Previous ವೀರಶೈವ ಪಂಚಾಚಾರ್ಯ ಮಿಥ್ಯ ಮತ್ತು ಸತ್ಯ ಮರುಳಾರಾಧ್ಯ Next

ಪಂಚಾಚಾರ್ಯ: ರೇಣುಕಾಚಾರ್ಯ / ರೇವಣಸಿದ್ದ

*

✍ ಡಾ. ಎಸ್‌. ಎಂ. ಜಾಮದಾರ (ನಿವೃತ್ತ ಐಎಎಸ್ ಅಧಿಕಾರಿಗಳು)

ರೇಣುಕಾಚಾರ್ಯ / ರೇವಣಸಿದ್ದ

ವೀರಶೈವರ ಐದು ಜನ ಆಚಾರ್ಯರುಗಳಲ್ಲಿ ಒಬ್ಬರಾದ ರೇಣುಕಾಚಾರ್ಯರಿಗೆ ಅತ್ಯುನ್ನತ ಮತ್ತು ಆದ್ಯತೆಯ ಸ್ಥಾನ ನೀಡಲಾಗಿದೆ. (ವೀರಾಗಮ ೮ನೆಯ ಅಧ್ಯಾಯ ಮತ್ತು ಪಂಚಬ್ರಹ್ಮದಯ ಭಾಷ್ಯ (ಕ್ರಿ.ಶ. ೧೪೫೦.) ಇವುಗಳ ಅಧಿಕೃತತೆಯ ಬಗೆಗೇ ಸಂಶಯವಿದೆ. (ಚನ್ನಮಲ್ಲಿಕಾರ್ಜುನ)

ರೇಣುಕರು ಈಗಿನ ತೆಲಂಗಾಣದ ನೆಲಗೊಂಡ ಜಿಲ್ಲೆಯ ಕೊಲ್ಲಿಪಾಕಿಯಲ್ಲಿ, ಸೋಮೇಶ್ವರ ಲಿಂಗದ ಶಿಲಾಮೂರ್ತಿಯಿಂದ ಉದ್ಭವವಾದರೆಂದು ಪಂಚಾಚಾರ್ಯರು ಹೇಳುತ್ತಾರೆ (ಕೌಂಟೆ, ೨೦೧೭, ಪು. ೫೯-೨). ಆದರೆ, ರೇಣುಕ ಪೀಠವು ತನ್ನ ಮೂಲಸ್ಥಳವನ್ನು ಬಿಟ್ಟು ಸುಮಾರು ಆರು ನೂರು ಮೈಲಿ ದೂರದ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮಘಟ್ಟಗಳ ಕಾಡಿನಲ್ಲಿ ಬಂದು ನೆಲೆಸಿದ್ದು ಒಂದು ಕುತೂಹಲದ ಸಂಗತಿ. ತಮ್ಮದೇ ತೆಲುಗು ದೇಶದಲ್ಲಿ ಅಲ್ಲಿನ ತೆಲುಗು ಭಾಷೆಯಲ್ಲೇ ತಮ್ಮ ಧರ್ಮವನ್ನು ಬೋಧಿಸದೆ ಕನ್ನಡ ಮಾತಾಡುವ ನೆಲಕ್ಕೆ ಏಕೆ ಹೋದರು ಎನ್ನುವುದು ಒಂದು ಒಗಟಾಗಿದೆ!

ರೇಣುಕರನ್ನು ಗೋತ್ರಕರ್ತರಲ್ಲಿ ಒಬ್ಬರೆಂದು, ಎಂದರೆ ವೀರಗೋತ್ರವನ್ನು ಸ್ಥಾಪಿಸಿದರೆಂದು ವರ್ಣಿಸಲಾಗಿದೆ. ಅವರು ಕೈಲಾಸದಲ್ಲಿರುವ ಶಿವನ ಪ್ರಮಥರಲ್ಲಿ ಒಬ್ಬರೆಂದೂ, ವೀರಶೈವ ಸಿದ್ದಾಂತದ ಪ್ರಸಾರಕ್ಕಾಗಿ ಭೂಲೋಕದಲ್ಲಿ ಅವತರಿಸಿದರೆಂದೂ ಹೇಳಲಾಗಿದೆ. ಅವರು ನಾಲ್ಕು ಯುಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಹುಟ್ಟಿದ್ದಾರೆಂದು ಅವರ ಭಕ್ತರು ಹೇಳುತ್ತಾರೆ. ಅವರು ಕೃತಯುಗದಲ್ಲಿ ಏಕಾಕ್ಷರರೆಂದೂ, ತ್ರೇತಾಯುಗದಲ್ಲಿ ಏಕವಕ್ರರೆಂದೂ, ದ್ವಾಪರಯುಗದಲ್ಲಿ ರೇಣುಕರೆಂದೂ, ಕಲಿಯುಗದಲ್ಲಿ ರೇವಣಸಿದ್ದರೆಂದೂ ಹೆಸರು ಪಡೆದಿದ್ದರು (ಎಂ.ಆರ್. ಸಾಖೆ, ೧೯೪೨).

ಇತ್ತೀಚೆಗೆ ಅಡ್ಡಾದಿಡ್ಡಿಯಾಗಿ ಹೊಂದಿಸಿರುವ ಕಾಲಾನುಕ್ರಮದ ಪ್ರಕಾರ ರೇಣುಕಪೀಠದಲ್ಲಿ ಅವರ ಆರಂಭದಿಂದ (ಸಂಭಾವ್ಯ ೪೩ ಲಕ್ಷದ ೬೦ ಸಾವಿರ ವರ್ಷಗಳ ಹಿಂದಿನಿಂದ ಇದುವರೆಗೆ ೧೨೧ ಗುರುಗಳು ಆಗಿ ಹೋಗಿದ್ದಾರೆಂದು ಹೇಳಲಾಗಿದೆ. ರೇಣುಕರ ಗೋತ್ರ ವೀರಗೋತ್ರ (ವೀರಭದ್ರನ ಸಂಕೇತ). ಈ ಪೀಠಕ್ಕೆ ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ೨೬೫ ಶಾಖೆಗಳಿವೆ. (ಬಿಜ್ಜರಗಿ, ೨೦೦೦, ಪು. ೨೮೪, ೨೯೯, ೩೧೯; ಕೌಂಟೆ, ೨೦೧೭, ಪು. ೫೯-೬೧)

ರೇಣುಕರನ್ನು ಕುರಿತ ಪುರಾಣಗಳು

ರೇಣುಕರನ್ನು ಕುರಿತಂತೆ ೧೨ಕ್ಕೂ ಹೆಚ್ಚು ಪುರಾಣಗಳಿವೆ (ಜೀವನ ಚರಿತ್ರೆ). ಅವುಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ:

೧. ಹರಿಹರನ `ರೇವಣಸಿದ್ದ ರಗಳೆ' (ಕನ್ನಡ, ೧೩ನೆಯ ಶತಮಾನದ ಆರಂಭ)
೨. ಬೊಮ್ಮರಸನ 'ರೇವಣಸಿದ್ದೇಶ್ವರ ಪುರಾಣ' (೧೫ನೆಯ ಶತಮಾನ)
೩. ಚೆನ್ನಬಸವ ಕವಿಯ 'ರೇವಣ ಸಾಂಗತ್ಯ' (೧೫ನೆಯ ಶತಮಾನ)
೪. ಶಿವಕವಿ ಮಲ್ಲಣ್ಣನ `ರೇವಣಸಿದ್ಧ ಕಾವ್ಯ' (ಕ್ರಿ.ಶ. ೧೪೩೦)
೫. ರೇವಣಾರಾಧ್ಯನ “ಶ್ರೀಗುರು ರೇಣುಕವಿಲಾಸ' (ಕ್ರಿ.ಶ. ೧೬೦೦)
೬. ಸಿದ್ದನಾಥ ಶಿವಾಚಾರ್ಯನ 'ರೇಣುಕ ವಿಜಯ' (ಸಿರ್ಸಿ ಗುರುಶಾಂತ ಶಾಸ್ತ್ರಿ ಸಂಪಾದಿತ, ೧೯೪೦)
೭. ಷಡಕ್ಷರದೇವನ 'ರಾಜಶೇಖರ ವಿಳಾಸ' (೧೭ನೆಯ ಶತಮಾನ)
೮. ಪರ್ವತೇಶನ 'ಚತುರಾಚಾರ್ಯ ಚರಿತ್ರೆ' (ಕ್ರಿ.ಶ. ೧೬೯೮)
೯. ನೀಲಕಂಠಾಚಾರ್ಯನ ಆರಾಧ್ಯ ಚರಿತ್ರೆ' (ಕ್ರಿ.ಶ. ೧೮೪೫)
೧೦. ಸಿದ್ಧನಂಜೇಶನ 'ಗುರುರಾಜ ಚರಿತ್ರೆ' (ಕ್ರಿ.ಶ. ೧೫೦೦)
೧೧. ಕಾಶಿನಾಥ ಶಾಸ್ತಿಯ 'ವೀರಶೈವ ರತ್ನಾಕರ' (ಕ್ರಿ.ಶ. ೧೯೩೨)
೧೨. ಕಾಶಿನಾಥ ಶಾಸ್ತಿಯ 'ಜಗದ್ಗುರು ಪಂಚಾಚಾರ್ಯ ಪ್ರಾಚೀನತೆ' (ಕ್ರಿ.ಶ. ೧೯೪೮)
೧೩. ಸಿದ್ಧಾಂತ ಶಿವಾಚಾರ್ಯನ 'ರೇಣುಕ ವಿಜಯಮ್' (ಸಂಸ್ಕೃತ, ಕ್ರಿ.ಶ. ೧೯೨೬) (ಮೈಸೂರಿನ ಬಳಿ ಇರುವ ಸುಣ್ಣಕಲ್ಲು ಆರಾಧ್ಯಮಠದ ಹರೀಶ್ವರ ಶಾಸ್ತ್ರಿ ರಚನೆ)
೧೪. ಪಿ.ಆರ್. ಕರಿಬಸವಶಾಸ್ತಿಯ 'ರೇಣುಕ ಚಂಪೂಕಾವ್ಯ' (ಸಂಸ್ಕೃತ, ೧೯೨೬)

ರೇಣುಕನನ್ನು ಕುರಿತಂತೆ ಇರುವ ಈ ಎಲ್ಲ ಪುರಾಣಗಳೂ ೧೨ನೆಯ ಶತಮಾನದ ನಂತರ ರಚನೆಯಾಗಿವೆಯೇ ವಿನಃ ಅದಕ್ಕಿಂತ ಮುಂಚೆಯಲ್ಲ ಎಂಬುದನ್ನು ಗಮನಿಸಬಹುದು. ಹಾಗೆಯೇ ರೇಣುಕರನ್ನು ಕುರಿತು ಇನ್ನೂ ೫೯ ಕೃತಿಗಳಿವೆಯೆಂದೂ, ಅವುಗಳಲ್ಲಿ ೧೯ ಸಂಸ್ಕೃತದಲ್ಲೂ, ೩೨ ಕನ್ನಡದಲ್ಲೂ, ೮ ತೆಲುಗಿನಲ್ಲೂ, ೫ ಮರಾಠಿಯಲ್ಲೂ, ಹಿಂದಿ ಮತ್ತು ಇಂಗ್ಲಿಷಿನಲ್ಲಿ ತಲಾ ಒಂದೊಂದೂ ಇವೆ ಎಂದು ಬಿಜ್ಜರಗಿ ಅವರು ಬರೆಯುತ್ತಾರೆ. ಈ ಕೃತಿಗಳಲ್ಲಿ ರೇವಣಸಿದ್ಧನ ಜೀವನ ಮತ್ತು ಪವಾಡಗಳನ್ನು ಚಿತ್ರಿಸಲಾಗಿದೆ. (...೨೦೦೯, ಪು. ೨೦೭) ಎಂದು ಹೇಳುತ್ತಾರೆ.

ರೇಣುಕನ ಪವಾಡಗಳು

ಕೈಲಾಸದಿಂದ ಇಳಿದು ಬಂದ ರೇಣುಕನು ಕೊಲ್ಲಿಪಾಕಿಯ ಕಲ್ಲುಲಿಂಗದಿಂದ ಉದ್ಭವಿಸಿದನೆಂಬ ಪವಾಡಸದೃಶ ಜನನದೊಂದಿಗೆ ಈ ಪುರಾಣಗಳು ಆರಂಭವಾಗುತ್ತವೆ. ರೇಣುಕನು ಕೈಲಾಸದಲ್ಲಿ ಶಿವನ ಒಬ್ಬ ಭಕ್ತನಾಗಿದ್ದವನು. ಅವನ ಪುರಾಣಗಳು ಅವನಿಂದ ನಡೆದವೆನ್ನಲಾದ ಅನೇಕ ಕಥೆಗಳು, ಪವಾಡಗಳು ಮತ್ತು ನಿಗೂಢಗಳನ್ನು ನಿರೂಪಿಸುತ್ತವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಕೊಡಲಾಗಿದೆ:

೧. ರೇಣುಕನು ಶಿವನ ಶಾಪವಿಮೋಚನೆಗಾಗಿ ಕೈಲಾಸದಿಂದ ಕೊಲ್ಲಿಪಾಕಿಗೆ ಬಂದು ಅಲ್ಲಿನ ಸೋಮೇಶ್ವರಲಿಂಗದ ಮೂರ್ತಿಯಿಂದ ಉದ್ಭವವಾದವನು.

೨. ಅವನು ಹದಿನಾಲ್ಕು ನೂರು (೧೪೦೦) ವರ್ಷಗಳ ಕಾಲ ಬದುಕಿದ್ದ. (ಮೊದಲ ಏಳು ನೂರು ವರ್ಷ ಸಾಧನೆಗೆ ಮುನ್ನ; ಎರಡನೆಯ ಏಳು ನೂರು ವರ್ಷ ಸಾಧನೆಯ ನಂತರ)

೩. ಅವನು ತಾನು ಮಾತ್ರ ನೋಡಿದ ಒಂದು ಯಕ್ಷ ದಂಪತಿಯನ್ನು ಸುಟ್ಟು ಹಾಕಿದ.

೪. ನೀಲ ಚಕ್ರವರ್ತಿ ದಂಪತಿಗೆ ಅವನು ಮೋಕ್ಷವನ್ನು ಕರುಣಿಸಿದ.

೫. ಚಲಿಸುತ್ತಿದ್ದ ವಿಷ್ಣುವಿನ ವಿಗ್ರಹದ ತಲೆಯನ್ನು ನಿಲ್ಲಿಸಿದ. ತ್ರೇತಾಯುಗದಲ್ಲಿ (೧೩ ಲಕ್ಷ ವರ್ಷಗಳ ಹಿಂದೆ) ವಿಭೀಷಣನ ಮೂಲಕ ಶ್ರೀಲಂಕಾದಲ್ಲಿ ಮೂರು ಕೋಟಿ (೩,೦೦,೦೦,೦೦೦) ಸ್ಥಾವರ
ಲಿಂಗಗಳನ್ನು ಸ್ಥಾಪಿಸಿದ.

೭. ಅವನು ಭಾರತಾದ್ಯಂತ ಪ್ರವಾಸಮಾಡಿ ಅನೇಕ ಪವಾಡಗಳನ್ನು ಮೆರೆದ.

೮. ತ್ರೇತಾಯುಗದಲ್ಲಿ ಅವನು ಅಗಸ್ಯ ಮುನಿಗೆ ವೀರಶೈವ ಧರ್ಮವನ್ನು ಮತ್ತು ಷಟ್‌ಸ್ಥಲ ಸಿದ್ದಾಂತವನ್ನು ಬೋಧಿಸಿದ.

೯. ಕಲಿಯುಗದಲ್ಲಿ ರಾಜಾ ವಿಕ್ರಮಾದಿತ್ಯ, ರಾಜೇಂದ್ರ ಚೋಳ (ಕ್ರಿ.ಶ. ೧೦೫೦) ಮತ್ತು ಬಿಜ್ಜಳನಿಗೆ (ಕ್ರಿ ೧೧೫೦) ವಿಶೇಷ ಮಂತ್ರಶಕ್ತಿಯ ಖಡ್ಗಗಳನ್ನು ಕೊಡುಗೆಯಾಗಿ ನೀಡಿದ.

೧೦. ಅವನು 'ಶಂಕರಾಚಾರ್ಯರಿಗೆ ಚಂದ್ರಮೌಳೇಶ್ವರ ಲಿಂಗವನ್ನು ಕೊಟ್ಟ,

೧೧. ರೇಣುಕನು ಮುನ್ನೂರು (೩೦೦) ಜನ ಹೆಂಡಿರನ್ನು ಮದುವೆಯಾದ (ಬೊಮ್ಮರಸನ, ಪುರಾಣ), ಬಿಜ್ಜಳನ ಮಗಳು ಸುಲಕ್ಷಣೆ, ರಾಜೇಂದ್ರ ಚೋಳನ ಮಗಳು ಸುಂದರಿ, ಪಂಡಿತಾರಾಧ್ಯರ ಮಗಳು ಸೋಮತಿ, ಜೊತೆಗೆ ಪುಣ್ಯವತಿ, ವೇದಕಂಚುಕಿ, ಆಗಮ ಮೋಹಿನಿ, ಶಾಂಭವಿ ಇತ್ಯಾದಿ. ಇವರೆಲ್ಲ ರೇಣುಕನ ಪತ್ನಿಯರು (ಚನ್ನಮಲ್ಲಿಕಾರ್ಜುನ, ೧೯೫೮, ಪು. ೧೮೩). ಅವನು ತನ್ನ ವ್ಯಾಪಕ ಪ್ರಮಾಣದಲ್ಲಿ ಗುರ್ಜರ, ಕಳಿಂಗ, ಮರಾಠಿ, ಮಲೆಯಾಳ ರಾಜ್ಯಗಳ ಸ್ಥಳೀಯ ರಾಜರುಗಳ ಹೆಣ್ಣುಮಕ್ಕಳನ್ನು ಮದುವೆಯಾಗಿದ್ದ. ಅವನು ತನ್ನ ಮಂತ್ರಶಕ್ತಿಯನ್ನು ಬಳಸಿಕೊಂಡು ಅನೇಕ ರಾಜರುಗಳು ತಮ್ಮ ಹೆಣ್ಣುಮಕ್ಕಳನ್ನು ತನಗೆ ಮದುವೆ ಮಾಡಿಕೊಡುವಂತೆ ವಶೀಕರಣ ಮಾಡಿದ.

ಪ್ರಸ್ತಾಪಿತ ಪುರಾಣಗಳಿಂದ ದೊರೆಯುವ ಈ ಸಂಗತಿಗಳನ್ನು ನೋಡಿದರೆ, ರೇಣುಕ / ರೇವಣಸಿದ್ದನು ಒಬ್ಬ ಪವಾಡಪುರುಷನಾಗಿದ್ದ ಎಂಬ ನಿರ್ಧಾರಕ್ಕೆ ಯಾರಾದರೂ ಬರಬಹುದು. ಸಾಮಾನ್ಯವಾಗಿ ಮಂತ್ರ-ಮಾಟ ಮತ್ತಿತರ ಪವಾಡಗಳನ್ನು ಮಾಡುವ ಶಕ್ತಿಗೆ ತಾಂತ್ರಿಕ ಸಿದ್ದರು ಪ್ರಸಿದ್ದರು. ಹಾಗೆಯೇ ರೇಣುಕನೂ ಅಂತಹ ಒಬ್ಬ ಸಿದ್ಧನಾಗಿರುವ ಸಾಧ್ಯತೆ ಇದೆ. ಅದಕ್ಕೆ ಅನುಗುಣವಾಗಿ ಅವನಿಗೆ `ರೇವಣಸಿದ್ದ' ಎಂಬ ಹೆಸರೇ ಇದೆ. ಮೇಲೆ ಉಲ್ಲೇಖಿಸಿದ ಪುರಾಣಗಳು ಒಬ್ಬನೇ ರೇಣುಕನಿಗೆ ರೇವಣ, ರೇವಣಸಿದ್ಧ, ರೇಣುಕಾಚಾರ್ಯ, ರೇಣುಕಾರಾಧ್ಯ ಇತ್ಯಾದಿ ಭಿನ್ನ ಭಿನ್ನ ಹೆಸರುಗಳನ್ನು ಬಳಸುತ್ತವೆ.

'ಆಚಾರ್ಯ' ಮತ್ತು 'ಆರಾಧ್ಯ' ಈ ಎರಡೂ ಭಿನ್ನವಾಗಿದ್ದರೂ ಅವನ್ನು ಒಂದೇ ಅರ್ಥದಲ್ಲಿ ಬಳಸಲಾಗಿದೆ. ಆಚಾರ್ಯ ಎಂದರೆ ಗುರು ಅಥವಾ ಬೋಧಕ. ಆರಾಧ್ಯ ಎಂದರೆ ಆರಾಧನೆಗೆ ಅರ್ಹನಾದವನು. ಗುರುವೂ ಪೂಜಿಸಲ್ಪಡುವುದರಿಂದ ಪಂಚಾಚಾರ್ಯರು, 'ಆರಾಧ್ಯರು' ಎಂದು ಕರೆಸಿಕೊಳ್ಳಲೂ ಇಚ್ಚಿಸುತ್ತಾರೆ. ಆದರೆ 'ಆರಾಧ್ಯ' ಎನ್ನುವುದು ಆಂಧ್ರಪ್ರದೇಶದ ಶೈವಬ್ರಾಹ್ಮಣರ ಒಂದು ಜಾತಿ. ಈ ರೇಣುಕಾರಾಧ್ಯ, ಮರುಳಾರಾಧ್ಯ, ಏಕೋರಾಮಾರಾಧ್ಯ, ಪಂಡಿತಾರಾಧ್ಯ ಮತ್ತು ವಿಶ್ವಾರಾಧ್ಯ ಇವು ಮೂಲತಃ ಆರಾಧ್ಯ ಬ್ರಾಹ್ಮಣರಿಂದಲೇ ಬಂದವಾಗಿವೆಯೆಂದು ಕಂಡುಬರುತ್ತದೆ.

ರೇಣುಕನನ್ನು ಕುರಿತ ಕೆಲವು ಸಂಶಯಗಳು

ಇಂದಿಗೂ ಸಹ ಪಂಚಾಚಾರ್ಯರು ರೇಣುಕನು ಶಿಲೋದ್ಭವ (ಕಲ್ಲಿನಲ್ಲಿ ಹುಟ್ಟಿದವನು) ಎಂಬುದನ್ನು ನಂಬುತ್ತಾರೆ. ಕೊಲ್ಲಿಪಾಕಿಯನ್ನು ದಿವ್ಯಮೂಲವೆಂದು ಹೇಳಿಕೊಳ್ಳುತ್ತಾರೆ. ಅಂತಹ ಹೇಳಿಕೆಗಳು ಸಹಜವಾಗಿಯೇ ರೇಣುಕನನ್ನು ಕುರಿತಂತೆ ಕೆಲವು ಸಂಶಯಗಳನ್ನು ಸೃಷ್ಟಿಸಿವೆ. ಅವುಗಳನ್ನು ಒಂದೊಂದಾಗಿ ಇಲ್ಲಿ ಪರಿಶೀಲಿಸೋಣ.

೧. ರೇಣುಕ ಮತ್ತು ರೇವಣಸಿದ್ದ ಇಬ್ಬರೂ ಒಬ್ಬರೇ ಅಥವಾ ಭಿನ್ನರೆ?

ರೇಣುಕನು ರೇವಣಸಿದ್ಧನಿಗಿಂತ ಭಿನ್ನ ಎಂದು ಪಂಚಾಚಾರ್ಯರು ಸಮರ್ಥಿಸುತ್ತಾರೆ. ಆ ಸಮರ್ಥನೆಯು ಅವರ ಪವಿತ್ರ ಗ್ರಂಥವೆನ್ನುವ ಸಿದ್ದಾಂತ ಶಿಖಾಮಣಿ ಮತ್ತು ಅವನನ್ನೇ ಕುರಿತ ಪುರಾಣಗಳಿಗೆ ವಿರುದ್ಧವಾದಂತಾಗುತ್ತದೆ. ಇದು ಇನ್ನೆರಡು ವಿವಾದಗಳನ್ನು ಹುಟ್ಟಿಸಿದೆ:

(ಅ) ರೇಣುಕನು ರೇವಣಸಿದ್ಧನಿಗಿಂತ ಬೇರೆಯಾಗಿದ್ದರೆ, ಪಂಚಾಚಾರ್ಯರ ಅಧಿಕೃತ, ಪವಿತ್ರ ಗ್ರಂಥ ಸಿದ್ಧಾಂತ ಶಿಖಾಮಣಿಯು ರೇಣುಕನೇ ರೇವಣಸಿದ್ಧ ಎಂದು ಸ್ಪಷ್ಟವಾಗಿ ಹೇಳುತ್ತದೆ.
(ಆ) ಕಲಿಯುಗದಲ್ಲಿ ರೇಣುಕನ ಹೆಸರು ರೇವಣಸಿದ್ಧನಾಗಿತ್ತು ಎಂದು ಸುಪ್ರಭೇದಾಗಮವು ತಿಳಿಸುತ್ತದೆ. ಹಾಗಾಗಿ ಕಲಿಯುಗದ ರೇಣುಕನೇ ರೇವಣಸಿದ್ಧನಾಗಿ ಹೆಸರಾಗಿದ್ದಾನೆ.

ರೇಣುಕನು ರೇವಣಸಿದ್ದ ಎಂದು ಪರಿಚಿತನಾಗಿರುವ ವ್ಯಕ್ತಿಗಿಂತ ಭಿನ್ನವಾದರೆ, ಪುರಾಣಗಳೆಲ್ಲ ಒಬ್ಬನೇ ವ್ಯಕ್ತಿಗೆ ರೇಣುಕ ಮತ್ತು ರೇವಣಸಿದ್ದ ಎಂದು ಎರಡು ಹೆಸರುಗಳನ್ನು ಬಳಸಿರುವುದೇಕೆ? ಮೇಲೆ ಕಾಣಿಸಿರುವ ಅವರದೇ ಆಧಾರಗಳು ರೇಣುಕ -ರೇವಣಸಿದ್ದ ಬೇರೆ ಬೇರೆ ವ್ಯಕ್ತಿಗಳೆಂದು ರುಜುವಾತುಗೊಳಿಸಿಲ್ಲ. ವಾಸ್ತವವಾಗಿ, ಅವರ ಆಧಾರವು ಆ ಎರಡು ಹೆಸರುಗಳೂ ಒಬ್ಬ ವ್ಯಕ್ತಿಯವೇ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ.

೨. ರೇಣುಕನು ನಮ್ಮಂತೆಯೇ ಮನುಷ್ಯನೇ? ಅಥವಾ ದೇವರೇ? ಅಥವಾ ದೈವಾಂಶ ಸಂಭೂತನೆ?

ಎಲ್ಲ ಪುರಾಣಗಳು ಮತ್ತು ಸಿದ್ಧಾಂತ ಶಿಖಾಮಣಿಯು ರೇವಣಸಿದ್ದನನ್ನು ದೇವರು ಅಥವಾ ದೈವಾಂಶ ಸಂಭೂತನೆಂದು ವರ್ಣಿಸುತ್ತವೆ. ಹಾಗಾದರೆ, ರೇವಣಸಿದ್ಧನಿಗೆ ಸಂಬಂಧಿಸಿದ ಹದಿನೇಳು ಶಾಸನಗಳಲ್ಲಿ ಕೆಳಗಿನ ಐದು ಶಾಸನಗಳಲ್ಲಿ (ಚನ್ನಮಲ್ಲಿಕಾರ್ಜುನ, ೧೯೫೮) ಉಕ್ತವಾಗಿರುವ ರೇವಣಸಿದ್ದನು ಯಾರು? ಅವನು ಚಾರಿತ್ರಿಕ ವ್ಯಕ್ತಿಯೋ, ಅಥವಾ ರೇಣುಕ ಎಂಬ ದೇವರೋ ಅಥವಾ ದೈವಾಂಶ ಸಂಭೂತನೋ ಎಂಬುದನ್ನು ಪಂಚಾಚಾರ್ಯರು ಸ್ಪಷ್ಟಪಡಿಸಬೇಕು.

(ಅ) ಸಿರಿವಾಳ ಸಿದ್ಧಲಿಂಗೇಶ್ವರ ದೇವಾಲಯ ಶಾಸನ - ಕ್ರಿ.ಶ. ೧೧೮೭
(ಆ) ಬೈರಟ್ಟಿ ಶಾಸನ - ಕ್ರಿ.ಶ. ೧೧೭೬
(ಇ) ಚೌಡದಾನಪುರ ಶಾಸನ - ಕ್ರಿ.ಶ. ೧೧೯೩
(ಈ) ಅಮ್ಮೇರಹಳ್ಳಿ ಭೀಮೇಶ್ವರ ಶಾಸನ - ೧೧೯೭ ಮತ್ತು
(ಉ) ಗೊಡಚಿ ವೀರಭದ್ರ ದೇವಾಲಯ ಶಾಸನ (ಕ್ರಿ.ಶ. ೧೫೧೩)

ಮೇಲೆ ಹೇಳಿದಂತೆ, ರೇವಣಸಿದ್ಧನಿಗೆ ಸಂಬಂಧಿಸಿದ ಹದಿನೇಳು ಶಾಸನಗಳಿವೆ ಎನ್ನಲಾಗಿದೆ. ಇವುಗಳಲ್ಲಿ ನಾಲ್ಕು ಶಾಸನಗಳು ತುಂಬ ಕರಾರುವಾಕ್ಕಾಗಿವೆ. (ಕೌಂಟೆ, ೨೦೧೭, ಪು. ೯೫) ಈ ಎಲ್ಲ ಶಾಸನಗಳೂ ಹನ್ನೆರಡನೆಯ ಶತಮಾನದ ಕಾಲಕ್ಕೆ ಸಂಬಂಧಿಸಿದವು. ಅವು ರೇವಣಸಿದ್ದನು ಹನ್ನೆರಡನೆಯ ಶತಮಾನದಲ್ಲಿದ್ದವನೆಂಬುದಕ್ಕೆ ಸಾಕ್ಷಿಯಾಗಿವೆ. ಅವನು ಆ ಕಾಲದ ಒಬ್ಬ ಪ್ರಮುಖ ವ್ಯಕ್ತಿಯಾಗಿದ್ದನೆಂದೂ ಆ ಶಾಸನಗಳಿಂದ ತಿಳಿದು ಬರುತ್ತದೆ. ಮೇಲೆ ಉಲ್ಲೇಖಿಸಿದ ಸಮೃದ್ಧ ಸಾಹಿತ್ಯವೂ ರೇವಣಸಿದ್ಧನ ಮಹತ್ವವನ್ನು ಮುಕ್ತವಾಗಿ ಹೇಳುತ್ತದೆ.

ರೇಣುಕನು ಒಬ್ಬ ದೇವರೆಂದಾದರೆ, ದೇವರೇ ತನ್ನ ಹೆಸರಿನಲ್ಲಿ ಶಾಸನವನ್ನು ಬರೆಸಿದ ಬಗೆಗೆ ಇಡೀ ಜಗತ್ತಿನಲ್ಲಿ ಒಂದು ನಿದರ್ಶನವೂ ಇಲ್ಲವೆಂಬುದನ್ನು ನಾವು ಗಮನಿಸಬೇಕು. ಸಾಮಾನ್ಯವಾಗಿ ಶಾಸನಗಳು ದೊಡ್ಡ ಘಟನೆಗಳು ಅಥವಾ ಒಬ್ಬ ಶ್ರೇಷ್ಠ ವ್ಯಕ್ತಿಯ ಸಾಧನೆಗಳನ್ನು ದಾಖಲಿಸುತ್ತವೆ. ಅಷ್ಟಕ್ಕೂ ಶಾಸನ ಎನ್ನುವುದು ಶಿಲೆಯ ಮೇಲಿನ ಒಂದು ಮಾನವ ದಾಖಲೆ ಎಂದು ಬೇರೆ ಹೇಳಬೇಕಾಗಿಲ್ಲ. ಏನೇ ಇರಲಿ, ನಾನಾ ಶೈವಪುರಾಣಗಳಿಂದ ನಮಗೆ ದೊರೆಯುವ ಸರಳ ಉತ್ತರವೆಂದರೆ, ರೇಣುಕನು ಎಲ್ಲರಂತೆ ಒಬ್ಬ ವ್ಯಕ್ತಿಯಾಗಿದ್ದ ಎನ್ನುವುದು. ಆದರೆ ಪಂಚಾಚಾರ್ಯರು ಉದ್ದೇಶಪೂರ್ವಕವಾಗಿ ಚರಿತ್ರೆಯನ್ನು ಲೇವಡಿಗೆ ಈಡುಮಾಡುತ್ತಿದ್ದಾರೆ.

ವಿಶ್ವವಿದ್ಯಾಲಯದ ಪ್ರಾಧ್ಯಾಪಕರೂ, ವೀರಶೈವ ಪಂಥದ ಪ್ರಸಿದ್ದ ಸಂಶೋಧಕರೂ ಆಗಿದ್ದ ಡಾ. ಎಸ್. ವಿದ್ಯಾಶಂಕರ ಅವರು, ತಮ್ಮ 'ರೇವಣಸಿದ್ದ' ಎಂಬ ಕಿರುಪುಸ್ತಿಕೆಯಲ್ಲಿ ಬಹಳ ಕಾಲದಿಂದ ನಾನು ರೇವಣಸಿದ್ಧನ ಬಗೆಗೆ ಅಧ್ಯಯನ ಮಾಡುತ್ತಿದ್ದೇನೆ. ರೇವಣಸಿದ್ಧನ ಜೀವನ ಸೋಜಿಗದ ಪವಾಡಗಳಿಂದ ತುಂಬಿಕೊಂಡಿದೆ” ಎಂದಿದ್ದಾರೆ. “ಹರಿಹರನು ತನ್ನ `ರೇವಣಸಿದ್ದ ರಗಳೆ'ಯಲ್ಲಿ ರೇವಣಸಿದ್ದನು ಏಳುನೂರು ವರ್ಷಗಳ ಕಾಲ ಪ್ರಜ್ಞಾವಸ್ಥೆಯಲ್ಲೂ, ಏಳು ನೂರು ವರ್ಷಗಳ ಕಾಲ ಅಪ್ರಜ್ಞಾವಸ್ಥೆಯಲ್ಲೂ ಬದುಕಿದ್ದಾನೆಂದು ಹೇಳುತ್ತಾನೆ. ನಂತರದ ವೀರಶೈವ ಗ್ರಂಥಗಳೂ ಅದನ್ನೇ ಕುರುಡಾಗಿ ಹೇಳುತ್ತ ಬಂದಿವೆ” ಎಂದಿದ್ದಾರೆ. (ಅದೇ ಪೀಠಿಕೆಯ ಒಂದನೆಯ ಪುಟ), “ರೇವಣಸಿದ್ಧನ ಬಗೆಗೆ ವಿವಾದಾಂಶಗಳಿವೆ. ರೇಣುಕನು ಪಂಚಾಚಾರ್ಯರಲ್ಲಿ ಒಬ್ಬನಾದ ಪುಣ್ಯಪುರುಷ. ಅವನು ರೇವಣಸಿದ್ಧನಿಗಿಂತ ಭಿನ್ನ. ಬಹುಶಃ ಅವನು ಬಸವಣ್ಣ ಮತ್ತು ಶರಣರಿಗಿಂತ ಮುಂಚೆ ಬದುಕಿರಬೇಕು. ಹರಿಹರನು ರೇಣುಕ ಮತ್ತು ರೇವಣಸಿದ್ದರು ಇಬ್ಬರನ್ನು ಒಬ್ಬನೇ ಎಂದು ಚಿತ್ರಿಸಿರುವುದು ವಿವಾದಕ್ಕೆ ಮೂಲಕಾರಣವಾಗಿದೆ. ಹಾಗಿದ್ದರೆ, ನಂತರದ ಗ್ರಂಥಕರ್ತರು ಆ ದೋಷವನ್ನು ಸರಿಪಡಿಸಬೇಕಾಗಿತ್ತು ಎಂಬ ವಾದವಿದೆ. ನಾನು ಈ ಕೃತಿಯನ್ನು ಬರೆದಿದ್ದೇನೆಂಬ ಕೇವಲ ಕಾರಣಕ್ಕೆ ನಾನು ರೇವಣಸಿದ್ಧನ ಜೀವನದ ಎಲ್ಲ ಘಟನೆಗಳನ್ನೂ ಒಪ್ಪಿಕೊಂಡಿದ್ದೇನೆ ಎಂದು ಅರ್ಥವಲ್ಲ. ಇಂದಿಗೂ ಅವನ ಜೀವನದ ಬಗೆಗೆ ನನಗೆ ತೀವ್ರವಾದ ಸಂಶಯಗಳಿವೆ” ಎಂದಿದ್ದಾರೆ. (ಅದೇ ಪೀಠಿಕೆಯ ೩ನೆಯ ಪುಟ)

ಇನ್ನೋರ್ವ ವೀರಶೈವ ಗ್ರಂಥಕರ್ತರು, ಕರ್ನಾಟಕ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶರೂ ಆಗಿದ್ದ ಶ್ರೀ ಟಿ.ಎನ್. ಮಲ್ಲಪ್ಪನವರು. ಚನ್ನಮಲ್ಲಿಕಾರ್ಜುನರ 'ರೇವಣಸಿದ್ದರು' ಗ್ರಂಥಕ್ಕೆ ಅವರು ಬರೆದಿರುವ ವಿಸ್ತಾರವಾದ ಪ್ರಸ್ತಾವನೆಯಲ್ಲಿ “ವೀರಶೈವ ಧರ್ಮದ ಸುಧಾರಣೆಯ ಸಂದರ್ಭದಲ್ಲಿ, ಬಸವ ಮತ್ತು ಅವನ ಶರಣರು ಮತ್ತು ರೇಣುಕ ಮತ್ತು ಅವರ ಆಚಾರ್ಯರ ಬಗೆಗೆ ಒಮ್ಮೆ ನಿರ್ಧಾರವಾಯಿತೆಂದರೆ, ವೀರಶೈವ ಧರ್ಮದ ಮೂಲಕ್ಕೆ ಸಂಬಂಧಿಸಿದಂತೆ ರೇಣುಕ ಮತ್ತು ಅವನ ಆಚಾರ್ಯರನ್ನು ಅಂತರ್‌ಸಂಬಂಧಿಸುವ ಅಗತ್ಯವೇ ಬೀಳುವುದಿಲ್ಲ. ಒಮ್ಮೆ ಆ ವಿಷಯ ಸ್ಪಷ್ಟಗೊಂಡರೆ, ಅದರ ಸುಧಾರಣೆಗೆ ಕಾರಣರಾದವರ ಕಾಲವನ್ನು ನಿಷ್ಪಕ್ಷಪಾತವಾಗಿ ನಿರ್ಧರಿಸಬಹುದು. ಬಸವಣ್ಣನ ಕಾಲವನ್ನು ಅವನ ಸಮಕಾಲೀನನಾದ ಬಿಜ್ಜಳನ ಕಾಲದಿಂದ ನಿರ್ಧರಿಸಬಹುದು. ಅದೇ ರೀತಿ, ಹರಿಹರನ ರಗಳೆಯಲ್ಲಿ, ಸಂಸ್ಕೃತದ ರೇಣುಕ ವಿಜಯಮ್ ಮತ್ತು ಇತರ ಗ್ರಂಥಗಳಲ್ಲಿ ಹೇಳಿರುವಂತೆ ರೇಣುಕಾಚಾರ್ಯನು ಬಿಜ್ಜಳನನ್ನು ಭೇಟಿಮಾಡಿದ್ದ ಎಂದರೆ ಅವನು ಬಿಜ್ಜಳನ ಸಮಕಾಲೀನನೇ ಆಗುತ್ತಾನೆ. ಇದು ಸಿರಿಯಾಳದ ಶಾಸನದಲ್ಲೂ ದೃಢಪಟ್ಟಿದೆ” ಎಂದಿದ್ದಾರೆ (ಪು. ೧೧). ಈ ಮೇಲ್ಕಂಡ ಸಂಗತಿಗಳ ನಿರೂಪಣೆಯಿಂದ ರೇಣುಕ ಮತ್ತು ರೇವಣಸಿದ್ದ ಇಬ್ಬರೂ ಒಬ್ಬರೇ ಎನ್ನುವುದು ಸ್ಪಷ್ಟವಾಗುತ್ತದೆ. ರೇಣುಕ ಎನ್ನುವುದು ಪುರಾಣಗಳ ಒಂದು ಕಾಲ್ಪನಿಕ ಪಾತ್ರ ಅಷ್ಟೆ ಆದರೆ ರೇವಣಸಿದ್ದನು ವಾಸ್ತವವಾಗಿ ಚಾರಿತ್ರಿಕ ವ್ಯಕ್ತಿ, ಮಾನವ, ಇದನ್ನು ಮೇಲೆ ಉಲ್ಲೇಖಿಸಿದ ಶಾಸನಗಳೇ ಹೇಳುತ್ತವೆ. ಆದರೆ ವೀರಶೈವ ಪುರಾಣಗಳು ಮುಗ್ಧ ಸಾರ್ವಜನಿಕರನ್ನು ಮೂರ್ಖರನ್ನಾಗಿಸುವ ಉದ್ದೇಶದಿಂದ ಚರಿತ್ರೆಯನ್ನು ದುರುಪಯೋಗ ಮಾಡಿಕೊಂಡು ಜನರ ದಾರಿ ತಪ್ಪಿಸಿವೆ.

೩. ರೇಣುಕನು ಕೊಲ್ಲಿಪಾಕಿಯ ಕಲ್ಲಿನ ಸೋಮೇಶ್ವರ ಲಿಂಗದಿಂದ ಉದ್ಭವಿಸಿದನೆ?

ಮಾನವಜೀವಿ ಅಷ್ಟೇ ಅಲ್ಲ, ಯಾವ ಜೀವಿಯೂ ಕಲ್ಲಿನಿಂದ ಹುಟ್ಟುವುದಿಲ್ಲ. ಜನನಕ್ಕೆ ತಂದೆ-ತಾಯಿಗಳು ಬೇಕಾಗುತ್ತದೆ. ಆದರೆ ಪಂಚಾಚಾರ್ಯರು ರೇಣುಕನು ಕೊಲ್ಲಿಪಾಕಿಯ ಕಲ್ಲಿನಿಂದ ಉದ್ಭವಿಸಿದನೆಂದೇ ಹೇಳಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ರೇಣುಕನು ಮಾನವಜೀವಿಯಲ್ಲವೆಂದೂ ಸಮರ್ಥಿಸುತ್ತಾರೆ. ಅವನು ಕೈಲಾಸದಲ್ಲಿ ಒಬ್ಬ ಪ್ರಮಥನಾಗಿದ್ದವನು ಮತ್ತು ದೈವಾಂಶ ಸಂಭೂತನು ಎಂದು ಪ್ರತಿಪಾದಿಸುತ್ತಾರೆ.

ಹಾಗೆಯೇ ಪುರಾಣಗಳ ಪ್ರಕಾರ, ಶಿವನ ಲೋಕದ ನಂದಿಯು ಇನ್ನೋರ್ವ ದೈವಾಂಶ ಸಂಭೂತನಾಗಿ ಮಾದಲಾಂಬಿಕೆಯ ಉದರದಿಂದ ಬಸವಣ್ಣನಾಗಿ ಹುಟ್ಟುತ್ತಾನೆ. ದೇವತೆ ಪಾರ್ವತಿಯ ಸಾತ್ವಿಕ ಕಳೆ ಓರ್ವ ತಾಯಿಯ ಗರ್ಭದಿಂದ ಅಕ್ಕಮಹಾದೇವಿಯಾಗಿ ಜನಿಸುತ್ತದೆ. ತಾಯಿ ಗರ್ಭಧರಿಸದೆಯೇ, ಏಸುಕ್ರಿಸ್ತನು ಮೇರಿಯ ಗರ್ಭದಿಂದ ಒಂದು ಪರಿಶುದ್ದ ಪರಿಕಲ್ಪನೆಯಾಗಿ ಹುಟ್ಟುತ್ತಾನೆ. ಹೀಗಿರುವಾಗ ರೇಣುಕನ ವಿಶೇಷವೇನು?

ರೇಣುಕನು ಕಲ್ಲು ಲಿಂಗದಲ್ಲಿ ಹುಟ್ಟಿದ್ದಾದರೂ ಏಕೆ? ವೀರಶೈವರ ಪವಿತ್ರ ಗ್ರಂಥ ಸಿದ್ಧಾಂತ ಶಿಖಾಮಣಿಯೆ ಅದಕ್ಕೆ ಹೀಗೆ ವಿವರಣೆ ನೀಡುತ್ತದೆ; “ಗಣ ಸಭೆಯಲ್ಲಿ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಕ್ಕಾಗಿ ಶಿವನು ಶಾಪನೀಡಿ, ಭೂಲೋಕದಲ್ಲಿ ಒಬ್ಬ ಸಾಮಾನ್ಯ ಮನುಷ್ಯನಾಗಿ ಹುಟ್ಟಬೇಕೆಂದು ಹೇಳುತ್ತಾನೆ. ಆಗ ಭೂಲೋಕದಲ್ಲಿ 'ಅಯೋನಿಜ'ನಾಗಿ ಹುಟ್ಟುವಂತೆ ತನ್ನನ್ನು ಹರಸಬೇಕೆಂದು ರೇಣುಕನು ಶಿವನಲ್ಲಿ ಬೇಡಿಕೊಳ್ಳುತ್ತಾನೆ. ಶಿವನು ಕರುಣೆಯಿಂದ ಒಪ್ಪುತ್ತಾನೆ. ಆದ್ದರಿಂದ ಅವನು ಯೋನಿಜನಾಗಿ (ಒಬ್ಬ ಸ್ತ್ರೀಯ ಯೋನಿದ್ವಾರದಿಂದ ಹುಟ್ಟುವುದು) ಹುಟ್ಟದೆ, ಅಯೋನಿಜನಾಗಿ ಹುಟ್ಟಬೇಕಾಗಿತ್ತು. ಅದರಂತೆ ಅವನು ಕೊಲ್ಲಿಪಾಕಿಯ ಶಿಲಾಮೂರ್ತಿಯಿಂದ ಉದ್ಭವಿಸಿದ.

೪. ರೇಣುಕನು ದ್ವಾಪರಯುಗದಿಂದ (ರೇಣುಕನಾಗಿ) ಕಲಿಯುಗದವರೆಗೆ (ರೇವಣಸಿದ್ಧನಾಗಿ) ಬದುಕಿದ್ದನೆ?

ಸಿದ್ಧಾಂತ ಶಿಖಾಮಣಿಯಲ್ಲಿ ಹೇಳಲಾಗಿರುವ ಸಂಗತಿಗಳು ರೇಣುಕನು ತ್ರೇತಾಯುಗದಿಂದ ಕಲಿಯುಗದವರೆಗೆ (ಇಪ್ಪತ್ತೊಂದು ಲಕ್ಷ ಅರವತ್ತೈದು ಸಾವಿರ (೨೧.೬೫ ಲಕ್ಷ) ವರ್ಷಗಳ ಕಾಲ ಬದುಕಿದ್ದನೆಂದು ತಿಳಿಸುತ್ತವೆ. ತ್ರೇತಾಯುಗದಲ್ಲಿ ರೇಣುಕನು ರಾಮಾಯಣ ಕಾಲದ ಅಗಸ್ಯನಿಗೆ ಷಟ್‌ಸ್ಥಲವನ್ನು ಬೋಧಿಸುತ್ತಾನೆ. ಅಗಸ್ಯನಿಗೆ ಬೋಧಿಸಿದ ನಂತರ ಅವನು ಇದ್ದಕ್ಕಿದ್ದಂತೆ ಮಾಯವಾಗಿ, ಶ್ರೀಲಂಕಾದಲ್ಲಿ ವಿಭೀಷಣನೆದುರಿಗೆ ಕಾಣಿಸಿಕೊಳ್ಳುತ್ತಾನೆ. ವಿಭೀಷಣನ ಸೋದರ ರಾವಣನು ಅಷ್ಟರಲ್ಲಾಗಲೇ ಸ್ಥಾಪಿಸಿದ್ದ ಆರು ಕೋಟಿ ಲಿಂಗಗಳ ಜೊತೆಗೆ ಮತ್ತೆ ಮೂರು ಕೋಟಿ (ಸ್ಥಾವರ) ಲಿಂಗಗಳ ಪ್ರತಿಷ್ಠಾಪನೆಯಾಗುವಂತೆ ಮಾಡುತ್ತಾನೆ.

ದ್ವಾಪರಯುಗ ಬರುವುದು ಕಲಿಯುಗದ ನಂತರ, ರಾಮಾಯಣದಲ್ಲಿ ಬರುವಂತೆ ಅಗಸ್ಯ ಮತ್ತು ವಿಭೀಷಣರು ಬದುಕಿದ್ದು ತ್ರೇತಾಯುಗದಲ್ಲಿ, ರೇಣುಕನು ಅಗಸ್ಯನಿಗೆ ಏಕೋತ್ತರ ಶತಸ್ಥಲವನ್ನು ಬೋಧಿಸಿದನೆಂದು “ಸಿದ್ಧಾಂತ ಶಿಖಾಮಣಿ” ಹೇಳುತ್ತದೆ. ತ್ರೇತಾಯುಗ ಮತ್ತು ದ್ವಾಪರ ಯುಗಗಳ ನಡುವಿನ ಅಂತರವು ಹದಿಮೂರು ಲಕ್ಷ ವರ್ಷಗಳು. ಅದರ ಹಿಂದಿನ ತ್ರೇತಾಯುಗದಲ್ಲಿ ರೇಣುಕನ ಅಸ್ತಿತ್ವವೇ ಇಲ್ಲದಿದ್ದಾಗ (ಆಗ ಇದ್ದವನು ಏಕವಕ್ರ) ಅವನು ಸಿದ್ಧಾಂತ ಶಿಖಾಮಣಿ ಹೇಳುವಂತೆ ಅಗಸ್ಯ ಮತ್ತು ವಿಭೀಷಣರಿಗೆ ಹೇಗೆ ಬೋಧಿಸಲು ಸಾಧ್ಯ? ಕಲ್ಪನೆಗೂ ಒಂದು ಮಿತಿಯಿದೆ! ಆದರೆ ಆ ಗ್ರಂಥದ ಹೇಳಿಕೆ ಕಲ್ಪನೆ ಮತ್ತು ತರ್ಕಗಳ ಮಿತಿಗಳನ್ನು ದಾಟಿ ನಿಲ್ಲುತ್ತದೆ. ಇದು ಅಸಮರ್ಥನೀಯ ಹೇಳಿಕೆ.

೫. ರೇಣುಕನು ೧೨ನೆಯ ಶತಮಾನದ ರಾಜರುಗಳಿಗೆ ಮಂತ್ರ ಖಡ್ಗವನ್ನು ನೀಡಿದನೆ?

ರೇಣುಕನು ಶಂಕರಾಚಾರ್ಯರಿಗೆ (೮ನೆಯ ಶತಮಾನ) ಚಂದ್ರಮೌಳೀಶ್ವರ ಲಿಂಗವನ್ನು ಕೊಟ್ಟನೆಂದೂ ಚಾಲುಕ್ಯ ಚಕ್ರವರ್ತಿ ವಿಕ್ರಮಾದಿತ್ಯ (೧೧ನೆಯ ಶತಮಾನ), ರಾಜ ರಾಜೇಂದ್ರ ಚೋಳ ಮತ್ತು ಬಿಜ್ಜಳ (೧೨ನೆಯ ಶತಮಾನದ ಅಂತ್ಯ) ಇವರುಗಳಿಗೆ ಮಂತ್ರಖಡ್ಗವನ್ನು ಕೊಟ್ಟನೆಂದೂ ಹೇಳಲಾಗಿದೆ. ೮ನೆಯ ಶತಮಾನ ಮತ್ತು ೧೨ನೆಯ ಶತಮಾನದ ಮಧ್ಯೆ ನೂರಾರು ವರ್ಷಗಳ ಅಂತರವಿದೆ. ಈ ಘಟನೆಗಳೆಲ್ಲಾ ನಡೆದದ್ದು ಕಲಿಯುಗದಲ್ಲಿ ಶ್ರೇತಾಯುಗದ ರೇಣುಕನು ಕಲಿಯುಗದಲ್ಲೂ ಮುಂದುವರೆದಿದ್ದಾನೆಂದರೆ, ಅವನು ೨೧ ಲಕ್ಷದ ಅರವತ್ತೈದು ಸಾವಿರ ವರ್ಷಗಳ ಕಾಲ ಬದುಕಿದ್ದನೆಂದಾಯಿತು. ಹೀಗಿರುವಾಗ ನಾವು ಈ ಅಸಂಗತವನ್ನು ಒಪ್ಪಿಕೊಳ್ಳುವುದು ಹೇಗೆ? ಈ ಬಗೆಗೆ ಪಂಚಾಚಾರ್ಯರು ಮಾರ್ಗದರ್ಶನ ಮಾಡುತ್ತಾರೆಯೆ?

ಚಾರಿತ್ರಿಕ ಪ್ರಸ್ತುತಿಯಲ್ಲಿ ಇಂತಹ ಪ್ರತಿಯೊಂದು ಹೇಳಿಕೆಯೂ ಪ್ರಶ್ನಾರ್ಹವಾಗುತ್ತದೆ. ವಿಕ್ರಮಾದಿತ್ಯ ಮತ್ತು ಬಿಜ್ಜಳನ ನಡುವಿನ ಕಾಲಾವಧಿಯ ಅಂತರವೇ ನೂರು ವರ್ಷಗಳು. ರೇವಣಸಿದ್ದನು ಬಿಜ್ಜಳ, ರಾಜೇಂದ್ರಚೋಳ ಮತ್ತು ಪಂಡಿತಾರಾಧ್ಯನ ಹೆಣ್ಣುಮಕ್ಕಳನ್ನು ಮದುವೆಯಾದನೆಂದೂ ದಾಖಲಿಸಲಾಗಿದೆ. ಆ ಮೂವರೂ ೧೨ನೆಯ ಶತಮಾನಕ್ಕೆ ಸೇರಿದವರು. ಹಾಗೆಯೇ ಪಂಡಿತಾರಾಧ್ಯನು ಪಂಚಾಚಾರ್ಯರಲ್ಲಿ ಒಬ್ಬ ಆಚಾರ್ಯನೆಂದೂ ತೋರಿಸಲಾಗಿದೆ. ಅಂದರೆ ರೇಣುಕನು ಪಂಡಿತಾರಾಧ್ಯನ ಅಳಿಯನಾದಂತಾಯಿತು. ಪಂಡಿತಾರಾಧ್ಯನು ಬಸವಣ್ಣನವರ ಬಗೆಗೆ ಅತ್ಯಂತ ಅಭಿಮಾನ ಇಟ್ಟುಕೊಂಡಿದ್ದ, ಈ ಎಲ್ಲ ವಿವಾದಗಳ ಬಗೆಗೆ ಸಾಕಷ್ಟು ಸಾಹಿತ್ಯವಿದೆ. ಇಲ್ಲಿರುವ ಅವಕಾಶದ ಮಿತಿಯಲ್ಲಿ ಆ ಎಲ್ಲ ವಿವರಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ಆಸಕ್ತ ಓದುಗರು ಸಾಖ್ರೆ (೧೯೪೨), ವಿದ್ಯಾಶಂಕರ (೨೦೦೮), ಚಿದಾನಂದಮೂರ್ತಿ (೨೦೧೫) ಮತ್ತು ಮೇಲೆ ಹೇಳಿರುವ ಪುರಾಣಗಳನ್ನು ಅವಲೋಕಿಸಬಹುದು.

೬. ರೇಣುಕನು ಶಂಕರಾಚಾರ್ಯರಿಗೆ ಚಂದ್ರಮೌಳೇಶ್ವರ ಲಿಂಗವನ್ನು ಕೊಟ್ಟನೆ?

ಚಂದ್ರಮೌಳೀಶ್ವರ ಶೃಂಗೇರಿ, ದ್ವಾರಕ, ಪುರಿ ಮತ್ತು ಬದರಿ ಶಂಕರ ಮಠಗಳಲ್ಲಿ ಪೂಜಿಸಲ್ಪಡುತ್ತಿರುವ ಲಿಂಗ, ಈ ನಾಲ್ಕು ಮಠಗಳಲ್ಲಿ ರೇವಣಸಿದ್ದ ಅಥವಾ ರೇಣುಕ ಶೃಂಗೇರಿ ಮಠಕ್ಕೆ ಶಿವಲಿಂಗ ಕೊಟ್ಟ ದಾಖಲೆಯಿಲ್ಲ. ಕಾಶಿ ಲಕ್ಷಣಶಾಸ್ತಿ ಎಂಬುವರು ೧೭೩೫ರಲ್ಲಿ ಬರೆದು, ೧೯೬೬ರಲ್ಲಿ ಶೃಂಗೇರಿ ಮಠದಿಂದ ಪ್ರಕಟಗೊಂಡಿರುವ 'ಗುರುವಂಶ ಕಾವ್ಯ'ದ ೪೧ನೆಯ ಪುಟದಲ್ಲಿ ವಿದ್ಯಾರಣ್ಯರ ಆಶೀರ್ವಾದ ಪಡೆಯಲು ಮತ್ತು ಚಂದ್ರಮೌಳೀಶ್ವರ ಲಿಂಗವನ್ನು ಪೂಜಿಸಲು ವಿಜಯನಗರದ ರಾಜ ಹರಿಹರನಿಗೆ ಸಲಹೆ ಮಾಡಿದನೆಂದು ಹೇಳಲಾಗಿದೆ. ಇದು ಚಂದ್ರಮೌಳೇಶ್ವರ ಲಿಂಗವು ೧೨ನೆಯ ಶತಮಾನಕ್ಕಿಂತ ಮುಂಚೆಯೇ ಇತ್ತೆಂಬುದನ್ನು ತಿಳಿಸುತ್ತದೆ.

ಬದರಿ, ದ್ವಾರಕ, ಪುರಿ ಮತ್ತು ಶೃಂಗೇರಿಗಳಲ್ಲಿರುವ ನಾಲ್ಕೂ ಶಂಕರ ಮಠಗಳಲ್ಲಿ ಸ್ಪಟಿಕ ಚಂದ್ರಮೌಳೇಶ್ವರ ಲಿಂಗಗಳು ಇವೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ರೇಣುಕನು ಶಂಕರಾಚಾರ್ಯರಿಗೆ ನಾಲ್ಕು ಲಿಂಗಗಳನ್ನು ಕೊಟ್ಟನೆಂದು 'ಸಿದ್ಧಾಂತ ಶಿಖಾಮಣಿ'ಯೇನೂ ಹೇಳುವುದಿಲ್ಲ. ಆದರೆ ಕೆಳದಿ ರಾಜ್ಯದ ಚರಿತ್ರೆಯಲ್ಲಿ, ಕೆಳದಿಯ ಎರಡನೆಯ ರಾಜನಾದ ಸದಾಶಿವನಾಯಕನು ಬಾಳೆಹಳ್ಳಿ ಮಠಕ್ಕೆ ಕೊಟ್ಟಿದ್ದ ನಾನಾ ಬೆಲೆ ಬಾಳುವ ಕೊಡುಗೆಗಳು ಮತ್ತು ಚಂದ್ರಮೌಳೇಶ್ವರ ಲಿಂಗವನ್ನು ಹಿಂದಕ್ಕೆ ಪಡೆದು ನಂತರ ಶೃಂಗೇರಿ ಮಠಕ್ಕೆ ಸಲ್ಲಿಸಿದನೆಂದು ದಾಖಲಾಗಿದೆ. ಅದು ಬಾಳೆಹಳ್ಳಿ ಮಠದ ಮಠಪತಿ ಎಸಗಿದ ಕೆಲವು ತಪ್ಪುಗಳಿಗೆ ರಾಜನು ನೀಡಿದ ಶಿಕ್ಷೆಯಾಗಿತ್ತು (ಜೈನಕೆರೆ - ಕೆಳದಿ ಅರಸರ ಯಶೋಗಾಥೆ).

ಚರಿತ್ರೆಯ ಈ ವಾಸ್ತವ ಸಂಗತಿಗೆ ಸಿದ್ಧಾಂತ ಶಿಖಾಮಣಿಯಲ್ಲಿ ಮಸಿ ಬಳಿಯಲಾಗಿದೆ. ಈ ಅಂಶವೇ ಸಿದ್ಧಾಂತ ಶಿಖಾಮಣಿಯು ೧೫ನೆಯ ಶತಮಾನದ ನಂತರ ಬರೆಯಲ್ಪಟ್ಟಿದ್ದು ಎಂಬುದಕ್ಕೆ ಸಾಕ್ಷಿಯಾಗುತ್ತದೆ.

ಮೇಲೆ ಹೇಳಿದಂತೆ, ಬಿಜ್ಜಳ, ರಾಜೇಂದ್ರ ಚೋಳ, ಪಂಡಿತಾರಾಧ್ಯ ಇವರೆಲ್ಲ ೧೨ನೆಯ ಶತಮಾನದವರು. ಜೀವನ ಚರಿತ್ರೆಗಳು ಅಥವಾ ಪುರಾಣಗಳ ಪ್ರಕಾರವೇ ರೇವಣಸಿದ್ಧನೂ ಸಹ ಆ ಶತಮಾನದಲ್ಲೇ ಇದ್ದವನು. ಬಸವಣ್ಣನವರೂ ಅದೇ ಶತಮಾನದವರೆಂಬುದು.ಚಾರಿತ್ರಿಕ ಸತ್ಯಸಂಗತಿ. ಈ ಅಂಶಗಳೆಲ್ಲ ಚರಿತ್ರೆಯಲ್ಲಿವೆ; ಪುರಾಣಗಳಲ್ಲಿಲ್ಲ. ಇದರಿಂದ ರೇವಣಸಿದ್ದನು ೧೨ನೆಯ ಶತಮಾನದಲ್ಲಿದ್ದ ಓರ್ವ ಸಿದ್ಧನೆಂದೂ, ದೇವರಲ್ಲವೆಂದೂ ಸ್ಪಷ್ಟವಾಗಿ ತಿಳಿದುಬರುತ್ತದೆ.

ಕಟ್ಟುಕಥೆಯ ಎರಡು ಆಗಮಗಳು, ರೇಣುಕನನ್ನು ಕುರಿತ ಹದಿನಾಲ್ಕು ಪುರಾಣಗಳು ಮತ್ತು ಸಿದ್ಧಾಂತ ಶಿಖಾಮಣಿ ಇವೆಲ್ಲ ಕೇವಲ ಕಲ್ಪಿತ ಪುರಾಣ ಸಾಹಿತ್ಯಸೃಷ್ಟಿಗೆ ನಿದರ್ಶನವಾಗಿವೆ. ಪುರಾಣವು ಎಲ್ಲಿ ಮುಗಿಯುತ್ತದೆ. ಇತಿಹಾಸ ಎಲ್ಲಿ ಆರಂಭವಾಗುತ್ತದೆ ಎಂಬುದನ್ನು ಯಾರೂ ಖಚಿತವಾಗಿ ಹೇಳಲಾಗುವುದಿಲ್ಲ. ಇಂತಹ ಕಲಬೆರಕೆಯ ಕೃತಿಗಳು ಸಹಜವಾಗಿಯೇ ಮುಗ್ಧ ಜನಸಮುದಾಯವನ್ನು ದಿಕ್ಕು ತಪ್ಪಿಸುತ್ತವೆ ಎಂದು ಬೇರೆ ಹೇಳಬೇಕಾಗಿಲ್ಲ.

ಇದುವರೆಗಿನ ನಿರೂಪಣೆಯಿಂದ ೧೨ನೆಯ ಶತಮಾನದ ರೇವಣಸಿದ್ದನನ್ನು ವೀರಶೈವ ವಿದ್ವಾಂಸರು ಪೌರಾಣಿಕ ಕಥೆಗಳೊಡನೆ ಬೆಸೆದಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಈ ಕಲ್ಪಿತ ಕಥೆಗಳೇ ಅಂತಿಮ ಸತ್ಯವೆಂದು ಪಂಚಾಚಾರ್ಯರು ತರ್ಕ ಮತ್ತು ಸತ್ಯ ಸಂಗತಿಗಳ ನಿಯಮಗಳಿಗೆ ವಿರುದ್ಧವಾಗಿ ಪ್ರಚಾರ ಮಾಡುತ್ತಿದ್ದಾರೆ; ಸತ್ಯ ಸಂಗತಿ ತಿಳಿಯದವರು ಅದನ್ನು ನಂಬುತ್ತಿದ್ದಾರೆ.
ಚಾರಿತ್ರಿಕ ಸತ್ಯಗಳನ್ನು ಪೌರಾಣಿಕ ಪಾತ್ರಗಳೊಂದಿಗೆ ಬೆರೆಸಿ ತಿರುಚಿರುವುದಕ್ಕೆ ಮುಮ್ಮುಖ ಉದ್ದೇಶವಿದೆ. ಒಂದು ಪಂಚಾಚಾರ್ಯರನ್ನು ಪವಿತ್ರರು, ದಿವ್ಯಪುರುಷರು, ಅಪೌರುಷೇಯರು ಎಂಬಂತೆ ತೋರಿಸುವುದು; ಎರಡು, ಅವರ ಕಾಲವನ್ನು ಯುಗ ಯುಗಗಳ ಹಿಂದಕ್ಕೆ ಒಯ್ದು, ಅವರು ಅತ್ಯಂತ ಪ್ರಾಚೀನರೆಂದು ಕಾಣುವಂತೆ ಮಾಡುವುದು ಮತ್ತು ಮೂರು, ವೀರಶೈವವು ಬಸವಯುಗಕ್ಕಿಂತ ಹಿಂದಿನದು ಎಂದು ಹೇಳಿ, ತಮ್ಮ ಧರ್ಮಕ್ಕೆ ಮೂಲ ಮತ್ತು ಹಿರಿಯ ಸ್ಥಾನದ ಹಕ್ಕು ಸಾಧಿಸುವುದು.

ರೇವಣಸಿದ್ಧನು ೧೨ನೆಯ ಶತಮಾನದ ಪ್ರಸಿದ್ದ ಪಾಶುಪತ ಸಿದ್ದ ಮತ್ತು ಬಸವಣ್ಣನವರ ಸಮಕಾಲೀನ ಎನ್ನುವುದು ಸ್ಪಷ್ಟವಾಗಿದೆ. ಅದು ಐತಿಹಾಸಿಕ ಸತ್ಯ ಸಂಗತಿ. ಈ ವಾಸ್ತವಾಂಶವನ್ನು ಹತ್ತಾರು ಶರಣರ ಅನೇಕ ವಚನಗಳೇ ಖಚಿತಪಡಿಸುತ್ತವೆ. ಅವನು ಯಾವುದೇ ಧರ್ಮವನ್ನು ಸ್ಥಾಪಿಸಿರುವುದು ಎಲ್ಲೂ ತಿಳಿದುಬಂದಿಲ್ಲ. ಸಾಂಪ್ರದಾಯಕ ಶಕ್ತಿಗಳು ಅವನನ್ನು ಪುರಾಣಗಳ ರೇಣುಕನನ್ನಾಗಿ ಮಾಡಿವೆ ಅಷ್ಟೆ.

ಮಹಾದೇವನಾದ ಶಿವನೇ ವೀರಶೈವ ಧರ್ಮವನ್ನು ಸ್ಥಾಪಿಸಿ, ಮೊದಲು ಅದನ್ನು ತನ್ನ ಪತ್ನಿ ಪಾರ್ವತಿ ಮತ್ತು ಪುತ್ರ ಕಾರ್ತಿಕೇಯನಿಗೆ ಬೋಧಿಸಿದನೆಂದು ಸಿದ್ಧಾಂತ ಶಿಖಾಮಣಿಯೇ ಸ್ಪಷ್ಟವಾಗಿ ತಿಳಿಸುತ್ತದೆ, ರೇವಣಸಿದ್ದ ಅಥವಾ ರೇಣುಕನು ವೀರಶೈವದ ಕೇವಲ ಪಾಲಕನಾಗಿದ್ದ (ಪಾಲಿಕಾಃ) ಮತ್ತು ನಿರ್ವಾಹಕನಾಗಿದ್ದ (ನಿರ್ವಾಹಕಾಃ) ಎಂದು ಅದೇ ಹೇಳುತ್ತದೆ.

ಕಟ್ಟಾವೀರಶೈವರಾದ ಡಾ. ಎಂ. ಚಿದಾನಂದಮೂರ್ತಿ ಅವರೇ ರೇವಣ ಸಿದ್ದನೇ ಸಿದ್ಧಾಂತ ಶಿಖಾಮಣಿಯ ರೇಣುಕನೆಂದೂ, ಅವನು ೧೨ನೆಯ ಶತಮಾನದವನೆಂದೂ ಪ್ರತಿಪಾದಿಸಿದ್ದಾರೆ. 'ಸಿದ್ಧಾಂತ ಶಿಖಾಮಣಿ' ಅತ್ಯಂತ ಪ್ರಾಚೀನ ಧರ್ಮಗ್ರಂಥವೆಂದು ಪಂಚಾಚಾರ್ಯರು ಹೇಳಿಕೊಂಡಿದ್ದರೂ, ಅದು ೧೨ನೆಯ ಶತಮಾನಕ್ಕಿಂತ ಮುಂಚೆ ರಚನೆಯಾದುದಲ್ಲ ಎಂಬ ಬಗೆಗೆ ಚಿದಾನಂದಮೂರ್ತಿ ಖಚಿತವಾಗಿದ್ದಾರೆ. ಈ ಅಂಶಗಳ ಆಧಾರದ ಮೇಲೆ ಬಹುತೇಕ ಸಂಶೋಧಕರು (ಉದಾ: ಪ್ರೊ. ಸಾಖೆ (೧೯೪೨) ಚನ್ನಮಲ್ಲಿಕಾರ್ಜುನ (೧೯೫೮), ಚಿದಾನಂದಮೂರ್ತಿ (೨೦೧೫) ಮತ್ತು ಕಲಬುರ್ಗಿ) ಸರ್ವಾನುಮತ ವ್ಯಕ್ತಪಡಿಸಿದ್ದಾರೆ.

ಗ್ರಂಥ ಋಣ:
1) ವೀರಶೈವ ಪಂಚಾಚಾರ್ಯ ಮಿಥ್ಯ ಮತ್ತು ಸತ್ಯ; ಲೇಖಕರು: ಡಾ. ಎಸ್‌. ಎಂ. ಜಾಮದಾರ, ಅನುವಾದಕರು: ಡಾ. ಗೊ. ರು. ಚನ್ನಬಸಪ್ಪ. ೨೦೨೦. Published by: Jagathika Lingayat Mahasabha, No 53 2nd Main Road, 3rd cross, Chakravarrthi Layout, Palace road, Bangalore-560020.

ಪರಿವಿಡಿ (index)
Previous ವೀರಶೈವ ಪಂಚಾಚಾರ್ಯ ಮಿಥ್ಯ ಮತ್ತು ಸತ್ಯ ಮರುಳಾರಾಧ್ಯ Next