Previous ಅಕ್ಕಮಹಾದೇವಿ ಜೋಗುಳ ಪದ ಲಿಂಗಾಯತ ಭಕ್ತಿಗೀತೆಗಳು Next

ಹಳಕಟ್ಟಿಯವರ ಜೋಗುಳ ಪದ

*

ಹಳಕಟ್ಟಿಯವರ ಜೋಗುಳ

ಜೋ ಎಂದು ಸ್ಮರಿಸಿ ಬಸವ ಶಿಶುವಿಗೆ
ಜೋ ಎಂದು ಹರಿಸಿರಿ ಶರಣ ಸಾಹಿತಿಗೆ
ಜೋ ಎಂದು ತೂಗಿರಿ ಫ. ಗು. ಹಳಕಟ್ಟಿಗೆ
ಹಿಂಗೇ ಜೋ ಎಂದು ತೂಗಿರಿ ವಚನ ಪಿತಾಮಹಗೆ ಜೋ ಜೋ. (1)

ಕರುನಾಡು ಧಾರವಾಡ ಪುಣ್ಯ ಭೂಮಿಯೋಳು
ಹುಟ್ಟಿದರು ಹದಿನೆಂಟು ನೂರಾ ಎಂಬತ್ತರೋಳು
ಎರಡನೇ ತಾರಿಖು ಜುಲೈ ತಿಂಗಳು
ಹಿಂಗಾ ಗುರುಬಸವ ದಾನಮ್ಮರ ಚಿದ್‌ ಗರ್ಭದೋಳು ಜೋ ಜೋ.. (2)

ಬಸವಾದಿ ಪ್ರಮಥರು ಬರೆ ವಚನಗಳ
ಗುಪ್ತಾಗಿ ಹೋಗಿದ ಕಲ್ಯಾಣ ಕ್ರಾಂತಿಯೋಳು
ಒಬ್ಬರಿಗೆ ಸಿಗಲಿಲ್ಲ ಈ ಧರಣಿಯೋಳ
ಹಿಂಗಾ ಫ. ಗು. ಹಳಕಟ್ಟಿಯವರು ನೊಂದ ಮನದೋಳು ಜೋ ಜೋ.. (3)

ತಾಡ ಓಲೆಯ ಪ್ರತಿ ಹುಡುಕಿ ತೆಗೆದರು
ವಚನ ಸಾಹಿತ್ಯವ ಓದಿ ನೋಡಿದರು
ಚರ ಜಂಗಮನಾಗಿ ಸಂಚಾರ ಮಾಡಿದರು
ಹಿಂಗಾ ವಚನ ಸಾಹಿತ್ಯವ ಉಳಿಸಿ ಬೆಳಿಸಿದರು ಜೋ ಜೋ.. (4)

ವಚನ ಸಾಹಿತ್ಯವೇ ಧರ್ಮ ಗ್ರಂಥ ಎಂದು
ಲಿಂಗವಂತರೆಲ್ಲ ತಿಳಿಕೊಳ್ಳಿರೆಂದು
ಗ್ರಂಥ ಮುದ್ರಿಸಲು ಪಂಥಗೈದರೂ
ತನ್ನ ಮನೆಯ ಮಾರಿ ಮುದ್ರಣ ಹಾಕಿದರು ಜೋ ಜೋ. (5)

ವಕೀಲ ವೃತ್ತಿಗೆ ನೀರು ಬಿಟ್ಟರೂ
ಧರ್ಮ ರಕ್ಷಣೆಗಾಗಿ ಕಂಕಣ ಕಟ್ಟಿದರೂ
ನಾಡಿನ ತುಂಬೆಲ್ಲ ಧರ್ಮ ಬೆಳೆಸಿದರು
ಹಿಂಗಾ ವೀರಶೆಟ್ಟಿ ಇಮಡಾಪೂರ ಜೋಗುಳ ಪಾಡಿದರು ಜೋ ಜೋ. (6)

-ವೀರಶೆಟ್ಟಿ ಇಮಡಾಪೂರ

*
ಪರಿವಿಡಿ (index)
Previous ಅಕ್ಕಮಹಾದೇವಿ ಜೋಗುಳ ಪದ ಲಿಂಗಾಯತ ಭಕ್ತಿಗೀತೆಗಳು Next