ಸ್ವರ ವಚನ ಸಾಹಿತ್ಯ
ಸ್ವರವಚನ ಸಾಹಿತ್ಯವು ೧೨ನೇ ಶತಮಾನದ ಶರಣರ ವಿಶಿಷ್ಟ ಹಾಗೂ ಜನಪ್ರಿಯವಾದ ಸಾಹಿತ್ಯ ಪ್ರಕಾರವಾಗಿರುವುದು. ನಾದಮಾಧುರ್ಯದೊಂದಿಗೆ ಭಾವ, ಅನುಭಾವವನ್ನು ಶರಣರು ಮಧುರವಾಗಿ ಅಭಿವ್ಯಕ್ತಿಸಿರುವರು. ಜನಸಾಮಾನ್ಯನಿಗೆ ಸಾಮಾಜಿಕ ಮೌಲ್ಯಗಳನ್ನು ಕಳಕಳಿಯಿಂದ ಅತಿ ಸಲುಗೆಯಿಂದ ಹೇಳುವ ಸಾಹಿತ್ಯವಾಗಿದೆ. ಪ್ರಾರಂಭದಲ್ಲಿ ಪಲ್ಲವಿ ಇಲ್ಲವೆ ಅನುಪಲ್ಲವಿ, ಆಮೇಲೆ ಕೆಲವು ಪದ್ಯಗಳು, ಕೊನೆಗೆ ಕಡ್ಡಾಯವಾಗಿ ಮುದ್ರಿಕೆ. ಇದು ಈ ಪ್ರಕಾರದ ರೂಪಮುದ್ರೆ, ಸಾಮಾನ್ಯವಾಗಿ ಪ್ರತಿಯೊಂದು ಸ್ವರವಚನದ ತಲೆಯ ಮೇಲೆ ರಾಗ, ತಾಳಗಳ ನಿರ್ದೆಶನವಿರುತ್ತದೆ. ಲಿಂಗಾಯತ ತತ್ವ ಲೋಕನೀತಿ ಇದರ ವಸ್ತುಸಂಪತ್ತು.
“ಸ್ವರವಚನ"ವೆಂಬುದು ಲಿಂಗಾಯತರು ಕನ್ನಡ ಸಾಹಿತ್ಯದಲ್ಲಿ ಬಳಸಿದ ಒಂದು ಹೊಸ ಸಾಹಿತ್ಯಕ ಪರಿಭಾಷೆ, ವಚನಗಳಿಗಿಂತ ಬೇರೆಯಾಗಿ ನಿರ್ದಿಷ್ಟ ತಾಳರಾಗ ಸಮನ್ವಿತವಾಗಿರುವ ಇದನ್ನು 'ಸ್ವರವಚನ'ವೆಂದು, ಕೆಲವೊಮ್ಮೆ 'ಸ್ವರಪದ'ವೆಂದು ಕರೆಯಲಾಗಿದೆ. ಸ್ಥೂಲ ಅರ್ಥದಲ್ಲಿ ಇದನ್ನು 'ಹಾಡುಗಬ್ಬ' ಎಂದೂ ಕರೆಯಬಹುದು. ಕಾವ್ಯಾವಲೋಕನದಲ್ಲಿ 'ಹಾಡುಗಬ್ಬ' ಹೆಸರಿನ ಉಲ್ಲೇಖ ಸಿಗುತ್ತದೆ. ಆದರೆ ಲಿಖಿತ ದಾಖಲೆಗಳನ್ನು ಆಧರಿಸಿ ಹೇಳುವುದಾದರೆ ೧೨ನೇ ಶತಮಾನದಲ್ಲಿ ಹುಟ್ಟಿದ 'ಸ್ವರವಚನ'ಗಳೇ ನಮ್ಮ ನಾಡಿನ ಪ್ರಾಚೀನತಮ ಉಪಲಬ್ಧ ಹಾಡುಗಳು. ಅಂದಿನಿಂದ ಇಂದಿನವರೆಗೂ ಲಿಂಗಾಯತ ಸ್ವರವಚನ ಸಾಹಿತ್ಯ ಹುಟ್ಟುತ್ತಲಿದ್ದು, ಈ ಇತಿಹಾಸದಲ್ಲಿ ಕೆಲವು ಘಟ್ಟಗಳನ್ನು ಗುರುತಿಸಬಹುದಾಗಿದೆ. ಇವುಗಳಲ್ಲಿ ಮೊದಲಿನ ಘಟ್ಟ ಬಸವಾದಿ ಶರಣರ ಸ್ವರವಚನಗಳು. ೧೨ನೇ ಶತಮಾನದ ಶರಣರ ಹೆಸರಿನಲ್ಲಿ ಕಂಡುಬರುವ ಸ್ವರವಚನಗಳ ಪ್ರಾಮಾಣಿಕತೆಯ ಬಗ್ಗೆ ಕೆಲವು ವಿದ್ವಾಂಸರು ಸಂದೇಹ ವ್ಯಕ್ತಪಡಿಸಿದ್ದಾರೆ.
೧. ಮೂಲತಃ ಸ್ವರವಚನ ಗೀತ ಮಾಧ್ಯಮದ ಸಾಹಿತ್ಯ,
೨. ವಚನ, ಸ್ವರವಚನಗಳ ವಸ್ತು - ಲಿಂಗಾಯತ ತತ್ವ
೩. ಹರಿಹರನ ರಗಳೆಯಲ್ಲಿ ಬರುವ “ಆಗಳಾಗಳಿನ ಸಂಗತಿಗೆ ಗೀತಂಗಳಂ ಪಾಡುತ್ತಂ” ಎಂದು.
೪. ಒಂದು ವೇಳೆ ಉತ್ತರಕಾಲೀನರು ವಚನಗಳನ್ನು ಸ್ವರವಚನಗಳನ್ನಾಗಿ ಮಾರ್ಪಡಿಸಿದ್ದರೆ ಪ್ರಮುಖ ಶರಣರ ವಚನಗಳನ್ನು ಮಾತ್ರ ಸ್ವರ ವಚನಗಳನ್ನಾಗಿಸುವುದು ಸಹಜವಾದದ್ದಾಗಿರುವುದು.
ಇದು ಕನ್ನಡ ಸಾಹಿತ್ಯಕ್ಕೆ ಶರಣರ ಗುರುತರ ಕಾಣಿಕೆಯಾಗಿದೆ.