*
ಸಮರ್ಪಣ ಗೀತೆ
ಹೃದಯ ಬಟ್ಟಲ ಮಾಡಿ ಭಕ್ತಿರಸವನು ತುಂಬಿ
ಶರಣಾಗತಿಯ ಭಾವದಿಂ ಎರೆಯುವೆನು ತಂದೆ || ಪ ||
ಎನ್ನ ಸುಖ-ದುಃಖಗಳ ಬೆಲ್ಲ-ಬೇವುಗಳನ್ನು
ಪಾದಕ್ಕೆ ಎಡೆಮಾಡಿ ಅರ್ಪಿಸುವೆ ತಂದೆ
ನಿನ್ನ ಕೈಯೊಳಗೆ ಸಿಕ್ಕ ಲೆಕ್ಕಣಿಕೆಯೊಲು
ನೀ ಬರೆಸಿದಂತೆ ನಾ ಬರೆಯುವೆನು ತಂದೆ |
ತವ ಹಸ್ತದೊಳಗೆ ದಿವ್ಯ ವೀಣೆಯು ಆಗಿ
ನೀ ಮಿಡಿಸೆ ಗಾನವನು ನಾ ನುಡಿವೆ ತಂದೆ ||
ಒರೆದು ಎನ್ನನು ನೋಡು ಕೊರೆದು ಎನ್ನನು ಕಾಡು
ಹೇಗೆ ನೋಡಿದಡು ಬಸವ ನೀನೆನ್ನ ತಂದೆ |
ನಿನ್ನ ಕರುಣೆಯೆ ಮುಕ್ತಿ ನಿನ್ನ ಭಕ್ತಿಯ ಶಕ್ತಿ
ನೀನೆನ್ನ ಬಾಳಿನ ಸ್ಪೂರ್ತಿ ಕೀರ್ತಿಯು ತಂದೆ |
ನಿನಗಾಗಿ ಬಾಳಿಸು ಭಾವನೆಯ ಹೊತ್ತಿಸು
ನಿನ್ನ ವಚನದ ಸೂರೆಗೆ ಎನ್ನ ಅನುಗೊಳಿಸು ತಂದೆ |
ಬಸವರಸ ಬಸವಯ್ಯ ಬಸವಣ್ಣ ಬಸವಪ್ರಭು
ಸಚ್ಚಿದಾನಂದ ಕಳುಹಿದ ನೀನೆನ್ನ ತಂದೆ |
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
*