*
ದೇವ ದೇವನೆ ದಿವ್ಯ, ಭಾನುವೆ
ದೇವ ದೇವನೆ ದಿವ್ಯ ಭಾನುವೆ ಪರಮಜ್ಞಾನದ ತೇಜವೇ
ಕಾವುದೆಮ್ಮನು ಕರುಣೆ ನೀಡುತ ಲೋಕ ಪಾಲಕ ಧೇನುವೆ || ಪ ||
ಹೃದಯ ಮಂದಿರದಲ್ಲಿ ನಿನ್ನಯ ಜ್ಞಾನ ಕಿರಣವು ಬೆಳಗಲಿ
ಮುದದಿ ಅರಳಲಿ ಮನದ ಅಂಬುಜೆ ಭಕ್ತಿ ಸೌರಭ ಸೂಸುತ |
ನಿನ್ನ ಒಲುಮೆಯ ಹೊನಲು ಹರಿಯುತ ಬಾಳ ಬನ್ನವ ಕಳೆಯಲಿ
ಜನನ ಜಂಜಡ ಮರಣ ಭೀತಿಯ ಕಶ್ಚಲವ ತಾ ತೊಳೆಯಲಿ || 1 ||
ಮಿಥ್ಯ ಭ್ರಾಂತಿಯ ಸುಖಕೆ ಎಳೆಸುವ ಮನದ ಮರ್ದನ ಮಾಡು ನೀ
ಸತ್ಯ ಮಾರ್ಗದಿ ಬಿಡದೆ ನಡೆಯುವ ಆತ್ಮಬಲವ ನೀಡು ನೀ
ಸ್ತುತ್ಯ ರೀತಿಯ ತತ್ವ ನಿಷ್ಟೆಯ ನೀಡು ಎನಗೆ ಸಿಂಧುವೆ
ನಿತ್ಯ ಗೈಯುವ ತಪ್ಪು ತಡೆಗಳ ಕ್ಷಮಿಸಿ ಪಾಲಿಸಿ ಬಂಧುವೆ || 2 ||
ನಿನ್ನ ಚರಣ ಕಮಲದಲ್ಲಿ ದುಂಬಿಯಾಗಿ ಹಾಡುವೆ
ಭಿನ್ನವಾಗಿ ಹರಿಯದಂತಹ ಮನವನೀಯಲು ಬೇಡುವೆ
ಮತಿಯ ಹಂದರದಲ್ಲಿ ಮಂತ್ರದ ಲತೆಯ ನಾನು ಬೆಳೆಸುವೆ
ಸ್ತುತಿಪೆ ನಿನ್ನನು ಒಲುಮೆ ನೀಡೌ ಸಚ್ಚಿದಾನಂದ ತಂದೆಯೆ || 3 ||
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
*