Previous ಬಸವ ಧ್ಯಾನ ಮಾಡಿರಣ್ಣಾ ಕಲ್ಯಾಣ ನಾಮ Next

ಗುರು ಬಸವಣ್ಣನ ನೆನೆಯೋಣ

*

ಶ್ರೀಕಾರ ರೂಪಾಗಿ | ಓಂಕಾರ ಉಸಿರಾಗಿ | ಲೋಕಕ್ಕೆ ಗುರುವಾಗಿ
ಬೆಳಕನು ತೋರುವ | ಬಸವಣ್ಣನ ನೆನೆಯೋಣ | ಶ್ರೀ ಗುರು ಬಸವಣ್ಣನ ನೆನೆಯೋಣ |ಪ|

ಸೃಷ್ಟಿಕರ್ತನು ತಾನು ಪರಮ ಕರುಣೆಯ ತೋರಿ
ಜಗದ ಉದ್ಧಾರಕ್ಕೆ ಕಳುಹಿದ | ಶ್ರೀ ಗುರು ಬಸವಣ್ಣನ ನೆನೆಯೋಣ |1|

ಬಾಗೆವಾಡಿಯೋಳುದಿಸಿ ಕಲ್ಯಾಣದೊಳು ನೆಲೆಸಿ
ಕೂಡಲಸಂಗಮದೊಳು ಬಯಲಾದ | ಶ್ರೀ ಗುರು ಬಸವಣ್ಣನ ನೆನೆಯೋಣ |2|

ಅಜ್ಞಾನ ಸಾಗರದಿ ತೆರೆಕೊಬ್ಬಿ ಮೊರೆಯುವಾಗ
ಸುಜ್ಞಾನ ನಾವೆಯನು ತಂದೆಮ್ಮ ದಾಟಿಸುವ | ಶ್ರೀ ಗುರು ಬಸವಣ್ಣನ ನೆನೆಯೋಣ |3|

ಮರ್ತ್ಯವೆ ಶಿವಲೋಕ ಕಾಯಕವೇ ಕೈಲಾಸ ಎಂದು ಸಾರಿ
ಇಳೆಯ ಬಾಳ ಹಿರಿಮೆಯ ತೋರ್ದ | ಶ್ರೀ ಗುರು ಬಸವಣ್ಣನ ನೆನೆಯೋಣ |4|

ಅರಿದೊಡೆ ಶರಣನು ಮರೆದೊಡೆ ಮಾನವ
ಮರೆಯದೆ ಪೂಜಿಸು ಸೃಷ್ಟಿಕರ್ತನ ಎಂದು ತೋರಿದ | ಶ್ರೀ ಗುರು ಬಸವಣ್ಣನ ನೆನೆಯೋಣ |5|

ಕಾಯ ವೀಣೆಯ ಮಾಡಿ ನರವ ತಂತಿಯ ಮಾಡಿ
ಉರದಿಂದ ಹಾಡುತ ದೇವನನು ಒಲಿಸಿದ | ಶ್ರೀ ಗುರು ಬಸವಣ್ಣನ ನೆನೆಯೋಣ |6|

ನರವಿಂಧ್ಯದೊಳಗೆ ಹುಲುಗಿಳಿಯ ನೀನಾಗು
ಭಕುತಿಯ ಪಂಜರದಿ ಆಭಯವ ಪಡೆಯೆಂದ | ಶ್ರೀ ಗುರು ಬಸವಣ್ಣನ ನೆನೆಯೋಣ |7|

ಮರ್ತ್ಯಲೋಕವಿದುವು ಕರ್ತನ ಕಮ್ಮಟವು
ಇಲ್ಲಿ ಸಲ್ಲುವವರು ಅವನಲ್ಲೂ ಸಲುವರೆಂದ | ಶ್ರೀ ಗುರು ಬಸವಣ್ಣನ ನೆನೆಯೋಣ |8|

ಇವನಾರು ಇವನಾರು ಭೇದವನೆಣಿಸದೆ
ಎಲ್ಲರು ನನ್ನವರು ಎನ್ನಲು ಕಲಿಸಿರುವ | ಶ್ರೀ ಗುರು ಬಸವಣ್ಣನ ನೆನೆಯೋಣ |9|

ಭಕ್ತಿಯ ಭೂಮಿಯೊಳು ಅರಿವಿನ ಮಾಮರದಿ
ನಿಷ್ಫತ್ತಿ ಹಣ್ಣಾಗಿ ದೇವನಿಗೆ ಎಡೆಯಾದ | ಶ್ರೀ ಗುರು ಬಸವಣ್ಣನ ನೆನೆಯೋಣ |10|

ಆನಂದ ವರ್ಷದಿ ಧರೆಗಿಳಿದು ತಾ ಬಂದು
ನಳನಾಮ ವರ್ಷದಿ ದೇವನೋಳು ಬೆರೆದಂಥ | ಶ್ರೀ ಗುರು ಬಸವಣ್ಣನ ನೆನೆಯೋಣ |11|

ಶರಣ ಕಣ್ಮಣಿಯಾಗಿ ಶರಣಗುಣನಿಧಿಯಾಗಿ
ಶರಣಾಗತ ರಕ್ಷಕ ಕಾರಣಿಕ ಗುರುವಾದ | ಶ್ರೀ ಗುರು ಬಸವಣ್ಣನ ನೆನೆಯೋಣ |12|

ಪರಿವಿಡಿ (index)
Previous ಬಸವ ಧ್ಯಾನ ಮಾಡಿರಣ್ಣಾ ಕಲ್ಯಾಣ ನಾಮ Next