ಲಿಂಗಾಯತ-ವೀರಶೈವ ಒಂದೇ ಅಲ್ಲ | ಲಿಂಗಾಯತ ಪುನರುಜ್ಜಿವನದ ಪಂಚಸೂತ್ರಗಳು |
ಸಿದ್ಧಾಂತ ಶಿಖಾಮಣಿ ಕೃತಕ ಗ್ರಂಥ |
✍ ಡಾ. ಎಂ. ಎಂ. ಕಲಬುರ್ಗಿ.
ಸಿದ್ಧಾಂತ ಶಿಖಾಮಣಿಯ ಪರವಾಗಿ ವಾದಿಸುವವರು ನಾಲ್ಕು ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ.
೧. ನಿರ್ಧಿಷ್ಟವಾಗಿ ಸಿದ್ದಾಂತ ಶಿಖಾಮಣಿಯ ಕರ್ತೃ ಯಾರು?
೨. ಈ ಪಠ್ಯದ ನಿಜ ಸ್ವರೂಪವೇನು?
೩. ಇದರಲ್ಲಿಯ ರೇಣುಕಾಚಾರ್ಯ, ಅಗಸ್ತ್ಯ ಇತ್ಯಾದಿ ಇವರ ಚರಿತ್ರೆ ಎಷ್ಟರ ಮಟ್ಟಿಗೆ ವಿಶ್ವಾಸಾರ್ಹ?
೪. ಇದರ ನೂರೊಂದು ಸ್ಥಲ ಸಿದ್ಧಾಂತ ಎಷ್ಟು ತರ್ಕಬದ್ಧ?
ಈ ನಾಲ್ಕು ಅಂಶಗಳನ್ನು ಇಲ್ಲಿ ಚರ್ಚಿಸಬಹುದು.
ಭಾರತದಲ್ಲಿ ಪ್ರಸಿದ್ಧ ವ್ಯಕ್ತಿಯ ಹೆಸರಿನಲ್ಲಿ ಯಾವನೋ ಒಬ್ಬನು ಕೃತಿ ಬರೆಯುವದು, ಕಲ್ಪಿತ ಹೆಸರಿನಲ್ಲಿ ಯಾವನೋ ಒಬ್ಬನು ಕೃತಿ ಬರೆಯುವುದು- ಹೀಗೆ ಎರಡು ಬಗೆಯ ಕೃತಕ ಗ್ರಂಥಗಳು ಹುಟ್ಟುತ್ತವೆ. ಯಾವನೋ ಬರೆದು ಕಾಳಿದಾಸನ ಹೆಸರಿನಲ್ಲಿ ಸಿಗುತ್ತಿರುವ ಅನೇಕ ಕೃತಿಗಳು ಮೊದಲಿನದಕ್ಕೆ ಉದಾಹರಣೆಯಾದರೆ, ಶಿವಯೋಗಿ ಶಿವಾಚಾರ್ಯನ ಹೆಸರಿನಲ್ಲಿ ಸಿಗುತ್ತಿರುವ ಸಿದ್ಧಾಂತ ಶಿಖಾಮಣಿ ಎರಡನೆಯದಕ್ಕೆ ಉದಾಹರಣೆಯಾಗಿದೆ. ಯಾವನೋ ಒಬ್ಬನ ಹೆಸರಿನಲ್ಲಿ ಬರೆದ ಕೃತಿ ಶಿವಯೋಗಿ ಶಿವಾಚಾರ್ಯನನ್ನು ಐತಿಹಾಸಿಕವಾಗಿ ಗುರುತಿಸುವ ಪ್ರಯತ್ನವನ್ನು ಕೆಲವರು ಮಾಡಿದ್ದಾರೆ. ಇದರ ಒಂದನೆಯ ಪರಿಚ್ಛೇದದಲ್ಲಿಯ (೧೩-೨೪) ಕರ್ತೃವಿನ ವಂಶಾವಳಿಯಲ್ಲಿ ಶಿವಯೋಗಿ ಮುದ್ದದೇವ ಸಿದ್ಧನಾಥ-ಶಿವಯೋಗಿ ಶಿವಾಚಾರ್ಯ ಹೀಗೆ ಹೆಸರುಗಳಿವೆ. ಇಲ್ಲೆಲ್ಲ “ತಸ್ಯ ವಂಶ” ಯದಾಚಾರ ಕುಲೇ” ಪದಗಳು ಬಳಕೆಯಾಗಿರುವುದರಿಂದ ಇವರು ನೇರವಾಗಿ ಒಬ್ಬನ ಶಿಷ್ಯ ಒಬ್ಬ ಅಥವಾ ಒಬ್ಬನ ಮಗ ಒಬ್ಬ ಎಂದು ಹೇಳಲು ಬರುವಂತಿಲ್ಲ. ಈ ಸಿದ್ದಾಂತ ಶಿಖಾಮಣಿಗೆ “ತತ್ವಪದೀಪಿಕಾ” ಹೆಸರಿನ ಸಂಸ್ಕೃತ ವ್ಯಾಖ್ಯಾನ ಬರೆದಿರುವ ಮರಿತೋಂಟದಾರ‍್ಯನು (೧೭ನೆಯ ಶತಮಾನ) ಇಲ್ಲಿಯ ಮುದ್ದದೇವ, ಸಿದ್ಧನಾಥ ಹೆಸರುಗಳಿಗೆ ಸೊಲ್ಲಾಪುರದ ಮುದ್ದಗೌಡ, ಸಿದ್ಧರಾಮೇಶ್ವರರೆಂದು ವಿವರಣೆ ನೀಡಿರುವನು. ಆದರೆ ರಾಘವಾಂಕನ ಸಿದ್ದರಾಮ ಚಾರಿತ್ರದ ಪ್ರಕಾರ ಸಿದ್ದರಾಮನ ತಂದೆಯ ಹೆಸರು ಮುದ್ದುಗೌಡ ಎಂಬುದೇ ಹೊರತು ಮುದ್ದುದೇವ ಅಲ್ಲ. ಇದಲ್ಲದೆ ಸಿದ್ದಾಂತ ಶಿಖಾಮಣಿಯ ಮುದ್ದುದೇವನು ಮೂರ್ಧನ್ಯಕ್ಕೆ “ಶಿವಯೋಗಿನಾಮ್” ಎಂದು ಸುಪ್ರಸಿದ್ಧನಾಗಿದ್ದರೆ, ಸಿದ್ಧರಾಮ ಚಾರಿತ್ರದ ಮುದ್ದಗೌಡನು ಒಬ್ಬ ಸಾಮಾನ್ಯ ವ್ಯಕ್ತಿ. ಪ್ರತಿಷ್ಠಿತರು ಹೇಳಿದುದನ್ನು ಒಪ್ಪಿ ಬಿಡುವುದು ಪ್ರಾಚೀನ ಸಂಪ್ರದಾಯವಾಗಿದ್ದಿತು. ಕಾಲ ಬದಲಾಗಿದೆ. ಪ್ರಶ್ನೆ ಕೇಳುವ, ಹೀಗೆ ಕೇಳಿದ ಪ್ರಶ್ನೆಗೆ ಸಮಂಜಸ ಉತ್ತರ ಸಿಕ್ಕರೆ ಒಪ್ಪಿಕೊಳ್ಳುವ, ಸಿಗದಿದ್ದರೆ ತಿರಸ್ಕರಿಸುವ ಮನೋಧರ್ಮ ಇಂದು ಬೆಳೆದಿದೆ. ಈ ಮನೋಧರ್ಮದಿಂದ ಸಿದ್ಧಾಂತ ಶಿಖಾಮಣಿಯನ್ನು ಕಟ್ಟಕಡೆಯಲ್ಲಿ ನಿಲ್ಲಿಸಿ ಪ್ರಶ್ನೆ ಕೇಳುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಆದುದರಿಂದ ಮೇಲೆ ಸೂಚಿಸಿದ ನಾಲ್ಕು ಒರೆಗಲ್ಲುಗಳಿಗೆ ಹಚ್ಚಿ ಸಿದ್ದಾಂತ ಶಿಖಾಮಣಿ ಖೋಟಾ-ಸಾಚಾತನಗಳನ್ನು ಪರಿಶೀಲಿಸಬಹುದು. ಇದಲ್ಲದೆ ಸಿದ್ಧನಾಥನೇ ಸಿದ್ಧರಾಮನೆಂದಿಟ್ಟುಕೊಂಡರೆ ಬ್ರಹ್ಮಚಾರಿಯಾಗಿದ್ದ ಸಿದ್ಧರಾಮನಿಗೆ ಶಿವಯೋಗಿ ಶಿವಾಚಾರನೆಂಬ ಮಗನಿರುವುದು ತೀರ ಅಸಂಭವ. ಸಿದ್ಧರಾಮೇಶ್ವರನ ವಂಶದವನೆಂದು ಇಟ್ಟುಕೊಂಡರೆ ಇದನ್ನು ಬೆಂಬಲಿಸುವ ಅನ್ಯ ಆಧಾರ ಒಂದೂ ಇಲ್ಲ. ಮೇಲಾಗಿ ಇಷ್ಟು ಪ್ರಸಿದ್ಧ ಗ್ರಂಥಕರ್ತನ ಹೆಸರನ್ನು ಪ್ರಾಚೀನ ವೀರಶೈವ ಒಬ್ಬ ಗ್ರಂಥಕರ್ತನೂ ಬಾಯಿತಪ್ಪಿಯಾದರೂ ಪ್ರಸ್ತಾಪಿಸಿಲ್ಲ. ಕೆಲವು ಕೃತಿಗಳಲ್ಲಿ ಇದರ ಶ್ಲೋಕ ಉದ್ಧರಿಸಿ ಸಿದ್ಧಾಂತ ಶಿಖಾಮಣಿಯಲ್ಲಿ ಉಕ್ತ ಎಂದು ಕೃತಿ ಹೆಸರು ಹೇಳಲಾಗಿದೆಯೇ ಹೊರತು “ಶಿವಯೋಗಿ ಶಿವಾಚಾರೋಕ್ತ ಎಂದು ಎಲ್ಲಿಯೂ ಹೇಳಿಲ್ಲ. ಹೀಗೆ ಗ್ರಂಥೋಕ್ತ ಈ ವಂಶಾವಳಿ ತುಂಬ ಗೊಂದಲದಿಂದ ಕೂಡಿದೆ. ಇದಲ್ಲದೆ ಇದನ್ನು ಬೆಂಬಲಿಸುವ ಬೇರೆ ಒಂದೂ ಆಧಾರವಿಲ್ಲವಾಗಿ ಈ ವಂಶಾವಳಿಯೇ ಕೃತಕ. ಅಂದರೆ ಶಿವಯೋಗಿ ಶಿವಾಚಾರ್ಯನೆಂಬವನೇ ಭೂಮಿಯ ಮೇಲೆ ಹುಟ್ಟಿಲ್ಲವೆಂದು ಹೇಳಬೇಕಾಗುತ್ತದೆ. ಇನ್ನೂ ಒಂದು ವಿಷಯವೆಂದರೆ “ಶಿವಯೋಗಿ ಶಿವಾಚಾರ್ಯ” ಎಂಬಲ್ಲಿ ಶಿವಾಚಾರ್ಯವೆಂಬುದನ್ನು ಹೆಸರಿನ ಭಾಗವಲ್ಲ, ಪದವಿ, ಶಿವಯೋಗಿ ಎಂಬುದೇ ಇವನ ನಿಜನಾಮ. ಇಂದು ಶಿವಯೋಗಿ ಎಂಬುದು ಅಂಕಿತನಾಮವಾಗಿ ಬಳಕೆಯಲ್ಲಿದೆ. ಆದರೆ ಪ್ರಾಚೀನ ಉಲ್ಲೇಖಗಳಿಂದ ಈತನ ಸ್ವಗ್ರಾಮ ತಿಳಿದು ಬರದಿರುವಾಗ ಆಧುನಿಕರಾದ ಅವರಿಗೆ ತಾಲೂಕಿನ ಸಾಲೊಟಗಿಯಲ್ಲಿ ಶಿವಯೋಗೀಶ್ವರನ ದೇವಾಲಯವಿರುವುದು ಆಶಾದಾಯಕ ಆಧಾರವಾಗಿ ಕಂಡಿತು. ಈ ಶಿವಯೋಗೀಶ್ವರನೇ ಶಿವಯೋಗಿ ಶಿವಾಚಾರನೆಂದು ಜೀವನದುದ್ದಕ್ಕೂ ಪ್ರವಚಿಸುತ್ತ ಬಂದರು. ನಿಜಸಂಗತಿಯೆಂದರೆ ಈತನು ೧೬ನೆಯ ಶತಮಾನದ ಕೊಡೆಕಲ್ಲ ಬಸವಣ್ಣನೆಂಬ ನಾಥ ಸಂಪ್ರದಾಯದವನ ಶಿಷ್ಯ, ವಿಜಾಪುರದ ಆದಿಲಶಾಹಿಗಳಿಂದ ಗೌರವಿಸಲ್ಪಟ್ಟವನು, ಇತ್ಯಾದಿ ಆ ಪ್ರದೇಶದಲ್ಲಿ ಜನಜನಿತ ವಾಗಿರುವ ಸಂಗತಿಗಳಿಗೆ ಕಿವಿ ಮುಚ್ಚಿ ಹೇಳಿದ ಮತ್ತು ಚರ್ಚೆಗೂ ಯೋಗ್ಯವಲ್ಲದ ಅವರ ಅಚಾರಿತ್ರಿಕ ಅಂಶಗಳು ಇಂದು ಬಿದ್ದು ಹೋಗಿವೆಯೆಂದೇ ಹೇಳಬೇಕು.
ಹೀಗಾಗಿ ಯಾವನೋ ಒಬ್ಬ ವಿದ್ವಾಂಸನು ತನ್ನ ಈ ಕೃತಿಗೆ ಪ್ರಾಚೀನತೆ, ಪ್ರಸಿದ್ಧಿ ಸಿಗಲೆಂದು ಶಿವಯೋಗಿ ಶಿವಾಚಾರ‍್ಯನೆಂಬ ಕಲ್ಪಿತ ವಂಶಾವಳಿಯನ್ನು ಸೃಷ್ಟಿಸಿರುವ ಕಾರಣ ಸಿದ್ಧಾಂತ ಶಿಖಾಮಣಿಯು ಅನ್ಯ ನಾಮಧೇಯ ಕೃತಕಗ್ರಂಥವೆನಿಸಿ ಕೊಳ್ಳುತ್ತದೆ.
ಸಿದ್ಧಾಂತ ಶಿಖಾಮಣಿ ೧೨೦೦ ಶ್ಲೋಕಗಳ ಒಂದು ಧಾರ್ಮಿಕ ಗ್ರಂಥ. ಈವರೆಗೆ ಇದು ಏಕ ವ್ಯಕ್ತಿ ರಚಿತ ಶ್ಲೋಕಗಳ ಸ್ವತಂತ್ರ ಸೃಷ್ಟಿಯೆಂದು ಭಾವಿಸಲಾಗಿತ್ತು. ಆದರೆ ಕೆಲವು ಶ್ಲೋಕಗಳು ಸಿದ್ಧಾಂತ ಶಿಖಾಮಣಿ ಮತ್ತು ಅನ್ಯ ಗ್ರಂಥಗಳಲ್ಲಿ ಕಂಡುಬರುತ್ತಿದ್ದು, ಈ ಅನ್ಯ ಗ್ರಂಥಗಳಲ್ಲಿ ಆ ಶ್ಲೋಕಗಳಿಗೆ ಹೇಳಿದ ಆಕರಗಳನ್ನು ಸೇರಿಸಿ ಈ ಕೃತಿ ಯಾವ ಯಾವ ಗ್ರಂಥಗಳಿಗೆ ಋಣಿಯಾಗಿದೆಯೆಂದು ನಿರ್ಧರಿಸಬಹುದಾಗಿದೆ. ಈ ದಿಸೆಯಲ್ಲಿ ಮುಂದುವರಿದರೆ ವಾತುಲ, ಪಾರಮೇಶ್ವರ, ಸುಪ್ರಭೇದ, ವಾತುಲೋತ್ತರ ಮೃಗೇಂದ್ರ, ಮತಂಗ, ಪಾರಮೇಶ್ವರ, ಭೀಮ, ಕಾಮಿಕ, ಉತ್ತರಕಾಮಿಕ, ಸೂಕ್ಷ್ಮ, ವೀರ, ವಿಜಯ, ಚಂದ್ರಜ್ಞಾನ, ಯೋಗಜ, ಕಾರಣ, ಈ ಆಗಮಗಳಿಂ, ಸ್ಕಂದ, ಲಿಂಗ, ಶಿವ, ವಾಸಿಷ್ಟ, ಬ್ರಹ್ಮಾಂಡ, ಗರುಡ, ಕೂರ್ಮ, ಏಕಪಾದ, ಶಿವಧರ್ಮ, ಈ ಪುರಾಣಗಳಿಂದ ಬೃಹಜ್ಜಾಬಾಲೋಪನಿಷತ್, ಜಾಬಾಲೋಪನಿಷತ್-ಈ ಉಪನಿಷತ್‌ಗಳಿಂದ, ವಾಯವೀಯ ಸಂಹಿತೆ, ಉತ್ತರವಾಯವೀಯ ಸಂಹಿತೆ, ಶೈವ ಸಂಹಿತೆ, ಶಂಕರ ಸಂಹಿತೆ, ಸೂತ ಸಂಹಿತೆ, ಮಾನವೀಯ ಸಂಹಿತೆ-ಈ ಸಂಹಿತೆಗಳಿಂದ, ಶಿವಧರ್ಮ, ಶಿಧರ್ಮೊತ್ತರ, ಶಿವರಹಸ್ಯ, ಯಾಜ್ಞವಲ್ಕ ಸ್ಮೃತಿ, ವೀರಭದ್ರೀಯ, ಶಿವಯೋಗಪ್ರದೀಪಿಕೆ, ಶಾರದಾ ತಿಲಕ, ಶಿವಯೋಗ ದೀಪಿಕೆ, ತಂತ್ರಸಾರ, ಮಹಾಭಾರತ, ಭಾಗವತ, ಕ್ರಿಯಾಸಾರ, ಮಹಿಮ್ನಸ್ತುತಿ, ಬ್ರಹ್ಮಗೀತೆ, ಶೈವ, ಶ್ರೀ ಗೀತೆ, ಶೈವರತ್ನಾಕರ, ಸಿದ್ಧಾಂತ ದೀಪಿಕೆ, ಸಿದ್ಧಾಂತ ಶೇಖರ, ಯೋಗಸಾರ ಸಂಗ್ರಹ, ಶಿವಾದ್ವೈತ, ದೇವಿಕಾಲೋತ್ತರ, ಚಂದ್ರಾವಲೋಕನ, ಯೋಗ ಷಟ್‌ಸಹಸ್ರಕೆ, ಶಿವ-ಸನತ್ಕುಮಾರ ಸಂವಾದ, ಪೈಂಗಲ ಶಾಖೆ, ಶಿವಜ್ಞಾನ ವಿದ್ಯೆ, ಪರತಂತ್ರ, ಸೂತಗೀತೆ, ಶಿವಸೂತ್ರ, ಅಚಿಂತ್ಯ ಮಿಶ್ರ ಸಾದಾಖ್ಯ-ಈ ಗ್ರಂಥಗಳಿಂದ ಒಟ್ಟು ೩೫೬ ಶ್ಲೋಕಗಳನ್ನು ಎತ್ತಿಕೊಳ್ಳಲಾಗಿದೆ ಯೆಂದು ಶ್ರೀ ಇಮ್ಮಡಿ ಶಿವಬಸವ ಸ್ವಾಮಿಗಳು ತೋರಿಸಿಕೊಟ್ಟಿದ್ದಾರೆ. ಅಭ್ಯಾಸ ಮುಂದುವರಿಸಿದರೆ ಈ ಸಂಖ್ಯೆ ಖಂಡಿತವಾಗಿಯೂ ಇನ್ನೂ ವರ್ಧನೆಗೊಳ್ಳುತ್ತದೆ. ಇದನ್ನು ನೋಡಿದರೆ ಆರಂಭ ಮತ್ತು ಅಂತ್ಯದ ಚಾರಿತ್ರಿಕ ಶ್ಲೋಕಗಳನ್ನು ಬಿಟ್ಟರೆ, ಸಿದ್ಧಾಂತಕ್ಕೆ ಸಂಬಂಧಪಟ್ಟ ಎಲ್ಲ ಶ್ಲೋಕಗಳು ಕಡ ತಂದ ಸಾಮಗ್ರಿಯೇನೋ ಎಂಬ ಭಾವನೆ ಹುಟ್ಟುತ್ತದೆ. ಹೀಗೆ ಕಡ ತಂದುದು ತಪ್ಪಿಲ್ಲವೆಂದು ಮನ್ನಿಸ ಬಹುದಾದರೂ, ಇವುಗಳಿಗೆ ಆಕರ ಹೇಳದಿರುವುದು, ಕರ್ತೃವಿನ ಕೃತಿಚೌಯ್ಯ ಮನೋಧರ್ಮವನ್ನು ಪ್ರತಿನಿಧಿಸುತ್ತದೆ.
ಈ ಕೃತಿಯ ವಸ್ತು ೧೦೧ ಸ್ಥಲಗಳ ನಿರೂಪಣೆ. ಈ ಸಿದ್ಧಾಂತಕ್ಕೆ ಚಾರಿತ್ರಿಕ ನೆಲೆ ಒದಗಿಸುವ, ತನ್ಮೂಲಕ ಪ್ರಾಚೀನತೆಯನ್ನು ನಂಬಿಸುವ ಉದ್ದೇಶ ಇಲ್ಲಿ ಕೆಲಸಮಾಡಿದೆ. ಈ ಉದ್ದೇಶ “ಉವಾಚ” ಶೈಲಿಯಲ್ಲಿ ಆಕಾರ ಪಡೆದಿದೆ. ಅಂದರೆ ರೇಣುಕಾಚಾರ‍್ಯರು ಅಗಸ್ತ್ಯನಿಗೆ ಬೋಧಿಸಿದ ವಿನ್ಯಾಸ ಇಲ್ಲಿದೆ. ಈ ಕೃತಿಯ ಆದಿಯಲ್ಲಿ ರೇವಣಸಿದ್ಧನ ಸಂಚಾರ, ಅಂತ್ಯದಲ್ಲಿ ಅವನ ನಿರ್ಗಮನಗಳು ಹೇಳಲ್ಪಟ್ಟಿವೆ. ಇದೇನೇ ಇದ್ದರೂ ಇಲ್ಲಿಯ ಅಗತ್ಯ ವೈದಿಕ ಪರಂಪರೆಯ ಋಷಿ, ಈತ ಚಾರಿತ್ರಿಕ ವ್ಯಕ್ತಿಯೋ?ಪೌರಾಣಿಕ ವ್ಯಕ್ತಿಯೋ ಸ್ಪಷ್ಟವಿಲ್ಲ. ಇವನೊಂದಿಗೆ ಪ್ರಾಚೀನವೆನಿಸುವ ಚರಿತ್ರೆಯನ್ನು ತಳಕು ಹಾಕಿದರೆ ತಮ್ಮ ಸಿದ್ಧಾಂತಕ್ಕೆ ಸಹಜವಾಗಿ ಪ್ರಾಚೀನತೆ ಪ್ರಾಪ್ತವಾಗುವುದೆಂಬ ಉದ್ದೇಶ ಇಲ್ಲಿದೆ.
ಮೊದಲು ಅಗಸ್ತ್ಯನನ್ನೇ ಕುರಿತು ಹೇಳುವುದಾದರೆ ಪುರಾಣಗಳ ಪ್ರಕಾರ ಉತ್ತರದಿಂದ ದಕ್ಷಿಣಕ್ಕೆ ಬಂದ ಆರರಲ್ಲಿ ಮೊದಲಿಗನೀತ, ಅಡ್ಡಗಟ್ಟಿದ ವಿಂದ್ಯಾದ್ರಿಯನ್ನು ಕೆಳಗೆ ಒತ್ತಿ, ದಕ್ಷಿಣಕ್ಕೆ ಬಂದು ಆರ‍್ಯ ಸಂಸ್ಕೃತಿ ಪ್ರಚಾರಪಡಿಸಿದ ಈತನನ್ನು ಏಕೋತ್ತರಶತಸ್ಥಲ ಶೋತೃವನ್ನಾಗಿ ಗ್ರಹಿಸಲಾಗಿದೆ. ಆರ‍್ಯ ಅಗಸ್ಯನಿಗೂ ವೀರಶೈವ ನೂರೊಂದು ಸ್ಥಲ ಸಿದ್ಧಾಂತದ ಶ್ರವಣಕ್ಕೂ ಏನು ಸಂಬಂಧ? ಇದನ್ನು ನಂಬುವದೆಂತು?
ಹೀಗೆ ಸಿದ್ಧಾಂತ ಸಂಬಂಧದಂತೆ ಸಮಕಾಲೀನತೆಯ ಸಂಬಂಧವೂ ಪ್ರಶ್ನಾರ್ಹವಾಗಿದೆ. ೧೬ನೆಯ ಶತಮಾನದಲ್ಲಿ ಆಂಧ್ರ ಕರ್ನಾಟಕ ಸೀಮೆಯಲ್ಲಿ ಪಂಡಿತಾರಾಧ್ಯ ಪರಂಪರೆಯವರು ತಮ್ಮ ಒಂದು ಪೀಠವಲ್ಲದೆ ಬಸವಣ್ಣನವರ ಕಾಲದಲ್ಲಿ ಕರ್ನಾಟಕದಲ್ಲಿ ಮರೆಯಾಗಿ ಹೋಗುತ್ತಲಿದ್ದ ನಾಥಪಂಥದ ರೇವಣಸಿದ್ಧ, ಮರುಳಸಿದ್ದರ ಹೆಸರಿನಲ್ಲಿ ಎರಡು ಪೀಠ, ನಕುಲೀಶ(ಪಾಶುಪತ) ಪರಂಪರೆಯ ಏಕಾಂತರಾಮನ(ಏಕೋ ರಾಮ) ಹೆಸರಿನಲ್ಲಿ ಒಂದು ಪೀಠ ಹೀಗೆ ನಾಲ್ಕು ಪೀಠಗಳನ್ನು ಅಸ್ತಿತ್ವಕ್ಕೆ ತಂದರು. ತಾವು (ಪಂಡಿತ) ಆರಾಧ್ಯ ಪರಂಪರೆಯವ ರಾದುದರಿಂದ ೧೧-೧೨ ನೆಯ ಶತಮಾನದ ರೇವಣಸಿದ್ಧನನ್ನು ರೇವಣಾರಾಧ್ಯನೆಂದು, ಮರುಳಸಿದ್ಧ (ಕಾಲ?)ನನ್ನು ಮರುಳಾರಾಧ್ಯನೆಂದು, ಏಕಾಂತ ರಾಮನನ್ನು ಏಕೋರಾಮಾರಾಧ್ಯನೆಂದು ಕರೆದರು. ಹೀಗೆ ಮೂರು ಪೀಠಗಳಿಗೆ ಮರುಜೀವ ಕೊಟ್ಟರೇನೋ ನಿಜ. ಆದರೆ ಬಸವಪೂರ್ವಕಾಲೀನತೆಯನ್ನು ಸ್ಥಾಪಿಸುವ ಸಲುವಾಗಿ ಏನೇನೋ ಕಾಲ್ಪನಿಕ ಚರಿತ್ರೆಯನ್ನು ಹುಟ್ಟುಹಾಕಿದರು. ದೇವಲೋಕದ ರೇಣುಕ, ದಾರುಕ ಇವರು ಒಂದೊಂದು ಯುಗದಲ್ಲಿ ರೇವಣಾರಾಧ್ಯ ಮರುಳಾರಾಧ್ಯ, ಏಕೋರಾಮಾರಾಧ್ಯ, ಪಂಡಿತಾರಾಧ್ಯ ಹೆಸರಿನಿಂದ ಹುಟ್ಟಿದರೆಂದು ಕಥೆ ಕಟ್ಟಿದರು. ಹೀಗೆ ಈ ಪೀಠಗಳನ್ನು ಪಂಡಿತಾರಾಧ್ಯ ಪೀಠದವರು ಸೃಷ್ಟಿಸಿದ್ದ ಕಾರಣ ಪಂಡಿತಾರಾಧ್ಯನು ಅಗಸ್ಯನಿಗೆ ಸಿದ್ಧಾಂತ ಶಿಖಾಮಣಿಯನ್ನು ಬೋಧಿಸಿದನೆಂದು ಹೇಳಿದ್ದರೆ ತಾರ್ಕಿಕವಾಗುತ್ತಿತ್ತು. ಆದರೆ ಇದನ್ನು ಬರೆಯಿಸಿದವರು ಬಾಳೆಹಳ್ಳಿಪೀಠದವರೆಂದು ತೋರುತ್ತದೆ. ಹೀಗಾಗಿ ಬಾಳೆಹಳ್ಳಿ ಪ್ರದೇಶದ ಮಲಯ ಪರ್ವತ (ಮಲೆನಾಡು)ದಲ್ಲಿ ಅಗಸ್ಯನಿಗೆ ಇದನ್ನು ಬೋಧಿಸದನೆಂಬ ಚೌಕಟ್ಟು ಸಿದ್ಧಪಡಿಸಲಾಯಿತು. ರೇಣುಕಾಚಾರ್ಯನ ಇಂದಿನ ತೆಲುಗು ದೇಶದಲ್ಲಿ ಇಂಥ ಹೇಳಿಕೆಯನ್ನು ಮಿಕ್ಕ ಮೂರೂ ಪೀಠದವರು ಮತ್ತು ಸಾಮಾನ್ಯರು ಒಪ್ಪಿಕೊಂಡರೆಂದೇ ತೋರುತ್ತದೆ. ಸಿದ್ಧಾಂತ ಶಿಖಾಮಣಿಯಲ್ಲಿ ಕೊಲ್ಲಿಪಾಕಿಯ ಸೋಮೇಶ್ವರ ಲಿಂಗದಲ್ಲಿ ಉದಿಸಿ (ಸಿದ್ಧಾಂತ ಶಿಖಾಮಣಿ ೪-೧) ವಿಹಾರಿಸುತ್ತ ಮಲೆನಾಡಿನ ಮಲಯಪರ್ವತಕ್ಕೆ (ಸಿದ್ಧಾಂತ ಶಿಖಾಮಣಿ ೪-೧೪)ಬಂದನೆಂದೂ ಅಲ್ಲಿ ಅಗಸ್ಯ ಋಷ್ಯಾಶ್ರಮವನ್ನು ಕಂಡು, ಪೂಜಿತನಾಗಿ ನೂರೊಂದು ಸ್ಥಲಸಿದ್ಧಾಂತವನ್ನು ಬೋಧಿಸಿದನೆಂದು ಹೇಳಲಾಗಿದೆ. ಇಲ್ಲಿ ಮಲೆನಾಡು, ಮಲೆಯ ಪರ್ವತಸ್ಥಳಗಳು, ಆ ಪ್ರದೇಶದ ಬಾಳೆಹಳ್ಳಿಯನ್ನೇ ಪರಾಯವಾಗಿ ಸೂಚಿಸುತ್ತದೆ. ಕಾರಣ ಸಿದ್ಧಾಂತ ಶಿಖಾಮಣಿಯ ಸೃಷ್ಟಿ ಕೆಳದಿ ಅರಸರ ಆರಂಭದ ಅಥವಾ ರೇವಣಸಿದ್ಧಪೀಠ ಕೆಳದಿ ಪ್ರದೇಶಕ್ಕೆ ಹೋದ ಬಳಿಕವೆಂದು ಭಾವಿಸುವುದು ಸಮಂಜಸವೆನಿಸುತ್ತದೆ. ಈ ಪೀಠಗಳು ಪಂಡಿತಾರಾಧ್ಯ ಸಿದ್ಧಾಂತದಲ್ಲಿ ಹುಟ್ಟಿರುವುದರಿಂದ ಸಿದ್ಧಾಂತಶಿಖಾಮಣಿ ಶ್ರೀಶೈಲ ಪರ್ವತದಲ್ಲಿ ಪಂಡಿತಾರಾಧ್ಯನಿಂದ ಅಗಸ್ತ್ಯನಿಗೋ ಇನ್ನಾರಿಗೋ ಬೋಧಿಸಲ್ಪಟ್ಟಿತೆಂದು ಹೇಳುವುದೇ ಸೂಕ್ತವೆನಿಸುತ್ತಿತ್ತು. ಆದರೆ ರಾಜಾಶ್ರಯದ ಬಾಳೆಹಳ್ಳಿಪೀಠದವರ ಮಾತಿಗೆ ಮನ್ನಣೆ ಸಿಕ್ಕಿತೆಂದು ತೋರುತ್ತದೆ. ಹೀಗೆ ಇತಿಹಾಸವೆನ್ನುವಂತೆ ದಂತಕಥೆ ಬರೆಯಲಾಯಿತು.
ಕೊನೆಯಲ್ಲಿ ರೇಣುಕಾಚಾರ‍್ಯನು ಶ್ರೀಲಂಕೆಗೆ ಹೋಗಿ ವಿಭೀಷಣನ ಬಿನ್ನಹದಂತೆ ಮೂರುಕೋಟಿ ಲಿಂಗ ಸ್ಥಾಪಿಸಿ, ಕೊಲ್ಲಿಪಾಕಿಗೆ ಹೋಗಿ ಸೋಮೇಶ್ವರಲಿಂಗದಲ್ಲಿ ಐಕ್ಯನಾದನೆಂಬ ಉಪಕಥೆಗಳನ್ನು ಜೋಡಿಸಲಾಗಿದೆ. ಕೃತಯುಗದ ಆದಿಯಲ್ಲಿ ಹುಟ್ಟಿದ ರೇಣುಕಾಚಾರ‍್ಯನು, ತ್ರೇತಾಯುಗದ ಕೊನೆಯಲ್ಲಿ ವಿಭೀಷಣನಿಗೆ ಭೆಟ್ಟಿಯಾದ, ಶಿಲಾಯುಗದಲ್ಲಿ ಐಕ್ಯನಾದ ಘಟನೆಗಳೆಲ್ಲ ಅಚಾರಿತ್ರಿಕವೆಂದೇ ಹೇಳಬೇಕಾಗುತ್ತದೆ. ಒಟ್ಟಾರೆ ನಾಥಪಂಥದ ರೇವಣಸಿದ್ಧನನ್ನು ತಮ್ಮ ಸಿದ್ಧಾಂತಕ್ಕೆ ಎಳೆದು ತಂದುದು, ೧೧-೧೨ನೆಯ ಶತಮಾನದವರನ್ನು ಯುಗದ ಆದಿಗೆ ಒಯ್ದುದು, ಇವನಿಗೂ ಆರ್ಯ ಮೂಲದ ಅಗಸ್ತ್ಯನಿಗೂ ಗುರು-ಶಿಷ್ಯ ಸಂಬಂಧ ಕಲ್ಪಿಸಿದುದು ಆಭಾಸದ ಕಂತೆಯೇ ಸರಿ.
ಸಿದ್ಧಾಂತ ಶಿಖಾಮಣಿಯ ವಸ್ತು ನೂರೊಂದು ಸ್ಥಲದ ಪ್ರತಿಪಾದನೆ. ಲಿಂಗಾಯತವೆಂದಾಕ್ಷಣ ಷಟ್‌ಷ್ಥಲ ಕಣ್ಣು ಮುಂದೆ ನಿಲ್ಲುತ್ತದೆ. ವಚನಸಾಹಿತ್ಯದಲ್ಲಿ ಷಟ್‌ಷ್ಥಲ ವಿವೇಚನೆಗೆ ಪ್ರಾಧಾನ್ಯ, ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವರೆಂಬ ಪ್ರಮುಖರ ವಚನಗಳನ್ನು ಷಟ್‌ಷ್ಥಲ ಕ್ರಮದಲ್ಲಿ ಸಂಕಲಿಸಲಾಗಿದೆಯೇ ಹೊರತು ನೂರೊಂದು ಸ್ಥಲ ಕ್ರಮದಲ್ಲಿ ಅಲ್ಲ. ೧೩ನೆಯ ಶತಮಾನದ ಕೆರೆಯ ಪದ್ಮರಸನ ದೀಕ್ಷಾಬೋಧೆಯಲ್ಲಿ ಷಟ್‌ಷ್ಥಲ ವಿವೇಚನೆ ಇದೆಯೇ ಹೊರತು ಏಕೋತ್ತರಶತಸ್ಥಲದ ಪ್ರಸ್ತಾಪವು ಇಲ್ಲ. ಇದೇ ಕಾಲದ ನೀಲಕಂಠ ನಾಗನಾಥಾಚಾರನ ವೀರಮಾಹೇಶ್ವರಾಚಾರ ಸಂಗ್ರಹದಲ್ಲಿ ಷಟ್‌ಸ್ಥಲ ವಿಚಾರವಿದೆ, ಏಕೋತ್ತರಶತಸ್ಥಲ ವಿಚಾರವಿಲ್ಲ.
೧೫ನೆಯ ಶತಮಾನಕ್ಕೆ ಬರುತ್ತಲೇ ಷಟ್‌ಸ್ಥಲದ ಜೊತೆ ಜೊತೆಗೆ ಒಮ್ಮೆಲೆ ನೂರೊಂದು ಸ್ಥಲ ಪ್ರತಿಪಾದನೆಯ ದೊಡ್ಡ ಸುಗ್ಗಿಯೇ ತೆರೆದುಕೊಳ್ಳುತ್ತದೆ. ಒಬ್ಬರೇ ಎರಡೂ ಬಗೆಯ ಕೃತಿ ಸೃಷ್ಟಿಸಿದ್ದಾರೆ. ಉದಾ: ಮಗ್ಗೆಯ ಮಾಯಿದೇವ ಅಲ್ಲಮನ ವಚನಗಳನ್ನು ಷಟ್‌ಸ್ಥಲ ಕ್ರಮದಲ್ಲಿ ಜೋಡಿಸಿ 'ಪ್ರಭುಗೀತಾ' ಎಂಬ ಹೆಸರಿನಿಂದ ಸಂಸ್ಕೃತಕ್ಕೆ ಅನುವಾದಿಸಿರುವನಲ್ಲದೆ ಸಂಸ್ಕೃತ ಶಿವಾನುಭವ ಸೂತ್ರ ಕೃತಿಯಲ್ಲಿ ಷಟ್‌ಸ್ಥಲ ಸಿದ್ಧಾಂತವನ್ನು ವಿವರಿಸಿದ್ದಾನೆ. ಜೊತೆಗೆ ಷಟ್ಟದಿಯಲ್ಲಿ ನೂರೊಂದು ಸ್ಥಲ ಕುರಿತು “ಪದೈಕೋತ್ತರಶತಸ್ಥಲ” ಕೃತಿ ರಚಿಸಿದ್ದಾನೆ. ಮಹಾಲಿಂಗದೇವನು ಪ್ರಭುದೇವರ ವಚನಗಳನ್ನು ಷಟ್‌ಸ್ಥಲ ಕ್ರಮದಲ್ಲಿ ಜೋಡಿಸಿ, ಎಲ್ಲ ಶರಣರ ವಚನಗಳನ್ನು ಬಳಸಿ “ಏಕೋತ್ತರಶತಸ್ಥಲ ರೂಪಿಸಿದ್ದಾನೆ. ಹೀಗೆ ಕವಲೊಡೆದ ಏಕೋತ್ತರಶತಸ್ಥಲ ವಿಚಾರ ಅನೇಕ ವಿದ್ವಾಂಸರಿಂದ ಮುಂದುವರೆಯುತ್ತ ನಡೆದಿದೆ. ಏಕೋತ್ತರಶತಸ್ಥಲ ಸಿದ್ಧಾಂತವನ್ನು ವಸ್ತುವಾಗಿಟ್ಟುಕೊಂಡು ಜಕ್ಕಣಾರ ಸ್ವರವಚನ ಬಳಸಿ “ಸ್ವರ ಏಕೋತ್ತರಶತಸ್ಥಲವನ್ನು, ಸಂಸ್ಕೃತ ಶ್ಲೋಕಗಳನ್ನು ಬಳಸಿ 'ಏಕೋತ್ತರ
ಶತಸ್ಥಲೀ'ಯನ್ನು ರಚಿಸಿದ್ದಾನೆ. ಏಕೋತ್ತರ ಶತಸ್ಥಲಕ್ಕೆ ಒಬ್ಬ ಅನಾಮಧೇಯ 'ಏಕೋತ್ತರಶತಸ್ಥಲೀ' ಗೆ ಶ್ರೀ ಗಿರೀಂದ್ರನು ಕನ್ನಡ ಟೀಕೆ ಬರೆದಿದ್ದಾರೆ. ಹೀಗೆ ೧೫ನೆಯ ಶತಮಾನದಲ್ಲಿ ಷಟ್‌ಷ್ಥಲದ ಮಗ್ಗುಲಲ್ಲಿ ಏಕೋತ್ತರಶತಸ್ಥಲವನ್ನು ಸಮೃದ್ಧವಾಗಿ ಬೆಳೆಸುತ್ತಲಿರುವುದನ್ನು ಗಮನಿಸಬೇಕು.
ಭಾರತೀಯರಿಗೆ ೧೦೧ ಪವಿತ್ರ ಸಂಖ್ಯೆ. ಹೀಗಾಗಿ ಈ ಕೃತಿಯ ಸ್ಥಲಗಳನ್ನು ೧೦೧ಕ್ಕೆ ನಿಲ್ಲಿಸಿದುದು ಮೇಲುನೋಟಕ್ಕೆ ಕೃತಕವೆನಿಸುತ್ತದೆ. ಇದಲ್ಲದೆ ಗುಬ್ಬಿ ಮಲ್ಲಣ್ಣ ಬೇರೊಂದು ರೀತಿಯ ೧೦೧ ಸ್ಥಲ ಹೇಳಿದರೆ, ಮಹಾಲಿಂಗದೇವ ಪರಂಪರೆಯವರು ಹೇಳುವ ೧೦೧ ಸ್ಥಲ ಇನ್ನೊಂದು ರೀತಿಯದು. ಇಷ್ಟೇ ಏಕೆ ಕವಿಚರಿತೆ (ಸಂಪುಟ-೨)ಯಲ್ಲಿ -
“ಅಂಗಸ್ಥಲ” ೪೪ಕ್ಕೆ ವಿವರ :
(೧) ಭಕ್ತ ಸ್ಥಲ-೧೫ (೨) ಮಾಹೇಶ್ವರ ಸ್ಥಲ-೯ (೩) ಪ್ರಸಾದಿ ಸ್ಥಲ-೭ (೪) ಪ್ರಾಣಲಿಂಗಿ ಸ್ಥಲ-೫ (೫) ಶರಣಸ್ಥಲ-೪ (೬) ಐಕ್ಯಸ್ಥಲ-೪.
ಲಿಂಗ ಸ್ಥಲ-೫ ಕ್ಕೆ ವಿವರ :
(೧) ಆಚಾರ ಲಿಂಗಸ್ಥಲ-೯ (೨) ಗುರುಲಿಂಗ ಸ್ಥಲ-೯ (೩) ಶಿವಲಿಂಗಸ್ಥಲ- ೯(೪) ಜಂಗಮಲಿಂಗಸ್ಥಲ-೧೨ (೫) ಪ್ರಸಾದಿ ಲಿಂಗಸ್ಥಲ-೯ (೬) ಮಹಾಲಿಂಗಸ್ಥಲ-೯ ಎಂದು
ವೀರಶೈವಾಮೃತ ಮಹಾಪುರಾಣದಲ್ಲಿ (೧೫೩೦) ಜಂಗಮಲಿಂಗಸ್ಥಲ-೯ ಎಂದೂ ಅದರ ಕೊನೆಯ ಮೂರು ಸ್ಥಲಗಳನ್ನು ಮುಂದಣ ೬ನ್ನು ಸೇರಿಸಿ ಪ್ರಸಾದಿಲಿಂಗಸ್ಥಲ-೯ ಎಂದೂ, ಅದರ ಕೊನೆಯ ೩ ಸ್ಥಲಗಳನ್ನು ಮುಂದಕ್ಕೆ ಸೇರಿಸಿ ಮಹಾಲಿಂಗಸ್ಥಲ-೧೨ ಎಂದು ಹೇಳಿದೆ. ಗುರುರಾಜ ಚಾರಿತ್ರದಲ್ಲಿಯೂ (ಸು. ೧೬೫೦) ಹೀಗೆಯೇ ಇದೆ. ಈ ವ್ಯತ್ಯಾಸಕ್ಕೆ ಕಾರಣವೇನೋ ತಿಳಿಯಲಿಲ್ಲ ಎಂದು ಹೇಳಿದುದನ್ನು ನೋಡಿದರೆ ಪ್ರಾಚೀನ ಕವಿಗಳಲ್ಲಿಯೇ ಈ ಬಗ್ಗೆ ಒಮ್ಮತವಿಲ್ಲದುದು ಸ್ಪಷ್ಟವಾಗುತ್ತದೆ. ನರಸಿಂಹಾಚಾರರಿಗೆ ಇದು ಒಂದು ಸಮಸ್ಯೆಯಾಗಿ ಕಾಡಿದುದೂ ಸ್ಪಷ್ಟವಾಗುತ್ತದೆ.
ಈ ವಿಷಯವಾಗಿ ಆಗಮ ವಿದ್ವಾಂಸರೂ, ವೀರಶೈವ ಅಭ್ಯಾಸಿಗಳೂ ಆಗಿರುವ ಡಾ.ಶಿ.ಚೆ. ನಂದೀಮಠ ಅವರ ವಿಚಾರ ಹೀಗಿದೆ:
“ನೂರೊಂದು ಸ್ಥಲಗಳ ವಿಚಾರ ಹನ್ನೆರಡನೆಯ ಶತಮಾನದ ಅನಂತರ ಬೆಳೆದುದೆಂದು ಇಟ್ಟುಕೊಳ್ಳಬಹುದಾಗಿದೆ.”
ಇದಲ್ಲದೇ ಅಲ್ಲಲ್ಲಿ ಬರುವ ಕನ್ನಡ ಪದ ಉಪಾಧಿಮಾಟ, ನಿರುಪಾಧಿಮಾಟ, ಸಹಜಮಾಟ ಸ್ಥಲಗಳಿಗೆ ಪರ‍್ಯಾಯವಾಗಿ ಸಂಸ್ಕೃತ ಪರ ಉಪಾಧಿದಾನ ಸ್ಥಲ, ನಿರುಪಾಧಿ ದಾನ ಸ್ಥಲ, ಸಹಜ ದಾನ ಸ್ಥಲ ಹೆಸರುಗಳನ್ನು, ಕನ್ನಡಪದ ಕೊಂಡುದು ಪ್ರಸಾದ, ನಿಂದುದೋಗರ ಸ್ಥಲಗಳಿಗೆ, ಸಂಸ್ಕೃತ ಪರ ಸ್ವೀಕೃತ ಪ್ರಸಾದಿಸ್ಥಲ, ಶಿಷ್ಟೋಧನ ಸ್ಥಲ ಹೆಸರುಗಳು ಕೆಲವು ಪ್ರತಿಗಳಲ್ಲಿ ಸಿಗುತ್ತವೆ. ಈ ವ್ಯತ್ಯಾಸ ಒಟ್ಟು ಕೃತಿಯ ಬಗ್ಗೆ ಸಂದೇಹ ಹೆಚ್ಚುವಂತೆ ಮಾಡುತ್ತದೆ. ಇದೆಲ್ಲವನ್ನು ನೋಡಿಯೇ ಸಿ. ಪಿ. ಬ್ರೌನ್ ಅವರು ೧೮೪೦ರಲ್ಲಿ ತಮ್ಮ ಕೃತಿಯಲ್ಲಿ “ಸಂಸ್ಕೃತ ಶ್ಲೋಕಗಳಲ್ಲಿ ಬರೆಯಲ್ಪಟ್ಟ ಸಿದ್ದಾಂತ ಶಿಖಾಮಣಿ ಗ್ರಂಥವು ಪೌರಾಣಿಕ ಗ್ರಂಥವಾಗಿದ್ದು, ನಂಬಲರ್ಹವಾಗಿಲ್ಲ” ಎಂದು ಹೇಳಿದ್ದಾರೆ.
ಇದೆಲ್ಲವನ್ನು ನೋಡಿದರೆ ಅದರ ಸಿದ್ಧಾಂತ-ಸಾಹಿತ್ಯದ ಗುಣಮಟ್ಟವೇನೇ ಇರಲಿ, ಒಂದು ಕೃತಕ ಗ್ರಂಥವೆನ್ನಲು ಅವಶ್ಯವಿರುವ ಎಲ್ಲ ಲಕ್ಷಣಗಳೂ 'ಸಿದ್ಧಾಂತ ಶಿಖಾಮಣಿಗಿದೆ ಎನಿಸುತ್ತದೆ. ಹೀಗಾಗಿ ಮೇಲಿನ ಪ್ರಶ್ನೆಗಳು ಬಗೆಹರಿಯುವ ವರೆಗೆ ವಿದ್ವಾಂಸರು ಈ ಗ್ರಂಥದ ಬಗ್ಗೆ ಸಂದೇಹವಿಟ್ಟುಕೊಳ್ಳುವುದು ಲೇಸು.
ಗ್ರಂಥ ಋಣ: ಮಾರ್ಗ-೭, ಸಪ್ನಬುಕ್ ಹೌಸ್, ಬೆಂಗಳೂರು
ಲಿಂಗಾಯತ-ವೀರಶೈವ ಒಂದೇ ಅಲ್ಲ | ಲಿಂಗಾಯತ ಪುನರುಜ್ಜಿವನದ ಪಂಚಸೂತ್ರಗಳು |