Previous ಪಂಚಾಚಾರ್ಯರು ಲಿಂಗಾಯತ ಧರ್ಮವನ್ನು ಸ್ಥಾಪಿಸಿದರೆ? ಲಿಂಗಾಯತ ಹೆಸರುಗಳು. Next

ಬ್ರಾಹ್ಮಣ್ಯದ ಬಗೆಗೆ ಪಂಚಾಚಾರ್ಯರ ಪ್ರೇಮ

*

✍ ಡಾ. ಎಸ್‌. ಎಂ. ಜಾಮದಾರ (ನಿವೃತ್ತ ಐಎಎಸ್ ಅಧಿಕಾರಿಗಳು)

ಬ್ರಾಹ್ಮಣ್ಯದ ಬಗೆಗೆ ಪಂಚಾಚಾರ್ಯರ ಪ್ರೇಮ

ವೀರಶೈವರು ಹಿಂದೂಗಳು ಎಂದೇ ಈಗಿನ ಪಂಚಾಚಾರ್ಯರು ಪಟ್ಟು ಹಿಡಿದಿದ್ದಾರೆ. ಅವರ ಪವಿತ್ರ ಗ್ರಂಥವೆನ್ನುವ 'ಸಿದ್ಧಾಂತ ಶಿಖಾಮಣಿ'ಯೂ ಸಹ ವೇದಗಳು, ಆಗ ಮಗಳು, ಸ್ಮೃತಿಶಾಸ್ತ್ರಗಳು ಮತ್ತು ಪುರಾಣಗಳು ಹಿಂದೂಗಳಿಗಿದ್ದಂತೆ ವೀರಶೈವರಿಗೂ ಪವಿತ್ರ ಎಂದೇ ಹೇಳುತ್ತದೆ. ವೀರಶೈವರೂ ತಾವೂ ಲಿಂಗೀಬ್ರಾಹ್ಮಣರು ಅಥವಾ ವೀರಶೈವ ಬ್ರಾಹ್ಮಣರು ಎಂದು ಕರೆದುಕೊಳ್ಳುತ್ತಾರೆ. ಆದರೆ

* ವೀರಶೈವರಾಗಲೀ, ಅವರ ಧರ್ಮಗುರುಗಳಾಗಲೀ (ಪಂಚಾಚಾರ್ಯರು) ಬ್ರಾಹ್ಮಣರಂತೆ ಜನಿವಾರ ಧರಿಸುವುದಿಲ್ಲ.
* ಅವರು ನೆತ್ತಿಯ ಮೇಲೆ ಜುಟ್ಟು ಬಿಡುವುದಿಲ್ಲ. ಬ್ರಾಹ್ಮಣರಂತೆ ಸಂಧ್ಯಾವಂದನೆ ಮಾಡುವುದಿಲ್ಲ; ಗಾಯತ್ರಿ ಮಂತ್ರ ಪಠಿಸುವುದಿಲ್ಲ.
* ಪಂಚಪಾತಕದ ಕಟ್ಟಾಗಲೀ, ಸೂತಕ ಶುದ್ದೀಕರಣವನ್ನಾಗಲೀ ವೀರಶೈವರು ಆಚರಿಸುವುದಿಲ್ಲ.
* ಸತ್ತವರಿಗಾಗಿ ಶ್ರಾದ್ಧಾಚರಣೆ ಮತ್ತು ಪಿಂಡಾರ್ಪಣೆಯ ಪದ್ಧತಿ ವೀರಶೈವರಲ್ಲಿಲ್ಲ.
* ಶೈವ ಬ್ರಾಹ್ಮಣರು ಅತ್ಯಂತ ಭಕ್ತಿಭಾವ ಇಟ್ಟುಕೊಂಡಿರುವ ಶಿವಲಿಂಗದ ಮೇಲೆ ಪಂಚಾಚಾರ್ಯರು ತಮ್ಮ ಪಾದವನ್ನಿಡುತ್ತಾರೆ.
* ವೀರಶೈವರು ಬ್ರಾಹ್ಮಣರಂತೆ ಮೃತದೇಹಗಳನ್ನು ಸುಡುವುದಿಲ್ಲ; ಹೂಳುತ್ತಾರೆ.
* ವೀರಶೈವರ ಸ್ಮಶಾನಭೂಮಿ ಹಿಂದೂ ಸ್ಮಶಾನ ಭೂಮಿಗಿಂತ ಪ್ರತ್ಯೇಕವಾಗಿರುತ್ತದೆ. ವೀರಶೈವರು ಯಾವುದೇ ಮತಾಚರಣಾ ಕ್ರಿಯೆಗಳಿಗೆ ಬ್ರಾಹ್ಮಣ ಪೂಜಾರಿಗಳನ್ನು ಕರೆಯುವುದಿಲ್ಲ.
* ಸಂಸ್ಕೃತವನ್ನು ಅಧ್ಯಯನ ಮಾಡುವಂತೆ ಕಂಡರೂ ಸಂಸ್ಕೃತದಲ್ಲಿ ತಜ್ಞರಾಗಿಲ್ಲ.
* ಬ್ರಾಹ್ಮಣರು ಹಣೆಗೆ ಗಂಧ-ಕುಂಕುಮ ಧರಿಸಿದರೆ, ವೀರಶೈವರು ವಿಭೂತಿಯನ್ನು ಮಾತ್ರ ಧರಿಸುತ್ತಾರೆ.

ವೀರಶೈವರ ಅನೇಕ ಪದ್ಧತಿಗಳು ಬ್ರಾಹ್ಮಣ ಪದ್ಧತಿಗಳಿಗಿಂತ ಭಿನ್ನವಾಗಿವೆ. ಆದರೂ ಒಟ್ಟಾರೆಯಾಗಿ ಬ್ರಾಹ್ಮಣತ್ವವನ್ನು ಒಪ್ಪಿಕೊಂಡು ಪಂಚಾಚಾರ್ಯರ ಅನುಯಾಯಿಗಳಾದ ವೀರಶೈವರು ವೀರಮಹೇಶ್ವರ ಬ್ರಾಹ್ಮಣರು ಅಥವಾ ಲಿಂಗೀಬ್ರಾಹ್ಮಣರೆಂದು ಕರೆಸಿಕೊಂಡು ಬ್ರಾಹ್ಮಣರ ಸ್ಥಾನಮಾನಗಳನ್ನು ಪಡೆಯಲು ೧೮೯೦ ಮತ್ತು ೧೯೨೦ರಲ್ಲಿ ಪ್ರಬಲವಾದ ಹೋರಾಟ ನಡೆಸಿದ ವಿಪರ್ಯಾಸವಿದೆ (ಮೈಸೂರು ಜನಗಣತಿ, ೧೮೯೧, ೧೯೦೧ ಮತ್ತು ೧೯೧೧). ಆಗ ಆಳುತ್ತಿದ್ದ ಮೈಸೂರು ಮಹಾರಾಜರು ವೀರಶೈವರ ಬೇಡಿಕೆಯನ್ನು ಮನ್ನಿಸಿ ಆ ಸ್ಥಾನಮಾನವನ್ನು ನೀಡುತ್ತಾರೆ. ಆದರೆ ಬ್ರಾಹ್ಮಣರೇನೂ ಅದಕ್ಕೆ ಬಗ್ಗಲಿಲ್ಲ. ವೀರಶೈವರನ್ನು ಶೂದ್ರರೆಂದೇ ಪರಿಗಣಿಸಿದರು.

ಆದಾಗ್ಯೂ ಪಂಚಾಚಾರ್ಯರು ಮತ್ತು ಅವರ ಅನುಯಾಯಿಗಳು ಬ್ರಾಹ್ಮಣರನ್ನು ಅನುಕರಿಸುವ ಭಾರಿ ಹುಚ್ಚನ್ನೇ ಹಚ್ಚಿಕೊಂಡು ಅವರ ಪದ್ಧತಿಗಳನ್ನೇ ಆಚರಿಸುತ್ತಿದ್ದಾರೆ. ಇಲ್ಲಿ ಕೆಲವು ಉದಾಹರಣೆಗಳನ್ನು ಕೊಡಬಹುದು:

೧. ಬ್ರಾಹ್ಮಣ ಶಂಕರಾಚಾರ್ಯರು ನಾಲ್ಕು+ ಒಂದು ಹೀಗೆ ಐದು ಪೀಠಗಳನ್ನು ಸ್ಥಾಪಿಸಿದರು. ಪಂಚಾಚಾರ್ಯರೂ ಅದನ್ನು ಅನುಕರಿಸಿ ಐದು ಪೀಠಗಳನ್ನು (ಕಾಶಿ, ಉಜ್ಜನಿ, ಕೇದಾರ, ಶ್ರೀಶೈಲ ಮತ್ತು ಬಾಳೆಹಳ್ಳಿ) ಸ್ಥಾಪಿಸಿದ್ದಾರೆ.

೨. ಬ್ರಾಹ್ಮಣರಲ್ಲಿ ಗೋತ್ರ ಪದ್ಧತಿ ಇರುವಂತೆ ಪಂಚಾಚಾರ್ಯರೂ ರೇಣುಕಗೋತ್ರ ದಾರುಕಗೋತ್ರ, ಘಂಟಾಕರ್ಣಗೋತ್ರ ವಿಶ್ವಕರ್ಣಗೋತ್ರ ಮತ್ತು ಗಜಕರ್ಣಗೋತ್ರ, ವೀರಭದ್ರಗೋತ್ರ, ಭೃಂಗಿಗೋತ್ರ, ನಂದಿಗೋತ್ರ ಇತ್ಯಾದಿಗಳನ್ನು ಸೃಷ್ಟಿಸಿದ್ದಾರೆ.

೩. ಬ್ರಾಹ್ಮಣರಲ್ಲಿ ಉಪನಯನ ಮತ್ತು ದೀಕ್ಷಾ ಕರ್ಮಾಚರಣೆಗಳಿವೆ. ಹಾಗೆಯೇ ಪ೦ಚಾಚಾರ್ಯರ ಅದನ್ನು ಅನುಕರಿಸಿ, ಬ್ರಾಹ್ಮಣರ ಉಪನಯನದಂತೆಯೇ “ಅಯ್ಯಾಚಾರ' ಪದ್ಧತಿಯನ್ನು ರೂಢಿಗೆ ತಂದಿದ್ದಾರೆ. ಇಂದಿಗೂ ಜಂಗಮರು ತಮ್ಮ ಗಂಡುಮಕ್ಕಳಿಗೆ 'ಅಯ್ಯಾಚಾರ' ಪದ್ಧತಿ ಆಚರಿಸುತ್ತಾರೆ. ಆದರೆ ಅವರ ಹೆಣ್ಣುಮಕ್ಕಳಿಗೆ ಆ ಅವಕಾಶವಿಲ್ಲ. ಬ್ರಾಹ್ಮಣರಲ್ಲೂ ಹೆಣ್ಣುಮಕ್ಕಳಿಗೆ ಉಪನಯನ'ವಿಲ್ಲ.

೪. ಬ್ರಾಹ್ಮಣ ಮಠಾಧೀಶರು ತಮ್ಮ ಸಂಚಾರದಲ್ಲಿ ತಮ್ಮ ಜೊತೆಯಲ್ಲಿ ಒಂದು ವಿಶೇಷ ಧ್ವಜವಿರುವ ಕೋಲನ್ನು ಮತ್ತು ಒಂದು ಬೆಳ್ಳಿಯ ಪಾತ್ರೆಯನ್ನು ಒಯ್ಯುತ್ತಾರೆ. ಅದನ್ನೇ ಪಂಚಾಚಾರ್ಯರೂ ಪ್ರಾಮಾಣಿಕವಾಗಿ ಅನುಸರಿಸುತ್ತಿದ್ದಾರೆ.

೫. ಬ್ರಾಹ್ಮಣರು ಯಜ್ಞ, ಹೋಮ-ಹವನಗಳನ್ನು ಆಚರಿಸಿದರೆ, ಪಂಚಾಚಾರ್ಯರು ಶಿವಯಜ್ಞ ಶಿವಹೋಮ ಮತ್ತು ಶಿವಾಗ್ನಿಗಳನ್ನು ಕೆಲವು ಆಗಮಿಕಶಾಸ್ತ್ರದ ಪ್ರಕಾರ ಆಚರಿಸುತ್ತಾರೆ (ವೀರಾಗಮ, ಪಾರಮೇಶ್ವರಾಗಮ, ಚಂದ್ರಜ್ಞಾನಾಗಮ).

೬. ಬ್ರಾಹ್ಮಣರು ಜಪ, ತಪ, ಉಪವಾಸಗಳ ಆಚರಣೆಗಳೇ ಅಲ್ಲದೆ ತೀರ್ಥಯಾತ್ರೆಗಳನ್ನು ಮಾಡುತ್ತಾರೆ. ವೀರಶೈವರೂ ಜ್ಯೋತಿರ್ಲಿಂಗ ಸ್ಥಳಗಳು, ೫೧ ಶಕ್ತಿ ಪೀಠಗಳಷ್ಟೇ ಅಲ್ಲದೆ, ಈಚೆಗೆ ಶಿರಡಿ ಸಾಯಿಬಾಬಾ, ಪಂಡರಪುರದ ವಿಠೋಬಾ, ಮಾಣಿಕಮ್ಮ, ಅಯ್ಯಪ್ಪಸ್ವಾಮಿ ಭಕ್ತರೂ ಆಗಿದ್ದಾರೆ. ಜೊತೆಗೆ ನಾನಾ ಕಡೆ ನಡೆಯುವ ಕುಂಭಮೇಳಗಳಿಗೂ ಹೋಗುತ್ತಾರೆ.

೭. ಬ್ರಾಹ್ಮಣರು ಪಂಚಾಂಗ, ಮುಹೂರ್ತ, ಪುಣ್ಯದಿನಗಳು, ರಾಹುಕಾಲ, ಗುಳಿಕಕಾಲ, ಯಮಗಂಡಕಾಲ, ಅಮಾವಾಸ್ಯೆ, ಹುಣ್ಣಿಮೆ, ಕುಂಡಲಿ, ಜಾತಕ ಇವುಗಳಲ್ಲಿ ಪ್ರಬಲ ನಂಬಿಕೆಯುಳ್ಳವರು. ಅವುಗಳ ಅಧ್ಯಯನ ಮತ್ತು ಆಚರಣೆಗಳಲ್ಲಿ ಅವರು ತಜ್ಞರಾಗಿದ್ದಾರೆ. ವೀರಶೈವರೂ ಸಹ ಅದನ್ನು ಅನುಕರಿಸಿ ಅವರಂತೆ ತಾವೂ ಪರಿಣತರಾಗಲು ಪ್ರಯತ್ನಿಸುತ್ತಾರೆ.

೮. ಬ್ರಾಹ್ಮಣರು ಮೂರ್ತಿಪೂಜಕರಾಗಿ, ಪೂಜಾರಿಗಳಾಗಲು ಇಷ್ಟಪಡುತ್ತಾರೆ. ಹಾಗೆಯೇ ಪಂಚಾಚಾರ್ಯರ ಭಕ್ತರೂ ಪೂಜಾರಿಗಳಾಗಲು ನ್ಯಾಯಾಲಯದಲ್ಲಿ ಹೋರಾಡಿ ಪೂಜೆಯ ಹಕ್ಕು ಪಡೆಯುತ್ತಾರೆ. ಅವರೂ ಬ್ರಾಹ್ಮಣ ಪೂಜಾರಿಗಳಂತೆ ವೇಷಧರಿಸಿ ದೇವಾಲಯಗಳಿಗೆ ಹೋಗುತ್ತಾರೆ. ಬ್ರಾಹ್ಮಣರಂತೆ ವಿಗ್ರಹಾರಾಧನೆಯಲ್ಲಿ ನಂಬಿಕೆ ಇಟ್ಟಿದ್ದಾರೆ.

೯. ಬ್ರಾಹ್ಮಣರಂತೆ ವೀರಶೈವರೂ ಅನೇಕ ಪುಣ್ಯದಿನಗಳನ್ನು ಆಚರಿಸುತ್ತಾರೆ. ವಿಶೇಷ ಪೂಜೆ, ಪ್ರಸಾದಗಳ ಸೇವೆ ಸಲ್ಲಿಸುತ್ತಾರೆ. ಸೋಮವಾರ ಶಿವನ ದಿನ, ಶಿವರಾತ್ರಿಯಂದು ಶಿವನ ವಿಶೇಷ ರಾತ್ರಿ, ಶ್ರಾವಣ, ಕಾರ್ತೀಕಗಳ ಆಚರಣೆ ನಡೆಸುತ್ತಾರೆ. ನಂದೀಕೋಲು, ಅಡ್ಡಪಲ್ಲಕ್ಕಿ ಉತ್ಸವ, ಲಕ್ಷದೀಪೋತ್ಸವಗಳು ಮತ್ತು ವಾರ್ಷಿಕ ಜಾತ್ರೆಗಳಲ್ಲಿ ವೀರಶೈವರು ಮತ್ತು ಅವರ ಗುರುಗಳು ಬ್ರಾಹ್ಮಣರನ್ನು ಅನುಕರಿಸುತ್ತಾರೆ.

೧೦. ಬ್ರಾಹ್ಮಣರು ತಾವು ಭೂಮಿಯ ಮೇಲಣ ದೇವರುಗಳೆಂದು ಭಾವಿಸಿರುವಂತೆ, ಪಂಚಾಚಾರ್ಯರೂ ಹಾಗೇ ಭಾವಿಸಿದ್ದಾರೆ ಮತ್ತು ಅವರನ್ನು ಹಾಗೆ ದೇವರಂತೆ ಕಾಣಬೇಕೆಂದು ತಮ್ಮ ಭಕ್ತರಿಗೆ ಅಪ್ಪಣೆ ಕೊಡುತ್ತಾರೆ. ತಾವು ಇತರರಿಗಿಂತ ಮೇಲು ಎಂದು ತಿಳಿದಿರುವ ಪಂಚಾಚಾರ್ಯರು ಎಲ್ಲ ಖಾಸಗಿ ಮತ್ತು ಸಾರ್ವಜನಿಕ ಸಂದರ್ಭಗಳಲ್ಲಿ ತಾವು ಕುಳಿತುಕೊಳ್ಳುವ ಆಸನಗಳು ಉಳಿದೆಲ್ಲರ ಆಸನಗಳಿಗಿಂತ ದೊಡ್ಡದಾಗಿರಬೇಕು ಮತ್ತು ಎತ್ತರವಾಗಿರಬೇಕೆಂದು ವ್ಯವಸ್ಥಾಪಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತಾರೆ. ಅವರು ಶಿವಲಿಂಗದ ಮೇಲೆ ತಮ್ಮ ಪಾದವಿಟ್ಟು ಪೂಜೆ ಮಾಡಿಸಿಕೊಳ್ಳುತ್ತಾರೆ. ತಮ್ಮ ಪಾದೋದಕ (ಪಾದಗಳನ್ನು ತೊಳೆದ ನೀರು)ವನ್ನು ತಮ್ಮ ಭಕ್ತರು ತೀರ್ಥವೆಂದು ಪರಿಗಣಿಸಬೇಕೆಂದೂ, ಅವರ ಇಷ್ಟಲಿಂಗ ಪೂಜೆಗೆ ಅದನ್ನು ಬಳಸಬೇಕೆಂಬ ಪದ್ಧತಿ ಮಾಡಿದ್ದಾರೆ.

೧೧. ಬ್ರಾಹ್ಮಣರು ಓದು-ಬರಹಗಳಲ್ಲಿ, ಶ್ಲೋಕ ಪಠನಗಳಲ್ಲಿ ಸಂಸ್ಕೃತವನ್ನು ಬಳಸುವಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಾರೆ. ಸುಮಾರು ಕ್ರಿ.ಶ. ೧೮೦೦ರಿಂದ ಪಂಚಾಚಾರ್ಯರೂ ಸಹ ತಮ್ಮ ಶ್ರೀಮಂತ ಶಿಷ್ಯರು, ಶಾಖಾ ಮಠಗಳು ಮತ್ತು ತಮ್ಮ ಸಹ ಪ್ರಯಾಣಿಕರಾದ ಕೆಲವು ವಿರಕ್ತಮಠಗಳೂ ಸಂಸ್ಕೃತ ಶಾಲೆಗಳನ್ನು ತೆರೆಯಲು ಉತ್ತೇಜಿಸಿ, ಅಲ್ಲಿ ವೇದಾಗಮಗಳ ಅಧ್ಯಯನಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ.

೧೨. ಬ್ರಾಹ್ಮಣರು ಯಾವಾಗಲೂ ತಮ್ಮ ಮತಾಚರಣೆ ಮತ್ತು ದೇವರ ಪೂಜೆಯ ಸಂದರ್ಭದಲ್ಲಿ ಸಂಸ್ಕೃತ ಶ್ಲೋಕಗಳನ್ನೇ ಬಳಸುವಂತೆ ವೀರಶೈವ ಜಂಗಮ ಪೂಜಾರಿ-ಪುರೋಹಿತರೂ ಸಂಸ್ಕೃತವನ್ನು ಬಳಸುತ್ತಾರೆ (ಅವುಗಳ ಸಂದರ್ಭ ಸೂಕ್ತತೆ ಮತ್ತು ಉಚ್ಚಾರಗಳ ದೋಷದ ವಿಚಾರ ಬೇರೆ).

೧೩. ಸಂಸ್ಕೃತ ಹೊರತಾಗಿ ಉಳಿದ ಯಾವ ಭಾಷೆಗಳೂ ದೇವ ಭಾಷೆಗಳಲ್ಲ ಎಂದು ಬ್ರಾಹ್ಮಣರು ತಮ್ಮ ಧರ್ಮಗ್ರಂಥಗಳನ್ನು ಸಂಸ್ಕೃತದಲ್ಲೇ ರಚಿಸುತ್ತಾರೆ. ಹಾಗೆಯೇ ಪಂಚಾಚಾರ್ಯರು ಮತ್ತು ಅವರ ವಿದ್ವಾಂಸರು (ಉದಾ: ಕರಿಬಸವಶಾಸ್ತ್ರಿ, ಚಂದ್ರಶೇಖರಶಾಸ್ತಿ, ಕಾಶಿನಾಥಶಾಸ್ತಿ, ಶಿವಯೋಗಿ ಶಿವಾಚಾರ್ಯ, ಕಾಶಿ ಪೀಠದ ಡಾ. ಚಂದ್ರಶೇಖರ ಸ್ವಾಮೀಜಿ ಮೊದಲಾದವರು ಸಂಸ್ಕೃತದಲ್ಲಿ ಗ್ರಂಥಗಳನ್ನು ರಚಿಸಿದ್ದಾರೆ. (ಧರ್ಮ ಸಿದ್ಧಾಂತಗಳು ಜನಸಾಮಾನ್ಯರಿಗೆ ಅಗತ್ಯವಿಲ್ಲವೆಂಬುದು ಅದರ ಉದ್ದೇಶವಾಗಿರಬಹುದು.)

೧೪. ಸತ್ತವರು ನೇರವಾಗಿ, (ಅವರವರ ಕರ್ಮಕ್ಕೆ ಅನುಗುಣವಾಗಿ) ಸ್ವರ್ಗಕ್ಕೋ, ಕೈಲಾಸ ಅಥವಾ ವೈಕುಂಠಕ್ಕೋ ಹೋಗುವುದಾಗಿ ಬ್ರಾಹ್ಮಣರು ನಂಬಿದ್ದಾರೆ. ಅವರಿಗೆ ಕರ್ಮಸಿದ್ಧಾಂತದಲ್ಲಿ ಅಚಲವಾದ ನಂಬಿಕೆಯಿದೆ. ಪಂಚಾಚಾರ್ಯರೂ ಕರ್ಮಸಿದ್ಧಾಂತವನ್ನು (ಪುನರಪಿ ಜನನಂ, ಪುನರಪಿ ಮರಣಂ) ನಂಬಿರುವವರು.

೧೫. ಪಂಚಾಚಾರ್ಯರು ಸಿದ್ಧಾಂತ ಶಿಖಾಮಣಿಯನ್ನು ಅತ್ಯಂತ ಪ್ರಾಚೀನ ಧರ್ಮಗ್ರಂಥವೆಂದೂ, ತಾವು ಅವತಾರ ಪುರುಷರೆಂದೂ, ಯುಗ ಯುಗಗಳಲ್ಲಿ ತಾವು ಹುಟ್ಟಿ ಬರುವುದಾಗಿಯೂ ಹೇಳಿಕೊಳ್ಳುವುದು
ಬ್ರಾಹ್ಮಣೀಯ ಪೌರಾಣಿಕ ಪರಂಪರೆಯನ್ನೇ ಹೋಲುತ್ತದೆ.

೧೬. ಪಂಚಾಚಾರ್ಯರ ರಾಜವಂಶ ಪರಂಪರೆಯಂತೆ ತಮ್ಮ ಸ್ಥಾನಗಳನ್ನು ಸಿಂಹಾಸನ ಎಂದು ಕರೆಯುತ್ತಾರೆ. ಪಂಚಪೀಠಗಳಲ್ಲಿ ರಂಭಾಪುರಿ ಪೀಠ “ವೀರಸಿಂಹಾಸನ'ವೆಂದೂ ಶ್ರೀಶೈಲಪೀಠ 'ಸೂರ್ಯ ಸಿಂಹಾಸನ'ವೆಂದೂ, ಉಜ್ಜಿನಿ ಪೀಠ 'ಸದ್ಧರ್ಮ ಸಿಂಹಾಸನ'ವೆಂದೂ ಕೇದಾರಪೀಠ... ಸಿಂಹಾಸನವೆಂದೂ, ಕಾಶಿ ಪೀಠ. ಸಿಂಹಾಸನವೆಂದೂ ಘೋಷಿಸಲ್ಪಟ್ಟಿವೆ.

ವಾಸ್ತವವಾಗಿ ಬಹುತೇಕ ಬ್ರಾಹ್ಮಣತ್ವದ ಅನುಕರಣೆಯಾಗಿರುವ ಪಂಚಾಚಾರ್ಯರ ಪದ್ಧತಿ ಮತ್ತು ಆಚರಣೆಗಳು ಕೇವಲ ಸುಮಾರು ಎರಡು ನೂರು ವರ್ಷಗಳಿಂದ ಈಚೆಗೆ ಕಾಣಿಸಿಕೊಂಡವಾಗಿವೆ. ೧೮೭೦ಕ್ಕೆ ಮುಂಚೆ ವೀರಶೈವರು ಯಾರೂ ಇರಲಿಲ್ಲ; ಎಲ್ಲೂ ಇರಲಿಲ್ಲ.

ಇಂದಿನ ಪಂಚಪೀಠಗಳ ಮೇಲಿನ ರೀತಿ-ನೀತಿಗಳೆಲ್ಲ ಬಸವಣ್ಣನವರು ಸ್ಥಾಪಿಸಿದ ಶರಣಧರ್ಮದ (ಲಿಂಗಾಯತ) ಬೋಧನೆ ಮತ್ತು ಅವರ ಮೂಲಭೂತ ತತ್ತ್ವಸಿದ್ಧಾಂತಗಳಿಗೆ ಭಿನ್ನವಾಗಿವೆ ಎಂಬುದನ್ನು ನಿಷ್ಠಾವಂತ ಓದುಗರು ಸುಲಭವಾಗಿ ಊಹಿಸ ಬಲ್ಲರು. ಶರಣ ಧರ್ಮವನ್ನು ಹಿಂದೂಕರಣ ಮತ್ತು ಸಂಸ್ಕೃತೀಕರಣಗೊಳಿಸುವ ಪ್ರಕ್ರಿಯೆಯ ಸಂಚಿನಲ್ಲಿ ಪಂಚಾಚಾರ್ಯರ ಪಾತ್ರ ಸ್ಪಷ್ಟವಾಗಿದೆ ಎನ್ನುವುದನ್ನು ಯಾರಾದರೂ ಗಮನಿಸಬಹುದು. ಶರಣರು ಯಾವ ತತ್ವಸಿದ್ಧಾಂತಗಳಿಗೆ ಬದ್ಧರಾಗಿದ್ದಾರೆಯೋ ಅವುಗಳಿಗೆ ವಿರುದ್ಧವಾದ ಚಟುವಟಿಕೆಗಳನ್ನು ಅವರು ನಡೆಸುತ್ತಿದ್ದಾರೆ. ಆ ಮೂಲಕ ಬಸವಣ್ಣನವರ ಶರಣ ಧರ್ಮ ಮತ್ತು ಸಂಸ್ಕೃತಿಗಳನ್ನು ನಿಶ್ಚಿತವಾಗಿ ವಿಕೃತಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಕೆಳಗೆ ಕಂಡ ಸಂಗತಿಗಳು ಅವರ ವಿಗತಿಗಾಮಿ ಪ್ರಯತ್ನಗಳಿಗೆ ಕನ್ನಡಿ ಹಿಡಿದು ತೋರಿಸುತ್ತವೆ:

೧. ಬ್ರಾಹ್ಮಣರಾಗಿ ಜನಿಸಿ ಬ್ರಾಹ್ಮಣ ಪದ್ಧತಿಯ ಜನಿವಾರವನ್ನೇ ಕಿತ್ತೆಸೆದ ಬಸವಣ್ಣನವರು ನಿರಾಕರಿಸಿದ ಎಲ್ಲ ಬ್ರಾಹ್ಮಣೀಯ ನಂಬಿಕೆಗಳು, ಆಚರಣೆಗಳು ಮತ್ತು ಪದ್ಧತಿಗಳನ್ನು ಪಂಚಾಚಾರ್ಯರು ಒಂದಲ್ಲ ಒಂದು ರೂಪದಲ್ಲಿ ಮತ್ತೆ ಆಚರಣೆಗೆ ತಂದರು.

೨. ಭಾರತದ ಎಲ್ಲ ಸಮಾಜೋ-ಧಾರ್ಮಿಕ ಮತ್ತು ಆರ್ಥಿಕ ರಾಜಕೀಯ ಅನಿಷ್ಟಗಳಿಗೆ ಮೂಲಕಾರಣಗಳೆಂದು ಬಸವಣ್ಣನವರು ವೇದಗಳು, ಆಗಮಗಳು, ಪುರಾಣಗಳು ಮತ್ತು ಶಾಸ್ತ್ರಗಳನ್ನು ನಿರಾಕರಿಸಿದ್ದರೆ, ಪಂಚಾಚಾರ್ಯರು ಅವನ್ನೆಲ್ಲ ಮತ್ತೆ ಜೀವಂತಗೊಳಿಸಿದ್ದಾರೆ.

೩. ಬಸವಣ್ಣನವರು ಮೂರ್ತಿಪೂಜೆ, ದೇವಾಲಯ ಸಂಸ್ಕೃತಿ ಮತ್ತು ಪೂಜಾರಿಕೆಯ ಮಧ್ಯಸ್ಥಿಕೆಗಳನ್ನು ನಿರಾಕರಿಸಿ, ದೇವರ ನೇರ ಅನುಸಂಧಾನಕ್ಕೆ ಇಷ್ಟಲಿಂಗವನ್ನು ಕೊಟ್ಟರು. ಕೆಳವರ್ಗದ ಜನರಿಗಿದ್ದ ದೇವಾಲಯ ಪ್ರವೇಶದ ನಿಷೇಧವನ್ನು ನಿವಾರಿಸಿದರು. ಆದರೆ ಪಂಚಾಚಾರ್ಯರು ಮತ್ತೆ ಅದೇ ಬ್ರಾಹ್ಮಣೀಯ ಪದ್ಧತಿ ಸಂಸ್ಕೃತಿಗಳನ್ನು ಬಲಗೊಳಿಸಿದ್ದಾರೆ.

೪. ಬಸವಣ್ಣನವರು, ಅನುಭವ ಮಂಟಪದ ಚಿಂತಕರ ಬೆಂಬಲದಿಂದ ನಿಸರ್ಗಸಹಜ ಬದುಕಿಗೆ ಹತ್ತಿರವಾದ ಸರಳ ಜನಪದ ಧರ್ಮವನ್ನು ಸ್ಥಾಪಿಸಿದರು. ಆದರೆ ಪಂಚಾಚಾರ್ಯರು ಅಂಧಶ್ರದ್ದೆ, ಅರ್ಥಹೀನ ಆಚರಣೆ ಮತ್ತು ಮಾನವೀಯ ಅಸಮಾನತೆಗಳನ್ನು ಆಧರಿಸಿದ ಬ್ರಾಹ್ಮಣ ಧರ್ಮವನ್ನು ಉತ್ತೇಜಿಸಿದರು.

೫. ಶರಣರು ಸ್ವರ್ಗ-ನರಕ, ಪಾಪ-ಪುಣ್ಯ, ಪುನರ್ಜನ್ಯ ಮತ್ತು ಚಾತುರ್ವರ್ಣಗಳಿಗೆ ಸಂಬಂಧಿಸಿದ ವೈದಿಕ ಪರಿಕಲ್ಪನೆಗಳನ್ನು ನಿರಾಕರಿಸಿದರೆ, ಪಂಚಾಚಾರ್ಯರು ಆ ನಂಬಿಕೆಗಳಿಗೆ ನೀರು ಗೊಬ್ಬರ ಕೊಟ್ಟು ಬೆಳೆಸುತ್ತಿದ್ದಾರೆ.

೬. ಬಸವಣ್ಣನವರು ಜಾತಿ-ಭೇದ, ಸ್ತ್ರೀ-ಪುರುಷ ಅಸಮಾನತೆ, ಸೂತಕ ಪ್ರಾಯಶ್ಚಿತ್ತಗಳ ನಂಬಿಕೆ ಮತ್ತು ಶ್ರಾದ್ಧ, ಪಿಂಡ, ಪಿತೃಪಕ್ಷಗಳಂತಹ ಅವೈಜ್ಞಾನಿಕ ಆಚರಣೆಗಳ ಪದ್ಧತಿಯನ್ನು ನಿರಾಕರಿಸಿದರು. ಆದರೆ ಪಂಚಾಚಾರ್ಯರು ಮತ್ತು ಅವರ ಹಿಂಬಾಲಕ ವಿದ್ವಾಂಸರು, ವೀರಶೈವ ಬ್ರಾಹ್ಮಣರು, ವೀರಶೈವ ಕ್ಷತ್ರಿಯರು, ವೀರಶೈವ ವೈಶ್ಯರು ಮತ್ತು ವೀರಶೈವ ಶೂದ್ರರಿದ್ದಾರೆ ಎಂದು ವಾದಿಸುತ್ತಾರೆ. ಸ್ತ್ರೀಯರನ್ನು ಬ್ರಾಹ್ಮಣರು ಕಂಡಂತೆಯೇ ಕಾಣುತ್ತಾರೆ.

೭ ಬಸವಣ್ಣನವರು ದೈಹಿಕ ಶ್ರಮ ಮತ್ತು ಪ್ರಾಮಾಣಿಕ ಗಳಿಕೆ (ಕಾಯಕ)ವನ್ನು ಬೋಧಿಸಿದರು. ದುಡಿಮೆಯಲ್ಲಿ ಹೆಚ್ಚಾಗಿ ಬಂದುದನ್ನು ಅಗತ್ಯವಿದ್ದವರಿಗೆ ಹಂಚಬೇಕೆಂದು (ದಾಸೋಹ) ಹೇಳಿದರು. ಆದರೆ ಪಂಚಾಚಾರ್ಯರು ಜಾತಿಬದ್ದ ಕೆಲಸ (ಕರ್ಮ)ವನ್ನೇ ಸಮರ್ಥಿಸಿ, ವೀರಶೈವ ಬ್ರಾಹ್ಮಣರಿಗೆ ದೈಹಿಕ ಶ್ರಮದ ಅಗತ್ಯವಿಲ್ಲ ಎನ್ನುತ್ತಾರೆ. ಅವರು ದಾನ ಪದ್ದತಿಯನ್ನು ಬೋಧಿಸುತ್ತಾರೆಯೇ ವಿನಃ ದಾಸೋಹ ಪದ್ಧತಿಯನ್ನಲ್ಲ.

೮. ಬಸವಣ್ಣನವರು ಮುಹೂರ್ತ, ವಿಶೇಷ ಪೂಜೆ, ಪಂಚಾಂಗ ಇತ್ಯಾದಿ ನಂಬಿಕೆಗಳನ್ನೆಲ್ಲ ತಿರಸ್ಕರಿಸಿದ್ದರು. ಆದರೆ ಪಂಚಾಚಾರ್ಯರು ತಮ್ಮ ಕಾರ್ಯಗಳನ್ನು ಪಂಚಾಂಗವನ್ನು ಆಧರಿಸಿಯೇ ಮಾಡುತ್ತಾರೆ.

೯. ಪಂಚಾಚಾರ್ಯರು ಬ್ರಾಹ್ಮಣ ಧರ್ಮಗುರುಗಳಂತೆಯೇ ಜೊತೆಯಲ್ಲಿ ಧ್ವಜದ ಕೋಲು ಮತ್ತು ಬೆಳ್ಳಿ ಪಾತ್ರೆ ಒಯ್ಯುವುದು, ಹೋಮ ಹವನಗಳನ್ನು ಆಚರಿಸುವುದು, ಗೋತ್ರಗಳನ್ನು ಪಾಲಿಸುವುದು ಇತ್ಯಾದಿ ಅಂಧಾನುಕರಣೆಗಳನ್ನೇ ಮುಂದುವರಿಸಿದ್ದಾರೆ. ಇವೆಲ್ಲವೂ ಬಸವಣ್ಣನವರ ವೈಚಾರಿಕ ಶರಣಧರ್ಮಕ್ಕೆ ವಿರುದ್ದವಾದ ಆಚರಣೆಗಳು,

೧೦. ಬಸವಣ್ಣ ಮತ್ತು ಇತರ ಶರಣರು ಜನಭಾಷೆಯಾದ ಕನ್ನಡದಲ್ಲಿ ಬರೆದರು; ಕನ್ನಡ ದಲ್ಲಿ ಹೇಳಿದರು. ನಂತರ ಅವರ ಅನುಯಾಯಿಗಳೂ ೧೩ನೆಯ ಶತಮಾನದಲ್ಲೂ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಅದನ್ನು ಮುಂದುವರೆಸಿದರು. ಆದರೆ ಚತುರಾಚಾರ್ಯರು ಪ್ರವೇಶಿಸಿದ ನಂತರ ಅದೆಲ್ಲ ಕಣ್ಮರೆಯಾಗುತ್ತ ದೇವರ ಭಾಷೆ ಎನ್ನಲಾಗಿರುವ ಸಂಸ್ಕೃತಕ್ಕೆ ಬಲಿಯಾಯಿತು. ಲಿಂಗಾಯತರ ಆಚರಣೆಗಳಲ್ಲೂ ಸಂಸ್ಕೃತ ಪ್ರವೇಶಿಸಿತು. ಕ್ರಿ.ಶ. ೧೮೬೦ರಿಂದ ಸಂಸ್ಕತ ಶಾಲೆಗಳು ಆರಂಭವಾದವು. ಇಂದಿಗೂ ಕೆಲವು ಲಿಂಗಾಯತ ಮಠಾಧೀಶರೂ ಆ ಸಂಸ್ಕೃತದ ಗುಂಗಿನಿಂದ ಹೊರಬರಲಾಗುತ್ತಿಲ್ಲ.

ಸಮಾರೋಪ

ಹಿಂದಿನ ಅಧ್ಯಾಯಗಳಲ್ಲಿ ಆಯಾ ಅಧ್ಯಾಯದ ಅಂತ್ಯದಲ್ಲಿ ತಿಳಿಸಿರುವ ನಿರ್ಣಯಗಳನ್ನು ಮತ್ತೆ ಹೇಳಬೇಕಾದ ಅಗತ್ಯವಿಲ್ಲದಿದ್ದರೂ, ಓದುಗರ ಒಟ್ಟಾರೆ ಗಮನಕ್ಕಾಗಿ ಮತ್ತು ವಿಷಯದ ಗಾಂಭೀರ್ಯದ ದೃಷ್ಟಿಯಿಂದ ಇಲ್ಲಿ ಆ ನಿರ್ಣಯಗಳನ್ನು ಸಾರಗೊಳಿಸಿಕೊಡಲಾಗಿದೆ.

ಈ ಕೃತಿಯ ೧೪ ಅಧ್ಯಾಯಗಳಲ್ಲಿ ನಡೆಸಿರುವ ವಿಸ್ತ್ರತ ವಿಶ್ಲೇಷಣೆ ಮತ್ತು ಕಳೆದ ಸುಮಾರು ನೂರು ವರ್ಷಗಳಲ್ಲಿ ಹೊರಬಂದಿರುವ ಪ್ರಸಿದ್ದ ವೀರಶೈವ ವಿದ್ವಾಂಸರ ಗ್ರಂಥಗಳಿಂದ ಪಡೆದ ಮಾಹಿತಿಯ ಆಧಾರದ ಒಂದು ಪಕ್ಷಿನೋಟವೇ ಈ ಸಮಾರೋಪದ ಅಧ್ಯಾಯ.

* ಪಂಚಾಚಾರ್ಯರು ಅವತಾರ ಪುರುಷರೂ ಅಲ್ಲ; ಲಿಂಗೋದ್ಭವರೂ ಅಲ್ಲ. ಅಂತಹ ಅಭಿಪ್ರಾಯಗಳು ಕೇವಲ ಚರಿತ್ರೆಯನ್ನು ಪವಾಡಗಳ ಕಥೆಗಳನ್ನಾಗಿ ಮಾಡಲು ಉದ್ದೇಶಿಸಿವೆ: ಸಾಮಾನ್ಯ ಜನಸಮುದಾಯದಲ್ಲಿ ವೀರಶೈವ ಧರ್ಮದ ಬಗೆಗೆ ಭಯ-ಭಕ್ತಿ, ಪ್ರಾಚೀನತೆ ಮತ್ತು ದಿವ್ಯತೆಯ ಭಾವನೆಯನ್ನು ಹುಟ್ಟಿಸುವುದೇ ಈ ಕಲ್ಪಿತಗಳ ಉದ್ದೇಶವಾಗಿದೆ.

* ರೇವಣಸಿದ್ಧ, ಮರುಳಸಿದ್ಧ, ಪಂಡಿತಾರಾಧ್ಯ ಮತ್ತು ಏಕೋರಾಮರು ಬಸವಣ್ಣನವರ ಸಮಕಾಲೀನ ಶರಣರಾಗಿ ೧೨ನೆಯ ಶತಮಾನದಲ್ಲಿದ್ದವರು. ಆದರೆ ಮುಂದಿನ ಮುನ್ನೂರು ವರ್ಷಗಳ ನಂತರ ಈ ನಾಲ್ಕು ಜನ ಶರಣರ ಹೆಸರುಗಳನ್ನು ತಿರುಚಿ, ೧೫ನೆಯ ಶತಮಾನದಿಂದ ಮುಂದೆ ಅವರನ್ನು ಚತುರಾಚಾರ್ಯರೆಂದು ತೋರಿಸಲು ಆರಂಭವಾಯಿತು. ಅದಕ್ಕಿಂತ ಮುಂಚೆ ಅದಾವುದೂ ಇರಲಿಲ್ಲ. ಇದಕ್ಕೆ ಕಾರಣ, ಬಸವಣ್ಣನವರ ಶರಣಧರ್ಮವನ್ನು ಸೇರಿ ಮೂರು ಶತಮಾನಗಳು ಕಳೆದ ನಂತರ ಮತ್ತೆ ವೈದಿಕ ಪದ್ಧತಿಗಳತ್ತ ತಿರುಗಿದ ಆರಾಧ್ಯಬ್ರಾಹ್ಮಣರ ಕೈಚಳಕವಲ್ಲದೆ ಬೇರೆಯಲ್ಲ. ೧೫ನೆಯ ಶತಮಾನವು ಒಂದು ರೀತಿಯಲ್ಲಿ ೧೨ನೆಯ ಶತಮಾನದ ಪುನರುತ್ಥಾನದ ಅವಧಿಯಾಗಿತ್ತು. ಈ ಪ್ರವರ್ತನೆಯ ಹಂತದಲ್ಲಿ ವಿಜಯನಗರದ ಸಂಗಮ್ ರಾಜವಂಶವು ತುಂಬ ಬೆಂಬಲ ನೀಡಿತು. ಕೆಳದಿ ಮತ್ತು ಕೊಡಗಿನ ರಾಜರು ಹಾಗೆಯೇ ಮೈಸೂರಿನ ಒಡೆಯರು ವಿಜಯನಗರ ಪಥನದ ನಂತರ ಮುಂದಿನ ಶತಮಾನಗಳಲ್ಲಿ ವೀರಶೈವ ಧರ್ಮದ ಬೆಳವಣಿಗೆಗೆ ಸಾಕಷ್ಟು ಪೋಷಣೆ ನೀಡಿದರು.

* ಆಂಧ್ರಪ್ರದೇಶದ ಆರಾಧ್ಯ ಬ್ರಾಹ್ಮಣರ ಮೇಲುಗೈನಿಂದಾಗಿ ಮೂಲತಃ ಶರಣ ಮಠವಾಗಿದ್ದ ಬಾಳೆಹಳ್ಳಿ ಮಠವು ೧೫ನೆಯ ಶತಮಾನದಿಂದ ವೀರಶೈವ ಪದ್ಧತಿಗೆ ಬದಲಾವಣೆ ಹೊಂದಿತು. ೧೬೯೮ರವರೆಗೆ ಇದ್ದದ್ದು ವೀರಶೈವರ ನಾಲ್ಕು ಮಠಗಳು (ಚತುರಾಚಾರ್ಯರು) ಮಾತ್ರ. ಕಾಶಿ ಮಠದ ಸ್ಥಾಪನೆಯಾದದ್ದು ಇನ್ನೂ ನಂತರ, ಎಂದರೆ ೧೮೪೦ರ ಸುಮಾರಿನಲ್ಲಿ. ಆನಂತರ ಪಂಚಪೀಠಗಳೆನಿಸಿದವು. ಅವರು ಪಂಚಾಚಾರ್ಯರಾದರು.

* ಪಂಚಾಚಾರ್ಯರು ಲಿಂಗಾಯತ ಅಥವಾ ವೀರಶೈವ ಧರ್ಮದ ಸ್ಥಾಪಕರಲ್ಲ. ಅವರು, ಸಾಮಾನ್ಯ, ಅದರಲ್ಲೂ ಮುಗ್ಧ ಗ್ರಾಮೀಣ ಪ್ರದೇಶದ ಲಿಂಗಾಯತರನ್ನು ದಿಕ್ಕುತಪ್ಪಿಸಿದ್ದಾರೆ. ಅವರ ಇಡೀ ಅಸ್ತಿತ್ವವು ನಂಬಲಾಗದ ಕಟ್ಟುಕಥೆಗಳು ಮತ್ತು ಈ ಕೃತಿಯಲ್ಲಿ ವಿವರಿಸಿರುವ ವಿವಾದಗಳ ನೆಲೆಗಟ್ಟಿನ ಮೇಲೆ ನಿಂತಿದೆ. ಬ್ರಾಹ್ಮಣೇತರವಾದುದನ್ನು ಅವೈದಿಕವೆಂದು ಕರೆದು ಸಂಸ್ಕೃತೇತರವಾದ ಶರಣಧರ್ಮವನ್ನು ಪಂಚಾಚಾರ್ಯರು ಬ್ರಾಹ್ಮಣೀಕರಿಸಿದರು. ಹಾಗಾಗಿ ಇಂದು ನಾವು ಆ ಪ್ರಭಾವಗಳ ಲಕ್ಷಣಗಳನ್ನು ಕೆಲವು ಲಿಂಗಾಯತರಲ್ಲಿ ಕಾಣುತ್ತೇವೆ.

ಶರಣ ಧರ್ಮವನ್ನು ವಿಕೃತಗೊಳಿಸಲು ಕಾರಣವಾದ ಅನೇಕ ಸಂಗತಿಗಳಲ್ಲಿ ಅತ್ಯಂತ ಮುಖ್ಯವಾದವುಗಳೆಂದರೆ

೧. ಸೊಲ್ಲಾಪುರದ ವಾರದ ಮಲ್ಲಪ್ಪ ಲಿಂಗೀಬ್ರಾಹ್ಮಣ ಗ್ರಂಥಮಾಲೆ (೧೮೭೦), ಮೈಸೂರಿನ ಕಾಶೀನಾಥ ಗ್ರಂಥಮಾಲೆ (೧೯೨೮), ಮೈಸೂರಿನ ವೀರಶೈವ ಪ್ರಕಾಶಿಕಾ (೧೯೧೦) ಮತ್ತು ಕೆಲವು ಮಠಗಳಿಂದ ಆದ ಪ್ರಕಟಣೆಗಳು ವೀರಶೈವದ ಪ್ರಚಾರಕ್ಕೆ ಹೆಚ್ಚಿನ ಪ್ರೇರಣೆ ಒದಗಿಸಿದ್ದು.

೨. ಲಿಂಗಾಯತ ಮಠಗಳ ಪ್ರೋತ್ಸಾಹ ಮತ್ತು ಸಹಾಯಗಳಿಂದ ಕರ್ನಾಟಕದಲ್ಲಿ ಸ್ಥಾಪನೆಗೊಂಡ (೧೮೬೦ ರಿಂದ ೧೯೨೦) ಸಂಸ್ಕೃತ ಶಾಲೆಗಳು.

೩. ಪೂಜೆಯ ಹಕ್ಕಿನ ಬ್ರಾಹ್ಮಣರ ಸ್ಥಾನಕ್ಕಾಗಿ ಮತ್ತು ಕೆಲವೆಡೆ ಬ್ರಾಹ್ಮಣ ಪೂಜಾರಿಗಳನ್ನು ತೆಗೆಸುವ ಸಲುವಾಗಿ ಮತ್ತು ಜಂಗಮರ ಅಸ್ತಿತ್ವಕ್ಕಾಗಿ ಮೈಸೂರಿನಲ್ಲಿ ೧೮೯೧ರಲ್ಲಿ ನಡೆದ ವೀರಶೈವ ಚಳವಳಿ.

೪. ಮೈಸೂರಿನ ಲಿಂಗೀಬ್ರಾಹ್ಮಣ ಚಳವಳಿಯಲ್ಲೇ ೧೯೦೪ರಲ್ಲಿ ಆದ 'ಅಖಿಲ ಭಾರತ ವೀರಶೈವ ಮಹಾಸಭಾ'ದ ಸ್ಥಾಪನೆ, ಆ ಚಳವಳಿಯ ಮುದ್ರೆಯಂತೆ ನಡೆದ ಮಹಾಸಭೆ ಈಗಲೂ ಆ ವೀರಶೈವ ಪ್ರಭಾವದಿಂದ ಹೊರಬರಲು ಸಾಧ್ಯವಾಗದಿರುವುದು.

೫. ವಿರಕ್ತ ಮಠಗಳ ಶರಣ ತತ್ವಜ್ಞಾನ ಮತ್ತು ಆಚರಣೆಗಳನ್ನು ಅಳಿಸಿಹಾಕುವ ಉದ್ದೇಶದಿಂದ ಶಿವಯೋಗ ಮಂದಿರದಲ್ಲಿ ಜಂಗಮ ವಟುಗಳಿಗಾಗಿ ಸ್ಥಾಪನೆಗೊಂಡ ತರಬೇತಿ ಸಂಸ್ಥೆ, ಬಹುಸಂಖ್ಯೆಯಲ್ಲಿರುವ ವಿರಕ್ತ ಮಠಗಳು ಇಂದಿನ ಗೊಂದಲದಲ್ಲಿ ಸಿಕ್ಕಿಕೊಂಡಿರುವುದಕ್ಕೆ ಶಿವಯೋಗ ಮಂದಿರದ ಶಿಕ್ಷಣವೂ ಕಾರಣವಾಗಿದೆ.

೬. ಮೈಸೂರಿನಲ್ಲಿ ಪೂಜ್ಯ ಹಾನಗಲ್ಲ ಸ್ವಾಮೀಜಿ ಅವರಿಂದ ಆದ 'ಅಖಿಲ ಭಾರತ ಗುರುವರ್ಗೋತ್ತೇಜ ಮಹಾಸಭಾ' ಸ್ಥಾಪನೆ.

೭. ಸ್ವಾತಂತ್ರ್ಯ ಬಂದಾಗಿನಿಂದ ನಮ್ಮ ರಾಜಕೀಯ ಪಕ್ಷಗಳು ವಹಿಸಿರುವ ಪಾತ್ರ ಧರ್ಮವನ್ನು ರಾಜಕೀಯಗೊಳಿಸಿ ಅವು ನಡೆಸಿದ ಸಮಾಜದ ಶೋಷಣೆ. ರಾಜಕೀಯ ಉದ್ದೇಶಗಳ ಅನುಕೂಲಕ್ಕಾಗಿ ಸಮಾಜ ಮತ್ತು ಅದರ ಮೂಲಭೂತ ಮೌಲ್ಯಗಳು ಬಲಿಯಾದದ್ದು.

ಗ್ರಂಥ ಋಣ:
1) ವೀರಶೈವ ಪಂಚಾಚಾರ್ಯ ಮಿಥ್ಯ ಮತ್ತು ಸತ್ಯ; ಲೇಖಕರು: ಡಾ. ಎಸ್‌. ಎಂ. ಜಾಮದಾರ, ಅನುವಾದಕರು: ಡಾ. ಗೊ. ರು. ಚನ್ನಬಸಪ್ಪ. ೨೦೨೦. Published by: Jagathika Lingayat Mahasabha, No 53 2nd Main Road, 3rd cross, Chakravarrthi Layout, Palace road, Bangalore-560020.

ಪರಿವಿಡಿ (index)
Previous ಪಂಚಾಚಾರ್ಯರು ಲಿಂಗಾಯತ ಧರ್ಮವನ್ನು ಸ್ಥಾಪಿಸಿದರೆ? ಲಿಂಗಾಯತ ಹೆಸರುಗಳು. Next