*
ಜೋ ಅಕ್ಕಮಹಾದೇವಿ
ಜೋ ಅಕ್ಕಮಹಾದೇವಿ ವೈರಾಗ್ಯ ಮೇರು
ಜೋ ಜೋ ಶರಣ ಜನರ ಕಣ್ಮಣಿಯ ತೇಜ ||ಪ||
ಭುವಿಗಂದು ನೀ ಬಂದೆ ಓಂಕಾರ ತಂದೆಯಿಂ
ಚೆಲ್ವಿನಂಗವ ಧರಿಸಿ ಲಿಂಗಮ್ಮ ತಾಯಿಯಿಂ
ಬೆಳೆಯುತ್ತ ಬಿದಿಗೆಯ ಚಂದ್ರಮನ ತೆರದಿ
ಇಳೆಯೊಳು ಮೆರೆದೆಯೌ ಪಾರ್ವತಿಯ ತೇಜದಿ ಜೋ! || 1 ||
ಉದಮದದ ಯೌವನದ ಸೊಬಗು ವಿಕಸಿತವಾಗೆ
ಹೃದಯವು ತಾನಾಗಿ ಲಿಂಗದೇವನಿಗೊಲಿಯೆ
ಮುದಗೊಂಡು ಒಲಿದ ಕೌಶಿಕನ ತೊರೆದು
ಒದವಿ ಧರಿಸಿ ನಡೆದೆ ದಿವ್ಯ ದಿಗಂಬರವ ಜೋ! ||2||
ಏರುಂಜವ್ವನದ ಮೇರುವೆ ತರುಣಿಯೆ
ಬರುವ ಬಯಕೆ ಇರಲು ಪತಿ ಹೆಸರ ಉಸಿರು
ಎಂಬ ಪ್ರಭುವಿನ ಕಟು ಮಾತಿಗೆ ಬೆದರದೆ
ಅಂಬೆ ಉತ್ತರಿಸಿದ ದೇವಗೊಲಿದವಳೆಂದು ಜೋ! ||3||
ಅನುಭವ ಮಂಟಪದ ಶರಣರ ಅಕ್ಕನಾಗಿ
ಮೌನದಿ ಕದಳಿಯ ಸಿರಿಬನವ ಪೊಕ್ಕು
ಧನ್ಯ ಮಾಡಿದೆ ನೀನು ಬಸವ ಧರ್ಮದ ವಾಣಿ
ಮಾನ್ಯತೆಯ ಪಡೆದೆಯೌ ಸಚ್ಚಿದಾನಂದನಲಿ ಜೋ || 4 ||
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
*