*
ಜಯತು ಜಯ ಬಸವ ಲಿಂಗ ಶರಣ ಸಾರ್ವಭೌಮನೆ
ಜಯತು ಜಯ ಬಸವ ಲಿಂಗ ಶರಣ ಸಾರ್ವಭೌಮನೆ
ಜಯತು ಜಯ ಮಂಗಳಾಂಗ ಲಿಂಗದೇವ ಕಂದನೆ || ಪ ||
ಕರ್ತ ಕಳುಹೆ ಧರೆಗೆ ಬಂದು ಮರ್ತ್ಯರನ್ನು ಪೊರೆದ ಗುರು
ಕರ್ತನಾಗಿ ಲಿಂಗಾಯತ ಧರ್ಮ ಕೊಟ್ಟ ಕಲ್ಪತರು
ಬಾಗೇವಾಡಿಯಲ್ಲಿ ಜನಿಸಿ ಸಂಗಮದೊಳು ಅಭ್ಯಸಿಸಿ
ಕಲ್ಯಾಣ ಪ್ರಣತೆಯಲ್ಲಿ ಬೆಳಗಿ ವಿಶ್ವಜ್ಯೋತಿಯಾದೆ
ದೇವನೊಬ್ಬ ಸೃಷ್ಟಿಕರ್ತ ಪರಮೋನ್ನತ ಎಂದೆಯೈ
ಕಾಕು ಪೋಕು ದೈವಂಗಳ ಪೂಜೆ ಖಂಡಿಸಿ ತೊರೆದೆಯೈ
ದೇವನವನ ಪೂಜಿಸಲು ಇಷ್ಟಲಿಂಗವಿತ್ತೆಯೈ
ಧರ್ಮಕರ್ತನಾಗಿ ಪ್ರೀತಿ ಎಲ್ಲರಿಗೂ ನೀಡ್ಡೆಯೈ
ಅನುಭವ ಮಂಟಪವ ಕಟ್ಟಿ ಎಲ್ಲರನ್ನು ಕರೆದೆಯೈ
ಅನುಭಾವವೇ ದೇವನನೊಲಿಪ ಸಾಧನವೆಂದು ನುಡಿದೆಯೈ
ಕಾಯಕವೇ ಕೈಲಾಸ ಸೂತ್ರವಿತ್ತ ದಿವ್ಯಯೋಗಿ
ದಾಸೋಹವೇ ದೇವಧಾಮ ಎಂದು ಸವೆದ ಮಹಾತ್ಯಾಗಿ
ಇವನು ಯಾರು ಎಂದು ಭೇದ ಗೈದವರನು ಜರಿದ ಪುರುಷ
ಇವ ನಮ್ಮವ ಎಂದು ಎಲ್ಲರ ಆದರಿಸಿದ ಗುರು ಪರುಷ
ಧರ್ಮದಾತ ಶರಣ ಪ್ರೀತ ಇಷ್ಟಲಿಂಗದಾತನೇ
ವಿಶ್ವಧರ್ಮ ನೀಡಿ ಮೆರೆದ ಸಚ್ಚಿದಾನಂದ ಕಂದನೆ
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
*