*
ದೇವ ದೇವ ದಿವ್ಯ ಪ್ರಭುವೆ
ದೇವ ದೇವ ದಿವ್ಯ ಪ್ರಭುವೆ ಈವುದೊಂದು ವರವೆನಗೆ
ನಿನ್ನ ಚರಣದಲ್ಲಿ ಮನವು ಲೀಯವಾಗಲಿ || ಪ ||
ಅತ್ತಲಿತ್ತ ಹರಿಯದಲೆ ಸುತ್ತ ಮುತ್ತ ಸುಳಿಯದಲೆ
ಚಿತ್ತ ನಿನ್ನ ಸೇವೆಯಲ್ಲಿ ಶಾಂತಿ ಪಡೆಯಲಿ || ಅ.ಪ ||
ನೀರಿನಿಂದ ತುಂಬಿ ಮೋಡ ವಿನಯದಿಂದ ಭುವಿಗೆ ಸಾರಿ
ಪ್ರೇಮದಿಂದ ನೀರನೆರೆದು ನೆಲವ ತಣಿಪುದು
ಸೃಷ್ಟಿಕರ್ತ ಎನ್ನ ಬಾಳು ಅರಿವಿನಿಂದ ತುಂಬಿ ತುಳುಕಿ
ಭರದಿ ತನ್ನ ಜ್ಞಾನವನ್ನು ಜಗಕೆ ನೀಡಲಿ ||1||
ಉದಿಪ ರವಿಯು ಮೌನವಾಗಿ ಅಂಬುಜೆಯ ಅರಳಿಪವೊಲು
ಮುದದಿ ಎನ್ನ ಮಾತು ನೊಂದ ಹೃದಯ ತಣಿಸಲಿ
ಇರುಳಿನಲ್ಲಿ ಚಂದ್ರನರಳಿ ಭೀತಿ ಭಾವ ತೊಡೆಯುವೊಲು
ಅರಿವ ಹರಿಸಿ ಆತ್ಮಬಲವ ಮತಿಗೆ ನೀಡಲಿ || 2 ||
ಎನ್ನ ಬಾಳ ಪಥದೊಳಗೆ ಮುಳ್ಳು ಚೆಲ್ವ ದ್ವೇಷಿಗಳಿಗೆ
ಅವರ ಬಾಳ ಪಥದಿ ಹೂವ ಚೆಲ್ಲಿ ಸುಖಿಸುವ
ಶುದ್ದ ಮನವ ನೀಡೆನಗೆ ನಿಃಕಳಂಕ ನಿರ್ಮಲಾಂಗ
ಬದ್ದ ಬಾಳ ತೊಡೆದು ಸಲಹು ಸಚ್ಚಿದಾನಂದ || 3 ||
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
*