ಸಿದ್ದರಾಮೇಶ್ವರರು ಕಟ್ಟಿಸಿದ ಕೆರೆ ಶುದ್ಧ ಮಾಡಲು ಯತ್ನಿಸಿದ ವಿಪ್ರರ ಕಥೆ
|
|
*
ಸಿದ್ದರಾಮೇಶ್ವರರು ಬಸವಯುಗದ ಶರಣ ರತ್ನಗಳಲ್ಲಿ ಒಬ್ಬರೆಂಬುದು ಹೆಮ್ಮೆಯ ಸಂಗತಿ. ಮಹಾರಾಷ್ಟ್ರದ ಉಸ್ಮಾಮಾನಾಬಾದ್ ಜಿಲ್ಲೆಯ ಮುರುಮ ಗ್ರಾಮದ ಕೆಲ ಬ್ರಾಹ್ಮಣರು ಸಿದ್ಧರಾಮರು ಕಟ್ಟಿಸಿದ ಕೆರೆಯಲ್ಲಿ ಸ್ನಾನ ಮಾಡಲೆಂದು ಬಂದರು. ಒಬ್ಬ ಶೂದ್ರ ಕಟ್ಟಿಸಿದ ಕೆರೆಯಾಗಿರುವುದರಿಂದ ಅದರಲ್ಲಿನ ನೀರು 'ಸಂಸ್ಕಾರಹೀನ ಕ್ಷುದ್ರೋದಕ' ವೆಂದು ಅವರ ವಾದವಾಗಿತ್ತು. ತಮ್ಮ ಶ್ರೇಷ್ಠತ್ವದಿಂದ ನೀರನ್ನು 'ಶುದ್ಧ' ಮಾಡಲು ಸಂಕಲ್ಪಿಸಿದ ವಿಪ್ರರ ಈ ತಂಡ ನೀರಿಗೆ ಇಳಿದು ಮಂತ್ರೋಚ್ಛಾರಣೆ ಮಾಡುತ್ತ ಸ್ನಾನ ಮಾಡಿದರು. ಸ್ನಾನ ಮುಗಿಸಿ ಹೊರ ಬರುತ್ತಿದ್ದಂತೆಯೇ ಕಾಗೆಯೊಂದು ಅವರನ್ನೆಲ್ಲ ಮುಟ್ಟಿ ಮೈಲಿಗೆ ಮಾಡಿತು. ತಂಡ ಮತ್ತೆ ಮತ್ತೆ ಸ್ನಾನ ಮಾಡಿ ಮೇಲೆ ಬಂದಂತೆ ಕಾಗೆ ಅವರ ಮಡಿ ಕೆಡಿಸುತ್ತಿತ್ತು. ವಿಪ್ರರೆಲ್ಲರು ಕಂಗೆಟ್ಟು ಸಿದ್ಧರಾಮರನ್ನು ಕರೆಸಿ ತಮ್ಮನ್ನು ಕಾಪಾಡುವಂತೆ ಅಂಗಲಾಚಿದರು.
ಅಲ್ಲಿ ಬಂದ ಸಿದ್ಧರಾಮರು ವಿಪ್ರರಿಗೆ 'ನೀವೋ ಶ್ರೇಷ್ಠ ಜಾತಿಯವರು. ನಾನೋ ಶೂದ್ರವರ್ಗದವ. ನೀವೇಕೆ ನನಗೆ ನಮಸ್ಕರಿಸಿ ಅಂಗಲಾಚುತ್ತಿರುವಿರಿ?' ಎಂದು ಕೇಳಿದರು. ಆಗ ಅವರು ---
ಐಸಿ ಐಕೋನಿ ಸಿದ್ಧ ವಚನೋಕ್ತಿ,
ಮಗ ತೆ ಸಕಳಹೀ ಐಸೆ ವದತೀ,
ಆಮ್ಹಿ ನಾಂವಾಚೇಚಿ ಬ್ರಾಹ್ಮಣ ಜಿ ಸಿದ್ಧಪತಿ,
ಪರಿ ಮುಖ್ಯ ಬ್ರಾಹ್ಮಣತ್ವ ಆಮ್ಹಾಂಸಿ ಕೈಂಚಿ,
ಅಗಾ ತೋ ಹೋ ಕಾಂ ಕೋಣತಾಹೀ ವರ್ಣ,
ಪರಿ ಜೋ ಬ್ರಹ್ಮ ಜಾಣೇಲ ತೋಚಿ ಬ್ರಾಹ್ಮಣ
ऐसि ऐकोनि सिद्ध वचनोक्ति,
मग ते सकळही ऐसे वदती,
आम्हि नांवाचेचि ब्राह्मण जि सिद्धपति,
परि मुख्य ब्राह्मणत्व आम्हांसि कैंचि,
अगा तो हो कां कोणताही वर्ण,
परि जो ब्रह्म जाणेल तोचि ब्राह्मण।
ಎಂದು ಹೇಳಿದರು. 'ನಾವೋ ಹೆಸರಿಗೆ ಮಾತ್ರ ಬ್ರಾಹ್ಮಣರು ನೀನೋ ಸಿದ್ಧಪತಿ; ಜೋಗಿ. ನಿಜವಾದ ಬ್ರಾಹ್ಮಣತ್ವ ನಮಗೆ ಬರುವುದಾದರೂ ಹೇಗೆ? ಯಾವುದೇ ಜಾತಿಯವನಿರಲಿ ಬ್ರಹ್ಮ(ಜ್ಞಾನ) ಅರಿತುಕೊಂಡವನೇ ಬ್ರಾಹ್ಮಣ ಎಂದು ಹೇಳಿದರು.
ಒಬ್ಬ 'ಶೂದ್ರ' ಶಿವಯೋಗಿಯಾಗಿ ಒಂದು ಇಡೀ ಸಮಾಜದ ಕಣ್ಮಣಿಯಾಗಿರುವುದು ಸಿದ್ಧರಾಮರ ಕಥೆಯಿಂದ ಗೊತ್ತಾಗುತ್ತದೆ.
ಆಕರ : ಡಾ. ಸರಜೂ ಕಾಟ್ಕರ್ ಅವರ 'ಶಿವಾಜಿ ಮೂಲ ಕನ್ನಡ ನೆಲ' ಕೃತಿ.
*