Previous ಬಿಡು ಬಾಹ್ಯದೊಳು ಡಂಭವ ಲಿಂಗದೇವ ಮಂಗಳ ಗೀತೆ Next

ಶ್ರೀಸಿದ್ಧರಾಮೇಶ್ವರರ ಭಕ್ತಿ ಗೀತೆ

*

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

ಶ್ರೀ ಸಿದ್ಧರಾಮೇಶ ಬದ್ಧತೆಯ ತೊಡೆವೀಶ

ಶ್ರೀ ಸಿದ್ಧರಾಮೇಶ ಬದ್ಧತೆಯ ತೊಡೆವೀಶ
ಶರಣ ಸಂದೋಹದ ಪರಮಶಿವಯೋಗೀಶ ||ಪ||

ಅನುಭವ ಮಂಟಪದ ಅಮರ ಜ್ಯೋತಿಯೆ ಆಗಿ
ಅನುಭಾವ ದೀಪ್ತಿಯನು ಹೊಮ್ಮಿಸಿದ ಸತ್ಪುರುಷ ||ಅ.ಪ||

ಸೊನ್ನಲಾಪುರದಲ್ಲಿ ಜನ್ಮಿಸಿದ ಶಿವತನುಜ
ಮೃಣ್ಮಯದ ದೇಹವಂ ಮುದ್ದುಗೌಡನಿಂ ಪಡೆದೆ
ಚಿನ್ನದಂತಹ ತಾಯಿ ಸುಗ್ಗವ್ವೆಯೊಡಲಿನಿಂ
ಚಿನ್ಮಯದ ಚೋಹವಂ ತೊಟ್ಟು ನೀ ಧರೆಗಿಳಿದೆ ||೧||

ಮೌನಯೋಗಿಯು ಆಗಿ ಬಾಲ್ಯವನು ನೀ ಕಳೆದೆ
ಧ್ಯಾನ ಲೀಲೆಯೊಳಿರ್ದು ಬಂಧನವ ಸೈರಿಸಿದೆ
ಮಲ್ಲಯ್ಯ ಮಲ್ಲಯ್ಯ ಎಂದು ಹಂಬಲಿಸುತಲಿ
ಕಲ್ಲನೊಲ್ಲದೆ ನಿಜದ ಮಲ್ಲಿನಾಥನ ಪಡೆದೆ ||೨||

ಶಿಕ್ಷಾಗುರು ಪ್ರಭುವಿನಿಂ ಆತ್ಮ ಜಾಗೃತಿ ಹೊಂದಿ
ದೀಕ್ಷೆಯಂ ಗುರು ಚೆನ್ನಬಸವೇಶನಿಂ ಪಡೆದೆ
ಮೋಕ್ಷ ಗುರು ಬಸವನ ದಿವ್ಯ ಪಥದೊಳು ನಡೆದು
ಸೂಕ್ಷ್ಮ ಶಿವಯೋಗದ ಅನುಭೂತಿಯಂ ಪಡೆದೆ ||೩||

ಶೂನ್ಯ ಪೀಠದ ಗುರುವು ನೀನಾಗಿ ಮೆರೆದೆ
ಶೂನ್ಯ ತತ್ವದ ಅರವ ಮತಿಯಲಿ ಧರಿಸಿದೆ
ವಚನದೈಸಿರಿಯ ಭಾಂಡಾರವಂ ಬಿಳೆಸಿ
ಸಚ್ಚಿದಾನಂದನ ಮೆಚ್ಚುಗೆಯ ಮಗನಾದೆ ||೪||

ಪರಿವಿಡಿ (index)
Previous ಬಿಡು ಬಾಹ್ಯದೊಳು ಡಂಭವ ಲಿಂಗದೇವ ಮಂಗಳ ಗೀತೆ Next