ಬಸವ ಬಸವಾ ಎಂದು ಭಸಿತಮಂ ಧರಿಸಿದರೆ
|
|
- ✍ - ಮುಳುಗುಂದ ಪೂಜ್ಯ ಶ್ರೀ ಮಹಾಂತ ಶಿವಯೋಗಿಗಳು.
ಬಸವ ಬಸವಾ ಎಂದು ಭಸಿತಮಂ ಧರಿಸಿದರೆ
ಬಸವ ಬಸವಾ ಎಂದು ಭಸಿತಮಂ ಧರಿಸಿದರೆ
ಬಸವಾದಿ ಪ್ರಮಥರಿಗೆ ಪ್ರೀತಿಯಯ್ಯಾ |
ಬಸವ ಷಟಸ್ಥಲ ಚನ್ನ | ಬಸವ ಪ್ರಭು ಮುಖ್ಯರು
ಭಸಿತಮಂ ಧರಿಸಿ ಬಯಲಾದರಯ್ಯ || ೧ ||
ಎಸೆವ ಅಂಗುಲಿತ್ರಯವು | ಭಸಿತ ರೇಖೆಗಳೆಲ್ಲ
ಬಸವಾಕ್ಷರ ತ್ರಯಗಳೆಂದು ಮುದದಿ |
ಭಸಿತದಿಂದ ನವ ಪ್ರಣವ | ಹಸನಾಗಿ ಅಂಗದಲಿ
ಬಸವ ಬಸವಾ ಎಂದು ಸಂಬಂಧಿಸುವೆನು || ೨ ||
ದುರುಳ ಕರಣಂಗಳೆಂಬ | ಬೆರಣಿಗಳನುರುಹಿದ
ಪರಮ ಚಿದ್ ಭಸಿತವೆಂದರಿದು ನಾನು |
ಹರ ಬಸವ ಗುರು ಬಸವ | ಚರ ಬಸವ ಎಂದೆನುತ
ಶಿರವಾದಿ ಚರಣಾಂತ್ಯದೊಳು ಧರಿಸುವೆ || ೩ ||
ನೀನು ಧರಿಸಿದೆಯಾಗಿ | ಆನು ಧರಿಸುವೆನಯ್ಯ
ಸ್ನಾನ ಧೂಳನ ಚಿದ್ದಾರಣಗಳಿಂದ |
ಹೀನ ಮಾನವರಿದರ ಜ್ಞಾನವಿಲ್ಲದೆ ಭವದ
ಕಾನನದೊಳಗೆ ತಾವ್ ಬೀಳುತಿಹರು || ೪ ||
ತ್ರಿನಯನ ಮಹಂತೇಶ | ಧಣಿ ಬಸವರಾಜನ
ಅಣಿಯರದಿ ಸ್ಮರಿಸುತ್ತ ಭಜಿಸುತ್ತಲಿ
ಅಣು ಮಾತ್ರ ಭಸಿತಮಂ | ಹಣೆಯೊಳಗಿಟ್ಟಾಕ್ಷಣವೇ
ಒಣಗುವವು ದುರಿತಂಗಳೆಂಬ ಕುಜವು. || ೫ ||