Previous ಸಂಗೀತಜ್ಞ ವಚನಕಾರರ ಪರಂಪರೆ: ಲಿಂಗಾಯತ ಧರ್ಮದ ಸಾರ Next

ಬಸವೋತ್ತರ ಕಾಲದ ವಚನ ಸಂಗೀತ

*

ಬಸವೋತ್ತರ ಕಾಲದ ವಚನ ಸಂಗೀತ.

ಪುರಂದರದಾಸರಿಗಿಂತ ಮೊದಲೇ ಅಥವಾ ಅವರ ಕಾಲದಲ್ಲಿಯೇ ಕೀರ್ತನೆಗಳ ಶೈಲಿಯಲ್ಲಿ, ಲಿಂಗಾಯತ ತತ್ವ ಪ್ರದುಷ್ಟವಾದ ತತ್ವಪದಗಳನ್ನು ರಚಿಸಿ, ಅವುಗಳನ್ನು ಕರ್ನಾಟಕ ಶಾಸ್ತ್ರೀಯ ಸಂಗೀತದ ಸಂವಿಧಾನಕ್ಕೆ ಅಳವಡಿಸಿ ಹಾಡುವ ಪದ್ಧತಿಯನ್ನು ಬಳಕೆಗೆ ತಂದವರು ನಿಜಗುಣ ಶಿವಯೋಗಿಗಳು (ಕ್ರಿ. ಶ. 15 /16 ನೇ ಶತಮಾನ) ಇವರ ಕೃತಿಗಳಿಗೆ ಕೈವಲ್ಯ ಗೀತಗಳು ಎಂಬ ಹೆಸರಿದೆ. ಶಿಶುನಾಳ ಶರೀಫರ ತನಕ ಸಾಗಿಬಂದ ಇವರ ತತ್ವಪದ ಸಂಪ್ರದಾಯದಲ್ಲಿ ಲಾಲಿತ್ಯಮಯ ಸಾಹಿತ್ಯವೂ, ಸಂಗೀತವೂ, ಗಂಭೀರವಾದ ಯೋಗಸಾಧನೆಯ ವಿಷಯಗಳೂ, ಗೂಢಾರ್ಥಗಳೂ ಮೇಳೈಸಿದ್ದು, ಬೆರಗುಗೊಳಿಸುವಂತಿರುತ್ತವೆ.

ಇವರಲ್ಲದೆ ಮುಪ್ಪಿನ ಷಡಕ್ಷರಿ, ಸರ್ಪಭೂಷಣ ಶಿವಯೋಗಿ, ಕಡಕೋಳ ಮಡಿವಾಳಪ್ಪ, ಚಿದಾನಂದ ಅವಧೂತರು ಮುಂತಾದವರು ಸ್ವರವಚನಗಳನ್ನಲ್ಲದೆ, ನೂರಾರು ತತ್ವಪದಗಳನ್ನು ರಾಗ ಪ್ರಸ್ತಾರ ನಿರ್ದೇಶಿಕೆಯೊಂದಿಗೆ ಹಾಡಿದ್ದಾರೆ. ಹೊಸ ಪ್ರಯೋಗಗಳನ್ನು ಹುಡುಕುವ ಸಂಗೀತ ಸಾಹಸಿಗಳಿಗೆ ಇಲ್ಲಿ ಸಾಕಷ್ಟು ಸರಕಿದೆ. ನಮ್ಮ ಸಂಗೀತಗಾರರು ಇನ್ನಾದರೂ ಇಂತಹಾ ಅಜ್ಞಾತ ವಾಗ್ಗೇಯಕಾರರ ಕೃತಿಗಳನ್ನು ಹಾಡಿಯಾರೇ ಎಂದು ನಿರೀಕ್ಷೆಯಲ್ಲಿದ್ದೇನೆ.

ಇರುವ ವಿಚಾರ ಹೇಳುವುದಾದರೆ, ಕರ್ನಾಟಕ ಸಂಗೀತದ ಅಭ್ಯಾಸಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬ್ರಾಹ್ಮಣರು ವಚನಗಳ/ಶರಣರ ಬಗೆಗಿನ ತಮ್ಮ ಜಾತಿ ತಿರಸ್ಕಾರದ ಕಾರಣಕ್ಕೆ ಅಥವಾ ಅವುಗಳ ಲಯ ಕಠಿಣತೆಗೆ ಹೆದರಿ ಹಾಡುವುದಿಲ್ಲ, ಇನ್ನು ಲಿಂಗಾಯತರಿಗೆ ಅಥವಾ ಬೇರೆ ಜಾತಿಗಳಿಗೆ ಸಾಂಪ್ರದಾಯಿಕ ಸಂಗೀತದ ಮಹತ್ವವೇ ಗೊತ್ತಿಲ್ಲ! ಅದರ ಗಂಧವೂ ಇಲ್ಲ. ಗೊತ್ತಿದ್ದವರಿಗೆ, ಇಂತಹಾ ಸಾಹಸಗಳನ್ನು ಪ್ರಯತ್ನಿಸಿ ನೋಡುವ ಮನೋಧರ್ಮವೂ ಇಲ್ಲ.

ಜಾತಿಗಳ ಮಾತು ಎತ್ತಿ ಆಡಿಕೊಳ್ಳುವುದು ನನ್ನ ಉದ್ದೇಶವಲ್ಲ. ಯಾರಿಗಾದರೂ ನೋವಾದಲ್ಲಿ ಕ್ಷಮಿಸಬೇಕು. ಯಾವ ಜಾತಿಯೇ ಇರಲಿ, ಸಂಗೀತ ಸಾಹಿತ್ಯ, ಕಲೆಗಳಂತಹ ನವಿರುತನಗಳು ಯಾವುದೇ ಜನಾಂಗದ ಸರ್ವಾಂಗೀಣ ವಿಕಾಸಕ್ಕೆ ಅಗತ್ಯವಾದ ಸಂಗತಿಗಳು ಎಂಬುದು ನನ್ನ ಅಭಿಪ್ರಾಯ. ಅದು ಶಾಸ್ತ್ರೀಯವಾಗಿಯೇ ಇರಬೇಕೆಂಬ, ಸುಶಿಕ್ಷಿತ ರೂಪದಲ್ಲಿಯೇ ಇರಬೇಕೆಂಬ ನಿಯಮವಿಲ್ಲ, ಜಾನಪದ/ಗ್ರಾಮ್ಯ ರೂಪದಲ್ಲಿಯಾದರೂ ಇರುವಲ್ಲದೇಕೆ, ಆದರೆ ಇಂತಹಾ ಯಾವುದೇ ಸಂಗತಿಗಳ ಅರಿವಿಲ್ಲದ ಸಮಾಜವು ದಿನೇ ದಿನೇ ನಾಶ ಹೊಂದುತ್ತಿದೆ ಎಂದೇ ಅರ್ಥ.

ಜನಪ್ರಿಯ ವೇದಿಕೆಗಳಲ್ಲಿ, ಜನರ ಆಡುಮಾತುಗಳಲ್ಲಿ, ದೈನಂದಿನ ಆಸರ ಬೇಸರ, ಸಂಭ್ರಮವೇ ಮುಂತಾದ ಸಂದರ್ಭಗಳಲ್ಲಿ, ಎಂದಿನ ಜಂಜಡದ ಜೀವನದಲ್ಲಿ ಹಾಸುಹೊಕ್ಕಾಗದ ತತ್ವವು ಪುಸ್ತಕಗಳಲ್ಲಿ ಮಾತ್ರ ಉಳಿಯುತ್ತದೆ; ಕ್ರಮೇಣ ಸಾಮುದಾಯಿಕ ಸ್ಮೃತಿಯಿಂದ ಮರೆಯಾಗಿ ಹೋಗುತ್ತದೆ.
ಹರಿದಾಸರ ಹಾಡುಗಳಂತೂ ಜಾತಿಯ ಕಟ್ಟಳೆಗಳನ್ನು ಮೀರಿ ಸರ್ವಜನರ ಸಂಪ್ರೀತಿ ಗಳಿಸಿವೆ. ಬೇರೆ ಜಾತಿಯವರ ಮಾತು ಹಾಗಿರಲಿ, ರಾಗ ತಾಳಗಳನ್ನು ಸ್ಪಷ್ಟವಾಗಿ ನಿರ್ದೇಶಿಸಿ ರಚಿಸಲಾದ ನಿಜಗುಣರ ಕೃತಿಗಳನ್ನು ಹಾಡಬಲ್ಲ ಒಬ್ಬ ಲಿಂಗಾಯತನನ್ನೂ ನಾನು ನೋಡಲಿಲ್ಲ. ವಚನಕಾರರಿಗೆ ತಾತ್ವಿಕ ಕಾರಣಗಳಿಗಾಗಿ ಸಂಗೀತ ಮುಖ್ಯವಲ್ಲದಿರಬಹುದು, ಆದರೆ ಸಾಮಾನ್ಯ ಲಿಂಗಾಯತರಿಗೂ ಅದರಲ್ಲಿ ಆಸ್ಥೆಯಿಲ್ಲವೆಂದರೆ ಅದೊಂದು ಜನಾಂಗೀಕ ದುರಂತವಲ್ಲದೆ ಮತ್ತೇನಲ್ಲ.

ಆಧುನಿಕ ಕಾಲದ ವಚನ ಗಾಯನ:

ಕೇವಲ ಹದಿನೆಂಟನೆಯ ವಯಸ್ಸಿನಲ್ಲಿ ಶಿವಶರಣರ ವಚನಗಳಿಗೆ ಅತಿ ಶಾಸ್ತ್ರೀಯವೂ- ಅತಿ ಲಘುವೂ ಅಲ್ಲದ ಆಕರ್ಷಕ ಧಾತುಗಳನ್ನು ಸಂಯೋಜಿಸಿ ಹಾಡುವುದರಲ್ಲಿ ಕೀರ್ತಿಯನ್ನು ಗಳಿಸಿದ ಚಕ್ರಕೋಡಿ ನಾರಾಯಣ ಶಾಸ್ತ್ರಿಗಳು "ವಚನ ಗಾಯನ ಆದ್ಯ ಪ್ರವರ್ತಕ" ಎಂಬ ಬಿರುದನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಸಮ್ಮೇಳನದಲ್ಲಿ (೧೯೩೧ ) ಅ.ನ.ಕೃ.ರವರಿಂದ ಗಳಿಸಿದರು. ಪ್ರಾಯಶಃ ಇಂದಿನ ಕಾಲದಲ್ಲಿ ವಚನಗಳನ್ನು ರಾಗಕ್ಕೆ ಅಳವಡಿಸಿ ಹಾಡುವ ಸಾಹಸ ಮಾಡಿದವರಲ್ಲಿ ಇವರೇ ಮೊದಲಿಗರು. ಹಾನಗಲ್ಲ ಕುಮಾರಸ್ವಾಮಿಯವರ ಒತ್ತಾಸೆಯ ಮೇರೆಗೆ 1932 ರಲ್ಲಿ ಪಂಚಾಕ್ಷರಿ ಗವಾಯಿಗಳು ಸಂಗೀತ ಸಂಯೋಜಿಸಿ, ಅವುಗಳನ್ನು ಹಾಡುವ ಪರಂಪರೆಗೆ ನಾಂದಿ ಹಾಡಿದರು. ಮಲ್ಲಿಕಾರ್ಜುನ ಮನ್ಸೂರರು ಸಹಾ ಇವರೊಂದಿಗೆ ಗುರುತಿಸಬೇಕಾದ ಮಹನೀಯರು. ಮೇಲ್ಕಂಡ ಇವರನ್ನೇ ಆಧುನಿಕ ವಚನ ಗಾಯನದ ಪಿತಾಮಹರು ಎನ್ನಬಹುದು.

ಪ್ರಯತ್ನ ಮಾಡಿ, ಕೆಲವು ವಚನಗಳನ್ನು ಹಿಂದುಸ್ತಾನಿ ಶೈಲಿಯಲ್ಲಿ ಸಹ ಯಶಸ್ವಿಯಾಗಿ ಹಾಡಲಾಗಿದೆ. ಬೇಕಿದ್ದರೆ ಮಲ್ಲಿಕಾರ್ಜುನ ಮನ್ಸೂರ್, ಪಂಡಿತ್ ವೆಂಕಟೇಶ ಕುಮಾರ್ ಅವರ ಗಾಯನವನ್ನು ಕೇಳಬಹುದು. ಬಹುತೇಕ ಲಿಂಗಾಯತ ಮಠಗಳ ಸಭೆ ಸಮಾರಂಭಗಳಲ್ಲಿ ಹಲವರು ವಚನಗಳನ್ನು ಹಾಡುತ್ತಾರಾದರೂ ಅವುಗಳನ್ನು ಕೇವಲ ಅನಿವಾರ್ಯವಾಗಿ ಕೇಳಿಸಿಕೊಳ್ಳಬೇಕು ಅಷ್ಟೆ. ಅವುಗಳ ಗುಣಮಟ್ಟದ ಬಗ್ಗೆ ನಾನು ಏನೂ ಹೇಳದಿರುವುದೇ ಒಳ್ಳೆಯದು. ದಾಸರ, ತ್ಯಾಗರಾಜರ ಕೀರ್ತನೆಗಳ ಹಾಗೆ ವಚನಗಳನ್ನು ಕರ್ನಾಟಕ ಶೈಲಿಯಲ್ಲಿ ಅಳವಡಿಸಿ, ಒಳ್ಳೆಯ ರಾಗಸಂಯೋಜನೆಯಲ್ಲಿ ಹಾಡುವವರನ್ನು ನಾನು ಇದುವರೆಗೂ ಕಾಣಲಿಲ್ಲ.

ಹರಿದಾಸರ ಕೀರ್ತನೆಗಳಂತೆಯೇ ವಚನಗಳ ಪರಂಪರೆಯು ಕೂಡಾ ಯಾವ ಸಮುದಾಯದ ಆಸ್ತಿಯೂ ಅಲ್ಲ. ಅದು ವಿಶ್ವದ ಸಕಲ ಮಾನವ ಜನಾಂಗದ ಸೊತ್ತು. ಆದರೆ ವಚನಗಳ, ಶರಣರ ಪರಂಪರೆಯ ವಾರಸುದಾರರಂತೆ ಮಾತನಾಡುವ ಲಿಂಗಾಯತ ಸಮುದಾಯದವರಿಂದಲೇ ಇಂತಹಾ ಶ್ರೇಷ್ಠ ಸಂಪ್ರದಾಯವು ಅಜ್ಞಾನದಿಂದ, ಅವಿವೇಕತನದ, ಅವನತಿಯ ಹಾದಿ ಹಿಡಿದಿದೆ ಮತ್ತು ಈ ಇಳಿಜಾರಿನ ಹಾದಿಯಲ್ಲಿ ಸಾಕಷ್ಟು ದೂರ ಸಹಾ ಕ್ರಮಿಸಿಯಾಗಿದೆ. ಈ ಸ್ವರದ್ರೋಹದ ಮೊದಲ ಆರೋಪಿಗಳು ನಿಸ್ಸಂಶಯವಾಗಿ ಅವರೇ, ಇದರ ಕುರಿತು ನನಗೆ ಯಾವ ಅನುಮಾನವೂ ಉಳಿದಿಲ್ಲ, ಅದಲ್ಲದೆ ಇಂದು ಜಾತಿ ಜಾತಿಗಳೆಲ್ಲ ಮೊದಲಿಗಿಂತಲೂ ಭಯಂಕರವಾಗಿ ಸಂಘಟಿತವಾಗಿ, ಮತಾಂಧರಂತೆ ಪ್ರತ್ಯೇಕಗೊಳ್ಳುತ್ತಿರುವ ಈ ಸಂದರ್ಭದಲ್ಲಿ ನನಗೆ ಏನು ಹೇಳಬೇಕೆಂಬುದು ಸಹ ತೋಚುತ್ತಿಲ್ಲ.

ಕಡೆಯ ಮಾತು ಇಷ್ಟೇ, ವಚನಗಳನ್ನು ಸಹ ಗೀತಬದ್ಧವಾಗಿ ಹಾಡಲು ಸಾಧ್ಯವಿದೆ. ಅದನ್ನು ಕಂಡುಕೊಳ್ಳಲಿಕ್ಕಾಗಿ ಒಂದು ಬಗೆಯ ಸಂಶೋಧನಾತ್ಮಕವೂ, ಸಾಹಸಿಕವೂ ಆದ ಪ್ರಯತ್ನದ ಅಗತ್ಯವಿದೆ.

ಆಕರ : ಸಂಶೋಧನಾ ಪ್ರಬಂಧ: ವಚನಗಾಯನ ಪರಂಪರೆ; ಒಂದು ಸಂಗೀತಾತ್ಮಕ ಅಧ್ಯಯನ - ಡಾ. ಜಯದೇವಿ ಜಂಗಮಶೆಟ್ಟಿ (2013), ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಸಂಗೀತಜ್ಞ ವಚನಕಾರರ ಪರಂಪರೆ: ಲಿಂಗಾಯತ ಧರ್ಮದ ಸಾರ Next