Back to Top
Previous ಬಾ ಭಕ್ತ ಶರಣಾಗು ನೆನಹ ನೆನೆಯಲೆ ಮನವೇ Next

ಎನ್ನ ಕಾಯವು ನಿನಗೆ ಉನ್ನತಾಲಯ

ಎನ್ನ ಕಾಯವು ನಿನಗೆ ಉನ್ನತಾಲಯ

ಎನ್ನ ಕಾಯವು ನಿನಗೆ
ತಿನ್ನೆನಗೆ ಭಯವುಂಟೆ ಎಲೆ ಲಿಂಗವೆ ? || ಪ ||

ಎನ್ನ ಕಾಲುಗಳೆರಡು ಉನ್ನತದ ಕಂಭವೈ
ಎನ್ನ ಒಡಲೇ ನಿಮಗೆ ದೇವಾಲಯ
ಎನ್ನ ತೋಳುಗಳೆರಡು ಉನ್ನತದ ಮದನ ಕೈ
ಎನ್ನ ಶಿರ ಸೌವರ್ಣ ಕಲಶವಯ್ಯ || ೧ ||

ಎನ್ನ ಕಿವಿ ಕೀರ್ತಿ ಮುಖ ಎನ್ನ ನಾಲಿಗೆ ಘಂಟೆ
ಎನ್ನ ನಯನಗಳೆರಡು ಜ್ಯೋತಿ ನಿಮಗೆ
ಎನ್ನ ಮುಖವೇ ದ್ವಾರ ಎನ್ನ ದಂತವೆ ಅದಕೆ
ಮಿನ್ನುತಿಹ ಮೌಕ್ತಿಕದ ಸೂಸಕಗಳು || ೨ ||

ಎನ್ನಧರ ಜವಳಿಗದ ಎನ್ನ ನಾಸಾ ಪುಟವು
ನನ್ನಿಯಿಂ ಸೌರಭ್ಯ ರಸಘಟಿತವು
ಚೆನ್ನಾಗಿ ಬೀಸುವ ಹೊನ್ನ ಜಾಳೇಂದ್ರವೈ
ಇನ್ನುಳ್ಳ ಉಪಕರಣವೆಂತೆಂದೆನೆ || ೩ ||

ಎನ್ನ ಸಮತೆಯೆ ಜಲವು ಎನ್ನ ಸದ್ಗುಣ ಗಂಧ
ಎನ್ನ ನಿತ್ಯತ್ವವೆ ಅಕ್ಷತೆಗಳು
ಎನ್ನ ಜ್ಞಾನವೆ ಪುಷ್ಪ ಎನ್ನ ಭಕ್ತಿಯೆ ಬೋನ
ಎನ್ನ ಮನವೇ ನಿಮಗೆ ಪೂಜಾರಿಯು || ೪ ||

ಇಂತಪ್ಪ ಪೂಜೆಯನು ಸಂತಸದಿ ಕೈಗೊಳುತ
ಕಂತುಹರ ಶಿವಷಡಕ್ಷರಿ ಲಿಂಗವು
ಮುಂತೆ ಎನ್ನೊಳಗೆ ನಿಶ್ಚಿಂತನಾಗಿರುತಿರಲು
ಚಿಂತೆಯುಂಟೇ ಹಲವು ಭವ ಭೀತಿಯ ? || ೫ ||

- ✍ ಮುಪ್ಪಿನ ಷಡಕ್ಷರಿಗಳು.

ಪರಿವಿಡಿ (index)
Previous ಬಾ ಭಕ್ತ ಶರಣಾಗು ನೆನಹ ನೆನೆಯಲೆ ಮನವೇ Next