*
ದೇವ ದೇವ ದಿವ್ಯ ಪ್ರಭುವೆ
ದೇವ ದೇವ ದಿವ್ಯ ಪ್ರಭುವೆ ಕಾವುದೆಮ್ಮ ಕೈಯಬಿಡದೆ
ನಿನ್ನ ಕೃಪಾ ಕವಚದಲ್ಲಿ ಎಮ್ಮ ರಕ್ಷಿಸು
ದುಷ್ಟತನವ ನೀಡದೆಯೇ ಶಿಷ್ಟಗುಣವ ನೀಡಿ | ಲೋಕ
ವಿಷ್ಟ ಪಡುವ ಭವ್ಯ ಬಾಳ ನೀಡು ತಂದೆಯ || ಪ ||
ಸುಪ್ರಭಾತದಲ್ಲಿ ಎದ್ದು, ಅರ್ತಿಯಿಂದ ನಿನ್ನ ನೆನೆದು
ಚಿತ್ತ ಶುದ್ಧಿಯನ್ನು ಪಡೆವ ಬುದ್ದಿ ಕರುಣಿಸು |
ವಿದ್ಯೆ ಕಲಿತು ಬುದ್ದರಾಗಿ ಹೃದ್ಯವಾದ ನುಡಿಗಳಾಡಿ
ಮುದ್ದು ಮಕ್ಕಳಾಗಿ ನಲಿವ ವರವ ನೀಡಯಾ || 1 ||
ಎಡರು ಬಂದು ಅಡರುತಿರಲು ಜಡರು ನುಡಿಗಳಾಡುತಿರಲು
ಒಡನೆ ಧೈರ್ಯ ಬಿಡದ ಛಲವ ಎಮಗೆ ಒದಗಿಸು |
ಸತ್ಯವನ್ನು ನುಡಿಯುವಂಥ ಸತ್ಯಪಥದಿ ನಡೆಯುವಂಥ
ಸತ್ತೂ ಬಾಳುವಂಥ ಅಮರ ಬದುಕು ಕರುಣಿಸು || 2 ||
ಜನ್ಮವಿತ್ತ ತಂದೆ-ತಾಯಿ, ಜ್ಞಾನವೀವ ಪರಮ ಗುರುವು
ಅನ್ನವೀವ ಮಾತೃಭೂಮಿ ಕಂಡು ವಂದಿಪ |
ವಿನಯ ಭಾವ ನೀಡಿ ಎಮಗೆ ಮಾನನೀಯರಾಗಿ ಮಾಡು
ಇಲ್ಲಿ ಅಲ್ಲಿ ಸಲ್ಲುವಂಥ ನಿಲುವ ಕರುಣಿಸು || 3 ||
ನೀರನುಂಡು ಬೆಳೆದ ಲತೆಯು ಮುಗುಳು ನಗುತ ಬೆಳೆವ ತೆರದಿ
ನಿನ್ನ ಕರುಣೆಯುಂಡು ನಾವು ನಿರುತ ಬೆಳೆವೆವು
ಎಲ್ಲರೊಡನೆ ಕೂಡಿ ಬಾಳಿ, ಚೆಲ್ಲವರಿದು ಸುಭಗದೊಲವ
ಮೊಲ್ಲೆಯಂಥ ಬಾಳ ನೀಡು ಸಚ್ಚಿದಾನಂದ || 4 ||
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
*