ಭಾವಲಿಂಗದ ನಿಜವನ್ನು ಪೂರ್ಣಮಯವಾಗಿ
|
|
ಭಾವಲಿಂಗದ ಪೂಜೆ
ಭಾವಲಿಂಗದ ನಿಜವನ್ನು ಪೂರ್ಣಮಯವಾಗಿ
ಭಾವಿಸಿ ಪೂಜೆಗೈಯುವವನೆ ದಿವ್ಯಯೋಗಿ || ಪ ||
ಧರೆಯೆ ಪೀಠಿಕೆಯಷ್ಟದಿಶೆಯೆ ಗೋಮುಖಮೂರ್ಧ್ವ
ಪರಿಪೂರ್ಣ ಮಾಗಿರ್ಪ ಬಯಲೆ ಗೋಳಕವು |
ಸರುವ ಲೋಕಗಳ ನಿಂತೊಳಕೊಂಡ ಲಿಂಗವ |
ನರಿವೆಂಬ ಕರವಾರಿರುಹದೊಳಗಿರಿಸಿ || ೧ ||
ಶರಧಿ ಸಪ್ತಕದಿಂದಲಭಿಷೇಕವೆರೆದಿಂದ |
ತರಣಿ ತಾರಕೆಗಳ ಕುಸುಮವ ಧರಿಸಿ ||
ಸ್ಫುರಿಸುವೌಷಧಿಗಳೆಲ್ಲವ ನೈವೇದ್ಯವ ಮಾಡಿ |
ಮೆರೆವಜಾಂಡದ ವಸ್ತ್ರವಿದನು ಬಾಸಣಿಸಿ || ೨ ||
ಅದರ ಗರ್ಭದೊಳೆ ತಾನಿರುತಿರ್ದು ತನ್ನಯ |
ಹೃದಯ ಮಧ್ಯದೊಳದನು ಹುದುಗಿಸಿ ಬಳಿಕ
ಅದು ತಾನರ್ಚನೆಯೆಂಬ ತ್ರಿಪುಟಿಯಳಿದು ಮಿಕ್ಕ |
ಸದಮಳ ಗುರುಸಿದ್ದನಿರವೆ ತಾನಾಗಿ || ೩ ||