Previous ಬಸವಣ್ಣ:ಪ್ರಾಚೀನ ಲಿಂಗಾಯತ ಸಾಹಿತ್ಯದ ಒಂದು ಅನಿವಾರ್ಯತೆ ಲಿಂಗಾಯತ : ಒಂದು ಸ್ವತಂತ್ರ ಧರ್ಮ Next

ಗುರು ಬಸವಣ್ಣನವರ ಲಿಂಗಾಯತವು ಪೂರ್ಣಧರ್ಮ

*

✍ ಡಾ. ಎಂ. ಎಂ. ಕಲಬುರ್ಗಿ.

ಗುರು ಬಸವಣ್ಣನವರ ಲಿಂಗಾಯತವು ಪೂರ್ಣಧರ್ಮ

ನಿಜ ಅರ್ಥದಲ್ಲಿ ಧರ್ಮವೆನ್ನುವುದು ಸುಸಂಸ್ಕೃತ ಜೀವನಪದ್ಧತಿಯಾಗಿದೆ. ಪ್ರಾಚೀನಕಾಲದಿಂದಲೂ ಅನೇಕ ಮಹಾಪುರುಷರು ತಾವು ಕಂಡ ದರ್ಶನದ ಹಿನ್ನೆಲೆಯಲ್ಲಿ ಇಂಥ ಅನೇಕ ಸುಸಂಸ್ಕೃತ ಜೀವನಪದ್ಧತಿಗಳನ್ನು ರೂಪಿಸಿ, ಧರ್ಮದ ಹೆಸರಿನಲ್ಲಿ ಲೋಕದ ಮುಂದೆ ಮಂಡಿಸುತ್ತ ಬಂದಿದ್ದಾರೆ. ಭಾರತಕ್ಕೆ ಬಂದರೆ ಇಲ್ಲಿ ವೈದಿಕ, ಬೌದ್ಧ, ಜೈನ, ಲಿಂಗಾಯತ ಹೀಗೆ ಹಲವು ಜೀವನಪದ್ಧತಿ(ಧರ್ಮ)ಗಳು ಕಾಣಿಸಿಕೊಂಡಿವೆ. ಇವುಗಳಲ್ಲಿ ಬಸವಣ್ಣ ಸ್ಥಾಪಿಸಿದ 'ಲಿಂಗಾಯತ'ವೆಂಬ ಧರ್ಮದ ಸ್ವರೂಪವನ್ನು, ಅದು ಮಿಕ್ಕ ಧರ್ಮಗಳಿಗಿಂತ ಪೂರ್ಣವೆಂಬುದನ್ನು ಕುರಿತು ಚರ್ಚಿಸುವುದು ಈ ಲೇಖನದ ಉದ್ದೇಶವಾಗಿದೆ.

ನನ್ನ ದೃಷ್ಟಿಯಲ್ಲಿ 'ಪೂರ್ಣಧರ್ಮ'ದ ಲಕ್ಷಣ ಹೀಗಿದೆ:

೧. ಅದರ ತತ್ವ- ಆಚರಣೆ ಸರಳವಾಗಿರುತ್ತವೆ.
೨. ವ್ಯಕ್ತಿತ್ವದ ಶುದ್ದೀಕರಣ ಮತ್ತು ಸಾಮಾಜೀಕರಣ ಅದರ ಗುರಿಯಾಗಿರುತ್ತದೆ.
೩. ಆ ವ್ಯಕ್ತಿ ತಾನು ಬದುಕುವುದರ ಸಲುವಾಗಿ ಕಾಯಕಪ್ರಜ್ಞೆ, ಇನ್ನೊಬ್ಬರು ಬದುಕುವುದರ ಸಲುವಾಗಿ ದಾಸೋಹಪ್ರಜ್ಞೆಯವನಾಗಿರ ಬೇಕೆಂದು ಅದು ಅಪೇಕ್ಷಿಸುತ್ತದೆ.
೪. ಸಾಮಾಜೀಕರಣಗೊಂಡ ವ್ಯಕ್ತಿಯ ಜೀವನ ಸುಗಮತೆಗಾಗಿ ಸಮಾಜವನ್ನೂ ಶುದ್ಧಗೊಳಿಸುವುದು ಅದರ ಗುರಿಯಾಗಿರುತ್ತದೆ.
೫. ಯಾವುದೇ ವ್ಯಕ್ತಿ ತನ್ನ ಸಿದ್ಧಾಂತ ವರ್ತುಳದ ಒಳಗೆ ಬರಲು, ಹೊರಗೆ ಹೋಗಲು ಅಲ್ಲಿ ಸ್ವಾತಂತ್ರ್ಯವಿರುತ್ತದೆ.
೬ ತನ್ನ ಮೂಲಸಿದ್ಧಾಂತಕ್ಕೆ ಭಂಗಬರದಂತೆ ಆಯಾ ಕಾಲಕ್ಕೆ ಬೇಡವಾದ ಅಂಶಗಳನ್ನು ಹೊರಹಾಕುವ, ಬೇಕಾದ ಅಂಶಗಳನ್ನು ಒಳಗೆ ತೆಗೆದುಕೊಳ್ಳುವ ಮುಕ್ತ ಅವಕಾಶ ಹೊಂದಿರುತ್ತದೆ.

ಲಿಂಗಾಯತವು ಈ ಲಕ್ಷಣಗಳಿಗೆ ಅನುಗುಣವಾದ 'ಪೂರ್ಣ' ಧರ್ಮವಾಗಿದೆ.

ಗುರು ಲಿಂಗ ಜಂಗಮ-ಇವು ಲಿಂಗಾಯತದ ಮೂಲತತ್ವಗಳಾಗಿವೆ. ಈ ಶಬ್ದಗಳು ಕೆಲವು ಧರ್ಮಗಳಲ್ಲಿ ಕಂಡುಬಂದರೂ ಲಿಂಗಾಯತದಲ್ಲಿ ಇವುಗಳ ಅರ್ಥ ವಿಸ್ತಾರಗೊಂಡಿದೆ. ಕೆಲವೊಮ್ಮೆ ಭಿನ್ನವಾಗಿದೆ. ಈ ಶಬ್ದಗಳಿಗೆ ಹೀಗೆ ವಿಸ್ತತ ಇಲ್ಲವೆ ಭಿನ್ನ ಅರ್ಥ ತುಂಬಿದವರು, ಗುರು ಬಸವಣ್ಣ. “ಬಸವ ಮಾಡಿದೊಡಾಯ್ತು ಗುರು ನೆಲೆ, ಬಸವ ಮಾಡಿದೊಡಾಯ್ತು ಲಿಂಗವು, ಬಸವ ಮಾಡಿದೊಡಾಯ್ತು ಜಂಗಮ” ಎಂಬ ಚಾಮರಸನ ಮಾತು ಇದಕ್ಕೆ ಸಾಕ್ಷಿಯಾಗಿದೆ. ಬಸವಣ್ಣನು ಈ “ತ್ರಿವಿಧದ ಪೂರ್ವಾಶ್ರಯವ ಕಳೆದನೆಂದು ಅಂದರೆ ಈ ಮೂರೂ ತತ್ತ್ವಗಳಿಗೆ ಹಳೆಯ ಅರ್ಥಗಳನ್ನು ಕಳೆದು ಹೊಸ ಅರ್ಥ ತುಂಬಿದನೆಂದು ಚೆನ್ನಬಸವಣ್ಣ ಮತ್ತೆ ಮತ್ತೆ ಹೇಳುವುದು ಇದನ್ನೇ.

ಯಾವುದೇ ಧಾರ್ಮಿಕ ತತ್ವದ ಅರ್ಥ ತಿಳಿದೋ ತಿಳಿಯದೆಯೋ ವ್ಯತ್ಯಾಸವಾಗುತ್ತ ಬರುವುದು ಸಹಜ. ಈ ಮೇರೆಗೆ ಇಂದು ಗುರುವೆನ್ನುವುದು ಧಾರ್ಮಿಕ ಆಚರಣೆ ನಿರ್ವಹಿಸುವ ವ್ಯಕ್ತಿ, ಲಿಂಗವೆನ್ನುವುದು ಇಷ್ಟಲಿಂಗ ಇಲ್ಲವೆ ಸ್ಥಾವರಲಿಂಗ, ಜಂಗಮವೆನ್ನುವುದು ಗುರುವೆನ್ನುವುದರ ಪರ‍್ಯಾಯನಾಮವಾಗಿ ಬಳಕೆಯಲ್ಲಿವೆ. ಈ ರೀತಿ ಜನರಲ್ಲಿ ಇಂದು ಗೊಂದಲ ಸೃಷ್ಟಿಸಿರುವ ಈ ಪದಗಳ ನಿಜ ಅರ್ಥವನ್ನು ಕಾಣಬೇಕಾದರೆ ನಾವು ಬಸವಣ್ಣನ ದಾರ್ಶನಿಕತೆಯನ್ನು ಪ್ರತಿಪಾದಿಸುವ ಪ್ರಭುಲಿಂಗಲೀಲೆಯ ಪ್ರಾರ್ಥನಾಪದ್ಯವನ್ನು ಅವಲೋಕಿಸುವುದು ಅಗತ್ಯ :

ಕಾಯದೊಳು ಗುರು ಲಿಂಗ ಜಂಗಮ
ದಾಯತವನರಿಯಲ್ಕೆ ಸುಲಭೋ
ಪಾಯದಿಂದಿದಿರಿಟ್ಟು ಬಾಹ್ಯಸ್ಥಲಕೆ ಕುರುಹಾಗಿ
ದಾಯದೋರಿ ಸಮಸ್ತ ಭಕ್ತ ನಿ
ಕಾಯವನು ಪಾವನವ ಮಾಡಿದ
ರಾಯ ಪೂರ್ವಾಚಾರ‍್ಯ ಸಂಗನಬಸವ ಶರಣಾರ್ಥಿ ||

ಕಾಯದಲ್ಲಿ ಹುದುಗಿರುವ ಗುರು ಲಿಂಗ ಜಂಗಮ ತತ್ವಗಳ ಆಯತ(ವಿಸ್ತಾರ)ವನ್ನು ಅರಿತು ಆಚರಿಸುವುದಕ್ಕೋಸುಗ, ಸುಲಭ ಸಾಧನವೆಂಬ ಇಷ್ಟಲಿಂಗ(ಕುರುಹು)ವನ್ನು ಪರಿಕಲ್ಪಿಸಿಕೊಟ್ಟು, ಸಮಸ್ತ ಜನವರ್ಗವನ್ನು ಪಾವನ ಮಾಡಿದವರು ಗುರು ಬಸವಣ್ಣನೆಂದು ಈ ಪದ್ಯದ ಅರ್ಥ. ಇದರ ಪ್ರಕಾರ ಪ್ರತಿಯೊಬ್ಬನೂ ತಾನು ಗುರುವಾಗಬೇಕು ಅಂದರೆ ಜ್ಞಾನಿಯಾಗಬೇಕು. ತಾನು ಲಿಂಗವಾಗಬೇಕು ಅಂದರೆ ಆ ಜ್ಞಾನವನ್ನು ಕ್ರಿಯೆಯಲ್ಲಿ ಅಳವಡಿಸಬೇಕು. ತಾನು ಜಂಗಮವಾಗಬೇಕು ಅಂದರೆ ಈ ಜ್ಞಾನ-ಕ್ರಿಯಾ ಸಾಮರಸ್ಯದ ವ್ಯಕ್ತಿ ಸಾಮಾಜಿಕನಾಗಬೇಕು.

ಇಲ್ಲಿ 'ಗುರು' ಹಂತದ ಸಾಧನೆಯೆಂದರೆ ಭಕ್ತಸ್ಥಲದಲ್ಲಿ ಜ್ಞಾನವನ್ನು ಗಳಿಸಿಕೊಂಡು ಮಾಹೇಶ್ವರಸ್ಥಲದಲ್ಲಿ ಅದನ್ನು ಗಟ್ಟಿ (Confirm) ಗೊಳಿಸಿಕೊಳ್ಳುವುದು. 'ಲಿಂಗ' ಹಂತದ ಸಾಧನೆಯೆಂದರೆ ಹೀಗೆ ಗಳಿಸಿದ ಜ್ಞಾನವನ್ನು ಪ್ರಸಾದಿಸ್ಥಲದಲ್ಲಿ ಕ್ರಿಯೆಯಾಗಿಸಿಕೊಂಡು ಪ್ರಾಣಲಿಂಗಿಸ್ಥಲದಲ್ಲಿ ಅದನ್ನು ಗಟ್ಟಿ(Confirm)ಗೊಳಿಸಿಕೊಳ್ಳುವುದು. ಈಗ ಅಂಗ'ವು 'ಲಿಂಗ'ವಾಗುತ್ತದೆ. ಅಥವಾ ಶಂಕರಾಚಾರ್ಯರು ಹೇಳುವಂತೆ 'ಅಹಂ' ಎಂಬುದು 'ಸೋಹಂ' ಆಗುತ್ತದೆ. ಲಿಂಗಾಯತ ಪರಿಭಾಷೆಯಲ್ಲಿ ಇದು 'ಲಿಂಗಾಂಗ ಸಾಮರಸ್ಯ'ವೆನಿಸುತ್ತದೆ. ಈಗ ಪಂಚೇಂದ್ರಿಯಗಳ 'ಅಂಗಭೋಗೋಪಭೋಗ' ನಿಂತು, “ಲಿಂಗಭೋಗೋಪಭೋಗ ಜರುಗಲಾರಂಭಿಸುತ್ತದೆ.

ಪ್ರಾಚೀನ ಭಾರತೀಯ ಎಲ್ಲ ಧರ್ಮಗಳು ಸಾಮಾನ್ಯವಾಗಿ ಈ 'ಸೋಹಂ' ಅಥವಾ 'ಪ್ರಾಣಲಿಂಗಿ ಸ್ಥಲಕ್ಕೆ ನಿಲ್ಲುತ್ತವೆ. 'ಅರವಿಂದರು ಈ ಪ್ರಾಣಲಿಂಗಿಸ್ಥಲ ವರೆಗಿನ ತತ್ವ ಹೇಳಿದ್ದು, ಶರಣರು ಪ್ರತಿಪಾದಿಸಿದ ಇದರಾಚೆಗಿನ ಸ್ಥಲತತ್ವ ಅವರಿಗೆ ಹೊಳೆದಿಲ್ಲ'ವೆಂದು ಡಾ. ಹಳಕಟ್ಟಿಯವರು ಹೇಳಿದ ಮಾತನ್ನು ನೆನೆದರೆ, ಪ್ರಾಚೀನಕಾಲದ ಸುಪ್ರಸಿದ್ಧ ಶಂಕರಾಚಾರರಾಗಲೀ, ಆಧುನಿಕ ಕಾಲದ ಸುಪ್ರಸಿದ್ಧ ಅರವಿಂದರಾಗಲೀ ನಾಲ್ಕನೆಯದಾದ 'ಪ್ರಾಣಲಿಂಗಿಸ್ಥಲಕ್ಕೇ ನಿಂತಿರುವರೆಂದು ಸ್ಪಷ್ಟವಾಗುತ್ತದೆ.

ಈವರೆಗೆ ಹೇಳಿದಂತೆ 'ಅಂಗ'ನು 'ಲಿಂಗ' ಹಂತಕ್ಕೆ ಬರುವುದೆಂದರೆ ಜೀವನು ಶಿವನಾಗುವುದು ಅಥವಾ ಆತ್ಮನು ಪರಮಾತ್ಮನಾಗುವುದು. ಇದು ಶರಣರ ಪ್ರಕಾರ ಪೂರ್ಣವ್ಯಕ್ತಿತ್ವವಲ್ಲ. ಪ್ರತಿಯೊಬ್ಬನೂ ತಮ್ಮ ತಮ್ಮ ಮನೆಗಳಲ್ಲಿ, ಗವಿಗಳಲ್ಲಿ ಪರಸ್ಪರ ಸಂಬಂಧವಿಲ್ಲದಂತೆ ಲಿಂಗವಾಗಿ ಉಳಿದರೆ, ಅದರಿಂದ ಯಾರಿಗೆ ಪ್ರಯೋಜನ? ಹಲವು ದಶಕಗಳಿಂದ ಗವಿಯಲ್ಲಿ ತಪಸ್ಸುಮಾಡುತ್ತ ಕುಳಿತ ಯತಿಯನ್ನು ಕುರಿತು ವಿವೇಕಾನಂದರು “ಹಲವು ಶತಮಾನಗಳಿಂದ ಇಲ್ಲಿ ಬಿದ್ದಿರುವ ಕಲ್ಲು ಈ ಯತಿಗಿಂತ ಶ್ರೇಷ್ಠವೆಂದು ಹೇಳಿದುದು ಇಲ್ಲಿ ನೆನಪಾಗುತ್ತದೆ.

ಹೀಗೆ ಗುರು ಲಿಂಗ ತತ್ವಗಳನ್ನು ಅಳವಡಿಸಿಕೊಂಡ ವ್ಯಕ್ತಿಯು 'ಲಿಂಗವ ಪೂಜಿಸಿದರೆ ಭವ ಹಿಂಗದು” (ಬ.ವ. ೧೩೩೪.ದ್ವಿ.ಆ)ಎಂಬ ಕಾರಣದಿಂದ, ಮುಂದುವರಿದು ಜಂಗಮನಾಗಬೇಕೆಂದು ಶರಣರು ಹೇಳುತ್ತಾರೆ. ಹೀಗೆ ಜಂಗಮನಾಗುವುದೆಂದರೆ ದೈವಿಕ (=ಲಿಂಗ)ನಾಗಿರುವವನು ಮುಂದುವರಿದು ಸಾಮಾಜಿಕನಾಗುವುದು. ಈಗ ಪ್ರಾಣಲಿಂಗಿಸ್ಥಲದ ವರೆಗೆ ಆತ್ಮವಾದಿಯಾಗಿದ್ದ ಅವನು ಶರಣಸ್ಥಲದಲ್ಲಿ ಸಮಾಜವಾದಿಯಾಗಿ ಐಕ್ಯಸ್ಥಲದಲ್ಲಿ ಅದನ್ನು (Con- firm) ಗಟ್ಟಿಗೊಳಿಸಿಕೊಳ್ಳುತ್ತಾನೆ. ಹೀಗಾಗಿ ಶರಣನೆಂದರೆ ಬಿಡಿ ವ್ಯಕ್ತಿಯಲ್ಲ,'ಸಾಮಾಜಿಕ ವ್ಯಕ್ತಿ'. ಇನ್ನೂ ಸರಿಯಾಗಿ ಹೇಳುವುದಾದರೆ 'ಸಾಮಾಜಿಕ ಸದಸ್ಯ. ವ್ಯಕ್ತಿ ಬೇರೆ, ಸದಸ್ಯ ಬೇರೆ. ವ್ಯಕ್ತಿಗೆ ವೈಯಕ್ತಿಕ ಪ್ರಗತಿ ಮುಖ್ಯವಾದರೆ, ಸದಸ್ಯನಿಗೆ ಹೆಚ್ಚಿನದಾಗಿ ಸಾಮಾಜಿಕ ಪ್ರಗತಿಯ ಜವಾಬ್ದಾರಿಯೂ ಮುಖ್ಯವಾಗಿರುತ್ತದೆ. ಒಟ್ಟಾರೆ, ಲಿಂಗಾಯತ ಸಂವಿಧಾನದಲ್ಲಿ ವ್ಯಕ್ತಿಗಳಿಲ್ಲ, ಸದಸ್ಯರಿದ್ದಾರೆ. ನಾನು ನನಗಾಗಿ ಎನ್ನುವವನೇ ವ್ಯಕ್ತಿ, ಮುಂದುವರಿದು ನಾನು ಸಮಾಜಕ್ಕಾಗಿ ಎನ್ನುವವನೇ ಸದಸ್ಯ ಆದುದರಿಂದ ಲಿಂಗಾಯತದಲ್ಲಿ ಕೇವಲ ನಾನು ನನ್ನ ಉದ್ದಾರಕ್ಕಾಗಿ ಎನ್ನುವ ಪ್ರಾಣಲಿಂಗಿ ಅಂದರೆ ಭಕ್ತರಿಲ್ಲ. ಮುಂದುವರಿದು ನಾನು ಸಮಾಜದ ಉದ್ಧಾರಕ್ಕಾಗಿ ಎನ್ನುವ ಶರಣರಿದ್ದಾರೆ. 'ಭಕ್ತ'ನಾಗುವುದಕ್ಕಿಂತ 'ಶರಣ'ನಾಗುವುದು ಮುಖ್ಯವೆಂಬುದು ಶರಣರ ಅಭಿಮತ. ಅದಕ್ಕಾಗಿಯೇ ಚೆನ್ನಬಸವಣ್ಣನವರು “ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶರಣ” ಎನ್ನುವುದು. ಇಲ್ಲಿ ಶರಣನೆಂದರೆ ಶಿವನಿಗೆ (ಲಿಂಗಕ್ಕೆ) ಶರಣಾದವನಲ್ಲ, ಶಿವನನ್ನೇ (ಲಿಂಗವನ್ನೇ) ಪ್ರಾಣವಾಗಿಸಿಕೊಂಡು, ಸಮಾಜಕ್ಕೆ ಶರಣಾದವನು. ಈ ಕಾರಣದಿಂದಾಗಿ ಈ ಧರ್ಮದ ಸದಸ್ಯರನ್ನು ಪ್ರಾಣಲಿಂಗಿ(ಭಕ್ತ)ಯೆಂದು ಕರೆಯದೆ 'ಶರಣ'ನೆಂದು ಕರೆಯುವುದೂ, ಇಂಥವರ ಸಮುದಾಯವನ್ನು ಶರಣಸಮಾಜವೆಂದು ಕರೆಯುವುದೂ ರೂಢಿಯಲ್ಲಿದೆ.

ಒಂದು ಉದಾಹರಣೆಯಿಂದ ಲಿಂಗವೆಂಬ ವ್ಯಕ್ತಿ, ಜಂಗಮವೆಂಬ ಸದಸ್ಯ ಇವುಗಳ ವ್ಯತ್ಯಾಸವನ್ನು ಸ್ಪಷ್ಟಪಡಿಸಿಕೊಳ್ಳಬಹುದು: ನೀರಿನಲ್ಲಿ ಹಾಕಿದ ಮುತ್ತು ತಾನು ಸ್ವಚ್ಛವಾಗುತ್ತದೆ. ನೀರಿಗೆ ಅದರಿಂದ ಏನೂ ಪ್ರಯೋಜನವಿಲ್ಲ. ಮುತ್ತಿನ ಬದಲು ಸಕ್ಕರೆಯ ತುಂಡು ಹಾಕಿದರೆ ತಾನು ಕರಗಿ ಇಡೀ ನೀರನ್ನೇ ಸಿಹಿ ಮಾಡುತ್ತದೆ, ಅಂದರೆ ಇಡೀ ನೀರೇ ತಾನಾಗುತ್ತದೆ. ಇದೇ ರೀತಿ ವ್ಯಕ್ತಿಯಾದವನು ಸಮಾಜವೆಂಬ ನೀರಿನಲ್ಲಿ ಮುತ್ತಿನಂತಿದ್ದರೆ 'ಲಿಂಗ', ಸಕ್ಕರೆಯ ತುಂಡಿನಂತಿದ್ದರೆ ಜಂಗಮ. ಇದೇ ಲಿಂಗಾಯತದ ಪೂರ್ಣಸಿದ್ಧಾಂತ. ಬಸವಣ್ಣ ಇದಕ್ಕೆ ಪರಮಾವಧಿ ನಿದರ್ಶನ. ಅದಕ್ಕಾಗಿಯೇ ಚೆನ್ನಬಸವಣ್ಣನವರು

ಕವಿತ್ವ ಸಾಧಕರೆಲ್ಲ ಕಳವಳಿಸಿ ಹೋದರು
ವಿದ್ಯಾ ಸಾಧಕರೆಲ್ಲ ಬುದ್ಧಿಗೆಟ್ಟರು
ಲಿಂಗ ಸಾಧಕರೆಲ್ಲ ಭೂಭಾರಕರಾದರು
ನಮ್ಮ ಕೂಡಲ ಚೆನ್ನಸಂಗಯ್ಯನಲ್ಲಿ
ಜಂಗಮ ಸಾಧಕನಾದಾತ ಬಸವಣ್ಣನೊಬ್ಬನೇ


ಎಂದು ಹೇಳಿದ್ದಾರೆ. ಇದೆಲ್ಲವನ್ನು ನೋಡಿದರೆ ಲಿಂಗೈಕ್ಯ(ಲಿಂಗಾಂಗ ಸಾಮರಸ್ಯ)ವೇ ಈ ಧರ್ಮದ ಅಂತಿಮ ಗುರಿಯಲ್ಲ, ಜಂಗಮೈಕ್ಯ (ಅಂಗ-ಲಿಂಗ-ಜಂಗಮ ಸಾಮರಸ್ಯ)ವೇ ಈ ಧರ್ಮದ ಅಂತಿಮ ಗುರಿಯೆಂದು ಹೇಳಬಹುದಾಗಿದೆ. ಆದುದರಿಂದ ವಚನ ಸಾಹಿತ್ಯದಲ್ಲಿ ಲಿಂಗೈಕ್ಯದೊಂದಿಗೆ 'ಜಂಗಮೈಕ್ಯ', ಲಿಂಗವಂತದೊಂದಿಗೆ 'ಲಿಂಗಜಂಗಮವಂತ' ಪರಿಭಾಷೆಗಳು ಕಂಡುಬರುತ್ತವೆ. ಒಟ್ಟಾರೆ, ಮೂಲತಃ ಅಹಂ ಹಂತದ ವ್ಯಕ್ತಿ ಪ್ರಸಾದಿ-ಪ್ರಾಣಲಿಂಗಿ ಸ್ಥಲದ ವರೆಗೆ 'ಸೋಹಂ' ಹಂತಕ್ಕೆ ಬಂದು, ಶರಣ-ಐಕ್ಯ ಸ್ಥಲಗಳಲ್ಲಿ 'ದಾಸೋಹಂ' ಹಂತಕ್ಕೆ ಹಿಗ್ಗುತ್ತಾನೆ. ಅದಕ್ಕಾಗಿಯೇ “ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ ಎಂದು ಬಸವಣ್ಣನವರು ಹೇಳಿದ್ದಾರೆ. ಇದು ಶರಣ ಸಿದ್ಧಾಂತದ ಮಹಾವಾಕ್ಯವಾಗಿದೆ.

ಗುರು ಲಿಂಗ ಜಂಗಮ ತತ್ವಗಳಿಂದ ಪೂರ್ಣವೆನಿಸುವ ವ್ಯಕ್ತಿತ್ವಕ್ಕೆ ಪೂರಕವಾದ ಇನ್ನೆರಡು ಆಯಾಮಗಳನ್ನು ಶರಣರು ಜೋಡಿಸಿದರು. ಅವು: ಕಾಯಕ ಮತ್ತು ದಾಸೋಹ. ಮೇಲೆ ಹೇಳಿದ ಲಿಂಗವೆಂಬ ವ್ಯಕ್ತಿಯು ಜಂಗಮವೆಂಬ ಸದಸ್ಯನಾಗಿ ಬದುಕಲು ದುಡಿಯಬೇಕು. ಲಿಂಗಾಯತನೆನಿಸುವವನಿಗೆ ಇದು ಕಡ್ಡಾಯ. 'ಕಾಯಕವಿಲ್ಲದವ ಭಕ್ತನಲ್ಲ'ವೆಂಬ ಶರಣೆ ಕಾಳವ್ವೆಯ ಮಾತು ಇದನ್ನು ಸ್ಪಷ್ಟಪಡಿಸುತ್ತದೆ. ಈ ಹಿಂದೆ ಹೇಳಿದಂತೆ ಗುರು ಲಿಂಗ ಜಂಗಮ ಮುಖ್ಯ. ಆದರೆ ಕಾಯಕದಲ್ಲಿ ನಿರತನಾದರೆ ಈ “ಗುರುದರ್ಶನವಾದರೂ ಮರೆಯಬೇಕು, ಲಿಂಗಪೂಜೆಯಾದರೂ ಮರೆಯಬೇಕು, ಜಂಗಮ ಮುಂದಿದ್ದರೂ ಹಂಗು ಹರಿಯಬೇಕು” ಎನ್ನುವಲ್ಲಿ ಇವುಗಳಿಗಿಂತ ಕಾಯಕ ಶ್ರೇಷ್ಠವೆಂಬ ಧ್ವನಿಯಿದೆ. ಸಾಮರ್ಥ್ಯವಿರುವಷ್ಟು ದುಡಿಯಬೇಕು, ಅವಶ್ಯವಿರುವಷ್ಟು ಪಡೆಯಬೇಕು-ಎಂಬುದು ಕಾಯಕದ ಹಿಂದಿನ ತತ್ವವಾಗಿದೆ. ಬೌದ್ಧಧರ್ಮದಲ್ಲಿ ಬೇಡಿತಿನ್ನುವ ಭಿಕ್ಷುಗಳಿದ್ದಾರೆ, ಲಿಂಗಾಯತಧರ್ಮದಲ್ಲಿ ದುಡಿದು ಉಣ್ಣುವ ಕಾಯಕಜೀವಿಗಳಿದ್ದಾರೆ ಎಂಬುದು ಎತ್ತಿ ಹೇಳಬೇಕಾದ
ಅಂಶವಾಗಿದೆ.

ಈ ಕಾಯಕ ಸಾರ್ಥಕವಾಗುವುದು ದಾಸೋಹದಲ್ಲಿ, ಕಾರಣ, ಕಾಯಕದಲ್ಲಿ ಗಳಿಸಿದುದನ್ನು ದಾಸೋಹದಲ್ಲಿ ವಿನಿಯೋಗಿಸಬೇಕು. ನಾನು ದುಡಿಯಬೇಕು, ನಾವು ಉಣ್ಣಬೇಕು' ಎಂಬುದು ಇವರ ಧೈಯವಾಗಿದ್ದು, ಹೀಗೆ ಎಲ್ಲರೂ ನಡೆದುಕೊಂಡರೆ ಸುಖೀ ಸಮಾಜ ತಾನಾಗಿಯೇ ನಿರ್ಮಾಣವಾಗುತ್ತದೆ. ಒಟ್ಟಾರೆ, ಗುರು ಲಿಂಗ ಜಂಗಮ ಕಾಯಕ ದಾಸೋಹ-ಈ ಐದು ಲಿಂಗಾಯತ ಧರ್ಮದ, ಯಾವುದೇ ಪೂರ್ಣಧರ್ಮದ ಲಕ್ಷಣಗಳಾಗಿವೆ.

ಲಿಂಗವಾದವನು ಹೀಗೆ ಜಂಗಮ ಅಂದರೆ ಸಾಮಾಜಿಕ ಸದಸ್ಯನಾಗಬೇಕೆಂದು ಈ ಧರ್ಮ ಹೇಳಿದರೆ, ಮಿಕ್ಕ ಧರ್ಮಗಳು 'ಸಾಮಾಜಿಕದ ಗೊಡವೆಗೆ ಹೋಗದೆ, ಲಿಂಗವಾದವನು 'ಮಾನವಿಕನಾಗಬೇಕೆಂದು ಹೇಳಿ, ಸಾಮಾಜಿಕ ಸಂಬಂಧದಿಂದ ಜಾರಿಕೊಳ್ಳುತ್ತವೆ. ನಿಮ್ಮ ನಿಮ್ಮ ವರ್ಣಗಳಲ್ಲಿಯೇ ಇದ್ದು 'ಸತ್ಯಂ ವದ ಧರ್ಮಂ ಚರ', 'ಅಹಿಂಸಾ ಪರಮೋ ಧರ್ಮಃ' ಇತ್ಯಾದಿ ಪಾಲಿಸಿರೆನ್ನುತ್ತ ಮಾನವಿಕ ಉಪದೇಶದಲ್ಲಿ ವಿರಮಿಸುತ್ತವೆಯೇ ಹೊರತು, ವರ್ಣ ಇತ್ಯಾದಿಗಳ ಸಾಮಾಜಿಕ ಬದಲಾವಣೆಗೆ ಕೈಹಾಕುವುದಿಲ್ಲ. ಇಲ್ಲಿ 'ಮಾನವಿಕ' ವೆಂಬುದು ನಿತ್ಯ ಚಲಾವಣೆಗೆ ಬಾರದ ಬಂಗಾರವಿದ್ದ ಹಾಗೆ, ಸಾಮಾಜಿಕವೆನ್ನುವುದು ನಿತ್ಯ ಚಲಾವಣೆಗೆ ಬರುವ ಆಭರಣವಿದ್ದ ಹಾಗೆ, ಶರಣರು 'ಕಳಬೇಡ ಕೊಲಬೇಡ' ಎಂಬಂಥ ಮಾನವಿಕ ಬೋಧನೆ ವ್ಯಕ್ತಪಡಿಸಿದುದಲ್ಲದೆ, “ಕುಲವನರಸುವರೇ ಶರಣರಲ್ಲಿ, ಜಾತಿ ಸಂಕರವಾದ ಬಳಿಕ?” ಎಂಬಂಥ ವಚನಗಳ ಮೂಲಕ 'ಸಾಮಾಜಿಕ ಬದಲಾವಣೆಗೂ ಕೈಹಾಕಿದರು. ಈವರೆಗೂ ಸಾಮಾನ್ಯವಾಗಿ ಭಾರತದಲ್ಲಿ ಯಾವ ಧಾರ್ಮಿಕ ಮಹಾಪುರುಷನೂ ಹತ್ತಿರ ಬರಲು ಹೆದರುತ್ತಿದ್ದ ಸಾಮಾಜಿಕ ಬದಲಾವಣೆಗೆ ಧೀರ ಹೆಜ್ಜೆ ಹಾಕಿದರು.

ದೂರ್ತರಾದವರು ಸಾಮಾಜಿಕ ನ್ಯಾಯದ ಸೋಗಿನಲ್ಲಿ ಲಿಂಗಭೇದ, ವರ್ಗಭೇದ, ವರ್ಣಭೇದ ಇತ್ಯಾದಿ ಭೇದಗಳನ್ನು ಕಲ್ಪಿಸಿ, ಸಮಾಜವನ್ನು ಶೋಷಣೆ ಮಾಡುತ್ತಿರುತ್ತಾರೆ. ಈ ಭೇದಗಳನ್ನು ನಿವಾರಿಸಿ ಸಾಮಾಜಿಕ ನ್ಯಾಯ ಸ್ಥಾಪಿಸುವುದೆಂದರೆ, ಮುಖ್ಯವಾಗಿ ಪುರೋಹಿತಶಾಹಿ, ಬಂಡವಾಳಶಾಹಿ, ಅಧಿಕಾರಶಾಹಿ ಮೊದಲಾದ ದುಷ್ಟರನ್ನು ಎದುರು ಹಾಕಿಕೊಳ್ಳುವುದು. ಇದಕ್ಕೆ ಹೆದರಿ ನಮ್ಮ ಧಾರ್ಮಿಕ ಮಹಾಪುರುಷರು ಅಂಗವು ಲಿಂಗವಾಗುವವರೆಗೆ ಹೇಳಿ, ಬಳಿಕ ಮೂರ್ತ 'ಸಮಾಜ'ಕ್ಕೆ ಬರದೆ, ಅಮೂರ್ತ 'ಮಾನವಿಕ'ದ ಬಗ್ಗೆ ಮಾತನಾಡಿದುದೇ ಹೆಚ್ಚು. ಹೀಗೆ ಅಮೂರ್ತ ಮಾನವಿಕ'ದ ಬಗ್ಗೆ ಮಾತನಾಡಿ ಸಾಮಾಜಿಕ ಗೌರವ ಗಳಿಸಿಕೊಳ್ಳುವವರು ಆಚಾರ‍್ಯರು, ಉದಾ: ಶಂಕರಾಚಾರ‍್ಯರು, ಪಂಚಾಚಾರ‍್ಯರು ಇತ್ಯಾದಿ. ಮೂರ್ತ 'ಸಾಮಾಜಿಕ'ದ ಬಗ್ಗೆ ಮಾತನಾಡಿ ಸಾಮಾಜಿಕ ಹಿಂಸೆ ಅನುಭವಿಸುವವರು ಅನುಭಾವಿಗಳು, ಉದಾ: ಏಸು, ಬಸವಣ್ಣ ಇತ್ಯಾದಿ.

ಬಸವಣ್ಣ ಹುಟ್ಟುವ ಹೊತ್ತಿಗೆ ವ್ಯಕ್ತಿ-ಸಮಾಜ ಜಂಗಮಸ್ಥಿತಿಯಿಂದ ಸ್ಥಾವರ ಸ್ಥಿತಿಗೆ ಹೊರಳಿದ್ದವು. ಸ್ಥಾವರವಾಗಿದ್ದ ವ್ಯಕ್ತಿಗಳು ಸ್ಥಾವರವಾಗಿದ್ದ ಸಮಾಜದ ದುರ್ಲಾಭ ಪಡೆಯುತ್ತಿದ್ದರು. ಇದನ್ನು ಅಲ್ಲಮಪ್ರಭುಗಳು

ಸಂಸಾರವೆಂಬ ಹೆಣ ಬಿದ್ದಿರೆ
ತಿನ ಬಂದ ನಾಯಿ ಜಗಳವ ನೋಡಿರೇ
ನಾಯಿ ಜಗಳವ ನೋಡಿ ಹೆಣನೆದ್ದು ನಗುತಲಿದೆ
ಗುಹೇಶ್ವರಲಿಂಗ ಅಲ್ಲಿಲ್ಲ ಕಾಣಿರೇ.

ಎಂದು ತಿಳಿಸಿದ್ದಾರೆ. ಮೂಲತಃ ಸಮಾಜವೆನ್ನುವುದು ಜಂಗಮವಾಗಿರುತ್ತದೆ. ಮೇಲೆ ಹೇಳಿದ ವರ್ಣ ವರ್ಗ ಲಿಂಗ ಭೇದನೀತಿಯಿಂದಾಗಿ ಅದು ಸ್ಥಾವರವಾಗುತ್ತದೆ. ಅಂದರೆ ಹೆಣವಾಗುತ್ತದೆ. ಆಗ ಜಂಗಮವಾಗಿರುವ ವ್ಯಕ್ತಿಯೂ ಸ್ಥಾವರವಾಗಿ ಅಂದರೆ ನಾಯಿಯಾಗಿ ಅದನ್ನು ಹರಿದು ತಿನ್ನತೊಡಗುತ್ತಾನೆ. ಈ ಪರಿಸ್ಥಿತಿ ಪಲ್ಲಟವಾಗಬೇಕಾದರೆ ಸ್ಥಾವರವಾಗಿರುವ ಅಂಗನು ಜಂಗಮವಾಗುವಂತೆ, ಸ್ಥಾವರವಾಗಿರುವ ಸಮಾಜವೂ ಜಂಗಮವಾಗಬೇಕು. ಆಗ ಈ ಉಭಯ ಘಟಕ(ವ್ಯಕ್ತಿ-ಸಮಾಜ)ಗಳಲ್ಲಿ ವ್ಯವಹಾರ ಸಾಮರಸ್ಯ ಸಾಧ್ಯವಾಗುತ್ತವೆ. ಹೀಗಾಗಿ ಜಂಗಮವಾದ ಶರಣರು ಸಮಾಜವನ್ನೂ ಜಂಗಮಗೊಳಿಸಲು ನಿರತರಾದರು. ಇಲ್ಲಿ ಅಂಗನನ್ನು ಲಿಂಗಗೊಳಿಸುವುದೆಂದರೆ ಹೊಸ ಧರ್ಮವನ್ನು ಸೃಷ್ಟಿಸುವುದು, ಸಮಾಜವನ್ನೂ ಜಂಗಮಗೊಳಿಸುವುದೆಂದರೆ ಜೊತೆಗೆ ಹೊಸ ಸಮಾಜವನ್ನೂ ಸೃಷ್ಟಿಸುವುದು. ಆದುದರಿಂದ ಶರಣರದು ಕೇವಲ ಹೊಸ ಧರ್ಮವನ್ನಲ್ಲ, ಮುಂದುವರಿದು ಹೊಸ ಸಮಾಜವನ್ನೂ ನಿರ್ಮಾಣಮಾಡುವ ಮಣಿಹವಾಗಿದೆ. ಈ ಮಣಿಹದಲ್ಲಿ ಮುಖ್ಯವೆನಿಸುವ ಲಿಂಗಭೇದ, ವರ್ಗಭೇದ, ವರ್ಣಭೇದ ನಿರಾಕರಣೆಯ ವಿಷಯದಲ್ಲಿ ಶರಣರ ನಿಲವು ಹೀಗಿದ್ದಿತು:

೧೨ನೆಯ ಶತಮಾನದ ಹೊತ್ತಿಗೆ ಹೆಣ್ಣು ಧಾರ್ಮಿಕ ಮತ್ತು ಲೌಕಿಕ ಸ್ತರಗಳಲ್ಲಿ ತುಂಬ ಉಪೇಕ್ಷೆಗೆ ಗುರಿಯಾಗಿದ್ದಳು. ಧಾರ್ಮಿಕ ಅಸ್ಪೃಶ್ಯತೆಗೆ ಕಾರಣವಾದುದು ಅವಳ ಮಾಸಿಕ ಋತುಚಕ್ರ ಶರಣರು 'ಸತಿ ಭಕ್ತಿಯಾದರೆ ಹೊಲೆಗಂಜಲಾಗದು' ಎನ್ನುತ್ತ ಅವಳನ್ನು ಅಸ್ಪೃಶ್ಯತೆಯಿಂದ ಸ್ಪಶ್ಯತೆಗೆ ಕರೆತಂದರು. “ಮೊಲೆ, ಮುಡಿ ಬಂದರೆ ಹೆಣ್ಣೆಂಬರು, ಮೀಸೆ ಕಾಸೆ ಬಂದರೆ ಗಂಡೆಂಬರು, ಒಳಗೆ ಸುಳಿವ ಆತ್ಮ ಗಂಡೂ ಅಲ್ಲ, ಹೆಣ್ಣೂ ಅಲ್ಲ” ಎಂದು ಸಾರಿ ಅವಳನ್ನು ಪಾರಮಾರ್ಥಿಕವಾಗಿ ಪುರುಷನ ಸಮಾನ ನಿಲ್ಲಿಸಿದರು. 'ಕೂಟಕ್ಕೆ ಸತಿಪತಿಯೆಂಬ ನಾಮವಲ್ಲದೆ ಅರಿವಿಂಗೆ ಬೇರೊಂದೊಡಲಂಟೇ?' ಎಂದು ಪ್ರಶ್ನಿಸುವ ಮೂಲಕ ಲೌಕಿಕವಾಗಿಯೂ ಅವಳು ಪುರುಷನಿಗೆ ಸಮಾನಳೆನಿಸಿದಳು.

ಸಮಾಜದಲ್ಲಿ ವರ್ಗಭೇದವೆನ್ನುವುದು ಅರ್ಥ ಮತ್ತು ಅಧಿಕಾರಗಳಿಗೆ ಸಂಬಂಧಿಸಿರುತ್ತದೆ. ಶರಣ ಸಂವಿಧಾನದಲ್ಲಿ ಗುರು(ಜ್ಞಾನ)ವಿಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಅಂದರೆ ಸಮಾಜಕ್ಕೆ ಧನ ವಿನಿಯೋಗಿಸಬೇಕೆಂದು ಹೇಳಲಾಗಿದೆ. ಸಮಾಜದಲ್ಲಿ ಸಮಾನತೆಯನ್ನುಂಟು ಮಾಡುವ ಸಾಧನಗಳಲ್ಲಿ ಹಣ ತುಂಬ ಮುಖ್ಯವಾದುದು. ಈ ತತ್ವವನ್ನು ನಂಬಿದ ಶರಣರು ಅದರ ಸಮಾನ ವಿನಿಯೋಗದತ್ತ ಒತ್ತು ನೀಡುವುದರ ಸಲುವಾಗಿ 'ಧನವನಿರಿಸದಿರಾ', 'ಕಡ ಬಡ್ಡಿಯ ಕೊಡಲಾಗದು' ಇತ್ಯಾದಿ ವಚನಗಳನ್ನು ಮಂಡಿಸಿದರು. ಹೀಗಾಗಿ ಈ ಸಮಾಜದಲ್ಲಿ ಬಡವರೂ ಇಲ್ಲ, ಶ್ರೀಮಂತರೂ ಇಲ್ಲ, ಎಲ್ಲರೂ ಸಂತೃಪ್ತರಾಗಿದ್ದಾರೆ.

ವರ್ಗಭೇದ ನಿರ್ಮಿಸುವ ಇನ್ನೊಂದು ಅಂಶ ಅಧಿಕಾರ, ಶರಣರ ಪ್ರಕಾರ ಈ ಲೋಕದ ಮೇಲೆ ಯಾರ ಅಧಿಕಾರವೂ ಇಲ್ಲ, ದೇವರ ಅಧಿಕಾರವಿದೆ. ನಮಗೆಲ್ಲ ಲೋಕವೆನ್ನುವುದು ಬದುಕಲು ಒಂದು ಅವಕಾಶವೇ ಹೊರತು, ಅದು ಅಧಿಕಾರದ ಮಾಧ್ಯಮವಲ್ಲ. ಕೂಡಲ ಸಂಗನ ಲೋಕವ 'ಹಂಚಿಕೊಳ್ಳಿ ನಿಮನಿಮಗೆ ಎಂಬ ಮಾತು ಹಣ ಮತ್ತು ಅಧಿಕಾರ ಇತ್ಯಾದಿಗಳ ಸಮಾನ ಹಂಚಿಕೆಯನ್ನೇ ಸೂಚಿಸುತ್ತದೆ.

ಇವೆಲ್ಲವುಗಳಿಗಿಂತ ವೈದಿಕದ ವರ್ಣಭೇದ ನಿರಾಕರಣೆ ಶರಣ ಸಂವಿಧಾನದ ಮುಖ್ಯ ನೀತಿಯಾಗಿದೆ. ವೃತ್ತಿಯು ಜಾತಿಯಾಗಿ, ಜಾತಿಯು ಜಾತಿಧರ್ಮವಾಗಿದ್ದ ಕಾಲವದು. ಇದನ್ನು ಮತ್ತೆ ವೃತ್ತಿ(ಕಾಯಕ)ಗೆ ಹಿಂದಿರುಗಿಸುವುದು ಶರಣರ ಧೋರಣೆಯಾಗಿದ್ದಿತು. ಹೀಗಾಗಿ ಶರಣಧರ್ಮವು ಕುರುಬ, ಬೇಡಗಳಂತೆ ಜಾತಿಯಲ್ಲ, ಬ್ರಾಹ್ಮಣ, ಜೈನಗಳಂತೆ ಜಾತಿಧರ್ಮವಲ್ಲ; ಈ ಜಾತಿಧರ್ಮ ಮತ್ತು ಜಾತಿಗಳಿಗೆ ಮೂಲವಾಗಿರುವ ವೃತ್ತಿಧರ್ಮ ಅಥವಾ ಕಾಯಕಧರ್ಮವಾಗಿದೆ. ಅಂದರೆ ಪ್ರತಿಯೊಬ್ಬ ಭೌತಿಕ ನೆಲೆಯಲ್ಲಿ ವೃತ್ತಿ ಕೈಕೊಳ್ಳಬೇಕು, ಪಾರಮಾರ್ಥಿಕ ನೆಲೆಯಲ್ಲಿ ಲಿಂಗಾಯತವೆಂಬ ಸಂವಿಧಾನವನ್ನು ಅನುಸರಿಸಬೇಕೆಂಬ ಧರ್ಮವಾಗಿದೆ. ಇದು ವ್ಯಕ್ತಿ ನೆಲೆಯಲ್ಲಿ ಗುರು ಲಿಂಗ ಜಂಗಮ ಕಾಯಕ ದಾಸೋಹವೆಂಬ ಐದು ಆಯಾಮಗಳನ್ನೊಳಗೊಂಡ, ಸಮಾಜ ನೆಲೆಯಲ್ಲಿ ಸಮಾನತೆಯನ್ನೊಳಗೊಂಡ ಪೂರ್ಣಧರ್ಮವಾಗಿದೆ. ಪೂರ್ಣಧರ್ಮ ಮುಕ್ತವಾಗಿರುತ್ತದೆ, ಜಾತಿಧರ್ಮ ಬದ್ಧವಾಗಿರುತ್ತದೆ. ಜಾತಿಧರ್ಮದಲ್ಲಿ ಹೊರಗೆ ಹೋಗಬಹುದಾದರೂ ಒಳಗೆ ಬರುವ ಅವಕಾಶವಿರುವುದಿಲ್ಲ. ಪೂರ್ಣಧರ್ಮದಲ್ಲಿ ಹೊರಗೂ ಹೋಗಬಹುದು, ಒಳಗೂ ಬರಬಹುದು.

ಪೂರ್ಣಧರ್ಮ ಸಂದರ್ಭದಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಸಂಸಾರ, ಲಿಂಗಾಯತವು ಸನ್ಯಾಸ ಧರ್ಮವಲ್ಲ, ಸಂಸಾರಧರ್ಮ. ಒಂದು ಕುಟುಂಬಕ್ಕೆ ಒಂದು ಧರ್ಮವೆಂಬ ಕಡ್ಡಾಯವಿಲ್ಲಿದೆ. ಎಲ್ಲ ಸದಸ್ಯರು ಒಂದು ಧರ್ಮವನ್ನು ಆಚರಿಸುತ್ತಿದ್ದರೆ ಮಾತ್ರ ಕುಟುಂಬಘಟಕ ಗಟ್ಟಿಯಾಗಿ, ಸುಖಿಯಾಗಿ ಬಾಳುತ್ತದೆ. ಹೀಗಾಗಿ ಈ ಮೊದಲು ಅಸ್ತಿತ್ವದಲ್ಲಿದ್ದ 'ಗಂಡ ಶಿವಲಿಂಗದೇವರ ಭಕ್ತ, ಹೆಂಡತಿ ಮಾರಿ ಮಸಣಿಯ ಭಕ್ತಿ' ಎಂಬ ಧರ್ಮ+ಜಾತಿ ಮಿಶ್ರಣ ಕುಟುಂಬವನ್ನಾಗಲೀ, “ಹೆಂಡತಿ ಮಾಹೇಶ್ವರಿ, ಗಂಡ ಜೈನ' ನೆಂಬ ಧರ್ಮ+ಧರ್ಮ ಮಿಶ್ರಣ ಕುಟುಂಬವನ್ನಾಗಲೀ ಇದು ಒಪ್ಪುವುದಿಲ್ಲ. ಶರಣಧರ್ಮವೆಂಬ ಕುಟುಂಬ ವ್ಯವಸ್ಥೆಗೆ ಒಪ್ಪುವವರು ಅದರ ಒಳಗೆ ಬರಬಹುದು, ಒಪ್ಪದವರು ಹೊರಗೆ ಹೋಗಬಹುದು ಎಂಬ ನಿಲವಿನ ಈ ಧರ್ಮ, ಒಂದು ಕುಟುಂಬಕ್ಕೆ ಒಂದು ಧರ್ಮ-ಎಂಬ ಸಿದ್ಧಾಂತವನ್ನು ಕಲ್ಪಿಸಿದೆ.

ಕೊನೆಯದಾಗಿ, ಲಿಂಗಾಯತವು ಪೂರ್ಣಧರ್ಮವೂ ಹೌದು, ಪೂರ್ಣದಿಂದ ಪೂರ್ಣದತ್ತ ಸಾಗುವ ಧರ್ಮವೂ ಹೌದು. ಪೂರ್ಣಧರ್ಮವೇಕೆಂದರೆ ಮೇಲೆ ಹೇಳಿದಂತೆ ಪೂರ್ಣಜೀವನಕ್ಕೆ ಅವಶ್ಯವಾದ ಗುರು, ಲಿಂಗ, ಜಂಗಮ, ಕಾಯಕ, ದಾಸೋಹಗಳೆಂಬ ಐದು ಲಕ್ಷಣಗಳು ಈ ಧರ್ಮಕ್ಕಿವೆ. ಪೂರ್ಣದಿಂದ ಪೂರ್ಣಕ್ಕೆ ಸಾಗುವ ಧರ್ಮವೇಕೆಂದರೆ, ಯಾವುದೇ ಧರ್ಮದ ತತ್ವಗಳು ಆಯಾ ಸಂದರ್ಭದ ಸೃಷ್ಟಿಯಾಗಿರುತ್ತಿದ್ದು, ಬದಲಾದ ಸಂದರ್ಭದಲ್ಲಿ ಅದು ತನ್ನ ಮೂಲತತ್ವಕ್ಕೆ ಧಕ್ಕೆ ಬರದಂತೆ ಪರಿಷ್ಕಾರವಾಗುತ್ತ ಹೋಗುತ್ತದೆ. ಹೀಗಾಗಿ ಇಂಥ ಪೂರ್ಣಧರ್ಮಕ್ಕೆ ನಿರ್ದಿಷ್ಟ ಪಠ್ಯವಿರುವುದಿಲ್ಲ, ಸ್ಕೂಲಪಠ್ಯವಿರುತ್ತದೆ. ಅದಕ್ಕಾಗಿಯೇ ಲಿಂಗಾಯತಕ್ಕೆ ಬೈಬಲ್, ಕುರಾನ್‌ಗಳಂತೆ ನಿರ್ದಿಷ್ಟ ಪಠ್ಯವಿರದೆ ವಚನವೆಂಬ ಸ್ಕೂಲಪಠ್ಯವಿದೆ. ಬದಲಾವಣೆ ಬದುಕಿನ ಲಕ್ಷಣವಾಗಿರುವುದರಿಂದ ಶರಣರು ಪರಿಷ್ಕರಿಸಲು ಅವಕಾಶವಿರುವ 'ವಚನ'ವೆಂಬ ಸ್ಕೂಲಪಠ್ಯವನ್ನು ನಮಗೆ ಕೊಟ್ಟು ಹೋಗಿದ್ದಾರೆ. ಇದು ಶರಣರ ತೆರೆದ ಮನಸ್ಸಿನ, ಚಲನಶೀಲ ಮನಸ್ಸಿನ ದ್ಯೋತಕವಾಗಿದೆ.

ಗ್ರಂಥ ಋಣ: ಬಸವ ಪಥ. ೩೪-೭ ನವೆಂಬರ್ ೨೦೧೨

*
ಪರಿವಿಡಿ (index)
Previous ಬಸವಣ್ಣ:ಪ್ರಾಚೀನ ಲಿಂಗಾಯತ ಸಾಹಿತ್ಯದ ಒಂದು ಅನಿವಾರ್ಯತೆ ಲಿಂಗಾಯತ : ಒಂದು ಸ್ವತಂತ್ರ ಧರ್ಮ Next