*
ಹೇ ಪರಮಾತ್ಮ ಲೋಕದ ಮಿತ್ರ
ಹೇ ಪರಮಾತ್ಮ ಲೋಕದ ಮಿತ್ರ
ನೀನೇ ಸರ್ವಕು ಕಾರಣ ಕರ್ತ || ಪ ||
ವಿಘ್ನನಿವಾರಕ ಶಕ್ತಿಯು ನೀನೇ
ಬುದ್ಧಿಪ್ರದಾಯಕ ದೇವನು ನೀನೇ
ವಿದ್ಯಾ ಸಂಪದ ಶಾಂತಿಸೌಖ್ಯಗಳ
ಮಹಾದಾತನು ನೀನೇ ||1 ||
ಜಗವನು ರಚಿಸಿದ ತಂದೆಯು ನೀನು
ಸೊಗದಿಂ ಪಾಲಿಪ ತಾಯಿಯು ನೀನು
ದುರಿತ ಸಂಕುಲ ಮುಸುಕುತ ಬರಲು
ಪಾರು ಮಾಡುವ ಕರುಣಿಯು ನೀನು ||2 ||
ವೇದಾಂತಿಗಳು ಪರಬ್ರಹ್ಮನೆಂಬರು
ಆಗಮಿಕರು ಪರಶಿವನೆಂಬರು
ಅಲ್ಲಹ ಯಹೋವ ಸುಪ್ರೀಮ್ ಗಾಡ್
ಲಿಂಗದೇವ ನಿನ್ನಯ ಹೆಸರು || 3 ||
ಮರೆವಿನ ತಿಮಿರದಿ ಮನವು ಮುಲುಗುತ
ಮುಂದಡಿ ಇಡದೆಯ ಬಳಲುತಿರೆ
ಅರಿವಿನ ಬೆಳಕನು ಪಥದಲಿ ಚೆಲ್ಲುತ
ಮುಂದಡಿ ಇಡಿಸುವ ಗುರು ನೀನು || 4 ||
ಅಂದಿನ ಅನ್ನವ ನೀಡುವ ನೀನು
ಬಂಧನ ಹರಿಸುವ ಭವಹರ ಭಾನು
ಬಾಳಲಿ ನಡೆಯಲು ಆತ್ಮಬಲವ
ನೀಡುವ ಮಂಗಲ ಶಕಿಯು ನೀನು ||5 ||
ನಿನ್ನನ್ನಲ್ಲದೆ ಯಾರನು ಬೇಡೆನು
ಬನ್ನವ ಕಳೆಯುವ ಚಿನ್ಮಯನೆ
ಎನ್ನಯ ಜೀವನ ಸರ್ವ ಸಂಪದದಿ
ಬೆಳಗಲು ಕರುಣಿಸು ಸಚ್ಚಿದಾನಂದ || 6 ||
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
*