ದಲಿತರಿಗೆ ದನಿಯಾದ ಗುರು ಬಸವಣ್ಣ
|
|
*
✍ ಡಾ. ವೀರಣ್ಣ ದಂಡೆ.
ಕನ್ನಡ ಅಧ್ಯಯನ ಸಂಸ್ಥೆ, ಗುಲಬರ್ಗಾ ವಿಶ್ವವಿದ್ಯಾಲಯ,
ಗುಲಬರ್ಗಾ.
ಗುರು ಬಸವಣ್ಣನವರು ಎಂತಹ ವಿಶಿಷ್ಟ ಮನಸ್ಸಿನ ವ್ಯಕ್ತಿ ಎಂದರೆ ದಲಿತರನ್ನು ಶರಣರನ್ನಾಗಿಸಿ, ತನ್ನವರೆಂದು ಅಪ್ಪಿಕೊಂಡಿದ್ದಲ್ಲದೆ, ಸಂಪೂರ್ಣವಾಗಿ ಅವರ ಪರವಾಗಿ ನಿಂತು ತಾವೇ ಮಾತನಾಡುತ್ತಾರೆ. ದಲಿತ ಶರಣರು ವಿಪ್ರವರ್ಗವನ್ನು ಎದುರಿಸುವ ಮುನ್ನ, ಅವರ ಮನಸ್ಸಿನ ಅನಿಸಿಕೆಗಳಿಗೆ ಬಾಯಿಗಾದವರೇ ಬಸವಣ್ಣನವರು. 'ನೆಲೆನೊಂದೇ ಹೊಲಗೇರಿ ಶಿವಾಲಯಕ್ಕೆ, ಜಲವೊಂದೇ ಶೌಚಾಚಮನಕ್ಕೆ' ಎಂದು ಹೇಳುವಾಗ ಅವರ ಮನಸ್ಸಿನ ಅಗಾಧ ಆಕ್ರೋಶವನ್ನು ಗಮನಿಸಬೇಕು. ಬಸವನ ದೃಷ್ಟಿಯಲ್ಲಿ ಹೊಲೆಯನೆಂದರೆ ಎಂತಹವನು ಎಂಬುದಕ್ಕೆ ಹಲವಾರು ಸಲ ಅವರು ಹೇಳುವ ಮಾತುಗಳನ್ನು ಗಮನಿಸಬೇಕು.
೧. ದೇವ ನಿಮ್ಮ ನಂಬದ ಹೊಲೆಯ
೨. ಲಿಂಗವಿಲ್ಲದವನೇ ಹೊಲೆಯ
೩. ಹುಸಿವನೆ ಹೊಲೆಯ
೪. ಹೊಲಸು ತಿಂಬುವವನೇ ಹೊಲೆಯ
ಈ ಮೇಲಿನ ದಂಧೆಗಳನ್ನು ಚತುರ್ವೇದಿ ಮಾಡಿದರೂ ಸರಿ ಅವನೇ ಹೊಲೆಯನಾಗುವನು. ಬಸವನ ದೃಷ್ಟಿಯಲ್ಲಿ 'ಕುಲಜರು' ಎಂದರೆ:
೧. ಶಿವಲಿಂಗವಿದ್ದವನೇ ಕುಲಜನು
೨. ಲಿಂಗಭಕ್ತನೇ ಕುಲಜನು
೩. ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಶರಣರೇ ಕುಲಜರು
ಇದು ಬಸವಣ್ಣನವರ ಸ್ಪಷ್ಟ ಅಭಿಪ್ರಾಯ. ಅದಕ್ಕಾಗಿಯೇ 'ಹೊಲೆಯುಂಟೆ ಲಿಂಗವಿದ್ದೆಡೆಯಲ್ಲಿ' 'ಲಿಂಗವಿದ್ದವನೆ ವಾರಣಾಸಿ' ಎಂಬಂತಹ ಮಾತುಗಳನ್ನು ಆಡುತ್ತಾರೆ. ಮುಂದುವರೆದು ಹೀಗೆನ್ನುತ್ತಾರೆ:
ಹೊಲೆಯ ಮಾದಿಗ ಭಕ್ತನಾದರೆ
ಆತನ ಮನೆಯ ಸೊಣಗಂಗೆ
ಪಂಚಮಹಾವಾದ್ಯದಲ್ಲಿ ಸನ್ಮಾನವ ಮಾಡನೇ?
ಎಂಬ ಮಾತನ್ನು ಹೇಳಿ ತಾವೇ ಶ್ರೇಷ್ಠರೆಂಬ ಅಹಮಿಕೆಯುಳ್ಳ ಜನರಿಗೆ ಜಡಿದು ಮಾತನಾಡಿತ್ತಾರೆ. ಜಾತಿಗಳು ಉದ್ಯೋಗವನ್ನವಲಂಬಿಸಿ ಬಂದಿವೆಯೇ ಹೊರತು ಹುಟ್ಟಿನಿಂದ ಅಲ್ಲ ಎಂಬುದು ಬಸವಣ್ಣನವರ ಸ್ಪಷ್ಟ ವಿಚಾರ.
ಕಾಸಿ ಕಮ್ಮಾರನಾದ ಬೀಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ ವೇದವನೋದಿ ಹಾರುವನಾದ
ಎಲ್ಲರೂ ಜನಿಸಿದುದು ಯೋನಿಯಿಂದಲೇ. 'ಕರ್ಣದಲ್ಲಿ ಜನಿಸಿದವರುಂಟೆ?' ಎಂದು ಪ್ರಶ್ನಿಸುತ್ತಾರೆ. ಜೀವಾತ್ಮಗಳೆಲ್ಲಾ ಎಲ್ಲರಲ್ಲೂ ಒಂದೇ ಬಗೆಯಾಗಿವೆ. ಬಣ್ಣಗಳ ವ್ಯತ್ಯಾಸದಿಂದ ಏನೂ ಪ್ರಯೋಜನವಿಲ್ಲ ಎಂಬುದು ಬಸವಣ್ಣನವರ ನಿಲುವು. ಈ ನಿರ್ಧಾರವನ್ನು ಅವರು ಯಾವ ಕಾಲಕ್ಕೂ ಹಿಂದೆಗೆಯಲಿಲ್ಲ. 'ಕುಲವೊಂದೇ ತನ್ನತಾನರಿದವಂಗೆ' ಎಂಬುದು ಅವರ ಅಂತಿಮ ಮಾತು.
ಸತ್ತುದನೆಳೆವನೆತ್ತಣ ಹೊಲೆಯ?
ಹೊತ್ತು ತಂದು ನೀವು ಕೊಲುವಿರಿ
ಎಂದು ನೇರವಾಗಿ ಎತ್ತಿ ಆಡುತ್ತಾರೆ. ಸತ್ಯದ ಸೂಕ್ಷವನ್ನು ಬಲ್ಲ ಬಸವಣ್ಣನವರು ವಿಪ್ರರ ಕುಕಾರ್ಯವನ್ನು ಪ್ರಸ್ತಾಪಿಸಿ ಅವರ ಅಹಮಿಕೆಗೆ ಏಟು ಹಾಕುತ್ತಲೇ ಅಂತ್ಯಜರು ಮಾಡುವ ಉತ್ತಮ ಕಾರ್ಯದ ಬಗ್ಗೆ ಮಾತನಾಡುತ್ತಾ ಅವರಲ್ಲಿ ನೈತಿಕ ಧೈರ್ಯವನ್ನು ತುಂಬುತ್ತಾರೆ
.
ಹೊಲೆಯೊಳಗೆ ಹುಟ್ಟಿ ಕುಲವನರಸುವ
ಎಲವೋ ಮಾತಂಗಿ ಮಗ ನೀನು
ಎಂದು ಹೇಳುವಾಗ ಎಲ್ಲರೂ ಹುಟ್ಟಿದ್ದು ಹೊಲೆಯಲ್ಲಿಯೇ, ಪುನ: ಕುಲವನರಸುವುದು ಕೀಳು ಪ್ರವೃತ್ತಿ, ಅದಕ್ಕಾಗಿ ನಿಮಗಿಂತ
ನಮ್ಮ ಕೂಡಲಸಂಗಮ ಶರಣರು
ಕರ್ಮವಿರವಿತರು, ಶರಣ ಸನ್ನಿವಿತರು, ಅನುಪಮ ಚರಿತ್ರರು
ಅವರಿಗೆ ತೋರಲು ಪ್ರತಿಯಿಲ್ಲವೋ
ಎನ್ನುವಷ್ಟರ ಮಟ್ಟಿಗೆ ಈ ಸಂಗತಿಯನ್ನು ಎಳೆದೊಯ್ಯುತ್ತಾರೆ. ವಿಪ್ರರಿಗಿಂತ ಕಾಯಕ ನಿರತನಾದ ಅಂತ್ಯಜನೇ ಶ್ರೇಷ್ಠನೆಂಬ ಸ್ಪಷ್ಟ ನಿಲುವನ್ನು ತಾಳುತ್ತಾರೆ. ವಿಪ್ರ ಮತ್ತು ಅಂತ್ಯಜರಿಗೆ ಸಂಬಂಧಿಸಿಯೇ ಬಸವಣ್ಣನವರು ಹೆಚ್ಚಾಗಿ ಮಾತನಾಡುವುದರಿಂದ ಆಗಿನ ಸಮಾಜದಲ್ಲಿ ತಿಳಿತಕ್ಕೊಳಾದವರು ಅಂತ್ಯಜರೇ ಆಗಿದ್ದು ಅವರನ್ನು ತುಳಿದವರು ವಿಪ್ರರು ಎಂಬಂತೆ ತೋರುತ್ತಾರೆ. ವೈಶ್ಯ ಮತ್ತು ಕ್ಷತ್ರಿಯರ ಮಾತುಗಳು ಬಸವಣ್ಣನವರು ಸಂಬಂಧಿಸಿ ಬರುವುದೇ ಇಲ್ಲ ಎಂಬಂತಿದೆ. ಈ ಚರ್ಚೆಯನ್ನು ಬಸವಣ್ಣನವರು ಎಲ್ಲಿಗೆ ಎಳೆದೊಯ್ದು ನಿಲ್ಲಿಸುತ್ತಾರೆಂದರೆ ಎಂಬುದಕ್ಕೆ 'ವಿಪ್ರರು ನುಡಿದಂತೆ ನಡೆಯರು' ಎಂಬ ಒಂದೇ ಮಾತು ಸಾಕೆನಿಸುತ್ತದೆ. ಇದನ್ನು ಇನ್ನೂ ಮುಂದುವರೆಸಿ 'ಹೊಲೆಯರ ಬಸುರಲ್ಲಿ ವಿಪ್ರರು ಹುಟ್ಟಿ, ಗೋಮಾಂಸವ ತಿಂಬುದಕ್ಕೆ ಇದೇ ದೃಷ್ಟಿ' ಎಂದೊಯ್ದು ನಿಲ್ಲಿಸುತ್ತಾರೆ. ಆದರೆ ಅಂತ್ಯಜನ ಈ ಸ್ಥಿತಿ ನೋಡಿ:
ಎಡದ ಕೈಯಲ್ಲಿ ಕತ್ತಿ, ಬಲದ ಕೈಯಲ್ಲಿ ಮಾಂಸ
ಬಾಯಲ್ಲಿ ಸುರೆಯ ಗಡಿಗೆ
ಕೊರಳಲ್ಲಿ ದೇವರಿರಲಿ ಅವರ ಲಿಂಗನೆಂಬೆ, ಸಂಗನೆಂಬೆ
ಎಂಬ ನಿಲುವು ಬಸವಣ್ಣನವರದು. ಕೊನೆಯದಾಗಿ ಅವರು ಹೀಗೆ ಘೋಷಿಸುತ್ತಾರೆ.
೧. ವಿಪ್ರ ಮೊದಲು ಅಂತ್ಯಜ ಕಡೆಯಾಗಿ
ಶಿವಭಕ್ತರಾದವರನೆಲ್ಲರನೊಂದೇ ಎಂಬೆ
೨. ಹಾರುವ ಮೊದಲು ಶ್ವಪಚ ಕಡಯಾಗಿ
ಭವಿಯಾದವರನೊಂದೇ ಎಂಬೆ.
ಕೊನೆಗೆ ಭಕ್ತ ಮತ್ತು ಭವಿ ಎಂಬ ಎರಡೇ ವರ್ಗಗಳನ್ನಾಗಿ ಇಡೀ ಸಮುದಾಯವನ್ನು ಕಾಣುವ ದೃಷ್ಟಿ ಬಸವಣ್ಣನವರದಾಗಿದೆ. ಹೊಲೆತನದ ಪ್ರಸ್ತಾಪ ಮತ್ತು ಚರ್ಚೆ ಬಸವಣ್ಣನವರು ಎಷ್ಟು ಮಾಡುತ್ತಾರೋ ಅದಕ್ಕಿಂತಲೂ ಹೆಚ್ಚಾಗಿ ಮಾದಾರ ಚೆನ್ನಯ್ಯನ ಪ್ರಸ್ತಾಪ ಮಾಡುತ್ತಾರೆ. ಆತನ ರಕ್ತಸಂಬಂಧದ ಬಂಧುತ್ವದ ಬಗ್ಗೆ, ಆತನಲ್ಲಿ ಪ್ರಸಾದ ಸೇವಿಸಿದ ಬಗ್ಗೆ, ಶಿವಭಕ್ತನಾದ ಚೆನ್ನನಲ್ಲಿ ಕುಲವನರಸಬಾರದಾಗಿ-ಹಲವಾರು ರೀತಿಯ ಪ್ರಸ್ತಾಪಗಳನ್ನು ವ್ಯಾಪಕವಾಗಿ ಮಾಡುತ್ತಾರೆ. ಇದಕ್ಕೆ ಕಾರಣ 'ಹೊಲೆಯ'ರಿಗಿಂತ `ಮಾದಾರ'ರನ್ನು ಅಂತ್ಯಜರಾಗಿ ಆಗಿನ ಕಾಲಕ್ಕೂ ಕಾಣಲಾಗುತ್ತಿತ್ತೆಂದು ತೋರುತ್ತದೆ. ಅದಕ್ಕಾಗಿ ಹೊಲೆಯರ ಸಂಬಂಧ ಹೇಳುವುದಕ್ಕಿಂತ ಹೆಚ್ಚು ಹೆಚ್ಚು ಬಾರಿ ಚೆನ್ನಯ್ಯನೆ ಸಂಬಂಧವನ್ನೇ ಹೇಳಿಕೊಂಡಿರಬೇಕೆನಿಸುತ್ತದೆ. ಅಸತ್ಯರ ಬಗ್ಗೆ ಕಾಳಜಿಯುಳ್ಳ ಒಬ್ಬ ಸಮಾಜ ಸುಧಾರಕ ಬಸವಣ್ಣನವರಿಗಿಂತ ಹೆಚ್ಚಿಗೇನೂ ಹೇಳಿಕೊಳ್ಳಲಾರ ಎನಿಸುತ್ತದೆ. ಬಸವಣ್ಣನವರು ಹೇಳಿಕೊಂಡ ಮಾತುಗಳು ಪ್ರಪಂಚದಲ್ಲಿಯೇ ಮಾದರಿ ಮಾತುಗಳೆನಿಸಿಕೊಳ್ಳುತ್ತವೆ. ಮಾದಾರ ಚೆನ್ನಯ್ಯನನ್ನು ಅಪ್ಪ, ಚಿಕ್ಕಪ್ಪನೆಂದು ಹೇಳಿಕೊಂಡ ಮಾತುಗಳು:
೧. ಎಮ್ಮಯ್ಯ ಚೆನ್ನಯ್ಯ
೨. ಚೆನ್ನಯ್ಯ ನಮ್ಮಯ್ಯನು, ಚೆನ್ನಯ್ಯನ ಮಗ ನಾನು
೩. ಮಾದಾರನ ಮಗ ನಾನಯ್ಯ (ಎರಡು ಸಲ).
೪, ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯ
೫. ಅಪ್ಪನು ನಮ್ಮ ಮಾದಾರ ಚೆನ್ನಯ್ಯ
ಚೆನ್ನಯ್ಯನನ್ನು ಅಯ್ಯ, ಅಪ್ಪ, ಆತನ ಮಗ ನಾನು ಎಂದಿಷ್ಟೇ ಹೇಳಿಕೊಂಡರೆ ಅವರಿಗೆ ಸಮಾಧಾನವಿಲ್ಲ; ಅಂತ್ಯಜರ ಎದೆಯಲ್ಲಿ ಅಭಿಮಾನದ ಬೀಜ ಬಿತ್ತಲು ಅವರ ಕೀಳರಿಮೆಯನ್ನು ಕಿತ್ತೊಗೆಯಲು ಬಸವಣ್ಣನವರು ಅವರ ಸಂಬಂಧವಾಗಿ ಏನು ಬೇಕಾದರೂ ಹೇಳಿಕೊಳ್ಳಲು ಮುಂದಾಗುತ್ತಾರೆ. ಒಂದೊಂದು ಸಲ ತೀರ ಅತಿರೇಕಕ್ಕೆ ಈ ಸಂಗತಿಯನ್ನು ಎಳೆದೊಯ್ದು ನಿಲ್ಲಿಸುತ್ತಾರೆ. ಅದರ ಫಲ ಈ ವಚನ:
ಚೆನ್ನಯ್ಯನ ಮನೆಯ ದಾಸಿಯ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು
ಇವರಿಬ್ಬರು ಹೊಲದಲ್ಲಿ ಬೆರಣಿಗೆ ಹೋಗಿ ಸಂಗವ ಮಾಡಿದರು
ಇವರಿಬ್ಬರಿಗೆ ಹುಟ್ಟಿದ ಮಗ ನಾನು ದೇವ ಸಾಕ್ಷಿಯಾಗಿ
ಹೀಗೆ ಹೇಳುವಾಗ ಅಂತ್ಯಜರಲ್ಲಿಯೇ ಅತ್ಯಂತ ಕನಿಷ್ಠವೆನಿಸುವ ಎರಡು ಜಾತಿಗಳು ಪ್ರಸ್ತಾಪಿಸಿತ್ತಾರೆ. 'ಹೊಲೆಯ' ಪ್ರಸ್ತಾಪವನ್ನು ಇಲ್ಲಿ ಮಾಡಿಲ್ಲದಿರುವುದು ಗಮನಾರ್ಹ. ಈಗಲೂ ಜಾತಿ ಶ್ರೇಣೀಕರಣದಲ್ಲಿ ಮಾದಾರ ನಂತರವೇ ಡೋಹರ ಬರುವುದು. ಅದಕ್ಕೆಂತಲೇ ಬಸವಣ್ಣನವರು ಸಮಾಜದಲ್ಲಿಯ ಅತ್ಯಂತ ಕೊನೆಯ ಸ್ಥಾನದ (ಡೋಹರ) ಹೆಣ್ಣು, ಅದರ ಸಮೀಪ ಜಾತಿಯ (ಮಾದಾರ) ಗಂಡಿನೊಡನೆ ಕೂಡಿಸಿದ್ದು, ಅದೂ ಕೂಡ ಸಮಾಜ ಸಮ್ಮತವಲ್ಲದ ರೀತಿಯಲ್ಲಿ, 'ಅಂಥವರ ಮಗ ನಾನು' ಎಂದು ಹೇಳುವುದಷ್ಟೇ ಅಲ್ಲ, ಅಲ್ಲಿಯ ಗಂಡ ಹೆಂಡಿರ ಸಂಬಂಧದ ಅರಿವು ಕೂಡ ಬರುವಂತೆ ಮಾಡುತ್ತಾರೆ. ಆದರೆ ಅದು ದೇವಸಾಕ್ಷಿಯಾಗಿ ನಡೆದ ಕೆಲಸ ಎಂಬುದನ್ನು ಮರೆಯದೆ ಪ್ರಸ್ತಾಪಿಸುತ್ತಾರೆ.
ಅಪ್ಪನು ನಮ್ಮ ಮಾದಾರ ಚೆನ್ನಯ್ಯ
ಬೊಪ್ಪನು ನಮ್ಮ ಡೋಹರ ಕಕ್ಕಯ್ಯ
ಎಂದು ಹೇಳುವಾಗಲೂ ಮಾದಿಗ ಮತ್ತು ಡೋಹರ ಎಂಬ ಪದಗಳನ್ನು ಜೊತೆಯಾಗಿಯೇ ಇರುಸುವುದನ್ನು ಕಾಣುತ್ತೇವೆ. ಇಲ್ಲಿಯೂ ಅವರ ಸಂಬಂಧವನ್ನು ಹೇಳಿಕೊಳ್ಳುತ್ತಾರೆ. ಇನ್ನೂ ಅತಿರೇಕಕ್ಕೆ ಹೋಗಿ 'ಚೆನ್ನಯ್ಯನೆನ್ನ ಮುತ್ತಯ್ಯ ನಜ್ಜಪ್ಪನಯ್ಯ' ಎಂಬಲ್ಲಿಗೆ ಹೋಗಿ ನಿಲ್ಲುವಲ್ಲಿ ಬಸವಣ್ಣನವರ ಅಭಿಪ್ರಾಯ ನಮಗೆ ತಿಳಿದಿದೆ ಅದು ಅವರಿಗೆ ಬಾಯಿ ಕೊಡುವುದು, ಅವರ ಕೀಳರಿಮೆಯನ್ನು ಕಿತ್ತೊಗೆಯುವುದು.
೧. ಚೆನ್ನಯ್ಯನ ಮನೆಯಲೂ ಬೇಡಿದೆ
೨. ಚೆನ್ನಯ್ಯನ ಮನೆಯಲ್ಲಂಬಲಿಯನುಂಡು ಬದುಕಿದೆ ಎಂಬ ಮಾವುಗಳಲ್ಲಿ ಅವರ ಮನೆಯ ಪ್ರಸಾದ ಸ್ವೀಕರಿಸಿ ಪ್ರಸ್ತಾಪ ಮಾಡುತ್ತಾನೆ.
೧. ಮಾದಾರನೆಂಬೆನೆ ಚೆನ್ನಯ್ಯನ
೨. ನಿಮ್ಮ ಪೂಜಿಸಿ ಚೆನ್ನಯ್ಯನ ಕುಲ ಚೆನ್ನಾಯಿತಯ್ಯ
೩. ಮಾದಾರ ಚೆನ್ನಯ್ಯಂಗೆ ಒಲಿದಾತ ಮತ್ತೊಬ್ಬ ದೇವನೇ?
೪. ಮಾದಾರ ಶಿವಭಕ್ತನಾದರೆ ಆತನ ಹೊರೆಯಲಿ ಭೃತ್ಯನಾಗಿರ್ಪುದು ಕರಲೇಸಯ್ಯ
ಈ ಮುಂತಾದ ಮಾತುಗಳಲ್ಲಿ ದೇವ ಸಂಬಂಧಿಗಳಲ್ಲಿ ಕುಲವನರಸಲು ಬಾರದೆಂಬ ನೀತಿಯನ್ನು ಅರಹುತ್ತಾರೆ.
*