ಮಹಿಳಾ ಸ್ವಾತಂತ್ರ್ಯ: ಶರಣರ ನಿಲುವುಗಳು

*

✍ ಎಸ್.ಎಂ. ಜಾಮದಾರ.
ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ
ನಿವೃತ ಐ.ಎ.ಎಸ್‌ ಅಧಿಕಾರಿ.

25 Jan, 2018
‘ಲಿಂಗಾಯತ’ ಸ್ವತಂತ್ರ ಧರ್ಮವಾದರೆ ವಿವಾಹಿತ ಹೆಣ್ಣುಮಕ್ಕಳು ‘ಕುಂಕುಮ ಹಚ್ಚಬಾರದು, ಮಂಗಳಸೂತ್ರ ಕಟ್ಟಬಾರದು, ಕಾಲುಂಗುರ ಹಾಕಿಕೊಳ್ಳಬಾರದು’ ಎಂದು ಸ್ವಾಮಿಗಳೊಬ್ಬರು ಹೇಳಿದ್ದಾರೆ. ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾದ ಆ ಅವಿವೇಕದ ಮಾತಿನ ಮುಖ್ಯ ಉದ್ದೇಶ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟವನ್ನು ವಿರೋಧಿಸುವುದೇ ಆಗಿದೆ.

ಕುಂಕುಮ, ಮಂಗಳಸೂತ್ರ, ಹಸಿರು ಗಾಜಿನ ಬಳೆ, ಬೆಳ್ಳಿ ಕಾಲುಂಗುರಗಳು ‘ಮುತ್ತೈದೆ’ಯ ಲಕ್ಷಣ, ವೈವಾಹಿಕ ಸ್ಥಾನದ ವೈಭವೀಕರಣ! ಉತ್ತರ ಭಾರತದಲ್ಲಿ ಸಿಂಧೂರ ಇಟ್ಟುಕೊಳ್ಳುತ್ತಾರೆ. ಅನೇಕ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಹೆಣ್ಣುಮಕ್ಕಳೂ ಅದನ್ನು ಅನುಸರಿಸುತ್ತಾರೆ. ಸಂಸ್ಕೃತಿಯನ್ನು ವ್ಯಾಪಾರೀಕರಣ ಮಾಡುವ ಮಾರುಕಟ್ಟೆಯಿಂದಾಗಿ ಅಂದವಾದ ಬಹುಮಾದರಿಯ ಮಂಗಳಸೂತ್ರಗಳು ಮತ್ತು ಬಣ್ಣ ಬಣ್ಣದ ಬಿಂದಿಗಳ ಮೂಲಕ ಈ ಸಂಪ್ರದಾಯಗಳು ಈಗ ಫ್ಯಾಷನ್ ಆಗಿಬಿಟ್ಟಿವೆ! ಲಿಂಗಾಯತ ಧರ್ಮದಲ್ಲಿ ಈ ಸಂಪ್ರದಾಯವನ್ನು ಎಲ್ಲಿಯೂ ವಿರೋಧಿಸಿಲ್ಲ. ಆದ್ದರಿಂದ ಆ ಸ್ವಾಮಿಗಳು ಹೇಳಿದ್ದು ಅಪ್ಪಟ ಸುಳ್ಳು.

ತದ್ವಿರುದ್ಧವಾಗಿ, ಲಿಂಗಾಯತರಲ್ಲಿ ಗಂಡ ಸತ್ತರೆ ವಿಧವೆಯ ತಲೆ ಬೋಳಿಸುವುದಿಲ್ಲ. ಮಂಗಳಸೂತ್ರವನ್ನು ಹರಿಯುವುದೂ ಕಡಿಮೆ. ಕಾಲುಂಗುರ ತೆಗೆಯುವುದಿಲ್ಲ. ಅಂತಹ ಅವಮಾನ ವಿಧುರ ಗಂಡಸರಿಗೆ ಇಲ್ಲದಾಗ ಮಹಿಳೆಗೆ ಮಾತ್ರ ಏಕೀ ಅವಹೇಳನ, ವೈಧವ್ಯದ ಸ್ಥಿರೀಕರಣ? ಹಳ್ಳಿಗಳಲ್ಲಿ ಅಜ್ಞಾನಿಗಳು ಒಮ್ಮೊಮ್ಮೆ ಬ್ರಾಹ್ಮಣ್ಯದ ಪ್ರಭಾವದಿಂದ ವಿಧವೆಯರಿಗೆ ಇಂಥ ಅವಹೇಳನ ಮಾಡುತ್ತಿರಬಹುದು.

ಎರಡನೆಯದಾಗಿ, ಲಿಂಗಾಯತ ವಿಧವೆಯರು ವಿಧುರ ಗಂಡಸರಂತೆ ಮರುಮದುವೆ ಆಗುತ್ತಾರೆ. ಹಿಂದೂ ವಿಧವೆಯರಿಗೆ ಈ ಹಕ್ಕು ಸಿಕ್ಕಿದ್ದು ಬ್ರಿಟಿಷರ ಕಾಲದಲ್ಲಿ.

ಮೂರನೆಯದಾಗಿ, ಸಂತಾನಭಾಗ್ಯವಿಲ್ಲದ ಲಿಂಗಾಯತ ವಿಧವೆ ‘ದತ್ತು’ ಪಡೆಯುವ ಅಧಿಕಾರ ಹೊಂದಿದ್ದಾಳೆ. ಗಂಡಸರಂತೆ ಎಲ್ಲ ಆಸ್ತಿಯಲ್ಲಿ ಸಮಾನ ಹಕ್ಕು ಅವಳಿಗಿದೆ. ಅಖಿಲ ಭಾರತ ವೀರಶೈವ ಮಹಾಸಭೆಯ ಪ್ರಥಮ ಮತ್ತು ದ್ವಿತೀಯ ಅಧ್ಯಕ್ಷರಾಗಿದ್ದ ದಾನವೀರ ಸಿರಸಂಗಿ ಲಿಂಗರಾಜರು ಅಂತಹ ದತ್ತಕ ಮಕ್ಕಳಲ್ಲಿ (1874ರಲ್ಲಿ) ಒಬ್ಬರು. ಈ ಹಕ್ಕು ಹಿಂದೂ ಮಹಿಳೆಯರಿಗೆ ಸಾಮಾನ್ಯ ಪರಿಸ್ಥಿತಿಯಲ್ಲಿ ಇಲ್ಲ.

ನಾಲ್ಕನೆಯದಾಗಿ, ಸ್ತ್ರೀಯು ತಿಂಗಳಿಗೊಮ್ಮೆ ಮುಟ್ಟಾಗುವುದು ಒಂದು ಸಹಜ ನೈಸರ್ಗಿಕ ಕ್ರಿಯೆ. ಕುಲೀನ ಹಿಂದೂ ಮಹಿಳೆಯನ್ನು ಅಸ್ಪೃಶ್ಯಳಂತೆ ಕಂಡು ಮನೆಯ ಹೊರಮೂಲೆಗೆ ತಳ್ಳುವ ಇಂತಹ ಅಮಾನವೀಯ ಪದ್ಧತಿಯಿಂದ ಲಿಂಗಾಯತ ಮಹಿಳೆ ಮುಕ್ತಳು. ಅದು ಮೈಲಿಗೆಯಲ್ಲ; ಆಗ ಅವಳು ಅಸ್ಪೃಶ್ಯಳೂ ಅಲ್ಲ. ಮುಟ್ಟಿನ ಮೈಲಿಗೆ ಎಂಬ ಅಮಾನವೀಯ ಮಡಿವಂತಿಕೆಯನ್ನು ಶರಣರು ತಿರಸ್ಕರಿಸಿದರು.

ಧಾರ್ಮಿಕವಾಗಿ ಲಿಂಗಾಯತ ಸ್ತ್ರೀಯರು ಗಂಡಸರಿಗೆ ಸರಿಸಮಾನರು. ಹುಟ್ಟಿದ ಮೊದಲ ವಾರದಲ್ಲಿ ಗಂಡುಮಕ್ಕಳಂತೆ ಹೆಣ್ಣು ಕೂಸಿಗೂ ಲಿಂಗದೀಕ್ಷೆ ಮಾಡಲಾಗುತ್ತದೆ. ಸ್ತ್ರೀಯರೂ ದೇಹದ ಮೇಲೆ ಲಿಂಗ ಧರಿಸಿ ಇಷ್ಟಲಿಂಗ ಪೂಜೆ ಮಾಡುತ್ತಾರೆ. ಈ ಧಾರ್ಮಿಕ ಸ್ವಾತಂತ್ರ್ಯವನ್ನು ಸ್ತ್ರೀಗೆ ನೀಡಿದ ಭಾರತದ ಏಕೈಕ ಧರ್ಮ ಲಿಂಗಾಯತರದ್ದು. ಪಿತೃಪೂಜೆ, ಪಿಂಡ-ಶ್ರಾದ್ಧಗಳು ಲಿಂಗಾಯತರಲ್ಲಿ ಇಲ್ಲ.

ಆಧ್ಯಾತ್ಮಿಕ ಕ್ಷೇತ್ರದಲ್ಲಿಯೂ ಸ್ತ್ರೀಯು ಪುರುಷನಿಗೆ ಸರಿಸಮಾನಳು. ಆದ್ದರಿಂದಲೇ ಲಿಂಗಾಯತರಲ್ಲಿ ಇಂದು ಅನೇಕ ಮಹಿಳಾ ಜಗದ್ಗುರುಗಳುಂಟು. ಜೈನರಲ್ಲಿ ಪುರುಷ ದಿಗಂಬರಿಗಳಿರುತ್ತಾರೆ. ಹಿಂದೂಗಳಲ್ಲಿ ನಗ್ನರಾದ ಪುರುಷ ನಾಗಾ ಅಘೋರಿಗಳಿದ್ದಾರೆ. ಆದರೆ ಜಗತ್ತಿನ ಪ್ರಪ್ರಥಮ ನಗ್ನ ಸನ್ಯಾಸಿನಿ ಮಾತ್ರ ಲಿಂಗಾಯತರಲ್ಲಿದ್ದಳು ಮತ್ತು ಆಕೆ ಪುರುಷರಷ್ಟೇ ಸ್ವತಂತ್ರಳಾಗಿ ಕ್ರಾಂತಿಕಾರಿ ತತ್ವಗಳನ್ನು ಅರುಹಿದಳು ಎನ್ನುವುದು ವಿಶೇಷ. ಆಕೆಯೇ ಅಕ್ಕಮಹಾದೇವಿ! ಅಂತೆಯೇ ಅಕ್ಕ ನಾಗಮ್ಮ, ನೀಲಮ್ಮ, ಗಂಗಮ್ಮ, ಸತ್ಯಕ್ಕ, ಗೊಗ್ಗವ್ವೆ, ಲಿಂಗಮ್ಮ, ಸಂಕವ್ವೆಯಂತಹ ಮೂವತ್ತೇಳು ಶರಣೆಯರು ಹನ್ನೆರಡನೆಯ ಶತಮಾನದ ಧಾರ್ಮಿಕ–ಸಾಮಾಜಿಕ ಕ್ರಾಂತಿಯಲ್ಲಿ ಭಾಗವಹಿಸಿದರಲ್ಲದೇ, ಅವರು ಬರೆದ ವಚನಗಳು ಇಂದಿಗೂ ಸ್ತ್ರೀ ಸ್ವಾತಂತ್ರ್ಯಕ್ಕೆ ನೀಡಿದ ಅಮೂಲ್ಯ ಕಾಣಿಕೆಗಳಾಗಿವೆ.

ಮದುವೆಯೆಂಬ ಸಾಮಾಜಿಕ ಬಂಧನದಲ್ಲಿ ಪುರುಷ ಪ್ರಧಾನ ಸಮಾಜವು ಹೆಣ್ಣನ್ನು ದಾಸಿಯಂತೆ ಕಾಣುತ್ತದೆ ಎಂದು ಬಹುತೇಕ ಆಧುನಿಕ ಪಾಶ್ಚಾತ್ಯ ಸ್ತ್ರೀವಾದಿಗಳು ಭಾವಿಸುತ್ತಾರೆ. ಗಂಡನ ಆಸ್ತಿ ಎಂಬಂತೆ ಪರಿಗಣಿಸಿ ಹೆಂಡತಿಯ ಪಾಲಿಗೆ ಮಂಗಳಸೂತ್ರ, ಕಾಲುಂಗುರ, ಕುಂಕುಮಗಳು ದಾಸ್ಯದ ಸಂಕೋಲೆಗಳೆಂದು ತಿಳಿಯುತ್ತಾರೆ. ಆದರೆ ಇದಕ್ಕೆ ತದ್ವಿರುದ್ಧವಾಗಿ, ಹನ್ನೆರಡನೆಯ ಶತಮಾನದ ಶರಣರು ವಿವಾಹದಲ್ಲಿ ಸಮಾನತೆಯನ್ನು ಕಂಡರು. ಅವರ ಕೆಲವು ವಚನಗಳನ್ನು ಇಲ್ಲಿ ಉದಾಹರಿಸುವುದು ಸೂಕ್ತವೆನಿಸುತ್ತದೆ. ಗಂಡ-ಹೆಂಡರ ನಡುವಿನ ಸಮಾನತೆಯನ್ನು ಶರಣೆ ಗೊಗ್ಗವ್ವೆಯ ಬಾಯಿಂದ ಕೇಳಿ;

‘ಗಂಡು ಮೋಹಿಸಿ ಹೆಣ್ಣ ಹಿಡಿದಡೆ,
ಅದು ಒಬ್ಬರ ಒಡವೆ ಎಂದು ಅರಿಯಬೇಕು.
ಹೆಣ್ಣು ಮೋಹಿಸಿ ಗಂಡ ಹಿಡಿದಡೆ ಉತ್ತರವಾವುದೆಂದರಿಯಬೇಕು.
ಈ ಎರಡರ ಉಭಯವ ಕಳೆದು
ಸುಖಿ ತಾನಾಗ ಬಲ್ಲಡೆ, ನಾಸ್ತಿನಾಥನು ಪೂರ್ಣನೆಂಬೆ’.


ಅಂದರೆ, ಗಂಡ-ಹೆಂಡತಿಯ ನಡುವೆ ಮೇಲು-ಕೀಳೆಂಬುದಿಲ್ಲ. ಅವರಿಬ್ಬರೂ ಪರಸ್ಪರರ ಒಡವೆ, ಅವರಿಬ್ಬರೂ ಸಮಾನರು!

ಶರಣ ಸಿದ್ಧರಾಮರ ವಚನದಲ್ಲಿ ಸ್ತ್ರೀಯ ಸ್ಥಾನವನ್ನು ಹೀಗೆ ವಿವರಿಸಲಾಗಿದೆ; ‘ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು, ತಾ ಮಾಡಿದ ಹೆಣ್ಣು ತನ್ನ ತೊಡೆಯನೇರಿತ್ತು, ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆ ಏರಿತ್ತು, ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು. ಅದು ಕಾರಣ, ಹೆಣ್ಣು ಹೆಣ್ಣಲ್ಲ, ಹೆಣ್ಣು ರಾಕ್ಷಸಿಯಲ್ಲ, ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ’. ಇದು ಗಂಗೆ-ಗೌರಿ, ಸರಸ್ವತಿ, ಲಕ್ಷ್ಮಿಯನ್ನು ಶಿವ, ಬ್ರಹ್ಮ, ವಿಷ್ಣು ಕಾಣುತ್ತಿದ್ದ ರೀತಿಯನ್ನು ಶರಣರು ಪರೋಕ್ಷವಾಗಿ ಟೀಕಿಸಿ ಹೆಣ್ಣನ್ನು ದೇವತೆಯ ಸ್ಥಾನಕ್ಕೆ ಏರಿಸಿದ ಪರಿ!

ಗಂಡ-ಹೆಂಡತಿ ಹೇಗಿರಬೇಕು ಎಂಬುದಕ್ಕೆ ಅಲ್ಲಮನು ಹೇಳಿದ್ದು;

‘ಸತಿ ಭಕ್ತೆಯಾದೆಡೆ ಹೊಲೆಗಂಜಲಾಗದು,
ಪತಿಭಕ್ತನಾದೆಡೆ ಕುಲ ಕಂಜಲಾಗದು,
ಸತಿಪತಿ ಅಂಗಸುಖ ಹಿಂಗಿ, ಲಿಂಗವೇ ಪತಿಯಾದ ಬಳಿಕ,
ಸತಿಗೆ ಪತಿಯುಂಟೆ? ಪತಿಗೆ ಸತಿಯುಂಟೆ?’.


ಅಂದರೆ, ಸತಿ-ಪತಿಗಳಿಬ್ಬರೂ ಲಿಂಗಭಕ್ತರಾದೊಡನೆ ಅವರ ನಡುವೆ ಮೈಲಿಗೆಯಿಲ್ಲ, ಕುಲವಿಲ್ಲ, ಕೇವಲ ಅಂಗಸುಖವಿಲ್ಲ. ಅವರಿಬ್ಬರೂ ಶಿವಭಕ್ತರಾಗಿ ಸಮಾನರು.

ಹೆಣ್ಣು ಮಾಯೆ, ಸಂಸಾರ ಮಾಯೆಯೆಂಬ ಶಂಕರಾಚಾರ್ಯರ ವಾದವನ್ನು ತಿರಸ್ಕರಿಸಿದ ಶರಣರಿಗೆ ಅದು ಮಾಯೆಯಲ್ಲ. ‘ಹೆಣ್ಣು ಹೆಣ್ಣಾದಡೆ ಗಂಡಿನ ಸೂತಕ. ಗಂಡುಗಂಡಾದಡೆ ಹೆಣ್ಣಿನ ಸೂತಕ. ಮನದ ಸೂತಕ ಹಿಂಗಿದಡೆ, ತನುವಿನ ಸೂತಕಕ್ಕೆ ತೆರಹುಂಟೆ?’ (ಅಕ್ಕಮಹಾದೇವಿ). ಬೇರೊಂದು ವಚನದಲ್ಲಿ ‘ಮಾಯೆಯೆಂದರೆ ಮನದ ಮುಂದಿನ ಆಸೆ’ ಎಂದೂ ಶರಣರು ಹೇಳುತ್ತಾರೆ. ಆಧ್ಯಾತ್ಮಿಕವಾಗಿ ಹೆಣ್ಣು-ಗಂಡೆಂಬ ದ್ವಿತ್ವವನ್ನು ಜೇಡರ ದಾಸಿಮಯ್ಯನು ಅಕ್ಕಮಹಾದೇವಿಯ ಹಾಗೆ ಅಲ್ಲಗಳೆಯುವ ರೀತಿ ಮಾರ್ಮಿಕವಾದದ್ದು; ‘ಮೊಲೆ ಮೂಡಿ ಬಂದೆಡೆ ಹೆಣ್ಣೆಂಬರು, ಗಡ್ಡಮೀಸೆ ಬಂದೆಡೆ ಗಂಡೆಂಬರು, ನಡುವೆ ಸುಳಿವ ಆತ್ಮನು ಹೆಣ್ಣೂ ಅಲ್ಲ ಗಂಡೂ ಅಲ್ಲ, ಕಾಣಾ ರಾಮನಾಥಾ’.

ಮಾಯಾವಾದವನ್ನು ತಿರಸ್ಕರಿಸಿದ ಶರಣರು ದಾಂಪತ್ಯ ಜೀವನಕ್ಕೆ ಹೆಚ್ಚು ಮಹತ್ವ ನೀಡಿದರು. ಸತಿಪತಿಗಳ ನಡುವಿನ ಸಂಬಂಧವು ಬಸವಣ್ಣ ಹೇಳಿದಂತೆ; ‘ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ, ಲಿಂಗದ ಮೇಲೆ ನಿಷ್ಠೆ ಇಲ್ಲದ ಭಕ್ತ ಇದ್ದೊಡೇನು ಶಿವ ಶಿವಾ ಹೋದೊಡೇನು ಕೂಡಲಸಂಗಮ ದೇವಯ್ಯ’. ಮತ್ತೊಂದು ವಚನದಲ್ಲಿ; ‘ಸತಿಪತಿಗಳೊಂದಾದ ಭಕ್ತಿ ಹಿತವೊಪ್ಪುದು ಶಿವಂಗೆ’ ಎನ್ನುತ್ತಾರೆ.

ಶರಣರ ಸ್ತ್ರೀಪರ ನಿಲುವುಗಳು ಬಹುತೇಕ ಪ್ರಗತಿಪರ ಚಿಂತಕರ ಪ್ರಶಂಸೆಗೆ ಪಾತ್ರವಾಗಿವೆ. ಎನ್.ಮನು ಚಕ್ರವರ್ತಿ, ಡಿ.ಆರ್.ನಾಗರಾಜ್, ಗೇಲ್ ಓಮ್ವೆಡ್ತ, ಸೂಸಿ ತಾರು, ಕೆ.ಲಲಿತಾ, ಗಾಯತ್ರಿ ಸ್ಪಿವಾಕರಂತಹ ವಿದ್ವಾಂಸರು ಲಿಂಗಾಯತರಲ್ಲಿನ ಪ್ರಗತಿಪರ ಸ್ತ್ರೀವಾದಿ ನೆಲೆಗಳನ್ನು ಕೊಂಡಾಡಿದ್ದಾರೆ. 1840ರ ಸುಮಾರಿಗೆ ಪಿ.ಸಿ.ಬ್ರೌನ್, ಎಂ.ಸಿ ಕಾರ್, ಎಂಥೋವೆನ್‌ರಂತಹ ಪಾಶ್ಚಾತ್ಯರೂ ಕೂಡ ಈ ಸಂಗತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೀಗೆ ಪ್ರಗತಿಪರ ಲಿಂಗಾಯತ ಧರ್ಮದ ಮೂಲ ತತ್ವಗಳನ್ನು ತಿರುಚಿ ಶಿವಪ್ರಕಾಶರಂಥ ಸ್ವಾಮಿಗಳು ಅಮಾಯಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ತದ್ವಿರುದ್ಧವಾಗಿ, ಅದೇ ಸಮಾರಂಭದಲ್ಲಿ ಅವರ ಗುರುಗಳಾದ ಉಜ್ಜಯಿನಿಯ ಪೀಠಾಚಾರ್ಯರು, ‘ಅಡ್ಡ ಪಲ್ಲಕ್ಕಿಯಿಂದ ದಾರಿದ್ರ್ಯ ನಿವಾರಣೆಯಾಗುತ್ತದೆ. ಆದ್ದರಿಂದ ಈ ಆಚರಣೆಯನ್ನು ಟೀಕಿಸುವುದು ಸರಿಯಲ್ಲ. ಇಂತಹ ಉತ್ಸವಗಳು ನಿರಂತರವಾಗಿ ನಡೆಯಬೇಕು’ ಎಂದು ಹೇಳಿರುವುದು, ಮೂಢನಂಬಿಕೆಗಳನ್ನು ಮುಂದುವರಿಸಿ ತಮ್ಮ ಹಿತರಕ್ಷಣೆ ಮಾಡಿಕೊಳ್ಳುತ್ತಿರುವುದಕ್ಕೆ ಸ್ಪಷ್ಟ ದಾಖಲೆ. ಇದೆಂತಹ ವಿಪರ್ಯಾಸ! ಇಂತಹ ಸ್ವಾರ್ಥಸಾಧಕರ ಉದ್ದೇಶವನ್ನು ಸಾರ್ವಜನಿಕರು ಅರಿತಷ್ಟು ಸಮಾಜಕ್ಕೆ ಹಿತ.

*
ಪರಿವಿಡಿ (index)
Previousಲಿಂಗಾಯತ ಹಿಂದೂ ಧರ್ಮದ ಅಂಗವಲ್ಲಲಿಂಗಾಯತ ಹಿಂದೂಧರ್ಮವೆ ?Next
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.