Previous ಲಿಂಗಾಯತರಲ್ಲಿ ಮತಾಂತರ ವಿಶ್ಲೇಷಣೆ - ಶಿವದಾಸ ಗೀತಾಂಜಲಿ Next

ವೀರಶೈವ ಧರ್ಮವು ೧೨ನೇಯ ಶತಮಾನಕ್ಕಿಂತ ಮುಂಚೆ ಆಸ್ತಿತ್ವದಲ್ಲಿತ್ತೆ?

*

ಡಾ. ಎಸ್‌. ಎಂ. ಜಾಮದಾರ (ನಿವೃತ್ತ ಐಎಎಸ್ ಅಧಿಕಾರಿಗಳು)

ಪೀಠಿಕೆ

ವೀರಶೈವವು ಒಂದು ಪ್ರಾಚೀನ ಧರ್ಮವೆಂದು ಪಂಚಾಚಾರ್ಯರು ಯಾವಾಗಲೂ ಮತ್ತೆ ಮತ್ತೆ ಹೇಳುತ್ತಲೇ ಬಂದಿದ್ದಾರೆ. ಅವರ ಧರ್ಮವು ಎಷ್ಟು ಪ್ರಾಚೀನ ಎಂಬುದಕ್ಕೆ ಅನೇಕ ಪ್ರಶ್ನೆಗಳಿವೆ. 'ಪ್ರಾಚೀನ' ಎನ್ನುವುದು, ಅದನ್ನು ಹೋಲಿಸುವ ಕಾಲವನ್ನು ಅವಲಂಬಿಸಿರುವ ಒಂದು ಸಾಪೇಕ್ಷ ಶಬ್ದ. ಏನೇ ಇದ್ದರೂ, ಪ್ರಾಚೀನ ಸ್ಮಾರಕಗಳ ಕಾನೂನು ಪ್ರಕಾರ, ಒಂದು ನೂರು ವರ್ಷಗಳಿಗಿಂತ ಹೆಚ್ಚಾಗಿರುವುದು 'ಪ್ರಾಚೀನ ಎನಿಸಿಕೊಳ್ಳುತ್ತದೆ. ಅತ್ಯಂತ ಸರಳವಾದ ಕಾನೂನು ಭಾಷೆಯಲ್ಲಿ ವೀರಶೈವವನ್ನು “ನೂರು ವರ್ಷಗಳಿಗಿಂತ ಹಿಂದಿನದು' ಎನ್ನುವುದಕ್ಕೆ ಯಾವುದೇ ಸಂಶಯವಿಲ್ಲ!
ಆದರೆ ಅದು ಅಷ್ಟು ಸರಳವಾಗಿಲ್ಲ. ಪಂಚಾಚಾರ್ಯರು ತಮ್ಮ ವೀರಶೈವವು ವೇದಗಳಷ್ಟು ಹಳೆಯದು, ಸೃಷ್ಟಿಯಷ್ಟು ಹಳೆಯದು, ಸೃಷ್ಟಿಕರ್ತ ಶಿವನಷ್ಟೇ ಹಳೆಯದು ಎಂದು ಸಾಧಿಸುತ್ತಾರೆ. (ಎಲ್. ಬಸವರಾಜು, ಶಿವದಾಸ ಗೀತಾಂಜಲಿ, ೧೯೬೩, ಜಗದ್ಗುರು ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು.)

ಸ್ಥಾಪಕರು ಯಾರು?

ವೀರಶೈವರ ಪವಿತ್ರ ಧರ್ಮಗ್ರಂಥವೆನ್ನುವ 'ಸಿದ್ಧಾಂತ ಶಿಖಾಮಣಿ' ತನ್ನನ್ನು ಪ್ರಪ್ರಥಮವಾಗಿ, ಶಿವನು ತನ್ನ ಸತಿ ಪಾರ್ವತಿ ಮತ್ತು ಪುತ್ರನಾದ ಷಣ್ಮುಖನಿಗೆ ಬೋಧಿಸಿದ ಎಂದು ಹೇಳಿಕೊಳ್ಳುತ್ತದೆ. (ಶ್ಲೋಕ ೪-೪೨ ಮತ್ತು ೫-೧೪). ಅದೇ ಸಿದ್ಧಾಂತ ಸಿಖಾಮಣಿ 'ರೇಣುಕರು ವೀರಶೈವ ಧರ್ಮವನ್ನು ನೋಡಿಕೊಳ್ಳಲು ಭೂಲೋಕಕ್ಕೆ ಅವತರಿಸಿದರು' ಎನ್ನುತ್ತದೆ. (ಶ್ಲೋಕ ೪-೧೨, ಪಾಲಕಾಃ)'. ಅದರಂತೆ ರೇಣುಕನು ಸಹಜವಾಗಿಯೇ ವೀರಶೈವ ಧರ್ಮದ ವ್ಯವಸ್ಥಾಪಕ (ಶ್ಲೋಕ ೪-೮) ಮತ್ತು ಸಂರಕ್ಷಕನೇ ಹೊರತು, ಅದರ ಸ್ಥಾಪಕನಲ್ಲ. ಏಕೆಂದರೆ, ಅದರ ಸ್ಥಾಪಕ ಶಿವನೇ ಆಗಿದ್ದಾನೆ.

ಆದರೆ ಸುಪ್ರಭೇದಾಗಮ ಮತ್ತು ಸ್ವಯಂಭು ಆಗಮಗಳು, ವೀರಶೈವ ಧರ್ಮದ ಮೇಲ್ವಿಚಾರಣೆ ಮತ್ತು ಸಂರಕ್ಷಣೆಗಾಗಿ ರೇಣುಕನಂತೆಯೇ ಕಲ್ಲಿನಲ್ಲಿ ಹುಟ್ಟಿದ ಇನ್ನೂ ನಾಲ್ಕು ಜನರನ್ನು ಸೇರಿಸುತ್ತವೆ. ಸುಪ್ರಭೇದಾಗಮವು ಐದು ಜನ ಆಚಾರ್ಯರು ನಾಲ್ಕು ಯುಗಗಳಲ್ಲಿ ಪ್ರತಿಯೊಂದು ಯುಗದಲ್ಲೂ ಬೇರೆ ಬೇರೆ ಹೆಸರುಗಳಲ್ಲಿ ಹುಟ್ಟಿದರೆಂದು ಹೇಳುತ್ತದೆ. ಕಲಿಯುಗದಲ್ಲಿ ಅವರು ರೇಣಾಕಾರಾಧ್ಯ, ಮರುಳಾರಾಧ್ಯ, ಏಕೋರಾಮಾರಾಧ್ಯ, ಪಂಡಿತಾರಾಧ್ಯ ಮತ್ತು ವಿಶ್ವಾರಾಧ್ಯ ಎಂದು ಪರಿಚಿತವಾಗಿದ್ದಾರೆ. ಆದರೆ 'ಸಿದ್ಧಾಂತ ಶಿಖಾಮಣಿ'ಯು ರೇಣುಕ ಅಥವಾ ರೇವಣಸಿದ್ಧನನ್ನು ಬಿಟ್ಟರೆ ಉಳಿದ ನಾಲ್ಕು ಜನರ ಬಗೆಗೆ ಅದು ಪ್ರಾಸಂಗಿಕವಾಗಿಯಾದರೂ ಏನೂ ಹೇಳುವುದಿಲ್ಲ. ಅಂದರೆ ಉಳಿದ ನಾಲ್ವರ ಗತಿ ಏನು?

ಯಾವಾಗ ಸ್ಥಾಪನೆಯಾಯಿತು?

ವೀರಶೈವ ಧರ್ಮವನ್ನು ಶಿವನು ಸ್ಥಾಪಿಸಿದ ಕಾರಣದಿಂದ ಶಿವನಷ್ಟೇ ವಯಸ್ಸಾಗಿದೆ ಎಂದು ಈ ಗ್ರಂಥಗಳು ಹೇಳುತ್ತವೆ. ಎರಡನೆಯದಾಗಿ, ಅದು ವಿಶ್ವದಷ್ಟು ಹಳೆಯದು. ಏಕೆಂದರೆ, ಅದು ಸ್ಥಾಪನೆಗೊಂಡದ್ದು ಕೃತಯುಗ ಎನ್ನುವ ಮೊದಲ ಯುಗದಲ್ಲಿ, ಕಾಲದ ಬಗೆಗಿನ ಪೌರಾಣಿಕ ಅಂದಾಜಿನ ಪ್ರಕಾರ, ಕೃತಯುಗವು ಆರಂಭವಾದದ್ದು ೪೩ ಲಕ್ಷದ ೨೦ ಸಾವಿರ ವರ್ಷಗಳ ಹಿಂದೆ. ಹಾಗಾಗಿ ಪಂಚಾಚಾರ್ಯರು ಹೇಳುವಂತೆ ವೀರಶೈವವು ೪೩ ಲಕ್ಷದ ೨೦ ಸಾವಿರ ವರ್ಷಗಳಷ್ಟು ಹಳೆಯದು!

ಮೇಲೆ ಪ್ರಸ್ತಾಪಿಸಿದ ಮೂರು ಗ್ರಂಥಗಳು ೧೫ ಮತ್ತು ೧೬ನೆಯ ಶತಮಾನಗಳ ಮಧ್ಯದ ಅವಧಿಯಲ್ಲಿ ರಚಿತವಾದವೆಂಬುದು ಈಗ ಸಾಬೀತಾಗಿದೆ. ಪಂಚಾಚಾರ್ಯರು ಅದನ್ನು ಪ್ರಾಚೀನದಿಂದ ಎನ್ನುವುದು ಬ್ರಾಹ್ಮಣೀಯ ಪ್ರಭಾವವಲ್ಲದೆ ಬೇರೆಯಲ್ಲ. ರಾಮಾಯಣವು ನಡೆದದ್ದು ತ್ರೇತಾಯುಗದಲ್ಲಿ (೨೬ ಲಕ್ಷ ವರ್ಷಗಳ ಹಿಂದೆ) ಮತ್ತು ಮಹಾಭಾರತ ನಡೆದದ್ದು ದ್ವಾಪರಯುಗದಲ್ಲಿ (೧೩ ಲಕ್ಷ ವರ್ಷಗಳ ಹಿಂದೆ) ಎನ್ನುವುದನ್ನು ನಾವು ನಂಬುವುದಾದರೆ, ವೀರಶೈವಕ್ಕೆ ೪೨ ಲಕ್ಷ ವರ್ಷಗಳಷ್ಟು ವಯಸ್ಸಾಗಿದೆ ಎನ್ನುವುದನ್ನೂ ನಂಬಬೇಕಾಗುತ್ತದೆ!

ದುರಾದೃಷ್ಟಕ್ಕೆ ಚರಿತ್ರಕಾರರು ಧರ್ಮನಿಷ್ಠರ ಲೆಕ್ಕಶಾಸ್ತ್ರವನ್ನು ಒಪ್ಪುವುದಿಲ್ಲ. ಚರಿತ್ರಕಾರರ ಪ್ರಕಾರ, ರಾಮಾಯಣ ಮತ್ತು ಮಹಾಭಾರತ ಪುರಾಣ ಕಾವ್ಯಗಳೇ ಸುಮಾರು ನಾಲೈದು ಸಾವಿರ ವರ್ಷಗಳಷ್ಟು ಹಿಂದಿನವು. ಏಕೆಂದರೆ, ಅವು ಆರ್ಯಪುರಾಣಗಳು (ಆರ್.ಸಿ. ಮಜುಮ್‌ದಾರ್ - ೧೯೭೭, ಹಿಸ್ಟರಿ ಅಂಡ್ ಕಲ್ಟರ್ ಆಫ್ ಇಂಡಿಯನ್ ಪೀಪಲ್ - ಭಾರತೀಯ ವಿದ್ಯಾಭವನ). ಆರ್ಯರ ವಲಸೆಯ ಸಿದ್ದಾಂತವು ತಪ್ಪು ಎಂದು ಯಾರಾದರೂ ಹೇಳಿದರೆ, ಅವರೇ ತಪ್ಪಾಗುತ್ತಾರೆ. ಹಾಗೆ ತಪ್ಪು ಎನ್ನುವವರು ಕೇವಲ ತಮ್ಮ ಶಕ್ತಿರಾಜಕೀಯದ ಮೂಲಕ ಮುಗ್ಧಜನರ ತಲೆಯಲ್ಲಿ ಅದನ್ನು ತುಂಬುತ್ತಿದ್ದಾರೆ. (ಟೋನಿ ಜೋಸೆಫ್ ಅವರ ಪುಸ್ತಕ “ಅರ್ಲಿ ಇಂಡಿಯನ್ಸ್ - ದ ಸ್ಟೋರಿ ಆಫ್ ಅವರ್‌ ಅನ್ವೆಸ್ಟರ್ ಎಂಡ್ ವೇರ್ ದೇ ಕೇಮ್ ಫ್ರಮ್); ವಸಂತ ಸಿಂಧೆ ಹಾಗೂ ನೀರಜರಾಯ್, (ರಾಖಿಗಢಿ - ಎ ಜೆನಿಟಿಕ್ ಸ್ಟಡಿ” – ೧೯೧೯) ಅವರು ಅದರ ವಿರುದ್ಧ ಅಭಿಪ್ರಾಯ ನೀಡಿದ್ದಾರೆ.

ಎರಡನೆಯದಾಗಿ, ವಿಕಾಸವಾದದ ಜೀವಿಶಾಸ್ತ್ರಜ್ಞರು ಆಧುನಿಕ ಮಾನವ ಮತ್ತು ಮಾನವ ಸಮಾಜ ವಿಕಾಸಗೊಂಡದ್ದೇ ೪೦ ಸಾವಿರ ವರ್ಷಗಳಿಂದ ಈಚೆಗೆ ಎಂದು ಹೇಳಿದ್ದಾರೆ. (ಹರಾರಿ - ೨೦೧೫). ಆಗ ಮಾನವನ ತಿಳಿವಳಿಕೆ ಪೂರ್ಣ ವಿಕಾಸಗೊಂಡಿರಲಿಲ್ಲ. ಹಾಗಾದರೆ, ರೇಣುಕರು ಮಾನವನ ಪ್ರಜ್ಞಾವಿಕಾಸವಾಗುವ ಮೊದಲು ವೀರಶೈವ ಧರ್ಮವನ್ನು ಬೋಧಿಸಿದ್ದು ಯಾರಿಗೆ? ಯಾವಾಗ? ಈ ಮಾತು ವೇದಗಳು ಮತ್ತು ಹಿಂದೂ ಧರ್ಮಕ್ಕೂ ಅನ್ವಯಿಸುತ್ತದೆ.

ಮೂರನೆಯದಾಗಿ, ವಿಶ್ವದಲ್ಲಿ ಮಾನವರೇ ಇಲ್ಲದಿದ್ದಾಗ ರೇಣುಕ ತನ್ನ ಧರ್ಮವನ್ನು ವನ್ಯಜೀವಿಗಳ ಪಾರ್ಕಿನಲ್ಲಿ ಪ್ರಾಣಿಗಳಿಗೆ ಬೋಧಿಸುತ್ತಿದ್ದರೇ? ಪ್ರಾಯಶಃ ಇದನ್ನು ನಂಬಬಹುದು. ಏಕೆಂದರೆ, ವೀರಶೈವರು ಪಶುಗಳ (ಪ್ರಾಣಿಗಳ) ದೇವರಾದ ಪಶುಪತಿಯನ್ನೇ ನಂಬುತ್ತಾರೆ!

ಅತ್ಯಂತ ವಿಚಿತ್ರವೆಂದರೆ, ಶಿವನೇ ಧರ್ಮವನ್ನು ಸ್ಥಾಪಿಸಿದ ಎನ್ನುವುದು. ವಿಶ್ವವನ್ನು ಸೃಷ್ಟಿಸಿದ ಶಿವ ವೀರಶೈವ ಧರ್ಮವನ್ನು ಮಾತ್ರ ಏಕೆ ಸ್ಥಾಪಿಸಿದ? ಕಾರಣ ತಿಳಿಯದು. ಆದರೆ ವಾಸ್ತವ ಸಂಗತಿಯೆಂದರೆ, ಹಿಂದಿನವಿರಲಿ, ಇಂದಿನವಿರಲಿ, ಎಲ್ಲ ಧರ್ಮಗಳೂ ಶುದ್ಧಾಂಗವಾಗಿ ಕೇವಲ ಮಾನವಸ್ಥಾಪಿತ ಸಂಸ್ಥೆಗಳಾಗಿವೆ. ಈ ಧರ್ಮಗಳನ್ನು ಸೃಷ್ಟಿಸಿದವರು ಇತಿಹಾಸದ ಮಹಾಪುರುಷರು. ಅಂತಹ ಧರ್ಮಸ್ಥಾಪಕರಲ್ಲಿ ಕೆಲವರು ತಾವು ದೇವದೂತರು ಅಥವಾ ದೇವರ ಪುತ್ರರು ಎಂದು ಹೇಳಿಕೊಂಡಿದ್ದಾರೆ.

ವಾಸ್ತವವಾಗಿ, ದೇವರಿಂದಲೇ ನೇರವಾಗಿ ಸ್ಥಾಪನೆಗೊಂಡ ಯಾವ ಧರ್ಮವೂ ಜಗತ್ತಿನಲ್ಲಿಲ್ಲ. ಜಗತ್ತಿನಲ್ಲಿ ಇರುವ ಪ್ರಮುಖ ಧರ್ಮಗಳ ಸ್ಥಾಪಕರು ಯಾರೆಂಬುದು ಪರ್ವವಿದಿತ. ಜೂಯಿಷ್ ಧರ್ಮವನ್ನು ಸ್ಥಾಪಿಸಿದವನು ಅಬ್ರಹಾಂ (ಕ್ರಿ.ಪೂ. ೨೦೦೦); ಅವನ ದೇವರು ಯಾವೋಹ (ಜೇವೊನ್ಹಾ), ಪಾರ್ಸಿ ಧರ್ಮಸ್ಥಾಪಕ ಜೊರಾಷ್ಟ್ರ (ಕ್ರಿ.ಪೂ. ೬೦೦); ಅವನ ದೇವರು ಅಹುರ್‌ಮು ಬೌದ್ಧಧರ್ಮ ಸ್ಥಾಪನೆಯಾಗಿದ್ದು ಗೌತಮ ಬುದ್ಧನಿಂದ (ಕ್ರಿ.ಪೂ. ೫೮೫); ಆದರೆ ಅವನಿಗೆ ದೇವರಿರಲಿಲ್ಲ. ಜೈನಧರ್ಮವನ್ನು ಪುನರುತ್ಥಾನಗೊಳಿಸಿದವನು ಮಹಾವೀರ (ಕ್ರಿ.ಪೂ. ೫೮೦). ಅವನಿಗೂ ದೇವರಿಲ್ಲ. ಕ್ರೈಸ್ತಧರ್ಮದ ಸ್ಥಾಪಕ ಏಸುಕ್ರಿಸ್ತ (೨೦೦೦ ವರ್ಷಗಳ ಹಿಂದೆ), ಯವೋಹಾ ಅವನ ದೇವರು. ಇಸ್ಲಾಮಿನ ಧರ್ಮಪಿತ ಪ್ರವಾದಿ ಮಹಮ್ಮದ್ ಪೈಗಂಬರ್ (ಕ್ರಿ.ಶ. ೨೨), ಅವನ ದೇವರು ಅಲ್ಲಾ, ಹಾಗೆಯೇ ಸಿಖ್ ಧರ್ಮಸ್ಥಾಪಕ ಗುರುನಾನಕ್, ಅವನ ದೇವರು ಹರ.

ಹಿಂದೂ ಧರ್ಮಕ್ಕೆ ಸ್ಥಾಪಕರೂ ಇಲ್ಲ; ಸ್ಥಾಪನೆಯಾದ ಕಾಲವೂ ಇಲ್ಲ. ಆ ಧರ್ಮಕ್ಕೆ ನಿರ್ದಿಷ್ಟವಾದ ಸಿದ್ಧಾಂತವಾಗಲೀ, ಏಕ ಪವಿತ್ರಗ್ರಂಥವಾಗಲೀ ಇಲ್ಲ. ಏಕ ದೇವರೂ ಇಲ್ಲ. ಅದಕ್ಕೆ ಬದಲಾಗಿ ಕೋಟಿ ಕೋಟಿ ದೇವರುಗಳಿದ್ದಾರೆಂದು ಹೇಳಲಾಗಿದೆ. ಇದನ್ನು ಧರ್ಮ ಎನ್ನಬಹುದೆ?

ಶೈವ ಮತ್ತು ವೀರಶೈವ ಎರಡೂ ಒಂದೇ?

೧೯೨೨-೧೯೨೭ರ ಅವಧಿಯಲ್ಲಿ ಸರ್ ಜಾನ್ ಮಾರ್ಷಲ್‌ನಿಂದ ಹರಪ್ಪಾದಲ್ಲಿ ನಡೆದ ಉತ್ಪನನದಲ್ಲಿ, ಪ್ರಾಚ್ಯವಸ್ತು ತಜ್ಞರು ಕಾಡುಪ್ರಾಣಿಗಳ ಮಧ್ಯೆ ಕುಳಿತಿರುವ ದೇವರಂತೆ ಕಾಣುವ ಒಂದು ಮೂರ್ತಿಯನ್ನು ಕಂಡಿದ್ದಾರೆ. ಬಹುಶಃ ಅದು ಪಾಶುಪತ ಧರ್ಮವನ್ನು (ಅತ್ಯಂತ ಪ್ರಾಚೀನ ಪಂಥ) ಸೂಚಿಸಿರುವಂತೆ ಕಾಣುತ್ತದೆ. (ಜಾನ್ ಮಾರ್ಷಲ್, ೧೯೩೧) ಆದರೆ, ಅದೇ ವೀರಶೈವ ಧರ್ಮವಲ್ಲ. ಆದರೆ ವೀರಶೈವರು ಬಹಳ ಕಾಲದ ನಂತರ ಪಾಶುಪತ ತತ್ತ್ವಗಳಲ್ಲಿ ಕೆಲವನ್ನು ಅಳವಡಿಸಿಕೊಂಡಿದ್ದಾರೆ. ಹಾಗಾಗಿ, ಹರಪ್ಪಾ ಶೋಧಗಳು ತಮಗೆ ಸಂಬಂಧಿಸಿದವು ಎಂದು ವೀರಶೈವರು ವಾದಿಸುತ್ತಾರೆ. ಒಂದು ವೇಳೆ, ಅವರ ವಾದವು ಸರಿ ಎಂದು ಭಾವಿಸಿದರೂ ಹರಪ್ಪಾ ನಾಗರಿಕತೆ ಕೇವಲ ನಾಲೈದು ಸಾವಿರ ವರ್ಷಗಳ ಹಳೆಯದೇ ವಿನಃ, ವೀರಶೈವರು ತಿಳಿದಂತೆ ಅನೇಕ ಲಕ್ಷ ವರ್ಷಗಳದ್ದಲ್ಲ.

ಮೇಲೆ ಪ್ರಸ್ತಾಪಿಸಿದ ವೀರಶೈವರ ವಾದಗಳು ಕೇವಲ ಹದಿನಾಲ್ಕನೆಯ ಶತಮಾನದ ನಂತರ ವೀರಶೈವ ಗ್ರಂಥಕರ್ತರು ಬರೆದ ಪುರಾಣಗಳ ಕಾಲ್ಪನಿಕ ಕಥೆಗಳನ್ನು ಆಧರಿಸಿವೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ (ಹರಿಹರ, ಶ್ರೀಪತಿ ಪಂಡಿತ ಮತ್ತು ಪಂಡಿತಾರಾಧ್ಯರ ಪುರಾಣಗಳು ಇತಿಹಾಸವಲ್ಲ. ಆದರೆ, ಅವುಗಳಲ್ಲಿ ಇತಿಹಾಸದ ಕೆಲವೊಂದು ಅಂಶಗಳಿರಬಹುದು. ಅದಕ್ಕಾದರೂ ವಸ್ತುನಿಷ್ಠ ಸಮರ್ಥನೆ ಅಗತ್ಯವಾಗುತ್ತದೆ. ಚಾರಿತ್ರಿಕ ದೃಷ್ಟಿಯಿಂದ ವೀರಶೈವ ಧರ್ಮವು ಹನ್ನೆರಡನೆಯ ಶತಮಾನಕ್ಕಿಂತ, ಎಂದರೆ ಬಸವಯುಗಕ್ಕಿಂತ ಮುಂಚೆ ಅಸ್ತಿತ್ವದಲ್ಲಿತ್ತೆ ಎನ್ನುವುದನ್ನು ಈ ನಿಬಂಧವು ಪರಾಮರ್ಶಿಸುತ್ತದೆ.

ವೀರಶೈವವು ೧೨ನೇ ಶತಮಾನಕ್ಕಿಂತ ಮೊದಲು ಇತ್ತೆ?

ಬಸವಣ್ಣನವರ ಪೂರ್ವದಲ್ಲಿ ವೀರಶೈವ ಧರ್ಮ ಆಸ್ತಿತ್ವದಲ್ಲಿತ್ತೆ ಎಂಬ ಬಗೆಗೆ ವಿದ್ವಾಂಸರಲ್ಲಿ ಭಾರಿ ಚರ್ಚೆಯಾಗುತ್ತಿದೆ. ಬಹುಸಂಖ್ಯೆಯ ವಿದ್ವಾಂಸರು ವೀರಶೈವ ಧರ್ಮವು ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ಬೋಧನೆಯಿಂದ ನಿಷ್ಪನ್ನವಾದ ಒಂದು ಕವಲು ಎಂದು ವಾದಿಸಿದ್ದಾರೆ. ಅವರು ಹೇಳುವಂತೆ, ಸುಮಾರು ಮುನ್ನೂರು ವರ್ಷಗಳ ನಂತರ, ಅದು ಈಗ ವೀರಶೈವರೆನಿಸಿರುವ ಬ್ರಾಹ್ಮಣ ಅನುಯಾಯಿಗಳ ಪ್ರಭಾವದಿಂದ ವೇದಗಳ ಮೂಲಕ್ಕೆ ಹಿಂತಿರುಗಲು ಪ್ರವೃತ್ತವಾಯಿತು.

ಬಸವಣ್ಣನವರಿಗಿಂತ ಮುಂಚೆ ವೀರಶೈವ ಧರ್ಮವು ಅಸ್ತಿತ್ವದಲ್ಲಿತ್ತು ಎಂದು ವಾದಿಸುವ ವಿದ್ವಾಂಸರಲ್ಲಿ ಎರಡು ವರ್ಗಗಳಿವೆ : ವಸ್ತುನಿಷ್ಠ ಸಂಗತಿಗಳಿದ್ದರೂ, ಅವು ತಮ್ಮ ನಂಬಿಕೆಗೆ ವಿರುದ್ಧವಾಗಿವೆ ಎಂಬ ಕಾರಣಕ್ಕಾಗಿ ತಮ್ಮ ಮೊಂಡು ವಾದಗಳನ್ನು ದೊಡ್ಡ ದನಿಯಲ್ಲಿ ಸಮರ್ಥಿಸುವ ಜಂಗಮ ಜಾತಿಗೆ ಸೇರಿದ ಒಂದು ವರ್ಗ. ಇವರು ನಂಬಲನರ್ಹವಾದ ಪುರಾಣಗಳು, ಮತಾಚಾರಣೆಯ ಆಗಮಗಳು ಮತ್ತು ವೈದಿಕ ಪದ್ಧತಿಗಳನ್ನು ಅವಲಂಬಿಸಿರುವವರು. (ಅವರು ವೀರಶೈವಕ್ಕೆ ಮೂಲಾಧಾರವೆನ್ನುವ ಎಲ್ಲವನ್ನೂ ಶರಣರು ನೇರವಾಗಿ ನಿರಾಕರಿಸಿದ್ದಾರೆ). ಈ ವರ್ಗಕ್ಕೆ ಸೇರಿದ ಪ್ರಮುಖರು ಎಂದರೆ, ಡಾ. ಆರ್.ಸಿ. ಹಿರೇಮಠ, ಡಾ. ಸಂಗಮೇಶ ಸವದತ್ತಿ ಮಠ, ಡಾ. ಜ.ಚ.ನಿ., ಡಾ. ಎಂ. ಚಿದಾನಂದಮೂರ್ತಿ, ಡಾ. ಎಂ. ಶಿವಕುಮಾರಸ್ವಾಮಿ, ಪಂಚಾಚಾರ್ಯರು ಮತ್ತು ಕೆಲವು ಮಠಗಳ ಸ್ವಾಮಿಗಳು.

ಇನ್ನೊಂದು ವರ್ಗದ ಗ್ರಂಥಕರ್ತರಲ್ಲಿ ಅನೇಕ ವೈವಿಧ್ಯತೆಗಳಿವೆ. ಕೆಲವು (೧) ಅರೆಬೆಂದ ಮಹಾಪ್ರಬಂಧ ಲೇಖಕರು, (೨) ಸಂಸ್ಕೃತ ಪಂಡಿತರು, (೩) ಬಸವಣ್ಣನವರ ನಾಯಕತ್ವದಲ್ಲಿ ನಡೆದ ಹನ್ನೆರಡನೆಯ ಶತಮಾನದ ಶರಣಕ್ರಾಂತಿಯ ಪೂರ್ಣ ಜ್ಞಾನವಿಲ್ಲದವರು, (೪) ಪಂಚಾಚಾರ್ಯರನ್ನು ಬೆಂಬಲಿಸಿ ತಮ್ಮ ರಾಜಕೀಯ ಹಿತಗಳನ್ನು ಕಾಪಾಡಿಕೊಳ್ಳುವವರು, (೫) ಸೈದ್ಧಾಂತಿಕ ಆಧಾರಗಳ ಮೇಲೆ ಬಸವಣ್ಣನವರನ್ನು ದ್ವೇಷಿಸುವವರು ಮತ್ತು ಅಂತಿಮವಾಗಿ, (೬) ಶರಣ ಪರಂಪರೆಯನ್ನೇ ನಾಶಗೊಳಿಸಬೇಕೆಂದಿದ್ದ ಜಾತಿಶ್ರೇಣಿಯ ಆಧಾರದ ವರ್ಣಾಶ್ರಮ ಪದ್ಧತಿಯನ್ನು ಉಳಿಸಿಕೊಂಡು ಬರುವಲ್ಲಿ ಆಸಕ್ತಿ ಇರುವವರು.

ಬಸವಣ್ಣನವರಿಗಿಂತ ಪೂರ್ವದಲ್ಲಿ ವೀರಶೈವ ಧರ್ಮದ ಅಸ್ತಿತ್ವ ಅಥವಾ ಅನಸ್ತಿತ್ವದ ಬಗೆಗೆ ಚರ್ಚಿಸಿರುವ ಸಾಹಿತ್ಯ ಅಗಾಧವಾಗಿದೆ; ಸಂಬಂಧಿಸಿದ ಗ್ರಂಥಗಳ ಸಂಖ್ಯೆಯೂ ಅಪಾರವಾಗಿದೆ. ಈ ಒಂದು ಸಂಕ್ಷಿಪ್ತ ನಿಬಂಧದಲ್ಲಿ ಅವೆಲ್ಲವನ್ನೂ ಪರಿಶೀಲಿಸಲು ಆಗುವುದಿಲ್ಲ. ಪ್ರಸ್ತುತದ ಉದ್ದೇಶವೆಂದರೆ, ಈ ವಿಷಯದಲ್ಲಿ ಒಳಗೊಂಡಿರುವ ಮುಖ್ಯ ಅಂಶಗಳನ್ನು ಎತ್ತಿತೋರಿಸುವುದು ಮತ್ತು ಸಂಶೋಧಕರಿಂದ ಇದುವರೆಗೆ ಬೆಳಕಿಗೆ ಬಂದಿರುವ ಕೆಲವೊಂದು ಸತ್ಯ ಸಂಗತಿಗಳನ್ನು ಒಪ್ಪಿಸುವುದು. ಈ ನಿಬಂಧದಲ್ಲಿ, ಬಸವಣ್ಣನವರಿಗಿಂತ ಪೂರ್ವದಲ್ಲಿ ವೀರಶೈವಧರ್ಮವು ಆಸ್ತಿತ್ವದಲ್ಲಿತ್ತು ಎಂದು ಪ್ರತಿಪಾದಿಸುವ ಕೆಲವು ಪ್ರಸಿದ್ಧ ಪ್ರಾತಿನಿಧಿಕ ಗ್ರಂಥಕರ್ತರ ಅಭಿಪ್ರಾಯಗಳನ್ನು ವಿಶ್ಲೇಷಿಸಲಾಗಿದೆ. ಅವರಲ್ಲಿ ಪ್ರಮುಖರಾದವರೆಂದರೆ, ಪ್ರೊ ಎಲ್. ಬಸವರಾಜು, ಡಾ. ಎಂ. ಚಿದಾನಂದಮೂರ್ತಿ, ಡಾ. ಸಂಗಮೇಶ ಸಾವದತ್ತಿ ಮಠ, ಟಿ.ಎನ್. ಮಲ್ಲಪ್ಪ ಮತ್ತು ಹೆಚ್.ಎಂ. ಸದಾಶಿವಯ್ಯ. ಇವರೆಲ್ಲ ವೀರಶೈವವು ಹಿಂದೂ ಶೈವಧರ್ಮದ ಒಂದು ಪಂಥವೆಂದೂ, ಅದು ಬಸವಣ್ಣನವರಿಗಿಂತ ಮುಂಚೆ ಆಸ್ತಿತ್ವದಲ್ಲಿ ಇತ್ತೆಂದೂ ಪರಿಗಣಿಸಿರುವ ವಿದ್ವಾಂಸರು. ಅವರ ಗ್ರಂಥಗಳ ಒಟ್ಟು ಆಲೋಚನೆಯನ್ನು ಇಲ್ಲಿ ಸಾರಗೊಳಿಸಿ ವಿಶ್ಲೇಷಿಸಲಾಗಿದೆ. ಇದು ಭಾಗ-೧ರಲ್ಲಿನ ಮುಖ್ಯಾಂಶವಾಗಿದೆ.

ಭಾಗ-೨ರಲ್ಲಿ 'ವೀರಶೈವ' ಶಬ್ದದ ಬಳಕೆಗೆ ಸಂಬಂಧಿಸಿದಂತೆಯೇ, ಕನ್ನಡದಲ್ಲಿ ಗಣನೀಯ ಪ್ರಮಾಣದ ಸಾಹಿತ್ಯವಿದೆ. 'ವೀರಶೈವ ಇತಿಹಾಸ ಮತ್ತು ಭೂಗೋಳ' ಗ್ರಂಥದಲ್ಲಿ ಡಾ. ಎಂ.ಎಂ. ಕಲಬುರ್ಗಿ ಅವರು ಈ ವಿಷಯಕ್ಕೆ ಸಬಂಧಪಟ್ಟ ಅಗಾಧ ಸಾಹಿತ್ಯವನ್ನು ಪರಿಶೋಧಿಸಿದ್ದಾರೆ. ಅವರು ಹೇಳಿರುವಂತೆ 'ವೀರಶೈವ' ಶಬ್ದವು ೧೩೬೮ಕ್ಕಿಂತ ಮುಂಚಿನ ಯಾವ ಗ್ರಂಥಗಳಲ್ಲೂ ಬಳಕೆಯಾಗಿಲ್ಲ. ಅದು ೧೩೬೮ರಲ್ಲಿ ಭೀಮಕವಿಯ 'ಕನ್ನಡ ಬಸವ ಪುರಾಣ'ದಲ್ಲಿ ಮೊದಲ ಬಾರಿಗೆ ಬಳಕೆಯಾಗಿದೆ. 'ವೀರವ್ರತಿ' ಮತ್ತು 'ವೀರಮಾಹೇಶ್ವರ' ಎಂಬ ಶಬ್ದಗಳು ಮಾತ್ರ ಮಧ್ಯಯುಗದ ಶಾಸನಗಳು ಮತ್ತು ಸಾಹಿತ್ಯದಲ್ಲಿ ಹೆಚ್ಚಾಗಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಆದರೆ ವೀರಶೈವರ ಪವಿತ್ರ ಗ್ರಂಥವೆನ್ನಲಾಗಿರುವ 'ಸಿದ್ಧಾಂತ ಶಿಖಾಮಣಿ'ಯು (ಅಧ್ಯಾಯ-೫ರ ಶ್ಲೋಕ ೧೯ ರಿಂದ ೨೧ರಲ್ಲಿ) ವೀರಶೈವವನ್ನು ವೀರಮಾಹೇಶ್ವರದಿಂದ ಪ್ರತ್ಯೇಕಿಸುತ್ತದೆ.

ಗ್ರಂಥ ಋಣ:
1) ವೀರಶೈವ ಧರ್ಮವು ೧೨ನೇಯ ಶತಮಾನಕ್ಕಿಂತ ಮುಂಚೆ ಆಸ್ತಿತ್ವದಲ್ಲಿತ್ತೆ? ಲೇಖಕರು: ಡಾ. ಎಸ್‌. ಎಂ. ಜಾಮದಾರ, ಅನುವಾದಕರು: ಡಾ. ಗೊ. ರು. ಚನ್ನಬಸಪ್ಪ. ೨೦೨೦. Published by: Jagathika Lingayat Mahasabha, No 53 2nd Main Road, 3rd cross, Chakravarrthi Layout, Palace road, Bangalore-560020.

ಪರಿವಿಡಿ (index)
Previous ಲಿಂಗಾಯತರಲ್ಲಿ ಮತಾಂತರ ವಿಶ್ಲೇಷಣೆ - ಶಿವದಾಸ ಗೀತಾಂಜಲಿ Next