ಶಿರಸಂಗಿ ಲಿಂಗರಾಜ ದೇಸಾಯಿ | ಮಾಂಸದ ಬೆಲೆ |
ಹನ್ನೆರಡನೆಯ ಶತಮಾನದಲ್ಲಿ ಸಂಗೀತದ ಸ್ಥಿತಿ |
- ಡಾ. ಜಯದೇವಿ ಜಂಗಮಶೆಟ್ಟಿ
ಬಸವಾದಿ ಶರಣರ ಜಂಗಮ ಪ್ರಜ್ಞೆಯ ವ್ಯಕ್ತಿ ಸಮಾಜಗಳನ್ನು ಕಟ್ಟುವ ಚಳುವಳಿಯ ಭಾಗವಾಗಿ ಸಾಕಾರಗೊಂಡ ಗುರು, ಲಿಂಗ, ಜಂಗಮ, ಕಾಯಕ, ದಾಸೋಹ ತತ್ವಗಳನ್ನು ಜನರ ಮನಗಳಿಗೆ ಮುಟ್ಟಿಸುವ ಉದ್ದೇಶಕ್ಕೆ ವಚನ ಒಂದು ಮಾಧ್ಯಮವಾಯಿತು. ವೃತ್ತಿ ಯಾವುದೇ ಇರಲಿ, ಮೇಲು-ಕೀಳು ಎಂಬ ಭಾವವನ್ನು ದೂರ ಸರಿಸಿ, ಸತ್ಯ ಶುದ್ದ ಮನಸ್ಸಿನಿಂದ ಮಾಡುವ ಕೆಲಸವನ್ನೇ ಕಾಯಕವೆಂದು ಕರೆದ ಸಂದರ್ಭದಲ್ಲಿ ಅನೇಕ ಕಸುಬು ಕಲೆಗಳು ಸಮಾನ ಸ್ಥಾನ ಪಡೆದವು. ಎಲ್ಲ ಜನರು ದುಡಿದು ತಿನ್ನುವ, ಕೊಟ್ಟು ತಿನ್ನುವ ಕಾಯಕ-ದಾಸೋಹ ತತ್ವಗಳನ್ನು ಬೋಧಿಸಿ ಸಮಾಜವನ್ನು ಅಭಿವೃದ್ಧಿಗೊಳಿಸುವಲ್ಲಿ ಅವರು ಯಶಸ್ವಿಯಾದರು. ತಲೆಮಾರಿನಿಂದ ತಲೆಮಾರಿಗೆ ಬೆಳೆಯುತ್ತ ಬಂದ, ಕೀಳಾಗಿ ನೋಡುವ ಅನೇಕ ಕಲೆಗಳು ೧೨ನೇ ಶತಮಾನದಲ್ಲಿ ಹೊಸ ರೂಪ ತಳೆದವು, ಕಿಳ್ಳಿಕೇತರ ಬೊಂಬೆಯಾಟ, ಜಾತಿಗಾರರ, ವಿನೋದಾವಳಿ, ಡೊಂಬರಾಟ, ಬಯಲಾಟಗಳು, ಕಂಕರಿ, ಢಕ್ಕೆ, ಕಿನ್ನರಿ, ಮದ್ದಳೆ ಇವೇ ಮೊದಲಾದ ಶುದ್ದ ದೇಶೀಯ ವಾದ್ಯಗಳೂ ಅಂದು ಕೀಳೆನಿಸಿದ್ದವು. ಸಾಮಾನ್ಯ ಜನರ ರಂಜನೆಗೆ ವಿಷಯಗಳಾದ ಈ ಕಲೆಗಳು ಕೇವಲ ಹೊಟ್ಟೆ ಹೊರೆಯುವ ಸಾಧನಗಳಾಗಿದ್ದವು. ನಿಜಕ್ಕೂ ಇವೇ ಕಲೆಗಳು: ಇನ್ನುಳಿದ ಕಲೆಗಳಿಗೆ ಮೂಲವಾದವುಗಳು. “ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ಉದಾತ್ತ ಗುರಿಯನ್ನು ಜನಪದರಿಗೆ ವಿವರಿಸಿ ತಿಳಿಸಿ ಹೇಳಲು ಅನೇಕ ಬಗೆಯ ಪ್ರಸಾರಕ ಕ್ರಮಗಳನ್ನು ಶರಣರು ರೂಪಿಸಿಕೊಂಡರು. ಅವರು ಬೆಳೆಸಿಕೊಂಡ ವಿವಿಧ ಬಗೆಯ ಸಂವಹನ ಮಾಧ್ಯಮಗಳಲ್ಲಿ ಕಲೆಯೂ ಒಂದು.”[1] ಅನೇಕ ಜನಪದ ಕಲೆಗಳನ್ನು ಮಾನವಕಲ್ಯಾಣ ಕ್ರಾಂತಿಗೆ, ಶರಣರ ತತ್ವಧೋರಣೆಗೆ ಬಳಸಿಕೊಳ್ಳವುದರ ಜೊತೆಗೆ ಅವುಗಳನ್ನು ಬೆಳೆಸಿದರು. ಬರೀ ಹೊಟ್ಟೆ ಹೊರೆಯುವ ಮಟ್ಟದಲ್ಲಿದ್ದ ಅನೇಕ ಕಲೆಗಳು ಶರಣರ ಕಾಲದಲ್ಲಿ ಹೊಸ ಚೈತನ್ಯದಿಂದ ಮುಖವೆತ್ತಿ ಮಾನವನ ಕಲ್ಯಾಣ ಸಾಧನೆಗೆ ಕಾಯಕದ ಜೊತೆಗೆ ಪೂರಕವಾಗಿ ಎಲ್ಲ ವರ್ಗದ ಶರಣ ಶರಣೆಯರ ಮನದಲ್ಲಿ ಕಲೆಗಳು ಆಂತರಿಕವಾಗಿ ಸ್ಪರ್ಶಿಸಿದವು. ಕಲೆಗಳೇ ಹಾಗಲ್ಲವೇ.
ಗಾಯನ, ವಾದನ, ನೃತ್ಯ, ನಾಟಕ, ಅನೇಕ ಕಲೆಗಳ ವಿಷಯಗಳಲ್ಲಿ ಶರಣರು ತಮ್ಮದೇ ಆದ ಅಂದರೆ ಶಾಸ್ತ್ರೀಯ ಅಥವಾ ಜನಪದದ ಒಂದು ಪ್ರಕಾರದಲ್ಲಿ ಮೈಗೂಡಿಸಿಕೊಂಡಿದ್ದು ಅನೇಕ ಕಾವ್ಯಗಳಿಂದ ಮತ್ತು ಅವರೇ ರಚಿಸಿದ ವಚನಗಳಿಂದ ತಿಳಿಯುವುದು. “ಕಲೆಗಳು ಶಿವಶರಣರ ಕಾಯಕಗಳಾಗಿ ಬಾಳನ್ನೇ ಬೆಳಗಿದವು. ಸಂಗೀತ, ಹಾಸ್ಯ, ನಗೆ, ಚಿತ್ರ, ಶಿಲ್ಪ, ನಾಟ್ಯ, ನಾಟಕ, ಕಾವ್ಯ ಎಲ್ಲವೂ ಶರಣರನ್ನು ಆಶ್ರಯಿಸಿ ಶುದ್ದವಾದವು. ದೇವನಪೂಜೆ ಎನಿಸಿದವು.”[2]
ಶರಣರು; ಕಲೆಗಳಾಗಿರಬಹುದು, ಕಾಯಕಗಳಾಗಿರಬಹುದು ಜೀವನದ ಎಲ್ಲ ವಿಷಯಗಳಿಗೆ ಹೊಸ ರೂಪ ನೀಡಿದರು. ಜನರಿಗೆ ನಿಜ ಬದುಕನ್ನು ಬದುಕಲು ದಾರಿ ಮಾಡಿಕೊಟ್ಟರು. ಶರಣರಲ್ಲಿ ಅನೇಕರು ಕಲಾವಿದರಾಗಿದ್ದರು. ಜನಪದದ ಜೊತೆಗೆ ಶಾಸ್ತ್ರೀಯ ಸಂಗೀತದ ಬಗ್ಗೆಯೂ ಜ್ಞಾನವಿದ್ದುದು ಅವರೇ ರಚಿಸಿದ ವಚನಗಳಿಂದ ತಿಳಿಯುವುದು. ಸಮಗ್ರ ವಚನ ಸಂಪುಟಗಳನ್ನು ತಿರುವಿ ಹಾಕಿದಾಗ ಅನೇಕ ಸಂಗೀತ ಪಾರಿಭಾಷಿಕ ಪದಗಳನ್ನು ಅವರ ವಚನಗಳಲ್ಲಿ ಕಾಣುತ್ತೇವೆ. ೬೪ ಕಲೆಗಳ ಬಗ್ಗೆ ಜ್ಞಾನವಿದ್ದುದು ಸಹ ವಚನಗಳಿಂದ ತಿಳಿಯುತ್ತದೆ.
ಹಾಡಿನ ಬಗ್ಗೆ ಗುರು ಬಸವಣ್ಣನವರ ವಚನಗಳಲ್ಲಿ ಅನೇಕ ಉಲ್ಲೇಖಗಳು ದೊರೆಯುತ್ತವೆ. ಅಷ್ಟೇ ಅಲ್ಲ ಅನೇಕ ವಚನಗಳಲ್ಲಿ ಸಂಗೀತ ಸಂಬಂಧಿ ಪಾರಿಭಾಷಿಕ ಪದಗಳು ದೊರೆಯುತ್ತವೆ. ಬಸವಣ್ಣನವರು ಸ್ವತಃ ಗಾಯಕನಾಗಿದ್ದರು ಎನ್ನುವ ವಿಚಾರವನ್ನು ಹರಿಹರನು ತನ್ನ ಕಾವ್ಯಗಳಲ್ಲಿ ರಗಳೆಗಳ ಮೂಲಕ ಮಾಹಿತಿಗಳನ್ನು ಒದಗಿಸಿಕೊಡುತ್ತಾನೆ. ಬಸವಣ್ಣನವರು ಪೂಜೆಯ ವೇಳೆಯಲ್ಲಿ ಹಾಡಿನೊಂದಿಗೆ ರಾಗಗಳನ್ನು ಮಿಶ್ರಗೊಳಿಸಿ ಪೂಜಿಸುತ್ತಿದ್ದ ಪರಿಯನ್ನು ವೈವಿಧ್ಯಮಯವಾಗಿ ವರ್ಣಿಸಿದ್ದಾನೆ. ಪಾಲ್ಕುರ್ಕಿ ಸೋಮನಾಥನು ತನ್ನ 'ವೃಷಾಧಿಪ ಶತಕ'ದಲ್ಲಿ “ಕವಿ ಪಂಡಿತ ಗಾಯನ ಚಕ್ರವರ್ತಿ"[3] ಎಂದು ಕೊಂಡಾಡಿದ್ದನ್ನು ನೋಡಿದಾಗ ಇವರೊಬ್ಬ ಗಾಯಕರೂ ಆಗಿದ್ದರು ಎನ್ನುವುದು ತಿಳಿದುಬರುತ್ತದೆ. “ಎನ್ನ ಕಾಯವ ದಂಡಿಗೆಯ ಮಾಡಯ್ಯ ...... ಬತ್ತೀಸ ರಾಗವ ಹಾಡಯ್ಯ' ಎನ್ನುವ ವಚನದಲ್ಲಿ ಬಸವಣ್ಣನವರಿಗೆ ಬತ್ತೀಸ ರಾಗಗಳ ಕಲ್ಪನೆ ಇದ್ದುದು ಸ್ಪಷ್ಟವಾಗುತ್ತದೆ.
೧೨ನೇ ಶತಮಾನದ ವಚನಕಾರನಾದ ಚೌಡಯ್ಯನು ಬಹುರೂಪಿ ಚೌಡಯ್ಯನೆಂದೇ ಕರೆಯಲ್ಪಡುತ್ತಿದ್ದನು. ಗಾಯನ, ನರ್ತನವಿದ್ಯೆಗಳಲ್ಲಿ ಅಪ್ರತಿಮನೆನಿಸಿಕೊಂಡಿದ್ದನು. “ಬಹುರೂಪಗಳನ್ನು ಧರಿಸಿ ಚೌಡಯ್ಯನು ಜನರಿಗೆ ಮುದವನ್ನೀಯುತ್ತಿದ್ದ; ಭರತವಿದ್ಯೆಯಿಂದ ರಸಿಕರ ಹೃದಯಗಳನ್ನು ರಂಜಿಸಿದ್ದ. ಚೌಡಯ್ಯನ ಕಲೆಯ ಎಣ್ದೆಸೆಗೆ ಹಬ್ಬಿತ್ತು. ನೂರಾರು ಕಲಾ ಪ್ರಿಯರು ಅವನ ಶಿಷ್ಯತ್ವ ವಹಿಸಿದ್ದರು. ಈತ ತನ್ನ ಶಿಷ್ಯರ ಮೇಳದೊಂದಿಗೆ ಬಹುರೂಪಗಳನ್ನಾಡುತ್ತಿದ್ದನು. ಜನರು ಮೆಚ್ಚಿ ಧನ-ಮನ ನೀಡುತ್ತಿದ್ದರು. ಚೌಡಯ್ಯ ತನ್ನ ಮೇಳದೊಂದಿಗೆ ನಿತ್ಯ ದಾಸೋಹ ಮಾಡುತ್ತಿದ್ದನು.[4] ಇವನ ಬಹುರೂಪ ನಾಟ್ಯವನ್ನು ನೋಡಲು, ಸಂಗೀತವನ್ನು ಕೇಳಲು ದೂರ ದೂರದಿಂದ ಜನರು ಬರುತ್ತಿದ್ದರು. ಅರಸರ ಸಮ್ಮುಖದಲ್ಲಿ, ಜನರ ಸಮ್ಮುಖದಲ್ಲಿ ಅನೇಕಾನೇಕ ಊರುಗಳಲ್ಲಿ ಸ್ಪರ್ಧೆಮಾಡಿ ಜಯಗಳಿಸಿ ಬಂದ ಲಾಭದಿಂದ ದಾಸೋಹವನ್ನು ಮಾಡುತ್ತಿದ್ದ. ಚೌಡಯ್ಯನ ಕಲೆ ಕಾಯಕವಾಗಿತ್ತು. ಲಿಂಗಪೂಜೆಯಾಗಿತ್ತು. ಚೌಡಯ್ಯನ ಕುರಿತು ಹಂತಿ ಹಾಡೊಂದು ಹೀಗಿದೆ:
ಶಿವಲೀಲೆ ಆಡುತಲಿ, ಶಿವನ ತಾಂಡವ ಕುಣಿದ
ಶಿವನೆಂದು ಚೌಡ ಎದೆ ನಡುಗಿ ಜಕ್ಕಯ್ಯ
ಕವಳೇರಿ ಬಿದ್ದ ಭೂತಳಕೆ,
ಮದ್ದಲಿಯ ಸಪ್ಪಳಕೆ ಬಿದ್ದ ಜಕ್ಕನೆ ಎದ್ದು
ಹುದ್ದೆ ಬೇಡೆಂದು ಎರಗಿದನು ಚೌಡನಿಗೆ
ಉದ್ದರಿಸು ಗುರುವೇ ಸೇವಕನು.
“ಚೌಡಯ್ಯನ ಹೆಸರು ಮೂಲೆ ಮೂಲೆಗೂ ಹರಡಿತು. ಜಾತಿಗಾರ ತಂಡಗಳು ಚೌಡಯ್ಯನ ಮೇಳಕ್ಕೆ ಸೇರಿದವು. ಕಾಡಸಿದ್ದರು, ಸುಡಗಾಡ ಸಿದ್ದರು, ಬುಡಬುಡಕೆಗಳು ನಾನಾ ರೀತಿಯವರು ಚೌಡಯ್ಯನ ಮೇಳದಲ್ಲಿ ಕೂಡಿ ಕುಣಿದರು. ತಮ್ಮ ಅಂತಸ್ತನ್ನು ಹೆಚ್ಚಿಸಿಕೊಂಡರು, ರಾಮಕ್ರಿಯಾ ರಾಗ ಚೌಡಯ್ಯನ ಪ್ರೀತಿಯ ರಾಗ, ಆತನ ಆತ್ಮದ ಧ್ವನಿಯೇ ಆ ರಾಗವಾಗಿ ಹೊಮ್ಮುತ್ತಿತ್ತು, ಲಿಂಗ ಪೂಜೆಯಲ್ಲಿ ರಾಮಕ್ರಿಯಾ ರಾಗ ಹಾಡಿ ಸೀಮೆದಾಟಿ, ಸಮಾಧಿ ಸ್ಥಿತಿಯನ್ನು ಪಡೆಯುತ್ತಿದ್ದ ಚೌಡಯ್ಯ. ಲಿಂಗಪೂಜೆ ಎಂದರೆ ರಾಮಕ್ರಿಯಾರಾಗ, ರಾಮ ಕ್ರಿಯಾರಾಗವೆಂದರೆ ಲಿಂಗಪೂಜೆ - ಹೀಗೆ ಅವೆರಡನ್ನು ಬೇರೆ ಮಾಡಲು ಬರುತ್ತಿರಲಿಲ್ಲ. ಲಿಂಗಪೂಜೆಯ ಸಮಯವಲ್ಲದೆ ಬೇರೆ ಇನ್ನೆಲ್ಲಿಯೇ ಹಾಡಲಿ, ಶೋತೃಗಳು 'ದೇವನ' ಆನಂದವನ್ನನುಭವಿಸುತ್ತಿದ್ದರು. ಚೌಡಯ್ಯ ಸಂಪೂರ್ಣ ಲಿಂಗಾನಂದವನ್ನನುಭವಿಸುತ್ತಿದ್ದ."[5]
ಬಹುರೂಪ ಎಂದರೆ - ನಟ ಮತ್ತು ಡೊಂಬ. ಚೌಡಯ್ಯನು ನಟನೂ ಆಗಿದ್ದನು, ಗಾಯಕನೂ ಆಗಿದ್ದನು, ಡೊಂಬರಾಟವನ್ನು ಜಾತಿಗಾರ ಕಲೆಯನ್ನು ಕಾಯಕರೂಪದಿಂದ ದೇವ ಪೂಜೆಯ ಮಟ್ಟಕ್ಕೇರಿಸಿ ಶರಣರ ತತ್ವಗಳನ್ನು ಜನರ ಬಾಳಿನಲ್ಲಿ ಬಿತ್ತಿ ಲೋಕ ಪೂಜ್ಯನೆನಿಸಿದನು. ರಾಗವನ್ನು ಯೋಗವನ್ನಾಗಿಸಿದ ಮಹಾತ್ಮ, ಜನಪದ ಕಲೆಗಳನ್ನು ಚೌಡಯ್ಯ ಬೆಳೆಸಿ ಅವುಗಳಿಗೆ ಬದುಕ ನೀಡಿದಂತಹವನು. ಆತನಿಂದ ಕಲೆಗೆ ವಿಶಿಷ್ಟ ಸ್ಥಾನ ದೊರಕಿತು.
“ಶಿವ ಪಾರಿಜಾತ ಮತ್ತು ರಾಮಕ್ರಿಯಾ ರಾಗ ಕಲಾ ಲೋಕಕ್ಕೆ ಚೌಡಯ್ಯನ ಕೊಡುಗೆಗಳು. ಇನ್ನು ಯಾವ ಯಾವ ಕೊಡುಗೆಗಳು ಆತನಿಂದ ಕಲೆಯ ಲೋಕಕ್ಕೆ ಸಂದವೋ? ಈ ನಿಟ್ಟಿನಲ್ಲಿ ಸಂಶೋಧನೆ ನಡೆಯಬೇಕು”[6]
“ದೇಶಾಕ್ಷಿಯಲ್ಲದ ರಾಗ, ಉಪ್ಪಿಲ್ಲದೂಟ,
ಸಪ್ಪ ಕಾಣಿರೋ ಅಯ್ಯಾ,
ಮಿಕ್ಕಿನ ರಾಗ, ಶಿವನಲ್ಲದ ದೈವ,
ಫಲವಿಲ್ಲ ಕಾಣಿರೋ ಅಯ್ಯಾ,
ಮಿಕ್ಕಿನ ತುಂಬರ ನಾರದನು ಶಿವನ ಕೇಳಿಸುವ ರಾಗ
ಮಹಾಲಿಂಗ ಗಜೇಶ್ವರನ ನೆಚ್ಚಿನ ರಾಗ.”[7]
ಗಜೇಶ ಮಸಣಯ್ಯನಿಗೆ ದೇಶಾಕ್ಷಿರಾಗ ಎಂದರೆ ಬಹಳ ಪ್ರಿಯವಾದುದು. ರಾಗ ಎಂದರೆ ದೇಶಾಕ್ಷಿ. ಕಾರಣ ದೇಶಾಕ್ಷಿ ಅಲ್ಲದ ರಾಗ ಉಪ್ಪಿಲ್ಲದೂಟದಂತೆ, ಮಿಕ್ಕಿನ ರಾಗಗಳು ಶಿವನಲ್ಲದ ದೈವದಂತೆ, ಅವುಗಳಿಂದ ಫಲವಿಲ್ಲ ಎಂದು ಹೇಳುತ್ತಾನೆ. ದೇಶಾಕ್ಷಿ ಎನ್ನುವುದು ಕರ್ನಾಟಕ ಸಂಗೀತದಲ್ಲಿನ ಸದ್ಯದ ಪ್ರಸ್ತುತರಾಗ.
ಲಿಂಗಪೂಜಾ ಸಂದರ್ಭದಲ್ಲಿ ನಿಜಲಿಂಗ ಚಿಕ್ಕಯ್ಯ ಎಂಬ ಶರಣನು ದಂಡಿಗೆಯನ್ನು ನುಡಿಸುವುದರೊಂದಿಗೆ ವಚನಗಳನ್ನು ಹಾಡುತ್ತಾ ಲಿಂಗಕ್ಕೆ ಗಾಯನದೊಂದಿಗೆ ಪೂಜೆಯನ್ನು ಸಲ್ಲಿಸುತ್ತಿದ್ದ. ಮೂಲತಃ ಚಿಕ್ಕಯ್ಯನು ಕಾಶ್ಮೀರ ದೇಶದ ಮಾಂಡವ್ಯಪುರದ ಮಹಾದೇವಿ ರಾಣಿಯ ಹೇಳಿಕೆಯಂತೆ ಬಸವಣ್ಣನವರನ್ನು ವಧಿಸಲು ಕಪಟ ಜಂಗಮ ವೇಷಧಾರಿಯಾಗಿ ಬಂದಿದ್ದನು. ಆದರೆ ಬಸವಣ್ಣನವರ ನಡೆ-ನುಡಿಗಳಿಂದ ಪ್ರಭಾವಿತನಾಗಿ ಅವನ ಅನುಯಾಯಿಯಾಗುತ್ತಾನೆ: ನಿಜಜಂಗಮನಾಗುತ್ತಾನೆ.
ಕಿನ್ನರಿಯ ಬ್ರಹ್ಮಯ್ಯ ಹುಟ್ಟು ಸಂಗೀತಗಾರ, ಜನಪದ ಕವಿ ಸಾವಳಿಗೇಶ ಈತನನ್ನು ಕುರಿತು ಹೀಗೆ ಹಾಡಿದ್ದಾನೆ.
“ಕಿನ್ನರಿಯ ಬೊಮ್ಮಯ್ಯ ಕಿನ್ನರಿಯ ಬಾರಿಸಲು
ಕುನ್ನಿ ಹಸು ಮರೆತು ಕಿವಿಗೊಟ್ಟು | ಕಲ್ಯಾಣ
ಚೆನ್ನಾತು ಲೋಕ ಚೆಲುವಾತು,"[8]
“ಸಂಗೀತ ವಿದ್ಯೆ ಎಂಬುದು ಸಂಗಡವೆ ಬಂದದ್ದು
ಲಿಂಗಿಗಳ ಹಿರಿಮೆ ಹಾಡುತಲಿ | ಕಲ್ಯಾಣ
ಲಿಂಗಮಂಟಪವ ಕೂಡಿದನು ||
ಶಿವಕೊಟ್ಟ ಕಿನ್ನರಿಯ ಭವದೊಳಗೆ ನುಡಿಸುತಲಿ
ಶಿವಬೋದೇ ಜನಕೆ ಮಾಡುತಲಿ | ಬೊಮ್ಮಯ್ಯ
ಭವಿಗಳಿಗೆ ಊದಿ ಶಿವಮಂತ್ರ [9] |
ಕಿನ್ನರಿ ವಾದ್ಯವನ್ನು ಬಾರಿಸುವುದರಲ್ಲಿ ಕಿನ್ನರಿ ಬೊಮ್ಮಯ್ಯ ಸಮರ್ಥ ವಾದನಕಾರ ಕಿನ್ನರಿ ಬಾರಿಸುವುದರಿಂದ ಬಂದ ಹಣದಿಂದ ಜಂಗಮ ದಾಸೋಹ ಮಾಡುತ್ತಿದ್ದನು. ಕಿನ್ನರಿ ವಾದ್ಯ ಕುರಿತು ಸೋಮೇಶ್ವರನ ಮಾನಸೋಲ್ಲಾಸದಲ್ಲಿ ಉಲ್ಲೇಖವು ದೊರೆಯತ್ತದೆ. ತತ, ಸುಶಿರ, ಅವನದ್ದ, ಘನವೆಂಬ ವಾದ್ಯ ಪ್ರಕಾರಗಳ ಉಪಯೋಗ ದೇವಾಲಯ, ಅರಮನೆ, ಉತ್ಸವ, ಯುದ್ಧ ಮತ್ತು ಇತರ ಕಾರ್ಯಗಳಲ್ಲಿ ಇದ್ದುದನ್ನು ಸೋಮೇಶ್ವರನು ತಿಳಿಸುತ್ತಾನೆ. ಅವುಗಳಲ್ಲಿ ಕೆಲವು ಕರ್ನಾಟಕಕ್ಕೆ ವಿಶೇಷವಾಗಿದ್ದಂತೆ ಕಂಡುಬರುತ್ತದೆ. ನಿದರ್ಶನವಾಗಿ ತತ ವರ್ಗದ ಸುಮಾರು ೨೦ ವೀಣೆಗಳು ಮತ್ತು ತಂತಿವಾದ್ಯಗಳು ಕರ್ನಾಟಕದಲ್ಲಿ ಬಳಕೆಯಲ್ಲಿದ್ದವು. ಅವುಗಳಲ್ಲಿ ಕಿನ್ನರಿ ವಾದ್ಯಕ್ಕೆ ಹೆಚ್ಚು ಪ್ರಾಶಸ್ತ್ಯವಿತ್ತೆಂದು ತಿಳಿಯುತ್ತದೆ. ಈ ಹಿನ್ನೆಲೆಯಲ್ಲಿ ವಚನಕಾರ ಕಿನ್ನರಿ ಬೊಮ್ಮಯ್ಯನ ಹೆಸರು ಉಲ್ಲೇಖನೀಯ. ಮಾನಸೋಲ್ಲಾಸದಲ್ಲಿ ಇತರ ವೀಣೆಗಳ ಪ್ರಸ್ತಾಪವಿದ್ದರೂ ದೀರ್ಘ ವಿವರಣೆ ಇರುವುದು ಕಿನ್ನರಿಯ ಬಗೆಗೆ, ಸಂಗೀತ ರತ್ನಾಕರದಲ್ಲಿಯೂ ಇದೇ ರೀತಿ ದೀರ್ಘ ವಿವರಣೆ ಇದೆ. ವಿಶೇಷವೆಂದರೆ ಇವೆರಡು ಗ್ರಂಥಗಳು ಕರ್ನಾಟಕದಲ್ಲಿ ರಚಿತವಾದವು. ೧೧೧೬-೨೭ ರಲ್ಲಿ ಚಾಲುಕ್ಯ ಚಕ್ರವರ್ತಿ ಮುಮ್ಮಡಿಸೋಮೇಶ್ವರನಿಂದ ಮಾನಸೋಲ್ಲಾಸ ರಚಿತವಾದದು. ನೂರು ಅಧ್ಯಯನಗಳನ್ನೊಳಗೊಂಡ ಈ ಗ್ರಂಥದಲ್ಲಿ ಗೀತವಿನೋದ, ವಾದ್ಯವಿನೋದ, ನೃತ್ಯವಿನೋದ ಎಂಬ ಮೂರು ವಿನೋದಗಳು ಸಂಗೀತಕ್ಕೆ ಸಂಬಂಧಪಟ್ಟಿವೆ. ಅಲ್ಲಿ ಈ ಭಾಗದಲ್ಲಿ ಪ್ರಚಲಿತದಲ್ಲಿದ್ದ ಈ ಕಲೆಗಳ ವಿಸ್ತಾರವಾದ ವಿವರಣೆ ಇದೆ. ಕಿನ್ನರಿ ವಾದ್ಯವನ್ನು ನುಡಿಸುವುದರಲ್ಲಿ ಪ್ರಾವಿಣ್ಯತೆಯನ್ನು ಬೊಮ್ಮಯ್ಯನು ಪಡೆದಿದ್ದನು.
“ಕಂಕರಿ ಎನ್ನುವುದು ಜನಪದರು ಅನಾದಿಕಾಲದಿಂದ ರೂಪಿಸಿ ತಮ್ಮ ವಿವಿಧ ಹಾಡು ಕುಣಿತ ಉತ್ಸವಗಳ ಸಂದರ್ಭದಲ್ಲಿ ಉಪಯೋಗಿಸುತ್ತಾ ಬಂದ ಒಂದು ಜನಪದ ವಾದ್ಯ ವಿಶೇಷ. ಚೌಡಿಕೆ ಅಥವಾ ತುಂತುಣಿ ಮಾದರಿಯನ್ನು ಹೋಲುವ ಕಂಕರಿ, ಶಿಷ್ಟಪದ ಸಂಗೀತ ವಾದ್ಯದಲ್ಲಿರುವ ಘಟ ವಾದ್ಯವನ್ನು ವಿಶೇಷವಾಗಿ ಹೋಲುವಂತಹದ್ದು. ಕಕ್ಕಯ್ಯನು ಈ ವಾದ್ಯ ವಾದನದಲ್ಲಿ ವಿಶೇಷ ಪರಿಣಿತಿಯನ್ನು ಪಡೆದಿದ್ದರಿಂದ ಜನರು ಆತನನ್ನು ಕಂಕರಿ ಕಕ್ಕಯ್ಯನೆಂದೇ ಕರೆದರು.*[10] ಕಂಕರಿ ವಾದ್ಯವನ್ನು ಬಾರಿಸಿ ಹಾಡುತ್ತಾ, ಕುಣಿಯುತ್ತಾ ದಾಸೋಹ ಮಾಡುತ್ತ ಕಕ್ಕಯ್ಯ ಜೀವಿಸುತ್ತಿದ್ದ, ಶಾಂತಲಿಂಗ ದೇಶಿಕ ಕಂಕರಿ ಕಕ್ಕಯ್ಯನ ಬಗ್ಗೆ ಹೀಗೆ ಬಣ್ಣಿಸುತ್ತಾನೆ.
'ಕಂಕರಿಯೆಸೆವ ಠ
ಣಂಕಾರ ಕೊಡನತಿ
ಪ್ರೀಂಕದಿಂ ಕಕ್ಕಯ್ಯನಿದಿರಾ |
ಶಂಕರ ನಟಿಸಿದೋಲ್
ಭೋಂಕನೆದ್ದತ್ಯಂತ
ಬಿಂಕದಿಂ ಕುಣಿದಾಮುಂಡ” [11]
ವೈರಾಗ್ಯನಿಧಿ, ಬಸವಣ್ಣನವರ ಸಮಕಾಲೀನನಾದ ಅಲ್ಲಮನು ತನ್ನ ದಿವ್ಯ ವ್ಯಕ್ತಿತ್ವದೊಂದಿಗೆ ಎಲ್ಲ ಶರಣರೊಡಗೂಡಿ ಅನುಭವ ಮಂಟಪದ ಅಧ್ಯಕ್ಷನಾಗಿ ಕಾರ್ಯ ಮಾಡಿದವನು. “ಅಲ್ಲಮ್ಮನ ತಂದೆ ನಿರಹಂಕಾರ, ತಾಯಿ ಸುಜ್ಞಾನಿ, ಇವರ ತಂದೆ ಅಂತಃಪುರದವರಿಗೆ ಭರತನಾಟ್ಯ, ಸಂಗೀತ ಮುಂತಾದ ಕಲೆಗಳನ್ನು ಕಲಿಸುವ ಕಾಯಕದವರಾಗಿದ್ದರು. ಇವರಿಗೆ ಮದ್ದಳೆಯವಾದನದಲ್ಲಿ ಗೀತ ಪ್ರಬಂಧಾದಿ ಜಾತಿಗಳನ್ನು ನುಡಿಸುವಲ್ಲಿ ಪರಿಣಿತಿ ಇತ್ತು. ಅದರಂತೆಯೇ ಮಗ ಅಲ್ಲಮ ಸಹ ಮದ್ದಳೆ ನುಡಿಸುವಲ್ಲಿ ಪರಿಣಿತಿ ಹೊಂದಿದನು. ದಿನ ನಿತ್ಯವು ಸಂಗೀತ ನೃತ್ಯಾದಿ ಕಲೆಗಳ ಒಡನಾಟ ನಾದಮಯ ವಾತಾವರಣದಲ್ಲಿ ಬೆಳೆದ ಅಲ್ಲಮ ಸಕಲ ಕಲಾ ಪಾರಂಗತನು ಆದನು. ಮದ್ದಳೆ ವಾದನದಲ್ಲಿ ನಿಷ್ಣಾತನೆನಿಸಿದ. ಇವನು ಪ್ರತಿದಿನ ತಪ್ಪದೆ ಗೊಗ್ಗೇಶ್ವರ ದೇವಾಲಯದಲ್ಲಿ ಮದ್ದಳೆ ನುಡಿಸಿ ತನ್ಮೂಲಕ ಕಲಾ ಸಾಧನೆ ಮಾಡುವುದು ಅಲ್ಲಮನ ದೈನಂದಿನ ದಿನಚರಿಯಾಗಿತ್ತು”[12] ಅಲ್ಲಮನ ಮದ್ದಳೆ ವಾದ್ಯದ ವಿವಿಧ ಗತಿಗಳ ಬಗ್ಗೆ ಹರಿಹರನು ತನ್ನ ಪ್ರಭುದೇವರ ರಗಳೆಯಲ್ಲಿ “ನುತಗತಿ ನವೀನಗತಿ ರಸಗತಿಗಳೆಂದೆಂಬ ನುಣ್ಗತಿ ಸುಗಂಭೀರ ಗತಿ, ಸಾಂದ್ರಗತಿಯೆಂದೆಂಬ ಜಾಣ್ಗತಿ, ಮಧುರಗತಿ ಮನೋಹರ ಗತಿಯೆಂದೆಂಬ ಸುಗತಿ, ಸರ್ವಂಗೆ ಕರಣಾಭರಣವಾಗುತಿರೆ"[13] ಎಂದು ಹೇಳುತ್ತಾನೆ. ಡಾ. ಎಲ್. ಬಸವರಾಜು ಅವರು ಶಿವದಾಸ ಗೀತಾಂಜಲಿಯಲ್ಲಿ “ಅಲ್ಲಮನ ಎಡಗೈಯಲ್ಲಿ ಶಿವಲಿಂಗ ಬಲಗೈಯಲ್ಲಿ ಒಂದು ವೀಣಾದಂಡ ಅಥವಾ ತಂಬೂರಿ ಇದ್ದವು, ಶಿವಲಿಂಗವು ಅವನ ವ್ಯಷ್ಟಿ ಸಿದ್ಧಿಗೆ ಸಂಕೇತವಾಗಿದ್ದರೆ, ತಂಬೂರಿಯು ಅವನ ಬೋಧೆಯ ಮಾಧ್ಯಮವಾದ ವಚನ ಮತ್ತು ಗೀತೆಗಳ ಪ್ರಸಿದ್ಧಿಗೆ ಮತ್ತು ಸಮಷ್ಟಿಸಿದ್ಧಿಗೆ ಸಾಧನವಾಗಿತ್ತು”[14] ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲಮನು ಹಾಡುತ್ತಿದ್ದನು ಎಂದು 'ಎಂಬತ್ತು ಕೋಟಿ ವಚನವ ಹಾಡಿ ಹಲವು ಹಂಬಲಿಸಿತೆನ್ನ ಮನವು. ಗುಹೇಶ್ವರನೆಂಬ ಲಿಂಗವನರಿದ ಬಳಿಕ ಗೀತವೆಲ್ಲ ಒಂದು ಮಾತಿನೊಳಗು' ಎಂಬ ವಚನದಿಂದ ತಿಳಿಯುತ್ತದೆ. ಮದ್ದಳೆ ವಿದ್ವಾಂಸನಾಗಿದ್ದರಿಂದ ಅವನ ಅನೇಕ ವಚನಗಳಲ್ಲಿ ತಾಳ ಲಯಗಳ ಬಗ್ಗೆ ಉಲ್ಲೇಖಗಳು ದೊರೆಯುತ್ತವೆ.
“ಮಾತೆಂಬುದು ಜ್ಯೋತಿರ್ಲಿಂಗ, ಸ್ವರವೆಂಬುದು ಪರತತ್ವ, ತಾಳೋಷ್ಟ ಸಂಪುಟವೆಂಬುದು ನಾದಬಿಂದು ಕಳಾತೀತ” ಈ ಮಾತುಗಳು ಸಂಗೀತದ ಬಗೆಗೆ ಅವನಿಗಿದ್ದ ಗೌರವವನ್ನು ಸೂಚಿಸುತ್ತವೆ. ಹರಿಹರ ಚಾಮರಸರು ಅಲ್ಲಮನನ್ನು ನುರಿತ ಮದ್ದಳೆ ಕಲಾವಿದನೆಂದು ವರ್ಣಿಸಿದ್ದಾರೆ.
ಅಕ್ಕಮಹಾದೇವಿಯ ವಚನಗಳಲ್ಲಿ ಹಾಡುವೆ, ಪಾಡುವೆ, ಗೀತವ ಎನ್ನುವ ಪದಗಳೊ ವಾದ್ಯಗಳ ಉಲ್ಲೇಖಗಳು ಹೇರಳವಾಗಿ ಸಿಗುತ್ತವೆ. “ಸಮರತಿಯಿಂದ ನಿನ್ನ ಹಾಡುವೆ", “ಜಂಗಮಕ್ಕೆ ಸಂಗೀತ ವಾದ್ಯಗಳ ಕೇಳಿಸುವೆ”, “ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ”, “ನಾದಬಿಂದುಗಳು ಮುಟ್ಟಲರಿಯವು ನಿಮ್ಮನೆಂತು ಹಾಡುವೆ, “ಪರವಶದೊಡನೆ ಹಾಡುವೆ” ಎನ್ನುವ ಸಂಗೀತ ಸಂಬಂಧಿ ಮಾತುಗಳು ಬರುತ್ತವೆ. ಇವುಗಳನ್ನು ಅವಲೋಕಿಸಿದಾಗ ಅಕ್ಕಮಹಾದೇವಿಗೆ ಸಂಗೀತದ ಜ್ಞಾನ ಇತ್ತು ಎನ್ನುವುದು ತಿಳಿಯುತ್ತದೆ. ಈಕೆಯ ವಚನಗಳಲ್ಲಿ ಭಾವಗೀತಾತ್ಮಕ ಅಂಶಗಳು ವಿಶೇಷವಾಗಿ ಸಿಗುತ್ತದೆ ಒಂದು ಹಿಗಿದೆ:
“ಆಡುವುದು ಹಾಡುವುದು
ಹೇಳುವುದು ಕೇಳುವುದು
ನಡೆಯುವುದು ನುಡಿಯುವುದು
ಸರಸ ಸಮ್ಮೇಳವಾಗಿಪ್ಪುದಯ್ಯಾ ಶರಣರೊಡನೆ
ಚೆನ್ನಮಲ್ಲಿಕಾರ್ಜುನಯ್ಯಾ
ನೀ ಕೊಟ್ಟ ಆಯುಷ್ಯವುಳ್ಳನ್ನಕ್ಕರ ಲಿಂಗ ಸುಖಿಗಳ
ಸಂಗದಲ್ಲಿ ದಿನಂಗಳ ಕಳೆವೆನು.” [15]
ಈ ವಚನದಿಂದ ಎಲ್ಲ ಶರಣ ಶರಣೆಯರು ಅನುಭವ ಮಂಟಪದಲ್ಲಿ ಶಿವತತ್ವಗಳನ್ನು ಆಡುವ, ಹಾಡುವ, ಕೇಳುವ, ಹೇಳುವ ಪರಿಪಾಠವಿತ್ತು ಎಂದು ತಿಳಿಯುತ್ತದೆ. ಇನ್ನೊಂದು ವಚನದಲ್ಲಿ
“ಕೊಳಲ ದನಿಗೆ ಸರ್ಪ ತಲೆದೂಗಿದಡೇನು
ಒಳಗಣ ವಿಷಯ ಬಯಕೆ ಬಿಡದನ್ನಕ್ಕರ”?
ಹಾಡಿದಡೇನು, ಕೇಳಿದಡೇನು
ತನ್ನಲ್ಲುಳ್ಳ ಅವಗುಣ ಬಿಡದನ್ನಕ್ಕ
ಒಳಗ ಅರಿದು ಹೊರಗೆ ಮರೆದವರ
ನೀ ಎನಗೆ ತೋರಯ್ಯಾ ಚೆನ್ನಮಲ್ಲಿಕಾರ್ಜುನ” [16]
ಎಂದು ಕೊಳಲ ವಾದ್ಯದ ಬಗ್ಗೆ ಹೇಳುತ್ತಾಳೆ. “ಸ್ವರವತ್ತಿ ಪಾಡುವ ಕೋಗಿಲೆಗಳಿರಾ" ಎಂದು ಸ್ವರದ ಬಗ್ಗೆ ಹೇಳುತ್ತಾಳೆ, ಜಂಗಮಕ್ಕೆ ಸಂಗೀತ ವಾದ್ಯಂಗಳ ಕೇಳಿಸುವೆ ಎಂದು ಸಂಗೀತ ವಾದ್ಯಗಳ ಬಗ್ಗೆ ಹೇಳುತ್ತಾಳೆ.
“ಈಕೆಯೂ ಸಹ ಕಲ್ಯಾಣದ ಪ್ರವಚನ ಕಲಾವಿದೆ. ಕಲ್ಯಾಣದ ಶಿವಶರಣೆಯರಿಗೆ ಶಿವಕಥೆ, ಶಿವಪುರಾಣಗಳನ್ನು ಹೇಳುತ್ತಾ ಈ ಕಾಯಕದಿಂದ ಬಂದ ಹಣದಲ್ಲಿ ಜಂಗಮದಾಸೋಹ ಮಾಡುತ್ತಾ, ಶಿವನ ಕೃಪೆಗೆ ಒಳಗಾದಳು.”[17].
“ಈಕೆ ಕಲ್ಯಾಣದಲ್ಲಿದ್ದು ದೇವಪುರಾಣ, ದೇವ ಪ್ರವಚನಗಳನ್ನು ಜನತೆಗೆ ಸಾರುವ ಕಾಂಯುಕದಿಂದ ದೇವನನ್ನು ಒಲಿಸಿಕೊಂಡಳು, ಪ್ರವಚನ ಕಲೆ ಹಲವಾರು ಕಲೆಗಳನ್ನೊಳಗೊಂಡ ಪ್ರಮುಖ ಕಲೆ, ಅತ್ಯತ್ತಮ ಕಲೆ. ಇದರ ಕಲಾವಿದರಾದವರಿಗೆ ಭಾಷಾಜ್ಞಾನ, ಕಥೆಗಳನ್ನು ಹೆಣೆದು ಉತ್ತಮವಾಗಿ ಪ್ರಸ್ತುತಪಡಿಸುವ ಬಗೆ, ಗಾಯನ ಕಲೆ, ನೃತ್ಯಕಲೆ, ಸನ್ನಿವೇಶ ಪ್ರಜ್ಞೆ ನವರಸಗಳನ್ನು ಅಭಿವ್ಯಕ್ತಗೊಳಿಸುವ ರೀತಿ, ಜ್ಞಾಪಕ ಶಕ್ತಿ ಇತ್ಯಾದಿಗಳೆಲ್ಲವೂ ಇರಬೇಕು. ವಿಮಳಾದೇವಿಯಂತಹ ಹೆಣ್ಣು ಹನ್ನೆರಡನೇ ಶತಮಾನದಲ್ಲಿಯೇ ತನ್ನ ಪರಿಶ್ರಮ, ಸಾಧನೆಗಳಿಂದ ಅದ್ವಿತೀಯಳೆನಿಸಿರುವುದು ಹೆಣ್ಣಿನ ಅಂದಿನ ಸ್ಥಾನಮಾನಗಳನ್ನು ಬಿಂಬಿಸುತ್ತದೆ.” [18]
ರಾಗದ ಸಂಕಣ್ಣ ಸಂಗೀತ ಕಲಾವಿದನಾಗಿದ್ದ. ಈತನ ಗಾಯನಕ್ಕೆ ಮೆಚ್ಚಿ ಚಾಲುಕ್ಯ ವಿಕ್ರಮಾದಿತ್ಯ ಈತನನ್ನು ಆಸ್ಥಾನದ ಸಂಗೀತ ವಿದ್ವಾಂಸನನ್ನಾಗಿ ನೇಮಿಸಿಕೊಂಡಿದ್ದನು. ರಾಗದ ಸಂಕಣ್ಣನ ಮೇಲೆ ಕೆಲವು ವಿದ್ವಾಂಸರು ಅಸೂಯೆ ಪಟ್ಟಾಗ ರಾಗದ ಸಂಕಣ್ಣನು ೩೨ ರಾಗಗಳನ್ನು ಹಾಡಿದನು. ಈತನ ಗಾಯನವನ್ನು ಮೆಚ್ಚಿ 'ರಾಗರಸಾಂಕ' ಎಂಬ ಬಿರುದನ್ನು ಕೊಟ್ಟು ಗೌರವಿಸಿದನು. “ಗೌಳ ದೇಶದ ಗಾನಜ್ಞನೊಬ್ಬ ಇದನ್ನು ತಿಳಿದು ರಾಗದ ಸಂಕಣ್ಣನೊಂದಿಗೆ ಸ್ಪರ್ಧಿಸುವುದಾಗಿ ತಿಳಿಸಿ ಹೊರನಡೆದನು. ದೂರದಲ್ಲಿ ಸುಶ್ರಾವ್ಯವಾದ ಗಾಯನ ಕೇಳತೊಡಗಿತು. ನೋಡುವಲ್ಲಿ ಗೋವು ಕಾಯುವ ಗೋವಳಿಗನೊಬ್ಬ ಹಾಡುತ್ತಿದ್ದ. ಅವನ ಗಾಯನದಿಂದ ಚಕಿತಗೊಂಡ ಗಾನ ನಿನ್ನ ಊರು ಯಾವುದೆಂದು ಕೇಳಿದ. ಗೋಪಾಲನು - 'ನನ್ನ ತಾಯಿ ರಾಗ ರಸಾಂಕನ ಮನೆಗೆಲಸವನ್ನು ಮಾಡುವಳು. ನಾನು ಅವಳೊಂದಿಗೆ ಅವರ ಮನೆಗೆ ಆಗಾಗ್ಗೆ ಹೋಗಿ ಬರುತ್ತಿರುವನಾಗಿ, ಅಲ್ಲಿನ ಗಾಯನ ಸ್ವಲ್ಪ ಕಲಿತೆ' ಎನ್ನಲಾಗಿ, ಗಾನಜ್ಞನು ರಾಗದ ಸಂಕಣ್ಣನ ಗಾಯನದ ಪರಿಯನ್ನು - ಮಟ್ಟವನ್ನು ಊಹಿಸಿ, ಭಯಗೊಂಡು ರಾಜನಿಗೂ ತಿಳಿಸದೆ ತನ್ನೂರಿಗೆ ಹೊರಟು ಹೋದನು. ಮಾರನೆಯ ದಿನ ಗಾನಜ್ಞನು ಇಲ್ಲದಿರುವುದನ್ನು ತಿಳಿದಾಗ, ಚಂದಾವೂರಿನ ವಾತಾವರಾಳಿಯು ರಾಗವನ್ನು ಹಾಡಲು, ರಾಜನು ಮೆಚ್ಚಿ 'ನೀನಾರ ಶಿಷ್ಯ' ಎಂದು ಕೇಳಿದಾಗ, ತಾನು ಸಂಕಣ್ಣನ ಶಿಷ್ಯ ಎಂದು ವಾತಾವರಾಳಿ ಹೇಳಲು, ರಾಗದ ಸಂಕಣ್ಣನಿಗೇ ಜಯ ಲಭಿಸಿತು. ಮುಂದೆ ಗುರು ಶಿಷ್ಯರು ಇಬ್ಬರು ಕೂಡಿ 'ರಾಗರಸಾಂಕ', 'ಗಾನಜ್ಜ ಮದಗಜಸಿಂಹ' ಎಂದು ಬಿರುದು ಅಮರವಾಗುವಂತೆ ಗಾನ ಮಾಡಿದರು. ಈ ಕಥೆಯಲ್ಲಿ ಗಮನಿಸಬೇಕಾದ ಅಂಶಗಳೇನೆಂದರೆ ರಾಗಗಳು ಮೂವತ್ತೆರಡೇ ಇವೆ, ರಾಗಕ್ಕೆ ಅಥವಾ ಗಾನಕ್ಕೆ ಹಿಂದೆ ಎಷ್ಟರ ಮಟ್ಟಿನ ಆದ್ಯತೆ ಇತ್ತು. ಹಿಂದೆ ಸ್ಪರ್ಧೆಗಳೇರ್ಪಡುತ್ತಿದ್ದವು. ರಾಜನ ಕೃಪಾಶ್ರಯ ಕಲೆಗೆ ಇತ್ತು. ಈ ವಿಷಯ ಈ ಪ್ರಸಂಗದಿಂದ ತಿಳಿದುಬರುತ್ತದೆ”.[19]
ಕಾಯಕವೇ ಶಿವಭಕ್ತಿ, ಕಾಯಕವೇ ಶಿವಭಜನೆ
ಕಾಯಕದೇ ಲಿಂಗ ಶಿವಪೂಜೆ ಶಿವಯೋಗ
ಕಾಯಕವೆ ಕಾಯುವ ಕೈಲಾಸ.
ಕಾಯಕ ಜೀವಿಯಾದ ಕುಂಬಾರ ಗುಂಡಯ್ಯ ತಾ ಮಾಡಿದ ಮಡಿಕೆಗಳನ್ನು ನುಡಿಸಿ ಭಕ್ತಿಯಿಂದ ಕುಣಿಯುತ್ತಿದ್ದ. ಈತನ ಭಕ್ತಿಗೆ ಮತ್ತು ವಾದನಕ್ಕೆ ಶಿವನು ಸಹ ಕುಣಿದ. ಶಿವ ಕುಣಿಯುವುದನ್ನು ಕಂಡು ಸಕಲ ದೇವತೆಗಳೇ ಕುಣಿದರು ಎಂದು ಹರಿಹರನ ರಗಳೆಯಲ್ಲಿ ಹೇಳಲಾಗಿದೆ:
ಶಿವನ ಕಂಡಾ ಭಕ್ತಂ ಕುಣಿಯಲು
ಶಿವಭಕ್ತನ ಕೊಡಭವಂ ಕುಣಿಯಲು
ಈರ್ವರನೀಕ್ಷಿಸಿ ಗಣಪತಿ ಕುಣಿಯಲು
ಸರ್ವ ಸ್ಥಾವರ ಜಂಗಮವಾಡಲು
ಮಡಕೆಯ ಶಬ್ದ ಕಾಡುತ್ತಿರ್ದಂ.
ಕುಂಭ ಅಥವಾ ಮಡಿಕೆಯ ನುಡಿಸುವ ಕಲಾವಿದ ಗುಂಡಯ್ಯ, ಕಾಯಕದೊಂದಿಗೆ ದಾಸೋಹ ಮಾಡುವ ಪ್ರವೃತ್ತಿ ಇವನದಾಗಿತ್ತು.
ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ ಗುಂಡಯ್ಯನನ್ನು ಕುರಿತು ಹೀಗೆ ಹೇಳುತ್ತದೆ: “ಕಾಯಕವ ಮಾಡುವಲ್ಲಿ ಷಟ್‌ಚಕ್ರಂಗಳನೆ ತಿಗುರಿಯಂ ಮಾಡಿ ಜ್ಞಾನವೆಂಬ ಸೂತ್ರವ ಸುತ್ತಿ, ಸ್ವಪ್ನದ ತೋರಿಕೆಯಂಬ ಕೆಸರ ತಿಗುರಿಯ ಮೇಲಿಟ್ಟು ನಿಷ್ಠೆಯೆಂಬ ಕೋಲಿನಲ್ಲಿ ತಿರುಗಿಸಿ, ಭಕ್ತಿಯೆಂಬ ಮಡಕೆಯಂ ಮಾಡಿ, ಸುಜ್ಞಾನವೆಂಬ ಕೊಡತೆಯಿಂದ ತಟ್ಟುವಾಗ ಆ ಧ್ವನಿಯು ಕರಡೆ, ಕೌಸಾಳೆ, ಢಕ್ಕೆ, ಡಮರುಗ, ಮುರಜೆ, ಮೃದಂಗ, ಮುಡುಕು, ಕಹಳೆಯಂತೆ ಕೇಳಿಬರುತ್ತಿತ್ತು. ಗುಂಡಯ್ಯನಾದರೋ ತನ್ನ ಕಾಯಕದಲ್ಲಿ ಸಂಪೂರ್ಣ ಪರವಶವಾಗಿರಲು ಕೈಲಾಸದಲ್ಲಿದ್ದ ಶಿವನು, ಇವನ ತಾಳದ ಲಯಕ್ಕೆ ತಲೆದೂಗಿ ಕುಣಿದು ಸಂತೋಷಿಸುತ್ತಿರಲು, ಗಿರಿಜೆಯು ತಾನು ಗುಂಡಯ್ಯನನ್ನು ನೋಡಬೇಕೆಂದು ಶಿವನಲ್ಲಿ ಪ್ರಾರ್ಥಿಸಿದಳು. ಶಿವನು ಗಿರಿಜೆಗೆ “ನೀನು ಆಕಾಶದಲ್ಲಿಯೇ
ಇದ್ದು ನೋಡುತ್ತಿರು' ಎಂದು ಹೇಳಿ ಭೂಲೋಕಕ್ಕೆ ಬಂದು ಕುಂಬಾರ ಗುಂಡಯ್ಯನ ಕುಂಭದ ಧ್ವನಿಗೆ, ತಾಳದ ಗತಿಗೆ ಕುಣಿಯುತ್ತಿರಲು, ಡಮರುಗ ಢಣಢಣವೆನ್ನುತ್ತಿರಲು, ಜಡೆಯೊಳಗಿನ ಗಂಗೆ ತುಳುಕಾಡುತ್ತಿರಲು, ರುಂಡಮಾಲೆಗಳು ಕುಬುಬು ಎಂದು ಸದ್ದು ಮಾಡುತ್ತಿರಲು, ಗೆಜ್ಜೆಗಳು ಝಣಝಣರು - ಫಲಿಘಲಿರು ಎಂದೂ, ಘಂಟೆಯು ಠಣಠಣ ಎಂದೆನ್ನುತಿರಲು ಗಿರಿಜೆಯು ನಾಟ್ಯದ ಸೊಬಗನ್ನು ನೋಡಿ ಹರ್ಷಿಸಿದಳು. ಮುಂದೆ ಗುಂಡಯ್ಯನಿಗೆ ಶಿವ ದರುಶನವಾಯಿತು. ಗುಂಡಯ್ಯನ ಕುಂಭದ ಅಥವಾ ಮಡಿಕೆಯ ನುಡಿಸುವಿಕೆಯು ಇಂದಿನ ಕರ್ನಾಟಕ ಸಂಗೀತ ಪದ್ಧತಿಯ ಸಂಗೀತ ಕಛೇರಿಗಳಲ್ಲಿ ಪಕ್ಕವಾದ್ಯವಾಗಿ ಬಳಸುವ ಘಟವಾದ್ಯವನ್ನು ನೆನಪಿಸುತ್ತದೆ. ಕುಂಬಾರ ಗುಂಡಯ್ಯನಿಂದಲೇ ಈ ವಾದ್ಯ ಪ್ರಾರಂಭಗೊಂಡಿರಬೇಕು. ಒಟ್ಟಿನಲ್ಲಿ ಹೊಸ ಬಗೆಯ ಒಂದು ವಾದ್ಯವು ಗುಂಡಯ್ಯನಿಂದ ಚಾಲನೆಗೊಂಡಿರುವುದು ಒಂದು ಮುಖ್ಯ ಸಂಗತಿ. ದಕ್ಷಿಣದ (ಕನ್ನಡದ) ಇಂತಹ ಭಕ್ತರಿಂದಲೆ ಕರ್ನಾಟಕ ಸಂಗೀತದಲ್ಲಿ `ಘಟಂ' ಒಂದು ವಾದ್ಯವಾಗಿ ಪರಿಣಮಿಸಿದಂತೆ ಕಂಡುಬರುತ್ತದೆ ಎಂಬ ಪಂಡಿತರ ಮಾತು ದಿಟ” [20]
ಈತನು ಮದ್ದಳೆ ವಾದ್ಯವನ್ನು ನುಡಿಸುವ ಕಲಾ ಪಾರಂಗತನಾಗಿದ್ದ. ಮದ್ದಳೆ ನುಡಿಸುತ್ತ ನರ್ತನವನ್ನು ಮಾಡುತ್ತಾ ದಾಸೋಹ ಮಾಡುವ ಕಾಯಕ ಇವನದಾಗಿತ್ತು. ಈತ ನರ್ತನವನ್ನು ಮಾಡುತ್ತ ಶಿವಭಕ್ತಿಯನ್ನು ಸಾರುತ್ತ ಇರುವಾಗಲೇ ಲಿಂಗೈಕ್ಯನಾದನೆಂದು ತಿಳಿದು ಬರುತ್ತದೆ.
ಇವನೊಬ್ಬ ಗಾಯಕ. ಇವನ ಅಪ್ರತಿಮ ಗಾಯನಕ್ಕೆ ಮಾರುಹೋದ ಭಕ್ತರು ಇವನಿಗೆ ಗಾಯನದ ಕಾಯಕವನ್ನೇ ನೀಡಿದ್ದರು. ಆ ಕಾಯಕದಿಂದ ಬಂದ ಹಣವನ್ನು ದಾಸೋಹಕ್ಕೆ ವಿನಯೋಗಿಸುತ್ತಿದ್ದನು. ಇವನ ಗಾಯನವು ದೇವಾಲಯದ ಮಂಗಳಕಾರ್ಯದಲ್ಲಿ ಮತ್ತು ಉತ್ಸವ, ಮದುವೆ ಸಮಾರಂಭದಲ್ಲಿಯೂ ನಡೆಯುತ್ತಿತ್ತು ಎಂದು ಈತನ ಚರಿತ್ರೆಯಿಂದ ತಿಳಿದುಬರುತ್ತದೆ.
ವಿಲಕ್ಷಣ ವೇಷವನ್ನು ಧರಿಸಿ ಕೋಡಗನಂತೆ ಕುಣಿಯುವ ಕಲೆಯನ್ನು ಇವನು ಕರಗತ ಮಾಡಿಕೊಂಡಿದ್ದನು. ಇದೊಂದು ಜಾನಪದ ಕಲೆ. ಇದಕ್ಕೆ ಕಿಳ್ಳೆಕೇತರ ಕುಣಿತ ಎಂದು ಹೆಸರು.
ಈಕೆ ಮದ್ದಳೆ ವಾದ್ಯವನ್ನು ನುಡಿಸುವ ಕಲಾವಿದೆಯಾಗಿದ್ದಳು. “ಸೊಗಸಾಗಿ ಮದ್ದಳೆಯ ಬಾಜಿಸಿ, ಶಿವನ ಕೃಪೆವಡೆದಳು ತುಂಗಕುಚೆ ಬಾಚಲೆಯು.” ಎಂದು ಗುರುರಾಜಚಾರಿತ್ರದಲ್ಲಿ ಉಲ್ಲೇಖ ಸಿಗುತ್ತದೆ. ೧೨ನೆಯ ಶತಮಾನದಲ್ಲಿ ಹೆಂಗಸರು ಕೂಡ ಮದ್ದಳೆಯಂತಹ ವಾದ್ಯ ನುಡಿಸುವುದನ್ನು ಕರಗತ ಮಾಡಿಕೊಂಡಿದ್ದರು ಎಂಬುದಕ್ಕೆ ಇಲ್ಲಿ ಬಾಚಲೆ ಸಾಕ್ಷಿಯಾಗಿ ನಿಲ್ಲುವಳು.
ಈಕೆ ಉಷ್ಟಾಂಗವೆಂಬ ವಾದ್ಯವನ್ನು ಊದಿ ಶುದ್ಧ ಸ್ವರಗಳನ್ನು ಉಂಟುಮಾಡಿ ಶಿವನ ಪೂಜೆ ಮಾಡುತ್ತಿದ್ದಳು ಎಂದು ತಿಳಿದು ಬರುತ್ತದೆ. ಗುರುರಾಜಚಾರಿತ್ರದಲ್ಲಿ
“ಸ್ವರನೋಲಗದಿಯುಷ್ಟಾಂಗದಿಂ ಸ್ವರ ಶುದ್ದದಲ್ಲೂದಿ ಶಿವನೊಲವ ಭೃಂಗನಿಭವೇಣಿ ಬೊಂತಾದೇವಿ ಪಡೆದಳು” ಎಂಬ ಉಲ್ಲೇಖ ಸಿಗುತ್ತದೆ. ಉಪಾಂಗ ಎನ್ನುವ ಒಂದು ಸುಶಿರ ವಾದ್ಯ, ಅದನ್ನೇ ಇಲ್ಲಿ ಉಷ್ಟಾಂಗವೆಂದು ಕರೆದಿರಬೇಕು.
ಇವನು ವೀಣಾವಾದನದ ಕಲಾವಿದನಾಗಿದ್ದನು. ಈತನ ಸಂಗೀತ ಜ್ಞಾನದ ಬಗ್ಗೆ ಭೀಮಕವಿಯ ಬಸವ ಪುರಾಣದಲ್ಲಿ ಹೀಗೆ ಹೇಳಲಾಗಿದೆ. “ಸಕಲವೀಣಾ ಪ್ರವೀಣ ಕಲಾವಿದನು, ಅಕಲಂಕವಾದ ವಿದ್ಯಾಪಂಡಿತನು, ಆದ ಸಕಲೇಶ ಮಾದರಸನು ಜಂಗಮ ಲಿಂಗೈಕ್ಯ ಸದ್ಭಕ್ತಿಯಿಂದ ಅರ್ಚನೆ ಮಾಡುತ್ತಾ, ಶಿವನನ್ನು ಸಂಕೀರ್ತಿಸಲು, ಬತ್ತೀಸರಾಗಗಳಿಗೆ ಹೊಂದುವಂತೆ ಎಲ್ಲ ದಂಡಿಗೆಗಳನ್ನು ನಿಯೋಜಿಸಿ ಬಾರಿಸುತ್ತಿದ್ದನು. ಯಾವ ರಾಗ ಆತನಿಗೆ ಪ್ರಿಯವೋ ಅದನ್ನು ಹೊಮ್ಮಿಸುತ್ತಿದ್ದನು. ರಾವಣ ಹಸ್ತ, ಬ್ರಹ್ಮವೀಣೆ, ಲಾವಣ್ಯ. ವೀಣೆ ಕಿನ್ನರವೀಣೆ, ಜನಕ (+ವೀಣೆ?) ಮೊದಲಾದ ದಂಡಿಗೆಗಳನ್ನು ತೆಗೆದುಕೊಂಡು, ಮೊಗಚಾಳ, ಸವಠಾಣ, ತಾಲಪಟ್ಟಿ, ಕತ್ತರಿ ಚೋಳವನಿ, ಸಾರನಗಳನ್ನು ಹೊಮ್ಮಿಸುತ್ತಿದ್ದನು.” ಇವುಗಳೊಂದಿಗೆ ಇಪ್ಪತ್ತೆರಡು ಕೃತಿಗಳು, ಮಂದ್ರ, ಮಧ್ಯ, ತಾರ, ಸ್ಥಾಯಿಗಳು, ದೃತ್, ಮಧ್ಯ, ವಿಲಂಬಿತ ತಾಳ ಮಾನಗಳು, ದೇಶಿ ಮಾರ್ಗ ಪ್ರಕಾರಗಳು, ವಿವಿಧ ಠಾಯಗಳು, ವಿವಿಧ ಸ್ತ್ರೀ ಪುರುಷ ರಾಗಗಳಲ್ಲಿ “ಲಕ್ಷ್ಯ ಲಕ್ಷಣ ನಿರ್ವಿತಕಾರ ಪೂರಿತ ನಾದ ಗಂಭೀರ ವಿನೂತ್ನಸಾರೋಕ್ತಿ ಗೀತೆಗಳನ್ನು ಹಾಡುತ್ತಾ ಅಖಿಲ ವಾದ್ಯಗಳು ಮೊರೆಯಲು ಕ್ರಮವಾಗಿ ಕೇಳಿಕ ಗತಿಯಿಂದ ನಟಿಸುತ್ತಲು ಅವರವರಿಗೆ ಹರ್ಷ ಉಂಟಾಗುವಂತೆ ಭಕ್ತಾದಿಗಳಿಗೆ ನಮಸ್ಕರಿಸುತ್ತಲು ಇದ್ದನು. ಇದರಿಂದ ಸಕಲೇಶ ಮಾದರಸ ಶಾಸ್ತ್ರೀಯ ಸಂಗೀತದ ಜ್ಞಾನವುಳ್ಳ ಕಲಾವಿದನಾಗಿದ್ದನೆಂದು ಖಚಿತಗೊಳ್ಳುತ್ತದೆ.*[21] *
ಲಿಂಗಪೂಜೆಯನ್ನು ಮಾಡಿದ ಬಳಿಕ ಲಿಂಗಕ್ಕೆ ವೀಣೆಯಿಂದ ಮೂವತ್ತೆರಡು ರಾಗದಿಂ, ಅರವತ್ತು ನಾಲ್ಕು ಗೀತ ಎಂಬತ್ತೆಂಟು ಪ್ರಬಂಧ, ನೂರೊಂದು ತಾಳ ಇವು ಮೊದಲಾದನೇಕ ರಾಗವನ್ನು ವೀಣೆಯಿಂದ ಲಿಂಗಕ್ಕೆ ಕೇಳಿಸಿ ಪೂಜಿಸುತ್ತಿದ್ದನು.”[22]
ಆಂಧ್ರಪ್ರದೇಶದಲ್ಲಿ ಲಿಂಗಪಲ್ಲಿ ಎಂಬಲ್ಲಿ ಗೋವುಗಳನ್ನು ಕಾಯುವ ಕಾಯಕ ಮಾಡುತ್ತಿದ್ದ ಮಸಣಯ್ಯ “ತುತ್ತುರು ತುರು ತುರು” ಎಂದು ಊದುತ್ತಾ “ಅಪಳಚಪಳ ಎಂಬ ನಾದವನ್ನುಂಟು ಮಾಡುವ ಘಂಟೆಯನ್ನು ಕಟ್ಟಿಕೊಂಡು ದನಕರುಗಳನ್ನು ಕಾಯುತ್ತಾ ವಚನಗಳನ್ನು ಭಜಿಸುವುದರೊಂದಿಗೆ ಶಿವಭಕ್ತಿಯನ್ನು ಸಾರುತ್ತಿದ್ದನು” ಎಂದು ತಿಳಿದು ಬರುತ್ತದೆ,
[1] ಬಸವೇಶ್ವರರ ಸಮಕಾಲೀನರು - ಕಂಕರಿ ಕಕ್ಕಯ್ಯ, ಡಾ. ದೇವೇಂದ್ರ ಕುಮಾರ ಹಕಾರಿ ಪುಟ ೧೯೩
[2] ಬಸವೇಶ್ವರರ ಸಮಕಾಲೀನರು - ಬಹುರೂಪಿ ಚೌಡಯ್ಯ, ಶಾಂತರಸ ಪುಟ – ೩೩೭
[3] ಹರ್ಡೇಕರ ಮಂಜಪ್ಪ ಸುಭೋದಸಾರ ಕಾವ್ಯಾನಂದರ ಪ್ರಸ್ತಾರವೆ ಪುಟ ೬
[4] ಬಸವೇಶ್ವರರ ಸಮಕಾಲೀನರು ಬಹುರೂಪಿ ಚೌಡಯ್ಯ - ಶಾಂತರಸ, ಪುಟ ೩೩೮
[5] ಬಸವೇಶ್ವರರ ಸಮಕಾಲೀನರು ಬಹುರೂಪಿ ಚೌಡಯ್ಯ, - ಶಾಂತರಸ ಪುಟ ೩೪೦
[6] ಬಸವೇಶ್ವರರ ಸಮಕಾಲೀನರು ಬಹುರೂಪಿ ಚೌಡಯ್ಯ, - ಶಾಂತರಸ ಪಟ ಪುಟ ೩೪೫
[7] ಸಂಕೀರ್ಣ ವಚನ ಸಂಪುಟ ೨ - ಸಂ. ಡಾ. ಎಸ್. ವಿದ್ಯಾಶಂಕರ ವ.ಸಂ. ೨೩೧
[8] ಬಸವೇಶ್ವರರ ಸಮಕಾಲೀನರು - ಕಿನ್ನರಿ ಬ್ರಹ್ಮಯ್ಯ, ಪುಟ್ಟರಾಜ ಗವಾಯಿಗಳು, ಮಟ ೨೧೭
[9] ಅದೇ ಪುಟ ೨೧೮
[10] ಬಸವೇಶ್ವರರ ಸಮಕಾಲೀನರು ಕಂಕರಿ ಕಕ್ಕಯ್ಯ – ಡಾ. ದೇವೇಂದ್ರ ಕುಮಾರ ಹಕಾರಿ, ಪುಟ ೧೯೧
[11] ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ, ಪುಟ ೨೫೮
[12] ಸಂಗೀತ ಕ್ಷೇತ್ರಕ್ಕೆ ವಚನಕಾರರ ಕೊಡುಗೆ, - ಡಾ. ಸರ್ವಮಂಗಳಾ ಶಂಕರ, ಪುಟ ೧೨೫
[13] ಹರಿಹರನ ಪ್ರಭುದೇವರ ರಗಳೆ, ಪುಟ ೪೫
[14] ಶಿವದಾಸ ಗೀತಾಂಜಲಿ - ಎಲ್ ಬಸವರಾಜು, ಪುಟ ೪೫
[15] ಶಿವಶರಣೆಯರ ವಚನ ಸಂಪುಟ ಡಾ. ವೀರಣ್ಣ ರಾಜೂರ, ವ.ಸಂ. ೫೫
[16] ಶಿವಶರಣೆಯರ ವಚನ ಸಂಪುಟ ಡಾ. ವೀರಣ್ಣ ರಾಜೂರ, ವ.ಸಂ. ೧೮೭
[17] ಸಂಗೀತ ಕ್ಷೇತ್ರಕ್ಕೆ ವಚನಕಾರರ ಕೊಡುಗೆ - ಡಾ. ಸರ್ವಮಂಗಳಾ ಶಂಕರ ಪುಟ ೧೩೯
[18] ಸಂಗೀತ ಕ್ಷೇತ್ರಕ್ಕೆ ವಚನಕಾರರ ಕೊಡುಗೆ - ಡಾ. ಸರ್ವಮಂಗಳಾ ಶಂಕರ, ಪುಟ ೧೩೮-೧೩೯
[19] ಸಂಗೀತ ಕ್ಷೇತ್ರಕ್ಕೆ ವಚನಕಾರರ ಕೊಡುಗೆ - ಡಾ. ಸರ್ವಮಂಗಳ ಶಂಕರ, ಪುಟ ೧೩೭ ೧೩೮
[20] ಸಂಗೀತ ಕ್ಷೇತ್ರಕ್ಕೆ ವಚನಕಾರರ ಕೊಡುಗೆ - ಡಾ. ಸರ್ವಮಂಗಳ ಶಂಕರ, ಪುಟ ೧೨೯, ೧೩೦.
[21] ಸಂಗೀತ ಕ್ಷೇತ್ರಕ್ಕೆ ವಚನಕಾರರ ಕೊಡುಗೆ - ಡಾ. ಸರ್ವಮಂಗಳ ಶಂಕರ, ಪುಟ ೧೪೧
[22] ಸಂಗೀತ ಕ್ಷೇತ್ರಕ್ಕೆ ವಚನಕಾರರ ಕೊಡುಗೆ - ಡಾ. ಸರ್ವಮಂಗಳ ಶಂಕರ, ಪುಟ ೧೪೦.
ಕೃಪೆ: ಶಾಂತಿ ಕಿರಣ ಮೇ-ಜೂನ್-೨೦೧೪.
*ಶಿರಸಂಗಿ ಲಿಂಗರಾಜ ದೇಸಾಯಿ | ಮಾಂಸದ ಬೆಲೆ |