ಲಿಂಗಾಯತ/ಲಿಂಗವಂತ ವೆಂದು ಸ್ಪಷ್ಟವಾಗಿ ಬರೆಯಿರಿ
|
|
*
ಎಲ್ಲಾ ಕಡೆಗಳಲ್ಲಿ ಲಿಂಗಾಯತ/ಲಿಂಗವಂತ ವೆಂದು ಸ್ಪಷ್ಟವಾಗಿ ಬರೆಯಿರಿ
ತಾವು ಅಂಗದ ಮೇಲೆ ಗೋಲಾಕಾರದ ಇಷ್ಟಲಿಂಗಧಾರಣೆ ಮಾಡಿಕೊಂಡಿರುವಂತಹ ಸುಜ್ಞಾನಿ ಸಮಾಜ ಬಾಂಧವ/ನಾಗರಿಕ/ಕುಟುಂಬ ಪ್ರಮುಖರಾಗಿದ್ದರೆ. ಈ ಕೆಳಕಂಡ ಸಂಶಯಾತ್ಮಕ ಪ್ರಶ್ನೆಗಳಿಗೆ ತಮ್ಮ ವಿವೇಕತನದ ಬುದ್ಧಿಯ ಜೊತೆಗೆ ವಿಮರ್ಶಾತ್ಮಕ ದೃಷ್ಟಿಯಿಂದ ಚಿಂತನೆ ಮಾಡಿ ನಿರ್ಣಯವನ್ನು ತೆಗೆದುಕೊಳ್ಳಬೇಕು. ಇದರ ಮೇಲೇಯೇ ತಮ್ಮ ಹಾಗೂ ತಮ್ಮ ಕುಟುಂಬದ ಮತ್ತು ಸಮಾಜದ ಅರ್ಥಾತ್ ತಮ್ಮ ಧರ್ಮದ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ.
ಎಲ್ಲಾ ಸರಕಾರದ ದಾಖಲೆಗಳಲ್ಲಿ ತಾವುಗಳು ಲಿಂಗಾಯತರೋ ಅಥವಾ ವೀರಶೈವರೋ ಅಥವಾ ಲಿಂಗಾಯತ/ವೀರಶೈವರೋ ಎಂಬುದು ತಮ್ಮ ವಿವೇಕತನದಿಂದ ನಿರ್ಣಯಿಸಿರಿ. ತದನಂತರವೇ ಧರ್ಮದ ಹೆಸರನ್ನು ಬರೆಯಲು ಹೇಳಿರಿ. ಯಾರೋ ಏನೋ ಹೇಳುತ್ತಾರೆಂದು ಕೇಳಬೇಡಿರಿ. ಹಾಗೆ ಕೇಳಿ ನೀವೆ ನಿಮ್ಮ ಹಾಗೂ ನಿಮ್ಮ ಕುಟುಂಬದ ಮತ್ತು ಸಮಾಜದ/ಧರ್ಮದ ಮೇಲೆ ಕಲ್ಲನ್ನು ಒಗೆದು ಕೊಳ್ಳಬೇಡಿರಿ.
ಆದ್ದರಿಂದಲೇ ತಾವು ಯಾರು ಎಂಬುದನ್ನು ಮೊದಲು ಗುರುತಿಸಿಕೊಳ್ಳಿರಿ. ಅದಕ್ಕೆಂದೇ ತಮ್ಮ ಮುಂದೆ ನಾವು ಕೆಲವೊಂದು ಪ್ರಶ್ನೆಗಳನ್ನು ಇಡುತ್ತೇವೆ. ಅವುಗಳ ಉತ್ತರದಲ್ಲಿ ನೀವು ಯಾರು ಎಂಬುದು ನಿಮಗೆ ತಿಳಿಯುವುದು.
ಈಗ ನೀವು ವೀರಶೈವ ಅಥವಾ ಲಿಂಗಾಯತ ಅಥವಾ ವೀರಶೈವ/ಲಿಂಗಾಯತ ಎರಡು ಒಂದೇ ಎಂಬ ಬಗ್ಗೆ ತಿಳಿದುಕೊಳ್ಳೋಣ. ಕೆಲವರು ವೀರಶೈವ ಹಾಗೂ ಲಿಂಗಾಯತ ಒಂದೇ ಇದ್ದು ವೀರಶೈವ ಸಾಹಿತ್ಯಿಕ ಭಾಷೆಯಾದರೆ ಲಿಂಗಾಯತ ಹಳ್ಳಿಯ ಜನರ (ಜಾನಪದ) ಭಾಷೆಯಾಗಿದ್ದು ವೀರಶೈವ ಧರ್ಮ ಪುರಾತನಕಾಲದಿಂದಲೂ ಇದ್ದು ಅರ್ಥಾತ್ ನಾಲ್ಕು ಯುಗಗಳಿಂದಲೂ ಇದ್ದು ಅದರ ಧರ್ಮಗುರು ಜಗದ್ಗುರು ಪಂಚಾಚಾರ್ಯರಾಗಿದ್ದು ಮಹಾತ್ಮಾ ಬಸವಣ್ಣನವರು ಅದರ ಧರ್ಮ ಪ್ರಸಾರಕರು, ಧರ್ಮಗುರುಗಳಲ್ಲ ಎಂದು ಪ್ರಚಾರ ಮಾಡುತ್ತ ಧರ್ಮದ ಹೆಸರು ವೀರಶೈವ ಬರೆಯಿಸಿರಿ ಎಂದು ಹೇಳುತ್ತ ಬರಬಹುದು. ಈ ಹೇಳಿಕೆಯಲ್ಲಿ ಎಷ್ಟು ಸತ್ಯಾಂಶವಿದೆ. ಎಂಬುದು ತಿಳಿದುಕೊಳ್ಳುವುದಕ್ಕಾಗಿ ಕೆಲವೊಂದು ಸಂಶಯಾತ್ಮಕ ಪ್ರಶ್ನೆಗಳನ್ನು ತಮ್ಮ ಮುಂದೆ ಇಡುತ್ತೇವೆ. ಈ ಪ್ರಶ್ನೆಗಳನ್ನು ವೀರಶೈವವೆಂದು ಬರೆಯಿಸಿರಿ ಎಂದು ಹೇಳುವವರ ಮುಂದೆ ಇಡಿರಿ ಅವರಿಂದ ಸಮರ್ಪಕವಾದ ಉತ್ತರ ತಮಗೆ ದೊರೆತರೆ ತಾವು ಅವಶ್ಯವಾಗಿ ತಮ್ಮ ಧರ್ಮದ ಹೆಸರು ವೀರಶೈವವೆಂದು ಬರೆಯಿರಿ. ಇಲ್ಲವಾದರೆ ಬರೆಯಬೇಡಿರಿ. ಕಾರಣ ಸತ್ಯ ಬೇರೆಯೇ ಇರುತ್ತದೆಂಬುದು ಸಿದ್ಧವಾಗುತ್ತದೆ. ದಯಮಾಡಿ ಇಲ್ಲಿಯೇ ಸ್ವಲ್ಪ ಎಚ್ಚರವಹಿಸಿರಿ. ನಮ್ಮ ಸಂಶಯಾತ್ಮಕ ಪ್ರಶ್ನೆ ಎನ್ನುವುದಕ್ಕಿಂತ ನಿಮ್ಮ ಸಂಶಯಾತ್ಮಕ ಪ್ರಶ್ನೆಗಳು ಇಂತಿವೆ.
1) ಒಂದು ವೇಳೆ ನಾಲ್ಕು ಯುಗಗಳಿಂದ ಅಂದರೆ ವೇದ, ಆಗಮ, ಪುರಾಣ, ಶಾಸ್ತ್ರಗಳ ಮಾನ್ಯತೆ ಇರುವಂತಹ ವೀರಶೈವ ಧರ್ಮವನ್ನು ಪಂಚಾಚಾರ್ಯರು ಸ್ಥಾಪನೆ ಮಾಡಿದ್ದರೆ, ವಿಶ್ವವಿಭೂತಿ ಬಸವಣ್ಣನವರು ಪ್ರಸಾರ ಮಾಡಿದ್ದರೆ, ಬಸವಣ್ಣನವರು ವೇದ, ಆಗಮ, ಪುರಾಣ, ಶಾಸ್ತ್ರ ಮಾನ್ಯತಾ ವೀರಶೈವ ಧರ್ಮದ ಪ್ರಮಾಣ ಗ್ರಂಥಗಳನ್ನು ಸಮರ್ಥಿಸುವ ಬದಲು ಅವುಗಳ ಮೇಲೆ ಟೀಕೆ ಮಾಡಲು ಕಾರಣವೇನು? ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವೆ ಆಗಮದ ಮೂಗ ಕೊಯ್ಯುವೆ, ಪುರಾಣವೆಂಬುದು ಪುಂಢರ ಗೋಷ್ಠಿ ಇತ್ಯಾದಿ ಪ್ರಕಾರ ಟೀಕೆ ಮಾಡಿದ್ದಾರೆಂದ ಬಳಿಕ ಬಸವಪೂರ್ವಯುಗದ ವೀರಶೈವಮತ ಹಾಗೂ ಬಸವಾದಿ ಶರಣರ ಲಿಂಗಾಯತ ಧರ್ಮ ಒಂದೇ ಹೇಗೆ?
2) ಪಂಚಾಚಾರ್ಯರು ಸ್ಥಾಪನೆ ಮಾಡಿದಂತಹ ಜಾತಿ, ವರ್ಗ, ವರ್ಣ ರಹಿತ ಸಮಾನತೆಯ ತತ್ವ ಆಧಾರಿತ ವೀರಶೈವಮತ ಬಸವಪೂರ್ವಯುಗದಲ್ಲಿ ಆಸ್ತಿತ್ವದಲ್ಲಿ ಇದ್ದರೆ ಕಲ್ಯಾಣ ಕ್ರಾಂತಿಯಾಗಲು ಕಾರಣವೇನು? ಹಾಗೂ ಕಲ್ಯಾಣ ಕ್ರಾಂತಿಯ ಕಾಲದಲ್ಲಿ ಇವರು ಎಲ್ಲಿ ಇದ್ದರು? ಮತ್ತು ಏನು ಮಾಡುತ್ತಿದ್ದರು?
3) ಒಂದು ವೇಳೆ ಬಸವಣ್ಣನವರು ಧರ್ಮಗುರುಗಳಲ್ಲ, ಧರ್ಮ ಪ್ರಸಾರಕರು ಎಂದು ಮಾನ್ಯ ಮಾಡಲಾಗಿ ಧರ್ಮ ಪ್ರಸಾರಕರು ತಮ್ಮ ಧರ್ಮ ಪ್ರಮಾಣ ಗ್ರಂಥಗಳನ್ನು ಪವಿತ್ರ ಗ್ರಂಥಗಳೆಂದು ಮನ್ನಿಸಿ ಅವುಗಳಲ್ಲಿರುವ ತತ್ವಗಳನ್ನು ಪ್ರಸಾರ ಮಾಡಲು ಪ್ರಯತ್ನಿಸುತ್ತಾರೆ ಹೊರತು ಅವುಗಳ ಮೇಲೆ ಟೀಕೆ ಮಾಡುವುದಿಲ್ಲ. ಒಂದು ವೇಳೆ ಪ್ರಮಾಣ ಗ್ರಂಥಗಲ್ಲಿ ದೋಷಗಳಿದ್ದರೂ ಕೂಡ ಅವುಗಳನ್ನು ತೋರಿಸದೆ ತಮ್ಮ ಧರ್ಮ ಪ್ರಚಾರ ಕಾರ್ಯ ಮಾಡುತ್ತಾರೆ ಆದರೆ ಹಾಗೆ ಮಾಡದೆ ಅವುಗಳನ್ನು ತಿರಸ್ಕರಿಸಿ ಅವುಗಳ ಮೇಲೆ ಟೀಕೆ ಟಿಪ್ಪಣಿ ಮಾಡುತ್ತಿದ್ದರೆ ಅವರನ್ನು ಆ ಧರ್ಮದಿಂದ ಬಹಿಷ್ಕಾರ ಮಾಡಿ ನಾಸ್ತಿಕರೆಂದು ಹೊರಗೆ ಹಾಕುತ್ತಾರೆ. ಉದಾ: ವೇದಗಳನ್ನು ತಿರಸ್ಕರಿಸಿದ ಬೌದ್ಧ, ಜೈನ, ಚಾರ್ವಾಕರನ್ನು ನಾಸ್ತಿಕರೆಂದು ತಿಳಿದು ಹಿಂದು ಧರ್ಮದಿಂದ ಹೊರಗೆ ತಳ್ಳಲಾಗಿದೆ. ಬೈಬಲ್ ಖಂಡಿಸಿದ ಯೋರೋಪ ವಿಜ್ಞಾನಿಗೆ ಕಠಿಣ ಶಿಕ್ಷೆ ಕೊಟ್ಟಿದ್ದಾರೆ. ಕುರಾನದಲ್ಲಿಯ ಕೆಲವೊಂದು ಘಟನೆಗಳನ್ನು ವಿರೋಧಿಸಿದ ಕಾರಣ ಅಪರಾಧವೆಂದು ತಿಳಿದು ಪರ್ಸಿಯಾ ದೇಶದಲ್ಲಿಯ ಮುಸ್ಲಿಂ ಸಂತನ ತಲೆಯನ್ನು ಕತ್ತರಿಸಿ ಹಾಕಲಾಗಿದೆ. ಇದರೆಂತೆಯೇ ಬಸವಾದಿ ವಚನಕಾರರು ಬಸವಪೂರ್ವ ಯುಗದ ಧರ್ಮಗ್ರಂಥಗಳ ಮೇಲೆ ಖಂಡನೆ ಮಾಡಿದ್ದರಿಂದ ಅವರು ಬಸವಪೂರ್ವ ಯುಗದ ಧರ್ಮದ ವಿರೋಧಿಗಳೇ ಹೊರತು ಧರ್ಮ ಪ್ರಸಾರಕರು ಹೇಗೆ ಆಗುತ್ತಾರೆ? ಆದ್ದರಿಂದ ಬಸವಪೂರ್ವಯುಗದ ವೀರಶೈವ ಧರ್ಮ ಮತ್ತು ಬಸವಾದಿ ಶರಣರ ಲಿಂಗಾಯತ ಧರ್ಮ ಒಂದೇ ಹೇಗೇ? ಮತ್ತು ಬಸವಾದಿ ವಚನಕಾರರು ವೀರಶೈವ ಧರ್ಮದ ಪ್ರಸಾರಕರು ಹೇಗೇ?
4) ವೇದದಲ್ಲಿ ಕರ್ಮಕಾಂಡ ಹಾಗೂ ಜ್ಞಾನಕಾಂಡ ಎಂದು ಎರಡು ಭಾಗಗಳಿದ್ದು ಬಸವಾದಿ ವಚನಕಾರರು ಕರ್ಮಕಾಂಡದ ಖಂಡನೆ ಮಾಡಿದ್ದಾರೆ. ಜ್ಞಾನಕಾಂಡವನ್ನು ಮಾನ್ಯ ಮಾಡಿದ್ದಾರೆ. ಜೈನ, ಬೌದ್ಧ, ಹಾಗೂ ಸಿಖ್ಖರು ಕೂಡ ಕರ್ಮಕಾಂಡವನ್ನು ಖಂಡನೆ ಮಾಡಿದ್ದಾರೆ. ಜ್ಞಾನಕಾಂಡ ಮಾನ್ಯ ಮಾಡಿದ್ದಾರೆ. ಆದ್ದರಿಂದ ಕರ್ಮಕಾಂಡವನ್ನು ವಿರೋಧಿಸಿದ ಬೌದ್ಧ, ಜೈನ, ಸಿಖ್ಖ ಧರ್ಮಗಳು ಅವೈದಿಕ (ಹಿಂದು ಧರ್ಮಗಳಲ್ಲ)ವೆಂದು ಮಾನ್ಯವಾಗಿರುವಾಗ ವೈದಿಕ ಧರ್ಮಗ್ರಂಥಗಳನ್ನು ಖಂಡಿಸಿದ ಬಸವಾದಿ ವಚನಕಾರರ ಲಿಂಗಾಯತ ಧರ್ಮ, ಹಾಗೂ ವೈದಿಕ ಹಿಂದೂ ವೀರಶೈವ ಧರ್ಮ ಒಂದೇ ಹೇಗೆ?
5) ಯಾವುದೇ ಆಗಮ ಗ್ರಂಥದ ಅಭ್ಯಾಸ ಮಾಡಿನೋಡಲಾಗಿ ಅದರಲ್ಲಿಯ ಪರಶಿವನ (ಸೃಷ್ಠಿಕರ್ತ ಪರಮಾತ್ಮನ) ಕಲ್ಪನೆ ಪೌರಾಣಿಕವಾಗಿಯೇ ಹಾಗೂ ಅವೈಚಾರಿಕ ತರ್ಕದಿಂದ ಆಗಿರುತ್ತದೆ ಎಂದು ಕಂಡು ಬರುವುದು. ಉದಾ: ಸೂಕ್ಷ್ಮಾಗಮ ಕ್ರಿಯಾಸಾರದಲ್ಲಿ ಪರಶಿವನೂ ಕೂಡ ಕೈಲಾಸದಲ್ಲಿಯೇ ವಾಸಿಸುತ್ತಾನೆ. ಅವನ ಸುತ್ತಮುತ್ತಲು ನಂದಿ, ಸನಕ, ಬೃಂಗಿ, ಸಿದ್ಧ, ಚರಣ, ಗಂಧರ್ವ ಇತ್ಯಾದಿ ಗಣಗಳಿದ್ದು ಅವರಿಂದ ಪೂಜೆ ಮಾಡಿಸಿಕೊಳ್ಳುತ್ತಿರುತ್ತಾನೆ. ಪಾರಮೇಶ್ವರಾಗಮದಲ್ಲಿ ಪರಶಿವನಿಗೆ ಐದು (ಪಂಚ) ಮುಖಗಳಿದ್ದು ಗಜಚರ್ಮಧಾರಿ, ಸರ್ಪ, ಚಂದ್ರ ತ್ರಿಶೂಲಧಾರಿಯಾಗಿದ್ದು ಕೊರಳಲ್ಲಿ ರುಂಡಗಳ ಮಾಲೆ ಧರಿಸಿರುತ್ತಾನೆ ಹಾಗೂ ಯಜ್ಞೋಪವಿತ (ಜನಿವಾರ) ಧಾರಣೆ ಮಾಡಿ ಕೊಂಡಿದ್ದಾನೆ. ಆಗಮಕಾರರ ಶಕ್ತಿಯ ಕಲ್ಪನೆಯೂ ಕೂಡ ಪರಶಿವನ ಪತ್ನಿ ಪಾರ್ವತಿಯೇ ಶಕ್ತಿಯು. ಆದರೆ ಬಸವಾದಿ ಶರಣರ ದೃಷ್ಟಿಯಲ್ಲಿ ಪರಶಿವನ/ಸೃಷ್ಟಿಕರ್ತನ ಕಲ್ಪನೆ ಸಾಕಾರವಾಗಿರದೇ ನಿರಾಕಾರದಲ್ಲಿರುತ್ತದೆ. ಅಂದರೆ ಶೂನ್ಯ, ನೀಶೂನ್ಯ, ಸರ್ವಶೂನ್ಯ ನೀರಾಲಂಭಶೂನ್ಯ, ಬಯಲು ಹೀಗೆ ಇದ್ದು ಅವನು ರುಂಡಮಾಲಾ, ಗಜಚರ್ಮಧಾರಿ ಅಲ್ಲ ಅವನು ಸ್ತ್ರೀ, ಪುರುಷ ಕೂಡ ಅಲ್ಲ ನಪುಂಸಕನೂ ಅಲ್ಲ. ವಚನಕಾರರ ದೃಷ್ಟಿಯಲ್ಲಿ ಶಕ್ತಿ ಎಂದರೆ ಶಿವನ ಪತ್ನಿ ಪಾರ್ವತಿ ಅಲ್ಲ. ಜಗತ್ತಿನ ಉತ್ಪತ್ತಿಗೆ ಉಪಾದಾನ ಕಾರಣ. ಆದ್ದರಿಂದ ಬಸವಪೂರ್ವದ ವೀರಶೈವ ಮತ ಹಾಗೂ ಬಸವಾದಿ ಶರಣರ ಲಿಂಗಾಯತ ಧರ್ಮ ಒಂದೇ ಹೇಗೆ?
6) ಆಗಮಕಾರರ ಆರ್ಥಾತ ಬಸವ ಪೂರ್ವ ಯುಗದ ವೀರಶೈವರ ಪವಿತ್ರ ಸ್ಥಾನವಾದಂತಹ ಕೈಲಾಸದ ವರ್ಣನೆ ಬಹಳಷ್ಟು ಸಲ ಆಗಮ ಗ್ರಂಥಗಲ್ಲಿ ದೊರಿಯುತ್ತದೆ. ಹಾಗೆ ನೋಡಲಾಗಿ ಪ್ರತಿಯೊಂದು ಆಗಮ ಗ್ರಂಥದ ಪ್ರಾರಂಭ ಕೈಲಾಸದಿಂದಲೇ ಪ್ರಾರಂಭವಾಗುತ್ತದೆ. ಇಂತಹ ಕೈಲಾಸದ ಬಗ್ಗೆ ಬಸವಾದಿ ವಚನಕಾರರು ಟೀಕೆ ಮಾಡಿದ್ದಾರೆ. ಉದಾ: ಕೈಲಾಸವೆಂಬುದು ಭೂಮಿಯ ಮೇಲಿನ ಹಾಳು ಬೆಟ್ಟ. ಅಂದ ಬಳಿಕ ವೀರಶೈವರ ಪವಿತ್ರ ಸ್ಥಳ ಕೈಲಾಸ ಬಸವಾದಿ ವಚನಕಾರರಿಗೆ ಮಾನ್ಯವಿಲ್ಲ. ಆದ್ದರಿಂದ ಬಸವಪೂರ್ವ ಯುಗದ ವೀರಶೈವಮತ ಹಾಗೂ ಬಸವಾದಿ ಶರಣರ ಲಿಂಗಾಯತ ಧರ್ಮ ಒಂದೇ ಹೇಗೆ?
7) ಬಸವ ಪೂರ್ವ ಯುಗದ ಆಗಮಕಾರರ ಸಿದ್ಧಾಂತದ ಪ್ರಕಾರ ಮುಕ್ತ ಆತ್ಮನು ಪರಮಾತ್ಮನು ಇರುವ ಲೋಕದಲ್ಲಿ ಅರ್ಥಾತ ಕೈಲಾಸಕ್ಕೆ ಅಥವಾ ವೈಕುಂಠಕ್ಕೆ ಹೋಗುತ್ತಾನೆ. ಇದಕ್ಕೆ ಸಾಲೋಕ್ಷ ಮೋಕ್ಷವೆನ್ನುತ್ತಾರೆ. ಅನಂತರ ಪರಮಾತ್ಮನ ಹತ್ತಿರ ಹೋಗುತ್ತಾನೆ. ಇದಕ್ಕೆ ಸಾಮಿಪ್ಯ ಮೋಕ್ಷವೆನ್ನುತ್ತಾರೆ. ಅವನಂತೆಯೇ ಶುದ್ಧನಾಗುತ್ತಾನೆ. (ಸಾರೂಪ್ಯ ಮೋಕ್ಷ) ಮತ್ತು ಕೊನೆಗೆ ಅವನಲ್ಲಿ ಒಂದಾಗುತ್ತಾನೆ (ಸಾಯುಜ್ಯ ಮೋಕ್ಷ). ಇಲ್ಲಿ ಸಾಯುಜ್ಯ ಮೋಕ್ಷವೆಂದರೆ ಪರಮಾತ್ಮನ ಜೊತೆಗೆ ಏಕರೂಪವಾಗುವದಲ್ಲ ಅಥವಾ ಐಕ್ಯವಲ್ಲ. ಅವನ ಲೋಕದಲ್ಲಿದ್ದುಕೊಂಡು ಸೇವೆಯನ್ನು ಮಾಡುತ್ತ ಅವನ ಹತ್ತಿರವೇ ನಿಲ್ಲುವುದು. ಉದಾ: ನಂದಿ, ಬೃಂಗ, ಗಣಗಳಂತೆ. ಆದರೆ ಬಸವಾದಿ ಶರಣರ ದೃಷ್ಟಿಯಲ್ಲಿ ಮೋಕ್ಷವೆಂದರೆ ನದಿಯು ಸಮುದ್ರವನ್ನು ಸೇರಿದಂತೆ ತನ್ನ ಮೂಲ ಆಸ್ತಿತ್ವವನ್ನು ಇಲ್ಲದಂತೆ ಮಾಡಿಕೊಳ್ಳುವುದು, ಜೀವ ಶಿವನಲ್ಲಿ ಬೆರೆತು ಒಂದಾಗುವುದು. ಅದರಂತೆ ಆಗಮಕಾರರ ಚಾತುಷ್ಯಪದ ಮೋಕ್ಷ ಕೈಲಾಸವಾಸಿಯಾದ ನಂತರ ದೊರೆಯುತ್ತದೆ. ಆದರೆ ಬಸವಾದಿ ವಚನಕಾರರ ಮೋಕ್ಷ ಜೀವಂತವಿರುವಾಗಲೇ ಜೀವನ ಮುಕ್ತ ಸ್ಥಿತಿ ಪ್ರಾಪ್ತಮಾಡಿಕೊಂಡಾಗ ದೊರೆಯುವುದು. ಆದ್ದರಿಂದ ಬಸವ ಪೂರ್ವ ಯುಗದ ವೀರಶೈವಮತ ಹಾಗೂ ಬಸವಾದಿ ವಚನಕಾರರ ಲಿಂಗವಂತ ಧರ್ಮ ಒಂದೇ ಹೇಗೆ?
8) ಆಗಮಕಾರರ ಪ್ರಕಾರ ವೀರಶೈವರು ದೀಕ್ಷಾ ತೆಗೆದುಕೊಂಡಮೇಲೆ ತಲೆಯ ಮೇಲೆ ಯಾವುದೇ ಪ್ರಕಾರದ ಒಜ್ಜೆಯನ್ನು ಒಯ್ಯಬಾರದು, ಹೊಲ ಗದ್ದೆಗಳಲ್ಲಿ ಕೆಲಸ ಮಾಡಬಾರದು, ಗಿಡ-ಮರಗಳನ್ನು(ಕಟ್ಟಿಗೆಗಳನ್ನು) ಕಡಿಯಬಾರದು, ನೇಗಿಲ ಹೊಡೆಯಬಾರದು/ಉಳಬಾರದು, ಇತ್ಯಾದಿ ಶ್ರಮಿಕ ಕಾರ್ಯ ಮಾಡದವರೇ ವೀರಶೈವರು. ತದ್ ವಿರುದ್ಧ ಕಾರ್ಯ ಮಾಡವವರು ವೀರಶೈವರಲ್ಲ, ಎಂದು ತಿಳಿಸಿದ್ದಾರೆಂದ ಬಳಿಕ ಬಸವಾದಿ ಶರಣರು ಶ್ರಮಜೀವಿಗಳು, ಕಾಯಕಜೀವಿಗಳು, ಕೃಷಿ ಜೀವಿಗಳು ಇವರೆಲ್ಲರು ವೀರಶೈವರು ಹೇಗೆ ಆಗುತ್ತಾರೆ? ಆಗಮ ಗ್ರಂಥಗಳ ಪ್ರಕಾರ ವೇದಾಗಮನಗಳ ಅಭ್ಯಾಸ ಮಾಡುವಂತಹ ಹಾಗೂ ಪೂಜೆ/ಅರ್ಚನೆಯನ್ನು ಮಾಡುವ ಬ್ರಾಹ್ಮಣ ವರ್ಗದವರಷ್ಟೇ ವೀರಶೈವರಾಗುತ್ತರೆಂದ ಬಳಿಕ ಇಂತಹ ವೇದಾಗಮಗಳನ್ನು ನಮ್ಮ ಧರ್ಮ ಗ್ರಂಥಗಳೆಂದು ಹೇಳಿಕೊಂಡಿರುವಂತಹ ಪಂಚಾಚಾರ್ಯರು ಹಾಗೂ ಅವರ ಅನುಯಾಯಿಗಳು ಲಿಂಗಾಯತರು ಹೇಗೆ ಆಗುತ್ತಾರೆ? ಹಾಗೂ ಲಿಂಗಾಯತ ಧರ್ಮ ಸಂಸ್ಥಾಪಕರು/ಪ್ರಸಾರಕರು ಹೇಗೆ ಆಗುತ್ತಾರೆ? ಮೇಲಾಗಿ ಇಲ್ಲಿ ವೀರಶೈವವೆಂದರೆ ಒಂದು ಜಾತಿಯಾಗುತ್ತದೆ. ಅದು ಧರ್ಮ ಹೇಗೆ ಆಗುತ್ತದೆ? ಇದನ್ನು ಶಿವಯೋಗ ಮಂದಿರ ಹಾಗೂ ಅಖಿಲಭಾರತ ವೀರಶೈವ ಮಹಾಸಭೆ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಗದುಗಿನ ಶ್ರೀಗಳ ಸತ್ಯ ಹೇಳಿಕೆಗೆ ಗುರು ವಿರಕ್ತರ ಪ್ರತಿಕ್ರಿಯೆಯಿಂದ ಸಿದ್ಧ ಮಾಡಿ ತೋರಿಸಿದ್ದಾರೆ.
9) ಜಗದ್ಗುರು ರೇಣುಕಾದಿ ಪಂಚಾಚಾರ್ಯರು ನಾಲ್ಕು ಯುಗಗಳಲ್ಲಿ ಲಿಂಗೋದ್ಭವಿಗಳಾಗಿ ಜನಿಸಿ ಗೋಲಾಕಾರ ಇಷ್ಟಲಿಂಗ ಧಾರಿಯುಕ್ತ ವೀರಶೈವ/ಲಿಂಗಾಯತ ಧರ್ಮ ಪ್ರಚಾರ ಮಾಡಿದ್ದರೆ, ಅವರ ಪ್ರಮುಖ ಕ್ಷೇತ್ರಗಳಾದ ಕಾಶೀ, ಕೇದಾರ, ಉಜ್ಜಯನಿ(ಮಧ್ಯಪ್ರದೇಶ), ಶ್ರೀಶೈಲ, ಕೊಲ್ಲಿಪಾಕಿ(ರಂಭಾಪುರಿ) ಇತ್ಯಾದಿ ಕ್ಷೇತ್ರದ ಸುತ್ತಮುತ್ತಲು ಗೋಲಾಕಾರ ಇಷ್ಟಲಿಂಗ ಧಾರಿಯುಕ್ತ ಸಮಾಜ ಬಾಂಧವ ಬಹುಸಂಖ್ಯೆಯ ದೃಷ್ಟಿಯಿಂದ ಇರಬೇಕಾಗಿತ್ತು. ಆದರೆ ಪ್ರತ್ಯಕ್ಷ ಈ ಕ್ಷೇತ್ರಗಳಲ್ಲಿ ಗೋಲಾಕಾರದ ಇಷ್ಟಲಿಂಗಧಾರಿಯುಕ್ತ ಸಮಾಜವಿಲ್ಲವೆಂದ ಮೇಲೆ ಈ ಆಚಾರ್ಯರು ಸ್ಥಾಪಿಸಿದ ಹಾಗೂ ಪ್ರಚಾರ ಮಾಡಿದ ಧರ್ಮ ಯಾವುದು? ಮತ್ತು ಕರ್ನಾಟಕ ಹಾಗೂ ಅದರ ಸುತ್ತ ಮುತ್ತ ಇರುವಂತಹ ಮಹಾರಾಷ್ಟ್ರ ಹಾಗೂ ಆಂಧ್ರ ಬಿಟ್ಟು ಉಳಿದ ರಾಜ್ಯಗಳಲ್ಲಿ ಲಿಂಗಾಯತ ಸಮಾಜ ಇರುವುದಿಲ್ಲ, ಮತ್ತು ಈ ಆಚಾರ್ಯರು ಕೂಡ ಗೋಲಾಕಾರಯುಕ್ತ ಇಷ್ಟಲಿಂಗಗಳನ್ನೇ ಧಾರಣೇ ಮಾಡಿರುವುದರಿಂದ ಇವರು ಬಸವಪೂರ್ವಯುಗದ ವೀರಶೈವರು ಹೇಗೆ ಆಗುತ್ತಾರೆ? ಹಾಗೂ ವೀರಶೈವರೇ ಅಲ್ಲವೆಂದ ಮೇಲೆ ವೀರಶೈವ ಧರ್ಮಗುರುಗಳು ಕೂಡಾ ಹೇಗೆ ಆಗುತ್ತಾರೆ?
10) ಒಂದು ವೇಳೆ ಬಸವಣ್ಣನವರು ಧರ್ಮಗುರುಗಳಲ್ಲವೆಂದು ಗ್ರಾಹ್ಯಮಾಡಿದರೆ, ಬಸವಣ್ಣನವರ ಸಮಕಾಲೀನ ಹಾಗೂ ಬಸವೋತ್ತರ ಯುಗದ ಅಸಂಖ್ಯಾತ ಶರಣರ ವಚನಗಳು, ಇತಿಹಾಸ, ಸಾಹಿತ್ಯ ಸಂಶೋಧನೆ, ಸರಕಾರಿ ದಾಖಲೆಗಳಲ್ಲಿ (ಧಫ್ತರದಲ್ಲಿಯ) ಬಸವಣ್ಣನವರನ್ನು ಕುರಿತು ಬಳಸಿರುವ/ನುಡಿದಿರುವ/ಬರೆದಿರುವ ಶಬ್ಧಗಳಾದ ಗುರು, ಸದ್ಗುರು, ವರಗುರು, ಗುರುವಿನಗುರು, ಪರಮಗುರು, ಪೂರ್ವಾಚಾರ್ಯ, ಪ್ರಥಮಾಚಾರ್ಯ, ಪರಮಾರಾಧ್ಯ, ಪ್ರಥಮಗುರು, ದೇವಾ ಬಸವಣ್ಣ ನಿಮಗೆಯೂ ಗುರು, ನನಗೆಯೂ ಗುರು, ಲೋಕಕ್ಕೆಲ್ಲಾ ಗುರುವೆಂದು ಬರೆದಿರುವಂತಹ ವಚನಗಳ ಶಬ್ಧಗಳ ಅರ್ಥವೇನು? ಮತ್ತು ಈ ವಚನಗಳು/ಶಬ್ಧಗಳು/ಅಭಿಪ್ರಾಯಗಳು ಎಲ್ಲವೂ ಪ್ರಕ್ಷೀಪ್ತ/ಕೃತ್ರೀಮಗಳೇನು? ಅಥವಾ ಕಾಲ್ಪನಿಕವೇನು?
11) ಸಂಸಾರವು ಹೇಯ, ಹೆಣ್ಣು ಮಾಯೆಯ ಪಾರಮಾರ್ಥ ಸಾಧನೆಗೆ ಯೋಗ್ಯಳಲ್ಲ. ಇಂದ್ರಿಯಗಳನ್ನು ನಿಗ್ರಹಿಸದೇ ಪಾರಮಾರ್ಥ/ಶಿವಪಥ ಅರಿಯಲು ಸಾಧ್ಯವಿಲ್ಲ. ಜೀವ ಹಾಗೂ ಶಿವ ಬೇರೆಬೇರೆಯೇ. ಅವರಲ್ಲಿ ಯಾವುದೇ ಸಂಬಂಧ ಇಲ್ಲವೆಂದು ಶಿವಾದ್ವೈತ ಸಂಸ್ಕೃತಿಯನ್ನು ಭೋಧಿಸುವ ಬಸವ ಪೂರ್ವ ಯುಗದ ಧರ್ಮ (ವೀರಶೈವಮತ/ಪಂಥ), ಹಾಗೂ ಸಂಸಾರವು ಹೇಯವಲ್ಲ, ಅದು ಕರ್ತಾರನ ಕಮ್ಮಟ, ಹೆಣ್ಣು ಮಾಯೆಯಲ್ಲ ಪ್ರತ್ಯಕ್ಷ ಕಪಿಲಸಿದ್ಧಮಲ್ಲಿನಾಥನೆಂದು, ಇಂದ್ರಿಯಗಳನ್ನು ನಿಗ್ರಹಿಸದೆ ಉದಾತ್ತಿಕರಣಗೊಳಿಸಬೇಕೆಂದು, ಜೀವನು ಪರಶಿವನ (ಲಿಂಗದೇವರ) ಒಂದು ಅಂಶವಾದುದರಿಂದಲೇ ಜೀವ ಶಿವನಲ್ಲಿ ಒಂದಾಗಲು ಹಂಬಲಿಸುತ್ತಿರವನೆಂದು ಶೂನ್ಯ ಸಿದ್ಧಾಂತವನ್ನು ಪ್ರತಿಪಾದಿಸುವ ಬಸವ ಧರ್ಮ ಅರ್ಥಾತ ಲಿಂಗಾಯತ ಧರ್ಮ ಹಾಗೂ ಬಸವ ಪೂರ್ವ ಯುಗದ ವೀರಶೈವ ಧರ್ಮ ಒಂದೇ ಹೇಗೆ?
12) ವಚನಕಾರರು ಬಸವಪೂರ್ವದಲ್ಲಿ ಆಗಿ ಹೋದಂತಹ ಎಲ್ಲಾ ಪೂಜ್ಯ ಋಷಿಮುನಿಗಳನ್ನು ದೇವತೆಗಳನ್ನು ತಮಿಳುನಾಡಿನ ಪುರಾತನ ಶಿವಶರಣರನ್ನು ಸ್ಮರಿಸಿದ್ದಾರೆ. ಆದರೆ ಎಲ್ಲಿಯೂ ಪಂಚಾಚಾರ್ಯ ಶಿವಾಚಾರ್ಯರನ್ನು ಸ್ಮರಿಸಿಲ್ಲ. ಮೇಲಾಗಿ ಶೈವ/ವೀರಶೈವ/ಲಿಂಗಾಯತರ ಮಕ್ಕಳಿಗೆ ನಾಮಕರಣ ಮಾಡುವಾಗ ನಾಮಕ್ಕೆ ಲಿಂಗ ಪದ ಜೋಡಿಸಿ ಅಥವಾ ಶಿವಶರಣರ/ಬಸವಾದಿ ಪ್ರಮಥರ ನಾಮಗಳನ್ನು ಇಡುವ ಪದ್ದತಿಯುಂಟು. ಈ ದೃಷ್ಟಿಯಿಂದ ನೋಡಲಾಗಿ ಈ ಪಂಚಾಚಾರ್ಯರ ಹೆಸರುಗಳಾದ ರೇಣುಕ, ದಾರುಕ, ಏಕೋರಾಮ, ವಿಶ್ವಾರಾದ್ಯ ಇತ್ಯಾದಿ ಹೆಸರುಗಳು ಶೈವ/ವೀರಶೈವ/ಲಿಂಗಾಯತರಲ್ಲಿ ಕಂಡುಬರುವುದಿಲ್ಲವೆಂದ ಬಳಿಕ, ಈ ಆಚಾರ್ಯರು ಶೈವ/ವೀರಶೈವ/ಲಿಂಗಾಯತರ ಪೂಜ್ಯ ವ್ಯಕ್ತಿಗಳು ಅಲ್ಲವೇ ಅಲ್ಲ ಹಾಗೂ ಐತಿಹಾಸಿಕ ವ್ಯಕ್ತಿಗಳೂ ಕೂಡ ಅಲ್ಲವೆಂದು ಸಿದ್ಧವಾಗುವುದಿಲ್ಲವೇನು? ಹಾಗೂ ಈ ಆಚಾರ್ಯರು ಕಾಲ್ಪನಿಕ ವ್ಯಕ್ತಿಗಳೆಂದು ಸಿದ್ಧವಾಗುವದರಿಂದ ಅವರು ಸ್ಥಾಪಿಸಿದ ವೀರಶೈವ ಧರ್ಮವೂ ಕೂಡ ಕಾಲ್ಪನಿಕವಲ್ಲವೇನು?
13) ಧರ್ಮವು ಮಾನವ ನಿರ್ಮಿತ, ದೇವ ನಿರ್ಮಿತವಲ್ಲ, ಧರ್ಮವು ದೇವ ನಿರ್ಮಿತವಾಗಿದ್ದರೆ, ದೇವರು ಒಬ್ಬನೇ ಇರುವುದರಿಂದ ಧರ್ಮ-ಧರ್ಮಗಳಲ್ಲಿ ಭೇದಗಳಿರುತ್ತಿರಲಿಲ್ಲ. ಈ ಸಾರ್ವತ್ರೀಕ ಸತ್ಯವನ್ನು ಗ್ರಾಹ್ಯದಲ್ಲಿಟ್ಟುಕೊಂಡು ಜಾಗತಿಕ ಧರ್ಮಗಳ ಇತಿಹಾಸ ನೋಡಲಾಗಿ, ಬಸವಣ್ಣನವರೇ ಲಿಂಗಾಯತ ಧರ್ಮದ ಧರ್ಮಗುರುಗಳಾಗುತ್ತಾರೆ. ಹೊರತು ಧರ್ಮ ಪ್ರಸಾರಕರಲ್ಲ. ಹೇಗೆಂದರೆ ವೈದಿಕ ಹಿಂದು ಧರ್ಮದ ಧರ್ಮಗುರು ಆದ್ಯ ಶಂಕರಾಚಾರ್ಯರು, ಶಂಕರಾಚಾರ್ಯರಿಗಿಂತಲೂ ಪೂರ್ವದಲ್ಲಿ ವೈದಿಕ ಧರ್ಮವಿದ್ದಿಲ್ಲವೆನ್ನಲು ಬರುವುದಿಲ್ಲ. ಕಾರಣ ಹಿಂದುಗಳ ಪವಿತ್ರ ಗ್ರಂಥವಾದ ಗೀತೆಯನ್ನು ಭಗವಾನ ಕೃಷ್ಣನು ಶಂಕರಾಚಾರ್ಯರ ಕಾಲದ ಪೂರ್ವಯುಗದಲ್ಲಿಯೇ ಹೇಳಿದ್ದಾನೆ. ಆದರೂ ಕೂಡ ವೈದಿಕ ಧರ್ಮಗುರುವಿನ ಸ್ಥಾನ ಶಂಕರಾಚಾರ್ಯರಿಗೆ ಸಲ್ಲುತ್ತದೆ. (ಕಾರಣ ಶಂಕರಾಚಾರ್ಯರು ವೈದಿಕ ಮಹಾ ಸಂಪ್ರದಾಯದಲ್ಲಿಯ ಲೋಪದೋಷಗಳನ್ನು ತಿದ್ದಿ ಅದಕ್ಕೆ ಒಂದು ಸ್ವರೂಪವನ್ನು ಕೊಟ್ಟಿರುವದರಿಂದ). ಜೈನ ಧರ್ಮದ ಧರ್ಮಗುರು ಪಟ್ಟ 24ನೇ ತೀರ್ಥಂಕರ ಮಹಾವೀರನಿಗೆ ಸಲ್ಲುತ್ತದೆ. ಅದರಂತೆಯೇ ಬಸವ ಪೂರ್ವಯುಗದಲ್ಲಿಯ ಶೈವ/ವೀರಶೈವ/ಲಲಿತ/ಕಾಪಾಲಿಕ ಇತ್ಯಾದಿ ಮತ ಪಂಥಗಳಲ್ಲಿ ಲೋಪದೋಷಗಳನ್ನು ತಿದ್ದಿ ಜಗತ್ತಿನಲ್ಲಿಯ ಪ್ರಚಲಿತ ಎಲ್ಲಾ ಧರ್ಮಗಳಲ್ಲಿಯ ಸಾರ್ವತ್ರಿಕ ಸತ್ಯ ತತ್ವಗಳನ್ನು ಗುರುತಿಸಿ ಅಳವಡಿಸಿಕೊಂಡು ಒಂದು ವಿಶ್ವಮಾನ್ಯವಾದ ಲಿಂಗಾಯತ ಧರ್ಮವನ್ನು ಕೊಟ್ಟಂತಹ ಧರ್ಮಗುರುವಿನ ಸ್ಥಾನ ಬಸವಣ್ಣನವರಿಗೆ ಸಲ್ಲುತ್ತದೆ. ಆದ್ದರಿಂದ ಲಿಂಗಾಯತ ಧರ್ಮದ ಧರ್ಮಗುರು ಬಸವಣ್ಣನವರು ಮಾತ್ರ. ಮತ್ತು ಲಿಂಗಾಯತ ಧರ್ಮವು ಒಂದು ಸ್ವತಂತ್ರ ಧರ್ಮವು.
ಈ ಧರ್ಮದಲ್ಲಿ ಒಂದು ಪರಿಪೂರ್ಣ ಧರ್ಮದ ಎಲ್ಲಾ ಲಕ್ಷಣಗಳು ಇರುವಾಗ ವಿಶ್ವಧರ್ಮವಾದಂತಹ ಲಿಂಗಾಯತ ಧರ್ಮಕ್ಕೆ ಬಸವಪೂರ್ವಯುಗಕ್ಕೆ ಒಯ್ದು ಲಿಂಗಾಯತ ಧರ್ಮಕ್ಕೆ ಬಸವಪೂರ್ವಯುಗದ ಒಂದು ಮತ-ಪಂಥದಲ್ಲಿಯೇ ತಳ್ಳುವಂತಹ ಸಾಹಸ ಮಾಡುವಂತಹ ಧರ್ಮದ್ರೋಹಿಗಳು, ಧರ್ಮ ಪ್ರಸಾರಕರು ಧರ್ಮಗುರುಗಳು ಹೇಗೆ ಆಗುತ್ತಾರೆ. ಈ ಬಗ್ಗೆ ಆತ್ಮ ಚಿಂತನೆ ಮಾಡುವ ಅವಶ್ಯಕತೆ ಸಮಾಜ ಪ್ರಮುಖರಲ್ಲಿ ಇಲ್ಲವೇನು? ಸುಮಾರು 200-300 ವರ್ಷಗಳ ಹಿಂದೆ ಕೆಲವೊಂದು ಕಾರಣದಿಂದ ಈ ಆಚಾರ್ಯರನ್ನು ನಾಟಕದಲ್ಲಿಯ ರಾಜರಂತೆ ಪಾರ್ಟ ಮಾಡಲು ಸಮಾಜದಿಂದಲೇ ಅನುಮತಿ ಕೊಡಲಾಗಿತ್ತು. ಈಗ ರಾಜರ ಕಾಲಮಾನವಿಲ್ಲ ಪ್ರಜಾರಾಜ್ಯದ ಕಾಲಮಾನ. ರಾಜನ ಪಾರ್ಟ ಅನವಶ್ಯಕ ಆದ್ದರಿಂದ ಈ ಕಾಲಮಾನದಲ್ಲಿಯೂ ಕೂಡ ರಾಜನ ಪಾರ್ಟ ಕಳಚದೆ ನಾವು ಹಾಗೆಯೇ ರಾಜರಂತೆ ಇರುತ್ತೇವೆ/ನಡೆಯುತ್ತೇವೆ ಎಂದವರಿಗೆ ಸಮಾಜವು ಅವರ ರಾಜನ ವೇಶ ಇಳಿಸುವ ಕರ್ತವ್ಯದ ಬದಲು ಈ ನಾಟಕದ ಪಾರ್ಟಿನ ರಾಜರನ್ನೇ ನಿಜವಾದ ರಾಜರೆಂದು ತಿಳಿದು ರಾಜರಂತೆ ಮೆರೆಸುವವರಿಗೆ ಏನೆನ್ನಬೇಕು? ಈ ಕೃತ್ಯ ಸಮಾಜಕ್ಕೆ ಗೌರವವೇ? ಇಂತಹ ಕೃತ್ಯ ಮಾಡುವುದರಿಂದಲೇ ಸಮಾಜ ಪ್ರಗತಿ ಪಥಕ್ಕೆ ಹೋಗುವುದೇ? ಅಥವಾ ಧರ್ಮತತ್ವ ಪ್ರಸಾರ ಮಾಡಿದಂತಾಗುವುದೇ? ಎಂಬ ಆತ್ಮ ಚಿಂತನೆ ಪೂಜ್ಯರು ಸಮಾಜಹಿತ ಚಿಂತನ ಮಾಡುವುದು ಅವಶ್ಯಕ ಅಲ್ಲವೇನು??
ಇನ್ನೊಂದು ಸತ್ಯ ಸಂಗತಿ ಎಂದರೆ ಬ್ರಿಟಿಷ್ ರಾಜ್ಯದ ಕೊನೆಯ ಕಾಲದಲ್ಲಿ (ಸ್ವಾತಂತ್ಯ್ರಪೂರ್ವದಲ್ಲಿ) ಧರ್ಮದ ಆದಾರದ ಮೇಲೆ ಜನಗಣತಿ ಮಾಡುವ ಪೂರ್ವದಲ್ಲಿ ಬ್ರಿಟಿಷರು ಈ ಪಂಚಾಚಾರ್ಯ ಜಗದ್ಗುರುಗಳನ್ನು ಕರೆಯಿಸಿ ನಿಮಗೆ ಧರ್ಮದ ಕಾಯಂ/ಮಾನ್ಯತಾ ಬೇಕಾಗಿದ್ದರೆ ತಿಳಿಸಿರಿ ಎಂದಾಗ ವೀರಶೈವರೆಂದು ತಿಳಿಸಿದರು. ವೀರಶೈವ ಧರ್ಮಕ್ಕೆ ಒಬ್ಬ ಧರ್ಮಗುರುವಿನ ಹೆಸರನ್ನು ಕೇಳಲು ಒಬ್ಬ ಗುರುವಿನ ಹೆಸರು ಹೇಳದ ಮೂಲಕ ವೀರಶೈವ ಧರ್ಮಕ್ಕೆ ಮಾನ್ಯತೆ ಕೊಡಲು ಬರುವುದಿಲ್ಲ ಎಂತಲೂ, ಅಲ್ಲದೆ ಬಸವಣ್ಣನವರ ಅಧಿಕಾರದಲ್ಲಿ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಬೇಕಾದರೆ ಕೊಡುತ್ತೇವೆ ಎಂದಾಗ ನಮಗೆ ಸ್ವತಂತ್ರ ಧರ್ಮದ ಮಾನ್ಯತೆ ಬೇಡ ನಾವು ಹಿಂದು ಧರ್ಮದಲ್ಲಿಯೇ ಹಿಂದು ಶೂದ್ರ ಸಮಾಜವೆಂದು ಇರುತ್ತೇವೆ ಎಂದಿದ್ದಾರೆ?? ಇವರೇ ಪಂಚಾಚಾರ್ಯ ಜಗದ್ಗುರುಗಳು ಇನ್ನೊಂದು ಸಂದರ್ಭದಲ್ಲಿ ಅಂದರೆ ಪರಳಿ ವೈಜಿನಾಥ ಪೂಜಾ ಮಾಡುವ ಆಧಿಕಾರ ಗಿಟ್ಟಿಸಲು ಕೋರ್ಟ ಪ್ರಕರಣದಲ್ಲಿ ಲಿಂಗಾಯತರು ಶೂದ್ರರಲ್ಲ ಹಾಗೂ ಅವರ ಗುರುಗಳಾದಂತಹ ಜಂಗಮರು ಕೂಡ ಶೂದ್ರರಲ್ಲ ಅವರು ಲಿಂಗಿ ಬ್ರಾಹ್ಮಣರು ಎಂದು ಕೋರ್ಟನ ಮುಂದೆ ಸಾಕ್ಷಿ ಹೇಳಿದ್ದಾರೆ?? ತದನಂತರ ಅಂದರೆ ಭಾರತೀಯ ಜನತಾಪಾರ್ಟಿಯ ಶ್ರೀ ವಾಜಪೇಯಿ ಪ್ರಧಾನಮಂತ್ರಿಗಳಾಗಿದ್ದಾಗ ಕೇಂದ್ರ ಸರಕಾರಕ್ಕೆ ಲಿಂಗವಂತ ಜಂಗಮರನ್ನು ಬೇಡಾ/ಮಾಲಾ/ಶೂದ್ರ ಜಾತಿಯಲ್ಲಿ ಪರಿಗಣಿಸಬೇಕು ಎಂದು ವಿನಂತಿಪತ್ರ(ಶಿಫಾರಸು) ಜಗದ್ಗುರು ಪಂಚಾಚಾರ್ಯರು ಕೊಟ್ಟಿದ್ದಾರೆ??
ಎಲ್ಲಾ ಮೇಲಿನ ವಿವರಣೆಯಿಂದ ಈ ಜಗದ್ಗುರು ಪಂಚಾಚಾರ್ಯರು ಹಾಗೂ ಅವರ ಅನುಯಾಯಿಗಳು ಒಂದನ್ನೆ ಸತ್ಯ ಎಂದು ಹೇಳದೆ ಯಾವುದೋ ಆಮಿಷಕ್ಕೆ ಬಲಿಬಿದ್ದು ಏನನ್ನೊ ಹೇಳಿಕೊಳ್ಳುತ್ತಲಿರುವ ಇವರು ಸಮಾಜದಲ್ಲಿ ಗುರುವರ್ಗದವರೆಂದು ಹೇಳಿಕೊಳ್ಳತ್ತಲಿರುವಂತಹ ಈ ಪೌರೋಹಿತಶಾಹಿ ಮುಖಂಡರಿಗೆ ಧರ್ಮದ ಸಂಘಟನೆಯಾಗುವುದು ಬೇಡವಾಗಿದೆ ಎಂದು ಸಿದ್ಧವಾಗುವುದಿಲ್ಲವೇನು?? ಅದಕ್ಕಾಗಿಯೇ ಲಿಂಗವಂತ ಧರ್ಮ ಸಂಘಟನೆ ಸ್ಥಾಪಿಸುವ ಬದಲು ವೀರಶೈವ ಜಾತಿ/ಪಂಥಗಳ ಹೆಸರಿನ ಸಂಘಟನೆ ಸ್ಥಾಪಿಸಿದ್ದಾರೆ ಎಂದು ಸಿದ್ಧವಾಗುವುದಿಲ್ಲವೇನು??
ಮೇಲೆ ವಿವರಿಸಿದಂತಹ ಪ್ರಶ್ನೆಗಳ ಬಗ್ಗೆ ತಾವು ಕೂಡ ವಿಚಾರ ಮಾಡಿ ನೋಡಲಾಗಿ ತಮ್ಮ ಗಮನಕ್ಕೆ ಸಹಜವಾಗಿ ಬರಬಹುದು ತಾವು ಯಾರು ಎಂದು, ಅಂದರೆ ಲಿಂಗಾಯತರೋ ಅಥವಾ ವೀರಶೈವರೋ ಅಂತಾ?? ಈ ಸತ್ಯ ತಿಳಿದುಕೊಂಡ ಮೇಲೆ. ಯಾರಾದರೂ ತಮಗೆ ತಾವು ಯಾರು ಎಂದು ಕೇಳಿದರೆ ಲಿಂಗಾಯತವೆಂದು ಹೇಳಿರಿ.
ಎಲ್ಲ ದಾಖಲೆಗಳಲ್ಲಿ, ಮದುವೆ ಆಮಂತ್ರಣ ಪತ್ರ/ತೊಟ್ಟಿಲು ಕಾರ್ಯಕ್ರಮದ ಪತ್ರ/ಯಾವುದೇ ಸಮಾಜದ ಕಾರ್ಯಕ್ರಮದ ಪತ್ರ/ಶಾಲೆ/ಕಾಲೇಜು ಪತ್ರಗಲ್ಲಿ/ ಯಾವುದೇ ಕಾರ್ಯಾಲಯದಲ್ಲಿ (ಆಫಿಸ್) ದಾಖಲೆಗಳಲ್ಲಿ/ ಯಾವುದೇ ಅಂತರ್ಜಾಲ ತಾಣದಲ್ಲಿ/(ವೆಬ್ ಸೈಟ್ಗಳಲ್ಲಿ)/ಸೊಷಿಯಲ್ ನೆಟ್ವರ್ಕಗಳಲ್ಲಿ ಮೋಬೈಲ/ಲ್ಯಾಪಟಾಪ್/ಡೆಸ್ಕಟಾಪ/ಟಾಬಲೆಟ್/ಐ-ಪ್ಯಾಡ/ ಟ್ಯಾಬ್ ನಲ್ಲಿ ಎಲ್ಲಾ ಕಡೆಗಳಲ್ಲಿ ಲಿಂಗಾಯತ/ಲಿಂಗವಂತ ವೆಂದು ಸ್ಪಷ್ಟವಾಗಿ ಬರೆಯಿರಿ.
ಮೂಲ ಲೇಖಕರು: ಸಿದ್ಧರಾಮ ಪೂಜಾರಿ (ಗುಡ್ಡಾಪೂರ) ಮಾಜಿ ಸೈನಿಕ ವಸಹಾತ ಮೀರಜ-416410.
*