*
ಬೆಳಗಿರಿ ಬೆಳಗಿರಿ ಆರತಿ ಬೆಳಗಿರಿ
ಯೌವನಾವಸ್ಥೆ ದಾಟಿದ ಹಿರಿಯರಿಗೆ ಹುಟ್ಟುಹಬ್ಬ ಮಾಡುವಾಗ ಹಾಡಬೇಕಾದ ಆರತಿ ಹಾಡು.
ಬೆಳಗಿರಿ ಬೆಳಗಿರಿ ಆರತಿ ಬೆಳಗಿರಿ
ಹರಸಿರಿ ಶುಭವನ್ನು ಶ್ರೀ ಶರಣರಿಗೆ ||ಪ||
ಲಿಂಗದೇವನ ಕರುಣೆ ಕಾಪಾಡಲೆಂದು
ಗುರುಬಸವಣ್ಣನ ಶ್ರೀ ರಕ್ಷೆ ಇರಲೆಂದು
ಆಯುಷ್ಯ ಆರೋಗ್ಯ ನಿಮಗಿರಲಿ ಎಂದು
ಸಂಪತ್ತು ಸಂತೋಷ ನಿಮಗಾಗಲೆಂದು ||1||
ಮಾನವ ಜನ್ಮದ ಮಹತಿಯ ಅರಿತು
ಮರೆವನು ತೊಡೆದು ದೇವಗೆ ಬಾಗಿ
ಸಾರ್ಥಕ ಜೀವನ ಬಹುಕಾಲ ಹೊಂದಿ
ಮರ್ತ್ಯಲೋಕದಲ್ಲಿ ಸಲ್ಲುತ ಬಾಳಿರೆಂದು || 2||
ಹೆತ್ತವರ ಪಾಲಿಗೆ ಮುತ್ತಾಗಿ ಬಂದು
ಸುತ್ತಣ ಜನರಿಗೆ ಆಸರೆಯಾಗಿ ನಿಂದು
ಶರಣರ ಪಥದಲ್ಲಿ ಮುಂದಡಿ ಇಡುತ
ಸಚ್ಚಿದಾನಂದನ ಒಲುಮೆ ಹೊಂದಿರಿ ಎಂದು ||3||
ಭಾರತೀಯ ಸಂಸ್ಕೃತಿಯಂತೆ ಆರತಿ ಬೆಳಗಬೇಕು, ಎಷ್ಟು ವರ್ಷಗಳಾಗಿವೆಯೋ ಅಷ್ಟು ಬಟ್ಟಲ ಆರತಿ ಮಾಡಬೇಕು. ಗೋಧಿ ಹಿಟ್ಟು ಕಲಸಿ ಅದರಲ್ಲಿ ಬಟ್ಟಲು ಮಾಡಿ, ಎಣ್ಣೆ ಬತ್ತಿ ಹಾಕಿ ತಟ್ಟೆಯಲ್ಲಿ ಅಲಂಕಾರಿಕವಾಗಿ ಜೋಡಿಸಿ ಹಚ್ಚಿ, ಬೆಳಗಬೇಕು.
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
*