Previous ಪಂಚಾಚಾರ್ಯರು ಅವತಾರ ಪುರುಷರೇ? ಪಂಚಾಚಾರ್ಯರು ಲಿಂಗಾಯತ ಧರ್ಮವನ್ನು ಸ್ಥಾಪಿಸಿದರೆ? Next

ಪಂಚಾಚಾರ್ಯರು ಶಿಲಾಲಿಂಗೋದ್ಭವರೆ?

*

✍ ಡಾ. ಎಸ್‌. ಎಂ. ಜಾಮದಾರ (ನಿವೃತ್ತ ಐಎಎಸ್ ಅಧಿಕಾರಿಗಳು)

ಪಂಚಾಚಾರ್ಯರು ಶಿಲಾಲಿಂಗೋದ್ಭವರೆ?

ತಾವು ಐವರೂ ಬೇರೆ ಬೇರೆ ಸ್ಥಳಗಳಲ್ಲಿ ಶಿಲಾಶಿವಲಿಂಗಗಳಲ್ಲಿ ಉದ್ಭವಿಸಿದವರೆಂದು ಪಂಚಾಚಾರ್ಯರು ಹೇಳಿಕೊಳ್ಳುತ್ತಾರೆ. ಅವರ ಪವಿತ್ರ ಗ್ರಂಥ 'ಸಿದ್ದಾಂತ ಶಿಖಾಮಣಿ'ಯು, ರೇಣುಕನು ಮಾತ್ರ ತಾನು ಹೆಣ್ಣಿನ ಯೋನಿಯಲ್ಲಿ ಹುಟ್ಟಲು ಇಚ್ಚಿಸದೆ, ಕೊಲ್ಲಿಪಾಕಿಯ ಕಲ್ಲು ಲಿಂಗದಲ್ಲಿ ಹುಟ್ಟಿದನೆಂದು ತಿಳಿಸುತ್ತದೆ. ಸ್ವಯಂಭು ಆಗಮವು ರೇಣುಕರಂತೆಯೇ ಉಳಿದ ನಾಲ್ವರು ಆಚಾರ್ಯರೂ ದೂರ ದೂರದ ನಾಲ್ಕು ಸ್ಥಳಗಳಲ್ಲಿ (ದ್ರಾಕ್ಷಾರಾಮ, ಕಾಶಿ, ಉಜ್ಜಿನಿ ಮತ್ತು ಶ್ರೀಶೈಲ) ಬೇರೆ ಬೇರೆ ಶಿಲಾಲಿಂಗಗಳಲ್ಲಿ ಉದ್ಭವಿಸಿದರೆಂದು ಹೇಳುತ್ತದೆ.

ಪಂಚಾಚಾರ್ಯರು ಶಿಲೆಯಿಂದ ಉದ್ಭವಿಸಲು ಕಾರಣವೇನು?

ಸಿದ್ಧಾಂತ ಶಿಖಾಮಣಿಯ ಪ್ರಕಾರ, ರೇಣುಕನಿಗೆ ತಂದೆ ತಾಯಿಗಳಿಂದ ಹುಟ್ಟಿ 'ಯೋನಿಜ' (ತಾಯಿಯ ಜನನೇಂದ್ರಿಯದ ಮೂಲಕ) ಎನಿಸಿಕೊಳ್ಳಲು ಇಚ್ಚೆಯಿರಲಿಲ್ಲವಾದ್ದರಿಂದ ಶಿಲಾ ಶಿವಲಿಂಗದಲ್ಲಿ ಉದ್ಭವಿಸುತ್ತಾನೆ. ಆದ್ದರಿಂದ ರೇಣುಕನು ಅಯೋನಿಜ'. ಉಳಿದ ನಾಲ್ವರೂ ಲಿಂಗೋದ್ಭವರೇ ಆಗಿರುವ ಕಾರಣ, ಅವರೂ 'ಅಯೋನಿಜ'ರೇ!

ಬಸವಣ್ಣನನ್ನು ಕೈಲಾಸದ ಶಿವನ ಒಬ್ಬ ಪ್ರಮಥನಾದ ನಂದಿಯ ಅವತಾರವೆಂದು ಪುರಾಣಗಳು ಹೇಳುತ್ತವೆ. ಅವನೂ ಶಿವನಿಂದ ಭೂಲೋಕಕ್ಕೆ ಕಳುಹಿಸಲ್ಪಟ್ಟನೇ. ಆದರೆ ಅವನು ಮಾದಲಾಂಬಿಕೆಯ ಗರ್ಭದಿಂದ ಮಾನವ ಜೀವಿಯಾಗಿ ಹುಟ್ಟುತ್ತಾನೆ. ಅವನೇಕೆ 'ಅಯೋನಿಜ'ನಾಗಿ ಹುಟ್ಟಬಾರದಿತ್ತು?

ನಾವಿಲ್ಲಿ ಪಂಚಾಚಾರ್ಯರ ಅಯೋನಿಜತ್ವದ ಬಗೆಗೆ ವಿಚಾರ ಮಾಡುತ್ತಿದ್ದೇವೆ. 'ಸಪ್ತಧಾತು ಸಮಂ ಪಿಂಡಂ, ಸಮಯೋನಿ ಸಮುದ್ಭವಂ” ಎಂಬ ಶ್ಲೋಕದ ಮಾತೊಂದಿದೆ. “ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ... ಕರ್ಣದೊಳು ಜನಿಸಿದವರುಂಟೆ ಜಗದೊಳು” ಎಂಬ ವಚನವೊಂದಿದೆ. (ಮಾನವ ಜೀವಿಗಳೆಲ್ಲ ಸಪ್ತಧಾತುಗಳಿಂದ ರಚಿಸಲ್ಪಟ್ಟವರು. ಅವರೆಲ್ಲ ಯೋನಿಯಲ್ಲೇ ಹುಟ್ಟುತ್ತಾರೆ. ಜಗತ್ತಿನಲ್ಲಿ ಯಾರಾದರೂ ಕಿವಿಯಲ್ಲಿ ಹುಟ್ಟುವುದುಂಟೆ?) ಇವುಗಳ ನಡುವಿನ ವ್ಯತ್ಯಾಸವನ್ನು ಗಮನಿಸಬೇಕು.

“ಅಯೋನಿಜ' ಎಂದರೆ ಲೈಂಗಿಕ ಸಂಬಂಧವಿಲ್ಲದ ಹುಟ್ಟು, ಬಹುಶಃ ಸನಾತನ ಹಿಂದೂಗಳಂತೆ ಲೈಂಗಿಕತೆ ಎನ್ನುವುದು ಕೆಟ್ಟದ್ದು, ಪಾಪ, ಕೊಳಕು ಇತ್ಯಾದಿ ಎಂದು ರೇಣುಕನು ಭಾವಿಸಿರಬೇಕು. ಆ ನಂಬಿಕೆಯಿಂದಲೇ ಹಿಂದೂಗಳಲ್ಲಿ ಸ್ತ್ರೀಯರನ್ನು ಅಸ್ಪಶ್ಯರಂತೆ ಕಾಣುವ ಪದ್ಧತಿ ಬೆಳೆದುಬಂದಂತಿದೆ.

“ಯೋನಿಜ' ಎನ್ನುವುದು ಕೆಟ್ಟದು ಎಂದಾದರೆ ಶಿವಲಿಂಗವನ್ನು ಪೂಜಿಸುವುದೇಕೆ? ಪಂಚಾಚಾರ್ಯರು ಶಿವಲಿಂಗದ (ವಿಗ್ರಹ) ಆರಾಧಕರು. ಶಿವಲಿಂಗದ ವಿಗ್ರಹದಲ್ಲಿ ಮೇಲೆ ಲಿಂಗವಿದೆ; ಕೆಳಗೆ ಯೋನಿಯಿದೆ (ಯೋನಿಬಟ್ಟಲು), ಅವೆರಡೂ ಅವಿಭಾಜ್ಯವೆಂದೂ, ಶಿವ-ಪಾರ್ವತಿಯರ ಶಾಶ್ವತ ಸಂಯೋಗವೆಂದೂ ಹೇಳಲಾಗಿದೆ. ಶಿವಲಿಂಗದ ಸ್ವರೂಪವೇ ಯೋನಿ ಮತ್ತು ಲಿಂಗದ ಬೇರ್ಪಡಿಸಲಾಗದ ಭೌತಿಕ ಸಂಯೋಗದ ಪ್ರತೀಕವಾಗಿದೆ.

ಶಿವ ಮತ್ತು ಪಾರ್ವತಿಯರ ಸಂಯೋಗವು ಶಿವ-ಶಕ್ತಿಗಳ ಪರಿಕಲ್ಪನೆಯ ಮೂಲ ಆಧಾರವೇ ಆಗಿದೆ. ಸೃಷ್ಟಿಶಕ್ತಿಯನ್ನು ಚೇತನ ಎಂದು ಕರೆಯಲಾಗಿದೆ. ಚೇತನವು ಜಡ ಎಂಬ ಶಿವನ ಅನಂತ ಶಕ್ತಿಯೊಡನೆ ಸೇರಿದರೆ, ಸೃಷ್ಟಿಯಾಗುತ್ತದೆ. ಸೃಷ್ಟಿಯ ವಿಕಾಸವಾಗುವುದೂ ಜಡ-ಚೇತನಗಳ ಮಿಲನದಿಂದಲೇ ಇದು ವೈದಿಕ ಪ್ರಕೃತಿ-ಪರುಷರ ಕಥೆ.

ಈ ಕಥೆಗೆ ವಿರುದ್ಧವಾಗಿ ೧೨ನೆಯ ಶತಮಾನದ ಶರಣರು ಹೊಸ ಸಂಕೇತವನ್ನು ಕಂಡುಕೊಂಡರು. ಅವರು ಧರಿಸುವ ಇಷ್ಟಲಿಂಗ ಸ್ಥಾವರ ಶಿವಲಿಂಗದ (ವಿಗ್ರಹ) ರೂಪವೇ ಅಲ್ಲ. ಅದು ವಿಶ್ವವನ್ನು ಸಂಕೇತಿಸುವ ಪ್ರತೀಕವಾಗಿದೆ.

ಇತರ ಅಯೋನಿಜರು

ಮಹಾಭಾರತದಲ್ಲಿ ಬರುವ ಕರ್ಣ ಇದಕ್ಕೆ ಒಂದು ನಿದರ್ಶನ. ಅವನು ತನ್ನ ತಾಯಿ ಕುಂತಿಯ ಕಿವಿಯಲ್ಲಿ ಹುಟ್ಟಿದನೆಂದು ಹೇಳಲಾಗಿದೆ. ಕುಂತಿಯು ವಿವಾಹಕ್ಕೆ ಮುನ್ನವೇ ಗರ್ಭಿಣಿಯಾಗುತ್ತಾಳೆ. ಲೋಕಾಪವಾದಕ್ಕೆ ಅಂಜಿ ಕರ್ಣನನ್ನು ಕಿವಿಯಲ್ಲಿ ಹೆರುತ್ತಾಳೆ. ಅವನ ಜನನಮಾರ್ಗ ಕರ್ಣವಾದುದರಿಂದ ಅವನನ್ನು 'ಕರ್ಣ' ಎಂದೇ ಕರೆಯಲಾಯಿತು. ಯೋನಿಯಲ್ಲಿ ಜನಿಸದ ಕಾರಣ ಕರ್ಣನೂ ಅಯೋನಿಜನೇ.

ಗ್ರೀಕ್ ಪುರಾಣದಲ್ಲೂ ಒಂದು ಪ್ರಸಂಗವಿದೆ. ಅದರಲ್ಲಿ ಅಥೆನಾ ಎನ್ನುವವಳು ತನ್ನ ತಂದೆ ಜೆಯುಸ್‌ನ ತಲೆಯಲ್ಲಿ ಹುಟ್ಟುತ್ತಾಳೆ. ಜೆಯುಸ್ ಒಬ್ಬ ಕುಖ್ಯಾತ ಸ್ತ್ರೀಲೋಲುಪ್ತ, ಅವನು ತನ್ನ ಹೆಂಡತಿ ಹೆರಾ ತನ್ನ ವ್ಯಭಿಚಾರವನ್ನು ಪತ್ತೆ ಮಾಡುವಳೆಂದು ಹೆದರಿದ್ದ. ಅಥೆನಾಳ ತಾಯಿಯಾದ ಗರ್ಭಿಣಿ ಮೆಟಿಸ್‌ಳನ್ನು ನುಂಗಿ ಅಥೆನಾಳನ್ನು ತನ್ನ ತಲೆಯಿಂದ ಹೆರುತ್ತಾನೆ. (ಅಥೆನ್ಸ್ ನಗರವನ್ನು ಅಥೆನಾಳ ಹೆಸರಿನಲ್ಲಿ ಕರೆಯಲಾಗಿದೆ.) ಗ್ರೀಕ್ ಪುರಾಣದಲ್ಲಿ ಗಂಡಸರೂ ಹೆರುತ್ತಾರೆ! ಜೆಯುಸ್‌ನ ತಲೆಯಿಂದ ಹುಟ್ಟಿದ ಕಾರಣದಿಂದ ಅಥೆನಾ ಸಹ ಅಯೋನಿಜಳೇ.

ಬೈಬಲ್ಲಿನ ಸೃಷ್ಟಿಪರ್ವದ ಕಥೆಯು ಪ್ರಥಮ ಸ್ತ್ರೀ ಈವ್ (ಇಸ್ಲಾಮಿನ ಹವಾ) ಜೆವೊವ್ಹಾ ದೇವರಿಂದ (ಅಲ್ಲಾ) ಆಡಮ್‌ನ ಪಕ್ಕೆಲುಬಿನಿಂದ ಸೃಷ್ಟಿಯಾದಳೆಂದು ಹೇಳುತ್ತದೆ. ಪುರುಷನಿಂದ ಸ್ತ್ರೀಯ ಸೃಷ್ಟಿಯಾಗುತ್ತದೆ. ಆದ್ದರಿಂದ ಮೂಲ ಈವ್ ಪಕ್ಕೆಲುಬಿನಿಂದ ಹುಟ್ಟಿದ ಕಾರಣ ಅವಳೂ ಅಯೋನಿಜಳೇ.

ಆಕಸ್ಮಿಕವೆಂಬಂತೆ ಭಾರತದ ಕರ್ಣ ಮತ್ತು ಗ್ರೀಸಿನ ಅಥೆನಾ ಇಬ್ಬರೂ ಸ್ತ್ರೀ ಪುರುಷರ ಅಕ್ರಮ ಸಂಬಂಧದಿಂದ ಗರ್ಭವಾದವರು. ಲೋಕದ ಅಪವಾದದಿಂದ ಪಾರಾಗಲು ಇಬ್ಬರೂ ದೇಹದ ಅಸಹಜ ಅಂಗಭಾಗದಿಂದ ಹುಟ್ಟುತ್ತಾರೆ. ಬೈಬಲ್ಲಿನ ಮೊದಲ ಸ್ತ್ರೀಯೂ ಪುರುಷನ ದೇಹಭಾಗದಿಂದ ಹುಟ್ಟಿದವಳೇ ಆಗಿದ್ದಾಳೆ.

ಆದರೆ ಪಂಚಾಚಾರ್ಯರು ಕಲ್ಲಿನಿಂದ ಹುಟ್ಟಿದವರು. ಜೀವವಿಲ್ಲದ ಕಲ್ಲುಗಳಲ್ಲಿ ಏನನ್ನೂ ಬೆಳೆಯಲು ಸಾಧ್ಯವಿಲ್ಲ. ಹೀಗಿರುವಾಗ ಪಂಚಾಚಾರ್ಯರು ಹೇಗೆ ಅಯೋನಿಜರಾಗಲು ಸಾಧ್ಯ? ಸರಿಯಾಗಿ ಹೇಳಬೇಕೆಂದರೆ ಪಂಚಾಚಾರ್ಯರು ಪಾಶಾಣಜರು! ಒಟ್ಟಾರೆ, ಅವರು ಶಿಲಾಶಿವಲಿಂಗದಿಂದ ಉದ್ಭವಿಸಿದರು ಎನ್ನುವುದು ಎಂತಹ ಕಟ್ಟು ಕಥೆ?

ಈಗ ನಾವು ಪಂಚಾಚಾರ್ಯ ಹೇಳಿಕೆಯ ನಿಷ್ಕಷ್ಟತೆ ಅಥವಾ ಅವರ ಅಯೋನಿಜತ್ವಕ್ಕೆ ಸಂಬಂಧಿಸಿದ ಸಾಹಿತ್ಯಕ ಆಧಾರದ ಕಡೆ ನೋಡೋಣ. ಪಂಚಾಚಾರ್ಯರ ಮೂಲದ ಬಗೆಗೆ ನಾಲ್ಕು ವಿಭಿನ್ನ ಅಭಿಪ್ರಾಯಗಳಿವೆ. ಒಂದು 'ಸ್ವಯಂಭು ಆಗಮ'ದ ಅಭಿಪ್ರಾಯ; ಎರಡನೆಯದು, 'ಸುಪ್ರಭೇದಾಗಮ'ದ ಹೇಳಿಕೆ, ಮೂರನೆಯದು, 'ಸಿದ್ಧಾಂತ ಶಿಖಾಮಣಿ' ಪ್ರತಿಪಾದನೆ; ಮತ್ತು ಕೊನೆಯದು ಹರಿಹರನ 'ರೇವಣಸಿದ್ದ ರಗಳೆ'ಯ ಹೇಳಿಕೆ.

ಸುಪ್ರಭೇದಾಗಮದ 'ಪಂಚಾಚಾರ್ಯ ಪಂಜೋತ್ಪತ್ತಿ ಪ್ರಕರಣಮ್ ಭಾಗದಲ್ಲಿ ಐವರು ಆಚಾರ್ಯರು ನಾಲ್ಕು ಯುಗಗಳಲ್ಲಿ ಪ್ರತಿಯೊಂದು ಯುಗದಲ್ಲೂ ಕೆಳಗೆ ಕಂಡ ಹೆಸರುಗಳಿಂದ ಹುಟ್ಟಿದ್ದರೆಂದು ಹೇಳುತ್ತದೆ:

* ಸತ್ಯಯುಗ - ದಾರುಕ, ರೇಣುಕ, ಶಂಕುಕರ್ಣ, ಧೇನುಕ ಮತ್ತು ವಿಶ್ವಕರ್ಣ.

* ತ್ರೇತಾಯುಗ - ಏಕಾಕ್ಷರ, ದ್ವಿಯಕ್ಷರ, ತ್ರಿಯಕ್ಷರ, ಚತುರಕ್ಷರ ಮತ್ತು ಪಂಚಾಕ್ಷರ

* ದ್ವಾಪರಯುಗ - ದಾರುಕ, ರೇಣುಕ, ಶಂಕುಕರ್ಣ, ಧೇನುಕರ್ಣ ಮತ್ತು ವಿಶ್ವಕರ್ಣ

* ಕಲಿಯುಗ - ಮರುಳ ಸಿದ್ದ, ಏಕೋರಾಮ, ರೇಣುಕ, ಪಂಡಿತಾರಾಧ್ಯ ಮತ್ತು ವಿಶ್ವಾರಾಧ್ಯ (ಸದ್ಯೋಜೇತನ ಐದು ಮುಖಗಳಿಂದ ಎಂದೂ ಇದೆ)

ಸದ್ಯೋಜಾತ ಶಿವನ ಐದು ಮುಖಗಳೆಂದರೆ, ಈಶಾನ, ತತ್ಪುರುಷ ಅಘೋರ, ವಾಮದೇವ ಮತ್ತು ಸದ್ಯೋಜಾತ. ಸದ್ಯೋಜಾತನು ಪ್ರತಿಯೊಂದು ಪ್ರಧಾನ ದಿಕ್ಕಿಗೂ ಮುಖಮಾಡಿದ ಐದು ತಲೆಗಳನ್ನುಳ್ಳ ಒಬ್ಬ ದೇವರು. ಮೇಲಿರುವ ತಲೆ ಎಲ್ಲ ದಿಕ್ಕುಗಳತ್ತಲೂ ಗಮನಹರಿಸುತ್ತದೆ.

ಸ್ವಯಂಭು ಆಗಮವು ಪಂಚಾಚಾರ್ಯರು ಲಿಂಗೋದ್ಭವರಾದ ಸ್ಥಳಗಳನ್ನು ಕೆಳಗೆ ಕಂಡಂತೆ ತಿಳಿಸುತ್ತದೆ:

* ರೇವಣಸಿದ್ಧನು ಕೊಲ್ಲಿಪಾಕಿಯ ಬಾಳೆವನದ ಶಿವಲಿಂಗದಲ್ಲಿ.
* ಮರುಳಸಿದ್ದನು ಉಜ್ಜಯನಿಪುರದ ವಾಟುಕ್ಷೇತ್ರದ ಸಿದ್ದೇಶಲಿಂಗದಲ್ಲಿ.
* ಪಂಡಿತಾರಾಧ್ಯನು ಶ್ರೀಗಿರಿ (ಶ್ರೀಶೈಲ)ಯ ಸುಧಾಕಾಂಡದ ಮಲ್ಲಿಕಾರ್ಜುನ ಲಿಂಗದಲ್ಲಿ.
* ಏಕೋರಾಮನು ಕೇದಾರ ಸುಕ್ಷೇತ್ರದ ರಾಮನಾಥ ಲಿಂಗದಲ್ಲಿ.
* ವಿಶ್ವಾರಾಧ್ಯನು ಕಾಶಿ ವಿಶ್ವೇಶ್ವರ ಲಿಂಗದಲ್ಲಿ.

ಐದು ಜನ ಆಚಾರ್ಯರು ಐದು ಬೇರೆ ಬೇರೆ ಸ್ಥಳಗಳಲ್ಲಿ, ಬೇರೆ ಬೇರೆ ಲಿಂಗಗಳಲ್ಲಿ ಹುಟ್ಟಿದರೆಂದು ಹೇಳುವ ಸುಪ್ರಭೇದಾಗಮವು ಸದ್ಯೋಜಾತ ಶಿವನ ಅಥವಾ ಅವನ ಐದು ಮುಖಗಳ ಬಗೆಗೆ ಏನೂ ಹೇಳುವುದಿಲ್ಲ. ಈ ಐವರು ಆಚಾರ್ಯರುಗಳ ಹುಟ್ಟಿನ ಬಗೆಗೆ ಎರಡು ಆಗಮಗಳು. ಎರಡು ಭಿನ್ನ ಕಥೆಗಳನ್ನು ಹೇಳಿರುವುದೇಕೆ? ಈ ಭೇದಕ್ಕೆ ನಾಲ್ಕು ಕಾರಣಗಳಿರಬಹುದು:

೧. ತಾರ್ಕಿಕವಾಗಿ ಎರಡೂ ಏಕಕಾಲದಲ್ಲಿ ಸರಿ ಇರಲು ಸಾಧ್ಯವಿಲ್ಲ. ಯಾವುದಾದರೂ ಒಂದು ಸರಿ ಇರಲು ಸಾಧ್ಯ.
೨. ಎರಡೂ ಸುಳ್ಳಾಗಿರುವುದು
೩. ಎರಡೂ ಆಗಮಗಳು ಇಬ್ಬರು ಕರ್ತೃಗಳಿಂದ ಬೇರೆ ಬೇರೆ ಕಾಲದಲ್ಲಿ ರಚಿಸಿದ್ದು, ಒಬ್ಬರು ಬರೆದದ್ದು ಇನ್ನೊಬ್ಬನಿಗೆ ತಿಳಿಯದಿರಬಹುದು.
೪. ತಮಗೆ ತಿಳಿದಂತೆ ವಿವರಣೆ ನೀಡಿರುವುದು.

ಏನಿದ್ದರೂ ಈ ಭೇದಗಳು, ಪಂಚಾಚಾರ್ಯರುಗಳು ಹೇಗೆ ಅಸ್ತಿತ್ವಕ್ಕೆ ಬಂದರು ಎನ್ನುವ ಬಗೆಗೆ ಆಗಮಗಳಿಗೂ ನಿಶ್ಚಿತತೆ ಇಲ್ಲ ಎನ್ನುವುದನ್ನು ಸೂಚಿಸುತ್ತವೆ.

ಈ ಆಗಮಗಳ ಇನ್ನೊಂದು ಮುಖವಿದೆ. ವಿಶ್ವಾರಾಧ್ಯ ಮಠವು ಸೃಷ್ಟಿಯಾದದ್ದು ೧೮ ಮತ್ತು ೧೯ನೆಯ ಶತಮಾನಗಳ ಮಧ್ಯದ ಸುಮಾರಿನಲ್ಲಿ. ಎರಡೂ ಆಗಮಗಳೂ ವಿಶ್ವಾರಾಧ್ಯನ ಹೆಸರನ್ನು ಪ್ರಸ್ತಾಪಿಸಿರುವುದರಿಂದ ಅವುಗಳ ರಚನೆಯೂ ೧೭ನೆಯ ಶತಮಾನದ ನಂತರ ಆಗಿದೆಯೆಂಬುದನ್ನು ಬೇರೆ ಹೇಳಬೇಕಾಗಿಲ್ಲ. ಮೇಲಾಗಿ, ಅವು ಮೂಲ ಆಗಮಗಳೂ ಅಲ್ಲ; ವಿಶ್ವಾಸಾರ್ಹವೂ
ಅಲ್ಲ.

ಈ ಎರಡು ಆಗಮಗಳಲ್ಲಿ ಯಾವ ಆಗಮವನ್ನು ಅಧಿಕೃತವೆಂದು ಪರಿಗಣಿಸುವುದು? ಪಂಚಾಚಾರ್ಯರು ಸದ್ಯೋಜಾತ ಶಿವನ ಐದು ಮುಖಗಳಿಂದ ಹುಟ್ಟಿದರು ಎಂದಿರುವ ಸುಪ್ರಭೇದಾಗಮವನ್ನೆ? ಅಥವಾ ಐವರೂ ಬೇರೆ ಬೇರೆ ಸ್ಥಳಗಳಲ್ಲಿ, ಬೇರೆ ಬೇರೆ ಸ್ಥಾವರಲಿಂಗಗಳಲ್ಲಿ ಹುಟ್ಟಿದರೆಂದು ಹೇಳುವ ಸ್ವಯಂಭು ಆಗಮವನ್ನೇ?

ನಾವು ಸುಪ್ರಭೇದಾಗಮವನ್ನು ಅಧಿಕೃತ ಎಂದು ತೆಗೆದುಕೊಂಡರೆ, ಆಗ ಪಂಚಾಚಾರ್ಯರು ಲಿಂಗೋದ್ಭವರು ಎಂಬ ನಂಬಿಕೆಯನ್ನು ಪೂರ್ಣವಾಗಿ ನಿರಾಕರಿಸಬೇಕಾಗುತ್ತದೆ. ಏಕೆಂದರೆ ಸದ್ಯೋಜಾತ ಶಿವನ ಮುಖದಿಂದ ಹುಟ್ಟಿದರೆಂದರೆ ಅವರು ಲಿಂಗೋದ್ಭವರಾಗುವ ಪ್ರಶ್ನೆಯೇ ಬರುವುದಿಲ್ಲ. ಸ್ವಯಂಭು ಆಗಮವನ್ನು ನಂಬಿದರೆ ಸುಪ್ರಭೇದಾಗಮದ ಹೇಳಿಕೆ ಸುಳ್ಳಾಗುತ್ತದೆ.

ಇನ್ನು, ಮತ್ತೊಂದು ಮೂಲವಾದ 'ಸಿದ್ಧಾಂತ ಶಿಖಾಮಣಿ', ಅದು ಕೊಲ್ಲಿಪಾಕಿಯ ಸೋಮೇಶ್ವರ ಲಿಂಗದಲ್ಲಿ ರೇಣುಕಾಚಾರ್ಯನು ಮಾತ್ರ ಉದ್ಭವಿಸಿದ ನೆಂದೂ ವೀರಶೈವ ಧರ್ಮವನ್ನು ಬೋಧಿಸಿದವನು ಅವನೊಬ್ಬನೇ ಎಂದೂ ಹೇಳುತ್ತದೆ. ಅದು ಉಳಿದ ನಾಲ್ವರಲ್ಲಿ ಒಬ್ಬರ ಹೆಸರನ್ನೂ ಉಲ್ಲೇಖಿಸುವುದಿಲ್ಲ. ಹೀಗಾಗಿ ಸಿದ್ಧಾಂತ ಶಿಖಾಮಣಿ ಪ್ರಕಾರ ರೇಣುಕರನ್ನು ಬಿಟ್ಟರೆ ಉಳಿದವರು ಏನಾದರು ಎಂಬುದು ತಿಳಿಯುವುದಿಲ್ಲ. ಹಾಗಾದರೆ, ಅವರು ಅವತರಿಸಿದ್ದಾದರೂ ಏಕೆ ಎಂಬ ಪ್ರಶ್ನೆ ಹಾಗೇ ಉಳಿಯುತ್ತದೆ.

ನಾಲ್ಕನೆಯ ಮೂಲವೆಂದರೆ, ಹರಿಹರನ 'ರೇವಣಸಿದ್ದ ರಗಳೆ', ಅದರ ಪ್ರಕಾರ, ರೇಣುಕನು ಶಿವಲೋಕದಲ್ಲಿ ಎಸಗಿದ ಒಂದು ತಪ್ಪಿಗಾಗಿ ಶಿವನಿಂದ ಶಾಪಕ್ಕೆ ಒಳಗಾಗಿ ಭೂಮಿಯಲ್ಲಿ ಜನ್ಮ ತಾಳುತ್ತಾನೆ. ಆಗ, ಅವನು ಸದ್ಯೋಜಾತ ಶಿವನ ಮುಖದಲ್ಲಿ ಹುಟ್ಟಿದ ಎನ್ನುವುದು ಸುಳ್ಳಾಗುತ್ತದೆ ಮತ್ತು ಹರಿಹರನ ರಗಳೆಯಲ್ಲೂ ಸಹ ಉಳಿದ ನಾಲ್ಕು ಆಚಾರ್ಯರಲ್ಲಿ ಯಾರ ಬಗೆಗೂ ಪ್ರಸ್ತಾಪವಿಲ್ಲ. ಇದರಿಂದ ರಗಳೆಯು ಶಿವಾಗಮಗಳ ಅಭಿಪ್ರಾಯಕ್ಕೆ ಭಿನ್ನವಾಗಿದೆ ಎನ್ನುವುದು ತಿಳಿದು ಬರುತ್ತದೆ. (ಸಾಖ್ರೆ, ಪು. ೩೯೨)

“ರೇವಣನು ಪವಾಡಗಳನ್ನು ಮೆರೆಯುವ ಮೂಲಕ ಭೂಲೋಕವನ್ನು ಪಾವನಗೊಳಿಸಬೇಕೆಂಬ ಉದ್ದೇಶಕ್ಕಾಗಿಯೇ ದೇವಲೋಕದಿಂದ ಭೂಲೋಕಕ್ಕೆ ಬಂದವನು. ಆದರೆ, ಅವನು ವೀರಶೈವ ಧರ್ಮವನ್ನು ಸ್ಥಾಪಿಸಲು ಸ್ವರ್ಗದಿಂದ ಬಂದವನು ಎಂಬ ಬಗೆಗೆ ಎಳ್ಳಷ್ಟು ಸೂಚನೆಯೂ ಎಲ್ಲೂ ಕಂಡುಬಂದಿಲ್ಲ” (ಸಾಖ್ರೆ, ಪು. ೩೯೨).

ಮೇಲೆ ಉಲ್ಲೇಖಿಸಿದ ಎರಡು ಆಗಮಗಳು, ಸಿದ್ಧಾಂತ ಶಿಖಾಮಣಿ ಮತ್ತು ರೇವಣಸಿದ್ದ ರಗಳೆ- ಈ ನಾಲ್ಕೂ ಗ್ರಂಥಗಳು ನಾಲ್ಕು ಭಿನ್ನ ಕಥೆಗಳನ್ನು ಹೇಳುತ್ತವೆ. ಇವುಗಳಲ್ಲಿ ಯಾವುದು ಸತ್ಯ? ವಾಸ್ತವವಾಗಿ ಈ ನಾಲ್ಕೂ ಸತ್ಯವಲ್ಲ. ಇವೆಲ್ಲವೂ ಕುರುಡು ನಂಬಿಕೆಗಳನ್ನು ಅವಲಂಬಿಸಿವೆ.

ಮೇಲೆ ವಿವರಿಸಿದ ಪರಸ್ಪರ ವಿರುದ್ದದ ಹೇಳಿಕೆಗಳು ಪಂಚಾಚಾರ್ಯರು ಶಿಲಾಲಿಂಗದಿಂದ ಉದ್ಭವವಾದರೆಂದು ಹೇಳುವುದು ಶುದ್ದ ಕಟ್ಟುಕಥೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ. ತಮ್ಮ ಧರ್ಮವು ದಿವ್ಯಮೂಲದ್ದು ಎಂದು ತೋರಿಸಲು ಅಂತಹ ಕಟ್ಟುಕಥೆಗಳನ್ನು ಸೃಷ್ಟಿಸಲಾಗಿದೆ ಎಂದು ಪ್ರೊ. ಸಾಕ್ರೆ ಅವರು ಸರಿಯಾಗಿಯೇ ಪ್ರತಿಪಾದಿಸಿದ್ದಾರೆ.

ಗ್ರಂಥ ಋಣ:
1) ವೀರಶೈವ ಪಂಚಾಚಾರ್ಯ ಮಿಥ್ಯ ಮತ್ತು ಸತ್ಯ; ಲೇಖಕರು: ಡಾ. ಎಸ್‌. ಎಂ. ಜಾಮದಾರ, ಅನುವಾದಕರು: ಡಾ. ಗೊ. ರು. ಚನ್ನಬಸಪ್ಪ. ೨೦೨೦. Published by: Jagathika Lingayat Mahasabha, No 53 2nd Main Road, 3rd cross, Chakravarrthi Layout, Palace road, Bangalore-560020.

ಪರಿವಿಡಿ (index)
Previous ಪಂಚಾಚಾರ್ಯರು ಅವತಾರ ಪುರುಷರೇ? ಪಂಚಾಚಾರ್ಯರು ಲಿಂಗಾಯತ ಧರ್ಮವನ್ನು ಸ್ಥಾಪಿಸಿದರೆ? Next