Previous ಪಂಚಪೀಠಗಳು ಸ್ಥಾಪನೆಯಾದದ್ದು ಯಾವಾಗ? ಪಂಚಾಚಾರ್ಯರು ಶಿಲಾಲಿಂಗೋದ್ಭವರೆ? Next

ಪಂಚಾಚಾರ್ಯರು ಅವತಾರ ಪುರುಷರೇ?

*

✍ ಡಾ. ಎಸ್‌. ಎಂ. ಜಾಮದಾರ (ನಿವೃತ್ತ ಐಎಎಸ್ ಅಧಿಕಾರಿಗಳು)

ಪಂಚಾಚಾರ್ಯರು ಅವತಾರ ಪುರುಷರೇ?

“ಅವತಾರ' ಎನ್ನುವುದು ಸಂಸ್ಕೃತ ಶಬ್ದ. ಅಕ್ಷರಶಃ ಅದರ ಅರ್ಥ 'ಕೆಳಕ್ಕೆ ಇಳಿಯುವುದು. ಕೆಳಕ್ಕೆ ಎಂದರೆ ಎಲ್ಲಿಂದ? ಮೇಲಿನಿಂದ ಎಂದು ಬೇರೆ ಹೇಳಬೇಕಾಗಿಲ್ಲ. ಮೇಲೆ ಎಂದರೇನು? ಹಿಂದೂ ನಂಬಿಕೆಯ ಪ್ರಕಾರ ದೇವಲೋಕದಿಂದ ಭೂಲೋಕಕ್ಕೆ, ಹಿಂದೂಗಳು ಹೇಳುವಂತೆ ಇನ್ನೂ ಆರು ಲೋಕಗಳಿವೆ (ಜಗತ್ತುಗಳು): ಭುವರ್ಲೋಕ, ಸ್ವರ್ಗಲೋಕ, ಮಹರ್ಲೋಕ, ಜನಲೋಕ, ತಪೋಲೋಕ ಮತ್ತು ಸತ್ಯಲೋಕ.

ಸ್ವರ್ಗ ಮತ್ತು ನರಕಗಳ ಅಸ್ತಿತ್ವವನ್ನು ಕ್ರೈಸ್ತರು ಮತ್ತು ಮುಸ್ಲಿಮರೂ ಸಹ ನಂಬುತ್ತಾರೆ. ಆದರೆ ಅವರಿಗಿರುವುದು ಒಂದೇ ಒಂದು ಸ್ವರ್ಗ (ಪವಿತ್ರ ಬೈಬಲ್ ಮತ್ತು ಪವಿತ್ರ ಖುರಾನ್) ಬೌದ್ಧ ಚೀನೀಯರಿಗೆ ಎರಡು ಸ್ವರ್ಗಗಳಿವೆ: ಪೂರ್ವ ಸ್ವರ್ಗ ಮತ್ತು ಪಶ್ಚಿಮಸ್ವರ್ಗ. ಪೂರ್ವಸ್ವರ್ಗವು ಇತರರಿಗೆ ಇದ್ದರೆ, ಪಶ್ಚಿಮ ಸ್ವರ್ಗವು ಶ್ರೇಷ್ಠರಾದ ಬೌದ್ದಧರ್ಮೀಯರಿಗೆ ಮೀಸಲು. ಶ್ರೇಷ್ಠಸ್ವರ್ಗಕ್ಕೆ ಹೋಗಬೇಕಾದರೆ ವ್ಯಕ್ತಿ ಹೆಚ್ಚು ಪುಣ್ಯ ಗಳಿಸಿರಬೇಕು.

ಪ್ರಾಚೀನ ಗ್ರೀಕರು, ಮೆಸಪೊಟೇನಿಯನ್ನರು ಮತ್ತು ಈಜಿಪ್ಟಿನವರೂ ಸಹ ಮೇಲೆ ಸ್ವರ್ಗವಿರುವುದೆಂದೂ, ಕೆಳಗೆ ನರಕವಿರುವುದೆಂದೂ ನಂಬಿದ್ದರು (ಆಗ್ಟನ್, ೨೦೦೭; ಕ್ರೇಮರ್, ೧೯೬೪; ವಲ್ಲಿಯಸ್ ಅಮೆಜಾನ್ ಬುಕ್ಸ್)

೧. ಹಿಂದೂ ಸ್ವರ್ಗವನ್ನು ಸ್ವರ್ಗಲೋಕ ಎಂದು ಕರೆಯಲಾಗಿದೆ. ಅದು ಅತ್ಯಂತ ವಿಶಿಷ್ಟವಾದುದು. ಅದಕ್ಕೆ ಮೂರು ವಿಭಾಗಗಳಿವೆ: ಶಿವನ ಅನುಯಾಯಿಗಳಿಗೆ 'ಕೈಲಾಸ'; ವಿಷ್ಣುವಿನ ಅನುಯಾಯಿಗಳಿಗೆ 'ವೈಕುಂಠ' ಮತ್ತು ದೇವತೆಗಳ ದೇವರಾದ ಇಂದ್ರನ 'ಸ್ವರ್ಗ', ಅದಕ್ಕೆ ಅಮರಾವತಿ ಅಥವಾ ಇಂದ್ರವನ ಅಥವಾ ಅಲಕಾಪುರಿ ಎಂದು ಕರೆಯಲಾಗುತ್ತದೆ.

೨. ಹಿಂದೂ ಧರ್ಮ, ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳಿಗೆ ಸ್ವರ್ಗವು ದೇವತೆಗಳ ಲೋಕ (ದೇವಲೋಕ). ಅಲ್ಲಿ ದೇವರು ಅಥವಾ ದೇವರುಗಳು ವಾಸಿಸುತ್ತಾರೆ ಎಂದು ಈ ಎಲ್ಲ ಧರ್ಮಗಳೂ ನಂಬುತ್ತವೆ.

೩. ಈ ಮೂರು ಧರ್ಮಗಳಲ್ಲಿರುವ ಇನ್ನೊಂದು ಸಾಮಾನ್ಯ ನಂಬಿಕೆ ಎಂದರೆ ವ್ಯಕ್ತಿ ಸತ್ತಮೇಲೆ, ಆತ ಸದ್ಗುಣಿಯಾಗಿದ್ದರೆ ಮಾತ್ರ ಸ್ವರ್ಗಕ್ಕೆ ಹೋಗುತ್ತಾನೆ ಮತ್ತು ದುರ್ಗುಣಿಯಾಗಿದ್ದರೆ ನರಕಕ್ಕೆ ಹೋಗಿ ಅವನ ಪಾಪಗಳಿಗೆ ಅನುಗುಣವಾದ ಶಿಕ್ಷೆ ಅನುಭವಿಸಬೇಕಾಗುತ್ತದೆ ಎನ್ನುವುದು.

೪. ಮೂರನೆಯ ನಂಬಿಕೆ ಎಂದರೆ, ಸ್ವರ್ಗಕ್ಕೆ ಹೋದ ವ್ಯಕ್ತಿಯು ಮುಕ್ತಿ ಅಥವಾ ಮೋಕ್ಷವನ್ನು ಪಡೆದು ದೇವತೆಗಳೊಡನೆ ಶಾಶ್ವತ ಆನಂದ ಮತ್ತು ಸುಖದಿಂದ ಬದುಕುವುದು. ಈ ಮೋಕ್ಷ ಸಾಧಿಸಿದವರಲ್ಲಿ ಶಿವನ ಭಕ್ತರೂ ಇರಬಹುದು, ವಿಷ್ಣುವಿನ ಭಕ್ತರೂ ಇರಬಹುದು. ಈ ಮಹಾಭಕ್ತರೇ ದೇವಮಾನವರು!

ಅವತಾರ ಎನ್ನುವುದು ಅವತರಣದಿಂದ ಬಂದ ರೂಪ. ಅವತರಿಸುವುದು ಎಂದರೆ ಸ್ವರ್ಗದಿಂದ ದೇವರು ಅಥವಾ ದೇವರುಗಳು ಅಥವಾ ದೇವ ಪ್ರತಿನಿಧಿಗಳು ಭೂಮಿಗೆ ಬಂದಿಳಿಯುವುದು.

ದುರಾದೃಷ್ಟವೆಂದರೆ, ಮೇಲಕ್ಕೆ ಹೋದವರು ಒಮ್ಮೆ ಕೆಳಕ್ಕೆ ಭೂಮಿಗೆ ಇಳಿದರೆಂದರೆ, ಅವರು ರೋಗ, ವೃದ್ದಾಪ್ಯ ಮತ್ತು ಸಾವುಗಳಿಗೆ ತುತ್ತಾಗುವುದು ಸ್ವರ್ಗದ ಶಾಶ್ವತ ಆನಂದಕ್ಕೆ ಎರವಾಗುವುದು ಮತ್ತು ಭೂಲೋಕ ಜೀವನದ ಕಷ್ಟ ಕಾರ್ಪಣ್ಯಗಳನ್ನು, ನೋವು-ಯಾತನೆಗಳನ್ನು ಅನುಭವಿಸಬೇಕಾಗಿ ಬರುವುದು. ಆದರೆ ಅವರು ಮತ್ತೆ ಸ್ವರ್ಗಕ್ಕೆ ಹಿಂತಿರುಗಿ ಹೋದರೆಂದರೆ ಕಳೆದುಹೋಗಿದ್ದ ಸುಖವನ್ನು ಮತ್ತೆ ಪಡೆಯುತ್ತಾರೆ (ದೇವದತ್ತ ಪಾಟ್ನಾಯಕ್, ದೇವಲೋಕ, ೨೦೧೬, ಪು. ೧೫೬, ಪೆಂಗ್ವಿನ್)

ದೇವಪ್ರತಿನಿಧಿಗಳು ಭೂಲೋಕಕ್ಕೆ ಒಂದು ನಿರ್ದಿಷ್ಟ ಉದ್ದೇಶ ಸಾಧನೆಗಾಗಿ ಬರುತ್ತಾರೆ. ಇಲ್ಲವೇ ಶಾಪ ಪರಿಹಾರಕ್ಕಾಗಿ ಶಿವ ಅಥವಾ ವಿಷ್ಣುವಿನ ಆದೇಶದಂತೆ ಕೆಲಸಮಾಡಲು ಬರುತ್ತಾರೆ.

ಪಂಚಾಚಾರ್ಯರು ತಾವು ದೇವರ ಅವತಾರವೆಂದು ಹೇಳಿಕೊಳ್ಳುತ್ತಾರೆ. ಅವರು ಪರಮದೈವ ಶಿವ ಮತ್ತು ಪಾರ್ವತಿಯರ ಪರಮಭಕ್ತರು ಅಥವಾ ಸೇವಕರು ಅಥವಾ ಸಿದ್ದಾಂತದ ಅನುಯಾಯಿಗಳು. ಅವರಲ್ಲಿ ಪ್ರತಿಯೊಬ್ಬರೂ ಮಾಡಿದ ಯಾವುದಾದರೂ ಪ್ರಮಾದದ ಕಾರಣದಿಂದಲೋ ಅಥವಾ ವಿಶೇಷ ಉದ್ದೇಶ ಸಾಧನೆಗೋ ಶಿವನು ಅವರನ್ನು ಭೂಲೋಕಕ್ಕೆ ಕಳುಹಿಸುತ್ತಾನೆ. ಪಂಚಾಚಾರ್ಯರಂತೂ ತಮ್ಮದು ಶಿವನಿಂದ ಸ್ಥಾಪಿತವಾದ ವೀರಶೈವ ಧರ್ಮದ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ಶಿವನಿಂದಲೇ ಕಳುಹಿಸಲ್ಪಟ್ಟ ಧರ್ಮ ನಿಯೋಗವೆಂದೇ ಹೇಳಿಕೊಳ್ಳುತ್ತಾರೆ.

ಕೈಲಾಸದಿಂದ ಇಳಿದು ಬಂದವರಾದ ಕಾರಣ, ತಾವು “ಅವತಾರ ಪುರುಷರು' ಎನ್ನುವುದು ಪಂಚಾಚಾರ್ಯರ ವಾದಸರಣಿ. ಎಂದರೆ ಅವರದು ವಿಷ್ಣುವಿನ ಅವತಾರವಿದ್ದಂತೆ. ಕೈಲಾಸದಿಂದ ಭೂಲೋಕಕ್ಕೆ ಅವರು ಬಂದ ಉದ್ದೇಶ ಅವರ ಹೊಸ ಧರ್ಮಬೋಧನೆ.

ಶಿವನ ಒಡೋಲಗದಲ್ಲಿ ರೇಣುಕನು ಶಿಷ್ಟಾಚಾರವೊಂದನ್ನು ಉಲ್ಲಂಘಿಸಿದ್ದರಿಂದ ಶಿವನು ಕೋಪಗೊಂಡು, ಭೂಲೋಕಕ್ಕೆ ಹೋಗಿ ತನ್ನಿಂದ ಸ್ಥಾಪಿಸಲ್ಪಟ್ಟ ಧರ್ಮವನ್ನು ಶುದ್ಧಗೊಳಿಸಬೇಕೆಂದು ಇಲ್ಲಿಗೆ ಕಳುಹಿಸಿದನೆಂದು ಹರಿಹರನು ತನ್ನ `ರೇವಣಸಿದ್ದ ರಗಳೆ'ಯಲ್ಲಿ ಹೇಳುತ್ತಾನೆ. ಹೀಗೆ ಶಾಪಗ್ರಸ್ಥನಾಗಿ ರೇಣುಕನು ಭೂಲೋಕಕ್ಕೆ ಬರುತ್ತಾನೆ. ಧಾರುಕ, ಧೇನುಕ, ಘಂಟಾಕರ್ಣ ಮತ್ತು ಗಜಕರ್ಣರ ಕಥೆಗಳೂ ಅವೇ ಆಗಿವೆ. ತಾವು ವೀರಶೈವ ಧರ್ಮದ ಪ್ರಸಾರಕ್ಕಾಗಿ ಕೈಲಾಸದಿಂದ ಬಂದಿಳಿದಿರುವುದಾಗಿ ಅವರೂ ಹೇಳುತ್ತಾರೆ. ಪುರಾಣದ ಈ ಕಲ್ಪನೆಯ ಕಥೆಗಳನ್ನು ಓದುವುದು ಬೇರೆ; ನಿಜವೆಂದು ನಂಬುವುದು ಬೇರೆ!

ಪುರಾಣಗಳಲ್ಲಿ ಹೇಳಿರುವಂತೆ ಎಲ್ಲ ಪಂಚಾಚಾರ್ಯರೂ ತಾವು ನಿಜವಾದ ದೇವಮಾನವರೆಂದು ದೃಢವಾಗಿ ನಂಬಿ, ದೇವರುಗಳಂತೆಯೇ ನಡೆದುಕೊಳ್ಳುತ್ತಾರೆ. ಉದಾಹರಣೆಗೆ

(ಅ) ದೇವರುಗಳು ಬಂದಿದ್ದಾರೆಂಬುದು ಜನರಿಗೆ ತಿಳಿಯಬೇಕೆಂದು ಅವರನ್ನು ಪಟ್ಟಣ ಮತ್ತು ನಗರಗಳ ಜನನಿಬಿಡ ಬೀದಿಗಳಲ್ಲಿ ಅಲಂಕೃತ ಅಡ್ಡಪಲ್ಲಕ್ಕಿಗಳಲ್ಲಿ ಮೆರವಣಿಗೆಯೊಡನೆ ಕರೆದೊಯ್ಯಬೇಕು.

(ಆ) ಪೌರಾಣಿಕ ನಾಟಕ ಅಥವಾ ಚಲನಚಿತ್ರಗಳಲ್ಲಿ ದೇವ ಅಥವಾ ರಾಜಪಾತ್ರಗಳು ಧರಿಸುವಂತೆ ಅವರು ಬೆಲೆ ಬಾಳುವ ಕಿರೀಟ, ಬಂಗಾರ ಮತ್ತು ವಜ್ರದ ಹರಳಿನ ಆಭರಣಗಳನ್ನು ಧರಿಸುತ್ತಾರೆ.

(ಇ) ಪ್ರತ್ಯೇಕ ಪಲ್ಲಕ್ಕಿಗಳಲ್ಲಿ ಕುಳಿತು ಮೆರವಣಿಗೆ ಹೋಗುವಾಗ ಪಂಚಾಚಾರ್ಯರು ತಮ್ಮ ಬಲ ಹಸ್ತವನ್ನು ಆಶೀರ್ವಾದ ಮಾಡುವಂತೆ ಮೇಲೆತ್ತಿರುತ್ತಾರೆ.

(ಈ) ಕೆಲವೊಂದು ಸಂದರ್ಭಗಳಲ್ಲಿ ಪಂಚಾಚಾರ್ಯರು ಶಿವಲಿಂಗದ ಶಿಲಾಮೂರ್ತಿಯ ಮೇಲೆ ತಮ್ಮ ಬಲಗಾಲು ಇಟ್ಟು ಪೂಜೆ ಮಾಡಿಸಿಕೊಳ್ಳು ತಾರೆ. (ಇದು ಅವರು ದೇವರಿಗಿಂತ ದೊಡ್ಡವರು ಎಂಬುದರ
ಸಂಕೇತವಾಗಿದೆ)

(ಉ) ಪಂಚಾಚಾರ್ಯರು ಭಕ್ತರ ಸ್ಥಳಕ್ಕೆ ಹೋದಾಗಲೆಲ್ಲ ಭಕ್ತರು ಅವರ ಪಾದಗಳನ್ನು ತೊಳೆದು ಪೂಜೆ ಸಲ್ಲಿಸಬೇಕು (ಪಾದಪೂಜೆ), ಪಾದ ತೊಳೆದ ನೀರನ್ನು (ಪಾದೋದಕ) ಪವಿತ್ರ ಜಲವೆಂದು ಸೇವಿಸಬೇಕು ಅಥವಾ ತಲೆಯ ಮೇಲೆ ಪ್ರೋಕ್ಷಿಸಿಕೊಳ್ಳಬೇಕು.

(ಊ) ದಸರಾ ದರ್ಬಾರುಗಳಲ್ಲಿ ರಾಜಸಂಪ್ರದಾಯದ ಗೌರವಗಳೆಲ್ಲ ಸಲ್ಲಬೇಕು. ಭಕ್ತರು ಕಾಣಿಕೆ ಸಲ್ಲಿಸಿ, ಗುರುಪೀಠಕ್ಕೆ ಬೆನ್ನು ತೋರಿಸದಂತೆ ಹಿಮ್ಮುಖವಾಗಿ ನಡೆದು ಹೋಗಬೇಕು. ಆ ದರ್ಬಾರು ಶಿವನ ಒಡ್ಡೋಲಗದ ಪ್ರತೀಕವೆಂಬುದು ಅವರ ನಂಬಿಕೆ. ದರ್ಬಾರಿನ ಸಂದರ್ಭದಲ್ಲಿ ವಿಶೇಷವಾಗಿ ಸಿದ್ಧಾಂತ ಶಿಖಾಮಣಿಯನ್ನು ಸುಂದರವಾಗಿ ವರ್ಣಿಸಲಾಗುತ್ತದೆ. ಆ ದರ್ಬಾರಿನ ವೈಭವವು ಝಾರ್, ಸೀಜರ್, ಸೈಯಿನ್ ಅಥವಾ ಇಂಗ್ಲೆಂಡಿನ
ಸಾಮ್ರಾಜ್ಯಶಾಹಿ ರಾಜದರ್ಬಾರನ್ನು ಮೀರಿಸುತ್ತದೆ.

(ಋ) ತಮ್ಮ ಶಿಷ್ಯರು ಮತ್ತು ಸ್ವಾಮಿಗಳಾಗುವ ಕಿರಿಯರಿಗೆ ದೀಕ್ಷೆಮಾಡುವಾಗ ಪಂಚಾಚಾರ್ಯರು ಆ ಭಕ್ತರ ತಲೆಯ ಮೇಲೆ ತಮ್ಮ ಪಾದವನ್ನಿಟ್ಟು ನಂತರ 'ಹಸ್ತಮಸ್ತಕ' ಸ್ಪರ್ಶಮಾಡುತ್ತಾರೆ. ಈ ಹಸ್ತಮಸ್ತಕ ಸಂಯೋಗವು (ಗುರುವು ಶಿಷ್ಯನ ತಲೆಯನ್ನು ಮುಟ್ಟುವುದು) ಭಕ್ತನಲ್ಲಿ ಮಾಂತ್ರಿಕ ಪರಿಣಾಮವುಂಟು ಮಾಡುವುದೆಂದು ಆ ಗುರುಗಳೂ ನಂಬಿದ್ದಾರೆ; ಶಿಷ್ಯರೂ ನಂಬಿದ್ದಾರೆ. ಅದರಲ್ಲೂ ಪಂಚಾಚಾರ್ಯರು ಹಸ್ತಕ್ಕಿಂತ ತಮ್ಮ ಪಾದವನ್ನು ಶಿಷ್ಯರ ತಲೆಯ ಮೇಲಿಡುವುದು ಹೆಚ್ಚು ಪರಿಣಾಮಕಾರಿ ಎನ್ನುತ್ತಾರೆ.

ಈಗಿರುವ ಪ್ರತಿಯೊಬ್ಬ ಪಂಚಾಚಾರ್ಯರ 'ಜಾತಕ'ವನ್ನು ನಾವು ನೋಡಿದ್ದೇವೆ. ಅವರೂ ನಮ್ಮೆಲ್ಲರಂತೆ ತಮ್ಮ ತಂದೆ-ತಾಯಿಗಳಿಂದ ಜನಿಸಿದವರೇ. ಅವರ ಶಾಲಾ ದಾಖಲೆಗಳಲ್ಲಿ (ಜನನ ಪತ್ರಗಳಲ್ಲಿ) ಅವರನ್ನು 'ವೀರಶೈವ' ಎಂದೇನೂ ತೋರಿಸುವುದಿಲ್ಲ. ಅದರಲ್ಲಿ 'ಲಿಂಗಾಯತ' ಎಂದೇ ಇದೆ. ಹೀಗಿರುವಾಗ ತಾವು ಸ್ವರ್ಗದಿಂದ ಇಳಿದವರು ಎಂದು ಹೇಗೆ ಹೇಳಿಕೊಳ್ಳುತ್ತಾರೆ? ಈ ಪೀಠಗಳಿಗೆ ಅವರು ಒಮ್ಮೆ ಪಟ್ಟಾಭಿಷಕ್ತರಾದರೆಂದರೆ ಇದ್ದಕ್ಕಿದ್ದಂತೆ ದೇವರಂತಾಗಿ ಬಿಡುತ್ತಾರೆ.

ಸ್ವರ್ಗವನ್ನಾಗಲೀ, ನರಕವನ್ನಾಗಲೀ ಯಾರೂ ಎಂದೂ ನೋಡಿಲ್ಲ. ಆ ಸ್ವರ್ಗ-ನರಕಗಳಿಗೆ ಹೋಗಿ ಹಿಂತಿರುಗಿ ಬಂದು ಅಲ್ಲಿನ ನೇರ ಅನುಭವಗಳನ್ನು ತಂದು ಇಲ್ಲಿ ಹೇಳಿಲ್ಲ. ಇವೆಲ್ಲ ಜನಸಮುದಾಯದಲ್ಲಿ ಬಲವಾದ ನಂಬಿಕೆ ಹುಟ್ಟಿಸುವ ಕಲ್ಪಿತಗಳು, ಧರ್ಮದ ನೀತಿಸಂಹಿತೆಯನ್ನು ಉಲ್ಲಂಘಿಸಿದ ಯಾರಾದರೂ ದೈವದ ಅವಕೃಪೆಗೆ ಒಳಗಾಗಬೇಕಾಗುತ್ತದೆ ಎಂಬ ಭಯವನ್ನು ಹುಟ್ಟಿಸುವುದು ಇದರ ಉದ್ದೇಶ. ಇದು ಕೇವಲ ಧರ್ಮಾತಿರೇಕ ಹುಟ್ಟಿಸುವ ಹುನ್ನಾರ. ಇದನ್ನು ಪಂಚಾಚಾರ್ಯರು ಅಥವಾ ಸನಾತನಿಗಳು ಒಪ್ಪದಿದ್ದರೂ ಸಮಾಜವಿಜ್ಞಾನಿಗಳು ಸ್ಪಷ್ಟವಾಗಿ ಅಭಿಪ್ರಾಯ ನೀಡಿದ್ದಾರೆ.

ಚಂದ್ರಲೋಕ ಮತ್ತು ಮಂಗಳಲೋಕಕ್ಕೆ ಹೋಗಿ ಬಂದಿರುವ ನಮ್ಮ ಯಾವ ಗಗನಯಾತ್ರಿಗಳೂ ಅಲ್ಲಿ ಯಾವುದೇ ಸ್ವರ್ಗ-ನರಕಗಳ ಗುರುತು ಕಂಡಿಲ್ಲ.

ವಿಜ್ಞಾನ ಆ ಸ್ವರ್ಗ-ನರಕಗಳನ್ನು ನಂಬುವುದಿಲ್ಲ. ಆದರೆ ಧರ್ಮವು ವಿಜ್ಞಾನವನ್ನು ನಂಬುವುದಿಲ್ಲ. ಎಷ್ಟೋ ಸಲ, ಈ ಎರಡರ ಮಧ್ಯೆ ಉಂಟಾಗಿರುವ ಭಿನ್ನಾಭಿಪ್ರಾಯದಿಂದಾಗಿ ಅತ್ಯಂತ ಹಾನಿಕರ ಪರಿಣಾಮಗಳು ಸಂಭವಿಸಿರುವುದು ಅನೇಕ ಧರ್ಮಗಳ ಚರಿತ್ರೆಯಿಂದ ತಿಳಿದು ಬರುತ್ತದೆ. ಸ್ವರ್ಗ-ನರಕಗಳ ಅಸ್ತಿತ್ವವಿರುವುದು ಅವುಗಳನ್ನು ನಂಬುವ ಧರ್ಮಗಳ ಬೋಧನೆಯಲ್ಲಿ ಮಾತ್ರ

ಲಿಂಗಾಯತರು ಅವತಾರಗಳನ್ನು ನಂಬುವರೆ?

ನಮಗೆಲ್ಲ ತಿಳಿದಿರುವಂತೆ ಶರಣಧರ್ಮವು ಸ್ವರ್ಗ-ನರಕಗಳನ್ನಾಗಲೀ ಅವತಾರ ಸಿದ್ದಾಂತವನ್ನಾಗಲೀ ನಂಬುವುದಿಲ್ಲ. ಬಸವಣ್ಣ, ಅಲ್ಲಮಪ್ರಭು, ಸಿದ್ದರಾಮ ಮೊದಲಾದ ಅನೇಕ ಶರಣರು ತಮ್ಮ ವಚನಗಳಲ್ಲಿ ಅವುಗಳನ್ನು ಕಟುವಾಗಿ ಖಂಡಿಸಿದ್ದಾರೆ. ಹಾಗೆಯೇ ಪುನರ್ಜನ್ಮದ ಕಲ್ಪನೆಯನ್ನೂ ನಿರಾಕರಿಸಿದ್ದಾರೆ. ಅವರ ದೃಷ್ಟಿಯಲ್ಲಿ ಕೈಲಾಸವೂ ಇಲ್ಲ; ಪುನರ್ಜನ್ಮವೂ ಇಲ್ಲ. ಕೈಲಾಸವೆಂಬುದೇ ಇಲ್ಲದಿರುವಾಗ ಮತ್ತು ಪುನರ್ಜನ್ಮವೆಂಬುದೇ ಇಲ್ಲದಿರುವಾಗ ಮತ್ತೆ ಹುಟ್ಟುವ ಮತ್ತು ಕೈಲಾಸದಿಂದ ಅವತರಿಸಿ ಬರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಆದರೆ, ಅವತಾರದ ಪರಿಕಲ್ಪನೆಯು ವೀರಶೈವ ಮತ್ತು ಲಿಂಗಾಯತ ಪುರಾಣ ಸಾಹಿತ್ಯದಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತದೆ. ಅದಕ್ಕೆ ಯಾವುದೇ ಅರ್ಥವಿಲ್ಲ. ಹಾಗಾಗಿ ಲಿಂಗಾಯತ ಸಾಹಿತ್ಯದಲ್ಲಿ ಅವತಾರದ ಪರಿಕಲ್ಪನೆ ಹೇಗೆ ಪ್ರವೇಶಿಸಿತು ಎನ್ನುವ ಮೂಲಭೂತ ಪ್ರಶ್ನೆ ಎದುರಾಗುತ್ತದೆ. ಪಂಚಾಚಾರ್ಯರನ್ನು ಕುರಿತ ಎಲ್ಲ ಪುರಾಣಗಳೂ ಅವರನ್ನು ಅವತಾರಿಗಳೆಂದು ವರ್ಣಿಸಿರುವುದೇನೋ ನಿಜ. ಆದರೆ, ವಿಚಿತ್ರ ಸಂಗತಿ ಎಂದರೆ ಬಸವಣ್ಣನು ನಂದಿಯ ಅವತಾರವೆಂದು ಪುರಾಣಕಾರರು ಹೇಳಿರುವುದು.

(ಅ) ಕನ್ನಡ ತೆಲುಗು ಮತ್ತು ಸಂಸ್ಕೃತ ಭಾಷೆಗಳಲ್ಲಿರುವ ಒಂಬತ್ತಕ್ಕೂ ಹೆಚ್ಚು ಬಸವ ಪುರಾಣಗಳು ಮತ್ತು ಸಂಸ್ಕೃತದ 'ಶಿವತತ್ತ್ವ ರತ್ನಾಕರ' ಗ್ರಂಥದಲ್ಲಿ ಬಸವಣ್ಣನವರು ಶಿವನ ಅಪ್ಪಣೆಯಂತೆ ನಂದಿಯ ಅವತಾರವಾಗಿ ಕೈಲಾಸದಿಂದ ಭೂಲೋಕಕ್ಕೆ ಬಂದರೆಂದು ಚಿತ್ರಿಸಲಾಗಿದೆ.

(ಆ) ಚಾಮರಸನ 'ಪ್ರಭುಲಿಂಗ ಲೀಲೆ'ಯಲ್ಲಿ ಮತ್ತೋರ್ವ ಶರಣೆ ಅಕ್ಕಮಹಾದೇವಿಯು ಪಾರ್ವತಿಯು ಸಾತ್ವಿಕ ಕಳೆಯ ಅವತಾರವೆಂದೂ, ಮಾಯಾದೇವಿಯು ತಾಮಸ ಕಳೆಯ ಅವತಾರವೆಂದೂ ತೋರಿಸಲಾಗಿದೆ.

(ಇ) ಮಡಿವಾಳ ಮಾಚಿದೇವರಂತಹ ವೈಚಾರಿಕ ಶರಣನನ್ನು ವೀರಭದ್ರನ ಅವತಾರವೆಂದೂ, ಅಲ್ಲಮಪ್ರಭುವು ದೇವರ ಅವತಾರದ ವ್ಯೋಮ ಕಾಯನೆಂದೂ ಚಿತ್ರಿಸಲಾಗಿದೆ. ಇಂತಹ ಇನ್ನೂ ಕೆಲವು ಉದಾಹರಣೆಗಳಿವೆ.

ಲಿಂಗಾಯತ / ವೀರಶೈವ ಸಾಹಿತ್ಯದಲ್ಲಿ ಅವತಾರ ಕಲ್ಪನೆಯು ಕಾಣಿಸಿಕೊಂಡಿರುವುದು ೧೨ನೆಯ ಶತಮಾನದ ಬಸವಣ್ಣ ಮತ್ತಿತರ ಶರಣರ ಕಾಲದ ನಂತರ ೧೩ನೆಯ ಶತಮಾನದಿಂದ ವಿದ್ವಾಂಸರು ಹಿಂದೂ ಪೌರಾಣಿಕ ಪರಂಪರೆಯಿಂದ ಆ ಪರಿಕಲ್ಪನೆಯನ್ನು ಎರವಲು ಪಡೆದಿದ್ದಾರೆ ಎಂಬುದನ್ನು ಅದು ಸೂಚಿಸುತ್ತದೆ.

ಹಿಂದೂ ಪದ್ದತಿಯಲ್ಲಿ ವಿಷ್ಣುವು ತನ್ನ ಅನೇಕ ಅವತಾರಗಳಿಗೆ ಹೆಸರಾಗಿದ್ದಾನೆ. ಗರುಡ ಪುರಾಣದಲ್ಲಿ ೧೦ ಅವತಾರಗಳನ್ನು (ದಶಾವತಾರ) ಹೇಳಲಾಗಿದೆ. ಭಾಗವತ ಪುರಾಣದಲ್ಲಿ ೨೨ ಅವತಾರಗಳ ಪ್ರಸ್ತಾಪವಿದೆ. ಹಾಗೆಯೇ ಇತರ ಹಿಂದೂ ಪುರಾಣಗಳಲ್ಲಿ ಲೆಕ್ಕವಿಲ್ಲದಷ್ಟು ಅವತಾರಗಳ ವಿಷಯ ಬರುತ್ತದೆ.

ಪಂಚಾಚಾರ್ಯರು ಶಿವನ ಅನುಯಾಯಿಗಳಾಗಿ ಕೈಲಾಸದಿಂದ ಇಳಿಯುತ್ತಾರೆ! 'ಸಿದ್ಧಾಂತ ಶಿಖಾಮಣಿ'ಯು ರೇಣುಕನ ಅವತಾರವನ್ನು ಮಾತ್ರ ಹೇಳಿದರೆ, ಸುಪ್ರಭೇದಾಗಮ ಮತ್ತು ಸ್ವಯಂಭು ಆಗಮಗಳು ಐದೂ ಆಚಾರ್ಯರ ಅವತಾರದ ಕಥೆ ಹೇಳುತ್ತವೆ.

ಡಾ. ಎಂ.ಎಂ. ಕಲಬುರ್ಗಿ ಅವರು, ರೇಣುಕನು ಉದ್ಭವಿಸಿದನೆಂದು ಹೇಳಲಾಗಿರುವ ಕೊಲ್ಲಿಪಾಕಿಗೆ ಸಂಬಂಧಿಸಿದಂತೆ, ಆಂಧ್ರಪ್ರದೇಶದ ೩೬ ಕನ್ನಡ ಶಾಸನಗಳನ್ನು ಅಧ್ಯಯನ ಮಾಡಿ, ಕೊಲ್ಲಿಪಾಕಿಯಲ್ಲಿರುವ ಸೋಮೇಶ್ವರ ದೇವಾಲಯವು ಹೆಚ್ಚು ಪ್ರಾಚೀನವಾದುದಲ್ಲವೆಂದು ನಿರ್ಣಯಿಸಿದ್ದಾರೆ. ಅದು ೧೨ನೆಯ ಶತಮಾನದ ಆರಂಭದಲ್ಲಿ ಚಾಲುಕ್ಯ ಸೋಮೇಶ್ವರನು ಕಟ್ಟಿಸಿದ ದೇವಾಲಯ. ಅಲ್ಲಿರುವ ಯಾವ ಶಾಸನದಲ್ಲೂ ರೇವಣಸಿದ್ದನು ಶಿವಲಿಂಗದಿಂದ ಉದ್ಭವಿಸಿದ ಬಗೆಗಾಗಲಿ, ರೇವಣಸಿದ್ಧನ ಹೆಸರಾಗಲೀ ಪ್ರಸ್ತಾಪವಾಗಿಲ್ಲ.

ಬಸವಣ್ಣನವರು ಪಂಚಾಚಾರ್ಯರಂತೆ ಅವತಾರಿಯಲ್ಲ. ಅವರು ಎಲ್ಲರಂತೆ ಮಾನವರು; ದೇವರಲ್ಲ. ಅಂತಹ ಬಸವಣ್ಣನವರನ್ನು 'ದ್ವಿತೀಯ ಶಂಭು' ಎಂದು ಕರೆದಿರುವ ಸಂದರ್ಭಗಳೂ ಇವೆ (೧೧-೧೨ನೆಯ ಶತಮಾನ) ವಚನಗಳು. ಅದರಲ್ಲೂ ಕಾಲಜ್ಞಾನ ವಚನಗಳು, ವೇದಗಳು ಮತ್ತು ಪುರಾಣಗಳಂತೆ ಧಾರ್ಮಿಕ ಮತ್ತು ಪವಿತ್ರ ಸಾಹಿತ್ಯವೆಂದೇ ಹೆಸರಾಗಿದ್ದವು. ಹಾಗಾಗಿ ಇತರರು ಅವುಗಳನ್ನು ಓದಲಾಗಲಿಲ್ಲ. ಬಸವಣ್ಣನವರನ್ನು ಕುರಿತ ಪುರಾಣಗಳನ್ನು ಹಾಗೆಯೇ ನಂಬಲಾಯಿತು.

ಮೇಲೆ ಉಲ್ಲೇಖಿಸಿದ ಎಲ್ಲ ಪುರಾಣಗಳು ಮತ್ತು ಇತರ ಅನೇಕ ಪುರಾಣಗಳನ್ನು ರಚಿಸಿದವರು ಬ್ರಾಹ್ಮಣ ಪಂಡಿತರು. ಅವರು ತಮ್ಮ ಸಾಹಿತ್ಯ ಪದ್ಧತಿಯಿಂದ ಆಚೆ ವಿಚಾರಮಾಡಲಾರರು. ಪ್ರತಿಯೊಬ್ಬ ಮಹಾಪುರುಷನನ್ನು ಅವರು ಬರೆದ ಪುರಾಣಗಳಲ್ಲಿ ಒಬ್ಬ 'ದೇವಮಾನವನನ್ನಾಗಿ ಚಿತ್ರಿಸಲಾಗಿದೆ. ಇದು ಮಧ್ಯಯುಗದ ಸಾಹಿತ್ಯಪದ್ಧತಿಯಾಗಿತ್ತು ಎನ್ನುವುದು ಆಗಿನ ಪುರಾಣ ಸಾಹಿತ್ಯದ ಅವಲೋಕನದಿಂದ ಸ್ಪಷ್ಟವಾಗಿ ತಿಳಿಯುತ್ತದೆ. ಆ ಪಂಡಿತರು, ತಮ್ಮ ಕಥಾನಾಯಕನನ್ನು ಸ್ವರ್ಗಲೋಕದಿಂದ ಭೂಲೋಕಕ್ಕೆ ತಂದು, ಅವನನ್ನು ಪವಾಡಪುರುಷನನ್ನಾಗಿಸಿ ಜನನಂಬಿಕೆಯ ವ್ಯಕ್ತಿಯನ್ನಾಗಿ ಸೃಷ್ಟಿಸಿದರು. ಅಂತಹ ಮಹಾಪುರುಷ ಅಥವಾ ಮಹಿಳೆಯನ್ನು ಅತಿಮಾನುಷರು, ದೈವಾಂಶ ಸಂಭೂತರು ಎಂದು ಮುಗ್ಧಜನರು ಭಯ-ವಿಸ್ಮಯ ಮತ್ತು ಭಕ್ತಿ-ಗೌರವಗಳಿಂದ ಕಾಣುವಂತೆ ಮಾಡುವುದು ಆ ಪುರಾಣಕಾರರ ಉದ್ದೇಶವಾಗಿತ್ತು.

(ಅ) ೧೩ನೆಯ ಶತಮಾನದ ಆರಂಭದಲ್ಲಿ 'ಬಸವರಾಜ ದೇವರ ರಗಳೆ'ಯನ್ನು ರಚಿಸಿದ ಹರಿಹರ ಮತ್ತು ಸಿದ್ದೇಶ್ವರ ಪುರಾಣ' ರಚಿಸಿದ ಅವನ ಅಳಿಯ ರಾಘವಾಂಕ ಇಬ್ಬರೂ ಶೈವ ಬ್ರಾಹ್ಮಣರು.

(ಆ) 'ಬಸವ ಪುರಾಣ'ಗಳನ್ನು ಬರೆದವರಲ್ಲಿ ಪಾಲ್ಕುರಿಕೆ ಸೋಮನಾಥ, ಪಿಡುಪರ್ತಿ ಸೋಮನಾಥ, ನಾಗಣಾರ್ಯ ಮತ್ತು ಶಂಕರಾರಾಧ್ಯ ಇವರು ಆರಾಧ್ಯ ಬ್ರಾಹ್ಮಣರು.

(ಇ) ಸಿಂಗಿರಾಜ, ಲಕ್ಕಣ ದಂಡೇಶ, ಭೀಮಕವಿ -ಇವರೂ ಸಹ ಬ್ರಾಹ್ಮಣ ಪರಂಪರೆಯ ಗೋತ್ರಧಾರಿಗಳು.

(ಈ) ಕ್ರಿ.ಶ. ೧೭೦೭ರಲ್ಲಿ 'ಶಿವತತ್ತ್ವ ರತ್ನಾಕರ' ಗ್ರಂಥ ರಚಿಸಿದ ಕೆಳದಿ ರಾಜ ಬಸವಪ್ಪ ನಾಯಕ ಪಂಚಪೀಠಗಳ ಪರಮಭಕ್ತ. ಆದರೆ ಲಿಂಗಾಯತ / ವೀರಶೈವ ಧರ್ಮವನ್ನು ಸ್ಥಾಪಿಸಿದವರು ಬಸವಣ್ಣನವರೇ ಎಂದು ಸ್ಪಷ್ಟವಾಗಿ ದೃಢಪಡಿಸಿದ್ದಾನೆ.

(ಉ) ಕ್ರಿ.ಶ. ೧೮ನೆಯ ಶತಮಾನದಲ್ಲಿ ಶರಣರು ಮತ್ತು ಪಂಚಾಚಾರ್ಯರನ್ನು ಕುರಿತ ಅನೇಕ ಪುರಾಣಗಳನ್ನು ರಚಿಸಿದ ಕವಿ ಷಡಕ್ಷರದೇವ ಮತ್ತಿತರರೆಲ್ಲ ಬ್ರಾಹ್ಮಣೀಯ ಪೌರಾಣಿಕ ಶೈಲಿಯ ಮಾದರಿಯಲ್ಲೇ ಚಿಂತಿಸಿ ಗ್ರಂಥ ರಚಿಸುವುದಕ್ಕೆ ಒಗ್ಗಿಕೊಂಡಿದ್ದರು. ಆ ಪುರಾಣಗಳ ನಾಯಕರೆಲ್ಲ ಸ್ವರ್ಗದಿಂದ ಇಳೆಗೆ ಅವತರಿಸಿದವರೇ ಆಗಿದ್ದಾರೆಂದರೆ ಆಶ್ಚರ್ಯಪಡಬೇಕಾಗಿಲ್ಲ.

ಪುರಾಣಗಳ ಸಮಸ್ಯೆಗಳು

ಪುರಾಣಗಳು ಇತಿಹಾಸವಲ್ಲ. ಅವು ಕೆಲವೊಂದು ಚಾರಿತ್ರಿಕ ಘಟನೆಗಳು, ರಾಜವಂಶಗಳು ಅಥವಾ ವ್ಯಕ್ತಿಗಳನ್ನು ಆಧರಿಸಿರಬಹುದು. ಆದರೆ ಅವು ಇತಿಹಾಸ ಮತ್ತು ಧಾರ್ಮಿಕ ಕಲ್ಪನೆಗಳನ್ನು ಕಲಬೆರಕೆ ಮಾಡಿಬಿಟ್ಟಿವೆ. ಪುರಾಣಶೈಲಿಯ ಜೀವನ ಚರಿತ್ರೆಗಳು, ಇತಿಹಾಸದ ವಾಸ್ತವ ಸಂಗತಿಗಳನ್ನು ಕಂಡುಕೊಳ್ಳುವಲ್ಲಿ, ಇತಿಹಾಸಕಾರರಿಗೆ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತವೆ.

(ಅ) ಪುರಾಣಗಳು ತಮ್ಮ ನಿರೂಪಣೆಯಲ್ಲಿ ಕಲ್ಪಿತ ಪವಾಡಗಳು ಮತ್ತು ಧಾರ್ಮಿಕ ಮತಾಚರಣೆಗಳನ್ನು ಮಿಶ್ರಮಾಡಿ ಐತಿಹಾಸಿಕ ವಾಸ್ತವಾಂಶಗಳನ್ನು ಅಪಾರ್ಥಗೊಳಿಸುತ್ತವೆ.

(ಆ) ಪುರಾಣ ಸಾಹಿತ್ಯ ಎಲ್ಲಿ ಕೊನೆಗೊಳ್ಳುತ್ತದೆ ಮತ್ತು ಚರಿತ್ರೆ ಸಾಹಿತ್ಯ ಎಲ್ಲಿ ಆರಂಭವಾಗುತ್ತದೆ ಎನ್ನುವುದನ್ನು ಖಚಿತಗೊಳಿಸಲು ಕಷ್ಟವಾಗುವಂತೆ ಮಾಡುತ್ತವೆ.

(ಇ) ಪೌರಾಣಿಕ ಕಥೆಗಳೇ ಸತ್ಯ ಮತ್ತು ಸುಸಂಗತ ಎಂದು ಭಾವಿಸುವ ಅವಿವೇಕದ ನಂಬಿಕಸ್ಥ ಜನರ ಒಂದು ಲೋಕವನ್ನೇ ಸೃಷ್ಟಿಸುತ್ತವೆ.

(ಈ) ಪುರಾಣಗಳು ಸಾಮಾನ್ಯವಾಗಿ ತಮ್ಮ ಕಥಾನಾಯಕರ ಕೆಲವೊಂದು ನೈತಿಕ ಗುಣಲಕ್ಷಣಗಳನ್ನು ಉತ್ಪ್ರೇಕ್ಷೆ ಮಾಡುತ್ತವೆ. ಹಾಗೆ ಉತ್ಪ್ರೇಕ್ಷೆ ಮಾಡುವಾಗ ಕಟ್ಟುಕಥೆಗಳ ಪ್ರಕ್ರಿಯೆಯ ಮೂಲಕ ಖಳನಾಯಕರ ಅವಗುಣಗಳನ್ನು ಉತ್ಪ್ರೇಕ್ಷೆಮಾಡುತ್ತವೆ.

(ಉ) ಎಷ್ಟೇ ಸಮಸ್ಯಾತ್ಮಕವಿದ್ದರೂ, ಪುರಾಣಗಳು ಜನರು ನೀತಿಪಥದಲ್ಲಿ ನಡೆಯುವಂತೆ ಪ್ರಭಾವ ಬೀರಲು ಪ್ರಯತ್ನಿಸುತ್ತವೆ. ರಾಮಾಯಣ ಮತ್ತು ಮಹಾಭಾರತ ಪುರಾಣಗಳಲ್ಲಿ ಅಂತಹ ಕಥೆಗಳೇ ತುಂಬಿಕೊಂಡಿವೆ. ಜಾಬಾಲಿ, ನಚಿಕೇತ, ಶ್ವೇತಕೇತ ಮತ್ತು ಬುದ್ಧನ ಜಾತಕ ಕಥೆಗಳಂತಹ ಉಪನಿಷತ್ತಿನ ಕಥೆಗಳೂ ಅದೇ ವರ್ಗಕ್ಕೆ ಸೇರುತ್ತವೆ.

ಭಾರತೀಯ ಚರಿತ್ರಕಾರರು (ಉದಾ: ಎ.ಕೆ. ಮಜುಂದಾರ್, ೧೯೧೭, ಪು. ೧೬-೧೯) ರಜಪೂತರು, ಕ್ಷತ್ರಿಯರ ಚಂದ್ರವಂಶ-ಸೂರ್ಯವಂಶ, ರಾಮ ಮತ್ತು ಕೃಷ್ಣ, ಪುರು ಮತ್ತು ಯದು ಹೀಗೆ ಭಾರತದ ನಾನಾ ರಾಜವಂಶಗಳ ಇತಿಹಾಸವನ್ನು ಗುರುತಿಸಲು ಪ್ರಯತ್ನಪಟ್ಟಿದ್ದಾರೆ. ಅವರಿಗೂ ಚರಿತ್ರೆಯ ಕಾಲ ಎಲ್ಲಿ ಆರಂಭವಾಗುತ್ತದೆ. ಪುರಾಣದ ಕಾಲ ಎಲ್ಲಿ ಕೊನೆಗೊಳ್ಳುತ್ತದೆ ಎಂಬುದನ್ನು ಕಂಡುಕೊಳ್ಳಲು ಕಷ್ಟವಾಗಿದೆ. ಅದೇ ಅನುಭವ ಪಂಚಾಚಾರ್ಯರ ಚರಿತ್ರೆಗೂ ಅನ್ವಯಿಸುತ್ತದೆ.

ಪಂಚಾಚಾರ್ಯರನ್ನು ಕುರಿತ ವಿಶ್ವಾಸಾರ್ಹವಾದ ಚರಿತ್ರೆ ಯಾರಿಗೂ ತಿಳಿಯದು. ೧೯೨೮ರಲ್ಲೇ ಅವರ ಬಣಕ್ಕೆ ಸೇರಿದ ಡಾ. ಎಸ್.ಸಿ. ನಂದೀಮಠ ಅವರು ಈ ಆಚಾರ್ಯರ ಬಗೆಗೆ ಅಧಿಕೃತ ಚರಿತ್ರೆ ಇಲ್ಲದಿರುವುದನ್ನು ಕಂಡು ವಿಷಾದಿಸಿದ್ದಾರೆ. ಪಂಚಾಚಾರ್ಯರಿಗೆ ಇರುವುದು ಪುರಾಣವೇ ಹೊರತು ಚರಿತ್ರೆಯಿಲ್ಲ ಎಂದಿದ್ದಾರೆ. ನಂದೀಮಠ ಅವರ ಈ ನಿಂದನೆಯ ನಂತರ ಪಂಚಾಚಾರ್ಯರು ತಮ್ಮ ಪರಂಪರೆಗೆ ಸಂಬಂಧಿಸಿದ ಅಷ್ಟಿಷ್ಟು ಪೌರಾಣಿಕ ಮಾಹಿತಿಯನ್ನು ಒಟ್ಟುಗೂಡಿಸಲು ಪ್ರಯತ್ನಿಸಿದ್ದಾರೆ. (ಬಿಜ್ಜರಗಿ, ೨೦೦೮)

ಪಂಚಾಚಾರ್ಯರ ದಾಖಲೆಗಳೆಲ್ಲ ಒಂದು ರೀತಿಯಲ್ಲಿ ಮುಚ್ಚು ಮರೆಯಾಗಿವೆ. ಕಾಶೀಪೀಠ ಮತ್ತು ಕೇದಾರಪೀಠದ ಕೆಲವು ದಾಖಲೆಗಳನ್ನು ಪಂಚಾಚಾರ್ಯರಿಗೆ ಸಂಬಂಧಿಸಿದ ದಾಖಲೆಗಳೆಂದು ಕಾಣುವಂತೆ ಮಾಡಲು ಇತರರ ದಾಖಲೆಗಳನ್ನೂ ತಿದ್ದಿದ್ದಾರೆಂಬ ಆರೋಪವಿದೆ (ಸಿದ್ದರಾಮ ಪೂಜಾರಿ...) ಬಾಳೆಹಳ್ಳಿ ಮಠದ ಬಗೆಗೆ ಸ್ವಲ್ಪಮಟ್ಟಿನ ಮಾಹಿತಿ ದೊರಕುತ್ತದೆ. ಆದರೆ ಉಜ್ಜಿನಿ ಮಠದ ಚರಿತ್ರೆ ಸಿರಿಗೆರೆ ತರಳಬಾಳು ಮಠದೊಂದಿಗಿನ ವಿವಾದದಿಂದಾಗಿ ಅಸ್ಪಷ್ಟವಾಗಿದೆ. ಪಂಚಪೀಠಗಳ ಕ್ರಮಾನುಗತದಲ್ಲಿ ಹೇಳಲಾಗಿರುವ ಹಿಂದಿನ ಮಠಾಧಿಪತಿಗಳ ಸಂಖ್ಯೆಯನ್ನು ಗಮನಿಸಿದರೆ, ಅವುಗಳ ಸಂಭವನೀಯ ಅಸ್ತಿತ್ವದ ಕಾಲಾವಧಿಯ ಮಿತಿಯೊಳಗೆ ಅವರನ್ನು ಸರಿಹೊಂದಿಸಲು ಸಾಧ್ಯವಾಗುವುದೇ ಇಲ್ಲ.

ತಮ್ಮ ಚರಿತ್ರೆಗೆ ಹೆಚ್ಚಿನ ಪ್ರಾಚೀನತೆಯನ್ನು ಒದಗಿಸುವ ಸಲುವಾಗಿ ಅದನ್ನು ಸಾಧ್ಯವಿದ್ದಷ್ಟೂ ಹಿಂದಕ್ಕೆ ಕೊಂಡೊಯ್ಯುವುದು ಪಂಚಾಚಾರ್ಯರ ಒಟ್ಟು ಪ್ರಯತ್ನವಾಗಿದೆ. ಅತ್ಯಂತ ಕೆಟ್ಟ ಸಂಗತಿಯೆಂದರೆ, ಅವರು ಪುರಾಣಗಳನ್ನೇ ಸತ್ಯ ಕಥೆಗಳೆಂದು ನಂಬಿರುವುದು.

ಕ್ರೈಸ್ತ ಧರ್ಮದಲ್ಲಿ ಕ್ರಿಸ್ತನ ಪುನರಾಗಮನ ಮತ್ತು ಕೆಲವು ಶಿಯಾ ಪಂಥಿಗಳಲ್ಲಿ 'ಮಹಮ್ಮದನ (ಮಡ್ಡಿ) ಪುನರಾಗಮನ'ದ ನಂಬಿಕೆ ಇದೆ. ಈ ನಂಬಿಕೆಯು ಮಹಾಭಾರತದಲ್ಲಿ ಕೃಷ್ಣನು ಗೀತೆಯಲ್ಲಿ ಹೇಳಿರುವ 'ಸಂಭವಾಮಿ ಯುಗೇ ಯುಗೇ' (ಧರ್ಮಕ್ಕೆ ಭಂಗವುಂಟಾದಾಗಲೆಲ್ಲ ನಾನು ಯುಗಯುಗಗಳಲ್ಲಿ ಮತ್ತೆ ಮತ್ತೆ ಬರುತ್ತೇನೆ) ಎಂದು ಮಾನವ ಜನಾಂಗಕ್ಕೆ ಕೊಟ್ಟಿರುವ ಭರವಸೆಯ ಅರ್ಥವನ್ನೇ ಸೂಚಿಸುತ್ತದೆ.

ಆದ್ದರಿಂದ ಐದು ಜನ ಆಚಾರ್ಯರಲ್ಲಿ ಯಾರೂ ಅವತಾರ ಪುರುಷರಲ್ಲ. ಅವರ ಪುರಾಣಗಳು ಇತಿಹಾಸವೂ ಅಲ್ಲ ಎಂದು ನಾವು ಖಚಿತವಾದ ನಿರ್ಧಾರಕ್ಕೆ ಬರಬಹುದು.

ಗ್ರಂಥ ಋಣ:
1) ವೀರಶೈವ ಪಂಚಾಚಾರ್ಯ ಮಿಥ್ಯ ಮತ್ತು ಸತ್ಯ; ಲೇಖಕರು: ಡಾ. ಎಸ್‌. ಎಂ. ಜಾಮದಾರ, ಅನುವಾದಕರು: ಡಾ. ಗೊ. ರು. ಚನ್ನಬಸಪ್ಪ. ೨೦೨೦. Published by: Jagathika Lingayat Mahasabha, No 53 2nd Main Road, 3rd cross, Chakravarrthi Layout, Palace road, Bangalore-560020.

ಪರಿವಿಡಿ (index)
Previous ಪಂಚಪೀಠಗಳು ಸ್ಥಾಪನೆಯಾದದ್ದು ಯಾವಾಗ? ಪಂಚಾಚಾರ್ಯರು ಶಿಲಾಲಿಂಗೋದ್ಭವರೆ? Next