ಪ್ರಜಾಪ್ರಭುತ್ವದ ಮೂಲಧಾರೆ :👈 👉:ಲಿಂಗಾಯತ

ಗುರು ಬಸವಣ್ಣನವರೇ ನಮ್ಮೆಲ್ಲರ ದೀಕ್ಷಾಗುರು

✍ -ಸಚ್ಚಿದಾನಂದ ಚಟ್ನಳ್ಳಿ

ಲಿಂಗಾಯತ : ಗುರು ಬಸವಣ್ಣನವರೇ ನಮ್ಮೆಲ್ಲರ ದೀಕ್ಷಾಗುರು

ಗುರುವಾಗಿ ಬಂದೆನೆಗೆ ದೀಕ್ಷೆಯ ಮಾಡಿದಿರಿ ಬಸವಣ್ಣಾ
ಲಿಂಗವಾಗಿ ಬಂದೆನ್ನ ಮನದ ಮಲೀನವ ಕಳೆದಿರಿ ಬಸವಣ್ಣಾ
ಜಂಗಮವಾಗಿ ಬಂದೆನ್ನ ಪ್ರಪಂಚುಕತನವ ಕಳೆದು
ಪರಮ ಸೀಮೆಯ ತೋರಿದಿರಿ ಬಸವಣ್ಣಾ
ಇಂತಿವೆಲ್ಲವೂ ಬಸವಣ್ಣನಾಗಿ ಬಂದು ಎನಗೆ ಪ್ರಸಾದವ ನೀಡಿ ಸಲಹಿದ,
ಕಪಿಲಸಿದ್ಧಮಲ್ಲಿಕಾರ್ಜುನದೇವರ ದೇವಾ ಇನ್ನೆನಗತಿಶಯವೇನೂ ಇಲ್ಲ.-ಗುರು ಸಿದ್ಧರಾಮೇಶ್ವರರು.

ಹೊಸದಾಗಿ ಸರಕಾರಿ ಸೇವೆಗೆ ಆಯ್ಕೆಯಾದನಂತರ, ಮೊದಲನೇ ದಿನ, ನೇಮಕಾತಿ ಅಧಿಸೂಚನೆ ಪತ್ರ (Appointment order) ಕೊಡುವುದಕ್ಕಿಂತ ಮುಂಚೆ ಆಯಾ (Respective department) ಇಲಾಖೆಗಳ ಮುಖ್ಯ ಕಾರ್ಮಿಕ ಅಧಿಕಾರಿ(Chief personal officer)ಗಳು ನನ್ನ ಕರ್ತವ್ಯ ವನ್ನು ನಿಷ್ಟೆಯಿಂದ ಮಾಡುತ್ತೇನೆ ಎಂದು ಹೇಳಿಸುವ ಒಂದು ಪ್ರಮಾಣ ವಚನ ಬೋಧನೆ ಮಾಡುತ್ತಾರೆ.

ಆ ಪ್ರಮಾಣ ವಚನ ಬೋಧಿಸುವಾಗ ರಾಜ್ಯ ಸರಕಾರದ ಸೇವೆಗಳಲ್ಲಾದರೆ, ಘನತೆವೆತ್ತ ರಾಜ್ಯಪಾಲರ ಪರವಾಗಿ, ಮತ್ತು ಕೇಂದ್ರ ಸರಕಾರದ ಸೇವೆಗಳಲ್ಲಾದರೆ, ಘನತೆವೆತ್ತ ರಾಷ್ಟ್ರಪತಿಯವರ ಪರಾವಾಗಿ ಈ ಪ್ರತಿಜ್ಞೆಯನ್ನು ಬೋಧಿಸುತ್ತಿದ್ದೇನೆ ಎಂದು ಹೇಳುತ್ತಾರೆ.

ಜಂಗಮಮೂರ್ತಿಗಳು ತಾವು ನಿಮಿತ್ತ ಮಾತ್ರವಾಗಿ ದೀಕ್ಷೆಯನ್ನು ನೀಡಿದ್ದೇನೆ ಆದರೆ ನಿಮ್ಮ ನಿಜವಾದ ದೀಕ್ಷಾ ಗುರು, ಗುರು ಬಸವಣ್ಣನವರೇ ಎಂದು ಬೋಧಿಸಬೇಕು. ಗುರು ಸಿದ್ದರಾಮೇಶ್ವರರಿಗೆ ಗುರು ಚೆನ್ನ ಬಸವಣ್ಣನವರೇ ಇಷ್ಟಲಿಂಗ ದೀಕ್ಷೆ ನೀಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆದರೂ ಅವರು ಗುರು ಬಸವಣ್ಣನವರು “ಗುರುವಾಗಿ ಬಂದು ದೀಕ್ಷೆಯ ನೀಡಿದಿರಿ ಬಸವಣ್ಣಾ” ಎಂದು ಹೇಳಿದ್ದಾರೆ. ವಚನಗಳು ಗುರು ಬಸವಣ್ಣನವರ ಹಾಗು ಆದಿ ಶರಣರ ಅಶರೀರವಾಣಿಗಳಾಗಿ ಉಳಿದಿವೆ.

ಕ್ರಿಯಾಮೂರ್ತಿಗಳ/ಜಂಗಮಮೂರ್ತಿಗಳ ಶರೀರವನ್ನು ಬಳಸಿಕೊಂಡು ಗುರು ಬಸವಣ್ಣನವರು ಇಷ್ಟಲಿಂಗ ದೀಕ್ಷೆಯನ್ನು ಕರುಣಿಸುತ್ತಾರೆ. ಅದಕ್ಕಾಗಿ ನಾವು ಯಾರಿಂದಲೇ ಇಷ್ಟಲಿಂಗ ದೀಕ್ಷೆಯನ್ನು ಪಡೆದರೂ ನಮ್ಮ ನಿಜವಾದ ಇಷ್ಟಲಿಂಗ ದೀಕ್ಷಾ ಗುರು ಗುರು ಬಸವಣ್ಣನವರೇ.!

ಅದೇ ರೀತಿ ರಾಜ್ಯ ಸರಕಾರದ/ಕೇಂದ್ರ ಸರಕಾರದ ಅಧಿಕಾರಿಗಳು ಗುತ್ತಿಗೆಯ ಕೆಲಸಗಳಿಗೆ ಗುತ್ತಿಗೆದಾರರನ್ನು ಕರೆಯುವ ಅಧಿಸೂಚನೆಗಳಲ್ಲಿ ಘನತೆವೆತ್ತ ರಾಜ್ಯಪಾಲರಪರವಾಗಿ/ಘನತೆವೆತ್ತ ರಾಷ್ಟ್ರಪತಿಗಳ ಪರವಾಗಿ ಅವರ ಹೆಸರಿನಲ್ಲಿ ಈ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಸಹಿ ಮಾಡುತ್ತಾರೆ.

ಇಲ್ಲಿ ಪ್ರಮಾಣ ವಚನ ಬೋಧನೆ ಮಾಡುವವರು/ಗುತ್ತಿಗೆ ಕೆಲಸಕ್ಕೆ ಅಧಿಸೂಚನೆ ಹೊರಡಿಸುವವರು ಅಧಿಕಾರಿಗಳೇ ಆಗಿದ್ದರೂ ಅವರು ನಿಮಿತ್ತ ಮಾತ್ರವಾಗಿ ರಾಷ್ಟ್ರಪತಿಗಳ ಪರವಾಗಿ ಮಾಡುವುದರಿಂದ ನಮ್ಮ ದೇಶದ ಸಂವಿಧಾನ ಮತ್ತು ಅದರ ಆಶಯಗಳ ರಕ್ಷಣೆಯಾಗುತ್ತಿದೆ.
ಅದೇ ರೀತಿ ಲಿಂಗಾಯತ ಧರ್ಮ, ಲಿಂಗಾಯತ ಧರ್ಮದ ಆಚರಣೆಗಳ, ಮತ್ತು ಲಿಂಗಾಯತ ಧರ್ಮ ಸಂವಿಧಾನದ ರಕ್ಷಣೆಗೆ ಈ ಧರ್ಮದಲ್ಲಿರುವ ಗುರುಗಳು, ಜಂಗಮರು, ಕ್ರಿಯಾಮೂರ್ತಿಗಳು ಗರ್ಭಲಿಂಗಧಾರಣೆ, ಇಷ್ಟಲಿಂಗಧಾರಣೆ, ಇಷ್ಟಲಿಂಗ ದೀಕ್ಷೆ, ಜಂಗಮ ದೀಕ್ಷೆ, ಮುಂತಾದ ಧಾರ್ಮಿಕ ಸಂಸ್ಕಾರಗಳನ್ನು ಕೊಡುವಾಗ ನಾನು ನಿಮಿತ್ತ ಮಾತ್ರನಾಗಿ, ಗುರು ಬಸವಣ್ಣನವರ ಪರವಾಗಿ ನಿಮಗೆ ಇಷ್ಟಲಿಂಗ ದೀಕ್ಷೆ/ಜಂಗಮ ದೀಕ್ಷೆಯನ್ನು ಕೊಡುತ್ತಿದ್ದೇನೆ ನಿಮ್ಮ ನಿಜವಾದ ದೀಕ್ಷಾಗುರು ಗುರು ಬಸವಣ್ಣನವರೇ ಹೊರತು ನಾನಲ್ಲ ಎಂದು ಬೋಧಿಸಬೇಕು. ಆದರೆ ಅನೇಕ ಮಠ, ಹಿರೇಮಠ,ಮಹಾಮಠ, ಪೀಠ, ಪ್ರತಿಷ್ಠಾನಗಳ ಜಂಗಮರು, ದೀಕ್ಷೆಯನ್ನು ಕೊಟ್ಟು ನಾನೇ ನಿಮ್ಮ ದೀಕ್ಷಾಗುರು ಎಂದು ಹೇಳಿ ಅವರ ಒಂದು ಫೋಟೊವನ್ನು ಭಕ್ತನ ಕೈಗಿತ್ತು ಪೂಜಿಸಲು ಹೇಳುತ್ತಾರೆ. ಇದು ವಚನ ಸಂವಿಧಾನದ ಪ್ರಕಾರ ಅಕ್ಷಮ್ಯ ಅಪರಾಧ. "ಭಕ್ತನಾಗಿ ಲಿಂಗ ಜಂಗಮವ ಪೂಜಿಸಬೇಕು. ಭಕ್ತನಾಗಿ ತನ್ನ ತಾ ಪೂಜಿಸಿಕೊಂಬುದು ಎಂತಯ್ಯಾ" ಎಂದು ಗುರು ಬಸವಣ್ಣನವರು ಪ್ರಶ್ನಿಸುತ್ತಾರೆ. ಇಂಥವರಿಗೆ ವಚನ ಸಂವಿಧಾನದ ಪ್ರಕಾರ ಇರುವ ಶಿಕ್ಷೆ ಏನು ಗೊತ್ತೋ..? "ಲಿಂಗದೇವರು ಹಲುದೋರೆ ಮೂಗ ಕೊಯಿದು, ಇಟ್ಟಿಗೆಯಲೊರೆಸಿ ಕನ್ನಡಿ ತೋರುವುದು" ಈ ವಿಚಾರವನ್ನು 2003 ರಲ್ಲಿ ಜಗನ್ಮಾತೆ ಅಕ್ಕಮಹಾದೇವಿ ಅನುಭಾವ ಪೀಠದ ವಾರ್ಷಿಕೋತ್ಸವ ಸಮಾರಂಭದಲ್ಲಿ ನಾನು ಹೇಳಿದಾಗ ಪರಮ ಪೂಜ್ಯ ಶ್ರೀ ಮಹಾಜಗದ್ಗುರು ಮಾತೆ ಮಹಾದೇವಿಯವರು ತುಂಬಾ ಸಂತೋಷಗೊಂಡು ಇದು ಧರ್ಮ ಗ್ರಂಥಕ್ಕೆ ಬೇಕಾದ ವಿಚಾರವೆಂದು ಹೇಳಿದ್ದರು ಮಾತ್ರವಲ್ಲ ಈ ವಿಚಾರವನ್ನು ಕಲ್ಯಾಣಕಿರಣದಲ್ಲಿ ಬರೆದು, ಇನ್ನು ಮುಂದೆ ಧಾರ್ಮಿಕ ಸಂಸ್ಕಾರ ಕೊಡುವು ಜಂಗಮ ಮೂರ್ತಿಗಳು ಮತ್ತು ಕ್ರಿಯಾಮೂರ್ತಿಗಳು, ಸಂಸ್ಕಾರ ಕೊಡುವುದಕ್ಕಿಂತ ಮುಂಚೆ, “ಓಂ ಶ್ರೀ ಗುರು ಬಸವ ಲಿಂಗಾಯನಮಃ ಗುರು ಬಸವಣ್ಣನವರ ಪ್ರತಿನಿಧಿಯಾಗಿ ನಾನು ನಿಮಿತ್ತ ಮಾತ್ರವಾಗಿ ಈ ಸಂಸ್ಕಾರವನ್ನು ಕೊಡುತ್ತಿದ್ದೇನೆ” ಎಂದು ಹೇಳಿ ಕಾರ್ಯಕ್ರಮವನ್ನು ಆರಂಭಿಸಬೇಕು ಎಂದು ಬರೆದಿದ್ದರು.

ಗುರು ಸಿದ್ಧರಾಮೇಶ್ವರರಿಗೆ ಇಷ್ಟಲಿಂಗ ದೀಕ್ಷೆ ನೀಡಿದವರು ಗುರು ಚೆನ್ನಬಸಣ್ಣನವರು ಎಂದು ಜಗತ್ತಿಗೇ ಗೊತ್ತಿರುವ ವಿಚಾರ. ಆದರೂ ಗುರು ಸಿದ್ಧರಾಮೇಶ್ವರರು “ ಗುರುವಾಗಿ ಬಂದೆನಗೆ ದೀಕ್ಷೆಯ ಮಾಡಿದಿರಿ ಬಸವಣ್ಣ” ಎನ್ನುವ ಮಾತಿನಲ್ಲಿ ಬಹುದೊಡ್ಡ ಸಂದೇಶವಿದೆ ಲಿಂಗಾಯತ ಧರ್ಮವನ್ನು ಕಾಪಾಡುವ ಸೂತ್ರವಿದೆ. ವಚನ ಸಂವಿಧಾನದ ಆಚಾರ ಸಂಹಿತೆ ಇದೆ. ಇದು ಲಿಂಗಾಯತದ ಧರ್ಮಗ್ರಂಥದ ನೀತಿ ಸಂಹಿತೆಯೂ ಆಗಿದೆ.

ಹೀಗಾಗಿ ಗುರು ಬಸವಣ್ಣನವರೇ ನಮ್ಮ ನಿಜವಾದ ದೀಕ್ಷಾ ಗುರು. ಆದರೆ ಮಠ, ಮಹಾಮಠ, ಹಿರೇಮಠ, ಪೀಠ ಪ್ರತಿಷ್ಠಾನಗಳು ಈ ವಿಚಾರವನ್ನು ಮುಚ್ಚಿಟ್ಟು, ದೀಕ್ಷೆಕೊಟ್ಟವರು ತಾವು ಆದ್ದರಿಂದ ನಾವೇ ನಿಮ್ಮ ದೀಕ್ಷಾ ಗುರು, ನನ್ನ ಪಾದ ಪೂಜೆಯನ್ನೇ ಮಾಡಿ ಕಾಣಿಕೆ ಕೊಡಬೇಕು ಎಂದು ಬೋಧಿಸುತ್ತ ಇಂದಿನ ಕಾಲಕ್ಕೆ ಅರ್ಥ ಕಳೆದುಕೊಂಡಿರುವ ಪಾದ ಪೂಜೆಯಂತಹ ಅನಿಷ್ಠ ಆಚರಣೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇದು ಗುರು ಬಸವಣ್ಣನವರ ಧರ್ಮಕ್ಕೆ ಸಲ್ಲದು ಸಲ್ಲದು! ಇದು ಈ ಧರ್ಮದ ನಿಜದೊಳಗೆ ನಿಲ್ಲದು ನಿಲ್ಲದು!!

ಈ ವಿಚಾರವನ್ನು ನಾನು ಮೂರು ಉಪ ಕಥೆಗಳ ಮೂಲಕ ತಮಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತೇನೆ.

ದೃಷ್ಠಾಂತ-೧:

ಒಂದಾನೊಂದು ಕಾಲದಲ್ಲಿ ಒಬ್ಬ ಮಹಾನ್ ತಪಸ್ವಿ ಗುರುಗಳಿದ್ದರು. ಅವರು ಗುರು ಬಸವಣ್ಣನವರ ತತ್ವಗಳನ್ನು ಚೆನ್ನಾಗಿ ಅರಿತಿದ್ದರಲ್ಲದೆ, ಗುಲಗುಂಜಿಯಷ್ಟು ದೋಷವಿಲ್ಲದೆ ಆ ತತ್ವಗಳನು ಪ್ರಚಾರ ಮಾಡಿದ್ದರು. ಅವರು ಸಮಾಜದಲ್ಲಿ ತರುತ್ತಿದ್ದ ಪರಿವರ್ತನೆ, ಅರಿವು-ಆಚಾರ-ಅನುಭಾವವುಳ್ಳವರೆಲ್ಲರೂ ಜಂಗಮರು ಯಾರು ಬೇಕಾದರೂ ಇಷ್ಟ ಲಿಂಗದೀಕ್ಷೆಪಡೆದು ಭಕ್ತರಾಗಬಹುದು, ಯಾರು ಬೇಕಾದರೂ ಕಾವಿದೀಕ್ಷೆ ಪಡೆದು ಜಂಗಮರಾಗಬಹುದು ಎಂದು ತತ್ವ ಪ್ರಚಾರ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ದಟ್ಟವಾದ ಕಾಡಿನಲ್ಲಿ ಒಂದು ನರಿ (Jakkal)ವಾಸವಾಗಿತ್ತು. ಗುರುಗಳ ಮಾತುಗಳು ಕಿವಿಯಿಂದ ಕಿವಿಗೆ ಪಸರಿಸತೊಡಗಿದಾಗ, ಈ ಮಾತುಗಳನ್ನು ಕೇಳಿಸಿಕೊಂಡ ಆ ನರಿಗೂ ಜಂಗಮದೀಕ್ಷೆ ಪಡೆಯಬೇಕು ಎಂದು ಆಸೆ ಹುಟ್ಟಿತು. ಅದರಂತೆ ಒಂದು ದಿನ ಆ ನರಿ ಆ ಗುರುಗಳಿಂದ ಜಂಗಮದೀಕ್ಷೆ ಪಡೆದು ಒಂದು ಕಾಡಿನಲ್ಲೇ ವಾಸಿಸತೊಡಗಿತು. ಅದೇ ಕಾಲದಲ್ಲಿ ರಾಜನ ಸೈನ್ಯದಲ್ಲಿದ್ದ ಒಂದು ಅಶ್ವ (Horse) ನಿವೃತ್ತಿ ಹೊಂದಿತು. ಅದೂ ಒಮ್ಮೆ ಈ ಪೂಜ್ಯರ ಮಾತುಗಳನ್ನು ಕೇಳಿಸಿಕೊಂಡು ತಾನೂ ಜಂಗಮ ದೀಕ್ಷೆಯನ್ನು ಪಡೆಯಬೇಕು ನಿವೃತ್ತಿ ಜೀವನವನ್ನು ಧರ್ಮ ಸೇವೆಯಲ್ಲಿ ಕಳೆಯಬೇಕು ಎಂದು ಸಂಕಲ್ಪಿಸಿತು.

ನರಿ ದೀಕ್ಷೆ ತೆಗೆದುಕೊಂಡ ಗುರುಗಳ ಬಳಿಯೇ ಕಾವಿ ದೀಕ್ಷೆ ಪಡೆಯಿತು. ಆ ಗುರುಗಳು ಹೇಗೂ ಆ ಒಂದು ಕಾಡಿನಲ್ಲಿ ಈಗಾಗಲೇ ಒಂದು ನರಿ ಕಾವಿ ದೀಕ್ಷೆ ಪಡೆದು ವಾಸಿಸುತ್ತಿದೆ, ನೀನೂ ಅಲ್ಲಿಯೇ ಹೋಗಿ ಅದರ ಜೊತೆಯಲ್ಲಿದ್ದು ಕಾಡಿನ ಇತರ ಪ್ರಾಣಿಗಳಿಗೂ ಧರ್ಮಬೋಧೆ ಮಾಡು ಎಂದು ಅನುಗ್ರಹಿಸಿ ಕಳುಹಿಸಿದರು.

ಕೆಲಕಾಲ ನರಿ ಮತ್ತು ಅಶ್ವಗಳು ಧರ್ಮ ಪ್ರಚಾರ ಮಾಡುತಿದ್ದವು. ಧರ್ಮ ಪ್ರಚಾರದಲ್ಲಿ ಅಶ್ವದ ವೇಗ ಮತ್ತು ಶಕ್ತಿ ಕಂಡು ನರಿಗೆ ಮತ್ಸರ ಹುಟ್ಟತೊಡಗಿತು. ನರಿ ನಾನು ಜೇಷ್ಠ (Senior)ನೀನು ಕನಿಷ್ಠ(Junior) ಎಂದು ಅಶ್ವಕ್ಕೆ ಭೇದ ಭಾವ ಮಾಡತೊಡಗಿತು. ನಾನೇ ಶ್ರೇಷ್ಠ ನೀನು ನಾನು ಹೇಳಿದ ಹಾಗೆ ಕೇಳಬೇಕು ಎಂದು ಕಾಟ ಕೊಡತೊಡಗಿತು. ಮಾತಿನ ಮಾತಿಂಗೆ ನಾನು ನರಿ ನೀನು ಕುದುರೆ ನನ್ನಂತಾದರೆ ಮಾತ್ರ ಇಲ್ಲಿರು ಇಲ್ಲದಿದ್ದರೆ ನಡೆ ಎಂದು ದಿನ ನಿತ್ಯವೂ ತೊಂದರೆ ಕೊಡಲಾರಂಭಿಸಿತು.

ಹೀಗೆ ಜಗಳ ಒಂದು ದಿನ ತಾರಕ್ಕಕ್ಕೇರಿದಾಗ ನಿನಗೆ ಕಾವಿಕೊಟ್ಟವರು ನಮ್ಮ ಗುರುಗಳು ಅದನ್ನು ಇಲ್ಲಿ ಕಳಚಿಕೊಟ್ಟು ನೀನು ಇಲ್ಲಿಂದ ಹೊರಟು ಹೋಗು ಎಂದು ತಮ್ಮ ಗುರುಗಳ ಗಮನಕ್ಕೂ ತರದೇ ಕೆಟ್ಟ ನಿರ್ಧಾರ ತೆಗೆದುಕೊಂಡು ಅಶ್ವದ ಮೇಲೆ ಅನೇಕ ಆರೋಪಗಳನ್ನು ಮಾಡಿ ಹೋಗಲೇ ಬೇಕು ಎಂದು ತಾಳಲಾರದ ಕಾಟ ಕೊಟ್ಟಾಗ, ಆ ಅಶ್ವ ಗುರು ವಿಂಧ್ಯದೊಳಗಿರುವುದಕ್ಕಿಂತ ನರವಿಂಧ್ಯದೊಳಗಿರುವುದೇ ಲೇಸೆಂದು ತಿಳಿದು, ಉಟ್ಟ ಕಾವಿ ಬಟ್ಟೆ ಬಿಚ್ಚಿಕೊಟ್ಟು, ಒಂದು ಸಣ್ಣ ವಸ್ತ್ರ ತೊಟ್ಟು ಅಂಗಡಿಗೆ ಹೋಗಿ ಅಲ್ಲಿ ಬೇರೆ ಬಟ್ಟೆ ಖರೀದಿಸಿ ತೊಟ್ಟು ಹೊರಟು ಹೋಯಿತು.

ಮೇಲಿನ ಘಟನೆಯಲ್ಲಿ ಗುರುಗಳು ಕಾವಿ ದೀಕ್ಷೆ ನೀಡುವಾಗ ಅಶ್ವಕ್ಕೆ ನಿನ್ನ ನಿಜವಾದ ಗುರು ಗುರು ಬಸವಣ್ಣನವರು ನಾನು ನಿಮಿತ್ತ ಮಾತ್ರ ಎಂದು ಧೈರ್ಯ ತುಂಬಿದ್ದರೆ, ಮತ್ತು ಈ ಹಿಂದಯೂ ದೀಕ್ಷೆ ಪಡೆದ ನರಿಗೂ ಇದನ್ನೇ ಬೋಧಿಸಿದ್ದರೆ ನರಿ ಮತ್ತು ಅಶ್ವಗಳು ವಚನ ಸಂವಿಧಾನವನ್ನು ಉಲ್ಲಂಘಿಸುತ್ತಿರಲಿಲ್ಲ.

ಈ ವಿಚಾರ ವಚನ ಸಂವಿಧಾನಕ್ಕೆ ವಿರುದ್ಧವಾದುದು. ಪರುಷ ಮುಟ್ಟಿದ ಬಳಿಕ ಕಬ್ಬಿಣ ಹಳೆಯ ಕಬ್ಬಿಣವಾದರೇನು ಹೊಸ ಕಬ್ಬಿಣವಾದರೇನು ಅದು ಬಂಗಾರವೇ ಎನ್ನುವುದು ವಚನ ಸಾಹಿತ್ಯದ ಆಜ್ಞೆ. ಈ ರೀತಿ ಗುರುಕಾರುಣ್ಯ ಪಡೆದವರೆಲ್ಲರನ್ನೂ ಸಮಾನವಾಗಿ ಕಾಣಬೇಕೆ ಹೊರತು ಭೇದಭಾವ ಸಲ್ಲದು ಎಂದು ವಚನ ಸಾಹಿತ್ಯ ಬೋಧಿಸುತ್ತದೆ.

ಈ ರೀತಿಯಾಗಿ ಮೇಲಿನ ದೃಷ್ಠಾಂತದಲ್ಲಿ ನರಿ ವಚನ ಸಂವಿಧಾನವನ್ನು ಉಲ್ಲಂಘಿಸಿದ ಕಾರಣ ವಚನ ದಂಡಸಂಹಿತೆಯ ಪ್ರಕಾರ “ಜಂಗಮವ ಜರಿದುದ್ದಕ್ಕಾಗಿ ಭವ ಪಾಶ” ದ ಶಿಕ್ಷೆ ಕೊಡುತ್ತದೆ. ಇನ್ನೂ ಅಶ್ವ ಧೈರ್ಯ ತಾಳದೆ ಕಾವಿ ಬಟ್ಟೆ ಬಿಚ್ಚಿಕೊಟ್ಟಿರುವ ತಪ್ಪಿಗಾಗಿ ಸಮಗ್ರವಚನ ಸಾಹಿತ್ಯ ಐದು ಬಾರಿ ಓದಬೇಕು ಎನ್ನುವ ಶಿಕ್ಷೆಯನ್ನು ವಿಧಿಸುತ್ತದೆ.

ದೃಷ್ಠಾಂತ -2

ಒಂದಾನೊಂದು ಕಾಲದಲ್ಲಿ ಒಂದಾನೊಂದು ಊರಿನಲ್ಲಿ ಒಬ್ಬ ಅವಿವೇಕಿ ಗುರು, ಮತ್ತು ಪ್ರಚಂಡ ಶಿಷ್ಯನಿದ್ದ. ಪ್ರಚಂಡ ಶಿಷ್ಯ ಆ ಅವಿವೇಕಿ ಗುರುವಿನಿಂದಲೇ ಇಷ್ಟಲಿಂಗ ದೀಕ್ಷೆ ತೆಗೆದುಕೊಂಡನು. ಗುರು ಶಿಷ್ಯರಾದಮೇಲೆ ಅವರಲ್ಲಿ ತುಂಬಾ ಆತ್ಮೀಯತೆ ಬೆಳೆದು ಗುರುವಿನ ಆಗುಹೋಗುಗಳಿಗೆ ಶಿಷ್ಯ ಮತ್ತು ಶಿಷ್ಯನ ಕಷ್ಟ ಸುಖಗಳಿಗೆ ಗುರು ಸ್ಪಂದಿಸುತ್ತ ಇದ್ದಿರಲು ಅವರ ಮಧ್ಯೆ ಸಲುಗೆಯೂ ಬೆಳೆಯಿತು.

ಆ ಸಲುಗೆ ಕೆಲವೊಂದು ವ್ಯವಹಾರಗಳಿಗೂ ಕಾರಣವಾಯಿತು. ವ್ಯವಹಾರ ಮುಂದೊಮ್ಮೆ ಅವ್ಯವಹಾರವಾಗಿ ಕಲಹಕ್ಕೂ ಕಾರಣವಾಯಿತು. ಹೀಗೆ ಕಲಹವಾದಾಗ ಅವಿವೇಕಿ ಗುರು ಪ್ರಚಂಡ ಶಿಷ್ಯನಿಗೆ ಬುದ್ಧಿ ಕಲಿಸಲು ತಾನು ಸಾಕಿದ ಕೆಲವು ನಾಯಿಗಳನ್ನು ಬಿಟ್ಟು ಕಚ್ಚಿಸಿದ.

ಈ ನಾಯಿಗಳನ್ನು ಬಿಟ್ಟದ್ದು ಆ ಗುರು ಎನ್ನುವುದು ಶಿಷ್ಯನಿಗೆ ಗೊತ್ತಾಗಾಲು ಬಹಾಳ ದಿನಗಳು ಹಿಡಿಯಲಿಲ್ಲ. ಗೊತ್ತಾದ ತಕ್ಷಣವೇ ಗುರುವಿನಲ್ಲಿಗೆ ಓಡಿ ಹೋಗಿ ಆ ಗುರು ಕೊಟ್ಟಿದ್ದ ಇಷ್ಟಲಿಂಗವನ್ನು ಅವನ ಮುಖಕ್ಕೆ ಎಸೆದು ನಿನ್ನಂಥವನಿಂದ ಇಷ್ಟಲಿಂಗ ದೀಕ್ಷೆ ತೆಗೆದುಕೊಂಡೆಲ್ಲಾ ನಾನು ಯಾವ ಪಾಪಕ್ಕೆ ಗುರಿಯಾಗುತ್ತೇನೊ ಗೊತ್ತಿಲ್ಲ ಎಂದು ಕೋಪದಿಂದ ನುಡಿದು ಹೊರಟು ಹೋದ. ಮತ್ತೆ ಬೇರೊಬ್ಬರಿಂದ ಇಷ್ಟಲಿಂಗದೀಕ್ಷೆ ಪಡೆದ.

ಈ ಸಂದರ್ಭದಲ್ಲಿ ಆ ಅವಿವೇಕಿ ಗುರು ಇಷ್ಟಲಿಂಗ ದೀಕ್ಷೆ ನೀಡುವಾಗ ಮೇಲಿನ ಗುರು ಸಿದ್ಧರಾಮೇಶ್ವರರ ವಚನವನ್ನು ಬೋಧಿಸಿ ನಿನ್ನ ನಿಜವಾದ ದೀಕ್ಷಾಗುರು ಗುರು ಬಸವಣ್ಣನರೇ ನಾನು ನಿಮಿತ್ತ ಮಾತ್ರ ಎಂದು ಬೋಧಿಸಿದ್ದರೆ, ಹಾಗು ಆ ಶಿಷ್ಯ ಅದೇ ರೀತಿ ಭಾವಿಸಿದ್ದರೆ ಅವನು ಆ ಗುರು ಕೊಟ್ಟ ತನ್ನ ಇಷ್ಟಲಿಂಗವನ್ನು ಕಿತ್ತೆಸೆದು ಬೇರೊಬ್ಬರಿಂದ ದೀಕ್ಷೆ ಪಡೆಯುವ ಪ್ರಸಂಗ ಬರುತ್ತಿರಲಿಲ್ಲ.

ಇದರಿಂದಲೂ ವಚನ ಧರ್ಮ ಸಂಹಿತೆಗೆ ಧಕ್ಕೆಯಾಯಿತು. ಈ ಉಭಯ ಭ್ರಷ್ಟರನ್ನೂ ಗುರು ಬಸವಣ್ಣನವರು ಮೆಚ್ಚುವುದಿಲ್ಲ. ಇದು ಲಿಂಗಾಯತ ಧರ್ಮದ ವಚನ ದಂಡಸಂತೆಯ ಪ್ರಕಾರ ಅಕ್ಷಮ್ಯ ಅಪರಾಧ. ಇದಕ್ಕೆ ಶಿಕ್ಷೆಯೇನೆಂದರೆ ತತ್ವ ನಿಷ್ಠುರಿ ಅಂಬಿಗ ಚೌಡಯ್ಯನವರು ಬಂದು "ಮೆಟ್ಟಿದ ಎಡಪಾದ ರಕ್ಷೆಯಿಂದ ಲೊಟಲೊಟನೆ ಹೊಡೆಯುತ್ತಾರೆ." ಮತ್ತು ಇಬ್ಬರೂ 12 ವರ್ಷಗಳ ಕಾಲ ವಚನ ಸಾಹಿತ್ಯವನ್ನು ದಿನ ನಿತ್ಯ ತಪ್ಪದೇ ಒದಿ 12 ಬಾರಿ ಸಂಪೂರ್ಣಬಾಗಿ ಸಮಗ್ರ ವಚನಸಾಹಿತ್ಯವನ್ನು ಓದಬೇಕೆಂಬ ಶಿಕ್ಷೆ ವಿಧಿಸುತ್ತದೆ.

ದೃಷ್ಠಾಂತ-3

ಒಂದಾನೊಂದು ದಿನಮಾನಗಳಲ್ಲಿ ಸಾಧು ಪ್ರಾಣಿಗಳ ಮೇಲೆ ಪ್ರಬಲವಾಗಿ ಆಕ್ರಮಣ ಮಾಡುತ್ತ ಮೃಗರಾಜತೇಜದಿಂದ ಮೆರೆದಿದ್ದ ಒಂದು ವ್ಯಾಘ್ರಕ್ಕೆ ವಯಸ್ಸಾಯಿತು. ಆ ವಯಸ್ಸಾದ ವ್ಯಾಘ್ರಕ್ಕೆ ಜಂಗಮ ದೀಕ್ಷೆ (ಕಾವಿ ಬಟ್ಟೆ) ಪಡೆಯಬೇಕೆಂಬ ಅಪೇಕ್ಷೆಯಾಯಿತು. ಆಗ ಅದು ಯಾರಿಂದ ದೀಕ್ಷೆ ಪಡೆಯಬೇಕು ಎಂದು ತುಂಬಾ ಯೋಚನೆ ಮಾಡಿತು. ಹಲವಾರು ಕಡೆ ಸುತ್ತಿ ನೋಡಿ ಯಾರಿಂದ ದೀಕ್ಷೆ ಪಡೆದರೆ ತನಗೆ ಲಾಭವಾಗುವುದು ಎಂದು ಸರ್ವೆ ಮಾಡಿತು. ಕೊನೆಗೆ ಒಂದು ಹಸುವಿನಿಂದ ಜಂಗಮ ದೀಕ್ಷೆ ಪಡೆದರೆ ನನ್ನನ್ನು ವ್ಯಾಘ್ರವೆಂದು ನಂಬದೇ ಎಲ್ಲರೂ ನನ್ನ ಬಳಿಗೆ ಬರುತ್ತಾರೆ, ಬೇಟೆಯಾಡಲೂ ಶಕ್ತಿಯಂತೂ ಇಲ್ಲ ಆಗ ಒಬ್ಬೊಬರನ್ನೇ ನಿಧಾವಾಗಿ ಹರಿದು ತಿನ್ನಬಹುದು ಎನ್ನುವ ಆಲೋಚನೆ ಹೊಳೆಯಿತು.

ಅದರಂತೆ ಅದು ಒಂದು ಶರಣ ಸಮ್ಮತವಾದ ಶುಭ ಸಮಯದಲ್ಲಿ ಹಸುವಿನಿಂದ ಕಾವಿ ಬಟ್ಟೆಯನ್ನು ಪಡೆಯಲು ಸಿದ್ಧವಾಗಿ ಬಂದೇ ಬಿಟ್ಟಿತು. ಇದನ್ನು ಕಂಡು ಹಸುವಿನ ಸುತ್ತಮುತ್ತಲಿರುವ, ಜಿಂಕೆ, ಮೊಲ, ಎಮ್ಮೆ, ಮೇಕೆ, ಕುರಿಗಳೆಲ್ಲವೂ ಆತಂಕಗೊಂಡವು. ಈ ವ್ಯಾಘ್ರಕ್ಕೆ ಕಾವಿ ಬಟ್ಟೆ ಕೊಟ್ಟು ಕಲಂಕಿತರಾಗಬೇಡಿರಿ ಎಂದು ತಿಳಿಹೇಳಿದವು. ಅಂಗ ರಕ್ಷಕನಾಗಿ ಮಾಡಿಕೊಳ್ಳಲು ವ್ಯಾಘ್ರವೊಂದರ ಅವಶಕತೆ ಇತ್ತೋ ಹೇಗೋ, ತಿಳಿಯದು. ಹಸು ಯಾರ ಮಾತನ್ನು ಕೇಳದೆ ವಯಸ್ಸಾದ ವ್ಯಾಘ್ರಕ್ಕೆ ಕಾವಿ ದೀಕ್ಷೆಯನ್ನು ಕೊಟ್ಟೇ ಬಿಟ್ಟಿತ್ತು. ಹಸುವಿನ ಸುತ್ತಮುತ್ತಲಿರುವ, ಜಿಂಕೆ, ಮೊಲ, ಎಮ್ಮೆ, ಮೇಕೆ, ಕುರಿಗಳೆಲ್ಲವೂ ತುಂಬಾ ವಿರೋಧ ಮಾಡಲು ಆರಂಭಿಸಿದ್ದರಿಂದ, ಹಸು ಹೇಳಿತ್ತು: “ನಾನು ಕಾವಿ ಬಟ್ಟೆಯನ್ನು ವ್ಯಾಘ್ರಕ್ಕೆ ಕೊಡಲೇ ಇಲ್ಲ, ಅದು ತನ್ನಿಂದ ತಾನೆ ಧರಿಸಿ, ನನ್ನಿಂದ ಪಡೆದ ಎಂದು ಸುಳ್ಳು ಹೇಳಿದೆ” ಎಂದು ಹೇಳಿ ತನ್ನ ಸಹ ಪ್ರಾಣಿಗಳ ವಿರೋಧ ನಿವಾರಿಸಿಕೊಂಡಿತು.

ಈ ವಿಷಯ ತಿಳಿದ ವ್ಯಾಘ್ರ, ಕಾವಿಬಟ್ಟೆ ಕೊಟ್ಟ ಹಸು “ಕೊಟ್ಟೂ ಕೊಟ್ಟಿಲ್ಲವೆಂದು ಸುಳ್ಳು ಹೇಳಿದೆ” ಎಂದು ಕುಪಿತಗೊಂಡು, ಹಸುಕೊಟ್ಟ ಕಾವಿಬಟ್ಟೆಗಳನ್ನು ಕಿತ್ತೆಸೆದು; ಮತ್ತೆ ಮುನ್ನಿನಂತೆಯೇ ಕೆಲಕಾಲ ಬದುಕತೊಡಗಿತು.

ವಯಸ್ಸಾದ್ದರಿಂದ ಬೇಟೆ ದೊರೆಯುವುದು ಕಷ್ಟವಾಯಿತು, ಹೀಗಾಗಿ ಕಾವಿ ತೊಟ್ಟರೆ ಬೇಟೆಗಳು ತಾನಾಗಿಯೇ ನನ್ನ ಬಳಿ ಬರುತ್ತವೆ ಎಂದು ತಿಳಿದು ಹೇಗಾದರೂ ಮಾಡಿ ಕಾವಿ ದೀಕ್ಷೆ ಪಡೆಯಲೇ ಬೇಕು ಎಂದು ಪಣ ತೊಟ್ಟಿತು. ಈ ಬಾರಿ ಯಾರಿಂದ ದೀಕ್ಷೆ ಪಡೆಯಬೇಕು ಎಂದು ಆಲೋಚಿಸಿದಾಗ ಹಿಂದಿನ ಕಹಿ ನೆನಪಿನಿಂದ, ಇನ್ನೊಂದು ವ್ಯಾಘ್ರದ ಬಳಿಯೇ ದೀಕ್ಷೆ ತೆಗೆದುಕೊಂಡರೆ ನನಗೆ ಬಲ ಹೆಚ್ಚು ಎಂದು ತಿಳಿದು ವ್ಯಾಘ್ರವೊಂದನ್ನು ಅರಸುತ್ತ ಹೋಗಿ ಮತ್ತೊಂದು ವ್ಯಾಘ್ರ ಸಿಕ್ಕ ತಕ್ಷಣವೇ ಅದರ ಬಳಿಯೇ ಮತ್ತೆ ಕಾವಿ ದೀಕ್ಷೆ ಪಡೆಯಿತು.

ಆನಂದದಿಂದ ಸಾಧನೆ ಮಾಡುತ್ತ ಕೆಲ ವರ್ಷಗಳ ಕಾಲ ಗುರ್ ತೇಜದಿಂದ ಮೆರೆಯಿತು. ಮತ್ತೆ ಮುಂದೆ ಇದರಿಂದಲೂ ಒಳ್ಳೆಯ ಬೇಟೆಗಳು ತನ್ನ ಬಳಿಗೇ ಬರದಿದ್ದರೆ; ಮತ್ತೆ, ವ್ಯಾಘ್ರ ಕೊಟ್ಟ ಕಾವಿ ಬಟ್ಟೆಗಳನ್ನು ತೊರೆದು ಹಸುವಿನಿಂದಲೇ ಪಡೆದರೂ ಆಶ್ಚರ್ಯ ಪಡಬೇಕಾಗಿಲ್ಲ!

ಈ ಸಂದರ್ಭದಲ್ಲಿಯೂ ಹಸುವು ದೀಕ್ಷೆ ಕೊಡುವಾಗ ನಿನ್ನ ನಿಜವಾದ ದೀಕ್ಷಾ ಗುರು, ಗುರು ಬಸವಣ್ಣನವರೇ ನಾನು ನಿಮಿತ್ತ ಮಾತ್ರ. ನಿನ್ನ ಆಗು ಹೋಗುಗಳಿಗೆ ಅವರೇ ಕಾರಣ ಕರ್ತರು ಎನ್ನುವ ಲಿಂಗಾಯತ ಧರ್ಮ ಸಂಹಿತೆಯನ್ನು ವ್ಯಾಘ್ರಕ್ಕೆ ಬೋಧಿಸಿದ್ದರೆ; ಮತ್ತು ವ್ಯಾಘ್ರ ಹಾಗೆ ನಡೆದು ಕೊಂಡು “ಮುನ್ನ ಮಾಡಿದ ಪಾಪಕ್ಕೆ ಒಮ್ಮೆ ಶರಣೆಂದು” ಲಿಂಗಾಯತ ಧರ್ಮ ಸಂವಿಧಾನದ ಪ್ರಕಾರ ನಡೆದುಕೊಂಡಿದ್ದರೆ, ಪಡೆದ ಕಾವಿ ತೆಗೆದು, ಮತ್ತೆ ಕಾವಿ ಪಡೆದು, ಮತ್ತೆ ತೆಗೆದು ಪಡೆಯುವ ಹಂಬಲವೂ ಇರುತ್ತಿರಲಿಲ್ಲ.

ಇದರಿಂದಲೂ ಕೂಡ ಲಿಂಗಾಯತ ಧರ್ಮ ಸಂವಿಧಾನದ ಉಲ್ಲಂಘನೆಯಾಗಿದೆ, ಲಿಂಗಾಯತ ಧರ್ಮ ದಂಡ ಸಂಹಿತೆಯ ಪ್ರಕಾರ ಇದೂ ಅಕ್ಷಮ್ಯ ಅಪರಾಧವೇ. ಹಸುವು ಈ ಮುಂಚೆ ಮಾಡಿದ ಒಳ್ಳೆಯ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡುಅದಕ್ಕೆ ಹತ್ತು ಬಾರಿ ವಚನಸಾಹಿತ್ಯವನ್ನು ಓದಬೇಕು ಎನ್ನುವ ಶಿಕ್ಷೆ ವಿಧಿಸುತ್ತದೆ ಮತ್ತು ವ್ಯಾಘ್ರವನ್ನು ಕ್ಷಮಿಸಲು ಸಾಧ್ಯವಿಲ್ಲ. ಇದಕ್ಕೆ ಶಿಕ್ಷೆ ಸ್ವತಃ ಧರ್ಮಗುರು ಬಸವಣ್ಣನವರೇ ಶಿಫಾರಸ್ಸು ಮಾಡುತ್ತಾರೆ. ಆ ಶಿಕ್ಷೆ ಹೀಗಿದೆ “ ಲಿಂಗದೇವನು ಶೃಂಗಾರದ ಮೂಗ ಹಲುದೋರೆ ಕೊಯ್ದು, ಇಟ್ಟಿಗೆಯಲೊರೆಸಿ, ಕನ್ನಡಿಯ ತೋರುವ ಕಾಣಿರೋ”.

ಇಂಥ ಒಂದಲ್ಲ ಎರಡಲ್ಲ ಲಿಂಗಾಯತ ಧರ್ಮದ 850 ವರ್ಷಗಳ ಇತಿಹಾಸದಲ್ಲಿ ಅಗಣಿತ ಘಟನೆಗಳು ನಡೆದಿವೆ, ಇಂದಿಗೂ ಅಲ್ಲಲ್ಲೇ ಅನೇಕ ಘಟನೆಗಳು ನಡೆಯುತ್ತಲೇ ಇವೆ. ಇಂತಹ ದುರ್ಘಟನೆಗಳಿಂದಲ್ಲೇ ಸ್ವತಂತ್ರ ಭಾರತದಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯಲು ಹರಸಾಹಸ ಪಡಬೇಕಾಗುತ್ತಿದೆ.

ಈ ಕಥೆಗಳು ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ದೃಷ್ಠಾಂತ ಹೇಳುವ ಶೈಲಿಯಿಂದ ಪಡೆದಿದ್ದು ಇವುಗಳು ಕಥೆಗಳು ಮಾತ್ರ. ಈ ಕಥೆಗಳಿಂದ ನಾವು ವಚನಸಂವಿಧಾನ ಅರಿಯಲು ಸಾಧ್ಯವಾಗಬಹುದು ಎನ್ನುವ ಉದ್ದೇಶದಿಂದ ಹೇಳಿದ್ದೇನೆ. ಇವುಗಳು ಯಾರ ಜೀವನಕ್ಕಾದರೂ ಹೊಂದಿಕೆಯಾದಲ್ಲಿ ಅದೊಂದು ಯೋಗಾಯೋಗ ಮಾತ್ರ. ಈ ಎರಡೂ ಕಥಗಳ ಸಾರಂಶ (Moral of the story) ಏನೆಂದರೇ ಯಾರೆ ದೀಕ್ಷೆ ಕೊಡಲಿ ಯಾರೇ ಪಡೆಯಲಿ ನಮ್ಮ ದೀಕ್ಷಾ ಗುರು ʼಗುರು ಬಸವಣ್ಣವರುʼ ಮಾತ್ರ. ಉಳಿದವರೆಲ್ಲರೂ ನಿಮಿತ್ತ ಮಾತ್ರ.

ಗುರು ಬಸವಣ್ಣನವರೇ ನಿಮ್ಮ ದೀಕ್ಷಾಗುರು ಎಂದು ಬೋಧಿಸಿದರೆ ಗುರುವಿನ ಮೂಲಭೂತ ಕರ್ತವ್ಯ ಪೂರ್ತಿಯಾಗಿ ತನ್ನ ಮೇಲಿನ ಜವಾಬ್ದಾರಿಯೂ ತೀರುತ್ತದೆ. ಅದೇ ರೀತಿ ಶಿಷ್ಯ ತನ್ನ ದೀಕ್ಷಾ ಗುರು ಗುರು ಬಸವಣ್ಣನವರೇ ಎಂದು ತಿಳಿದರೆ ಅವನ ಮೂಲ ಭೂತ ಹಕ್ಕಿನ ರಕ್ಷಣೆಯಾಗುತ್ತದೆ. ಇಷ್ಟಲಿಂಗ ಭಕ್ತನ ಮೂಲ ಭೂತ ಹಕ್ಕು, ಅದನ್ನು ಯಾರೇ ಕೊಟ್ಟಿರಲಿ ಕಸಿದುಕೊಳ್ಳವ ಹಕ್ಕು ಯಾರಿಗೂ ಇಲ್ಲ. ಇಷ್ಟಲಿಂಗ ಕೊಟ್ಟ ಗುರು ಪಥಭೃಷ್ಟನಾದಾಗ ಆ ಇಷ್ಟಲಿಂಗವನ್ನು ತೆಗೆದು ಹಾಕಿ ಬೇರೊಬ್ಬರಿಂದ ಪಡೆದು ತಾನೂ ಪಥಭೃಷ್ಟನಾಗುವು ಅನಿವಾರ್ಯತೆ ಭಕ್ತನಿಗೆ ಒದಗುವುದಿಲ್ಲ.

ಪರಿವಿಡಿ (index)
ಪ್ರಜಾಪ್ರಭುತ್ವದ ಮೂಲಧಾರೆ :👈 👉:ಲಿಂಗಾಯತ