Previous ಬೆಳಗಲಿ ಬೆಳಗಲಿ ಬಸವ ಜ್ಯೋತಿ ಬೆಳಗಲಿ ಬಸವೇಶ್ವರರ ಜೋಗುಳ ಪದ-1 Next

ಮೋಳಿಗೆಯ ಮಾರಯ್ಯ...

*

ಮೋಳಗಿಯ ಮಾರಯ್ಯಾ ಭಕ್ತಾ | ಬಸವೇಶನ್ನ ಸೋಲಿಸಿದಾತಾ

ಮೋಳಗಿಯ ಮಾರಯ್ಯಾ ಭಕ್ತಾ | ಬಸವೇಶನ್ನ ಸೋಲಿಸಿದಾತಾ || ಪ ||
ನಿತ್ಯ ಅರಣ್ಯಕ್ಕೆ ಹೋಗತಿದ್ದ | ಕಟ್ಟಗಿ ತರತಿದ್ದ |
ಶಿವಶರಣರಿಗೊಯ್ದ ಮಾರತಿದ್ದ | ಸ್ವಂತ ಬಂದ ಹಣದಿಂದ ಧಾನ್ಯ ತರವೂತಾ || ೧ ||

ಅಂಬಲಿ ಕಾಸಿ ಆಗತುರ್ತಾ | ಜಂಗಮರಿಗೆ ಉಣಸುವ ನಿಂತಾ ||
ಬಸವೇಶನ ದಾಸೋಗದೊಳಗಿಂದ | ಮೃಷ್ಟಾನ್ನ ಉಂಡ ಬಂದ |
ಅಂಬಲಿ ಕುಡಕುಡದು ಹೋಗುವರು ಖಚಿತಾ | ಅಮೃತಕಿಂತ ರುಚಿ ಅಂತಾ || ೨ ||

ಬಸವಣ್ಣಗ ತಿಳಿದೀತ ಈ ಮಾತಾ | ವೇಷ ಬದಲಿಶ್ಯಾನ ಬೇಕಂತ ||
ಅಯ್ಯನವರ ರೂಪವನು ಧರಿಸಿ | ಹೋದ ಧಾವಿಸಿ ||
ಭಕ್ತಿ ಪರೀಕ್ಷಿಸಿ ನೋಡಬೇಕಂತಾ | ಹಸಿವ್ಯಾಗೇದ ಊಟಕ ಹಾಕಿರೆಂತಾ|| ೩ ||

ಮಾರಯ್ಯನ ಹೆಂಡತಿ ಪತಿವ್ರತಾ | ಕರಕೊಂಡ ಹೋದ್ಲ ಮಾಡಿ ಮಮತಾ ||
ಒಳಗ ಉಚಿತ ಆಸನ ಹಾಸಿ | ಲಿಂಗಾರ್ಚನೆ ಮಾಡಿಸಿ |
ಇದ್ದದ್ದ ಉಣಬಡಿಸಿ ತೃಪ್ತಿಪಡಿಸುತಾ | ಸಂತೋಷದಿ ಊಟವಾಯ್ತ ಸಿಸ್ತಾ|| ೪ ||

ಹೊರಗ ಬರುವಾಗ ತಗದಾನು ಬೇತಾ | ಚರಗಿ ಹತ್ತರ ಮಾಡಿ ಮಸಲತ್ತಾ ||
ಎರಡು ಸಾವಿರ ವರಹ ತುಂಬಿದ | ಎರಡು ಚೀಲ ತಗದ |
ಮರೆಗೆ ಇಟ್ಟು ನಡದ ಶರಣು ಶರಣಂತಾ | ಮಾರಯ್ಯನ ಮಡದಿಗೆ ತಿಳಿಯದಂತಾ|| ೫ ||

ಮಾರಯ್ಯನು ಹೊರಗಿಂದ ಬರುತಾ | ಸ್ನಾನ ಮಾಡಿ ಪೂಜೆಗೆ ಕೂಡ್ರುತಾ ||
ನೀರಿನ ಪಾತ್ರೆಯ ಬದಿಲಿದ್ದ | ವರಹದ ಚೀಲ ತಗದು |
ಮರ ಮರ ಮರುಗಿದ ಯಾರ ಇಟ್ಟಾರಂತ | ಸತಿಯಳನ ಕೇಳಾನ ಏಕಾಂತಾ|| ೬ ||

ಶರಣನೊಬ್ಬ ಬಂದಿದ್ದ ಈ ಹೊತ್ತಾ | ಗರತಿ ಹೇಳ್ಯಾಳ ಗುರ್ತ ಹತ್ತಲಿಲ್ಲಂತಾ ||
ಹಣದ ಚೀಲ ತಾನೆ ಹೊರಗಿಟ್ಟ | ದಾನ ಕೊಟ್ಟ ಬಿಟ್ಟ |
ಜಾಣತನವೆಷ್ಟು ಜ್ವಾನಿಗಿಲ್ಲ ಸ್ವಾರ್ಥ | ಕಾಯಕವೆ ಕೈಲಾಸವೆನುತ|| ೭ ||

ಗುರುಗಳ ಪಾದೋದಕ ತೀರ್ಥಾ | ಹೊರಿ ಮೇಲೆ ಓದ ಚಿಮುಕಿಸುತಾ ||
ಬಂಗಾರಾತ ತುಣಕ ಮಾಡಿ ಮಾಡಿ | ಜಂಗಮರಿಗೆ ನೀಡಿ |
ಮಂಗಳಾರತಿ ಹಾಡಿ | ಹರುಷವಾಗಿರುತಾ | ಬಸವರಸನ್ನ ಕರಿ ಕಳಿಸುತಾ|| ೮ ||

ಭಕ್ತಿ ಭಾಂಡಾರಿಗಾದಿತ ಗೊತ್ತ | ಮುಕ್ತಿ ಬೇಡಿಕೊಂಡ ಮುಂದ ಬಂದ ನಿಂತಾ ||
ಮಾಚಿ-ದೇವನ ಮೊಮ್ಮಗ ಹಂಗಿಸಿದ | ವೃಷಬೇಶ ನಿನ್ನಿಂದ |
ಬಡತನ್ಹೋತ್ನಂದ | ಅಂದ ನಗ ನಗುತಾ | ಹುಲಕುಂದ ಭೀಮನ ಕವಿ ಚಮಾತಾ|| ೯ ||

- ರಚನೆ : ಹುಲಕುಂದ ಭೀಮಕವಿ
ಕೃತಿ : ಸರ್ವೋದಯ ಗ್ರಾಮೀಣ ಜನಪದ ಗೀತೆಗಳು

ಪುಸ್ತಕ: ಗೀಗೀ ಪದಗಳು -2, ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ, ಸಂಪುಟ ಸಂಪಾದಕರು: ಮೃತ್ಯುಂಜಯ ಹೊರಕೇರಿ

ಪರಿವಿಡಿ (index)
*
Previous ಬೆಳಗಲಿ ಬೆಳಗಲಿ ಬಸವ ಜ್ಯೋತಿ ಬೆಳಗಲಿ ಬಸವೇಶ್ವರರ ಜೋಗುಳ ಪದ-1 Next