*
ಜಯ ಗುರು ಬಸವಾ
ಜಯಗುರು ಬಸವಾ ಶ್ರೀ ಗುರು ಬಸವಾ ವರಗುರು ಬಸವೇಶಾ
ಕರುಣಾ ಸಿಂಧು, ದೀನಬಂಧು ಜಯಗುರು ಬಸವೇಶಾ || ಪ ||
ಕನ್ನಡ ನಾಡಿನ ಕುಲಪುರುಷ ಭಾರತ ಭೂಮಿಯ ಶ್ರೀ ಪರುಷ
ಮಾನವ ಕುಲಕೆ ಮಾರ್ಗವ ತೋರಿದ ನಮೋ ನಮೋ ಶ್ರೀ ಯುಗಪುರುಷ ||ಅ.ಪ ||
ಮನುಜರೆಲ್ಲರೂ ಒಂದೆ ದೇವನೊಬ್ಬನೆ ತಂದೆ
ಮಾನವ ಕಲಿತ ಭೇದವ ಜರಿದು, ಎಲ್ಲರು ಸಮವೆಂದೆ |
ಜಾತಿ ಭೇದ ಜರಿದು, ಮೇಲು ಕೀಳು ತೊಡೆದು
ಜ್ಯೋತಿಯನರಿದವ ಜಾತಿವಂತನು ಅವನೇ ಶರಣನು ಎಂದೆ || 1 ||
ಒಂದು ಎರಡು ಮೂರು ನಾಲ್ಕು ದೇವರುಂಟೆ ?
ಲೋಕಕೆಲ್ಲಕು ಒಬ್ಬನೇ ಕರ್ತನು ಅವನಿಗೆ ಶರಣೆಂದೆ |
ದೇಹವೆ ಗುಡಿಯೆಂದು ಮನವೆ ಪೀಠವೆಂದು
ದೇಹವ ದೇವಾಲಯವನ್ನು ಮಾಡುವ ಪರಮ ಸೂತ್ರ ಕೊಟ್ಟೆ || 2 ||
ಅವಯವವಿಲ್ಲದ ದೇವನಿಗೆ ಬಾಯಿ ಕಣ್ಣಳೇಕೆ ?
ಗೋಲಾಕಾರದ ಇಷ್ಟಲಿಂಗವ ಕೊಟ್ಟಿಹ ಗುರು ನೀನು |
ಮರ್ತ್ಯಲೋಕದ ಮಹಮನೆಯ ಕತ್ತಲೆ ಕಳೆಯಲಿಕೆಂದು
ಕರ್ತನು ಕಳುಹಲು ಲೋಕಕೆ ಬಂದ ಕಾರಣ ಪುರುಷನು ನೀನು ||3||
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
*