ಹೇ ದೇವ ಎನ್ನ ಹೃತ್ಕಮಲದಲಿ ನೀ ನೆಲೆಸು
|
|
ಹೇ ದೇವ ಎನ್ನ ಹೃತ್ಕಮಲದಲಿ ನೀ ನೆಲೆಸು
ಹೇ ದೇವ ಎನ್ನ ಹೃತ್ಕಮಲದಲಿ ನೀ ನೆಲೆಸು
ಜನ್ಮ ಸಾರ್ಥಕವಾಗೆ ನಾ ನಿನ್ನ ಅರ್ಚಿಪೆನು || ಪ ||
ಬೆಳೆವ ಭೂಮಿಯಲಿರುವ ಪಳಯದ ಕಸ ತೆಗೆದು
ಸುಳಿದೆಗೆದು ಬೆಳೆಸೆನ್ನ ಓ ಜ್ಞಾನ ಭಾಸ್ಕರ || ಅ. ಪ ||
ನಿನ್ನ ಪಾದಾರ್ಚನೆಗೆ ಯಾವ ಜಲ ನಾ ತರಲಿ ?
ಎನ್ನ ಭಕ್ತಿಯ ಹೊನಲ ಹರಿಸುತಿಹೆನು
ಕಾಮ ಮೋಹರಹಿತ ನಿರ್ಮಲಾತ್ಮನೆ ನಿನಗೆ
ನಿಷ್ಕಾಮದಾ ಭಸ್ಮ ಪೂಸುತಿಹೆನು || ೧ ||
ಸೃಷ್ಟಿ ಇತ್ತಿಹ ಗಂಧ ಪೂಸಿ ಹೆಮ್ಮೆಯ ಪಡಲೆ?
ಚಿತ್ತ ಶಾಂತಿಯ ಗಂಧ ಲೇಪಿಸುವೆನು
ಗಿಡಲತೆಗಳರಳಿಸಿದ ಹೂಗಳನ್ನು ಧರಿಸಲೆ?
ಸದ್ಭಾವ ಸುಮಗಳನು ಪೇರಿಸುವೆನು || ೨ ||
ಭಾವ ಶುದ್ಧಿಯ ಧೂಪ ಅರಿವಿನಾ ಆರತಿಯ
ಹೊರತು ಇನ್ನೇನಿಲ್ಲ ಎನ್ಮನದಲ್ಲಿ
ಶರಣುಗತಿ ನೈವೇದ್ಯ ಅರ್ಪಣೆಯ ಜಲದಾನ
ಪ್ರಣವ ನಾದದ ಗಂಟೆ ಸಾಕಲ್ಲವೇ ? || ೩ ||
ನನ್ನದೆನ್ನುವುದೆಲ್ಲ ನಿನ್ನದೇ ಆಗಿರಲು
ಇನ್ನು ಸಲಿಸುವ ಮೌಡ್ಯ ಇನ್ನೇತಕೆ?
ನಿನ್ನಯಾ ಅರಮನೆಗೆ ನೀ ಬರಲು ಸ್ವಾಗತವೆ ?
ಬಿನ್ನಾಣ ಬೇಡವೈ ಸಚ್ಚಿದಾನಂದ || ೪ ||
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.