಂತರದ ಕಾಲದಲ್ಲಿ ಆ ಶರಣರ ಹೆಸರುಗಳನ್ನು ಏಕೋರಾಮಾರಾಧ್ಯ, ಮರುಳಾರಾಧ್ಯ, ಪಂಡಿತಾರಾಧ್ಯ ಮತ್ತು ರೇಣುಕಾರಾಧ್ಯ ಎಂದು ತಿರುಚಲಾಗಿದೆ ಎನ್ನುವ ಚಿದಾನಂದಮೂರ್ತಿ ಅವರು ಐದನೆಯ ಪೀಠವು (ಕಾಶಿ) ಈಚೆಗೆ ಸೃಷ್ಟಿಯಾದದ್ದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಮಧ್ಯಯುಗದ ಮೂರು ಶಾಸನಗಳ (ಕ್ರಿ.ಶ. ೧೪೩೫ರ ಸೊರಬ ತಾಲ್ಲೂಕಿನ ಹಿರೇಆವಲಹಳ್ಳಿ ಶಾಸನ, ಕ್ರಿ.ಶ. ೧೫೬೯ರ ಬಾಳೆಹಳ್ಳಿ ಮಠದ ಶಾಸನ ಮತ್ತು ಧರ್ಮಸ್ಥಳದ ಮಂಜೂಷಾ ವಸ್ತುಸಂಗ್ರಹಾಲಯದಲ್ಲಿರುವ ಕ್ರಿಶ. ೧೫೭೪ರ ತಾಮ್ರ ಶಾಸನ) ಅಧ್ಯಯನದ ಆಧಾರದ ಮೇಲೆ, 'ಬಾಳೆಹೊನ್ನೂರಿನ ಪ್ರಥಮ ರೇಣುಕಾರಾಧ್ಯ ರಂಭಾಪುರಿ ಪೀಠವನ್ನು ಕ್ರಿ.ಶ. ೧೪೩೫ರಲ್ಲಿ ದಿಗಂಬರ ಮುಕ್ತಿಮುನಿ ಎಂಬುವರು ಸ್ಥಾಪಿಸಿದರು' ಎಂದು ಡಾ. ಎಂ.ಎಂ. ಕಲಬುರ್ಗಿ ಅವರು ಪ್ರತಿಪಾದಿಸಿ, ಉಳಿದ ನಾಲ್ಕು ಪೀಠಗಳೂ ಅದರ ನಂತರ ಸ್ಥಾಪಿತವಾದವು ಎಂದು ಹೇಳಿದ್ದಾರೆ. (ಮಾರ್ಗ-೪; ಕಲಬುರ್ಗಿ ಸಂಶೋಧನ ಸಾಹಿತ್ಯ ವೀರಣ್ಣ ದಂಡೆ, ೨೦೧೬, ಪು. ೨೭೪-೨೭೬)

ಇದುವರೆಗಿನ ವಿಶ್ಲೇಷಣೆಯನ್ನು ಆಧರಿಸಿ ಹೇಳುವುದಾದರೆ, ಆರಂಭದಲ್ಲಿ ಶರಣಪರಂಪರೆಯ ಒಂದು ಮಠವಾಗಿದ್ದ ರಂಭಾಪುರಿ ಮಠವು ೧೫ನೆಯ ಶತಮಾನದ ಉತ್ತರಾರ್ಧದ ಸುಮಾರಿನಲ್ಲಿ ಅಸ್ತಿತ್ವಕ್ಕೆ ಬಂದಿತೆಂಬ ನಿರ್ಧಾರಕ್ಕೆ ಬರಬಹುದು. ಉಳಿದ ನಾಲ್ಕೂ ಮಠಗಳು ನಂತರ ಸ್ಥಾಪಿಸಲ್ಪಟ್ಟವು. ಒಟ್ಟಾರೆ ಮುಂಚೆಯೇ ಹೇಳಿರುವಂತೆ ೧೮ ಅಥವಾ ೧೯ನೆಯ ಶತಮಾನದಲ್ಲಿ ಸ್ಥಾಪನೆಗೊಂಡ ಕಾಶಿ ಮಠವು ಕೊನೆಯದು.

ಗ್ರಂಥ ಋಣ:
1) ವೀರಶೈವ ಪಂಚಾಚಾರ್ಯ ಮಿಥ್ಯ ಮತ್ತು ಸತ್ಯ; ಲೇಖಕರು: ಡಾ. ಎಸ್‌. ಎಂ. ಜಾಮದಾರ, ಅನುವಾದಕರು: ಡಾ. ಗೊ. ರು. ಚನ್ನಬಸಪ್ಪ. ೨೦೨೦. Published by: Jagathika Lingayat Mahasabha, No 53 2nd Main Road, 3rd cross, Chakravarrthi Layout, Palace road, Bangalore-560020.

ಪರಿವಿಡಿ (index)
Previous ಶಿವನು ವೀರಶೈವ ಧರ್ಮವನ್ನು ಸ್ಥಾಪಿಸಿದನೆ? ಪಂಚಾಚಾರ್ಯರು ಅವತಾರ ಪುರುಷರೇ? Next