Previous ಲಿಂಗಾಯತ ಧರ್ಮದ ಲಕ್ಷಣಗಳು ಲಿಂಗಾಯತ ಎಂಬ ಹೊಸ ಧರ್ಮ Next

|| ಓಂ ಶ್ರೀ ಗುರು ಬಸವಲಿಂಗಾಯ ನಮಃ ||

5. ಲಿಂಗಾಯತ ಮತ್ತು ವೀರಶೈವ

- ಪೂಜ್ಯ ಶ್ರೀ ಮಹಾ ಜಗದ್ಗುರು ಮಾತೆ ಮಹಾದೇವಿ

ಕೆಲವರು ದುರುದ್ದೇಶದಿಂದ, ಮತ್ತೆ ಕೆಲವರು ಅಜ್ಞಾನದಿಂದ ವೀರಶೈವ -ಲಿಂಗಾಯತ ಇವುಗಳನ್ನು ಸಮಾನಾರ್ಥದಲ್ಲಿ ಒಂದೇ ಧರ್ಮದ ಎರಡು ಹೆಸರುಗಳೆಂದು ಬಳಸುತ್ತಾರೆ. ಇದು ಸಂಪೂರ್ಣ ಅಸಂಬದ್ಧ ಮತ್ತು ಅಸತ್ಯ. ಉದಾಹರಣೆಗೆ, ಮಹಮ್ಮದೀಯ ಧರ್ಮ ಮತ್ತು ಇಸ್ಲಾಂ ಎಂದು ಯಾರಾದರೂ ಬಳಸಿದರೆ ಎರಡೂ ಪದಗಳು ಕುರಾನ್ ಬೋಧಿಸುವ ಧರ್ಮಕ್ಕೆ ಅನ್ವಯವಾಗುತ್ತವೆ. ಹಾಗೆ ಲಿಂಗಾಯತ ಮತ್ತು ವೀರಶೈವ ಒಂದೇ ಧರ್ಮಕ್ಕೆ ಅನ್ವಯವಾಗವು. ಅವುಗಳಲ್ಲಿನ ವ್ಯತ್ಯಾಸವನ್ನು ನೋಡೋಣ.

ವೀರಶೈವ/ರು ಲಿಂಗಾಯತ ಧರ್ಮ
1. ಶಿವನಲ್ಲಿ ವೀರತಮವಾದ ಭಕ್ತಿ ಹೊಂದಿರುವುದು 1. ಸೃಷ್ಟಿಕರ್ತ ಲಿಂಗದೇವನಲ್ಲಿ ಭಕ್ತಿ ಹೊಂದಿರುವುದು
2. ಸಾಮಾಜಿಕವಾಗಿ ಚತುರ್ವರ್ಣ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದೆ 2. ವರ್ಣ, ಜಾತಿ ಪದ್ಧತಿ ನಂಬದು
3. ದಲಿತ, ಅಸ್ಪೃಶ್ಯರಿಗೆ ದೀಕ್ಷೆ ನಿಷಿದ್ಧ 3. ಎಲ್ಲ ಮಾನವರಿಗೂ ದೀಕ್ಷೆ ಲಭ್ಯ
4. ಸ್ಥಾವರ ಲಿಂಗ ಪೂಜಕರು 4. ಕೇವಲ ಇಷ್ಟಲಿಂಗ ಪೂಜಕರು ”,
5. ಬಹುದೇವತೋಪಾಸಕರು 5. ಏಕದೇವೋಪಾಸಕರು
6. ಧರ್ಮಗುರು ಬಸವಣ್ಣನವರನ್ನು ಧರ್ಮಗುರು ಎಂದು ಒಪ್ಪದವರು 6. ಲಿಂಗಾಯತ ಧರ್ಮ ಸಂಸ್ಥಾಪಕರು ಬಸವಣ್ಣನವರು ಎಂದು ದೃಢವಾಗಿ ನಂಬುವವರು
7. ವೇದಾಗಮ ಶಿವ ಪುರಾಣಗಳೇ ಆಧಾರ ಗ್ರಂಥ ಎನ್ನುವವರು 7. ವೇದಾಗಮ ಪುರಾಣಗಳನ್ನೊಪ್ಪದೆ ವಚನ ವಾಜ್ಯವನ್ನು ಮಾತ್ರ ಧಾರ್ಮಿಕ ಸಂವಿಧಾನ ಎನ್ನುವವರು
8. ಸಂಸ್ಕೃತ ಧರ್ಮಭಾಷೆ. ಆಯಾ ಪ್ರಾಂತ್ಯಗಳಲ್ಲಿ ಆಯಾ ಭಾಷೆ ಮಾತನಾಡುವರು. 8. ಕನ್ನಡ ಧರ್ಮಭಾಷೆ. ಎಲ್ಲಿಯೇ ಇರಲಿ ಕನ್ನಡವನ್ನು ಮನೆ ಮಾತು ಆಗಿ ಇರಿಸಿ ಕೊಂಡಿರುವರು
9. ಶಿವಾದೈತ ಸಿದ್ಧಾಂತ 9. ಶೂನ್ಯ ಸಿದ್ಧಾಂತ
10. ಭಕ್ತ-ಮಾಹೇಶ್ವರ ಎಂಬ ಭೇದವಿದೆ 10. ಶರಣ ಸಮೂಹದಲ್ಲಿ ಅಂಥ ಭೇದವಿಲ್ಲ. ಜಂಗಮ ಅಥವಾ ಮಾಹೇಶ್ವರ ಹುಟ್ಟಿನಿಂದ ಬರುವ ಜಾತಿಯಲ್ಲ
11. ವೀರಶೈವರು ಪೂಜಿಸುವ ಲಿಂಗಗಳು ಸ್ಥಾವರ ಲಿಂಗದ ಚಿಕ್ಕರೂಪಗಳಾಗಿ ಇರುತ್ತವೆ. ಮತ್ತು ಚತುರ್ವರ್ಣಕ್ಕೆ ಅನುಸಾರವಾಗಿ ಶಿಲೆ, ಸುವರ್ಣ, ರಜತ, ಪಾದರಸ ಇತ್ಯಾದಿ ಧಾತುಗಳಿಂದ ರೂಪು ಗೊಂಡಿರುತ್ತದೆ. ಅದಕ್ಕೆ ಕಂಥೆ ಇರದು. ಈ ಶಿವಲಿಂಗಗಳು ಶಿವನ ಕುರುಹು. 11. ಲಿಂಗಾಯತರು ಪೂಜಿಸುವ ಇಷ್ಟ ಲಿಂಗಗಳು ಗೋಲಾಕಾರವಾಗಿದ್ದು ಹೊಳಪುಳ್ಳ ಕಂಥೆಯನ್ನು ಹೊಂದಿರುತ್ತವೆ. ಎಲ್ಲಲಿಂಗಾಯತರು ಒಂದೇ ಬಗೆಯ ಕಂಥೆಯನ್ನು ಹೊಂದಿರುವ ಲಿಂಗಗಳನ್ನು ಧರಿಸಿ, ಪೂಜಿಸುತ್ತಾರೆ. ಇಷ್ಟಲಿಂಗವು ಪಾರ್ವತಿ ಪತಿ ಶಿವನ ಕುರುಹಲ್ಲ ಬ್ರಹ್ಮಾಂಡದೊಡೆಯನಾದ ಲಿಂಗದೇವನ ಕುರುಹು
12. ತಮಿಳು ನಾಡಿನ ವೀರಶೈವರಿಗೆ ತಿರುವಾಚಕಮ್ ತೆಲುಗು ನಾಡಿನ ವೀರಶೈವರಿಗೆ ಶ್ರೀಕರ ಭಾಷ್ಯ ಮುಂತಾದವು ಶಾಸ್ತ್ರಗ್ರಂಥಗಳು 12. ಲಿಂಗಾಯತ ಧರ್ಮಿಯರಿಗೆ ವಚನ ಸಾಹಿತ್ಯವೇ ಪ್ರಮಾಣ ಗ್ರಂಥ
13. ದೀಕ್ಷೆಯ ನಂತರ ಪೂರ್ವದ ವರ್ಣ,ಜಾತಿ ಅಳಿಯವು. (ತಮಿಳು ನಾಡು ವೀರಶೈವ) 13. ದೀಕ್ಷಾ ನಂತರ ಪೂರ್ವದ ವರ್ಣ, ಜಾತಿ ಮುಂತಾದ ಭೇದ ಅಳಿಯುತ್ತವೆ. ಎಲ್ಲರೂ ಸಮಾನರು.
14. ದೀಕ್ಷೆಯನ್ನು ಪಡೆದ ಬ್ರಾಹ್ಮಣ ವೀರಶೈವ, ಕ್ಷತ್ರಿಯ, ವೈಶ್ಯ, ಶೂದ್ರ ವೀರಶೈವರಲ್ಲಿ ಪರಸ್ಪರ ಊಟೋಪಚಾರವಿಲ್ಲ. ವೈವಾಹಿಕ ಸಂಬಂಧವಿಲ್ಲ. 14. ದೀಕ್ಷಿತರಲ್ಲಿ ಊಟೋಪಚಾರ, ವಿವಾಹ ಸಂಬಂಧ ನಡೆಯುತ್ತವೆ.
15. ವೀರಶೈವರ ಅನೇಕ ಪಂಗಡಗಳಲ್ಲಿ ಮಾಂಸಾಹಾರ-ವಿದೆ (ಕೇರಳ ವೀರಶೈವ). ಕೇರಳದ 7 ಪಂಗಡಗಳಲ್ಲಿ 3 ಪಂಗಡ ಸಸ್ಯಾಹಾರಿ, 4 ಪಂಗಡ ಮಾಂಸಾಹಾರಿಗಳು 15. ಲಿಂಗಾಯತ ಧರ್ಮಿಯರು ಶುದ್ಧ ಸಸ್ಯಾಹಾರಿಗಳು
16. ಶವಗಳನ್ನು ಸುಡುವರು 16. ಶವಗಳನ್ನು ಸಮಾಧಿ ಮಾಡುವರು
17. ಪಂಚ ಸೂತಕಗಳುಂಟು 17. ಪಂಚ ಸೂತಕಗಳನ್ನು ನಂಬುವುದಿಲ್ಲ

ಲಿಂಗಾಯತ ಸಮಾಜದಲ್ಲಿ ಲಿಂಗಾಯತ ಎಂಬ ಪದ ಮಾತ್ರ ರೂಢಿಯಲ್ಲಿತ್ತು. ಗುರು ಬಸವಣ್ಣನವರೇ ಇದರ ಸಂಸ್ಥಾಪಕರು ಎಂಬ ನಂಬಿಕೆ ದೃಢವಾಗಿತ್ತು. ಗುರು ಬಸವಣ್ಣನವರ ಸ್ಥಾನವನ್ನು ಕೆಳಗಿಳಿಸಲು, ಲಿಂಗಾಯತ ಸಮಾಜದಲ್ಲಿಲಿಂಗೀ ಬ್ರಾಹ್ಮಣ, ಲಿಂಗೀ ಶೂದ್ರ ಎಂದೆಲ್ಲ ವಿಂಗಡಣೆ ಮಾಡಿ ಮೇಲು-ಕೀಳು ಎಂದು ಸೃಷ್ಟಿಸುವ ಧೂರ್ತ ಆಲೋಚನೆಯಿಂದ ಶೀತಲೀಕೃತ ಶವಾಗಾರದಲ್ಲಿದ್ದ ವೀರಶೈವ ಪದವನ್ನು ಕೃತಕವಾಗಿ ಸಮಾಜದಲ್ಲಿ, ಸಾಹಿತ್ಯದಲ್ಲಿ ಸೇರಿಸಿ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಕರಾದ ಹಾನಗಲ್‌ ಕುಮಾರ ಸ್ವಾಮಿಗಳು ಮತ್ತು ಪಂಚಪೀಠದವರು ಲಿಂಗಾಯತ ಧರ್ಮದ ಇತಿಹಾಸ, ಸಮಾಜ ಮತ್ತು ಸಾಹಿತ್ಯವನ್ನು ವಿಕೃತಗೊಳಿಸಿದರು.

ವೀರಶೈವವು ವೈದಿಕ ಸಂಪ್ರದಾಯವನ್ನೇ ಅನುಸರಿಸುತ್ತದೆ. ಬ್ರಾಹ್ಮಣ ವಟುಗಳಿಗೆ ಉಪನಯನ ಮಾಡಿದಂತೆ ಅಯ್ಯನವರ ವಟುಗಳಿಗೆ ಅಯ್ಯಾಚಾರ ಮಾಡಲಾಗುತ್ತದೆ. ಬ್ರಾಹ್ಮಣರಲ್ಲಿ ಹೆಣ್ಣು ಮಕ್ಕಳಿಗೆ ಉಪನಯನ ಹೇಗಿಲ್ಲವೋ ಹಾಗೆ ಅಯ್ಯಾಚಾರವು ಅಯ್ಯನವರ ಹೆಣ್ಣುಮಕ್ಕಳಿಗೆ ಇರುವುದಿಲ್ಲ. ಬ್ರಾಹ್ಮಣ ವಟುಗಳು ಶಿಖೆಯನ್ನು ಬಿಟ್ಟಂತೆ ಅಯ್ಯನವರ ಮಕ್ಕಳಿಗೂ ಶಿಖೆ (ಜುಟ್ಟು) ಬಿಡಿಸಲಾಗುತ್ತದೆ. ಲಿಂಗಾಯತ ಧರ್ಮವು ಭಕ್ತ - ಮಹೇಶ್ವರ (ಜಂಗಮ) ಎಂಬ ಭೇದವೆಣಿಸದೆ ಎಲ್ಲರಿಗೂ ಇಷ್ಟಲಿಂಗ ದೀಕ್ಷೆಯನ್ನು ಕರುಣಿಸುತ್ತದೆ. ಹೃದಯ ಅಂತರ್ಗತವಾದ ಆತ್ಮ ಚೈತನ್ಯದ ಪ್ರತೀಕವಾದ ಇಷ್ಟಲಿಂಗವನ್ನು ಎದೆಯ ಮೇಲೆ ಕಟ್ಟುವ ಸತ್ ಸಂಪ್ರದಾಯಕ್ಕೂ ಚ್ಯುತಿ ತಂದು ವೀರಶೈವ ವಾದಿಗಳು ಜನಿವಾರವನ್ನು ಹೋಲುವಂತೆ ಅಡ್ಡಲಾಗಿ, ಉದ್ದವಾದ ಶಿವದಾರದಿಂದ ಕಟ್ಟಿ, ಅದರ ತುದಿಯಲ್ಲಿ ಕರಡಿಗೆ, ಇಷ್ಟಲಿಂಗ ಕಟ್ಟುವುದನ್ನು ಜಾರಿಗೆ ತಂದರು. ಜನಿವಾರವಿಲ್ಲದ್ದರಿಂದ ಶೂದ್ರರು ಎಂಬ ವೈದಿಕರ ಆರೋಪದಿಂದ ಮುಕ್ತರಾಗಲು, ತಾವು ಲಿಂಗೀಬ್ರಾಹ್ಮಣರು ಎಂದು ಹೇಳಿಕೊಳ್ಳಲು ವೀರಶೈವ ಪದವನ್ನು ಆಗಂತುಕವಾಗಿ ಲಿಂಗಾಯತ ಸಮಾಜದೊಳಕ್ಕೆ ಸೇರಿಸಿಕೊಂಡರು. ತಮಿಳುನಾಡು, ಆಂಧ್ರ ವೀರಶೈವರಲ್ಲಿ ಚತುರ್ವರ್ಣ ವರ್ಗಿಕರಣ ಇದ್ದುದರಿಂದ ಆ ಪದವನ್ನು ಎರವಲು ತಂದು ಲಿಂಗಾಯತ ಸಮಾಜದಲ್ಲಿ ಸೇರಿಸಿ ಕೊಂಡುದಲ್ಲದೆ ಪಂಚ ಪೀಠಾಧೀಶರು ಲಿಂಗಾಯತ ಸಮಾಜದಲ್ಲೂ ಚತುರ್ವರ್ಣಗಳನ್ನು ಹುಡುಕುವ ಸಾಹಸ ಮಾಡಿದರು.

ತಮ್ಮ ಧರ್ಮ ಸಂಹಿತೆಯಾದ ವಚನ ಸಾಹಿತ್ಯದ ಅಧ್ಯಯನ, ಪಾರಾಯಣ ಬಿಟ್ಟು ಸಂಸ್ಕೃತ ಪಾಠಶಾಲೆ ತೆರೆದು ವೈದಿಕವನ್ನು ಕಲಿಸಿ ಪೂಜೆ, ದೀಕ್ಷೆ ಪೌರೋಹಿತ್ಯಗಳನ್ನು ವೈದಿಕೀಕರಣ ಗೊಳಿಸಿದರು. 12ನೆಯ ಶತಮಾನದಿಂದ 19ನೆಯ ಶತಮಾನದವರೆಗೆ ಕೆಡದಿದ್ದ ಲಿಂಗಾಯತ ಶರಣ ಸಂಸ್ಕೃತಿ 20ನೆಯ ಶತಮಾನದಲ್ಲಿ ವಿಕೃತಗೊಳ್ಳ ತೊಡಗಿತು. ಉತ್ತರ ಭಾರತದಲ್ಲಿ ಬ್ರಾಹ್ಮಣ ವರ್ಣದವರು ಶರ್ಮ, ಶಾಸ್ತ್ರಿ ಎಂದು ಹೆಸರಿಟ್ಟುಕೊಳ್ಳುವಂತೆ ಕರ್ನಾಟಕದಲ್ಲಿಯೂ ತಮ್ಮ ಹೆಸರಿನ ಮೊದಲಿಗೆ ವೇದ ಮೂರ್ತಿ ಎಂದು ಕೊನೆಗೆ ಶರ್ಮಾ, ಶಾಸ್ತ್ರಿ ಆರಾಧ್ಯ ಎಂದು ಹೆಸರಿಟ್ಟುಕೊಳ್ಳಲು ಆರಂಭಿಸಿದರು. ಲಿಂಗಾಯತರಲ್ಲಿ ಗೋತ್ರ, ಸೂತ್ರ, ಶಾಖೆ ಇತ್ಯಾದಿ ಹೇಳುವ ಪರಿಪಾಠವೇ ಇರಲಿಲ್ಲ. ಇದನ್ನು ಕೇಳಿ ಲಿಂಗಾಯತರನ್ನು ಪಂಚಪೀಠದ ಮಠಗಳವರು ಗೊಂದಲಕ್ಕೆ ಈಡು ಮಾಡತೊಡಗಿದರು.

ಗ್ರಂಥ ಋಣ:
1) ಲಿಂಗಾಯತರು ಹಿಂದುಗಳಲ್ಲ - A book written by Her Holiness Maha Jagadguru Mata Mahadevi, Published by: Vishwakalyana Mission 2035, II Block, chord Road, Rajajinagar, Bangalore-560010.

*
ಪರಿವಿಡಿ (index)
Previous ಲಿಂಗಾಯತ ಧರ್ಮದ ಲಕ್ಷಣಗಳು ಲಿಂಗಾಯತ ಎಂಬ ಹೊಸ ಧರ್ಮ Next