Previous ಉಡಿ ತುಂಬುವುದು ಹೇ ಪರಮಾತ್ಮ ಲೋಕದ ಮಿತ್ರ Next

ಗಣಲಿಂಗ ಗೀತೆ

*

ಗಣಲಿಂಗ ಗೀತೆ

ಘನಲಿಂಗ ಗಣಲಿಂಗವಾದ ಪರಿ ನೋಡಾ
ಚಿನುಮಯಾತ್ಮಕ ಲಿಂಗದೇವನಿವ ನೋಡಾ || ಪ ||

ಗುರು ಬಸವ ಹೃದಯದಲಿ ಅಂದು ಮೈದಳೆದು
ಧರೆಗಿಳಿದು ತಾ ಬಂದು ಅಂಗದೊಳು ನಿಂದು
ಶರಣರ ಸಮೂಹಕೆ ಆಗಿ ಗಣಲಾಂಛನ
ಕರದಿಷ್ಟ ಕುರುಹಾಗಿ ಪೂಜೆಗೊಳುತಲಿ ತಾನು ||1 ||

ಜಗದಗಲ ಮುಗಿಲಗಲ ಮಿಗೆಯಗಲನಾದ
ಜಗದೊಡೆಯ ಉರಸ್ಥಲಕೆ ಚುಳುಕಾಗಿ ಬಂದ
ಮನುಕುಲದ ಭಾಗ್ಯವು ತಾ ತೆರೆಯಿತಂದು
ಬನ್ನಿರೆನ್ನುತ ಎಲ್ಲರಿಂಬಿಟ್ಟುಕೊಂಡು || 2 ||

ಯುವನಾಮ ವರ್ಷದ ಪುಷ್ಯ ಮಾಸದೊಳು
ಸಂಕ್ರಮಣ ದಿನದಂದು ಬಸವಕರಕಿಳಿದ
ಯುವನಾಮ ವರ್ಷದ ಪುಷ್ಯಮಾಸದಲೀಗ
ಭವ್ಯಶ್ರೀ ಗಣಲಿಂಗವಾಗಿ ಮೈದಳೆದ || 3 ||

ನರರ ಶರಣರ ಮಾಡಲೆಂದಂದು ಬಂದ
ಶರಣರನು ಕೂಡಿಸಲು ಇಂದು ಐತಂದ
ಆರು ಸೂತ್ರಕೆ ಒಲಿದ ಲಿಂಗವಂತರನು
ಚಿರಸಾಕ್ಷಿ ತಾನಾಗಿ ಒಟ್ಟುಗೂಡಿಸ ಬಂದ || 4 ||

ಶ್ರೀ ಗುರು ಬಸವಂಗೆ ಶರಣಾಗಿರೆಂದ
ಇಷ್ಟಲಿಂಗವ ಧರಿಸಿ ನಿತ್ಯಪೂಜಿಸಿರೆಂದ
ಲಿಂಗಾಂಗಿ ಶರಣರ ಗಣಕ್ಕಿಂದು ಶರಣಾಗಿ
ಕರುಣಪ್ರಸಾದ-ಗಣಪದವಿ ಹೊಂದಿರಿ ಎಂದ || 5 ||

ದರ್ಶನವ ನೀವ್ ಮಾಡಿ ಈ ಕಣ್ಣ ತುಂಬಿ
ಸ್ಪರ್ಶನವ ನೀವ್ ಮಾಡಿ ಈ ಕರವು ತುಂಬಿ
ಜಯ ಜಯ ಘನಲಿಂಗ ಜಯ ಬಸವನಾ ಲಿಂಗ
ಜಯ ಸಚ್ಚಿದಾನಂದ ಜಯ ಮಂಗಳಾಂಗ || 6 ||

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

*
ಪರಿವಿಡಿ (index)
Previous ಉಡಿ ತುಂಬುವುದು ಹೇ ಪರಮಾತ್ಮ ಲೋಕದ ಮಿತ್ರ Next