- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
ಎನ್ನ ಕಾಯವು ನಿನಗೆ ಉನ್ನತಾಲಯ
ನೆನಹ ನೆನೆಯಲೆ ಮನವೇ ನಾನೆಂಬುದನಳಿದು
ತಂದ ನೆನೆನೆನೆದು ನರ್ತಿಸು ನೆಮ್ಮುಗೆಯ ನೆಲೆಯಲಿ || ಪಲ್ಲವಿ ||
ನೆನಹೆಂಬುದು ನೂಲೇಣಿ, ನನೆಯ ಬಿರಿಸುವ ನೆರವು
ನೆಮರು ಘನ ನಾಮವ, ನೋಂಪಿಯದೆಂತೆಂದು
ನೆಣವಿಪ್ಪ ಕಾಲದೊಳೆ, ನೆತ್ತರು ಬಿಸಿಯಾಗಿರಲು
ನೆಚ್ಚಿ ನೆಮ್ಮುಗೆಯಿಂದ ನೆಮ್ಮದಿಯ ಪಡೆಯೆ || ೧ ||
ನಾನು ನೀನೆಂಬುದನಳಿದು, ಮನವ ನೆನಹಿಲಿ ನಿಲಿಸಿ
ನ್ಯೂನತೆಯ ಕಳಕೊಂಡು ; ನೂಂಕಿ ಭವದರಿಯ
ನುಣ್ಣಿನಾ ನುತಿಗೆ, ನುಣ್ಣನಿಗೆ ಸೆರೆಯಾಗದೆ
ನಿನ್ನ ನೀನರಿದುಕೋ, ನೀನೆ ನೀನಾಗು || ೨ ||
ನೀರೊಳಗೆ ಹುಟ್ಟಿಹ ನೀರಜೆಯ ತೆರದೊಳು
ನಿಷ್ಕಾಮ ನೆನಹಿನಲಿ ನಿಷ್ಠೆಯಂ ಕೈಕೊಂಡು | ನಿ
ರ್ಲೆಪ ನಿಶ್ಚಿಂತ ನಿರ್ಮೋಹ ಸತಿಯಾಗಿ
ನಿರ್ಮಲೆಯಾಗು ನೀ ಸಚ್ಚಿದಾನಂದನ ನೆನೆದು || ೩ ||