Previous ಲಿಂಗಾಯತತತ್ವ ವಿರುದ್ಧ ಆಚರಣೆಗಳು. ಪಂಚಾಚಾರ್ಯರ ನಿಜಸ್ವರೂಪ Next

ವೀರಶೈವದ ಇತಿಹಾಸ ಮತ್ತು ಭೂಗೋಲ

*

ವೀರಶೈವಪದ : ಐತಿಹಾಸಿಕ ಬೆಳವಣಿಗೆ

✍ ಡಾ. ಎಂ. ಎಂ. ಕಲಬುರ್ಗಿ.

ಲಿಂಗಾಯತ ಮತ್ತು ವೀರಶೈವ ಪದಗಳು ಸಾಹಿತ್ಯ ಸಮಾಜಗಳಲ್ಲಿ ಇಂದು ಪರ್ಯಾಯವೆಂಬಂತೆ ಬಳಕೆಯಾಗುತ್ತಲಿವೆ. ಹೀಗಿದ್ದೂ ಇವು ತಾತ್ವಿಕವಾಗಿ ಭಿನ್ನಪದಗಳೆಂಬ, ಈ ಕಾರಣದಿಂದಾಗಿ ಭಿನ್ನಸಂಪ್ರದಾಯ ಸೂಚಕ ಪದಗಳೆಂಬ ಅಭಿಪ್ರಾಯ ಆಗಾಗ ಕೇಳಿಬರುತ್ತಲಿದೆ. ಈ ವಿಷಯದಲ್ಲಿ ಸರಿಯಾದ ಸಂಶೋಧನೆ ಅಗತ್ಯವೆನಿಸಿದೆ. ಇಂಥ ಸಂದರ್ಭದಲ್ಲಿ ಸಂಶೋಧಕನಿಗೆ ಮುಖ್ಯವಾದುದು ಆಕರ ಸಾಮಗ್ರಿ, ಆದರೆ ಬಳಸಿಕೊಳ್ಳುವಲ್ಲಿ ಅದರ ಪ್ರಾಮಾಣಿಕತೆಯ ಪರೀಕ್ಷೆ ಅಗತ್ಯ. ಹೀಗೆ ಮಾಡದಿದ್ದರೆ ಸತ್ಯದ ಹೆಸರಿನಲ್ಲಿ ಅಸತ್ಯವನ್ನು ಸ್ಥಾಪಿಸಿದ ಪ್ರಮಾದ ಘಟಿಸುತ್ತದೆ. ಲಿಂಗಾಯತ, ವೀರಶೈವ ಪದಗಳ ವಿಷಯದಲ್ಲಿ ಈ ಎಚ್ಚರ ಮುಖ್ಯವೆಂದೇ ಹೇಳಬೇಕು.

ಆಕರ ಸಾಮಗ್ರಿಯಲ್ಲಿ ಭಾಷೆ ಮತ್ತು ಭಾಷೆಯ ಉತ್ಪನ್ನಗಳಾದ ಕಾವ್ಯ, ಶಾಸ್ತ್ರ ಮತ್ತು ಶಾಸನ ಮುಖ್ಯವಾದುವು. ಇಂಥ ಆಕರಗಳನ್ನವಲಂಬಿಸಿ, ವೀರಶೈವ ಶಬ್ದದ ಐತಿಹಾಸಿಕ ಬೆಳವಣಿಗೆಯನ್ನು ಕುರಿತು ಇಲ್ಲಿ ಚರ್ಚಿಸಬಹುದು.

ಸಾಹಿತ್ಯಕ್ಕೆ ಬಂದರೆ ಶರಣರ ವಚನ, ಕವಿಗಳ ರಗಳೆ--ಷಟ್ನದಿ-ಚಂಪೂ ಇತ್ಯಾದಿಗಳು ನಮಗೆ ಆಕರವೆನಿಸುತ್ತವೆ. ವಚನಪೂರ್ವಯುಗದ ಕೊಂಡಗುಳಿ ಕೇಶಿರಾಜ (೧೧೨೫)ನ 'ಶೀಲಮಹತ್ವದ ಕಂದ'ದಲ್ಲಿ ಒಮ್ಮೆ ಲಿಂಗಾಯತ, ಇನ್ನೊಮ್ಮೆ ಲಿಂಗವಂತ, ಮತ್ತೊಮ್ಮೆ ವೀರಶೈವ ಪದಗಳು ಕಾಣಸಿಗುತ್ತವೆ. ಆದರೆ ಈ ಕೃತಿ ಪ್ರಕ್ಷಿಪ್ತವೆಂದು ಡಾ. ಬಿ.ವಿ. ಮಲ್ಲಾಪುರ ಮೊದಲಾದ ವಿದ್ವಾಂಸರು ಅನುಮಾನಿಸುತ್ತಿರುವದಕ್ಕೆ[೧] ನನ್ನ ಸಹಮತವಿದೆ. ಮೇಲಾಗಿ ಇಲ್ಲಿಯ (ಬಾಲಿಶವೆನಿಸುವ) ೬೪ ಶೀಲಗಳು ಶರಣಧರ್ಮಕ್ಕೆ ಖಂಡಿತ ಒಪ್ಪಿತವೆನಿಸುವುದಿಲ್ಲ. “ಹೂ ಭಾವಿ ಮಠಕ್ಕೆ ಸೀಮೆಯ ಮಾಡುವುದು ಶೀಲವೇ?” ಎಂದು ಸಕಲೇಶ ಮಾದರಸ (೧೦೨)ನು ಶರಣರ ಪ್ರತಿನಿಧಿಯೆಂಬಂತೆ ಪರೋಕ್ಷವಾಗಿ ಈ ಕೃತಿ ವಿಷಯವನ್ನು ನಿರಾಕರಿಸುತ್ತಾನೆ. ಆಂಧ್ರದ ಪಾಲ್ಕುರಿಕೆ ಸೋಮೇಶ ಮೊದಲಾದ ಶೈವರು ಆಚರಿಸುತ್ತಲಿದ್ದ ಈ ಶೀಲಸಿದ್ಧಾಂತ ಕರ್ನಾಟಕದ ಶರಣರಿಗೆ ಸಮ್ಮತವಲ್ಲ. ಮೇಲಾಗಿ ಕೇಶಿರಾಜನನ್ನು ಶರಣರು, ಅದರಲ್ಲಿಯೂ ಬಸವಣ್ಣನವರು ತಪ್ಪಿಯೂ ಸ್ಮರಿಸುವುದಿಲ್ಲವಾಗಿ, ಅವನದು ಶರಣರಿಗೆ ಸಮ್ಮತವಲ್ಲದ ಪಂಥವೆಂದು ಹೇಳಬಹುದಾಗಿದೆ.

ಶರಣರ ಕಾಲಕ್ಕೆ ಬಂದರೆ, ಸಧ್ಯ ಪ್ರಕಟವಾದ ಅವರ ವಚನಗಳಲ್ಲಿ ಲಿಂಗವಂತ, ವೀರಶೈವ ಪದಗಳು ತಕ್ಕ ಪ್ರಮಾಣದಲ್ಲಿ ಕಂಡುಬರುವುದರಿಂದ, ಇವೆಲ್ಲವೂ ಅಂದೇ ಪರ್ಯಾಯ ಪದಗಳಾಗಿ ರೂಢಿಯಲ್ಲಿದ್ದವೆಂದು ಸಾಮಾನ್ಯವಾಗಿ ಎಲ್ಲರೂ ಭಾವಿಸಿದ್ದಾರೆ. ಈ ಬಗ್ಗೆ ಸ್ಪಷ್ಟಿಕರಣ ಹೀಗೆ ನೀಡಬಹದು.

ಸಮಗ್ರ ವಚನಸಾಹಿತ್ಯವನ್ನು ಷಟ್‌ ಸ್ಥಲವಚನಗಳು, ಇತರ ವಚನ(ಹೆಚ್ಚಿನ ವಚನ)ಗಳೆಂದು ವಿಭಾಗಿಸಬಹುದಾಗಿದ್ದು, ಇಲ್ಲಿಯ ಇತರ ವಚನಗಳಲ್ಲಿ ಕೆಲವೊಮ್ಮೆ ಪ್ರಕ್ಷಿಪ್ತ ವಚನಗಳೂ ಸೇರಿಕೊಂಡಿರುವುದರಿಂದ, ಷಟ್‌ಸ್ಥಲ ಕಟ್ಟುಗಳನ್ನು ವಿಶ್ವಾಸಾರ್ಹವೆಂದು ವಿದ್ವಾಂಸರು ಭಾವಿಸುತ್ತ ಬಂದಿದ್ದಾರೆ. ಷಟ್‌ಸ್ಥಲಕ್ರಮದಲ್ಲಿ ಸಂಕಲಿತವಾದುವು ಬಸವಣ್ಣ, ಚನ್ನಬಸವಣ್ಣ, ಪ್ರಭುದೇವರ ವಚನಗಳು ಮಾತ್ರ ಇವುಗಳಲ್ಲಿ ಬಸವಣ್ಣನವರ ಷಟ್‌ಸ್ಥಲ ವಚನಗಳಲ್ಲಿ ವೀರಶೈವ ಪದ ಬಳಕೆಯಾಗಿಲ್ಲ. ಚೆನ್ನಬಸವಣ್ಣನವರ ಷಟ್‌ಸ್ಥಲ ವಚನಕಟ್ಟುಗಳು ಆರು ಬಗೆಯಲ್ಲಿ ಸಿಗುತ್ತಿದ್ದು, ಅವುಗಳಲ್ಲಿಯೂ ವೀರಶೈವ ಶಬ್ದವಿಲ್ಲ. ಒಂದು ವಚನದಲ್ಲಿ ಮಾತ್ರ (ಆರ್.ಸಿ. ಹಿರೇಮಠ, ೫೪೭)“ವೀರಶೈವವಳವಡದು” ಪದ ಬಳಕೆಯಾಗಿದ್ದರೂ, ಇದಕ್ಕೆ ಕೆಲವು ಪ್ರತಿಗಳಲ್ಲಿ “ಆಚಾರವಳವಡದು”, “ನೃತ್ಯಾಚಾರವಳವಡದು” ಎಂಬ ಭಿನ್ನಪಾಠಗಳಿವೆ. ಆದುದರಿಂದ ಈ ವಚನದಲ್ಲಿ ಬಳಕೆಯಾದ ವೀರಶೈವ ಪದವೂ ಪ್ರಕ್ಷಿಪ್ತವೆಂದು ಖಚಿತವಾಗಿ ಹೇಳಬಹುದು. ಅಲ್ಲಮನ ಷಟ್‌ಸ್ಥಲ ವಚನಕಟ್ಟು ಎರಡು ರೀತಿಯಲ್ಲಿ (ಕಲ್ಲುಮಠದ ಪ್ರಭುದೇವ, ಮಗ್ಗೆಯ ಮಾಯಿದೇವ) ಇದ್ದು, ಇಲ್ಲಿಯೂ ವೀರಶೈವಪದ ಕಂಡುಬರುವುದಿಲ್ಲ. ಒಟ್ಟಾರೆ, ಲಿಂಗವಂತ ಪದ ಷಟ್‌ಸ್ಥಲ, ಷಟ್‌ಸ್ಥಲೇತರ ವಚನಗಳಲ್ಲಿಯೂ ಕಂಡುಬರುತ್ತಿದ್ದರೆ, ವೀರಶೈವ ಶಬ್ದ ಕೇವಲ ಷಟ್‌ಸ್ಥಲೇತರ ವಚನಗಳಲ್ಲಿ ಕಾಣಸಿಗುತ್ತದೆ. ಹೀಗಾಗಿ, ವೀರಶೈವಪದ ವಚನಗಳಲ್ಲಿ ಆಮೇಲಿನ ಸೇರ್ಪಡೆಯೆನಿಸುತ್ತದೆ.

ಶರಣರ ಸಮಕಾಲೀನನಾಗಿ ಆಂಧ್ರಪ್ರದೇಶದಲ್ಲಿ ಪ್ರಸಿದ್ಧನಾದವ, ಮಲ್ಲಿಕಾರ್ಜುನ ಪಂಡಿತಾರಾಧ್ಯ, ಬಸವಣ್ಣನಿಂದ ತುಂಬ ಪ್ರಭಾವಿತನಾಗಿದ್ದ, ಆಂಧ್ರ ಬಸವಣ್ಣನೆಂದೇ ಹೇಳಬಹುದಾದ ಈತನ ತೆಲಗು 'ಶಿವತತ್ವಸಾರಮು' ಕೃತಿಯಲ್ಲಿ ಶಿವಧರ್ಮ, ಶೈವಾಗಮ, ಶಿವಸಮಯ ಪದಗಳಿವೆಯೇ ಹೊರತು ವೀರಶೈವ ಪದವಿಲ್ಲ. ಅಂದರೆ ೧೨ನೆಯ ಶತಮಾನದ ಹೊತ್ತಿಗೆ ಈ ಶಬ್ದ ತೆಲುಗುನಾಡಿನಲ್ಲಿಯೂ ಹುಟ್ಟಿರಲಿಲ್ಲ.

೧೨ನೆಯ ಶತಮಾನದ ವಚನ ಸಾಹಿತ್ಯವನ್ನು ಬಿಟ್ಟರೆ ನಮಗೆ ಎದುರಾಗುವುದೆಂದರೆ, ೧೩ನೆಯ ಶತಮಾನದ ಹರಿಹರ ರಾಘವಾಂಕಾದಿಗಳ ಕವಿಸಾಹಿತ್ಯ ಇವರ ಕೃತಿಗಳಲ್ಲಿಯೂ ವೀರಶೈವಪದ ಬಳಕೆಯಾಗಿಲ್ಲ. ಹರಿಹರನಲ್ಲಿ ಲಿಂಗವಂತ, ಲಿಂಗವಂತೆ ಪದಗಳು ಆಗಾಗ ಕಂಡುಬರುತ್ತವೆ. ಈ ದೃಷ್ಟಿಯಿಂದ ಅಗತ್ಯ ಗಮನಿಸಬಹುದಾದ ಈ ಕಾಲದ ಶಾಸ್ತ್ರಕೃತಿಯೆಂದರೆ ಹೊಯ್ಸಳರ ರಾಜಧಾನಿ ಹಳೆಬೀಡಿನಲ್ಲಿದ್ದ ಕೆರೆಯ ಪದ್ಮರಸರ “ದೀಕ್ಷಾಬೋಧೆ.” ದೀಕ್ಷೆಯ ಪ್ರಕ್ರಿಯೆ, ಮಹತ್ವಗಳನ್ನು ಹೇಳುವ ಈ ಕೃತಿಯಲ್ಲಿಯೂ ವೀರಶೈವ ಪದ ಬಳಕೆಯಾಗಿಲ್ಲ. ಯಾವ ಧರ್ಮದ ದೀಕ್ಷೆ ನೀಡಲಾಗುವುದೋ ಆ ಧರ್ಮದ ಹೆಸರೇ ಇಲ್ಲವೆನ್ನುವುದು ಇಲ್ಲಿಯ ಸೋಜಿಗದ ವಿಷಯ. ಒಮ್ಮೆ ಮಾತ್ರ “ನೋಯದಂತಿರಿಸು ಲಿಂಗಾಯತದಿ ಮದ್ಗುರುವೆ” ಎಂಬಲ್ಲಿ ಲಿಂಗಾಯತಪದ ಬಳಸಿದ್ದಾನೆ. ಈತನ ಮಗ ಕುಮಾರ ಪದ್ಮರಸನ “ಸಾನಂದ ಚರಿತೆ"ಯ ಮುಖ್ಯ ಉದ್ದೇಶ “ಶಿವಾದ್ವತ ಸಾಕಾರಸಿದ್ಧಾಂತ” ಪ್ರತಿಪಾದನೆ. ತತ್ವ-ಸಿದ್ಧಾಂತದಿಂದ ತುಂಬಿ ತುಳುಕುವ ಈ ಕೃತಿಯಲ್ಲಿಯೂ ವೀರಶೈವ ಪದ ಬಳಕೆಯಾಗಿಲ್ಲ [೨] ಇದರಿಂದ ೧೩ ನೆಯ ಶತಮಾನದಲ್ಲಿಯೂ ವೀರಶೈವ ಪದ ಕರ್ನಾಟಕದಲ್ಲಿ ಬಳಕೆಯಲ್ಲಿರಲಿಲ್ಲವೆಂದೇ ಹೇಳಬೇಕು.

ತರುವಾಯದ ಮುಖ್ಯ ಕವಿಯಾದ ೧೩ನೆಯ ಶತಮಾನದ ಪಾಲ್ಕುರಿಕೆ ಸೋಮೇಶ್ವರನ ತೆಲುಗು ಬಸವಪುರಾಣದಲ್ಲಿ ಲಿಂಗವಂತ, ವೀರಮಾಹೇಶ್ವರ ಪದಗಳಿವೆಯಾದರೂ ವೀರಶೈವ ಪದ ಕಂಡುಬರುವುದಿಲ್ಲ.[೩] ಆಶ್ಚರ್ಯದ ಸಂಗತಿಯೆಂದರೆ, ಈ ತೆಲುಗು ಬಸವಪುರಾಣವನ್ನು ಕನ್ನಡಕ್ಕೆ ಅನುವಾದಿಸಿದ ಭೀಮಕವಿಯು (೧೩೬೮)ಕೆಲವೊಮ್ಮೆ ಅಲ್ಲಿಯ ವೀರಮಾಹೇಶ್ವರ ಪದಕ್ಕೆ ಬದಲು ಇಲ್ಲಿ ವೀರಶೈವ ಪದವನ್ನು (೩-೪೯, ೨೧-೨೩)ಬಳಸಿದ್ದಾನೆ. ಕನ್ನಡದಲ್ಲಿ ವೀರಶೈವ ಪದ ಅಧಿಕೃತವಾಗಿ ಕಂಡುಬರುವುದು ಇದೇ ಮೊದಲು. ಹೀಗಾಗಿ, ವೀರಶೈವ ಪದ ಪಾಲ್ಕುರಿಕೆ ಸೋಮೇಶನ ತೆಲುಗು ಬಸವಪುರಾಣಮು ಮತ್ತು ಭೀಮಕವಿಯ ಕನ್ನಡ ಬಸವಪುರಾಣಗಳ ಮಧ್ಯದ ಕಾಲಾವಧಿಯಲ್ಲಿ ಹುಟ್ಟಿದೆಯೆಂದು ಸ್ಪಷ್ಟವಾಗಿ ಹೇಳಬಹುದು. ಭೀಮಕವಿಯು ಇಂದಿನ ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ತಾಲುಕು ಸ್ಥಳವಾದ ಸಿದ್ಧವಟ ಗ್ರಾಮದವನೆಂಬುದನ್ನು ಇಲ್ಲಿ ಸ್ಮರಿಸಬಹುದು.

ಈ ಸಂದರ್ಭದಲ್ಲಿ “ಆಂಧ್ರಪ್ರದೇಶದ ವೀರಶೈವ” ವಿಷಯವನ್ನು ಕುರಿತ ಪಿಎಚ್.ಡಿ. ಪ್ರಬಂಧದಲ್ಲಿ ಹೇಳಲಾಗಿರುವ
"Palakuriki somanatha was the earliest, to use word virashaiva in Andhra. In his chaturveda saram, Somanatha describes lord Hari as a Virashaiva, because the latter performed certain heroic deeds, such as offering his own eyes to shiva, as a token of deep devotion. in Basava puraanam however, he apears to have give deeper meaning to virashaiva, though the word was not actually used" (Virashaiva in Andhra-K. Lalitamba. p.2) ಎಂಬ ಅಭಿಪ್ರಾಯವನ್ನು ಅವಶ್ಯ ಗಮನಿಸಬೇಕು.

ವಚನಸಾಹಿತ್ಯ (೧೧೬೮)ದಲ್ಲಿ ವೀರಶೈವಪದ ಬಳಕೆಯಾಗಿದೆಯೆಂದು ವಾದಿಸುವವರು, ಆ ಬಳಿಕ ಕನ್ನಡ ಬಸವಪುರಾಣ (೧೩೬೮)ವರೆಗಿನ ಅಂದರೆ ೨೦೦ ವರ್ಷ ವರೆಗಿನ ಕನ್ನಡ ಸಾಹಿತ್ಯದಲ್ಲಿ ಅದು ಏಕೆ ಬಳಕೆಯಾಗಿಲ್ಲ? ಎಂಬುದಕ್ಕೆ ಏನು ಉತ್ತರ ಕೊಡುತ್ತಾರೆ. ಇದರರ್ಥ, ಕನ್ನಡ ಬಸವಪುರಾಣದ ತರುವಾಯದವರು ವೀರಶೈವ ಶಬ್ದಕ್ಕೆ ಪ್ರಾಚೀನತೆಯನ್ನು ಕಲ್ಪಿಸಲು ಉದ್ದೇಶಿಸಿ, ಆ ಪದವನ್ನು ವಚನಗಳಲ್ಲಿ ಬೆರೆಸಿದರೆಂದು ಹೇಳಬೇಕಾಗುತ್ತದೆ.

೧೪ನೆಯ ಶತಮಾನದ ಭೀಮಕವಿಯ ತರುವಾಯದ ಮುಖ್ಯ ವ್ಯಕ್ತಿಗಳೆಂದರೆ ೧೫ನೆಯ ಶತಮಾನದಲ್ಲಿ ಹಂಪೆಯಲ್ಲಿದ್ದ ಪುಲಿಗೆರೆಯ ಮಹಾಲಿಂಗದೇವ, ಕಲ್ಲುಮಠದ ಪ್ರಭುದೇವ, ಮಗ್ಗೆಯ ಮಾಯಿದೇವ ಮತ್ತು ಲಕ್ಕಣ್ಣ ದಂಡೇಶ. ಮೇಲೆ ಹೇಳಿದಂತೆ ಪುಲಿಗೆರೆಯ ಮಹಾಲಿಂಗದೇವ ಸಂಕಲಿಸಿರುವ ಅಲ್ಲಮನ ಷಟ್‌ಸ್ಥಲವಚನ ಕೃತಿಯಲ್ಲಿ ವೀರಶೈವಪದ ಕಂಡುಬರುವುದಿಲ್ಲ. ಆದರೆ ತನ್ನ ಕೃತಿಗಳ ಪೀಠಿಕಾಗದ್ಯ ಮತ್ತು ಅಂತ್ಯಗದ್ಯಗಳಲ್ಲಿ ತನ್ನನ್ನು “ವೀರಶೈವಾಗಮಾಚಾರ್ಯ” ಎಂದು ಕರೆದುಕೊಂಡಿದ್ದಾನೆ.

ಇದೇ ಕಾಲದ ಕಲ್ಲುಮಠದ ಪ್ರಭುದೇವರ ಲಿಂಗಲೀಲಾವಿಲಾಸ ಚಾರಿತ್ರದ ಪಠ್ಯಭಾಗದಲ್ಲಿ ವೀರಶೈವ ಪದವಿಲ್ಲ, ಪೀಠಿಕಾಭಾಗ ಮತ್ತು ಅಂತ್ಯ ಕಂದದಲ್ಲಿ ಮಾತ್ರ ಬಳಕೆಯಾಗಿದೆ.

ಈ ಪ್ರದೇಶದಲ್ಲಿ ಬಾಳಿದ ಮಗ್ಗೆಯ ಮಾಯಿದೇವನು ತನ್ನ ಸಂಸ್ಕೃತ ಶಿವಾನುಭವ ಸೂತ್ರದಲ್ಲಿ, ಅದರ ವಸ್ತು ಷಟ್‌ಸ್ಥಲ ವಿವೇಚನೆಯಾಗಿದ್ದರೂ ವೀರಶೈವಪದವನ್ನು ಬಳಸಿಲ್ಲ. ಶೈವ, ಶಿವಾದೈತ, ಶಿವಸಿದ್ಧಾಂತ ಇತ್ಯಾದಿ ಪದಗಳನ್ನು ಮಾತ್ರ ಬಳಸಿದ್ದಾನೆ. ಆದರೆ ತನ್ನ ಸಂಸ್ಕೃತ ವಿಶೇಷಾರ್ಥ ಪ್ರಕಾಶಿಕೆಯಲ್ಲಿ ವೀರಶೈವ ಪದ ಬಳಸಿ, ಅದಕ್ಕೆ (ಬಾಲಿಶ)ವ್ಯಾಖ್ಯಾನ ನೀಡಿದ್ದಾನೆ (೨-೩೧, ೩೨). ಬಹುಶಃ ಕನ್ನಡಿಗನೊಬ್ಬನು ವೀರಶೈವಪದಕ್ಕೆ ಬರೆದ ಪ್ರಥಮವ್ಯಾಖ್ಯಾನವಿದು. ಈತನು ತನ್ನ ಕನ್ನಡ ಶಿವಾಧವಶತಕದಲ್ಲಿ “ಜಯ ಬಸವೇಶ ಭಕ್ತಜನಭಾಗ್ಯ ಶುಭೋದಯ ವೀರಶೈವ ನಿರ್ಣಯ ಪರಮಾವತಾರ” ಎಂದು ಹೇಳಿರುವುದರಿಂದ, ಆ ಹೊತ್ತಿಗೆ ವೀರಶೈವಪದ ಮತ್ತು ಬಸವಾದಿ ಶರಣರ ಹೆಸರುಗಳಲ್ಲಿ ಸಂಬಂಧ ಗಟ್ಟಿಗೊಂಡಿದ್ದಿತೆಂದೇ ಹೇಳಬಹುದು. ಈ ಸಂದರ್ಭದ ಇನ್ನೊಂದು ಕೃತಿ ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿ, ವಾತುಲತಂತ್ರ ಸಮ್ಮತ (೧-೧೫)ವೆನಿಸಿದ ಈ ಕೃತಿಯಲ್ಲಿ ವೀರಶೈವಪದ ಉದ್ದಕ್ಕೂ ಬಳಕೆಯಾಗಿದೆ.

ಇದೆಲ್ಲವನ್ನು ನೋಡಿದರೆ, ವೀರಶೈವಪದ ಕರ್ನಾಟಕದಲ್ಲಿ ವಚನಕಾರರ ತರುವಾಯ, ಏಕೆ ಹರಿಹರ-ರಾಘವಾಂಕ-ಕೆರೆಯ ಪದ್ಮರಸರ ತರುವಾಯ, ಭೀಮಕವಿಯ ಮೂಲಕ ಕಾಣಿಸಿಕೊಂಡಿದೆಯೆಂದು ಮನವರಿಕೆಯಾಗುತ್ತದೆ. ಮುಂದೆ ಇದನ್ನು ಒಂದು ಮೈಲಿಗಲ್ಲಿನಂತೆ ಸ್ಥಾಪಿಸುವ ಮೊದಲ ಪ್ರಯತ್ನ ನಡೆದುದು ೧೫ನೆಯ ಶತಮಾನದ ಮಹಾಲಿಂಗದೇವ, ಮಗ್ಗೆಯ ಮಾಯಿದೇವ, ಕಲ್ಲುಮಠದ ಪ್ರಭುದೇವ, ಲಕ್ಕಣ್ಣದಂಡೇಶರ ಹಂಪೆಯ ಪರಿಸರದಲ್ಲಿ. ಶರಣರ ಸಾಹಿತ್ಯ ಸಿದ್ಧಾಂತಗಳನ್ನು ಶಿವಾಚಾರರು ತಮ್ಮದನ್ನಾಗಿಸಿಕೊಳ್ಳತೊಡಗಿದ್ದ ಕಾಲವಿದು.

ಆಮೇಲೆ ವೀರಶೈವ ಶಬ್ದದ ಬಳಕೆಯ ಪ್ರಯತ್ನ ಅಧಿಕೃತಗೊಂಡುದು, ಆನ್ವಯಿಕಗೊಂಡುದು ಗುಬ್ಬಿಯ ಮಲ್ಲಣ್ಣ, ಗುಬ್ಬಿಯ ಮಲ್ಲಣಾರ್ಯ, ಹಲಗೆದೇವರ ಪ್ರದೇಶದ ಕಲ್ಲೆ, ಗುಬ್ಬಿ, ಗುಮ್ಮಳಾಪುರಗಳನ್ನೊಳಗೊಂಡ ಶಿವಗಂಗೆ ಪರಿಸರದಲ್ಲಿ. ೧೬ನೆಯ ಶತಮಾನದ ಈ ಪರಿಸರದಲ್ಲಿ ಹುಟ್ಟಿದ ಲಿಂಗಾಯತ ಸಾಹಿತ್ಯದಲ್ಲಿ ವೀರಶೈವ ಶಬ್ದ ಇನ್ನೂ ವಿಪುಲವಾಗಿ ಬಳಕೆಯಾಗಿದೆ. ಈ ಶಬ್ದವನ್ನು ಶೀರ್ಷಿಕೆಯಲ್ಲಿ ಬಳಸಿದ ಪ್ರಥಮ ಕೃತಿಯಾದ 'ವೀರಶೈವಾಮೃತ ಮಹಾಪುರಾಣ' (೧೫೩೦) ಹುಟ್ಟಿದ್ದು, ಈ ಶತಮಾನದಲ್ಲಿ.

ರಾಜಧಾನಿಗಳಾದ ಹಳೆಬೀಡು, ಹಂಪೆಗಳ ತರುವಾಯ ವೀರಶೈವ ಚಟುವಟಿಕೆ ಕೇಂದ್ರೀಕರಣಗೊಂಡುದು ರಾಜಧಾನಿ ಕೆಳದಿಯಲ್ಲಿ. ಇಲ್ಲಿ ವಚನ ಸಾಹಿತ್ಯವೂ ಹುಟ್ಟಲಿಲ್ಲ, ವಚನಗಳ ಸಂಕಲನ ಕಾವ್ಯವೂ ನಡೆಯಲಿಲ್ಲ. ಒಂದು ರೀತಿ ಲಿಂಗಾಯತ ಸಂಸ್ಕೃತಿಯ ಉಪೇಕ್ಷೆಯೆಂಬಂತೆ ವೀರಶೈವ ಸಂಸ್ಕೃತಿ ಸೃಷ್ಟಿ ಅಭಿವೃದ್ಧಿಗಳು ಇಲ್ಲಿ ವಿಜೃಂಭಿಸಿದವು. ವೀರಶೈವಕ್ಕೆ ಸಂಬಂಧಿಸಿದ ಸಂಸ್ಕೃತ ಕೃತಿಗಳು, ಸಂಸ್ಕೃತಕೃತಿಗಳಿಗೆ ಟೀಕೆಗಳು ಇಲ್ಲಿ ಹುಟ್ಟಿದವು. ಈ ಸಾಹಿತ್ಯದಲ್ಲಿ ಉದ್ದೇಶಪೂರ್ವಕ ಪ್ರಯತ್ನವೆಂಬಂತೆ, ವೀರಶೈವ ಪದ ಒಮ್ಮಲೇ ಹಬ್ಬತೊಡಗಿತು. ಇದರ ಫಲವಾಗಿ ವೀರಶೈವಾಚಾರ ಕೌಸ್ತುಭ (ಮೌನಪ್ಪ ಪಂಡಿತ ೧೭೦೦), ವೀರಶೈವಪ್ರಕಾಶಿಕಾ, ವೀರಶೈವ ಸಂಜೀವಿನೀ (ಬಸವಭೂಪ), ವೀರಶೈವಾಭ್ಯುದಯ, ವೀರಶೈವ ಮತೋದ್ದಾರಚಂದ್ರಿಕಾ, ವೀರಶೈವಧರ್ಮ ಶಿರೋಮಣಿ (ಷಡಕ್ಷರಮಂತ್ರಿ ೧೭೪೦), ವೀರಶೈವಾನಂದ ಚಂದ್ರಿಕಾ (ಮರಿತೋಂಟದಾರ್ಯ ೧೭೫೦), ಇತ್ಯಾದಿ ಕೃತಿಗಳು ಕೆಳದಿಯಲ್ಲಿ ಒಂದರಮೇಲೊಂದು ಹುಟ್ಟಿದವು. ಬಳಿಕ ವೀರಶೈವ ಬೋಧಾಮೃತ, ವೀರಶೈವ ಲಿಂಗಾರ್ಚನಾ ವಿಧಾನ, ವೀರಶೈವಶಿಖಾರತ್ನ, ವೀರಶೈವಸಂಗ್ರಹ, ವೀರಶೈವಸಿದ್ಧಾಂತ, ಉದ್ದರಣೆಯ ಪಟಲಗಳು, ವೀರಶೈವಸಿದ್ದಾಂತ ಜ್ಞಾನ, ವೀರಶೈವಾಗಮ ಇತ್ಯಾದಿಗಳು ಬೆಳೆದು ಬಂದವು. ಇವೆಲ್ಲವೂ ಹನ್ನೆರಡನೆಯ ಶತಮಾನದಿಂದ ತೀರ ಈಚಿನವು. ಬಹಳಷ್ಟು ಕೆಳದಿ ರಾಜ್ಯದ ಕಾಲದವುಗಳೆಂಬುದು ಗಮನಿಸಬೇಕಾದ ಸಂಗತಿಯಾಗಿದೆ. ತೆಲುಗಿನಲ್ಲಿಯೂ ಈ ಶಬ್ದವುಳ್ಳ ಶೀರ್ಷಿಕೆಗಳು ಸಿಗುವುದೂ ೧೨ನೆಯ ಶತಮಾನದಿಂದ ಈಚೆಗೆ.

ವೀರಶೈವಪದ ಆಗಮಗಳಲ್ಲಿ ಬಳಕೆಯಾಗಿದೆಯೆಂದು ಕೆಲವರು ವಾದಿಸಬಹುದು. ಹಾಗಿದ್ದರೆ ಅಲ್ಲಿಂದ ೧೩ನೆಯ ಶತಮಾನದ ವರೆಗಿನ ಸಂಸ್ಕೃತ, ಕನ್ನಡ, ತೆಲುಗು ಕೃತಿಗಳಲ್ಲಿ ಮತ್ತು ೧೫ನೆಯ ಶತಮಾನದ ವರೆಗಿನ ಕೃತಿಶೀರ್ಷಿಕೆಯಲ್ಲಿ ಈ ಶಬ್ದವೇಕೆ ಕಾಣಿಸಿಕೊಳ್ಳುವುದಿಲ್ಲ? ಎಂಬ ಪ್ರಶ್ನೆ ಇಲ್ಲಿ ಉದ್ಭವವಾಗುತ್ತದೆ. ಕನ್ನಡ ಬಸವಪುರಾಣದಲ್ಲಿ ಮೊದಲು ತಲೆದೋರಿದ ಈ ಶಬ್ದವನ್ನು ಆಮೇಲೆ ಆಗಮಗಳಲ್ಲಿ ಸೇರಿಸಿದರೆಂದು ಹೇಳುವುದೇ ಇದಕ್ಕೆ ಅನಿವಾರ‍್ಯ ಉತ್ತರವಾಗಿದೆ. ಕೆಲವು ಆಗಮಗಳು ಏಕಕಾಲಕ್ಕೆ ಹುಟ್ಟಿದವುಗಳಲ್ಲ, ಕಾಲಕಾಲಕ್ಕೆ ಕಟ್ಟುತ್ತ ಬಂದವುಗಳೆಂಬುದು ತಿಳಿದ ವಿಷಯವೇ ಆಗಿದೆ.
ಇನ್ನೊಂದು ವಿಷಯ: ವೀರಮಾಹೇಶ್ವರ, ವೀರಶೈವ ಶಬ್ದಗಳಿಗೆ ಸಿದ್ದಾಂತ ಶಿಖಾಮಣಿ (೧-೧೬ ರಿಂದ ೨೧)ಯು ಕರ್ಮಮಾರ್ಗಿ, ಜ್ಞಾನಮಾರ್ಗಿ ಎಂದು ಅರ್ಥವ್ಯತ್ಯಾಸ ಕಲ್ಪಿಸಿದ್ದರೂ, ಮೂಲತಃ ಇವು ಒಂದೇ ಅರ್ಥದ ಪದಗಳಾಗಿವೆ. ಅಂದರೆ ಮಹೇಶ್ವರ ಮಾಹೇಶ್ವರ>ವೀರಮಾಹೇಶ್ವರ, ಶೈವ-ವೀರಶೈವ-ಇವು ಒಂದೇ ಅರ್ಥವನ್ನು ಧ್ವನಿಸುತ್ತವೆ. ಚರಿತ್ರೆಯ ದೃಷ್ಟಿಯಿಂದ ನೋಡಿದರೆ 'ವೀರಮಾಹೇಶ್ವರಾಚಾರ ಸಂಗ್ರಹ' ಇತ್ಯಾದಿ ಹೆಸರಿನ ಕೃತಿಗಳು ೧೩ನೆಯ ಶತಮಾನದ ಸುಮಾರಿಗೆ ಸೃಷ್ಟಿಯಾದರೆ, 'ವೀರಶೈವಾನಂದ ಚಂದ್ರಿಕಾ' ಇತ್ಯಾದಿ ಹೆಸರಿನವು ಆಮೇಲೆ ಅಂದರೆ ೧೫ನೆಯ ಶತಮಾನದ ಬಳಿಕ ಹುಟ್ಟತೊಡಗಿವೆ. ಇದರಿಂದಲೂ ವೀರಮಾಹೇಶ್ವರ ಶಬ್ದಕ್ಕಿಂತ ವೀರಶೈವ ಶಬ್ದ ತರುವಾಯದ್ದೆನಿಸುತ್ತದೆ. [೪]

ಮೇಲೆ ಚರ್ಚಿಸಿದ ಸಾಹಿತ್ಯ-ಶಾಸ್ತ್ರಕೃತಿಗಳಿಗಿಂತ ಬಹುಮುಖ್ಯ ಆಕರಗಳೆಂದರೆ ಶಾಸನಗಳು, ಇಂದು ಎರಡು ಸ್ವತಂತ್ರ ರಾಜ್ಯಗಳಾಗಿರುವ ಕರ್ನಾಟಕ ಮತ್ತು ಆಂಧ್ರಪ್ರದೇಶಗಳು ವಿಜಯನಗರ ಪತನದ ವರೆಗೂ ಹೆಚ್ಚು ಕಡಿಮೆ ರಾಜಕೀಯವಾಗಿ, ಧಾರ್ಮಿಕವಾಗಿ ಒಂದೇ ಆಗಿದ್ದವು. ಇಂದಿನ ಆಂಧ್ರಪ್ರದೇಶದ ಭಾಗವಾಗಿರುವ ಶ್ರೀಶೈಲವು ಎರಡೂ ರಾಜ್ಯಗಳಿಗೂ ಶಿವಧರ್ಮದ ಗಂಗೋತ್ರಿಯಾಗಿದ್ದಿತು. ಹೀಗಾಗಿ ವೀರಶೈವಪದದ ಇತಿಹಾಸವನ್ನು ಶೋಧಿಸುವಲ್ಲಿ ಈ ಎರಡೂ ರಾಜ್ಯಗಳ ಶಾಸನಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

ಶರಣರ ತರುವಾಯ ೧೦೦ ವರ್ಷದ ಬಳಿಕ ಹುಟ್ಟಿದ ಆಂಧ್ರಪ್ರದೇಶದ ಮಲ್ಕಾಪುರಂ ಶಾಸನ (೧೨೬೦)ದಲ್ಲಿ[೫] ಗೋಳಕಿಮಠದ ಆಚಾರ್ಯನನ್ನು ವೀರಶೈವಾಚಾರ್ಯನೆಂದು ಕರೆಯಲಾಗಿದ್ದು, ಇದು ವೀರಶೈವ ಪದವನ್ನೊಳಗೊಂಡ ಪ್ರಥಮಶಾಸನವೆಂದು ಡಾ. ನಂದೀಮಠ ಅವರು ಹೇಳುತ್ತಾರೆ. ಆಶ್ಚರ್ಯದ ಸಂಗತಿಯೆಂದರೆ, ಈ ಶಾಸನದಲ್ಲಿ “ಏವಮಾಜ್ಞಾಪಯದ್ಧೀವೀರಶೈವಾಚಾರ್ಯ ಶತೈರ್ವತಃ” ವಾಕ್ಯವಿರುವುದರಿಂದ, ಇಲ್ಲಿ “ವೀರಶೈವಾಚಾರ್ಯ" ಶಬ್ದಕ್ಕೆ ಬದಲು “ಧೀರಶೈವಾಚಾರ್ಯ” ಶಬ್ದವಿದೆಯೆಂದು ಆಂಧ್ರದ ವೀರಶೈವವನ್ನು ಕುರಿತು ಪಿಎಚ್.ಡಿ. ಅಭ್ಯಾಸಮಾಡಿರುವ ಡಾ.ಕೆ. ಲಲಿತಾಂಬಾ ಹೇಳುತ್ತಾರೆ. ಶಾಸನದ ಫೋಟೋ ನೋಡಿದ ನನಗೂ ಲಲಿತಾಂಬಾ ಹೇಳಿದುದು ಸರಿಯೆನಿಸುತ್ತದೆ. ಇದರಿಂದ ಶಾಸನಗಳಲ್ಲಿ ವೀರಶೈವ ಪದ ಮೊದಲು ಕಂಡುಬರುವುದು ಕ್ರಿ.ಶ.೧೨೬೦ರಲ್ಲಿ ಎಂಬ ನಂದೀಮಠರ ವಾದವನ್ನು ಇನ್ನು ಮೇಲೆ ಕೈಬಿಡಬೇಕಾಗುತ್ತದೆ.

ಇದನ್ನು ಬಿಟ್ಟರೆ ಬೆಂಗಳೂರು ಜಿಲ್ಲೆಯ ಬೇಗೂರು ಶಾಸನ (೧೩೦೧ ಅಥವಾ ೧೪೦೨)ದಲ್ಲಿ “ವೀರಶೈವ ಶ್ರೀ ವೀರಪ್ರತಾಪ ಚೋಳರಾಯ” ಎಂಬ ಉಲ್ಲೇಖವಿದೆ.[೬]

ಶಿವಮೊಗ್ಗ ಜಿಲ್ಲೆಯ ತೆಂಗಿನಾಪುರದ ಶಾಸನ (ಎಂ.ಎ.ಆರ್. ೧೯೨೩. ಪು ೯೧, ಕ್ರಿಶ. ೧೪೧೮)ದಲ್ಲಿ XXX ಶೈವಾಗಮ ಸಾರಸಂಪನ್ನರು” ಎಂಬ ತ್ರುಟಿತ ವಾಕ್ಯವಿದ್ದು[೭]. ಇಲ್ಲಿ ವೀರಶೈವಾಗಮ ಎಂದೇ ಇರಬಹುದಾಗಿದೆ. ಇವೆರಡೂ ಬಸವಕಲ್ಯಾಣದಿಂದ ದೂರದ ದಕ್ಷಿಣ ಕರ್ನಾಟಕದ, ಅಂದರೆ ಆಂಧ್ರದ ಆರಾಧ್ಯಶೈವರಿಂದ ತುಂಬಿದ ಪ್ರದೇಶದ ಉಲ್ಲೇಖಗಳೆಂಬುದನ್ನು ಗಮನಿಸಬಹುದು. ಹಾಗೆ ನೋಡಿದರೆ ಈ ಶಾಸನಗಳ ಪ್ರಾಮಾಣಿಕತೆಯೇ ಪ್ರಶ್ನಾರ್ಹವಾಗಿದೆ. ಇಲ್ಲಿಂದ ಮುಂದೆ ಕರ್ನಾಟಕದಲ್ಲಿ ಬೆರಳೆಣಿಕೆ ಸಂಖ್ಯೆಯಷ್ಟು ಶಾಸನಗಳಲ್ಲಿ ಮಾತ್ರ ಅಲ್ಲೊಮ್ಮೆ ಇಲ್ಲೊಮ್ಮೆ ಈ ಪದ ಸಿಗುತ್ತದೆ.
ಒಂದು ಮುಖ್ಯ ಸಂಗತಿಯೆಂದರೆ, ಈ ಪದವು ೧೫ನೆಯ ಶತಮಾನದ ಮುಂದಿನ ತೆಲಗು ಶಾಸನಗಳಲ್ಲಿ “ಭಿಕ್ಷಾವೃತ್ತಿ” ಸಂಪ್ರದಾಯದವರ ಹೆಸರಿನೊಂದಿಗೆ ಬಳಕೆಯಾಗಿದೆ. ಅಲ್ಲೆಲ್ಲ “ಸ್ವಸ್ತಿ ಶ್ರೀ ಪರ್ವತ ಶ್ರೀ ಸ್ವಯಂಭು ಶ್ರೀ ಲಿಂಗಚಕ್ರವರ್ತಿ ಶ್ರೀಮನ್‌ ಮಲ್ಲಿಕಾರ್ಜುನ ಶ್ರೀಮನ್ಮಹಾಲಿಂಗದೇವ ದಿವ್ಯಶ್ರೀಪಾದ ಪದ್ಮಾರಾಧಕುಲೈನ ಕೈಲಾಸಂಮೀಂದಿ ದೇವಾ ಪೃಥ್ವಿ ಮಹಾಮಹಂತು ಮುಖ್ಯಮೈನ” ಎಂಬ ಪ್ರಶಸ್ತಿಗೆ ಹೊಂದಿಕೊಂಡು ಈ ಕೆಳಗಿನ ವಾಕ್ಯಗಳು ಕಾಣಿಸಿಕೊಂಡಿವೆ.

೧. 'ಶ್ರೀ ಅಜಾತಿ ವೀರಶಯ [ಶ್ರೀ] ಭಿಕ್ಷಾವೃತ್ತಿ ಅಯ್ಯವಾರು' ಕಡಪಾ ಜಿಲ್ಲೆ, ಜಮ್ಮಲಮಡಗು ತಾಲೂಕು, ಸಾಲೇವಾರಿ ಉಪ್ಪಲಪಾಡು ೧೪೪೨.
೨. 'ಶ್ರೀ ಅಜಾತಿ ವೀರಶೈವ ವೀರಭಿಕ್ಷಾವರತ್ತಿ ಅಯ್ಯವಾರು' ಕಡಪಾ ಜಿಲ್ಲೆ, ಜಮ್ಮಲಮಡಗು ತಲೂಕು, ಸಾಲೇವಾರಿ ಉಪ್ಪಲಪಾಡು ೧೪೪೩
೩. 'ಅಜಾತಿ ವೀರಶೈವ ಮೂಂಡುರಾಯಲ ಪೂಜಲಿಂಗ ಸಿಧಭಿಕ್ಷಾವೃತ್ತಿಅಯ್ಯವಾರಿ' ಕಡಪಾ ಜಿಲ್ಲೆ, ಜಮ್ಮಲಮಡಗು ತಾಲೂಕು, ವಲ್ಲೂರು ೧೪೫೩
೪. 'ಶ್ರೀ ವೀರಶಿವಾಗ್ರ ಭಿಕ್ಷಾವೃತ್ತಿ ಅಯ್ಯವಾರಿ' ಕಡಪಾ ಜಿಲ್ಲೆ, ರಾಯಚೂಡಿ ತಾಲೂಕು, ತಿಮ್ಮರೆಡ್ಡಿಪಲ್ಲೆ ೧೫೧೨
೫. 'ಅಜಾತಿ ವೀರಶೈವ ಭಿಕ್ಷಾವೃತ್ತಿ ಅಯ್ಯವಾರಿ' ಕಡಪಾ ಜಿಲ್ಲೆ ಪ್ರೊದ್ಧಟೂರು ತಾಲೂಕು. ರಾಮೇಶ್ವರಂ ೧೫೫೧.

ಇವೆಲ್ಲ ಆಂಧ್ರಪ್ರದೇಶದ ೧೪ ಮತ್ತು ೧೫ನೆಯ ಶತಮಾನಗಳ ಶಾಸನಗಳೆಂಬುದನ್ನು ಇಲ್ಲಿ ಗಮನಿಸಬೇಕು. ಆಂಧ್ರಪ್ರದೇಶದ ಪ್ರಸಿದ್ದ ಕಾಳಾಮುಖ ಕೇಂದ್ರವಾಗಿದ್ದ ಅಲಂಪುರದ ಈ ಕೆಳಗಿನ ಶಾಸನವೂ (ಆಂಧ್ರಪ್ರದೇಶದ ಕನ್ನಡ ಶಾಸನಗಳು ೧೧-೧೯೨. ೧೫೯೩)ಇಲ್ಲಿ ಮುಖ್ಯವೆನಿಸುತ್ತದೆ.

“ಶುಭಮಸ್‌ತು ಶ್ರೀಗಿರಿ ಮಲ್ಲಿಕಾರ್ಜುನಪತಯೋನ್ನಮಾ॥ ಪಂಡಿತಾರಾಧ್ಯರೆಂಬ ಗುರು ಷಡಾಕ್ಷರಿಯೆಂಬ ಮಂತ್ರ..... ಶ್ರೀಮತ್ತರಮ ವೀರಶೈವ ಸಿದ್ಧಾಂತ ಸಂನ್ಮಾರ್ಗ ಸಂಪನ್ನ, ಸದ್ವೀರಮಾಹೇಶ್ವರನ ಹೃತ್ಕಮಲಕಂರ್ಣಿಕಾನಿವಾಸ ಚಿಂನ್ಮೂರ್ತಿ ಪ್ರಾಣಲಿಂಗ್ ಸಮಾರ್ಚನಾಮ ಸಂತ್ತುಪ್ಪ, ರುಗೈದ ಶಾಸ್ತ್ರಾಗಮ ಪುರಾನ ಯಿತಿಹಾಸಾದಿ ನಾನಾ ಶಾಸ್ತ್ರಕೋವಿದರುಂ, ಜೈನ ಚಾರ್ವಾಕ ಮಾಯವಾದ ಮೊದಲಾದ ಪರವಾದಿ ಕೋಲಾಹಲರುಂ, ಗುರು ಲಿಂಗ್ಲ ಜಂಗ್ಗಮ ಪಾದೋದಕ ಪ್ರಸಾದಾನುಭಾವಿಗಳಪ್ಪ ಶ್ರೀ ನಂದಿನಾಥ ಶ್ರೀ ಭಂಗಿನಾಥ ಶ್ರೀ ವೀರಭದ್ರದೇವರು ಮುಖ್ಯವಾದ ಅಸಂಖ್ಯಾತ ಗಣಂಗಳು ಸಭಾಮಧ್ಯದಲ್ಲಿ ಮಣಿಗಣ ಖಚಿತ ಶಿಂಹ್ವಾಸನರೂಡರಾದ ಪೃಥಿವೀಗೆ ಭೂಕಯಿಲಾಸವೆನಿಸುವ ಶ್ರೀ ಗಿರಿಶಿಂಹ್ವಾಸನದ ಮಹಾಮಹಾತ್ಮರಾದ ಪಂಚ್ಚಮಠ ಪಂಚಗೃಹಾಂಗಳಿಗೆ ಮುಖ್ಯವಾದ, ಬಸವಣ್ಣನ ಗೃಹನ ಶಿಂಹಾಸನದ ಮಹಾಮಹತ್ತಿನ ಪಟ್ಟದ ಪ್ರಮಥೇಶ್ವರದೇವರ ಅಯ್ಯವಾರಿ ಶಿಷ್ಯುಂಮಡಯಿನ ಕುಪ್ಪಸಕಂತ್ತೆ ಶಿವಲಿಂಗ್ಗದೇವರ ಅಯ್ಯವಾರಿಕಿ ನಗರೇಶ್ವರದೇವುನಿ ಮಠಾನಕು ಸಮರ್ಪಿಂಚಿನ ವರ ಪ್ರಸಂನ್ನು ಲೈನ...”

ಇದರ ಕಾಲ ೧೫೯೩. ವೀರಶೈವ ಶಬ್ದವು, ಶರಣಧರ್ಮದ ಗುರು-ಲಿಂಗ- ಜಂಗಮ ಪರಿಭಾಷೆಗಳೊಂದಿಗೆ ಆಂಧ್ರಪ್ರದೇಶದಲ್ಲಿ ಈ ಹೊತ್ತಿಗೆ ದೃಢವಾಗಿ ನೆಲೆಯೂರಿದುದನ್ನು ಈ ಶಾಸನ ಸ್ಪಷ್ಟಪಡಿಸುತ್ತದೆ. ಹೀಗೆ ಶಾಸನಗಳಲ್ಲಿಯೂ ವೀರಶೈವಪದ ೧೨ನೆಯ ಶತಮಾನದ ತರುವಾಯ ಕಾಣಿಸಿಕೊಳ್ಳಲಾರಂಭಿಸಿ, ಆಗೊಮ್ಮೆ ಈಗೊಮ್ಮೆ ಬಳಕೆಯಾಗುತ್ತ ಬಂದಿವೆ.

ಇತ್ತೀಚೆಗೆ ಡಾ. ಚಿದಾನಂದಮೂರ್ತಿ ಅವರು ಲಿಂಗಾಯತವೆಂಬುದು ದೀಕ್ಷೆಯ ಹೆಸರು (ಲಿಂಗ ಆಯತ, ಲಿಂಗ ಸ್ವಾಯತ, ಲಿಂಗ ಸನ್ನಿಹಿತ), ವೀರಶೈವವೆಂಬುದು ಧರ್ಮದ ಹೆಸರು ಎಂದು ಹೇಳಿದ್ದಾರೆ ಇದರ ಚರ್ಚೆ ಇಲ್ಲಿ ಪ್ರಸ್ತುತ:

ಇಂದಿನ ಕರ್ನಾಟಕದಲ್ಲಿ ಎರಡು ಬಗೆಯ ಧರ್ಮಿಯರು ಕಂಡುಬರುತ್ತಾರೆ. ಒಂದು, ಜನನದ ಮೂಲಕ ಒಬ್ಬ ವ್ಯಕ್ತಿ ಒಂದು ಧರ್ಮಿಯನೆನಿಸುವುದು, ಉದಾ: ಬ್ರಾಹ್ಮಣನ ಮಗ ಬ್ರಾಹ್ಮಣ ಧರ್ಮಿಯವ. ಇನ್ನೊಂದು, ದೀಕ್ಷೆ ಹೊಂದುವ ಮೂಲಕ ಒಬ್ಬ ವ್ಯಕ್ತಿ ಒಂದು ಧರ್ಮಿಯನೆನಿಸುವುದು. ಉದಾ: ಒಬ್ಬ ವ್ಯಕ್ತಿ ಯಾವುದೇ ಜಾತಿಯಲ್ಲಿ ಹುಟ್ಟಿದ್ದರೂ ಕ್ರೈಸ್ತ ದೀಕ್ಷೆ ಹೊಂದುವ ಮೂಲಕ ಕ್ರಿಶ್ಚಿಯನ್ ಧರ್ಮಿಯವನೆನಿಸುವುದು. ಇವುಗಳಲ್ಲಿ ಲಿಂಗಾಯತ ಧರ್ಮವು ೨ನೆಯ ಪ್ರಕಾರಕ್ಕೆ ಸೇರಿದುದಾಗಿದೆ. ಹೀಗಾಗಿ ಚಿದಾನಂದಮೂರ್ತಿ ಹೇಳುವಂತೆ ಇಲ್ಲಿ ಲಿಂಗಾಯತವೆನ್ನುವುದು ದೀಕ್ಷೆಯಾಗಿದ್ದರೂ, ಈ ದೀಕ್ಷೆ ಪಡೆಯುವುದರಿಂದಾಗಿಯೇ ಒಬ್ಬ ವ್ಯಕ್ತಿ ಲಿಂಗಾಯತ ಧರ್ಮಿಯನಾಗುತ್ತಾನೆ. ಆದುದರಿಂದ ಲಿಂಗಾಯತನೆನ್ನುವುದು ಚಿದಾನಂದಮೂರ್ತಿಯವರು ಹೇಳುವಂತೆ ಕೇವಲ ದೀಕ್ಷೆಯಲ್ಲ, ದೀಕ್ಷಿತನ ಧರ್ಮವೂ ಆಗಿದೆ. ಆದರೆ 'ವೀರಶೈವ' ವೆನ್ನುವುದು ಹೀಗೆ ಒಂದು ದೀಕ್ಷೆಯ ಹೆಸರೂ ಅಲ್ಲ, ಧರ್ಮದ ಹೆಸರೂ ಅಲ್ಲ. ಬಹುಶಃ ಒಂದು ವ್ರತ. ಅಮುಗೆ ರಾಯಮ್ಮ “.... ನಿತ್ಯ ಶಿವಾರ್ಚನೆ ತ್ರಿಕಾಲವಿಲ್ಲ, ನಿತ್ಯ ಪಾದೋದಕ ಪ್ರಸಾದ ಸೇವನೆಯಿಲ್ಲ. ಇದೇತರ ವೀರಶೈವ ವ್ರತ?....” (೧೦೭)ಎಂದು ಮುಂತಾಗಿ ಹೇಳುತ್ತ, ವೀರಶೈವವನ್ನು ಒಂದು ವ್ರತವೆಂದೇ ನೇರವಾಗಿ ಸೂಚಿಸಿ, ಅದರ ಕೆಲವು ಆಚರಣೆಗಳನ್ನು ಸೂಚಿಸಿದ್ದಾಳೆ. ನಿಜಗುಣ ಶಿವಯೋಗಿಗಳ ವಿವೇಕ ಚಿಂತಾಮಣಿಯ ವೀರಶೈವ ಪ್ರಕರಣದಲ್ಲಿ ವೀರಶೈವನು ಚರಮಶರೀರಿ, ಸರ್ವೋತ್ತಮ ವ್ರತಿ, ಅಪ್ರತಿಹತ ಶಿವವ್ರತಿ ಎಂದು ಹೇಳಿದ್ದು, ಇಲ್ಲಿಯ 'ವ್ರತಿ' ಶಬ್ದವನ್ನು ಗಮನಿಸಬೇಕು. ಈ ವೀರಶೈವವ್ರತಿಗಳಿಗೆ ವೀರಮಾಹೇಶ್ವರವ್ರತಿಯೆಂದೂ ಕರೆಯುತ್ತಿದ್ದರು. ೧೩ನೆಯ ಶತಮಾನದ ನಾಗನಾಥಾಚಾರನ ವೀರಮಾಹೇಶ್ವರಾಚಾರ ಸಂಗ್ರಹದಲ್ಲಿ ವೀರಮಾಹೇಶ್ವರವ್ರತಿಯ ಲಕ್ಷಣವನ್ನು ಹೀಗೆ ಹೇಳಲಾಗಿದೆ:

ಶಿವ ನಿಂದಾಪರಂ ವಾಕ್ಯಂ ಶ್ರುತ್ವಾ ತದ್ವಕ್ಕ ಶಿಕ್ಷಣಮ್
ಕುರ್ಯಾದನ್ಯತ್ರ ವಾಗಚ್ಛೇದಶಕೋಪಿ ಹಿತಾ ಶ್ರುತಿಃ ||೭೬||

ಶಿವಾಲಯ ಶಿವಾರಾಮ ಶಿವಗ್ರಾಮಾಭಿರಕ್ಷಣೇ
ತಾತ್ಪರ್ಯಮನಿಶಂ ಕುರ್ಯಾದನಸ್ತದಪಹಾರಿಣಃ ||೭೭||

ಶಿವದ್ರವ್ಯಾಪಹಾರಾಯ ಪ್ರವೃತ್ತಂ ಮನುಜಾಧಮಮ್
ಜ್ಞಾತ್ವಾ ತಾರಣಂ ಕುರ್ಯಾತ್ ಸ ಯಾತಿ ಪರಮಾಂ ಗತಿಮ್ ॥೭೮॥

ಶಿವಚಿಹ್ನಾಂಕಿತಂ ವತ್ಸಂ ಹಂತಿಯೋ ದುರ್ಜನೋ ಜನಃ
ತಂ ಹನ್ಯಾತ್ ಸ್ಪೇನ ಹಸ್ತೇನ ವೀರಮಾಹೇಶ್ವರ ವ್ರತೀ ||೭೯||

(ಶಿವನಿಂದೆ ಮಾಡಿದವನ ಬಾಯಿಗೆ ಶಿಕ್ಷೆ ಮಾಡಬೇಕು. ಇದು ಸಾಧ್ಯವಾಗದಿದ್ದರೆ ಬೇರೊಂದು ಸ್ಥಳಕ್ಕೆ ಹೋಗಬೇಕು. ಶಿವಾಲಯ, ಶಿವೋದ್ಯಾನ, ಶಿವಗ್ರಾಮಗಳ ರಕ್ಷಣೆಯಲ್ಲಿ ತೊಡಗಬೇಕು. ಶಿವಸ್ಥಾನದ ಒಡವೆಗಳನ್ನು ಅಪಹರಿಸುವ ನರಾಧಮನನ್ನು ಸಂಹರಿಸಬೇಕು. ಹೀಗೆ ಮಾಡಿದವನಿಗೆ ಉತ್ತಷ್ಟವಾದ ಶಿವಲೋಕ ಪ್ರಾಪ್ತಿಯಾಗುತ್ತದೆ. ಶಿವಲಿಂಗ ಮುದ್ರೆಯ ಹೋರಿಯನ್ನು ಕೊಲ್ಲುವ ದುರಾತ್ಮನನ್ನು 'ವೀರಮಾಹೇಶ್ವರ ವ್ರತೀ'ಯು ಕೊಲ್ಲಬೇಕು).

ಇಲ್ಲಿಯ 'ವೀರಮಾಹೇಶ್ವರವ್ರತೀ' ಶಬ್ದವನ್ನು ಅದರಲ್ಲಿಯೂ ಅಂತ್ಯದ 'ವ್ರತೀ' ಅವಶ್ಯ ಗಮನಿಸಬೇಕು. ಈ ವ್ರತಿಗಳ ಮುಖ್ಯಲಕ್ಷಣ ಉಗ್ರ ಆಚರಣೆಯ ಮೂಲಕ ವೀರಭದ್ರನನ್ನು ಆರಾಧಿಸುವುದಾಗಿದ್ದಿತು. ಅಂದರೆ ಶೈವರಲ್ಲಿ ಕೆಲವರು ವೀರಭದ್ರ ದೈವತವನ್ನು ಸ್ಥಾಪಿಸಿ, ಅವನ ಸನ್ನಿಧಿಯಲ್ಲಿ ಈ ವ್ರತವನ್ನು ಆಚರಿಸುತ್ತಿದ್ದರೆಂದು ತೋರುತ್ತದೆ. ಇವರಿಗೆ 'ವೀರವತಿ' ಎಂದೂ 'ವೀರಮಾಹೇಶ್ವರ'ನೆಂದೂ, 'ವೀರಶೈವ ವೆಂದೂ ಹೆಸರು. ಚೌಡದಾನಪುರದ ಶಿವದೇವ, ಕಾರಡಗಿಯ ಲಕ್ಷ್ಮಿದೇವರನ್ನು ಅಲ್ಲಿಯ ಶಾಸನಗಳು (೧೩ನೆಯ ಶತಮಾನ)ವೀರವ್ರತಿಯೆಂದು ಕರೆದಿವೆ.[೮] ಈ ಗ್ರಾಮಗಳಲ್ಲಿ ವೀರಭದ್ರದೇವಾಲಯವಿರುವುದು ತಿಳಿದ ವಿಷಯವೇ ಆಗಿದೆ. ಕರ್ನಾಟಕದಲ್ಲಿ ವೀರಭದ್ರನ ದೇವಾಲಯಗಳು ೧೩ನೆಯ ಶತಮಾನದಿಂದ ಈಚಿನವು ಎಂಬುದನ್ನು ನೆನೆದರೆ 'ವೀರಶೈವ' ವೆಂಬುದು ವ್ರತವಾಗಿಯೂ ಇಲ್ಲಿ ಬಸವೋತ್ತರಕಾಲೀನ ಹೆಸರೆಂದು ಸ್ಪಷ್ಟವಾಗುತ್ತದೆ. ಮುಂದೆ ವ್ರತದ ಈ ಹೆಸರನ್ನು ಧರ್ಮಕ್ಕೂ ಬಳಸಿದ ಕಾರಣ, ಮೂಲತಃ ಒಂದೇ ಅರ್ಥವನ್ನೊಳಗೊಂಡಿದ್ದ ವೀರಮಾಹೇಶ್ವರ ಶಬ್ದಕ್ಕೆ ಒಂದು ಅರ್ಥ, ಈ ವೀರಶೈವ ಶಬ್ದಕ್ಕೆ ಇನ್ನೊಂದು ಅರ್ಥ ಹೇಳುವುದು ಸಿದ್ದಾಂತಶಿಖಾಮಣಿ (೧-೧೬ರಿಂದ ೨೧)ಗೆ ಅನಿವಾರ‍್ಯವಾಯಿತೆನಿಸುತ್ತದೆ.

ಬಹುಶಃ ಈ ವೀರವ್ರತಿಗಳು ಧರ್ಮರಕ್ಷಣೆಯ ಸೈನಿಕರಂತೆ ವರ್ತಿಸುತ್ತಿರಬಹುದು. ಆಗಮಿಕ ಶೈವಬ್ರಾಹ್ಮಣ ಬಡಾವಣೆಯಾಗಿದ್ದ 'ಪುರ'ದಲ್ಲಿ[೯] ವಾಸಿಸುತ್ತಿದ್ದ ಇವರನ್ನು ಪುರವಂತರೆಂದೂ ಕರೆಯುತ್ತಿದ್ದರು. ಬಸವಣ್ಣನ ತಂದೆ ಮಾದಿರಾಜನು ಇಂಥ 'ಪುರವರಾಧೀಶ'ನಾಗಿದ್ದನೆಂದು ಅರ್ಜುನವಾಡ ಶಾಸನ ತಿಳಿಸುತ್ತದೆ. ಇಂದಿಗೂ ಅಣ್ಣಿಗೇರಿಯಲ್ಲಿ “ಪುರದ ವೀರಭದ್ರ” ಹೆಸರಿನಿಂದಲೇ ಸ್ಥಳೀಯ ವೀರಭದ್ರದೈವವನ್ನು ಕರೆಯುತ್ತಿರುವುದನ್ನು ಇಲ್ಲಿ ನೆನೆಯಬಹುದು. ಕರ್ನಾಟಕದಲ್ಲಿ 'ಪುರ' ಹೆಸರಿನ ಗ್ರಾಮಗಳೂ, 'ಪುರದಮಠ' ಹೆಸರಿನ ಮಠಗಳೂ, 'ಪುರವರೇಶ್ವರ'ರೆಂದು ಪ್ರಾಚೀನರನ್ನು ಕರೆದ ಉಲ್ಲೇಖಗಳೂ (ಪುಲಿಗೆರೆಯ ಪುರವರಾಧೀಶ್ವರ ಮಹಾಲಿಂಗದೇವ)ಸಿಗುತ್ತಿದ್ದು, ಇವುಗಳ ಅಭ್ಯಾಸ ಆಗಮಿಕ ಶೈವಬ್ರಾಹ್ಮಣರ ಬಗ್ಗೆ, ಅದರಲ್ಲಿಯೂ ಉಗ್ರವ್ರತಿಗಳಾಗಿದ್ದ ವೀರಶೈವ(ಬ್ರಾಹ್ಮಣ)ರ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲುವ ಸಾಧ್ಯತೆಯಿದೆ.

ಹೀಗೆ ಆಗಮಿಕ ಶೈವ ಬ್ರಾಹ್ಮಣರು ಹೊಸದಾಗಿ ವೀರಶೈವ ಪದ ಬಳಸತೊಡಗಿದರೂ, ತಮ್ಮ ಹೆಸರಿನ ಹಿಂದೆ ಬಹುಶಃ ಮೊದಲಿನಿಂದಲೂ ನಡೆದು ಬಂದ ಹಳೆಯ ವೈದಿಕ ಗೋತ್ರಸೂತ್ರ ಅಂಟಿಸಿಕೊಳ್ಳುವದನ್ನು ಮುಂದುವರಿಸಿದ್ದರು. ಕೊಂಡಗುಳಿ ಕೇಶಿರಾಜ ಭಾರದ್ವಾಜ ಗೋತ್ರದವನೆಂದು ತಿಳಿದುಬರುತ್ತದೆ. ಏಕಾಂತರಾಮಯ್ಯ ಶ್ರೀವತ್ಸಗೋತ್ರದವನೆಂದು ಅಬ್ಬಲೂರು ಶಾಸನ ತಿಳಿಸುತ್ತದೆ. ಆಮೇಲೆಯೂ ಮುಂದುವರಿದ ಉದಾಹರಣೆಗಳು ಹೀಗಿವೆ; ಶಿವತತ್ವ ಚಿಂತಾಮಣಿಯ ಲಕ್ಕಣ್ಣ ದಂಡೇಶ (೧೪೪೦) “ಶ್ರೀವಿಷ್ಣುವರ್ಧನ ಗೋತ್ರದವನು. ಗಮನಿಸಲೇಬೇಕಾದ ಅಂಶವೆಂದರೆ ರೇವಣಸಿದ್ದೇಶ್ವರ ಪುರಾಣದ ಚತುರ್ಮುಖ ಬೊಮ್ಮರಸನು (೧೪೫೦)ಕಾಸ್ಯಪಗೋತ್ರದ ಬೋಧಾಯನ ಸೂತ್ರದ ಯಜುರ್ವೇದಿ. ಸಾರಸ್ವತ ವ್ಯಾಕರಣದ ಚೆನ್ನವೀರ ಜಂಗಮ (೧೫೦೦)ನದು ತೈತ್ತರೀಯ ಯಜುಃಶಾಖೆ, ಅತಿಗೋತ್ರ, ಗುಮ್ಮಳಾಪುರ (೧೬೦೬)ಶಾಸನದಲ್ಲಿ “ಭಾರದ್ವಾಜ ಗೋತ್ರದ, ಪಡಿವಿಡಿ ವರ್ಗದ, ಕೊಲ್ಲಿಪಾಕಿ ರೇವಣಸಿದ್ಧ ಸಂಪ್ರದಾಯದವರಾದ ಗುಮ್ಮಳಾಪುರ ಸಿಂಹಾಸನಕರ್ತರಾದ... ನಂಜದೇವ ಅಯ್ಯನವರ [ಪಾದಕೆ....]” ಎಂದು ಹೇಳಲಾಗಿದ್ದು, ಇಲ್ಲಿ ರೇವಣ್ಣಸಿದ್ಧ ಸಂಪ್ರದಾಯದ ನಂಜದೇವ ಅಯ್ಯನವರಿಗೆ ಇಂದಿನಂತೆ ಪಡಿವಿಡಿ ಸೂತ್ರದೊಂದಿಗೆ ವೀರಭದ್ರ ಗೋತ್ರ ಹೇಳಲಾಗಿಲ್ಲ; ವೈದಿಕರ ಭಾರದ್ವಾಜಗೋತ್ರವನ್ನು ಹೇಳಲಾಗಿದೆ; ಇದರಿಂದ ಇಂದಿನ ಬಾಳೆಹಳ್ಳಿಪೀಠದ ರೇವಣಸಿದ್ಧ ಸಂಪ್ರದಾಯದವರು ಮೂಲತಃ ಭಾರದ್ವಾಜಗೋತ್ರದ ಬ್ರಾಹ್ಮಣರೆಂದು ಸ್ಪಷ್ಟವಾಗುತ್ತದೆ. ೧೬೬೯ರ ವೀರಭದ್ರಕಲ್ಯಾಣ ಗ್ರಂಥದ ಕರ್ತೃ ವಿರೂಪಣಯ್ಯ ತನ್ನದು ಕಾವ್ಯಪಗೋತ್ರ, ಅಶ್ವಲಾಯನಸೂತ್ರ, ಗಾಯತ್ರಿ ವೇದದ ಪ್ರಥಮ ಶಾಖೆ, ನೇತ್ರ ಪಂಚಾವದನ ಪ್ರವರ ಎಂದು ಕರೆದುಕೊಂಡಿದ್ದಾನೆ. ಇವುಗಳಿಗಿಂತ ಮುಖ್ಯವಾದುದೆಂದರೆ ೧೮ ಮತ್ತು ೧೯ನೆಯ ಶತಮಾನಗಳ ಶಾಸನದಲ್ಲಿ ಬರುವ ಕೆಳಗೆ ಉಲ್ಲೇಖಿಸಲಾದ ಕೊಡಗಿನ ವೀರಶೈವ ಅರಸರ ವರ್ಣನೆ:

“ಶಿವಗಂಗೆ ಮೇಲಣ ಗವಿ ಸಿಂಹಾಸನಾರೂಢರ ಸಂಪ್ರದಾಯಸ್ಥರಾದ ವೀರಶೈವಮತಸ್ಥರಾದ ಸಿದ್ಧಾಪುರದ ಮಠದ ಪಟ್ಟದ ಸ್ವಾಮಿಯವರ ಕರಕಮಲ ಸಂಜಾತರಾದ..... ಭಾರದ್ವಾಜ ಗೋತ್ರದ ಆಲ್ಲಾಯನ ಸೂತ್ರದ ರುಕ್ಷಭಾನುಶಾಕಾಧ್ಯಾಯಗಳಾದ ಅಪ್ಪಾಜೇಂದ್ರ ವಡೆಯರು.”[೧೦] ಇದು ೧೭೯೬ರ ಶಾಸನ. ಇಲ್ಲಿ ವೀರಶೈವ, ಶಿವಗಂಗೆ ಮೇಲಣಗವಿಯ(ಪಂಚಾಚಾರ)ಪೀಠ- ಇವುಗಳಿಗೆ ವೈದಿಕ ಗೋತ್ರ ಸೂತ್ರಗಳೊಂದಿಗೆ ಸಂಬಂಧ ಕಲ್ಪಿಸಿರುವುದನ್ನು ನೋಡಿದರೆ ೧೮ನೆಯ ಶತಮಾನದ ವರೆಗೆ 'ವೀರಶೈವ' ಮತ ಬ್ರಾಹ್ಮಣವೇ ಆಗಿದ್ದಿತೆಂದು ತಾನಾಗಿಯೇ ವ್ಯಕ್ತವಾಗುತ್ತದೆ. ಈ ವೀರಶೈವ ಬ್ರಾಹ್ಮಣಿಕೆ ೧೯ನೆಯ ಶತಮಾನದಲ್ಲಿಯೂ ಮುಂದುವರಿದಿದ್ದಿತೆನ್ನುವುದಕ್ಕೆ ೧೮೮೨ರ ವರೆಗಿನ ಕೊಡಗಿನ ಶಾಸನಗಳಲ್ಲಿ ಇಂಥ ಪ್ರಯೋಗ ಕಾಣಸಿಗುವುದೇ ಆಧಾರವಾಗಿದೆ. ಇಷ್ಟೇ ಏಕೆ. ಸೊಲ್ಲಾಪುರದ ವಾರದ ಮಲ್ಲಪ್ಪನವರ ಸಂಸ್ಕೃತಪಾಠಶಾಲೆಯ ಆಶ್ರಯದಲ್ಲಿ ಆರಂಭವಾಗಿದ್ದ “ವೀರಶೈವ ಲಿಂಗಿಬ್ರಾಹ್ಮಣ ಗ್ರಂಥಮಾಲೆ” ಎಂಬ ವೀರಶೈವರ ಬ್ರಾಹ್ಮಣಿಕೆಯ ಮುಂದುವರಿದ ಉದಾಹರಣೆಯಾಗಿದೆ. ಹೀಗಿರುವಾಗ ಈ ವೀರಶೈವ ಬ್ರಾಹ್ಮಣರನ್ನು ಲಿಂಗಾಯತರೆಂದು ಹೇಗೆ ಹೇಳುವುದು? ನಂದಿ, ಶೃಂಗಿ ಗೋತ್ರಗಳನ್ನು ಇಂದು ಹೇಳಿಕೊಳ್ಳುತ್ತಿದ್ದರೂ ೧೭-೧೮ನೆಯ ಶತಮಾನದ ವರೆಗೆ ಭಾರದ್ವಾಜ ಇತ್ಯಾದಿ ಬ್ರಾಹ್ಮಣಗೋತ್ರಗಳನ್ನು ಹೇಳಿಕೊಳ್ಳುತ್ತಲಿದ್ದ ವೀರಶೈವರೂ, “ಗೋತ್ರ ಡೋಹರ ಕಕ್ಕಯ್ಯ “ನೆಂದು ಹೇಳಿಕೊಳ್ಳುವ ಬಸವನ ಲಿಂಗಾಯತರೂ ಒಂದೇ ಎಂದು ಹೇಗೆ ಹೇಳುವುದು? ಬ್ರಾಹ್ಮಣ ಗೋತ್ರ ಹೇಳುತ್ತಲಿದ್ದ ಕಾರಣ ಈ ವೀರಶೈವ (ಪುರೋಹಿತ)ರಿಗೆ ಜನಿವಾರ-ಜುಟ್ಟ ಅನಿವಾರ‍್ಯವಾಗಿದ್ದವು. ಹಳ್ಳಿಗಳಲ್ಲಿಯ ಜಂಗಮರು ಇನ್ನೂ ಜುಟ್ಟ ಬಿಡುವುದನ್ನು ಇಲ್ಲಿ ನೆನೆಯಬಹುದು.

ಬ್ರಾಹ್ಮಣರೇ ಜಂಗಮರಾದರೆಂದು ಜನ ಈಗಲೂ ಮಾತನಾಡುವುದನ್ನು ಇಲ್ಲಿ ಸ್ಮರಿಸಬಹುದು. ಬ್ರಾಹ್ಮಣರಾಗಿದ್ದ ಕಾರಣ ಇವರಲ್ಲಿ ಚಾತುರ್ವಣ್ರ ಪದ್ಧತಿ ಬಳಕೆಯಲ್ಲಿದ್ದಿತು. ಈ ವಾಸನೆ ಕಾರಣವಾಗಿಯೇ ೧೯೦೧ರ ಸುಮಾರಿಗೆ ಇವರು ಎಂಥೋವನ್ ಅವರಿಗೆ ಕಳಿಸಿದ ವರದಿಯಲ್ಲಿ ತಾವು ೪ ವರ್ಣಗಳನ್ನು ಮನ್ನಿಸುವವರೆಂದೂ, ಲಿಂಗಾಯತರು ನಮ್ಮ ವೀರಶೈವ ದೀಕ್ಷೆ ಪಡೆಯಬೇಕೆಂದೂ [೧೧] ತಿಳಿಸಿರುವುದನ್ನು ಇಲ್ಲಿ ನೆನೆಯಬೇಕು. ಈ ಕಾರಣಕ್ಕಾಗಿಯೇ ೧೯೦೯ರಲ್ಲಿ ಬಳ್ಳಾರಿಯಲ್ಲಿ ಜರುಗಿದ ೫ನೆಯ ವೀರಶೈವ ಮಹಾಸಭೆಯಲ್ಲಿ ಇವರು ತಾವು ವರ್ಣಾಶ್ರಮ ಪದ್ಧತಿಯನ್ನು ಒಪ್ಪಿಕೊಳ್ಳಬೇಕೆಂದು ವ್ಯರ್ಥ ವಾದ ಮಾಡಿದರೆಂಬುದೂ ಇಲ್ಲಿ ಉಲ್ಲೇಖನೀಯವೆನಿಸಿದೆ.

ಒಟ್ಟಾರೆ, ಇಲ್ಲಿ ಮುಖ್ಯವಾಗಿ ಹೇಳಬೇಕಾದುದು, ವೀರಶೈವ ಎಂಬ ಪದವು ವಚನಗಳ ಕಾಲವಾದ ೧೨ನೆಯ ಶತಮಾನದಲ್ಲಿ ಕರ್ನಾಟಕ, ಏಕೆ ಆಂಧ್ರಪ್ರದೇಶದ ಯಾವುದೇ ಕಾವ್ಯ ಶಾಸ್ತ್ರ ಶಾಸನಗಳಲ್ಲಿ ದಾಖಲಾಗಿಲ್ಲವಾಗಿ, ಅದು ಶರಣ ಚಳುವಳಿ ಸಂದರ್ಭದಿಂದ ಈಚೆ ಹುಟ್ಟಿದುದಾಗಿದೆ.

ವೀರಶೈವಪದ : ಭೌಗೋಲಿಕ ಪ್ರಸಾರ

“ವೀರಶೈವ" ಪದ ಆಂಧ್ರಪ್ರದೇಶದಲ್ಲಿ ಹುಟ್ಟಿ ಅದರ ಗಡಿಯಲ್ಲಿರುವ ಹಂಪಿಯಲ್ಲಿ, ಬಳಿಕ ಶಿವಗಂಗೆಯಲ್ಲಿ, ಆಮೇಲೆ ಕೆಳದಿ ರಾಜ್ಯದಲ್ಲಿ ಪಸರಿಸುತ್ತ ಬಂದುದನ್ನು ಈ ಹಿಂದಿನ “ವೀರಶೈವ ಪದ: ಐತಿಹಾಸಿಕ ಬೆಳವಣಿಗೆ” ಲೇಖನದಲ್ಲಿ ಪ್ರತಿಪಾದಿಸಿದ್ದೇನೆ ಹೀಗೆ ಪ್ರಸಾರಗೊಂಡರೂ ಪ್ರಾಚೀನ ಕರ್ನಾಟಕದಲ್ಲಿ ಇದು ಬಳಕೆಯಾಗುತ್ತಿದ್ದುದು ಸಾಹಿತ್ಯಕ ನೆಲೆಯಲ್ಲಿಯೇ ಹೊರತು, ಜನಜೀವನದ ನೆಲೆಯಲ್ಲಿ ಅಲ್ಲ. ಆಧುನಿಕ ಕಾಲದಲ್ಲಿ ಮಾತ್ರ ಇದು ಮೈಸೂರು ಪ್ರದೇಶದಲ್ಲಿ ಜನಸಾಮಾನ್ಯರ ನಡುವೆ ಮೊದಲು ಇಳಿಯಿತು. ೧೯ನೆಯ ಶತಮಾನದಲ್ಲಿ ಆರಂಭವಾದ ಮುದ್ರಣ ಮಾಧ್ಯಮದ ಮೂಲಕ ಮೈಸೂರು ಭಾಗದ ವಿದ್ವಾಂಸರು ಇದನ್ನು ಹೆಚ್ಚು ಪ್ರಚುರಗೊಳಿಸಿದರು.

ಹೀಗಿದ್ದೂ, ಆಧುನಿಕ ಪೂರ್ವಕಾಲದ ಮೈಸೂರು ಸೀಮೆಯ ಗ್ರಾಮೀಣ ಪರಿಸರದಲ್ಲಿ ಲಿಂಗಾಯತ ಗಲ್ಲಿ, ಲಿಂಗಾಯತ ಮಠ ಎಂಬ ಪದಗಳೇ ರೂಢಿಯಲ್ಲಿದ್ದವೆಂದು ತಿಳಿದುಬರುತ್ತದೆ. ೧೯೩೧ರ ಸುಮಾರಿಗೆ “ಶಿವಮೊಗ್ಗ ದಾವಣಗೆರೆ ಪ್ರದೇಶದಲ್ಲಿ 'ವೀರಶೈವ' ಮಾತು ಎಷ್ಟು ಜನಕ್ಕೆ ಅರ್ಥವಾಗುತ್ತಿತ್ತೋ ತಿಳಿಯದು. 'ಲಿಂಗಾಯತರು' ಎಂದರೆ ಎಲ್ಲರಿಗೂ ತಿಳಿಯುತ್ತಿತ್ತು” [೧೨] ಎಂದು ಡಾ.ಚಿದಾನಂದಮೂರ್ತಿ ಹೇಳುವುದನ್ನು ನೋಡಿದರೆ, ವೀರಶೈವಪದ ೨೦ನೆಯ ಶತಮಾನದ ಮಧ್ಯದ ಹೊತ್ತಿಗೂ ಮೈಸೂರು ಭಾಗದವರಿಗೆ ಅಪರಿಚಿತವಾಗಿದ್ದಿತೆಂದು ಸ್ಪಷ್ಟವಾಗುತ್ತದೆ. ಅದೇನೇ ಇರಲಿ, ಆ ಪ್ರದೇಶದಿಂದ ಇದು ಕ್ರಮೇಣ ಉತ್ತರ ಕರ್ನಾಟಕವನ್ನೂ ವ್ಯಾಪಿಸಿದ ಚರಿತ್ರೆ ಹೀಗಿದೆ:

ಆಧುನಿಕ ಶಿಕ್ಷಣದಿಂದ ಜ್ಞಾನ ಮತ್ತು ಉದ್ಯೋಗ ಇವೆರಡನ್ನೂ ಸಾಧಿಸಬಹುದೆಂದು ಕಂಡುಕೊಂಡ ಉತ್ತರ ಕರ್ನಾಟಕದ ಡೆಪ್ಯುಟಿ ಚನ್ನಬಸಪ್ಪನವರು, ಲಿಂಗಾಯತ ವಿದ್ಯಾರ್ಥಿಗಳಿಗಾಗಿ ಬೆಳಗಾವಿಯಲ್ಲಿ ಒಂದು ಉಚಿತ ಪ್ರಸಾದ ನಿಲಯವನ್ನು ೧೮೬೮ರಲ್ಲಿ ಆರಂಭಿಸಿದರು. ಇದಕ್ಕೆ ಇವರು ಇಟ್ಟ ಹೆಸರು “ಲಿಂಗಾಯತ ಬೋರ್ಡಿಂಗ್.” ಈ ಸಂದರ್ಭದಲ್ಲಿ ಸರಕಾರದ ಪರವಾಗಿ ಶ್ರೀ ಡಬ್ಲೂ.ಎ.ರಸೆಲ್ ಹೊರಡಿಸಿದ, ಸಮಾಜದ ಪರವಾಗಿ ಡೆಪ್ಯುಟಿ ಚೆನ್ನಬಸಪ್ಪ ಹೊರಡಿಸಿದ ಪ್ರಕಟನೆಗಳಲ್ಲಿ ಪದೇ ಪದೇ ಲಿಂಗಾಯತ ಪದ ಬಳಕೆಯಾಗಿದೆಯೇ ಹೊರತು, ತಪ್ಪಿಯೂ ವೀರಶೈವ ಪದ ಬಳಕೆಯಾಗಿಲ್ಲ.

ಎಫ್. ಕಿಟೆಲ್ ಅವರು ಛಂದೋಂಬುಧಿ(೧೮೭೫)ಗೆ ಪ್ರಸ್ತಾವನೆಯಾಗಿ ಬರೆದ “An essay on canaress literature” ಶೀರ್ಷಿಕೆಯ ಸುದೀರ್ಘ ಪ್ರಬಂಧ ಆಧುನಿಕ ಪ್ರಥಮ ಕನ್ನಡ ಸಾಹಿತ್ಯ ಚರಿತ್ರೆಯೆಂದು ಖ್ಯಾತಿಗಳಿಸಿದೆ. ಕಿಟೆಲ್‌ರು ಇಲ್ಲಿ ಕನ್ನಡ ಸಾಹಿತ್ಯವನ್ನು
Jain literature
Lingait literature
saive literature
vaishnava literature
ಎಂದು ವಿಭಜನೆ ಮಾಡಿದ್ದಾರೆ. ಇಲ್ಲಿ ಶೈವದಿಂದ ಭಿನ್ನವಾದ ಸಾಹಿತ್ಯವನ್ನು ಈಗಿನಂತೆ ವೀರಶೈವವೆಂದು ಕರೆಯದೆ, ಲಿಂಗಾಯತವೆಂದು ಕರೆದುದು ಗಮನಾರ್ಹವೆನಿಸಿದೆ. ಅವರು ಇಲ್ಲಿ ಬಹುಶಃ ವೀರಶೈವವನ್ನೇ ಶೈವವೆಂದು ಕರೆದಿರುವಂತಿದೆ. ಒಟ್ಟಿನಲ್ಲಿ, ಸಾಹಿತ್ಯಚರಿತ್ರೆಯ ಸಂದರ್ಭದಲ್ಲಿ ವೀರಶೈವ ಕಾಣೆಯಾಗಿ, ಲಿಂಗಾಯತವೆಂಬುದು ಬಳಕೆಯಾಗಿದೆ.

ಮೇಲೆ ಹೇಳಿದ ಲಿಂಗಾಯತ ಬೋರ್ಡಿಂಗ್ ಕೆಲವು ದಿನ ನಡೆದು, ಆರ್ಥಿಕ ತೊಂದರೆ ಕಾರಣವಾಗಿ ನಿಂತುಬಿಟ್ಟಿತ್ತು. ಆಗ ಲಿಂಗಾಯತ ಮಕ್ಕಳಿಗೆ ಶಿಷ್ಯವೇತನ ಕೊಡುವುದರ ಸಲುವಾಗಿ ಶ್ರೀ ಗಿಲಗಂಚಿ ಗುರುಸಿದ್ಧಪ್ಪನವರು, ಅರಟಾಳ ರುದ್ರಗೌಡರು ದೊಡ್ಡ ಮೊತ್ತದ ನಿಧಿ ಸಂಗ್ರಹಿಸಿ, “ಲಿಂಗಾಯತ ವಿದ್ಯಾಭಿವೃದ್ಧಿ ಸಭೆ” ಹೆಸರಿನ ಸಂಸ್ಥೆಯನ್ನು ಧಾರವಾಡದಲ್ಲಿ (೧೮೮೩)ಸ್ಥಾಪಿಸಿದರು. ಈ ಹೆಸರಿನಲ್ಲೇಕೆ ಈ ಸಂಸ್ಥೆಯ ಘಟನಾವಳಿಯಾಲ್ಲಾಗಲೀ, ಇದಕ್ಕೆ ಸಂಬಂಧಿಸಿದ ಪತ್ರಿಕಾ ಪ್ರಕಟನೆಗಳಲ್ಲಾಗಲೀ ವೀರಶೈವ ಪದ ತಪ್ಪಿಯೂ ಬಳಕೆಯಾಗಿಲ್ಲ. ಒಂದೆರಡು ಸಲ ಶಿವಮತ, ಲಿಂಗಾಂಗಿ, ಲಿಂಗವಂತ ಎಂಬಿವು ಮಾತ್ರ ಕಾಣಿಸಿಕೊಂಡಿವೆ.

೧೯೦೧ರಲ್ಲಿ ಮುಂಬಯಿ ಕರ್ನಾಟಕದ ಜನಗಣತಿಯನ್ನು ಕೈಕೊಂಡ ಎಂಥೋವನ್‌ ಎಂಬವನು ತನ್ನ "An essay on the rituals and organization of the lingayats” (೧೯೧೦ರಲ್ಲಿ ಬಳ್ಳಾರಿಯ ನಾರಾಯಣರಾವ ಎಂಬವನು ಕನ್ನಡೀಕರಿಸಿದ್ದಾನೆ)-ಈ ಗ್ರಂಥದ ೨೪ ಪ್ರಕರಣ ಶೀರ್ಷಿಕೆಗಳಲ್ಲಿ ಧರ್ಮದ ಹೆಸರನ್ನು ಸೂಚಿಸುವ ಪ್ರಸ್ತಾಪ ಬಂದಲ್ಲೆಲ್ಲ, ಈ ಕೆಳಗಿನಂತೆ ಲಿಂಗಾಯತ ಪದವನ್ನೇ ಉದ್ದಕ್ಕೂ ಬಳಸಿದ್ದಾನೆ:
೧. ೧೯೦೧ರ ಜನಗಣತಿ-ಲಿಂಗಾಯತ ಸಂಖ್ಯೆ
೨. ಲಿಂಗಾಯತರು ಹೆಸರು
೩. ಲಿಂಗಾಯತ ಮತವು ಹಿಂದೂಮತದಿಂದ ಭಿನ್ನ
೪. ಲಿಂಗಾಯತ ಧರ್ಮದ ಜಾತಿಭೇದದ ವಿವರ....
೬. ಲಿಂಗಾಯತ ಧರ್ಮ-ಕೆಥೋಲಿಕ್ ತತ್ವಗಳ ಸಾಮ್ಯ
೭. ಲಿಂಗಾಯತ ಧರ್ಮದ ಪ್ರಾರಂಭದ ಅಡಿಕೆಗೆ ಶಿಲಾಲೇಖಗಳು ಹೆಚ್ಚು ಪ್ರಾಮಾಣ್ಯ.
೮. ಲಿಂಗಾಯತ ಧರ್ಮದ ವಿದ್ಯಾವಂತರು ತಾವು ಬ್ರಾಹ್ಮಣರು ಎಂದು ಸಾಧಿಸುವ ಪಕ್ಷವು ಅಜ್ಞಾನದಿಂದ ಕಲ್ಪಿಸಿದ್ದಿರುತ್ತದೆ....
೧೨. ಮೂರನೆಯ ತರಗತಿಯ ಲಿಂಗಾಯತರು ಲಿಂಗಾಯತರೇ ಅಲ್ಲವೆಂದು ಸಾಧಿಸುವುದು ಅಬದ್ಧ...
೧೪. ಲಿಂಗಾಯತರ ನಡವಳಿಕೆಗಳು...
೧೯ ಶ್ರಾದ್ದ ಸೂತಕ ಮತ್ತು ಪುನರ್ಜನ್ಮ ಇವು ಲಿಂಗಾಯತರಲ್ಲಿ ಇಲ್ಲವೆಂಬ ನಂಬಿಕೆ ಕುರಿತು...
೨೧. ಲಿಂಗಾಯತರಲ್ಲದವರೂ ಲಿಂಗಾಯತರಾಗುವಕ್ರಮ...

ಇದು, ಆ ಕಾಲಕ್ಕೆ ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಪದವೇ ತುಂಬಿ ತುಳುಕುತ್ತಿದ್ದುದಕ್ಕೆ ಸಾಕ್ಷಿಯಾಗಿದೆ.[೧೩] ದಕ್ಷಿಣದ ಬೆಂಗಳೂರಿನಲ್ಲಿ ೧೯೦೫ರಲ್ಲಿ ಸ್ಥಾಪಿಸಲ್ಪಟ್ಟ ಸಂಸ್ಥೆಗೂ “ಮೈಸೂರು ಲಿಂಗಾಯತ ವಿದ್ಯಾನಿಧಿ ಸಂಘ” ಎಂದೇ ಹೆಸರಿಡಲಾಯಿತು. ಆದರೆ ೧೯೭೩ರಲ್ಲಿ “ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ನಿಧಿ ಸಂಸ್ಥೆ” ಎಂದು ಆ ಹೆಸರನ್ನ ಬದಲಾಯಿಸಲಾಯಿತು. ಇದೇ ರೀತಿ ೧೯೦೭ರಲ್ಲಿ ವಾರದ ಮಲ್ಲಪ್ಪನವರು ಸೊಲ್ಲಾಪುರಲ್ಲಿ ಸಮಾಜದ ಶೈಕ್ಷಣಿಕ ಪ್ರಗತಿಗಾಗಿ “ಲಿಂಗಾಯತ ಅಸೋಸಿಯೇಶನ್ ಸ್ಥಾಪಿಸಿದರು. ಅವರ ನಿಧನಾನಂತರ ಇದು “ವೀರಶೈವ ಮಹಾಜನ ಸಭೆ” ಎಂದು ಹೆಸರು ಬದಲಿಸಿಕೊಂಡು ಮುಂದುವರಿಯಿತು. ಇದೆಲ್ಲವನ್ನು ನೋಡಿದರೆ ಲಿಂಗಾಯತದ ಮೇಲೆ ವೀರಶೈವ ಮಾಡುತ್ತ ಬಂದ ಶಾಬ್ದಿಕ ದಾಳಿ ಸ್ಪಷ್ಟವಾಗುತ್ತದೆ.

೧೯೧೦ರಲ್ಲಿ ವಿಜಾಪುರ ಜಿಲ್ಲೆಯ ಫ.ಗು.ಹಳ್ಳಕಟ್ಟಿ ಮೊದಲಾದ ಲಿಂಗಾಯತರು ಜಾಗೃತರಾಗಿ, “ಬಿಜಾಪುರ ಲಿಂಗಾಯತ ಡಿಸ್ಟ್ರಿಕ್ಟ್ ಎಜ್ಯುಕೇಶನ್ ಅಸೋಸಿಯೇಶನ್” ಹೆಸರಿನ ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದರು. ಇಲ್ಲಿಯೂ ಲಿಂಗಾಯತವಿದೆಯೇ ಹೊರತು ವೀರಶೈವ ಪದವಿಲ್ಲ.

ಮುಂದೆ ೧೯೧೬ರಲ್ಲಿ ಎಸ್.ಎಸ್‌. ಬಸವನಾಳ ಮೊದಲಾದವರು ಬೆಳಗಾವಿಯಲ್ಲಿ “ಕರ್ನಾಟಕ ಲಿಂಗಾಯತ ಎಜ್ಯುಕೇಶನ್ ಸೊಸೈಟಿ” ಹೆಸರಿನ ಇನ್ನೊಂದು ಸಂಸ್ಥೆಯನ್ನು ಸ್ಥಾಪಿಸಿದರು. ಇಲ್ಲಿಯೂ ವೀರಶೈವಕ್ಕೆ ಬದಲು ಲಿಂಗಾಯತವೇ ಬಳಕೆಯಾಗಿದೆ.

೧೯೨೩ರಲ್ಲಿ ಪ್ರಕಟವಾದ ಡಾ. ಹಳಕಟ್ಟಿಯವರ ವಚನಶಾಸ್ತ್ರಸಾರ ಭಾಗ- ೧ರ ೩೦ ಪುಟದ ಪ್ರಸ್ತಾವನೆಯಲ್ಲಿ ೨೫ ಸಲ ಲಿಂಗಾಯತ ಪದ ಪ್ರಯೋಗವಾಗಿದೆಯೇ ಹೊರತು, ಒಮ್ಮೆಯೂ ವೀರಶೈವ ಪದ ಕಾಣಿಸಿಕೊಂಡಿಲ್ಲ.

ಹೀಗೆ ದಾಖಲೆಗಳನ್ನು ಗಮನಿಸಿದರೆ ೧೯ನೆಯ ಶತಮಾನದ ಕೊನೆಯ ವರೆಗೂ ಈ ಪ್ರದೇಶದಲ್ಲಿ ವೀರಶೈವ ಪದ ಬಹುಶಃ ಕೇಳಿಬರುತ್ತಿರಲಿಲ್ಲವೆನಿಸುತ್ತದೆ. ಇಂದಿಗೂ ಹಳ್ಳಿಗಳಲ್ಲಿ ಈ ಸಮಾಜವೂ, ಸಮಾಜದ ವ್ಯಕ್ತಿಗಳೂ ಲಿಂಗಾಯತ ಪದದಿಂದಲೇ ಗುರುತಿಸಲ್ಪಡುತ್ತಾರೆ. ಇತ್ತೀಚೆಗೆ ಸುಶಿಕ್ಷಿತರು ಮಾತ್ರ ವೀರಶೈವ ಪದವನ್ನು ಬಳಸುತ್ತಲಿದ್ದಾರೆ.

ಒಟ್ಟಾರೆ, ಮೇಲೆ ಹೇಳಿದ ೧೮೬೮, ೧೮೭೫, ೧೮೮೩, ೧೯೦೧, ೧೯೦೫, ೧೯೦೭, ೧೯೧೦, ೧೯೧೬, ೧೯೨೩ರ ಬಹುಮುಖ್ಯ ಮೈಲುಗಲ್ಲು ಸಂದರ್ಭಗಳಲ್ಲಿ ಲಿಂಗಾಯತ ಪದವೇ ಉದ್ದಕ್ಕೂ ಬಳಕೆಯಾದುದನ್ನು ಗಮನಿಸಬೇಕು. ೧೮೭೫ರಲ್ಲಿ ವಿದೇಶಿಯ ಕಿಟೆಲ್ ಅವರು ಕೇವಲ ಲಿಂಗಾಯತ ಪದ ಬಳಸಿದುದೆಂದರೆ, ಅಂದು ಕೇವಲ ಲಿಂಗಾಯತ ಪದ ರೂಢಿಯಲ್ಲಿದ್ದಿತೆಂದೇ, ನಮಗಿಂತ ವಿದೇಶೀಯರ ಮನಸ್ಸು ಹೆಚ್ಚು ವಾಸ್ತವವನ್ನು ದಾಖಲಿಸಿದೆಯೆಂದೇ ಅರ್ಥ.

ಎರಡೂ ಸಂಸ್ಕೃತ ಪದಗಳೇ ಆಗಿದ್ದರೂ ಲಿಂಗಾಯತಕ್ಕಿಂತ ವೀರಶೈವ ಹೆಚ್ಚು ಶಿಷ್ಟವಾಗಿ ಕೇಳಿಸುತ್ತದೆ. ಹೀಗಾಗಿ ಇಂಗ್ಲೀಷ್ ಶಿಕ್ಷಣದಿಂದ ಶಿಷ್ಟರ ಸಂಖ್ಯೆ ಬೆಳೆದಂತೆ ವೀರಶೈವ ಪದದ ಬಳಕೆಯೂ ಹೆಚ್ಚುತ್ತ ನಡೆದುದು, ದಾಖಲೆಗಳಿಂದ ತಿಳಿದುಬರುತ್ತದೆ. ಹೀಗೆ ಸಮಾಜದಲ್ಲಿ ಕ್ರಮೇಣ ಬಳಕೆಗೆ ಬಂದ ವೀರಶೈವವೆಂಬ ಹೊಸಪದ ಸಾಮಾನ್ಯರಿಗೆ ಅರ್ಥವಾಗುವುದಿಲ್ಲವೆಂದೇ, “ಲಿಂಗಾಯತ ಖಾನಾವಳಿ” ಗೆ ಬದಲು “ವೀರಶೈವ ಲಿಂಗಾಯತ ಖಾನಾವಳಿ” ಹೆಸರಿನ ಬೋರ್ಡುಗಳು ಮೊದಮೊದಲು ಈ ಭಾಗದಲ್ಲಿ ಕ್ರಮೇಣ ಕಾಣಿಸತೊಡಗಿದವು. ಬಳಿಕ ಲಿಂಗಾಯತವನ್ನು ಕೈಬಿಟ್ಟು 'ವೀರಶೈವ ಖಾನಾವಳಿ' ಹೆಸರಿನ ಬೋರ್ಡುಗಳು ಬೆಳೆಯುತ್ತ ಬಂದವು.

ಶರಣರ ಪ್ರಭಾವಕ್ಕೆ ಉತ್ತರ ಕರ್ನಾಟಕ ಮೊದಲು, ದಕ್ಷಿಣ ಕರ್ನಾಟಕ ಆಮೇಲೆ ಒಳಗಾದುದು ತಿಳಿದ ವಿಷಯವೇ ಆಗಿದೆ. ಇದರಿಂದಾಗಿ ೧೯ನೆಯ ಶತಮಾನದ ವರೆಗೆ ಉತ್ತರಲ್ಲಿ ಹೆಚ್ಚು, ದಕ್ಷಿಣದಲ್ಲಿ ಕಡಿಮೆ ಪ್ರಮಾಣದಲ್ಲಿ ಲಿಂಗಾಯತ ಪದ ಪ್ರಸಾರದಲ್ಲಿದ್ದಿತೆಂದು ಕಾಣುತ್ತದೆ. ಇಂಥ ಸಂದರ್ಭದಲ್ಲಿ ಬಹುಶಃ ಆಂಧ್ರಪ್ರದೇಶಮೂಲದ 'ವೀರಶೈವ' ಪದವು ಆರಾಧ್ಯರ ಮೂಲಕ ದಕ್ಷಿಣ ಕರ್ನಾಟಕಕ್ಕೆ ವಲಸೆ ಬಂದು, ಜನಬಳಕೆಯಲ್ಲಿದ್ದ ಶಿವಾಚಾರ ಲಿಂಗಾಯತಗಳ ಸ್ಥಾನವನ್ನು ಕ್ರಮೇಣ ಆಕ್ರಮಿಸತೊಡಗಿದಂತಿದೆ. ಉತ್ತರ ಕರ್ನಾಟಕಕ್ಕಿಂತ ದಕ್ಷಿಣ ಕರ್ನಾಟಕ ಹೆಚ್ಚು ಶಿಷ್ಟವಾಗಿರುವುದೂ ಕಾರಣವಾಗಿ, ವೀರಶೈವದ ಬಳಕೆ ಅಲ್ಲಿ ಇನ್ನೂ ವರ್ಧಿಸಿತು. ಸಿದ್ಧಾಂತಶಿಖಾಮಣಿ ಮೊದಲಾದ ಸಂಸ್ಕೃತ ಕೃತಿಗಳಲ್ಲಿ ಲಿಂಗಾಯತಕ್ಕೆ ಬದಲು “ವೀರಶೈವ ಪದವೇ ಬಳಕೆಗೊಂಡಿದ್ದು, ಈ ಸಾಹಿತ್ಯ ಓದಿದ ಶಿಷ್ಟರೂ, ಮಠಾಧೀಶರೂ ಸಹಜವಾಗಿಯೇ ಅದರ ಬಳಕೆ ಇನ್ನೂ ಸಂವರ್ಧನೆಗೊಳ್ಳಲು ಕಾರಣೀಭೂತರಾದರು.

ಒಟ್ಟಾರೆ, ಕರ್ನಾಟಕದಲ್ಲಿ ಅದರಲ್ಲಿಯೂ ಉತ್ತರ ಕರ್ನಾಟಕದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಲಿದ್ದ ಲಿಂಗಾಯತ ಪದವನ್ನು
(೧) ೧೯ನೆಯ ಶತಮಾನದಿಂದ ದಕ್ಷಿಣ ಕರ್ನಾಟಕದ ಶಿಷ್ಟರೂ
(೨)೨೦ನೆಯ ಶತಮಾನದಿಂದ ಉತ್ತರ ಕರ್ನಾಟಕದ ಶಿಷ್ಟರೂ, ಮೂಲೆಗುಂಪು ಮಾಡುತ್ತ ನಡೆದರೆಂದೇ ಹೇಳಬೇಕು.

ಇದೆಲ್ಲವನ್ನು ನೋಡಿದರೆ ವೀರಶೈವ ಪದ ಎಂದು? ಹೇಗೆ? ಯಾರಿಂದ? ಉತ್ತರ ಕರ್ನಾಟಕದಲ್ಲಿ ಪ್ರವೇಶಿಸಿತು? ಪ್ರಚಾರ ಪಡೆಯಿತೆಂದು ತಿಳಿದುಕೊಳ್ಳುವ ಕುತೂಹಲ ಹುಟ್ಟುತ್ತದೆ.

ಮೇಲೆ ಹೇಳಿದಂತೆ ೧೮೬೯ರ ಬೆಳಗಾವಿ ಲಿಂಗಾಯತ ಬೋರ್ಡಿಂಗ ೧೮೮೩ರ ಧಾರವಾಡದ ಲಿಂಗಾಯತ ವಿದ್ಯಾಭಿವೃದ್ಧಿ ಸಂಘವೆಂಬ ಮುಖ್ಯ ಘಟನೆಗಳ ವರೆಗೆ ವೀರಶೈವ ಪದ ಉತ್ತರ ಕರ್ನಾಟಕದ ಸಾಮಾಜಿಕರಲ್ಲಾಗಲೀ, ಶಿಸ್ಟರಲ್ಲಾಗಲೀ ತಪ್ಪಿಯೂ ಬಳಕೆಯಿರಲಿಲ್ಲವೆಂದೇ ತೋರುತ್ತದೆ. ಆಧುನಿಕ ಸಂಚಾರ ಸೌಲಭ್ಯ ಕಾರಣವಾಗಿ ಕಾಶಿಯಲ್ಲಿ ಅಭ್ಯಾಸ ಮಾಡಿಬಂದು ಮಠಕ್ಕೆ ಸ್ವಾಮಿಗಳಾಗುವ, ಇಲ್ಲವೆ ಪಾಠಶಾಲೆಗೆ ಶಾಸ್ತ್ರಿಗಳಾಗುವ ಹೊಸಪದ್ಧತಿ ೧೯ನೆಯ ಶತಮಾನದ ಉತ್ತರಾರ್ಧದಲ್ಲಿ ಉತ್ತರ ಕರ್ನಾಟಕದಲ್ಲಿ ಆರಂಭವಾಯಿತು. [೧೪] ಇದೇ ಸಮಯದಲ್ಲಿ ಲಿಂಗಾಯತರು ಬ್ರಾಹ್ಮಣರಷ್ಟೇ ಶ್ರೇಷ್ಠರೆಂದು ಸಾಧಿಸುವ ವ್ಯಸನವೂ, ಲಿಂಗಾಯತಧರ್ಮ ವೈದಿಕದಷ್ಟೇ ಹಳೆಯದೆಂದು ಸ್ಥಾಪಿಸುವ ಚಾಪಲ್ಯವೂ ಇವರಲ್ಲಿ ಬೆಳೆಯಿತು. ಹಳೆಯದೆಂದು ಸಿದ್ಧ ಮಾಡಬೇಕಾದರೆ ವಚನಸಾಹಿತ್ಯಕ್ಕೆ ಹಿಂದೆ ಹೋಗುವುದು ಅನಿವಾರ್ಯವಾಯಿತು. ಆಗ ಇವರಿಗೆ ಅನುಕೂಲಕರ ಸಾಧನವಾದುದು ವೀರಶೈವ ಪದ ಮತ್ತು ವೀರಶೈವ ವಿಷಯವನ್ನೊಳಗೊಂಡಿರುವ ಸಂಸ್ಕೃತ ಆಗಮಸಾಹಿತ್ಯ. ನಿಜಸಂಗತಿಯೆಂದರೆ, ೧೨ನೆಯ ಶತಮಾನದ ಬಳಿಕ ಲಿಂಗಾಯತ ಸಿದ್ಧಾಂತವನ್ನು ಆಗಮಗಳಲ್ಲಿ ವೀರಶೈವ ಹೆಸರಿನೊಂದಿಗೆ ಸೇರಿಸಲಾಗಿದೆ. ಇಂಥ ಆಗಮ ಸಾಹಿತ್ಯಾಭ್ಯಾಸಿಗಳಿಂದಾಗಿ 'ಲಿಂಗಾಯತ'ದ ಸ್ಥಾನದಲ್ಲಿ 'ವೀರಶೈವ'ವು ಪ್ರಚಾರ ಪಡೆಯುತ್ತ ಬಂದಿತು. ೧೯-೨೦ನೆಯ ಶತಮಾನಗಳ ಮಧ್ಯದಲ್ಲಿ ಬ್ರಾಹ್ಮಣರೊಂದಿಗೆ ಸ್ಪರ್ಧೆಗಿಳಿದ, ತಾವೂ ಅವರಂತೆ ಸಂಸ್ಕೃತ ವಿದ್ವಾಂಸರಾಗಲು ಹವಣಿಸಿದ ಲಿಂಗಾಯತರಿಂದ ಸ್ಥಾಪಿಸಲ್ಪಟ್ಟ ಸಂಸ್ಕೃತ ಪಾಠಶಾಲೆಗಳಿಂದಾಗಿ, ಈ ಪದಪ್ರಚಾರಕ್ಕೆ ಇನ್ನೂ ಅನುಕೂಲವಾಯಿತು.

ಮೊದಮೊದಲು ಬಳ್ಳಾರಿಯಲ್ಲಿ ಸಕ್ಕರಿ ಕರಡೆಪ್ಪನವರ “ಶ್ರೀ ಗುರುನಿವಾಸ ಸಂಸ್ಕೃತ ಪಾಠಶಾಲೆ” (೧೮೬೫), ಸೊಲ್ಲಾಪುರದಲ್ಲಿ ವಾರದ ಮಲ್ಲಪ್ಪನವರ “ಧರ್ಮಾರ್ಥ ಸಂಸ್ಕೃತ ಪಾಠಶಾಲೆ” (೧೮೭೮)ಮಾತ್ರ ಇದ್ದವು. ಆಮೇಲೆ ಅರಟಾಳ ರುದ್ರಗೌಡರು ೧೮೯೧ರಲ್ಲಿ ಗದುಗಿನ ಶ್ರೀ ತೋಂಟದಾರ್ಯಮಠದಲ್ಲಿ ಸಂಸ್ಕೃತ ಪಾಠಶಾಲೆಯನ್ನು ಅಸ್ತಿತ್ವಕ್ಕೆ ತಂದರು. ಬಳಿಕ ೧೯೦೩ರ ಹೊತ್ತಿಗೆ ಹಾವೇರಿ, ಹಾನಗಲ್ಲು ಮುಂತಾದ ಗ್ರಾಮಗಳಲ್ಲಿ ಸಂಸ್ಕೃತಪಾಠಶಾಲೆಗಳು ಆರಂಭವಾದವು. ವಾರದ ಮಲ್ಲಪ್ಪನವರು ಸೊಲ್ಲಾಪುರದಲ್ಲಿ ತಮ್ಮ ಸಂಸ್ಕೃತ ಪಾಠಶಾಲೆ ಮುನ್ನಡೆಸಿದುದಲ್ಲದೆ, ನಾಸಿಕ, ಪುಣೆ, ವಿಜಾಪುರ, ಕಲಬುರ್ಗಿ ಹುಮನಾಬಾದ, ಪರಳಿ ಮೊದಲಾದ ಕಡೆಗಳಲ್ಲಿ ಸ್ಥಾಪಿತವಾದ ಸಂಸ್ಕೃತ ಪಾಠಶಾಲೆಗಳಿಗೆ ವರ್ಷಾಸನ ನೀಡುತ್ತ ಬಂದರು. ಈಗ ಈ ಶಾಲೆಗಳ ಶಾಸ್ತ್ರಿಗಳೂ, ವಿದ್ಯಾರ್ಥಿವಟುಗಳೂ ಲಿಂಗಾಯತದ ಸ್ಥಾನದಲ್ಲಿ ವೀರಶೈವ ಪದವನ್ನು ಬಳಸುತ್ತ ಬಂದರು. ಸಾಲದುದಕ್ಕೆ ಬೋಧನೆಯಲ್ಲಿ, ಬರವಣಿಗೆಯಲ್ಲಿ, ಸಭೆ-ಸಮಾರಂಭಗಳಲ್ಲಿ ಈ ಪದವನ್ನು ಹೆಚ್ಚು ಪ್ರಚುರಗೊಳಿಸಿದರು.

೧೯೦೪ರಲ್ಲಿ ಮೊದಲನೆಯ ವೀರಶೈವ ಮಹಾಸಭೆಯ ಅಧಿವೇಶನದಲ್ಲಿ ಶ್ರೀ ಚೆನ್ನಮಲ್ಲಪ್ಪ ಟೆಂಗಿನಕಾಯಿ ಅವರು ಮಾಡಿದ ಸ್ವಾಗತಭಾಷಣದ ಕೆಳಗಿನ ಮಾತುಗಳು ಇಲ್ಲಿ ಉಲ್ಲೇಖನೀಯವೆನಿಸಿವೆ:

“೧೯೦೩ನೇ ಇಸವಿಯ ಪ್ರಾರಂಭದಲ್ಲಿ ಧಾರವಾಡದ ವೀರಶೈವರು 'ವೀರಶೈವ ಮತ ಪ್ರಚಾರಕ ಸಂಘ' ಎಂಬ ಸಂಸ್ಥೆಯನ್ನು ಸ್ಥಾಪಿಸಿ, ವಾರಕ್ಕೊಮ್ಮೆ ಧರ್ಮೋಪದೇಶ ಮಾಡುವ ಉದ್ಯೋಗವನ್ನೂ, ಸಂಸ್ಕೃತ ಅಥವಾ ಮತಸಂಬಂಧದ ಪಾಠಶಾಲೆಗಳಿಲ್ಲದ ಗ್ರಾಮಗಳ ವೀರಶೈವ ಮಹನೀಯರಿಗೆ ಪತ್ರಗಳನ್ನು ಬರೆದು, ತಮ್ಮಲ್ಲಿಯೂ ಸಂಸ್ಕೃತ ಅಥವಾ ಮತ ಸಂಬಂಧದ ಪಾಠಶಾಲೆಗಳನ್ನು ಸ್ಥಾಪಿಸಿಕೊಳ್ಳಬೇಕೆಂದು ಸೂಚಿಸುವ ಕ್ರಮವನ್ನೂ ನಡೆಸಿದರು. ಪರಸ್ಥಳದ ವಿದ್ಯಾರ್ಥಿಗಳಿದ್ದಲ್ಲಿ ಅವರಿಗೆ ಅನ್ನಪಾನಾದಿಗಳನ್ನು ಕೊಟ್ಟು ಸಂಸ್ಕೃತ ಭಾಷಾಧ್ಯಯನವನ್ನೂ ವೀರಶೈವಾಚರಣೆಯ ಸಂಬಂಧದ ಮತ್ತು ಮತತತ್ವ ಪರಿಶೀಲನೆಯ ಸಂಬಂಧದ ಗ್ರಂಥಾಭ್ಯಾಸವನ್ನೂ ಮಾಡಿಸಬೇಕೆಂತಲೂ, ಮತತತ್ವಗಳನ್ನರಿಯದವರು ವಾರಕ್ಕೊಂದು ಸಾರಿ ಇಲ್ಲವೆ ಅನುಕೂಲವಿದ್ದಾಗ್ಗೆ ತಮ್ಮ ತಮ್ಮ ಪಾಠಶಾಲೆಗಳ ಶಾಸ್ತ್ರಿಗಳ ಬಳಿಗೆ ಹೋಗಿ, ಮತವಿಚಾರಗಳನ್ನೂ, ಆಚಾರ ವಿಚಾರಗಳನ್ನೂ ಅವರಿಂದ ಚೆನ್ನಾಗಿ ತಿಳಿದುಕೊಂಡು, ಸದ್ವರ್ತನವುಳ್ಳವ ರಾಗಬೇಕೆಂತಲೂ, ಶಾಸ್ತ್ರಿಗಳು ಬೇಕಾಗಿದ್ದಲ್ಲಿ ಅವರನ್ನೂ ತೀವ್ರವಾಗಿ ದೊರಕಿಸಿಕೊಡುವೆವೆಂತಲೂ ವಿಜ್ಜಪ್ತಿ ಮಾಡಿಕೊಳ್ಳುವ ಕ್ರಮ ನಡೆಸಿರುವಷ್ಟರಲ್ಲಿಯೇ, ಧಾರವಾಡದೊಳಗಿನ ಶಿವಮೂರ್ತಿ ರಾ. ರಾ. ಹೂಲಿಮಠದ ಶಿವಮೂರ್ತೆಯ್ಯ ನವರು (೨೭ ಎಕರೆ ೨೪ ಗುಂಟೆ)ಹೊಲವನ್ನೂ ಒಂದು ಮನೆಯನ್ನೂ ಕೊಟ್ಟು, ಇದೇ ಕಟ್ಟಡದಲ್ಲಿ ವೀರಶೈವ ಪಾಠಶಾಲೆಯೊಂದನ್ನು ಸ್ಥಾಪಿಸಿ, ಇವುಗಳ ಆಡಳಿತವನ್ನೂ ಈ ವೀರಶೈವ ಮತಪ್ರಚಾರ ಸಂಘ'ದವರ ಕಡೆಗೇ ಒಪ್ಪಿಸಿದರು. ಈ ಪಾಠಶಾಲೆಯ ಕೆಲಸವು ಯಥಾಸ್ಥಿತವಾಗಿ ಈಗ ನಡೆದಿರುವುದು. ಬ್ಯಾಡಗಿಯ ವೀರಶೈವ ಮಹನೀಯರು ಹಣಕೂಡಿಸಿ ವೀರಶೈವಮತ ಗ್ರಂಥಗಳನ್ನು ಶೋಧಿಸಿ, ಅವುಗಳನ್ನು ಪ್ರಸಿದ್ಧಪಡಿಸುವ ಘನವಾದ ಕಾರ್ಯಕ್ಕೆ ಕೈಹಾಕಿರುವರು...ಹುಬ್ಬಳ್ಳಿಯ ಮೂರುಸಾವಿರಮಠದ ಈಗಿನ ಶ್ರೀಗಳವರ ಅಡ್ಡಪಲ್ಲಕ್ಕಿಯ ಮಹೋತ್ಸವದ ಕಾಲಕ್ಕೆ ಒಂದು ಪಾಠಶಾಲೆಯನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸುವುದಕ್ಕೋಸ್ಕರ ಸ್ವಾಮಿಗಳವರು ೮ ಸಾವಿರ ರೂಪಾಯಿಗಳನ್ನು ದಯಪಾಲಿಸಿರುವರು. ಕಳೆದ ತಿಂಗಳನಲ್ಲಿ ಬಾಗಿಲಕೋಟೆಯ ಮಲ್ಲಣಾರ್ಯರೆಂಬವರು ರೋಣದೊಳಗಿನ ವೀರಶೈವರಿಗೆ ಉಪದೇಶಮಾಡಿ, ಅವರಿಂದ ೧೨೦೦ ರೂಪಾಯಿಗಳನ್ನು ಕೂಡಿಸಿ, ವೀರಶೈವ ಮತತತ್ವಗಳನ್ನು ಉಪದೇಶ ಮಾಡುವ ಒಂದು ಸ್ಥಿರವಾದ ಸಂಸ್ಥೆಯನ್ನು ಸ್ಥಾಪಿಸುವ ವ್ಯವಸ್ಥೆ ಮಾಡಿರುವರು...... ಸೊಲ್ಲಾಪುರದ ರಾವ್ ಸಾಹೇಬ್ ಮಲ್ಲಪ್ಪ ಅಣ್ಣಾ ಉರ್ಫ್ ಅಪ್ಪಾಸಾಹೇಬ ವಾರದ ಈ ದೊಡ್ಡ ಮನುಷ್ಯರು ಸಂಸ್ಕೃತ ಪಾಠಶಾಲಾ, ಮತಗ್ರಂಥ ಶೋಧನ ಮುಂತಾದ ವೀರಶೈವ ಸಮಾಜೋತ್ಕರ್ಷದ ವಿಷಯವಾಗಿ ಅಹೋರಾತ್ರಿ ಅವಿಶ್ರಾಂತ ಶ್ರಮಪಡುತ್ತಲಿರುವರು."[೧೫]

ಈ ಎಲ್ಲ ಶಿಷ್ಟ ಚಟುವಟಿಕೆಗಳಿಂದಾಗಿ, “ವೀರಶೈವ” ವೆಂಬ ಶಿಷ್ಟಪದ ಉತ್ತರ ಕರ್ನಾಟಕದಲ್ಲಿ ವ್ಯವಸ್ಥಿತವಾಗಿ ಚಲಾವಣೆಗೆ ಬರತೊಡಗಿತು. ಈ ಚಟುವಟಿಕೆಗಳನ್ನು ಆಧಿಕೃತಗೊಳಿಸುವ ರೀತಿಯಲ್ಲಿ ೧೯೦೪ರಲ್ಲಿ “ ಶ್ರೀ ಮದ್ವೀರಶೈವ ಮಹಾಸಭಾ” ಹೆಸರಿನ ಪ್ರಾತಿನಿಧಿಕ ಸಂಸ್ಥೆಯೊಂದು ಧಾರವಾಡದಲ್ಲಿ ಹುಟ್ಟಿಕೊಂಡು, ವೀರಶೈವ ತರದ ಚಲಾವಣೆಗೆ ಸಾರ್ವಜನಿಕ ಅಂಗೀಕಾರದ ಮುದ್ರೆಯೊತ್ತಿತ್ತು. ಈ ಮಹಾಸಭೆಯ ಮೊದಲ ಅಧಿವೇಶನದ ವರದಿ ಪುಸ್ತಕ (ಹೊಸಪೇಟೆಯ ಶ್ರೀ ಕೊಟ್ಟೂರು ಮಠದ ಪ್ರಕಟನೆ ೧೯೯೧)ವನ್ನು ನೋಡಿದರೆ, ಈ ಸಭೆಯ ತುಂಬ "ವೀರಶೈವ" ಪದ ಒಮ್ಮೆಲೇ ವಿಜೃಂಭಿಸಿದುದು ಮನಕ್ಕೆ ಬರುತ್ತದೆ.

ಈ ಸಭೆಗಾಗಿ ಮತ್ತು ಇದಕ್ಕೆ ಮೊದಲು ಚರ್ಚೆಗಾಗಿ ಧಾರವಾಡಕ್ಕೆ ಬಂದಿದ್ದ ಬೆಂಗಳೂರಿನ ಗಣ್ಯರಾದ ಶ್ರೀ ಪಿ. ಮಹಾದೇವಯ್ಯ, ಹಾಸನದ ಶ್ರೀ ಎಚ್. ಕೆ. ವೀರಭದ್ರಯ್ಯ ಅವರು ವೀರಶೈವಪದ ಪ್ರೇಮಿಗಳೇ ಆಗಿದ್ದುದೂ ಇದರ ಬಳಕೆಗೆ ಬೆಂಬಲ, ವ್ಯಾಪ್ತಿಗಳನ್ನು ಒದಗಿಸಿತು.

“ವೀರಶೈವ ಮಹಾಸಭೆ” ಹುಟ್ಟುವ ಸಂದರ್ಭದಲ್ಲಿ ಹೆಸರಿನ ಬಗೆಗೆ ವಾದ ಉದ್ಭವಿಸಿದ್ದಿತೆಂದೂ, ಉತ್ತರಕರ್ನಾಟಕದವರು “ಲಿಂಗಾಯತ ಮಹಾಸಭೆ” ಎಂಬುದರ ಪರವಾಗಿ, ದಕ್ಷಿಣ ಕರ್ನಾಟಕದವರು “ವೀರಶೈವ ಮಹಾಸಭೆ” ಎಂಬುದರ ಪರವಾಗಿ ವಾದಿಸಿದರೆಂದೂ, ಕೊನೆಗೆ ಒಂದು ದೊಡ್ಡ ಸಂಘಟನೆ ಮೊದಲು ಅಸ್ತಿತ್ವಕಕ್ಕೆ ಬಂದರೆ ಸಾಕು, ಹೆಸರಿನ ಬಗ್ಗೆ ಮತ್ತೆ ವಿಚಾರಿಸಬಹುದು ಎಂದು ಉತ್ತರ ಕರ್ನಾಟಕದವರು ಮನಸ್ಸಿಲ್ಲದ ಮನಸ್ಸಿನಿಂದ ವೀರಶೈವ ಮಹಾಸಭೆ ಹೆಸರನ್ನು ಒಪ್ಪಿಕೊಂಡರೆಂದೂ ಕೇಳಿಬರುತ್ತದೆ. (ರಾಜ್ಯದ ಹೆಸರು ಮೈಸೂರು ಇರಬೇಕೆ? ಕರ್ನಾಟಕ ಇರಬೇಕೆ? ಎಂಬ ವಾದ ಸಂದರ್ಭದಲ್ಲಿ ಮೈಸೂರು ಹೆಸರನ್ನೇ (೧೯೫೬)ಒಪ್ಪಿಕೊಂಡಂತೆ).

ಒಟ್ಟಾರೆ, ಲಿಂಗಾಯತ ಸಮಾಜದ ಯಜಮಾನತ್ವ ಡೆಪ್ಯುಟಿ ಚೆನ್ನಬಸಪ್ಪ, ಅರಟಾಳ ರುದ್ರಗೌಡ, ಗಿಲಗಂಚಿ ಗುರುಸಿದ್ದಪ್ಪ, ಹಳಕಟ್ಟಿ ಫಕೀರಪ್ಪ ಮೊದಲಾದ ಭಕ್ತರ ಕೈಯಲ್ಲಿರುವ ಕಾಲಘಟ್ಟದವರೆಗೆ “ಲಿಂಗಾಯತ” ಪದ ಪ್ರಚಾರದಲ್ಲಿದ್ದಿತು. ಈ ಯಜಮಾನತ್ವವು ಕ್ರಮೇಣವಾಗಿ ಮಠಾಧೀಶರ ಕೈಸೇರುವಲ್ಲಿ, “ವೀರಶೈವ” ಪದ ಪ್ರಚಾರಕ್ಕೆ ಬಂದಿತೆಂದು ತೋರುತ್ತದೆ. ಮತ್ತು ಕಾಶಿಯಲ್ಲಿ ಅಭ್ಯಾಸ ಮಾಡಿ ಬಂದ ಜಂಗಮ ವಿದ್ವಾಂಸರು, ಸ್ವಾಮಿ ಹೆಸರಿನಿಂದ ಮಠಗಳನ್ನು, ಶಾಸ್ತ್ರಿ ಹೆಸರಿನಿಂದ ಪಾಠಶಾಲೆಗಳನ್ನು ಆಕ್ರಮಿಸುವಲ್ಲಿ ಲಿಂಗಾಯತ ಪದ ಮೂಲೆಗೆ ಬಿದ್ದು, ವೀರಶೈವ ಪದ ಪ್ರಸಿದ್ದಿ ಪಡೆಯಿತೆಂದು ಇತಿಹಾಸ ತಿಳಿಸುತ್ತದೆ.

ಗ್ರಂಥ ಋಣ: ಮಾರ್ಗ-೭, ಸಪ್ನಬುಕ್ ಹೌಸ್, ಬೆಂಗಳೂರು

೧. ಸುಧಾರ್ಣವ-ಭಾಗ ೧. ಪು ೩೦೬ ಮತ್ತು ೩೦೭.
೨. ಈತನ ವಂಶಸ್ಥನಾದ ಪದ್ಮಣಾಂಕನು (೧೪೨೦)ಬರೆದ ಪದ್ಮರಾಜ ಪುರಾಣದಲ್ಲಿ ಮಾತ್ರ ವೀರಶೈವ ಪದ ಎರಡು ಸಲ (೪-೨೭, ೧೨-೫೫)ಬಂದಿದೆ. ಬಹುಶಃ ಈ ಹೊತ್ತಿಗೆ ವೀರಶೈವ ಪದವು ಚಲಾವಣೆಗೆ ಬಂದು, ಲಿಂಗಾಯತಕ್ಕೆ ಪರ್ಯಾಯವೆಂಬಂತೆ ಬಳಕೆ ಯಾಗುತ್ತಿರಬಹುದು.
೩. ಈತನ ಅಂತ್ಯಕಾಲದ ಕೃತಿಯಾದ “ಮಲ್ಲಿಕಾರ್ಜುನ ಪಂಡಿತಾರಾಧ್ಯ ಚಾರಿತ್ರದಲ್ಲಿ ಮಾತ್ರ ವೀರಶೈವ ಪದ ಬಳಕೆಯಾಗಿದೆ.
೪. ೧೩ನೆಯ ಶತಮಾನದ ವೀರಮಾಹೇಶ್ವರಾಚಾರ ಸಂಗ್ರಹಕ್ಕೆ ೧೫ನೆಯ ಶತಮಾನದಲ್ಲಿ ಕನ್ನಡ ಟೀಕೆ ಬರೆದ ಶ್ರೀಧರಾಂಕನು ತನ್ನ ಗುರುವನ್ನು ವೀರಶೈವನೆಂದು ಕರೆದಿದ್ದಾನೆ. ಇದರಿಂದಲೂ ಒಂದು ಕಾಲಕ್ಕೆ ವೀರಮಾಹೇಶ್ವರ ಎನಿಸಿಕೊಳ್ಳುವವರು, ಮುಂದಿನ ಕಾಲದಲ್ಲಿ ವೀರಶೈವ ಎನಿಸಿಕೊಳ್ಳತೊಡಗಿದರೆಂದು ತಿಳಿದುಬರುತ್ತದೆ.
೫. ಜರ್ನಲ್ ಆಫ್ ದಿ ಆಂಧ್ರ ಹಿಸ್ಟಾರಿಕಲ್ ರೀಸರ್ಚ ಸೊಸೈಟಿ, IV-IV ೧೯೩೦.
೬. ಎ.ಪಿ. ಕ. IX-ಬೆಂಗಳೂರು, ೯೬.
೭. ಎಂ.ಎ.ಆ‌. ೧೯೨೧ ಪು. ೯೧.
೮. ಇದೇ ರೀತಿ “ಕಲಿಯು ವೀರಭದ್ರ ನಾಚಿದೇವನ ಮಗ... ಮುಂದಾಡಿದೇವನರಸಿ ವೀರಬ್ರತೆ ನಾಗಲದೇವಿ....” (I-VI-41.1233, ಚಿನ್ನಿಕಟ್ಟಿ, ಹಿರೇಕೆರೂರು ತಾಲೂಕು) ಎಂಬ ಉದಾಹರಣೆಯನ್ನು ನೋಡಬಹುದು. ಇಲ್ಲಿ ವ್ರತದ ವ್ಯಕ್ತಿ ಮಹಿಳೆಯೆಂಬುದು ಗಮನಾರ್ಹ.
೯. ವೈದಿಕ (ಶೈವ)ಬ್ರಾಹ್ಮಣರ ಬಡಾವಣೆಗೆ 'ಬ್ರಹ್ಮಪುರಿ' ಎನ್ನುತ್ತಿದ್ದರು.
೧೦. ಪಿ.ಕ. I32(ಹೊಸ)ಮಾದಾಪುರ.
೧೧. “ವೀರಭದ್ರಪ್ಪ ಹಾಲಭಾವಿ ಇವರ ಚರಿತ್ರೆ”(ಲಿಂಗಾಯತ ಅಧ್ಯಯನ ಸಂಸ್ಥೆ, ಗದಗ ಪ್ರಕಟನೆ) ನೋಡಿರಿ.
೧೨. ಸಂಶೋಧನ (ಅಭಿನಂದನ ಗ್ರಂಥ)ಪು, ೯೨೨
೧೩. ಧಾರವಾಡದ ಚರ್ಚ್‌ದಲ್ಲಿ ೧೮೪೮ರಿಂದ ಮತಾಂತರಗೊಂಡ ಲಿಂಗಾಯತ ಸುದೀರ್ಘ ವಿವರಗಳಿವೆ. ಇಲ್ಲಿ ಪದೇ ಪದೇ 'ಲಿಂಗಾಯತ' ಪದ ಬಳಕೆಯಾಗಿದೆ ಹೊರತು ತಪ್ಪಿಯೂ ವೀರಶೈವ ಪದ ಕಾಣಿಸಿಕೊಂಡಿಲ್ಲ.
೧೪ . ಸುಮಾರು ೫೦ ವರ್ಷಗಳಿಂದಲೂ ಈ ದಕ್ಷಿಣದಿಂದ ಸಂಸ್ಕೃತ ಶಾಸ್ತ್ರಭ್ಯಾಸಕ್ಕಾಗಿ ಕಾಶಿಪಟ್ಟಣಕ್ಕೆ ಹೋಗುತ್ತಿರುವ ನಮ್ಮ ವಿದ್ಯಾರ್ಥಿಗಳನ್ನು ಸ್ವಂತ ಪುತ್ರರೋಪಾದಿಯಲ್ಲಿ ಕಂಡು, ಅವರವರ ಯೋಗ್ಯತಾನುಸಾರ ಅಶನ ವಸನಾದಿಗಳನ್ನು ಕೊಟ್ಟು, ಅವರ ವಿದ್ಯಾಭ್ಯಾಸಕ್ಕೆ ತಕ್ಕ ಸಾನುಕೂಲಗಳನ್ನೊದಗಿಸಿ ನಮ್ಮ ಮತೋದ್ಧಾರ ಮಾಡಿದ ಹಿಂದಿನ ಶ್ರೀ ವೀರಭದ್ರಸ್ವಾಮಿಗಳವರಿಗೂ, ಈಗ ಹಾಲಿ ಆದೇ ಉದಾರತ್ವವನ್ನು ತೋರಿಸುತ್ತಿರುವ ಶ್ರೀ ರಾಜೇಂದ್ರಸ್ವಾಮಿಗಳವರಿಗೂ, ದಕ್ಷಿಣ ಇಂಡಿಯಾದ ಒಟ್ಟು ನೀರಶೈವ ಮಂಡಲಿಯ ಪರವಾಗಿಯೂ ಮತ್ತೂ ಇಲ್ಲಿ ನೆರೆದಿರುವ ಈ ಮಹಾಸಭೆಯ ಪರವಾಗಿಯೂ ಕೃತಜ್ಞತಾಪೂರ್ವಕವಾಗಿ ಕೇವಲ ಭಕ್ತಿವಿಶ್ವಾಸದೊಡನೆ ನನ್ನ ವಂದನೆಗಳನ್ನು ಸಮರ್ಪಿಸುತ್ತೇನೆ” (ಅಖಿಲಭಾರತ ವೀರಶೈವ ಮಹಾಸಭೆಯ ಪ್ರಥಮ ಸಮ್ಮೇಳನದ ವರದಿ- ೧೯೧೪, ಪು. ೩೫೧)ಈ ವರದಿಯಲ್ಲಿಯ ಮೇಲಿನ ವಾಕ್ಯವು ೧೯ನೆಯ ಶತಮಾನದ ಉತ್ತರಾರ್ಧದಿಂದ ಕಾಶಿ ಅಭ್ಯಾಸಕ್ಕೆ ಕರ್ನಾಟಕದಿಂದ ಲಿಂಗಾಯತರು ಹೋಗುವುದು ಆರಂಭವಾಯಿತೆಂದು ತಿಳಿಸುತ್ತದೆ.
೧೫. ಅಖಿಲಭಾರತ ವೀರಶೈವ ಮಹಾಸಭೆಯ ಪ್ರಥಮ ಸಮ್ಮೇಳನದ ವರದಿ (ಹೊಸಪೇಟೆಯ ಶ್ರೀ ಕೊಟ್ಟೂರು ಮಠದ ಪ್ರಕಟನೆ-೧೯೯೧).

*
ಪರಿವಿಡಿ (index)
Previous ಲಿಂಗಾಯತತತ್ವ ವಿರುದ್ಧ ಆಚರಣೆಗಳು. ಪಂಚಾಚಾರ್ಯರ ನಿಜಸ್ವರೂಪ Next