Previous ಬಸವ ಧರ್ಮ /ಲಿಂಗಾಯತ ಧರ್ಮ ಧರ್ಮವೊಂದರ ಮೂಲ Next

ವಚನ ಸಾಹಿತ್ಯ ಬಿತ್ತಿ ಬಸವ ತತ್ವ ಬೆಳೆಯೋಣ (By Sowing Vachanas We Grow Lingayatism)

*

- ✍ ವಚನ ನಿರ್ವಚನ : ಸಚ್ಚಿದಾನಂದ ಚಟ್ನಳ್ಳಿ

ಹೊನ್ನ ನೇಗಿಲಲುತ್ತು ಎಕ್ಕೆಯ ಬೀಜವ ಬಿತ್ತುವರೆ
ಕರ್ಪುರದ ಮರನ ತರಿದು ಕಳ್ಳಿಗೆ ಬೇಲಿಯನಿಕ್ಕುವರೆ
ಶ್ರೀಗಂಧದ ಮರನ ತರಿದು ಬೇವಿಂಗೆ ಅಡೆಯನಿಕ್ಕುವರೆ
ನಮ್ಮ ಕೂಡಲಸಂಗನ ಶರಣರಿಗಲ್ಲದೆ ಬೇರೆ ಇಚ್ಛಾಭೋಜನವನಿಕ್ಕಿದಡೆ
ಕಿಚ್ಚಿನೊಳಗೆ ಉಚ್ಚೆಯ ಹೊಯಿದು ಹವಿಯ ಬೇಳ್ದಂತಾಯಿತ್ತು.

ಈ ವಚನದಲ್ಲಿ ಧರ್ಮಪಿತ ಗುರು ಬಸವಣ್ಣನವರು ವಿಶಿಷ್ಟವಾದ ಒಂದು ತತ್ತ್ವವನ್ನು ಹೇಳುತ್ತಿದ್ದಾರೆ. ಮರದ
ಅಥವಾ ಕಬ್ಬಿಣದ ನೇಗಿಲನ್ನು ಸಾಮಾನ್ಯವಾಗಿ ರೈತರು ಕೃಷಿಯಲ್ಲಿ ಬಳಸುತ್ತಾರೆ. ಇಂಥ ನೇಗಿಲನ್ನು ಉಪಯೋಗಿಸಿ ಜೀವನಾವಶ್ಯಕವಾದ ಬೀಜಗಳನ್ನು ಬಿತ್ತಿ ಬೆಳೆ ತೆಗೆಯುತ್ತಾರೆ. ಆದರೆ ಹೊನ್ನಿನ ನೇಗಿಲಿನಿಂದ ಉತ್ತು ಎಕ್ಕೆಯ ಬೀಜ ಬಿತ್ತಿದರೆ.....?! ಅಪಚಾರ, ಆತ್ಮವಂಚನೆ ಮಾಡಿಕೊಂಡಂತಾಗುತ್ತದೆ. ಎಕ್ಕೆಯ ಗಿಡದಿಂದ ಅಷ್ಟೊಂದು ಪ್ರಯೋಜನವಿಲ್ಲ ಬದಲಾಗಿ ಅದು ವಿಷಪೂರಿತವಾದ ಗಿಡ ಅದರ ರಸ ಮೈಮೇಲೆ ಬಿದ್ದರೆ ಹುಣ್ಣಾಗುತ್ತದೆ. ಅದು ಭೂಮಿಯ ಫಲವತ್ತತೆಯನ್ನು ಹಾಳು ಮಾಡುತ್ತದೆ.

ಅದೇ ರೀತಿ ಇಂದು ಅನೇಕರು, ಅದರಲ್ಲೂ ಹೆಚ್ಚಿನ ಮಠಾಧೀಶರು, ಸ್ವಾಮಿಗಳು ಎನ್ನುವವರು ಆಧ್ಯಾತ್ಮ ಕೃಷಿಕರಾಗಿ, ಸಮಾಜವೆಂಬ ಹೊಲದಲ್ಲಿ ಅನೇಕ ಅನಿಷ್ಟಗಳೆಂಬ ಕಳೆಯನ್ನು ತೆಗೆದು, ಶೋಷಣೆಮುಕ್ತ ಸಮಾನತೆಯ ಧರ್ಮವಂತ ಸಮಾಜವನ್ನು ನಿರ್ಮಾಣ ಮಾಡಬೇಕಿತ್ತು. ಆದರೆ ಅವರು ಗುರು ಬಸವಣ್ಣನವರು ಎನ್ನುವ ಹೊನ್ನ ನೇಗಿಲನ್ನು ಉಪಯೋಗಿಸಿ, ವಚನಗಳು ಹಾಗೂ ಅವರ ತತ್ವಗಳು ಎನ್ನುವ ಮನುಕುಲಾವಶ್ಯಕ ಬೀಜಗಳನ್ನು ಬಿತ್ತದೆ, ಜಾತೀಯತೆ, ಮೂಢನಂಬಿಕೆ, ಆಕ್ರಮಣಕಾರಿ ಮನೋಭಾವನೆಗಳಂತಹ ಸಮಾಜಕ್ಕೆ ಕಂಟಕ ಪ್ರಾಯವಾದ ಎಕ್ಕೆಯ ಬೀಜಗಳನ್ನು ಬಿತ್ತುತ್ತಿದ್ದಾರೆ. ಸಮಾಜವನ್ನು ಒಡೆದು ಛಿದ್ರ ಛಿದ್ರ ಮಾಡುತ್ತಿದ್ದಾರೆ. ಮೇಲೆ ನೋಡಲಿಕ್ಕೆ ಬಸವ ತತ್ತ್ವ ಬೋಧಿಸುತ್ತಿದ್ದೇವೆ ಎನ್ನುತ್ತಾರೆ. ಇದೆಲ್ಲವನ್ನೂ ಅವರು ಗುರುಬಸವಣ್ಣನವರು ಎನ್ನುವ ಹೊನ್ನ ನೇಗಿಲನ್ನು ಹಿಡಿದುಕೊಂಡು ಮಾಡುತ್ತಿರುವುದು ಅತ್ಯಂತ ವಿಪರ್ಯಾಸದ ದುಃಖಕರ ಸಂಗತಿ.

ಇಂದು ಅನೇಕ ಮಠಗಳು ಬಸವಾದಿ ಪ್ರಮಥರ ಮೂಲ ಸಿದ್ಧಾಂತಗಳನ್ನು ಕಳೆದುಕೊಂಡು ಜಂಗಮ ತತ್ತ್ವದಿಂದ ದೂರ ಸರಿದು ದೇವಸ್ಥಾನಗಳಿಗಿಂತ ಹೆಚ್ಚು ಸ್ಥಾವರಗೊಂಡಿವೆ. ಇಂದು ಯಾವ ಮಠಗಳು ಗುರುಬಸವಣ್ಣನವರೆಂಬ ಹೊನ್ನಿನ ನೇಗಿಲಿನಿಂದ ಗುರು ಬಸವಣ್ಣನವರು ಕಲಿಸಿದ ವೈಚಾರಿಕ ಭಕ್ತಿಯ ಬೀಜಗಳನ್ನು ಬಿತ್ತಿ, ಜ್ಞಾ ನದ ಸಸಿಗಳನ್ನು ಬೆಳೆಸಬೇಕಿತ್ತೋ ಅಂತಹ ಮಠಗಳೇ ಇಂದು ಮೌಢ್ಯತೆಯ ಬೀಜಗಳನ್ನು ಬಿತ್ತಿ ಜನರಲ್ಲಿ ಇರುವ ಆತ್ಮ ವಿಶ್ವಾಸವನ್ನು ಅ ಜ್ಞಾ ನದ ವಿಷದಿಂದ ಬತ್ತುವಂತೆ ಮಾಡಿದ್ದಾರೆ. ಅನೇಕ ಮಠಗಳಲ್ಲಿ ಗುರುಬಸವಣ್ಣನವರ ತತ್ತ್ವಕ್ಕೆ ವಿರುದ್ದವಾದ ಕಾರ್ಯಗಳೇ ನಡೆಯುತ್ತಿವೆ. ಇವರಲ್ಲಿ ಸಮಾಜವನ್ನು ತಿದ್ದುವ ಕಳಕಳಿಯೇ ಬತ್ತಿಹೋಗಿದೆ. ತಮ್ಮ ಸ್ವಾರ್ಥಕ್ಕಾಗಿ ತಮ್ಮ ಮಠದ ಆಸ್ತಿಯನ್ನು ಬೆಳೆಸಲಿಕ್ಕೆ, ಒಣ ಪ್ರತಿಷ್ಠೆಯನ್ನು ಬೆಳೆಸಲಿಕ್ಕೆ ಈ ಬಸವ ತತ್ತ್ವದ ಹೊನ್ನಿನ ನೇಗಿಲನ್ನು ಬಳಸುತ್ತಿದ್ದಾರೆ.

ಇಂದು ಮನುಕುಲ ಎದುರಿಸುತ್ತಿರುವ ಬಹುದೊಡ್ಡ ಆತಂಕವೆಂದರೆ : 1. ಸುಜ್ಞಾನದ ಕೊರತೆ, 2. ಜ್ಞಾನವಿದ್ದೂ ಮಾಡಿಕೊಳ್ಳುತ್ತಿರುವ ಆತ್ಮವಂಚನೆ. ಅ ಜ್ಞಾನದ ಕೊರತೆಯಿಂದ ಆಗುವ ಅಪಾಯಕ್ಕಿಂತ ಜ್ಞಾನವಿದ್ದೂ ಮಾಡಿಕೊಳ್ಳುವ ಆತ್ಮ ವಂಚನೆ ಅಪಾಯಕಾರಿಯಾದುದು. ಸಮಾಜಕ್ಕೂ ಆಘಾತಕಾರಿಯಾದುದು. ಕುವೆಂಪುರವರ ಮಾತು ಕೇಳಿ ``ನಮ್ಮ ಸಮಾಜ ಗುರುಬಸವಣ್ಣನವರ ತತ್ತ್ವಗಳನ್ನು ಅಂದಿನಿಂದಲೇ ಆಚರಿಸಿದ್ದರೆ ಈ ದೇಶಕ್ಕೆ ಮುಸ್ಲೀಮರು ಬರುತ್ತಿರಲಿಲ್ಲ, ಬ್ರಿಟಿಷರು ಬರುತ್ತಿರಲಿಲ್ಲ. ಭವ್ಯವಾದ ಭಾರತ ದೇಶ ನಿರ್ಮಾಣವಾಗುತ್ತಿತ್ತು" ಎನ್ನುತ್ತಾರೆ.

ಇಂದು ಪಂಜಾಬ್ ಎಂದರೆ ಗುರುನಾನಕರು ಮತ್ತು ಸಿಖ್ಖ್ ಎನ್ನುವ ಪದಗಳು ನೆನಪಾಗುವಂತೆ, ಕನ್ನಡ, ಕರ್ನಾಟಕ ಎಂದರೆ, ಗುರು ಬಸವಣ್ಣನವರು ಮತ್ತು ಲಿಂಗಾಯತ ಎನ್ನುವ ಪದಗಳು ನೆನಪಾಗುವಂತೆ ಆಗಬೇಕಿತ್ತು. ಅಂದಿನಿಂದ ಇಂದಿನವರೆಗೆ ಇಲ್ಲಿ ಸಾವಿರಾರು ಮಠಾಧೀಶರು ಆಗಿ ಹೋದರೂ. ಸಿಖ್ಖ ಧರ್ಮದ 10 ಗುರುಗಳು ಮಾಡಿದಷ್ಟು ಕಾರ್ಯ ಇವರು ಮಾಡಲಿಲ್ಲ. ಅಲ್ಲಿ ಅವರು ಧರ್ಮ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಕೊಟ್ಟರೆ, ಇಲ್ಲಿ ಇವರು ಸ್ವಾರ್ಥಕ್ಕಾಗಿ ಇನ್ನೊಬ್ಬರ ಪ್ರಾಣ ತೆಗೆಯುವಂಥ ನೀಚ ಕಾರ್ಯಗಳನ್ನು ಮಾಡುತ್ತಾರೆ. ಎಷ್ಟೊಂದು ದುರ್ದೈವದ ಸಂಗತಿ ಇದು.

ಸ್ವಾರ್ಥ ಪರಂಪರೆಯ ಮಠಾಧೀಶರಿಂದ ಪುರೋಹಿತಶಾಹಿಗಳಿಂದ ಪಂಚಪೀಡಾಧೀಶರಿಂದ, ಲಿಂಗಾಯತ ಧರ್ಮವು ಮೂಲೆಗುಂಪಾಯಿತು. ಗುರುಬಸವಣ್ಣನವರು ಎನ್ನುವ ಹೊನ್ನ ನೇಗಿಲನ್ನು ಹಿಡಿದುಕೊಂಡು ಲಿಂಗಾಯತ ಧರ್ಮ ಎನ್ನುವ ಜನ ಬದುಕುವ ಜಗ ಬದುಕುವ ಬೀಜಗಳನ್ನು ಬಿತ್ತಬೇಕಿತ್ತು. ಆದರೆ ವೀರಶೈವ ಎನ್ನುವ ವಿಷಬೀಜವನ್ನು ಬಿತ್ತಿದರು. ಎಂಥಾ ವಿಪರ್ಯಾಸ! ಕಳೆ ಯಾವುದು, ಬೆಳೆ ಯಾವುದು ಎಂದು ಗುರುತಿಸಲಾರದಷ್ಟು ಮೂಢರಾಗಿದ್ದಾರೆಯೇ ಈ ಸ್ವಾರ್ಥ ಪರಂಪರೆಯ ಮಠಾಧೀಶರು? ಇವರಲ್ಲಿ ಜ್ಞಾನವಿದ್ದೂ ಆತ್ಮ ವಂಚನೆ ಮಾಡಿಕೊಂಡವರೇ ಹೆಚ್ಚು. ಎಷ್ಟೊಂದು ಉದಾತ್ತವಾದ, ಶ್ರೇಷ್ಠವಾದ ತತ್ತ್ವವನ್ನು ಗುರುಬಸವಣ್ಣನವರು ಕೊಟ್ಟಿದ್ದಾರೆ. ಜಾತೀಯತೆಯನ್ನು ಬೇರು ಸಹಿತ ಕಿತ್ತು ಹಾಕಿ ಸಮಾನತೆಗಾಗಿ ತಮ್ಮ ಅಧಿಕಾರ, ಸ್ವಹಿತಾಸಕ್ತಿ ಎಲ್ಲವನ್ನೂ ಬದಿಗೊತ್ತಿದ ಗುರುಬಸವಣ್ಣನವರ ತತ್ತ್ವಗಳನ್ನು ಹಿಡಿದುಕೊಂಡೇ ಅಧಿಕಾರಕ್ಕಾಗಿ, ಸ್ವಾರ್ಥಕ್ಕಾಗಿ ಕಚ್ಚಾಡುತ್ತಾ, ಲಿಂಗಾಯತರಲ್ಲೇ ಇರುವ ಅನೇಕ ಒಳ ಪಂಡಗಳನ್ನು ಪೋಷಿಸುತ್ತಾ, ಅವುಗಳ ಮಧ್ಯೆ ಅಡ್ಡಗೋಡೆಯನ್ನು ನಿರ್ಮಾಣ ಮಾಡುತ್ತಿರುವ ಮಠಾಧೀಶರನ್ನು ನೋಡಿ ಕೆಲವೊಮ್ಮೆ ನೋವಾಗುತ್ತದೆ. ಮತ್ತೆ ಕೆಲವೊಮ್ಮೆ ರೋಷ ಉಕ್ಕಿ ಬರುತ್ತದೆ.

ಕರ್ಪೂರದ ಮರವನ್ನು ಕಡಿದು ಕಳ್ಳಿಗೆ ಬೇಲಿಯನಿಕ್ಕುವರೆ?

ಹಿಂದಿನ ಕಾಲದಲ್ಲಿ ಕರ್ಪೂರವನ್ನು ಒಂದು ಬಗೆಯ ಮರದ ರಸದಿಂದ ಮಾಡುತ್ತಿದ್ದರು. ಪೂಜೆಗಾಗಿ ಮತ್ತು ಸುವಾಸನೆ ಬೀರುವುದಕ್ಕಾಗಿ ಕರ್ಪೂರವನ್ನು ಉಪಯೋಗಿಸುತ್ತಾರೆ. ಅದಕ್ಕಾಗಿ ಇಂಥ ಮರಗಳನ್ನು ಉಳಿಸುವುದು ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ. ಆದರೆ ಇಂಥ ಶ್ರೇಷ್ಠ ಮರವನ್ನು ಕಡಿದು ಹೆಚ್ಚು ಪ್ರಯೋಜನಕಾರಿಯಲ್ಲದ ಮಾತ್ರವಲ್ಲ ವಿಷಪೂರಿತವಾದ ಕಳ್ಳಿಯ ಗಿಡಗಳನ್ನು ಪೆÇೀಷಿಸಲು ಅವುಗಳ ಪೆÇೀಷಣೆಗೆ ಬೇಲಿ ಹಾಕಲಿಕ್ಕೆ ಉಪಯೋಗಿಸಿದರೆ ಬಹು ದೊಡ್ಡ ತಪ್ಪಾಗುತ್ತದೆ. ಅದೇ ರೀತಿ ವಚನ ಸಾಹಿತ್ಯವೆಂಬ ಕರ್ಪೂರದ ಮರವನ್ನು ತುಂಡು ಮಾಡಿ ಪುನಃ ಜಾತೀಯತೆ ಮೂಢನಂಬಿಕೆ, ಬಹುದೇವತೋಪಾಸನೆ, ಹೋಮ-ಹವನಗಳೆಂಬ ವಿಷದ ವೃಕ್ಷಗಳನ್ನು ಬೆಳೆಸಲಿಕ್ಕೆ ಅನೇಕರು ಪ್ರಯತ್ನಿಸಿದರು. ಇಂದು ಕೂಡ ಬೆಳೆಸುತ್ತಲೇ ಇದ್ದಾರೆ. ಆದರೆ ನಮ್ಮ ಸುದೈವ ಹಾಗೂ ಶರಣರ ತ್ಯಾಗ ಬಲಿದಾನ ಮತ್ತು ತನ್ನ ಸ್ವಯಂ ಅಂತಃಸತ್ವದಿಂದಾಗಿ ವಚನ ಸಾಹಿತ್ಯ ಉಳಿಯಿತು. ಇಂಥ ವಚನ ಸಾಹಿತ್ಯದ ಕರ್ಪೂರದ ಮರವನ್ನು ಇಟ್ಟುಕೊಂಡಿರುವ ಮಠಗಳು, ಗುರುಬಸವಣ್ಣನವರ ಹೆಸರಿನಲ್ಲಿ ಇರುವ ಸಂಘಟನೆಗಳು ವಚನ ಸಾಹಿತ್ಯದ ಅಂತರಂಗದಲ್ಲಿ ಅಡಗಿರುವ ಸು ಜ್ಞಾನದ ಪರಿಮಳವನ್ನು ಜನತೆಗೆ ಕೊಟ್ಟು ಪ್ರೌಢವಾದ, ಧರ್ಮವಂತರಾದ, ಅರಿವುಳ್ಳ ಜನಾಂಗವನ್ನು ನಿರ್ಮಾಣ ಮಾಡಬೇಕಿತ್ತು. ಆದರೆ ಸ್ವಾರ್ಥಿಗಳು, ದುಷ್ಟ ರಾಜಕಾರಣಿಗಳು, ಅಧರ್ಮಿಯರು, ಅನೀತಿವಂತರು ಎನ್ನುವ ಕಳ್ಳಿಯ ಗಿಡಗಳನ್ನು ಪೆÇೀಷಿಸುತ್ತಿದ್ದಾರೆ.

ವಚನ ಸಾಹಿತ್ಯದ ಹೆಸರು ಹೇಳಿಕೊಂಡು ಇದರ ಆಶ್ರಯದಲ್ಲಿ ಅಂತಃ ಸತ್ವವೇ ಇಲ್ಲದ, ಆತ್ಮ ಬಲವೇ ಇಲ್ಲದ ಸು ಜ್ಞಾನದ ಬೆಳಕನ್ನು ಕೊಡದ, ಜಾತೀಯತೆಯನ್ನು ಹರಡುವ ಮೂಢನಂಬಿಕೆಯನ್ನು ಬೆಳೆಸುವ ವೀರಶೈವ ಎನ್ನುವ ನಿಷ್ಪ್ರಯೋಜಕವಾದ ಕಳ್ಳಿಗೆ ವಚನ ಸಾಹಿತ್ಯದ ಆಶ್ರಯದಲ್ಲಿ ಪೋಷಣೆ ನೀಡುತ್ತಿರುವುದು ಎಷ್ಟೊಂದು ಅಜ್ಞಾನವಲ್ಲವೇ? ಈ ರೀತಿ ಮಾಡುತ್ತಿರುವ ಇವರು ಅ ಜ್ಞಾನಿಗಳೋ ಅಥವಾ ಅಜ್ಞಾನಿಗಳಂತೆ ವರ್ತಿಸುತ್ತಿದ್ದಾರೋ? ತಿಳಿಯದಾಗಿದೆ.

*

ಶ್ರೀಗಂಧದ ಮರವನ್ನು ಕಡಿದು ಬೇವಿಂಗೆ ಅಡೆಯನಿಕ್ಕುವರೇ?

ಶ್ರೀಗಂಧದ ಮರಕ್ಕೆ ಇರುವ ಬೆಲೆಯೆಲ್ಲಿ? ಬೇವಿಗಿರುವ ಬೆಲೆಯೆಲ್ಲಿ? ಸುವಾಸನೆಯನ್ನು ಬೀರುವ ತನ್ನ ಸಂಪರ್ಕಕ್ಕೆ ಬಂದ ಇತರ ಮರಗಳಿಗೂ ಸುವಾಸನೆಯನ್ನು ನೀಡುವ, ಶ್ರೀಗಂಧದ ಮರವನ್ನು ಕಡಿದು ಹಾಕಿ ಬೇವಿನ ಮರದ ತುಂಡುಗಳಿಗೆ ಅಡೆಯನ್ನಾಗಿ ಇಡುವುದೆ? ಸಲ್ಲದು. ಸು ಜ್ಞಾನದ ಪರಿಮಳವನ್ನು ನೀಡುವ ತನ್ನ ಸಂಪರ್ಕಕ್ಕೆ ಬಂದವರನ್ನು ಇವನಾರು ಇವನಾರು ಎನ್ನದೇ ಎಲ್ಲರನ್ನು ಇಂಬಿಟ್ಟುಕೊಂಡು ಪಾವನರನ್ನಾಗಿ ಮಾಡಿದ ಗುರುಬಸವಣ್ಣನವರು ಎನ್ನುವ ಶ್ರೀಗಂಧದ ಮರವನ್ನು ಬಳಸಿ ತಮ್ಮ ಮಠ ಪರಂಪರೆಯ ಗುರುಗಳ ಹುಟ್ಟು ಹಬ್ಬಗಳು ಎನ್ನುವ ಬೇವಿನ ತುಂಡುಗಳ ಕೆಳಗೆ ಅಡೆಯಾಗಿ ಇಡುವುದೇ? ಸಲ್ಲದು. ಆದರೆ ಇಂದು ನಡೆಯುತ್ತಿರುವುದೇ ಹೀಗೆ. ಗುರುಬಸವಣ್ಣನವರನ್ನು ಕುದುರೆಯಾಗಿ ಮಾಡಿ ತಾವು ಮೇಲೆ ಕುಳಿತು ಮೆರೆಯುವವರೇ ಹೆಚ್ಚು. ತಾವು ಕುದುರೆಯಾಗಿ ಗುರುಬಸವಣ್ಣನವರನ್ನು ಮೆರೆಸುವವರು ವಿರಳ. ಇದೆಲ್ಲವನ್ನು ನೋಡಿ ನೋಡಿ ತಾಳಲಾರದೆ ತಾವು ಬಿತ್ತಿ ಬೆಳೆದ ಈ ಶ್ರೇಷ್ಠ ತತ್ತ್ವವು ನಾಶವಾಗಬಾರದೆಂದು ತಿಳಿದು ಗುರುಬಸವಣ್ಣನವರು ತಮ್ಮ ಕಾರುಣ್ಯದ ಕಿರಣಗಳನ್ನು ಈ ತತ್ತ್ವದ ಪುನರುತ್ಥಾನಕ್ಕಾಗಿ ಇಬ್ಬರು ಮಹಾನ್ ವ್ಯಕ್ತಿಗಳನ್ನು ಆಯ್ದುಕೊಂಡರು. ಅವರೇ ಧರ್ಮ ಕ್ರಾಂತಿಯ ಧೀರಯೋಗಿ ಪ್ರವಚನ ಪಿತಾಮಹ ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿಯವರು ಮತ್ತು ಭಾರಿ ಅಬ್ಬರ ಹೊತ್ತು ಆರೂಢ ಭಿಕ್ಷೆಯನ್ನು ಬೇಡುತ್ತಿರುವ ಮಹಾಮಾತೆ ಜಗದ್ಗುರು ಮಾತೆ ಮಹಾದೇವಿ ತಾಯಿಯವರು.

ಬಸವ ಭಕ್ತಿಯ ಬೀಜ| ಬಸವ ಮುಕ್ತಿಯ ತೇಜ|
ಬಸವ ಕಾಯಕದ ಗುರು ಬೀಜ| ಹೊಸಮತಕೆ
ಬಸವ ಓಂಕಾರ ಶಿವನಾಮ||

ಎನ್ನುವ ಜಾನಪದರ ನುಡಿಯಂತೆ ಬಸವ ಭಕ್ತಿಯ ಬೀಜ, ಬಸವ ತತ್ತ್ವದ ಬೀಜವನ್ನು ಬಿತ್ತಿದರು. ಪ್ರವಚನದ ಮಳೆ ಸುರಿಸಿದರು. ಗುರುಬಸವಣ್ಣನವರು ಹೊಸ ಧರ್ಮ ಲಿಂಗಾಯತ ಧರ್ಮ ಕೊಟ್ಟಿದ್ದಾರೆ ಎಂದು ಸಾರಿ ಸಾರಿ ಹೇಳಿದ್ದಾರೆ. ಅದರಲ್ಲಿ ಮಾತೆಯವರು ವೀರಾವೇಶದಿಂದ ವೀರಶೈವ ಎನ್ನುವ ಎಕ್ಕೆಯ ಗಿಡಗಳನ್ನು ಕಿತ್ತುಹಾಕಿ, ಗುರುಬಸವಣ್ಣನವರು ಎನ್ನುವ ಹೊನ್ನ ನೇಗಿಲನ್ನು ಹಿಡಿದುಕೊಂಡು ಲಿಂಗಾಯತ ಧರ್ಮವೆಂಬ ಬೀಜವನ್ನು ಬಿತ್ತಿದರು.

ಇಂದು ಪ್ರಜ್ಞಾವಂತ ಲಿಂಗಾಯತ, ಬಸವ ಭಕ್ತ ಜನಾಂಗದ ನಿರ್ಮಾಣ ಮಾಡಿದ್ದಾರೆ. ಇನ್ನು ಮುಂದೆ ವೀರಶೈವ ಎನ್ನುವ ಎಕ್ಕೆಯ ಗಿಡಕ್ಕೆ ಸ್ಥಳವಿಲ್ಲ. ಆದರೂ ಪದೇ ಪದೇ ಇನ್ನೂ ಕೆಲವರು ವೀರಶೈವ ಎನ್ನುವ ಎಕ್ಕೆಯ ಗಿಡಗಳನ್ನು ಬೆಳೆಸಲು ಪ್ರಯತ್ನಿಸುತ್ತಲೇ ಇದ್ದಾರೆ. ಇಂಥ ಕಳೆಯನ್ನು ಕಿತ್ತು ಹಾಕಿ ಲಿಂಗಾಯತ ಧರ್ಮದ ಬೆಳೆಯನ್ನು ಬೆಳೆಸುವುದರಲ್ಲಿಯೇ ನಮ್ಮ ಅಪ್ಪಾಜಿಯವರ ಜೀವನ ಶ್ರೀಗಂಧದಂತೆ ಸವೆದು ಹೋಯಿತು. ಇದರಲ್ಲೇ ಅರಿವಿನ ಮೂರ್ತಿ ನಮ್ಮ ಮಾತಾಜಿಯವರಿಗೆ 69 ವರ್ಷಗಳಾದವು ಇನ್ನೂ ಎಷ್ಟು ವರ್ಷ ಇವರೇ ಮಾಡಬೇಕು.....? ಇದರಲ್ಲಿ ನಮ್ಮದೇನು ಪರಿಶ್ರಮ ಬೇಡವೇ? ಅದಕ್ಕಾಗಿ ಬನ್ನಿ ನಾವು ನಮ್ಮ ಮನದಲ್ಲಿರುವ ಸೂಕ್ಷ್ಮವಾದ ಅಹಂಕಾರವನ್ನು ಬಿಟ್ಟು ರಾಷ್ಟ್ರೀಯ ಬಸವ ದಳಗಳನ್ನು ಸಂಘಟನೆ ಮಾಡೋಣ. ಇದರಿಂದ ಲಿಂಗಾಯತ ಧರ್ಮವನ್ನು ಬೆಳೆಸೋಣ.

ಸಾವಿರಾರು ಮಠಾಧೀಶರು 800 ವರ್ಷಗಳ ಕಾಲ ಮಾಡಲಿಕ್ಕೆ ಸಾಧ್ಯವಾಗದಂತಹ, ಸಿಖ್ಖ್ ಧರ್ಮದ 10 ಗುರುಗಳು 400 ವರ್ಷಗಳಲ್ಲಿ ಮಾಡಿದಂತಹ ಸಾಧನೆಯನ್ನು ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿ ಮತ್ತು ಪೂಜ್ಯ ಶ್ರೀ ಮಾತೆ ಮಹಾದೇವಿಯವರು ಕೇವಲ 40 ವರ್ಷಗಳಲ್ಲಿ ಮಾಡಿದ್ದಾರೆ. ಅಪ್ಪಾಜಿ ಮತ್ತು ಮಾತಾಜಿಯವರು ವಚನ ಸಾಹಿತ್ಯ ಎನ್ನುವ ಶ್ರೀಗಂಧವನ್ನು ತಮ್ಮ ತಾತ್ವಿಕ ಜ್ಞಾನದ ಕಲ್ಲಿನ ಮೇಲೆ ತೇಯ್ದು ಶುದ್ಧ ಬಸವ ತತ್ತ್ವದ ಶ್ರೀಗಂಧವನ್ನು ಕನ್ನಡ ಜನತೆಗೆ ಮಾತ್ರವಲ್ಲದೆ ಇಡೀ ಜಗತ್ತಿಗೇ ನೀಡಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳದೇ ಇರುವ ದುರ್ದೈವಿಗಳು ರವಿಯನ್ನು ಕಂಡು ಗೂಗೆ ಮತ್ಸರಿಸುವಂತೆ, ಚಂದ್ರನನ್ನು ಕಂಡು ಕಾಗೆ ಮತ್ಸರಿಸುವಂತೆ, ಮಾತೆಯವರನ್ನು ಕಂಡು ಮತ್ಸರಿಸುತ್ತಾರೆ. ಆದರೆ ಲೋಕ ಬೆಳಗುವ ಕಾರ್ಯ ಮಾತಾಜಿ ಮಾಡುತ್ತಲೇ ಸಾಗುತ್ತಾರೆ. ನಾವು ವಚನ ಸಾಹಿತ್ಯ ಎನ್ನುವ ಹೊನ್ನ ನೇಗಿಲನ್ನು ಹಿಡಿದುಕೊಂಡು ನಮ್ಮ ಕೈಲಾದಷ್ಟು ಲಿಂಗಾಯತಧರ್ಮದ ಬೆಳೆಯನ್ನು ಬೆಳೆಸೋಣ.
ಶರಣು ಶರಣಾರ್ಥಿ

ಪರಿವಿಡಿ (index)
*
Previous ಬಸವ ಧರ್ಮ /ಲಿಂಗಾಯತ ಧರ್ಮ ಧರ್ಮವೊಂದರ ಮೂಲ Next