Previous ಬಸವಣ್ಣನವರ ಕಾಯಕ ಸಿದ್ಧಾಂತದ ಆಯಾಮಗಳು ಭಕ್ತಿ ಇಲ್ಲದ ಬಡವ ನಾನಯ್ಯಾ..... Next

ಜಗದ್ಗುರು ಸಂಪ್ರದಾಯದ ಮೂಲ ಮತ್ತು ಬೆಳವಣಿಗೆ

( ಕೃತಿ ಪಂಚಾಚಾರ್ಯರ ನಿಜಸ್ವರೂಪ.ಪ್ರಕಟ ೨೦೧೩)

*

ಡಾ|| ಎಂ. ಎಂ. ಕಲಬುರ್ಗಿ.

ಹನ್ನೆರಡನೆಯ ಶತಮಾನದ ಬಸವ ಚಳುವಳಿಯಲ್ಲಿ ಅಲ್ಲಮಪ್ರಭು ಸಂಪ್ರದಾಯದ ಜಗದ್ಗುರು ಪೀಠ ಉದಯವಾಯಿತು. ಬಸವಣ್ಣ ಸಕಲ ಜೀವಾತ್ಮರಿಗೆ ಲೇಸನೇ ಬಯಸಿ ಲಿಂಗಾಯತ ಸಮಾಜವನ್ನು ಅಸ್ತಿತ್ವಕ್ಕೆ ತಂದರು. ವರ್ಗಭೇದ, ವರ್ಣಬೇದ, ಲಿಂಗಭೇದಗಳಿಲ್ಲದ ಇದು ಅಭೇದ ಸಂಸ್ಕೃತಿಯಲ್ಲಿದೆ. ಈ ಸಂಸ್ಕೃತಿಯವರು ಆಚಾರ್ಯ ಮಠ ಸಂಸ್ಕೃತಿಗೆ ಬದಲಾಗಿ ಅನುಭಾವಿಗಳ "ಅನುಭವ ಮಂಟಪ ಸಂಸ್ಕೃತಿ" ಯನ್ನು ಅಸ್ಥಿತ್ವಕ್ಕೆ ತಂದರು, ಇಲ್ಲಿ ಗುರು ಲಿಂಗ ಜಂಗಮ ಪ್ರಜ್ಞೆಯ ಯಾವುದೇ ಜಾತಿಯ ವ್ಯಕ್ತಿ ಅಧ್ಯಕ್ಷರಾಗಬಹುದು. ಹೀಗಾಗಿ ಹನ್ನೆರಡನೆಯ ಶತಮಾನದಲ್ಲಿ ಅನುಭವಮಂಟಪದ ಜಗದ್ಗುರು ಪೀಠವನ್ನು ದೇವಾಲಯದ ನರ್ತಕ (ಮದ್ದಳೆಗಾರ) ಜಾತಿಯವನಾದ ಮಹಾಜ್ಞಾನಿ ಅಲ್ಲಮಪ್ರಭು ಅಲಂಕರಿಸಿದರು. ಹರಳಯ್ಯ ಮಧುವಯ್ಯಗಳ ಮಕ್ಕಳ ಮದುವೆಯೂ ಘಟಿಸಿ, ಇದನ್ನು ಸಾಂಪ್ರದಾಯಕ ಶೈವರು ವಿರೋಧ ವ್ಯಕ್ತಪಡಿಸಲು ಕಲ್ಯಾಣ ಕ್ರಾಂತಿ ಉದ್ಬವಿಸಿತು. ಪರಿಸ್ಥತಿ ರಾಜಕೀಯ ಬಣ್ಣ ಪಡೆದು , ಬಸವ ಚಳುವಳಿ ವಿಘಟನೆಗೊಂಡಿತು. ಬಳಿಕ ಚೆನ್ನಬಸವಣ್ಣ, ಸಿದ್ಧರಾಮ ಈ ಪೀಠದ ಜಗದ್ಗುರುಗಳಾದರು.

ಆದರೆ ಶೈವರ ವಿರೋಧ ದಿನೇ ದಿನೇ ಬೆಳೆದು , ಬಸವಣ್ಣ ಆರಂಭಿಸಿದ್ದ ಅನುಭವ ಮಂಟಪ ಪರಿಕಲ್ಪನೆ ನಿಂತೆಬಿಟ್ಟಿತು. ನಿಂತು ಹೋಗಿದ್ದ ಈ ಪರಂಪರೆಯನ್ನು ಹದಿನಾರನೆ ಶತಮಾನದಲ್ಲಿ ಜಾತಿಯಿಂದ ಭಕ್ತವರ್ಗದವರಾದ ಸಿದ್ದಲಿಂಗಯತಿಗಳು ಮತ್ತೆ ಆರಂಭಿಸಿದರು. ಮತಾಂಧ ಶೈವರ ಮಠಸಂಸ್ಕೃತಿ ಪ್ರಾಬಲ್ಯದಿಂದ ಮರೆಯಾಗಿದ್ದ ಅನುಭವ ಮಂಟಪ ಸಂಸ್ಕೃತಿಯನ್ನು ಮತ್ತೆ ಜೀವಂತಗೊಳಿಸಿದರು. ಅದಕ್ಕಾಗಿಯೇ ಇವರನ್ನು ದ್ವಿತೀಯ ಅಲ್ಲಮ, ತೊಂಟದ ಅಲ್ಲಮ ಎಂದು ಕರೆಯಲಾಗುತ್ತದೆ. ಮುಂದೆ ಕಟ್ಟಿಗೆಹಳ್ಳಿಯ ಸಿದ್ದಲಿಂಗರ ಶಿಷ್ಯರಲ್ಲಿ ಅಧಿಕಾರದ ಸಮಸ್ಯೆ ಉದ್ಬವಿಸಿ ಈ ಪರಂಪರೆಯಲ್ಲಿ ಹಲವಾರು ಶಾಖೆಗಳು ಬೆಳೆದು ಅವು ಕರ್ಣಾಟಕದ ಒಳಹೊರಗೆ ವ್ಯಾಪಿಸಿವೆ.

ಏಕಕಾಲಕ್ಕೆ ಆತ್ಮಕಲ್ಯಾಣ ಮತ್ತು ಸಮಾಜ ಕಲ್ಯಾಣವನ್ನು ಪ್ರತಿಪಾದಿಸುವ ಈ ಪರಂಪರೆಯವರು ಇಪ್ಪತ್ತನೆಯ ಶತಮಾನದಲ್ಲಿ ಸಾಂಪ್ರದಾಯಕ ಅನ್ನದಾಸೋಹವನ್ನು ಅದ್ಭುತವಾಗಿ ಬೆಳಸಿ, ಜೊತೆಗೆ ಶಿಕ್ಷಣದಾಸೋಹ, ಪುಸ್ತಕ ದಾಸೋಹ ಸೃಷ್ಟಿಸಿ, ಸಮಾಜವನ್ನು ಜಾತ್ಯಾತೀತವಾಗಿ ಅಧುನಿಕಗೊಳಿಸಿದುದು ಭಾರತದ ಮಟ್ಟದ ಉದಾಹರಣೆ ಎನಿಸಿದೆ. ಈ ಸಂಪ್ರದಾಯವನ್ನು ಲಿಂಗಾಯತ, ಲಿಂಗವಂತ ವೆಂದು ಕರೆಯಲಾಗುತ್ತದೆ.

*
ಪರಿವಿಡಿ (index)
Previous ಬಸವಣ್ಣನವರ ಕಾಯಕ ಸಿದ್ಧಾಂತದ ಆಯಾಮಗಳು ಭಕ್ತಿ ಇಲ್ಲದ ಬಡವ ನಾನಯ್ಯಾ..... Next