Previous ಬೆಳಗಿರಿ ಬೆಳಗಿರಿ ಮಂಗಲದಾರತಿ ಹೊತ್ತಾರೆ ನಾನೆದ್ದು ಯಾರಾರ ನೆನೆಯಲಿ Next

ಲಿಂಗಾಯತ ನಾನು ಲಿಂಗಾಯತ

ಲಿಂಗಾಯತ ನಾನು ಲಿಂಗಾಯತ

ಲಿಂಗಾಯತ ನಾನು ಲಿಂಗಾಯತ
ವಿಶ್ವಬಂಧುವು ನಾನು ವಿಶ್ವಬಂಧುವು || ಪ ||

ನನ್ನ ಧರ್ಮ ಲಿಂಗಾಯತ ಎಂದು ಸಾರಿ ನುಡಿವೆನು
ಬಸವಣ್ಣನೇ ಧರ್ಮಗುರುವು ಎಂದು ನಂಬಿ ನಡೆವೆನು
ಲಿಂಗದೇವ ಜಗದ ಕರ್ತ ಎಂಬ ಶ್ರದ್ಧೆ ಹೊಂದುತ
ವಚನ ಶಾಸ್ತ್ರ ನಮ್ಮ ನಡೆಗೆ ಧರ್ಮಸೂತ್ರವೆಂಬೆನು || ೧ ||

ಇಷ್ಟಲಿಂಗ ದೇವಕುರುಹು ಎಂದು ನಾನು ಧರಿಪೆನು
ಸಂಗಮವು ಧರ್ಮಕ್ಷೇತ್ರ ಎಂದು ತಿಳಿದು ಬರುವೆನು
ಶರಣ ಮೇಳದಲ್ಲಿ ಕೂಡಿ ಹಾಡಿ ಪಾಡಿ ನಲಿವೆನು
ಕಲ್ಯಾಣ ಪರ್ವಕೆ ಬಂದು ಜನ್ಮಧನ್ಯಗೈವನು || ೨ ||

ಷಟ್‌ಕೋನ ಬಸವ ಧ್ವಜವ ಹಿಗ್ಗಿನಿಂದ ಹಾರಿಪೆನು
ಇಷ್ಟಲಿಂಗ ದೀಕ್ಷೆ ಹೊಂದಿ ಗಣಪದವಿಯ ಹೊಂದುವೆನು
ಭಕ್ತಿ ಪಕ್ಷ ಹೊಂದಲಿಕ್ಕೆ ಬಸವ ಮಂಟಪ ಕಟ್ಟುವೆನು
ವಾರಕ್ಕೊಮ್ಮೆ ಸಾಮೂಹಿಕ ಪ್ರಾರ್ಥನೆಯ ಗೈವೆನು || ೩ ||

ಶ್ರಾವಣ ಮಾಸದಲ್ಲಿ ನಾನು ವಚನ ಪಠಣಗೈವೆನು
ಶರಣ ಭಾಷೆ ಕನ್ನಡವೆಂದು ಹೆಮ್ಮೆಯಿಂದ ನುಡಿವೆನು
ಬಸವಾದಿ ಶರಣರ ಪರಂಪರೆಯು ನನ್ನದು
ಜಾತಿ ವರ್ಣ ವರ್ಗಾತೀತ ಸಹೋದರತೆ ನಮ್ಮದು || ೪ ||

ಮರ್ತ್ಯಲೋಕ ಕರ್ತಾರನ ಕಮ್ಮಟವೆಂದೆನ್ನುತ
ದಿವ್ಯ ಗಣಲಿಂಗವು ಬೆಸೆವ ಕುರುಹು ಎಂಬೆನು
ಜಾತಿ ಸೂತ್ರ ತೊರೆದು ನಾನು ನೀತಿ ಸೂತ್ರ ಹಿಡಿವೆನು
ಧರ್ಮಸೋದರತ್ವ ಸಾರಿ ಶರಣ ಸಮಾಜ ಕಟ್ಟುವೆನು || ೫ ||

ಪರಿವಿಡಿ (index)
Previous ಬೆಳಗಿರಿ ಬೆಳಗಿರಿ ಮಂಗಲದಾರತಿ ಹೊತ್ತಾರೆ ನಾನೆದ್ದು ಯಾರಾರ ನೆನೆಯಲಿ Next