ಧ್ವಜವಂದನ ಗೀತೆಗಳು | ಗುರು ಬಸವಣ್ಣನ ನೆನೆಯೋಣ |
ಧರ್ಮಗುರು ವಂದನ ಗೀತೆಗಳು |
ಮುಕ್ತಿದಾಯಕ ಶರಣರಕ್ಷಕ ನಿತ್ಯ ಮೂರುತಿ ಬಸವನೆ
ಭಕ್ತಿಯಿಂದಲಿ ಚರಣ ಕಮಲಕೆ ನಿತ್ಯ ವಂದಿಪೆ ತಂದೆಯ | ಪ |
ಅರಿವು ಇಲ್ಲದ ಮನುಜ ಜನ್ಮವು ಶಾಪವೆನ್ನುತ ನೊಂದೆನು
ಮರೆವ ಹರಿಯುವ ಗುರುವೆ ಎನುತಲಿ ನಿನ್ನ ಚರಣವ ಪಿಡಿದನು
ನಿನ್ನ ಕರುಣೆಯು ಎನ್ನ ಬಾಳಿನ ರಕ್ಷೆ ಎನುತಲಿ ನಂಬಿಹೆ
ಬನ್ನ ತೊಡೆಯುವ ಬೆಳಗ ಬೀರುವ ಶಕ್ತಿ ಎನ್ನುತ ಕಾದಿಹೆ | 1 |
ಮೋಹರಹಿತನೆ ಜ್ಞಾನ ಭರಿತನೆ ಪರಮ ಶಾಂತಿಯ ಧಾಮವೆ
ಕಾಹುದೆಮ್ಮನು ಕೈಯಬಿಡದೆ ಹರನ ಕರುಣೆಯ ಕಂದನೆ
ಕಾಮಕ್ರೋಧದ ಕೊಳೆಯ ಕಳೆದು ಭಕ್ತಿ ಜಲದಲಿ ಮೀಯಿಸು
ಜ್ಞಾನದುಡುಗೆಯ ಮನಕೆ ಉಡಿಸಿ ಮೃಡನ ಪಾದಕೆ ಏರಿಸು | 2 |
ನಿನ್ನ ಚಿನ್ನಯ ಜ್ಞಾನವೆನಗೆ ಮಾರ್ಗದರ್ಶಕ ದೀಪ್ತಿಯು
ನಿನ್ನ ಮಮತೆಯ ಹೃದಯ ಮಂದಿರ ನನಗೆ ಶಾಂತಿಯ ಹಂದರ
ನಿನ್ನ ಪಾವನ ಚರಣಯುಗವು ಭವವ ದಾಂಟಿಪ ದೋಣಿಯು
ಸನ್ನುತಾಂಗನೆ ನಿನ್ನ ನೆನಹಿದು ಬಾಳಿಗಮೃತ ಸೋನೆಯು | 3 |
ನೀನು ಆಡಿಪ ಬೊಂಬೆ ನಾನು ಮಿಡಿಸ ನುಡಿಯುವ ವೀಣೆಯು
ನೀನು ಊಡಿಸಿ ಉಣಿಸಿ ಸಲಹಲು ಎನ್ನ ಬಾಳೂಳು ಝಂಕೃತಿ
ಮಂತ್ರ ಪುರುಷನೆ ಶಾಂತಿ ಚಂದ್ರನೆ ದುರಿತ ತಿಮಿರಕೆ ಭಾನುವೆ
ಕೀರ್ತಿಸುವೆನನವರತ ನಿನ್ನನು ಸಚ್ಚಿದಾನಂದ ಕಂದನೆ | 4 |
------
ಸುಖ ಒಂದು ಕೋಟಿ ಬಂದಲ್ಲಿ ಬಸವಣ್ಣನ ನೆನೆವ
ದುಃಖ ಒಂದು ಕೋಟಿ ಬಂದಲ್ಲಿ ಬಸವಣ್ಣನ ನೆನೆವೆ
ಲಿಂಗಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವೆ
ಜಂಗಮಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನವೆ
ಬಸವಣ್ಣನ ನೆನೆದಲ್ಲದೆ ಭಕ್ತಿಯಿಲ್ಲ
ಬಸವಣ್ಣನ ನೆನೆದಲ್ಲದೇ ಮುಕ್ತಿಯಿಲ್ಲ, ಇದು ಕಾರಣ
ಬಸವಣ್ಣ ಬಸವಣ್ಣ ಎನುತಿರ್ದೆನು ಕಾಣಾ, ಕಲಿದೇವಯ್ಯ -ಮಡಿವಾಳ ಮಾಚಿದೇವರು
ಬಸವ ಪೂಜೆಯ ಮಾಡುವಾ | ಶರಣರೆ
ಬಸವ ಪೂಜೆಯ ಮಾಡುವಾ ||ಪಲ್ಲವಿ||
ಮರ್ತ್ಯದ ಮಣಿಹ ಮುಗಿಸಿ ಕರ್ತನ ಕರೆ ಪಡೆದು
ಇಚ್ಛಾಮರಣದಿ ಪರಮನ ಬೆರೆದಂಥ ||ಅ.ಪ||
ಕೂಡಲ ಸಂಗಮದ ಸುಕ್ಷೇತ್ರದಲ್ಲಿ
ನಳನಾಮ ಸಂವತ್ಸರದೊಳ್
ಶ್ರಾವಣ ಶುದ್ಧ ಪಂಚಮಿಯಂದು ಲಿಂಗದೇವನ ಆಣತಿ ಪಡೆದು
ಉರಿಯುಂಡ ಕರ್ಪುರದೋಲ್ ದೇವನಲಿ ಬಯಲಾದ || 1 ||
ಭಕ್ತಿಯ ಭೂಮಿಯೊಳು ಬೆಳೆದಂಥ
ಅರಿವಿನ ಮಾಮರದೊಳ್
ಸೃಷ್ಟಿಗೊಡೆಯ ಲಿಂಗದೇವನ ದಿವ್ಯ ಕಾರುಣ್ಯವನ್ನು ಪಡೆದು
ನಿಷ್ಪತ್ತಿ ಹಣ್ಣಾಗಿ ಅವನೊಡನೆ ಬೆರೆದಿಹ || 2 ||
ಇಷ್ಟಲಿಂಗವ ತಾನಿತ್ತ ಪರಮಗುರು
ಶ್ರೇಷ್ಠ ಪಥ ದರ್ಶಕನು
ಲಿಂಗವಂತ ಧರ್ಮ ನೀಡ್ಡ ಮಂಗಳಾಂಗ ಮಂತ್ರಪುರುಷ
ಅಂಗಮನದ ಗುಣಗಳಳಿದು ಸರ್ವಾಂಗಲಿಂಗಿಯಾದ || 3 ||
ಶ್ರೀ ಗುರು ಬಸವಣ್ಣಂಗೆ ಶರಣಾಗುತ್ತ
ಲಿಂಗದೇವನ ನಂಬಿ
ಶರಣ ಗಣಕ್ಕೆ ಶರಣಾಗಿ ಕರುಣ ಪ್ರಸಾದ ಪಡೆದು
ಗಣ ಪದವಿಯ ಹೊಂದಿ ಹಿಗ್ಗಿ ನಲಿದಾಡಲು || 4 ||
ಭೃಂಗ ಕುಸುಮದ ಮಧುವ ಹೀರುವ ತೆರದಿ
ಲಿಂಗದ ಆನಂದವ
ಅಂಗ ಮನ ಕರಣಾದಿ ಗುಣಗಳ ಲಿಂಗಭಾವದಿ ನಾಶ ಮಾಡಿ
ಲಿಂಗದೇವ ಶ್ರೀ ಸಚ್ಚಿದಾನಂದನ ಬೆರೆದಂಥ ||5||
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
ಧ್ವಜವಂದನ ಗೀತೆಗಳು | ಗುರು ಬಸವಣ್ಣನ ನೆನೆಯೋಣ |