*
ಮೋಕ್ಷವನು ನಾನರಿಯೆ
ಮೋಕ್ಷವನು ನಾ ಬಯಸೆ ಪ್ರಣವಮೂರ್ತಿಯೆ ದೇವಾ
ಜಗದ ಸೇವೆಯೆ ನನಗೆ ಪರಮ ಸಾಕ್ಷಾತ್ಕಾರ || ಪ ||
ಜಗದ ಲೇಸಿದುವೆ ಎನಯ ಉಸಿರು
ಜನದ ಜಾಗೃತಿಯ ಬಾಳಿನ ಮೊಸರು || ಅ.ಪ ||
ಲೋಕದ ಸೇವೆಯೇ ಬಾಳ ನಂದಾದೀಪ
ಮೂಕ ಜನತೆಯ ಹೃದಯ ಭವ್ಯ ಕೈಲಾಸ
ಕಾಣದಿಹ ಕೈಲಾಸಕೆ ಕೈಯಾನೆ ನಾನು
ಕಾಣ್ಬ ಸಮಾಜದ ಹಿತಕೆ ಬಾಳ ಮುಡುಪಿಡುವೆ ||1 ||
ತೃಷೆಯ ತಣಿಸದಿಹ ಭವ್ಯ ಸಾಗರಕ್ಕಿಂತ
ತಣವೀವ ಕಿರುತೆರೆಯೆ ಬಹಳ ಲೇಸು
ಜ್ಞಾನವಂ ನೀಡದಿಹ ಕೀರ್ತಿವಂತರಿಗಿಂತ
ಜ್ಞಾನದಾನವ ಮಾಳ ಕಿರುಪದವಿ ಸಾಕು ||2 ||
ದೇವ ಸಾಕ್ಷಾತ್ಕಾರದ ಘನಗುರಿಯು ಬೇಡ
ನೋವರಿತು ಮನುಕುಲವ ಸಾಂತ್ವನಿಪುದಿರಲಿ
ಮರ್ತ್ಯದಲಿ ಕೈಲಾಸ ಇಳಿಪ ಹಂಬಲವಿರಲಿ
ನರ್ತಿಸಲಿ ತವ ಕರುಣೆ ಸಚ್ಚಿದಾನಂದ ಕಂದ || 3 ||
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
*