*
ಬಸವನ ಬೆಳಕೆ ಎಲ್ಲಾಡಿ ಬಂದೆ
ಭಾರತವೆಲ್ಲ ಸುತ್ತಾಡಿ ಬಂದೆ |ಪ|
ನಿಟ್ಟುಸಿರೆದೆಯನು ಬೆಳಗಿಸಿ ಬಂದೆ
ನಿರಾಸೆಯದೆಯನು ತೊಳಗಿಸಿ ಬಂದೆ
ಹೆಣ್ಣಿನ ಕಂಬನಿ ಬತ್ತಿಸ ಬಂದೆ
ಆಶಾ ಜ್ಯೋತಿಯ ಹೊತ್ತಿಸ ಬಂದೆ
ದೀನರ ಬಾಳನು ಮುಸುಕಿದ ಕಾಲವ
ಕಬಳಸಿ ಬಂದೆ ಧವಳಿಸಿ ಬಂದೆ
ಕನ್ನಡ ವನದಲ್ಲಿ ಕುಣಿದಾಡಿ ಬಂದೆ |1|
ವಚನ ಪುಷ್ಪಗಳ ಮೇಲೆರಿಸಿ ಬಂದೆ
ಹಾಡು ಹಬ್ಬಗಳ ಆಲರಿಸಿ ಬಂದೆ
ಸಂವಾದಗಳನ್ನು ಕುದುರಿಸಿ ಬಂದೆ
ನುಡಿಮುತ್ತುಗಳನ್ನು ಉದುರಿಸಿ ಬಂದೆ
ಪಾಮರರ ಎದೆಯಲಿ ಪ್ರತಿಭೆಯ
ಪ್ರಭೆಯನು ಪಸರಿಸಿ ಬಂದೆ ಕುಸುರಿಸಿ ಬಂದೆ
ಕಾಯಕ ಕ್ಷೇತ್ರದಿ ನಲಿದಾಡಿ ಬಂದೆ |2|
ಬೆವರಿನ ಹನಿಯಲಿ ಬೊಮ್ಮವ ತೋರಿಸಿ
ಕಾಯಕದಲ್ಲಿ ಕೈಲಾಸ ತೋರಿಸಿ
ವೃತ್ತಿಯ ಮುಖಕೆ ಹೊಸಕಳೆ ಬರಿಸಿ
ಕುಸುಬಿನ ಕಿಳ್ಳೆಯ ಕಲಂಕ ಬಿಡಿಸಿ
ದುಡಿಮೆಯ ದೇವರ ದೇಗುಲದಲ್ಲಿ ನರ್ತಿಸಿ ಬಂದೆ
ಕೀರ್ತಿಸಿ ಬಂದೆ ಬಸವನ ಬೆಳಕೆ ಎಲ್ಲಿಗೆ ಮುಂದೆ
ವಿಶ್ವವೆಲ್ಲವು ನನ್ನದೆ ಎಂದೆ |3|
ಹೊರಡುವೆ ನಾನು ಹೊರಡುವೆ ಮುಂದೆ
ಬರುವುದು ವಿಶ್ವವು ನನ್ನಯ ಹಿಂದೆ
ಅವರಿವರೆಂಬೆನೆ ಎಲ್ಲರು ಒಂದೆ
ಎಲ್ಲರಿಗಿರುವನು ಒಬ್ಬನೆ ತಂದೆ
ಬರುವೆನು ಬರುವೆನು ಭುವಿಯನು ಬೆಳಗಿ |4|
-ಸಿದ್ಧಯ್ಯ ಪುರಾಣಿಕ